ಸಂಸ್ಥಾನಗಳುಬಹುಸಂಖ್ಯಾತ ಕನ್ನಡಿಗರು

೨೦ನೇ ಶತಮಾನದ ಆರಂಭದ ಹೊತ್ತಿಗೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ವಿರುದ್ಧ ರಾಷ್ಟ್ರನಾಯಕರು ಹೋರಾಟಕ್ಕಿಳಿದಿದ್ದರು. ಸ್ವಾತಂತ್ರ್ಯಕ್ಕಾಗಿ ಪ್ರಜೆಗಳೂ ಹೋರಾಟದಲ್ಲಿ ಭಾಗಿಯಾಗಲು ಮಾನಸಿಕವಾಗಿ ಸಿದ್ಧರಾಗುತ್ತಿದ್ದರು. ಹೈದರಾಬಾದು ಸಂಸ್ಥಾನದ ಪರಿಸ್ಥಿತಿ ಭಿನ್ನವಾಗಿತ್ತು. ಬ್ರಿಟಿಷರ ಅಧೀನದಲ್ಲಿದ್ದ ನುಜಾಮರು ಅನೇಕ ಸವಲತ್ತುಗಳನ್ನು ಪಡೆದಿದ್ದರು. ಸೈನ್ಯ, ನಾಣ್ಯ, ಸಾರಿಗೆ, ರೈಲ್ವೆ, ಅಂಚೆ, ಆಕಾಶವಾಣಿ, ಶಿಕ್ಷಣ ಮುಂತಾದವುಗಳನ್ನು ಸ್ವತಂತ್ರವಾಗಿ ನಡೆಸುತ್ತಿದ್ದರು. ಒಂದು ಪೈಸೆಯಿಂದ ನೂರು ರೂಪಾಯಿಯವರೆಗೆ ನಾಣ್ಯಗಳ ಮೇಲೆ ನಿಜಾಮನ ಮುದ್ರೆಯಿತ್ತು. ಈ ನಾಣ್ಯಗಳಿಗೆ ಪ್ರಪಂಚದ ಮಾರುಕಟ್ಟೆಯಲ್ಲಿ ವಿನಿಮಯದ ದರವು ಗೊತ್ತಾಗಿದ್ದರಿಂದ ಅಂತರಾಷ್ಟ್ರೀಯ ಮಾನ್ಯತೆಯನ್ನು ಪಡೆದಿತ್ತು. ಕೊನೆಯ ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಇಂಗ್ಲೆಂಡ್, ಫ್ರಾನ್ಸ್, ಅಮೆರಿಕಾ, ತುರ್ಕಿಸ್ಥಾನ, ಕೆನಡಾ ಮುಂತಾದ ದೇಶಗಳ ಜತೆ ಸಂಪರ್ಕವನ್ನು ಹೊಂದಿದ್ದನು. ಭಾರತದಲ್ಲಿದ್ದ ಸುಮಾರು ೫೫೬ ಸಂಸ್ಥಾನಗಳಲ್ಲಿ ಹೈದರಾಬಾದು ಸಂಸ್ಥಾನವು ದೊಡ್ಡದು. ಭೌಗೋಳಿಕವಾಗಿ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ವಿಶಾಲವಾಗಿತ್ತು. ತೆಲಂಗಾಣದ ಎಂಟು ಜಿಲ್ಲೆಗಳು, ಮರಾಠವಾಡದ ಐದು ಜಿಲ್ಲೆಗಳು, ಕರ್ನಾಟಕದ ಮೂರು ಜಿಲ್ಲೆಗಳು ಸೇರಿ ಒಟ್ಟು ೧೬ ಜಿಲ್ಲೆಗಳು ಈ ಸಂಸ್ಥಾನಕ್ಕೆ ಸೇರಿದ್ದವು. ತೆಲಂಗಾಣದಲ್ಲಿ ೮೦ ಲಕ್ಷ, ಮರಾಠವಾಡದಲ್ಲಿ ೪೦ ಲಕ್ಷ, ಕರ್ನಾತಕದಲ್ಲಿ ೨೦ ಲಕ್ಷ ಜನರು ಹೀಗೆ ಒಂದೂವರೆ ಕೋಟಿ ಜನಸಂಖ್ಯೆ ಸಂಸ್ಥಾನದಲ್ಲಿ ೫ ಕೋಟಿ ಎಕರೆ ಜಮೀನು ಸಾಗುವಳಿಯಲ್ಲಿತ್ತು. ಇದರಲ್ಲಿ ಎರಡು ಕೋಟಿ ಎಕರೆ ಜಮೀನು ಜಹಗೀರುದಾರರು, ಒಂದು ಕೋಟಿ ಎಕರೆ ಜಮೀನು ದೇಶಮುಖ, ದೇಸಾಯಿಗಳ ಒಡೆತನದಲ್ಲಿತ್ತು. ಸ್ವತಃ ನಿಜಾಮರಿಗೆ ೫೦ ಲಕ್ಷ ಎಕರೆಗಿಂತಲೂ ಹೆಚ್ಚು ಜಮೀನು ಇತ್ತು ಎಂದು ಅಂಕಿಅಂಶಗಳು ತಿಳಿಸುತ್ತವೆ. ೧೯೩೧ರ ಜನಗಣತಿ ಪ್ರಕಾರ ಭಾಷಾವಾರು ಜನಸಂಖ್ಯೆಯು ಮರಾಠಿ ೩೭,೮೬,೩೩೬, ತೆಲುಗು ೧೬,೭೨,೫೩೪, ಕನ್ನಡ ೧೬,೨೦,೦೯೪, ಉರ್ದು ೧೫,,೦೭,೨೭೨ ಮಾತನಾಡುವವರಿದ್ದರು.೧೨% ಮುಸ್ಲಿಮರಿದ್ದರೂ ಈ ಸಂಸ್ಥಾನದಲ್ಲಿ ರಾಜ್ಯಾಡಳಿತ, ಶಿಕ್ಷಣ ಮಾಧ್ಯಮ ಉರ್ದು ಭಾಷೆಯಾಗಿತ್ತು. ಪ್ರಭುತ್ವ ಯಾರದೋ ಅವರ ಭಾಷೆಯಲ್ಲಿ ಆಡಳಿತ, ಶಿಕ್ಷಣ ನಡೆಯುವುದು ರೂಢಿಯಾಗಿತ್ತು. ೧೯೩೧ರ ಜನಗಣತಿ ಪ್ರಕಾರ ಅಕ್ಕಪಕ್ಕದ ಸಂಸ್ಥಾನಗಳಾದ ಅಕ್ಕಲಕೋಟೆಯಲ್ಲಿ ೫೬,೦೦೩ ಕನ್ನಡಿಗರು (೨೭,೭೭೨ ಮರಾಠಿಗರು), ಜಮಖಂಡಿಯಲ್ಲಿ ೮೭,೭೧೬ ಕನ್ನಡಿಗರು (೧೪,೯೩೪ ಮರಾಠಿಗರು), ಮುಧೋಳದಲ್ಲಿ ೫೫,೮೦೬ ಕನ್ನಡಿಗರು (೨,೭೦೪ ಮರಾಠಿಗರು), ರಾಮದುರ್ಗದಲ್ಲಿ ೩೧,೫೧೫ ಕನ್ನಡಿಗರು (೧,೩೪೧ ಮರಾಠಿಗತು), ಸವಣೂರಲ್ಲಿ ೧೨,೧೭೬ ಕನ್ನಡಿಗರು (೭೪೫ ಮರಾಠಿಗರು), ಸಂಡೂರಲ್ಲಿ ೭,೫೧೧ ಕನ್ನಡಿಗರು (೬೫೧ ಮರಾಠಿಗರು ಹಾಗೂ ೨,೪೮೫ ತೆಲುಗರು), ಪುದುಕೋಟಿ ೫,೧೧೮ ಕನ್ನಡಿಗರು (೬೬೦ ಮರಾಠಿಗರು ಹಾಗೂ ೧೨,೨೫೦ ತೆಲುಗರು) ಹೀಗೆ ಕನ್ನಡಿಗರು ಬಹುಸಂಖ್ಯೆಯಲ್ಲಿ ಇದ್ದರೂ ಈ ಸಂಸ್ಥಾನಗಳ ಅಧಿಪತಿಗಳು ಮರಾಠಿಗರಾಗಿದ್ದರು. ಇಲ್ಲಿ ಮರಾಠಿ ಮತ್ತು ಇಂಗ್ಲಿಷ್ ರಾಜ್ಯಾಡಳಿತ, ಶಿಕ್ಷಣ ಮಾಧ್ಯಮದ ಭಾಷೆಗಳಾಗಿದ್ದವು.

ಹೈದರಾಬಾದು ಕರ್ನಾಟಕದ ರಾಯಚೂರು ಜಿಲ್ಲಾ ಪ್ರದೇಶದಲ್ಲಿ ೫,೯೮,೫೧೦ ಕನ್ನಡಿಗರು, ೨,೩೭,೫೫೦ ತೆಲುಗರು ಹಾಗೂ ಗುಲಬರ್ಗಾ ಜಿಲ್ಲಾ ಪ್ರದೇಶದಲ್ಲಿ ೬,೦೪,೪೦೯ ಕನ್ನಡಿಗರು. ೨,೩೯,೭೯೬ ತೆಲುಗರು (ಬೀದರ್ ಜಿಲ್ಲಾ ಪ್ರದೇಶದ ಅಂಕಿಅಂಶಗಳು ತಿಳಿದಿಲ್ಲ.) ಆದರೂ ಉರ್ದು ಭಾಷೆ ಎಲ್ಲ ರಂಗದಲ್ಲಿ ತುಂಬಿತ್ತು. ಉಸ್ಮಾನಾಬಾದ್, ನಾಂದೇಡ, ಮೆಹಬೂಬ ನಗರಗಳಲ್ಲಿ ಹೆಚ್ಚಿನ ಜನರು ಕನ್ನಡ ಮಾತೃಭಾಷೆಯವರು. ಇತರ ಸಂಸ್ಥಾನಗಳಾದ ಔಂಧದಲ್ಲಿ ೬,೪೮೭ ಕನ್ನಡಿಗರು, ಕುಂದರವಾಡ (ಹಿರಿಮನೆ) ೧೭,೭೩೨ ಕನ್ನಡಿಗರು (೨೧,೭೭೫ ಮರಾಠಿಗಳು), ಕುಂದರನಾಡು (ಕಿರಿಮನೆ) ೧೬,೨೭೦ ಕನ್ನಡಿಗರು (೨೧,೩೩೮ ಮರಾಠರು), ಸಾಂಗಲಿಯಲ್ಲಿ ೯೮,೭೫೨ ಕನ್ನಡಿಗರು (೧,೩೬,೦೮೪ ಮರಾಠಿಗರು) ಹೀಗೆ ಕನ್ನಡಿಗರ ಸಂಖ್ಯೆ ಸಾಕಷ್ಟಿದ್ದರೂ ಮರಾಠಿ, ಇಂಗ್ಲಿಷ್ ಭಾಷೆಯೇ ಸಂಸ್ಥಾನಗಳಲ್ಲಿ, ರಾಜ್ಯಾಡಳಿತ ಭಾಷೆಗಳಾಗಿದ್ದವು. ಕನ್ನಡ ಪ್ರಾಂತಗಳಾದ ಈ ಎಲ್ಲ ಸಂಸ್ಥಾನಗಳಲ್ಲಿ ಕಳೆದ ೫-೬ ಶತಮಾನಗಳಿಂದ ಕನ್ನಡ ಭಾಷೆಗೆ ರಾಜಕೀಯ ಸ್ಥಾನಮಾನಗಳು ಸಿಗಲಿಲ್ಲ.

ಶೈಕ್ಷಣಿಕ ಪರಿಸರ

ವಿಜಾಪುರ, ಧಾರವಾಡ, ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಮುಂಬೈ ಪ್ರಾಂತದಲ್ಲಿ ಮತ್ತು ಮರಾಠರ ಅಧೀನದಲ್ಲಿದ್ದ ಅಕ್ಕಲಕೋಟೆ, ಕುಂದರವಾಡ, ಮುಧೋಳು, ರಾಮದುರ್ಗ, ಸವಣೂರು, ಜಮಖಂಡಿ, ಸಾಂಗಲಿ ಮುಂತಾದ ಸು. ೧೩ ಸಣ್ಣ ಸಣ್ಣ ಸಂಸ್ಥಾನಗಳಲ್ಲಿ ಬ್ರಿಟಿಷರು ಬರುವುದಕ್ಕಿಂತ ಪೂರ್ವದಲ್ಲಿ ಸಾಂಪ್ರದಾಯಿಕ ಶಿಕ್ಷಣವನ್ನು ಫಾರಸಿ, ಮರಾಠಿಭಾಷಾ ಮಾಧ್ಯಮದಲ್ಲಿ ಕಲಿಸಲಾಗುತ್ತಿತ್ತು. ಪೇಶ್ವೆಯರ ಆಳ್ವಿಕೆಯಿಂದಲೂ ಮರಾಠಿಯೇ ಮುಖ್ಯ ಭಾಷೆಯಾಗಿತ್ತು. ಬ್ರಿಟಿಷರು ಬಂದ ಮೇಲೆ ಇಂಗ್ಲಿಷ್ ಶಾಲೆಗಳನ್ನು ಆರಂಭಿಸುವ ಕಾರ್ಯ ಭರದಿಂದ ನಡೆಯಿತು. ಸಂಸ್ಥಾನಗಳಲ್ಲಿ ಮರಾಠಿ ಭಾಷೆಯ ಮಾಧ್ಯಮವೇ ಮುಂದುವರಿಯಿತು. ಮುಂಬೈ ಪ್ರಾಂತದಲ್ಲಿ ಇಂಗ್ಲಿಶ್ ಭಾಷಾ ಮಾಧ್ಯಮದ ಶಾಲೆಗಳನ್ನು ಬ್ರಿಟಿಷರು ಆರಂಭಿಸಿದರು. ಆದರೆ ಮುಂಬೈ ಪ್ರಾಂತದಲ್ಲಿ ಮತ್ತು ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಬಳ್ಳಾರಿಯಲ್ಲಿ ಕನ್ನಡ ಶಾಲೆಗಳನ್ನು ಸ್ಥಾಪಿಸಬೇಕೆಂದು ಸರಕಾರಗಳ ಮೇಲೆ ಕನ್ನಡಿಗರು ಒತ್ತಾಯ ತಂದರು. ಮೇಲಾಗಿ ಇಂಗ್ಲಿಶ್ ಅಧಿಕಾರಗಳಲ್ಲಿ ಕೆಲವರು ಈ ಪ್ರಾಂತಗಳ ಭಾಷೆ ಕನ್ನಡವೆಂದು ಭಾವಿಸಿ, ಅಧ್ಯಯನ ನಡೆಸಿ ಕನ್ನಡ ಶಾಲೆಗಳನ್ನು ಆರಂಭಿಸಿದರು. ಮುಂಬೈ ಪ್ರಾಂತದಲ್ಲಿ ಮರಾಠಿಯೇ ಮೇಲುಗೈ ಸಾಧಿಸಿದ್ದುದನ್ನು ರಸೆಲ್ ಅಂಥವರು ಗಮನಿಸಿದರು. ಇವರು ಶಿಕ್ಷಣ ಇಲಾಖೆಗೆ ತಪಾಸಣೆ ಅಧಿಕಾರಿಗಳಾಗಿ ಬಂದು, ಈ ಪ್ರಾಂತದ ಚರಿತ್ರೆ-ಸಂಸ್ಕೃತಿಯನ್ನು ಮನಗಂಡು ಈ ಪ್ರಾಂತದ ದೇಶಭಾಷೆ ಕನ್ನಡವೆಂದು, ಇಲ್ಲಿ ಕನ್ನಡ ಶಾಲೆಗಳು ಆರಂಭವಾಗಬೇಕೆಂದು ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವರದಿಯಲ್ಲಿ ವಿವರಿಸಿದರು. ಕನ್ನಡ ಶಾಲೆಗಳು ಹೆಚ್ಚು ಹುಟ್ಟುಕೊಂಡವು. ಆದರೂ ನಗರಗಳಲ್ಲಿ ಇಂಗ್ಲಿಶ್ ಶಾಲೆಗಳು ನಿರಾಂತಕವಾಗಿಯೇ ಮುಂದುವರಿದವು. ೧೮೨೮ರಲ್ಲಿ ಬಾಸೆಲ್ ಮಿಷನ್ ಇಂಗ್ಲಿಶ್ ಸ್ಕೂಲ್ ಧಾರವಾಡದಲ್ಲಿ, ೧೮೩೨ರಲ್ಲಿ ಬೆನನ್ ಸ್ಮಿತ್ ಹೈಸ್ಕೂಲ್, ಮುಂದೆ ೧೮೫೬ರಲ್ಲಿ ನಾರ್ಮಲ್ ಸ್ಕೂಲ್‍ಗಳು ಬೆಳಗಾವಿಯಲ್ಲಿ, ೧೮೬೧ರಲ್ಲಿ ಟ್ರೈನಿಂಗ್ ಕಾಲೇಜ್ ಧಾರವಾಡದಲ್ಲಿ ಆರಂಭವಾದವು. ಚೆನ್ನಬಸಪ್ಪನವರು ೧೮೬೬ರಿಂದ ೧೮೮೧ರವರೆಗೆ ಉಪವಿಧ್ಯಾದಿಕಾರಿಯಾಗಿ ಮುಂಬಯಿ ಪ್ರಾಂತದಲ್ಲಿ ಶ್ರಮಿಸಿ ಕನ್ನಡ ಶಾಲೆಗಳನ್ನು, ಕನ್ನಡ ವಿದ್ಯಾಭ್ಯಾಸ ಕ್ರಮವನ್ನು ಅಭಿವೃದ್ಧಿ ಪಡಿಸಿದರು. ೧೮೫೫ರಲ್ಲಿ ಶಿಕ್ಷಣ ಇಲಾಖೆ ಆರಂಭವಾಗಿ ಇಂಗ್ಲಿಶ್ ಹಾಗೂ ದೇಶಭಾಷೆಯ ಶಾಲೆಗಳು ಮುಂಬೈ ಪ್ರಾಂತದಲ್ಲಿ ಆರಂಭವಾದವು.

ಮೈಸೂರು ಸಂಸ್ಥಾನದಲ್ಲಿ ಪರಂಪರಾಗತ ವಿದ್ಯಾಬ್ಯಾಸವನ್ನು ಹೊರತುಪಡಿಸಿದರೂ, ೧೮೩೩ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಇಂಗ್ಲಿಶ್ ಶಾಲೆ ಆರಂಭವಾಯಿತು. ೧೮೭೧-೭೨ರ ಹೊತ್ತಿಗೆ ಈ ಸಂಸ್ಥಾನದಲ್ಲಿ ಪ್ರತಿಯೊಂದು ತಾಲೂಕಿನಲ್ಲಿಯೂ ದೇಶಭಾಷೆಯ ಒಂದು ಉನ್ನತ ಶಾಲೆಯಿತ್ತು. ಮೆಟ್ರಿಕ್ಯುಲೇಶನ್ ವರೆಗೆ ೧೧ ಶಾಲೆಗಳು, ಬಿ.ಎ.ವರೆಗೆ ೫ ಕಾಲೇಜುಗಳು ಇದ್ದವು. ಕನ್ನಡ ಅರಸರೇ ಈ ಸಂಸ್ಥಾನದಲ್ಲಿ ಮುಂದುವರಿದಿದ್ದರಿಂದ ಕನ್ನಡ ಭಾಷೆ, ಸಾಹಿತ್ಯ-ಸಂಸ್ಕೃತಿಗೆ ಸಂಬಂಧಿಸಿದ ಚಟುವಟಿಕೆಗಳು ನಿರಾಂತಕವಾಗಿ ನಡೆಯುತ್ತಿದ್ದವು. ಬ್ರಿಟಿಷರ ಅಧಿಕಾರ ಇದ್ದುದರಿಂದ ಆಡಳಿತದಲ್ಲಿ ಇಂಗ್ಲಿಶ್ ಗೆ ಹೆಚ್ಚಿನ ಗೌರವವಿತ್ತು. ಇದರಿಂದಾಗಿಯೇ ಇಂಗ್ಲಿಶ್ ವಿದ್ಯಭ್ಯಾಸಕ್ಕೆ ಹೆಚ್ಚಿನ ಮನ್ನಣೆ ದೊರೆಯಿತು.

ಹೈದರಾಬಾದು ಸಂಸ್ಥಾನದಲ್ಲಿ ನಿಜಾಮರ ಆಳ್ವಿಕೆ ಬಂದ ಮೇಲೆ ಮೊದಮೊದಲು ಫಾರಸಿ ಭಾಷೆಗೆ ಮನ್ನಣೆಯಿತ್ತು. ನಂತರ ಉರ್ದು ಭಾಷೆಯೇ ಮುಂಚೂಣಿಗೆ ಬಂದಿತು. ನಿಜಾಮರು ಉರ್ದು ಭಾಷೆಗೆ ಹೆಚ್ಚಿನ ಸ್ಥಾನ ನೀಡಿ ಅಭಿವೃದ್ದಿ ಪಡಿಸಲು ತೀರ್ವವಾಗಿ ಯತ್ನಿಸಿದರು. ಸಂಸ್ಥಾನದಲ್ಲಿ ಮರಾಠಿ, ತೆಲುಗು, ಕನ್ನಡ ತಾಯಿ ಭಾಷೆಗಳ ಬಹುಸಂಖ್ಯಾತರು ಇದ್ದಾಗಲೂ ಉರ್ದು ಭಾಷೆಯನ್ನೇ ಸಂಸ್ಥಾನದ ದೇಶಿಭಾಷೆಯನ್ನಾಗಿ ಮಾಡಲು ನಿಜಾಮರು ಪ್ರಯತ್ನಿಸಿದರು. ಈ ಪ್ರಾಂತದಲ್ಲಿ ೧೮೫೯ರಲ್ಲಿ ನಿಜಾಮ ಸರಕಾರ ಪ್ರತಿ ತಾಲೂಕಿನಲ್ಲಿ ಒಂದು ಫಾರಸಿ, ಒಂದು ಉರ್ದು ಶಾಲೆಯನ್ನು, ಒಂದು ದೇಶಿಭಾಷೆಯ ಶಾಲೆಯನ್ನು ಆರಂಭಿಸಲು ಆಜ್ಞೆ ಹೊರಡಿಸಿತು. ಆದರೆ ನಿಜಾಮರ ಆಡಳಿತ ಕ್ರಮದಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ವ್ಯತಿರಿಕ್ತ ಪ್ರಯೋಗಗಳು ಚಾಲ್ತಿಗೆ ಬಂದವು. ನಗರಗಳಲ್ಲಿ ಸರಕಾರಿ ಉರ್ದು ಶಾಲೆಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸತೊಡಗಿದವು. ಇಡೀ ಪ್ರಾಂತದಲ್ಲಿ ಸ್ವಾತಂತ್ರ್ಯ ಪೂರ್ವದಿಂದಲೂ, ಅಕ್ಷರ ಕಲಿಯುವವರ ಸಂಖ್ಯೆಯೇ ಅತ್ಯಲ್ಪ ಪ್ರಮಾಣದಲ್ಲಿತ್ತು. ಲಿಂಗಾಯುತರು, ವೈದಿಕರು ಮಾತ್ರ ಸಾಂಪ್ರದಾಯಿಕ ಶಿಕ್ಷಣವನ್ನು ಗುಡಿ-ಮಠಮಾನ್ಯಗಳಲ್ಲಿ ಕಲಿಯುತ್ತಿದ್ದರು. ಸಾಮಾನ್ಯವಾಗಿ ಅಯ್ಯನವರು ಎಂದು ಕರೆಯುವ ಜಂಗಮರು ಅಕ್ಷರ ಕಲಿಸುತ್ತಿದ್ದರು. ಊರಿನ ಶ್ರೀಮಂತರು ಮನೆಯಲ್ಲಿ ಅಯ್ಯನವರು ಆಶ್ರಯ ಪಡೆದು ಶ್ರೀಮಂತರ ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದರು. ಬಡತನದ ಕಾರಣದಿಂದ ಕೆಳವರ್ಗದವರು ಕಲಿಯಲು ಆಸಕ್ತಿ ತೋರಿಸುತ್ತಿರಲಿಲ್ಲ. ತೋರಿಸಿದರೂ ಅವಕಾಶಗಳು ಇರುತ್ತಿರಲಿಲ್ಲ. ಅಸ್ಪೃಶ್ಯರಿಗೆ ಅಕ್ಷರ ಕಲಿಯಲು ಮಠಮಾನ್ಯಗಳಲ್ಲಿ ಅವಕಾಶಗಳೇ ಇರಲಿಲ್ಲ. ಸ್ವಾತಂತ್ರ್ಯ ಬಂದ ಮೇಲೆಯೂ ಸರಕಾರದಿಂದ ಆಯ್ಕೆಯಾಗಿ ಬಂದ ಶಿಕ್ಷಕರೂ ಅಸ್ಪೃಶ್ಯರನ್ನು ಶಾಲೆಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಸೇರಿಸಿಕೊಂಡರೂ ಶಾಲೆಯ ಹೊರಗೆ ಕೂಡಿಸಿ ಕಲಿಸುತ್ತಿದ್ದರು. ಸರಕಾರಿ ಶಿಕ್ಷಕರು ಬಂದರೂ ಅನೇಕ ಹಳ್ಳಿಗಳಲ್ಲಿ ಶಾಲೆಗಳು ಗುಡಿಗಳಲ್ಲಿಯೇ ನಡೆಯುತ್ತಿದ್ದವು. ಶಾಲೆಗಳಿಗಾಗಿ ಪ್ರತ್ಯೇಕ ಕಟ್ಟಡಗಳಿರಲಿಲ್ಲ. ಗುಡಿಗಳೇ ಶಾಲೆಗಳಾಗಿದ್ದವು. ಹೀಗಾಗಿ ದಶಕ ಅಸ್ಪೃಶ್ಯರು ಗುಡಿಕಟ್ಟೆಯನ್ನು ಏರುವಂತಿರಲಿಲ್ಲ. ಈ ವ್ಯವಸ್ಥೆ ಸ್ವಾತಂತ್ರ್ಯ ಬಂದ ಎರಡು ದಶಕ ಕಳೆದರೂ ಮುಂದುವರಿದಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಲಿಂಗಾಯತರ ಮಠಮಾನ್ಯ ಪರಿಸರದಲ್ಲಿ ಅನೇಕ ಹೆಸರಿನಿಂದ ಕರೆಯುವ ಮಠಗಳು ಅಕ್ಷರ ಕಲಿಕೆಯ ಸ್ಥಾನಗಳಾಗಿದ್ದವು. ಸಾಲಿಮಠ, ಓದಿಸೊಮಠ ಮುಂತಾದವುಗಳಲ್ಲಿ ಸಾಂಪ್ರಾದಾಯಿಕ ಶಿಕ್ಷಣವನ್ನು ಕಲಿಸುತ್ತಿದ್ದರೂ ಕೆಳವರ್ಗದವರಿಗೆ ಅವಕಾಶಗಳು ತೀರ ಕಮ್ಮಿ. ಅದರಲ್ಲೂ ಅಸ್ಪೃಶ್ಯರಿಗಂತೂ ಸಂಪೂರ್ಣವಾಗಿ ಅವಕಾಶಗಳು ನಿರಾಕರಿಸಲಾಗಿತ್ತು. ವೀರಶೈವ ಧರ್ಮ ಮುಂದೆ ಜಾತಿ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇ ಇದಕ್ಕೆ ಕಾರಣವಾಯಿತು. ಸ್ವಾತಂತ್ರ್ಯಪೂರ್ವಕಾಲದಲ್ಲಿ ಅಂದರೆ ನಿಜಾಮರ ಆಳ್ವಿಕೆಯಿದ್ದ ಕಾಲದಲ್ಲಿ ಶಿಕ್ಷಣ ಪಡೆದ ಬಿ. ವಿರೂಪಾಕ್ಷಪ್ಪ (ಈಗ ಬಸವಪಥ ಪತ್ರಿಕೆಯ ಸಂಪಾದಕರು) ಹೀಗೆ ಹೇಳುತ್ತಾರೆ: ‘ಅಸ್ಪೃಶ್ಯರನ್ನು ಮಾತ್ರ ಶಾಲೆಗೆ ಸೇರಿಸಿಕೊಳ್ಳುವಷ್ಟು ಆಗಿನ ಸಮಾಜ ಮುಂದುವರಿದಿರಲಿಲ್ಲ. ಹನ್ನೆರಡನೆಯ ಶತಮಾನದಲ್ಲಿಯೇ ಅಸ್ಪೃಶ್ಯರನ್ನು ಹೋಗಲಾಡಿಸಿ ಅವರಿಗೆ ಎಲ್ಲರ ಜೊತೆ ಸಮಾನ ಸ್ಥಾನವನ್ನು ಕಲ್ಪಿಸಿಕೊಟ್ಟ ಬಸವಣ್ಣ ನಾಡಿನಲ್ಲಿಯೂ ಆಗಿನ ಸಮಾಜವಿನ್ನೂ ಎಚ್ಚತ್ತಿರಲಿಲ್ಲ. ಬಹುಶಃ ಶರಣರ ವಚನಗಲು ಪ್ರಚಾರದಲ್ಲಿ ಇಲ್ಲದಿದ್ದುದೇ ಇದಕ್ಕೆ ಕಾರಣವೆನ್ನಬಹುದಾಗಿದೆ. ತಾತ್ವಿಕವಾಗಿ ವೀರಶೈವ ಮಠಗಳು ಇದಕ್ಕೆ ಅನುವು ಮಾಡಿಕೊಡಬಹುದಾಗಿತ್ತಾದರೂ ಸಾಂಪ್ರದಾಯಿಕ ಒತ್ತಡ ಇದಕ್ಕೆ ಅಸ್ವದ ಕೊಡುತ್ತಿರಲಿಲ್ಲ.’

[1] ಹೀಗಿರುವಾಗ ನಿಜಾಮರು ಉರ್ದು ಶಾಲೆಗಳನ್ನು ತಾಲುಕುಗಳಲ್ಲಿ ಆರಂಭಿಸಿದಾಗಲೂ ಮೇಲ್ವರ್ಗದ ಲಿಂಗಾಯತರು, ಬ್ರಾಹ್ಮಣರು ಪ್ರವೇಶ ಪಡೆದರೇ ಹೊರತು ಕೆಳವರ್ಗದವರು ಮೂಲ ಸ್ಥಿತಿಯಲ್ಲಿ ಉಳಿದರು. ಗ್ರಾಮಾಂತರ ಪ್ರದೇಶದ ಮುಸ್ಲಿಮರು ಇದಕ್ಕೆ ಹೊರತಾಗಿರಲಿಲ್ಲ. ತಾಲೂಕು-ಜಿಲ್ಲಾ ಕೇಂದ್ರಗಳಲ್ಲಿರುವ ಮುಸ್ಲಿಮರು ನಿಜಾಮರು ಅರಂಭಿಸಿದ ಉರ್ದುಶಾಲೆಗಳಲ್ಲಿ ಸೇರಿಕೊಂಡರಾದರೂ ಅವರ ಪ್ರಮಾಣ ಅತ್ಯಲ್ಪವಾಗಿತ್ತು.

೧೮೭೦ರಲ್ಲಿ ಸಂಸ್ಥಾನದ ಕೆಲವು ಕಡೆ ಇಂಗ್ಲಿಶ್ ಶಾಲೆಗಳು ಆರಂಭವಾದವು. ೧೮೭೫-೭೬ರಲ್ಲಿ ಗುಲಬರ್ಗಾದಲ್ಲಿ ಆಂಗ್ಲೊ ವರ್ನಾಕುಲರ್ ಸ್ಕೂಲನ್ನು ತೆರೆಯಲಾಯಿತು. ಮುಂದೆ ೧೮೮೪ರ ಹೊತ್ತಿನಲ್ಲಿ ಹತ್ತುಸಾವಿರ ಜನ ಸಂಖ್ಯೆಯಿರುವ ಊರುಗಳಲ್ಲಿ ಇಂಗ್ಲಿಶ್ ಶಾಖೆ ಆರಂಭಿಸಲು ಬ್ರಿಟಿಷರ ಒತ್ತಾಯದ ಮೇಲೆ ಪ್ರಯತ್ನಗಳು ನಡೆದವು. ಆದರೆ ಈ ಪ್ರಾಂತದಲ್ಲಿ ಇಂಗ್ಲಿಶ್ ಶಿಕ್ಷಣ ವ್ಯವಸ್ಥಿತವಾಗಿ ನಡೆಯಲಿಲ್ಲವೆಂದು ಕಾಣುತ್ತದೆ. ನಿಜಾಮ ಸರಕಾ ಆಡಳಿತದಲ್ಲೂ, ಶಿಕ್ಷಣದಲ್ಲೂ ಉರ್ದು ಭಾಷೆಯನ್ನು ಕಡ್ಡಾಯ ಮಾಡಿತು. ಆದ್ದರಿಂದಲೇ ಆರಂಭಿಕ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲಿ ನೀಡತೊಡಗಿತು. ೧೯೧೬ರಲ್ಲಿ ಹೈದರಾಬಾದಿನಲ್ಲಿ ‘ಉಸ್ಮಾನಿಯ ವಿಶ್ವವಿದ್ಯಾಲಯ’ ಆರಂಭವಾಯಿತು. ಕಲೆ, ವಾಣಿಜ್ಯ, ವಿಜ್ಞಾನ, ವೈದ್ಯಕೀಯ, ಇಂಜಿನೀಯರ್, ಕಾನೂನು ಮುಂತಾದ ಬಹುತೇಕ ಸ್ನಾತಕೋತ್ತರ ಪದವಿಗಳನ್ನು ಉರ್ದುಮಾಧ್ಯಮದಲ್ಲಿ ಕಲಿಯಲು ವ್ಯವಸ್ಥಿತವಾಗಿ ಆಯೋಜಿಸಿದರು. (ಉಸ್ಮಾನಿಯ ವಿಶ್ವವಿದ್ಯಾಲಯವನ್ನು ನಿಜಾಮ ಮೀರ್ ಉಸ್ಮಾನ್ ಅಲಿಖಾನ್ ಸ್ಥಾಪಿಸುವಾಗ, ಅದು ಕೇಂಬ್ರಿಡ್ಜ್ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾಲಯಗಳಿಗೆ ಸರಿ ಎನ್ನಿಸುವ ಮಾದರಿಯನ್ನು ಗಮನದಲ್ಲಿಟ್ಟುಕೊಳ್ಳಲಾಗಿತ್ತು.) ಉನ್ನತ ಶಿಕ್ಷಣವನ್ನು ಉರ್ದು ಮಾಧ್ಯಮದಲ್ಲಿ ಕಲಿಯುವ ವ್ಯವಸ್ಥೆಯನ್ನು ಸಂಸ್ಥಾನದ (ಮಹಾರಾಷ್ಟ್ರ, ಆಂಧ್ರ ಮತ್ತು ಕರ್ನಾಟಕ) ನಾಗರಿಕರು ವಿರೋಧಿಸಿದರು. ತಾಲೂಕು, ಜಿಲ್ಲಾಗಳಲ್ಲಿ ಸ್ಥಾಪಿಸಲಾಗಿದ್ದ ಶಾಲಾ ಕಾಲೇಜುಗಳಲ್ಲಿ ಉರ್ದು ಮಾಧ್ಯಮದಲ್ಲಿ ಪದವಿಗಳು ಪಡೆಯುತ್ತಿರುವುದರಿಂದ, ಉನ್ನತ ಶಿಕ್ಷಣದಲ್ಲಿಯೂ ಅದು ಮುಂದುವರೆಯುತ್ತದೆ ಮತ್ತು ‘ಹಿಂದೂ’ ಗಳು ಬಹುಸಂಖ್ಯೆಯಲ್ಲಿ ಉರ್ದು ಮಾಧ್ಯಮದಲ್ಲಿ ಶಿಕ್ಷಣವನ್ನು ಪಡೆದಿದ್ದಾರೆಂದು ನಿಜಾಮ ಸರಕಾರ ಪ್ರತಿಪಾದಿಸಿತು. ‘ದೇಶಿಭಾಷೆಯಲ್ಲಿ ಶಿಕ್ಷಣ ಕೊಡಬೇಕಾದುದು ನಮ್ಮ ನೀತಿ’ ಎಂದು ನಿಜಾಮ ಸರಕಾರ ದೃಢ ನಿಲುವನ್ನು ತಾಳಿತು. ಅದನ್ನು ಯಶಸ್ವಿಯಾಗಿ ಮುಂದುವರಿಸಿತು. ೧೯೩೧ರ ಪ್ರಕಾರ ಹೈದರಾಬಾದು ಸಂಸ್ಥಾನದ ಭಾಷಾವಾರು ಸಂಖ್ಯೆಯಲ್ಲಿ ಮರಾಠಿ ಭಾಷಿಗರು ೩೭,೮೬,೩೩೬, ತೆಲುಗು ಭಾಷಿಗರ ೧೬,೭೨,೫೩೪, ಕನ್ನಡ ಭಾಷಿಗರು ೧೬,೨೦,೦೯೪ ಹಾಗೂ ಉರ್ದು ಭಾಷಿಗರ ೧೫,೦೭,೨೭೨ ಇದ್ದರು. ಹೀಗಿರುವಾಗ ನಿಜಾಮ ಸರಕಾರ ಉರ್ದು ಭಾಷೆಯನ್ನು ಆಡಳಿತದಲ್ಲಿ, ಶಿಕ್ಷಣದಲ್ಲಿ ಕಡ್ಡಾಯ ಮಾಡಿ, ಅದನ್ನು ‘ದೇಶಿಭಾಷೆ’ ಎಂದೂ ಘೋಷಿಸಿತ್ತು. ಅಂದರೆ ಸಂಸ್ಥಾನದ ದೇಶಿಭಾಷೆ ಎಂದರೆ ಅದು ಉರ್ದು ಭಾಷೆ ಎಂದು ಪ್ರತಿಪಾದಿಸಿತು. ಇದೆಲ್ಲದರ ಪರಿಣಾಮ ಏನಾಯಿತೆಂದರೆ, ಈ ಪ್ರಾಂತದಲ್ಲಿ ಸಾಕ್ಷರತೆಯ ಪ್ರಮಾಣ ಕುಸಿದು ಹೋಯಿತು. ೧೯೪೧ರ ಹೊತ್ತಿನಲ್ಲಿ ಅಂಕಿಅಂಶಗಳ ಪ್ರಕಾರ ಬೀದರ ಶೇ. ೨.೫, ಗುಲಬರ್ಗಾ ಶೇ. ೩.೭ ಹಾಗೂ ರಾಯಚೂರು ಶೇ. ೪.೮ ಸಾಕ್ಷರತೆಯ ಪ್ರಮಾಣವಿತ್ತು.

ಮರಾಠಿ, ಉರ್ದು ನಂತರ ಇಂಗ್ಲಿಶ್ ಮಾಧ್ಯಮಗಳ ಸರಕಾರಿ ಶಾಲೆಗಳು ಶುರುವಾದ ಮೇಲೆ ಖಾಸಗಿ ಶಾಲೆಗಳು ಬಲಹೀನವಾಗತೊಡಗಿದವು. ನೂತನ ವಿದ್ಯಾಲಯ (ಗುಲಬರ್ಗಾ), ಹಮದರ್ದ ಶಾಲೆ (ರಾಯಚೂರು), ವಿದ್ಯಾನಂದ ಗುರುಕುಲ (ಕುಕನೂರು), ಉಸ್ಮಾನಿಯ ಮಿಡ್ಲ್ ಸ್ಕೂಲು (ಚಿಂಚೋಳಿ), ಶಂಕರ ಸಂಸ್ಕೃತ ಶಾಲೆ (ಯಾದಗಿರಿ), ಸೇಡಮ್ ತಾಲೂಕಿನಲ್ಲಿ ಒಂದು ಶಾಲೆ ಹೀಗೆ ಈ ಎಲ್ಲ ಖಾಸಗಿ ಶಾಲೆಗಳು ಜನರ ದೇಣಿಗೆಯಿಂದ ನಡೆಯುತ್ತಿದ್ದವು. ವಿಚಿತ್ರವೆಂದರೆ ಈ ಶಾಲೆಗಳೂ ಕೂಡ ಆರಂಭದಲ್ಲಿ ಮರಾಠಿ, ಇಂಗ್ಲಿಶ್ ಮತ್ತು ಉರ್ದು ಭಾಷಾ ಮಾಧ್ಯಮಗಳಲ್ಲಿ ಕಲಿಸುವ ಒತ್ತಡಕ್ಕೆ ಒಳಗಾದವು. ಇದಕ್ಕೆ ಕಾರಣವೆಂದರೆ ಜನರೇ. ಜನರ ಒತ್ತಡಗಳಿಂದ ನೂತನ ವಿದ್ಯಾಲಯ ಮರಾಠಿ ಭಾಷೆಯಲ್ಲಿ ಶಿಕ್ಷಣ ನೀಡಿತು. ರಾಯಚೂರಿನ ಹಮದರ್ದ ಶಾಲೆ ಕನ್ನಡದಲ್ಲಿ ಶಿಕ್ಷಣ ಕಲಿಸಲು ಆರಂಭಿಸಿದಾಗ ಕನ್ನಡಿಗರೇ ವಿರೋಧಿಸಿದರು. ‘ಕನ್ನಡಕ್ಕೆ ತಕ್ಕ ಪ್ರೋತ್ಸಾಹವು ಇಲ್ಲಿಯ ಕನ್ನಡಿಗರಿಂದಲೇ ಸಿಗುವುದು ಅಪರೂಪ. ಹತ್ತು ವರ್ಷಗಳ ಹಿಂದೆ ನಾನಿಲ್ಲಿಯ ಹಮದರ್ದ್ ಶಾಲೆಯನ್ನು ಸ್ಥಾಪಿಸಿದಾಗ ನಾನೇ ಕಂಡು ಅನುಭವಿಸಿದುದು ಆ ಶಾಲೆಯಲ್ಲಿಯ ಮೊದಲ ಶಿಕ್ಷಣಕ್ಕೆ ಕನ್ನಡವೇ ಮೂಲ ಭಾಷೆಯನ್ನಾಗಿಟ್ಟಾಗ ಅಕ್ಷೇಪಣೆಗಳು ಇದಿರಾಟಗಳೂ ಬಂದುದು ನನಗಿನ್ನೂ ನೆನಪಿನಲ್ಲಿವೆ’[2] ಎಂದು ತಾರಾನಾಥ ಹೇಳಿದ್ದಾರೆ. ೧೯೨೦ರಲ್ಲಿ ಆರಂಭವಾದ ಹಮದರ್ದ ಶಾಲೆ ಕನ್ನಡಿಗರ ವಿರೋಧದಿಂದಾಗಿಯೇ ಅದು ಆಂಗ್ಲಭಾಷಾ ಮಾಧ್ಯಮವಾಯಿತು. ಇದಕ್ಕೆ ಮುಖ್ಯ ಕಾರಣವೆಂದರೆ, ಪ್ರಭುತ್ವದ ಭಾಷೆಯಲ್ಲಿ ಶಿಕ್ಷಣ ಕಲಿತು ವಿದ್ಯಾವಂತರಾದರೆ ಉದ್ಯೋಗ ಸಿಗುತ್ತವೆಂಬುದು. ವಿದ್ಯಾನಂದ ಗುರುಕುಲವು ರಾಷ್ಟ್ರೀಯ ಶಾಲೆ ಎಂದು ಕರೆಸಿಕೊಂಡಿತ್ತು. ಆದರೆ ಅಲ್ಲಿ ಬ್ರಾಹ್ಮಣರಿಗೆ ಹೆಚ್ಚಿನ ಅವಕಾಶಗಳಿದ್ದವು. ಹಿರಿಯ ಸಾಹಿತಿ ಸಿದ್ಧಯ್ಯ ಪುರಾಣಿಕರು ತಮಗೇ ಈ ಶಾಲೆಯಲ್ಲಿ ಪ್ರವೇಶ ಸಿಗಲು ತೊಂದರೆ ಆಯಿತೆಂದು ಆತ್ಮಚರಿತ್ರೆಯಲ್ಲಿ ಅವರೇ ಹೇಳಿಕೊಂಡಿದ್ದಾರೆ. ಬ್ರಾಹ್ಮಣರಾಗಿರಬೇಕು ಮತ್ತು ಉರ್ದು ಭಾಷೆಯಲ್ಲಿ ಓದಲು, ಬರೆಯಲು ಕಲಿತಿರಬೇಕು ಎಂಬ ನಿಯಮಗಳನ್ನು ವಿದ್ಯಾನಂದ ಗುರುಕುಲ ಸ್ಥಾಪಕರು ಇಟ್ಟುಕೊಂಡಿದ್ದರು. ಯಾದಗಿರಿಯ ಶಂಕರ ಸಂಸ್ಕೃತ-ಪಾಠಶಾಲೆಯನ್ನು ಲಿಂಗಾಯತರು ನಡೆಸುತ್ತಿದ್ದರೆಂದು ತಿಳಿದುಬರುತ್ತದೆ. ಇವುಗಳ ಚಟುವಟಿಕೆಗಳನ್ನು ಗಮನಿಸಿದರೆ ಮೇಲ್ವರ್ಗಗಳಿಗೆ ಮಾತ್ರ ಈ ಶಾಲೆಗಳಿದ್ದವು ಎಂಬುದು ತಿಳಿಯುತ್ತದೆ. ಮೇಲಾಗಿ ಈ ಶಾಲೆಗಳು ಮೇಲ್ವರ್ಗದವರ ಆರ್ಥಿಕ ಸಹಾಯದಿಂದ ನಡೆಯುತ್ತದ್ದವು. ನಿಜಾಮ ಸರಕಾರದ ಶಾಲೆಗಳು ಅರಂಭವಾದ ಮೇಲೆ ಈ ಶಾಲೆಗಳು ತಮ್ಮದೇ ಆದ ಗೊತ್ತುಗುರಿಗಳಲ್ಲಿ ಸಾಗಿದವು. ನಿಜಾಮ ಸರಕಾರದ ಶಾಲೆಗಳು ಆರಂಭವಾಗುತ್ತಿದ್ದಂತೆ, ಖಾಸಗಿ ಶಾಲೆಗಳನ್ನು ಆರಂಬಿಸುವುದರ ಬಗ್ಗೆ ಸರಕಾರ ನಿರ್ಬಂಧಗಳನ್ನು ಹಾಕಲಾಯಿತೆಂದು ಕಾಣುತ್ತದೆ. ಇದರ ‘ಪರಿಣಾಮವಾಗಿ ಹಳ್ಳಿಗಳಲ್ಲಿ ನೂರಾರು ಅಯ್ಯನವರ ಶಾಲೆಗಳು ಮುಚ್ಚಲ್ಪಟ್ಟವು.’[3] ಬಹುಶಃ ಇದು ಕಲುಬುರ್ಗಿ, ಬೀದರ ಜಿಲ್ಲಾ ಭಾಗಗಳ ಕಡೆ ನಡೆದಿರಬೇಕು.ಪ್ರಭುತ್ವದ ಹೆದರಿಕೆಯಿಂದಲೂ, ಜನರ ದೇಣಿಗೆ ಕಮ್ಮಿಯಾದ ಕಾರಣವೂ ಇರಬೇಕು. ಉರ್ದು ಶಾಲೆಗಳು ಆಂರಭವಾದ ಮೇಲೆ ಮೇಲ್ವರ್ಗದವರು ಉರ್ದು ಶಾಲೆಗಳು ಸೇರಿಕೊಂಡರು. ಏನೇ ಇದ್ದರೂ ಸರಕಾರದ ಈ ನಿರ್ಬಂಧಗಳಿಂದ ಮಠಮಾನ್ಯಗಳಲ್ಲಿ ತಕ್ಕಮಟ್ಟಿಗೆ ಕಲಿಯಲು ಅವಕಾಶವಿದ್ದ ಕನ್ನಡ ಕಲಿಕೆಗೆ ಈ ಪ್ರಾಂತದ ವಿದ್ಯಾರ್ಥಿಗಳು ಎರವಾಗಬೇಕಾಯಿತು.

ಈ ಪ್ರಾಂತದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರು. ಸಂಸ್ಥಾನದಲ್ಲಿಯೇ ಶೇ.೧೨ರಷ್ಟು ಇದ್ದರೆಂದು ಅಂಕಿ ಅಂಶಗಳಿಂದ ತಿಳಿಯುತ್ತದೆ. ಬಹುತೇಕ ಗ್ರಾಮಾಂತರ ಪ್ರದೇಶಗಳಲ್ಲಿರುವ ಮುಸ್ಲಿಮರಿಗೆ ಭೂಮಿ, ಆಸ್ತಿ ಬಹಳ ಕಮ್ಮಿ. ದುಡಿದು ಬದುಕವವರೇ ಜಾಸ್ತಿ. ಈ ಮೊದಲು ಚರ್ಚಿಸಿದಂತೆ ಈ ಪ್ರಾಂತದ ಹಳ್ಳಿಗಳಲ್ಲಿರುವ ಪಿಂಜಾರರು, ಜಾತಿಗಾರರು, ಕಟುಕರು, ಕಲಾಯಿಗಾರರು ಹೆಚ್ಚು ಸಂಖ್ಯೆಯಲ್ಲಿದ್ದು ಹೊಟ್ಟೆ ತುಂಬಿಸಿಕೊಳ್ಳಲು ಕೈಗೆ ಎಟುಕುವ ಉದ್ಯೋಗಗಳಲ್ಲಿ ನಿರತರಾದವರು. ಮೂಲದಲ್ಲಿ ‘ಹಿಂದೂ’ಗಳಾಗಿದ್ದವರು. ಯಾವುದೋ ಒತ್ತಡಗಳಿಗೆ ಮತಾಂತರಗೊಂಡವರು. ಇವರು ಇಸ್ಲಾಮ್ ಧಾರ್ಮಿಕ ರೀತಿ ನೀತಿಗಳನ್ನು ಸರಿಯಾಗಿ ಬಲ್ಲವರಲ್ಲ. ಉರ್ದು ಭಾಷೆ ಗೊತ್ತಿಲ್ಲ. ಇವರಿಗೆ ಗೊತ್ತಿರುವುದು ಕನ್ನಡ ಭಾಷೆ ಮಾತ್ರ. ಶಾಹಿರಾಜ್ಯಗಳ ಕಾಲದಲ್ಲಿ ಉತ್ತರದಿಂದ ಬಂದು ನೆಲಸಿದ ಮುಸ್ಲಿಮರು ನಗರವಾಸಿಗಳಾಗಿ, ರಾಜ್ಯಾಡಳಿತದಲ್ಲಿ ಉದ್ಯೋಗಿಗಳಾಗಿ, ವ್ಯಾಪಾರಸ್ಥರಾಗಿ ಇನ್ನಿತರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಬದುಕುತ್ತ ಬಂದವರ ತಲೆಮಾರಿನವರು ಮಾತ್ರ ನಿಜಾಮರ ಕಾಲದಲ್ಲೂ ಉತ್ತಮ ರೀತಿಯಲ್ಲಿ ಮುಂದುವರಿದರು. ಇಂಥವರೇ ಉನ್ನತ ಶಿಕ್ಷಣವನ್ನು ಪಡೆದರು. ಉನ್ನತ ಹುದ್ದೆಗಳನ್ನು ದಕ್ಕಿಸಿಕೊಂಡರು. ಇಂಥ ವರ್ಗದವರಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಾಗಿತ್ತು. ಇದಕ್ಕೆ ಪ್ರಭುತ್ವದ ಬೆಂಬಲವೂ ಇತ್ತು. ಅಂಕಿ ಅಂಶಗಳ ಪ್ರಕಾರ ೧೯೩೧ರಲ್ಲಿ ಮುಸ್ಲಿಮರ ಸಾಕ್ಷರತೆಯ ಪ್ರಮಾಣ ೧೦.೪ ಇದ್ದರೆ, ಮುಸ್ಲಿಮೇತರರ ಸಾಕ್ಷರತೆ ಪ್ರಮಾಣ ೩.೩ ಇತ್ತು. ಮಹಿಳೆಯರಲ್ಲಿ ಮುಸ್ಲಿಮೇತರರಲ್ಲಿ ೦.೬ ಇದ್ದರೆ, ಮುಸ್ಲಿಮರಲ್ಲಿ ೩.೪ ಇತ್ತು. ಮುಸ್ಲಿಮೇತರರಲ್ಲಿರುವ ಸಾಕ್ಷರತೆಯ ಪ್ರಮಾಣ ಎಷ್ಟಿದಿಯೋ ಅದರಲ್ಲಿ ಮೇಲ್ವರ್ಗದವರ (ಲಿಂಗಾಯತ, ಬ್ರಾಹ್ಮಣ) ಪ್ರಮಾಣವೇ ಹೆಚ್ಚು.

೨೦ನೇ ಶತಮಾನದಲ್ಲಿ ಅಂದರೆ ಸ್ವಾತಂತ್ರ್ಯಪೂರ್ವದಲ್ಲಿ ೫೦ರಷ್ಟು ಜನಸಂಖ್ಯೆಯ ತೆಲುಗು ಭಾಷೆಯಲ್ಲಿ ೨೫೩ ಗ್ರಂಥಗಳು, ೨೭.೫ ಜನಸಂಖ್ಯೆಯ ಮರಾಠಿ ಭಾಷೆಯಲ್ಲಿ ೧೫೫ ಗ್ರಂಥಗಳು, ೧೨.೫ ಜನಸಂಖ್ಯೆಯ ಕನ್ನಡ ಭಾಷೆಯಲ್ಲಿ ೪೨ ಗ್ರಂಥಗಳು ಪ್ರಕಟವಾಗಿದ್ದರೆ, ೧೦.೦೦ ಜನಸಂಖ್ಯೆಯ ಉರ್ದು ಭಾಷೆಯಲ್ಲಿ ೩,೨೨೩ ಗ್ರಂಥಗಳು ಪ್ರಕಟವಾಗಿವೆ. ನಿಯತಕಾಲಿಕೆಗಳ ಸಂಖ್ಯೆ ತೆಲುಗಿನಲ್ಲಿ ೮, ಮರಾಠಿಯಲ್ಲಿ ೩, ಕನ್ನಡದಲ್ಲಿ ೪ ಇದ್ದರೆ ಉರ್ದುವಿನಲ್ಲಿ ೩೪ ಇದ್ದವೆಂದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.[4] ಇದೆಲ್ಲವನ್ನು ಗಮನಿಸಿದರೆ ಉರ್ದು ಭಾಷೆಗೆ ಹೆಚ್ಚಿನ ಪ್ರೋತ್ಸಾಹವಿತ್ತು. ಕನ್ನಡಕ್ಕೆ ಇರಲಿಲ್ಲ ಎನ್ನುವುದಕ್ಕಿಂತ ಕಡೆಗಣಿಸಲಾಯಿತು ಎಂದು ತಿಳಿಯುತ್ತದೆ. ಈ ಕಾಲದ ಇಂಥ ಅಂಕಿ ಅಂಶಗಳನ್ನು ಇಟ್ಟುಕೊಂಡು, ‘ಜನತೆಯ ಒಂದು ಪಂಗಡದ ಪ್ರಗತಿ ಅವರ ಮಾತೃಭಾಷ್ಯ ಮೂಲಕ ಶಿಕ್ಷಣ ಸಿಗುವುದರಿಂದ, ಇನ್ನೊಂದು ಪಂಗಡದ ಅವನತಿ ಮಾತೃಭಾಷೆಯಲ್ಲದ ಅನ್ಯ ಭಾಷೆಯನ್ನು ಶಿಕ್ಷಣ ಸಿಗುವುದರಿಂದ ಹೇಗೆ ಆಗುವುದು ಎಂಬ ಕಥೆಯು ಮೇಲಿನ ಸಂಖ್ಯೆಗಳ ತುಲನೆಯಿಂದ ಸ್ಪಷ್ಟವಾಗುವುದು’[5] ಎಂದು ಗ್ರಹಿಸಲಾಗಿದೆ. ಇದು ಮೇಲು ನೋಟಕ್ಕೆ ಸರಿ ಎಂದು ಕಾಣುತ್ತದೆ. ಆದರೂ ಉರ್ದು ಭಾಷೆಯಲ್ಲಿ ೩,೨೨೩ ಗ್ರಂಥಗಳು ಬಂದಿದ್ದರೂ ಕೂಡ, ಈ ಎಲ್ಲ ಗ್ರಂಥಗಳನ್ನು ಮುಸ್ಲಿಮರೇ ಬರೆದಿರುವುದಿಲ್ಲ. ಉರ್ದು ಕಲಿತ ಮುಸ್ಲಿಮೇತರರ ಗ್ರಂಥಗಳೂ ಸೇರಿರಬಹುದು. ಯಾಕೆಂದರೆ ಈ ಪ್ರಾಂತದಲ್ಲಿ ಉರ್ದು ಭಾಷೆಯನ್ನು ಅಭಿಮಾನದಿಂದ ಕಲಿತು ಉನ್ನತ ಸ್ಥಾನಗಳನ್ನು ಪಡೆದವರು ಅನೇಕರಿದದ್ದಾರೆ. ಉರ್ದು ಭಾಷೆಯಲ್ಲಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ಉದಾಹರಣೆಗೆ ರಾಘವೇಂದ್ರರಾವ್ ಜಜ್ಟ್ ಅಂಥವರು.

ಬ್ರಿಟಿಷರ ಆಳ್ವಿಕೆಯಿದ್ದ ಪಕ್ಕದ ಮುಂಬಯಿ ಪ್ರಾಂತದಲ್ಲಿ ೧೮೩೫ರಲ್ಲಿ ಕನ್ನಡ ಶಾಲೆಗಳು ಆರಂಭವಾದವು. ೧೮೫೬ರ ಹೊತ್ತಿಗೆ ಧಾರವಾಡದಲ್ಲಿ ೧೩ ಶಾಲೆಗಳು, ಬೆಳಗಾವಿಯಲ್ಲಿ ೧೩ ಶಾಲೆಗಳು, ವಿಜಾಪುರದಲ್ಲಿ ೯ ಶಾಲೆಗಳು ಇದ್ದವು. ಇವು ಪ್ರಾಥಮಿಕ ಶಾಲೆಗಳು. ೧೮೮೨ರ ಹೊತ್ತಿಗೆ ಧಾರವಾಡದಲ್ಲಿ ೩೪೧, ಬೆಳಗಾವಿಯಲ್ಲಿ ೧೭೭ (ಬಾಲಕರ), ೭೨ (ಬಾಲಕಿಯರ) ಶಾಲೆಗಳು, ಬೆಳಗಾವಿಯಲ್ಲಿ ೩೯೦ (ಬಾಲಕರ), ೪೩ (ಬಾಲಕಿಯರ) ಶಾಲೆಗಳು, ವಿಜಾಪುರದಲ್ಲಿ ೪೩೯ (ಬಾಲಕರ), ೩೬ (ಬಾಲಕಿಯರ) ಶಾಲೆಗಳು ಇದ್ದವು. ಒಟ್ಟು ೧೬೦೪ ಶಾಲೆಗಳು ಶಿಕ್ಷಣ ನೀಡುತ್ತಿದ್ದವು. ಸ್ವಾತಂತ್ರ್ಯಸಿಗುವ ಹೊತ್ತಿಗೆ (೧೯೪೬-೪೭) ೩೭೦೯ ಬಾಲಕರ, ೪೦೨ ಬಾಲಕಿಯರ ಒಟ್ಟು ೮೧೧೧ ಶಾಲೆಗಳಿದ್ದವು. ೧೯೪೯ರಲ್ಲೇ ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಯಿತು. ಎಲ್ಲ ವಿಷಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿಗಳನ್ನು ಪಡೆಯಬಹುದಾಗಿತ್ತು. ಕನ್ನಡ, ಇಂಗ್ಲಿಶ್ ಭಾಷೆಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು.

ಮೈಸೂರು ಸಂಸ್ಥಾನದಲ್ಲಿ ೧೮೮೦ರ ಹೊತ್ತಿಗೆ ೮೯೯ ಸರಕಾರಿ ಶಾಲೆಗಳು, ೧೮೮ ನೆರವಿನ ಶಾಲೆಗಳು, ೧೦೦೦ ನೆರವಿಲ್ಲದ ಶಾಲೆಗಳು ಇದ್ದವು. ಒಟ್ಟು ೨೦೮೭ ಶಾಲೆಗಳಲ್ಲಿ ಶಿಕ್ಷಣ ದೊರೆಯುತ್ತಿತ್ತು. ೧೯೧೬ರಲ್ಲಿ ಮೈಸೂರು ವಿಶ್ವವಿದ್ಯಾಲಯ ಆರಂಭವಾಯಿತು. ಕನ್ನಡ ಭಾಷೆಯಲ್ಲಿ ಆರಂಭದ ಶಿಕ್ಷಣವನ್ನು, ನಂತರ ಇಂಗ್ಲಿಶ್ ಭಾಷೆಯಲ್ಲಿ ಪದವಿಗಳನ್ನು ಪಡೆಯಬಹುದಾಗಿತ್ತು. ಮೈಸೂರು ಅರಸರಿಂದ ಭಾಷೆ, ಶಿಕ್ಷಣ, ಸಂಸ್ಕೃತಿಗೆ ಹೆಚ್ಚಿನ ಪ್ರೋತ್ಸಾಹವಿತ್ತು.

ಹೈದರಾಬಾದು ಕರ್ನಾಟಕದಲ್ಲಿ ಅತ್ಯಲ್ಪ ಸಂಖ್ಯೆಯಲ್ಲಿ ಸಾಂಪ್ರದಾಯಿಕ ಶಿಕ್ಷಣ ನೀಡುವ ಜಂಗಮರ ಶಾಲೆಗಳು ಇದ್ದವು. ಉರ್ದು ಭಾಷೆಯಲ್ಲಿ ಶಿಕ್ಷಣ ಕಡ್ಡಾಯವಾದಾಗ ಅನೇಕ ಕಾರಣಗಳಿಂದ ಜಂಗಮರ ಶಾಲೆಗಳಿಗೆ ಮುಪ್ಪು ಬಂತು. ೧೮೮೫-೮೬ರಲ್ಲಿ ಈ ಪ್ರಾಂತದ ಜಿಲ್ಲಾ ಕೇಂದ್ರಗಳಾದ ಬೀದರ, ಗುಲಬರ್ಗಾ ಹಾಗೂ ರಾಯಚೂರು ಜಿಲ್ಲೆಯ ಸುರಪುರದಲ್ಲಿ ಇಂಗ್ಲಿಶ್ ಶಾಲೆ ಆರಂಭವಾದವು. ಅಂಕಿ ಅಂಶಗಳ ಪ್ರಕಾರ ೧೯೦೩ರಲ್ಲಿ ಗುಲಬರ್ಗಾದಲ್ಲಿ ಒಂದು, ಬೀದರಿನಲ್ಲಿ ೨ ಫ್ರೌಢಶಾಲೆಗಳಿದ್ದವು. ರಾಯಚೂರಿನಲ್ಲಿ ಅದೂ ಇರಲಿಲ್ಲ. ೧೯೩೧-೩೨ರಲ್ಲಿ ಗುಲಬರ್ಗಾದಲ್ಲಿದ್ದ ಶಾಲೆಯನ್ನೇ ಇಂಗ್ಲಿಶ್, ಉರ್ದು ಮಾಧ್ಯಮಗಳನ್ನು ಒಟ್ಟುಗೂಡಿಸಿ ಹೈಸ್ಕೂಲನ್ನಾಗಿ ಪರಿವರ್ತಿಸಿ, ನಂತರ ಇಂಟರ್ ಮೀಡಿಯಟ್ ಕಾಲೇಜನ್ನಾಗಿ ಮಾಡಲಾಯಿತು. ಕಲೆ, ವಿಜ್ಞಾನ, ವಾಣಿಜ್ಯ ಪದವಿಗಳನ್ನು ಪಡೆಯಲು ೧೯೪೭ರವರೆಗೆ ಇದ್ದದ್ದು. ಇದೊಂದೇ ಶಿಕ್ಷಣ ಸಂಸ್ಥೆಯಾಗಿತ್ತು. ೧೯೧೬ರಲ್ಲಿ ಉಸ್ಮಾನೀಯಾ ವಿಶ್ವವಿದ್ಯಾಲಯ ಆರಂಭವಾದರೂ ಹೈದರಾಬಾದು ನಗರವೇ ಶಿಕ್ಷಣ ಸಂಸ್ಥೆಗಳ ಕೇಂದ್ರವಾಯಿತು. ಉನ್ನತ ಶಿಕ್ಷಣವನ್ನು ಕಲಿಯಲು ಈ ಪ್ರಾಂತದ ವಿದ್ಯಾರ್ಥಿಗಳು ಹೈದರಾಬಾದು ನಗರಕ್ಕೆ ಹೋಗಬೇಕಾಗಿತ್ತು. ಕೊಪ್ಪಳ ಜಿಲ್ಲಾ ಕೇಂದ್ರದಿಂದ ಹೈದರಾಬಾದು ನಗರ ೪೫೦ ಕಿ.ಮೀ. ದೂರದಲ್ಲಿದೆ.

ಈ ಪ್ರಾಂತದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿ ಪತ್ರಿಕೆಗಳೂ ಅತ್ಯಲ್ಪವಾಗಿದ್ದವು. ೧೯೧೯-೨೦ರ ಕಾಲಾವಧಿಯಲ್ಲಿ ಕೊಪ್ಪಳದಿಂದ ‘ಭಕ್ತಬಂಧು’ ಮಾಸಿಕ ಪ್ರಕಟವಾಗುತ್ತಿತ್ತು. ಎಚ್. ಚಿದಂಬರಯ್ಯ ಅವರು ಸಂಪಾದಕರಾಗಿದ್ದರು. ‘ಧರ್ಮ ಸಂಜೀವಿನಿ’ ಎಂಬ ಮಾಸಿಕವು (೧೯೨೭) ರಾಯಚೂರಿನಿಂದ ಪ್ರಕಟವಾಗುತ್ತಿತ್ತು. ಮಸ್ಕಿ ಬಸಪ್ಪಶಾಸ್ತ್ರೀ ಮತ್ತು ನಾಯಕಲ್ ಬಸವರಾಜ ಶಾಸ್ತ್ರೀ ಸಂಪಾದಕರಾಗಿದ್ದರು. ಶರಣರ ತತ್ವಗಳಿಗೆ ಹೆಚ್ಚು ಒತ್ತುಕೊಟ್ಟು ಬರೆಯುತ್ತಿದ್ದರು. ರಾಯಚೂರಿನಿಂದ ‘ದಕ್ಕನ್ ಪ್ರಭಾತ’ ೧೯೪೦ರಲ್ಲಿ ಕಾಣಿಸಿಕೊಂಡ ಪತ್ರಿಕೆ. ಸಂಪಾದಕರಾದ ಪೋತಾಪುರ ರಾಚೋಟಯ್ಯ ಇದನ್ನು ನಡೆಸಿದರು. ೧೯೪೬ರಲ್ಲಿ ಗುಲಬರ್ಗಾದಿಂದ ದತ್ತಾತ್ರೆಯರಾವ್ ಅವರಾದಿ ಮತ್ತು ಎಸ್. ಹನುಮಂತರಾವ್ ಅವರು ‘ನಾಗರಿಕ’ ಎಂಬ ಪತ್ರಿಕೆಯನ್ನು ಹೊರತಂದರು. ‘ಮಿಂಚೂ’ ಪತ್ರಿಕೆಯನ್ನು ತವಗ ಭೀಮಸೇನರಾವ್ ಅವರು ಹೊರತಂದರು. ಸಾಹಿತ್ಯ, ಸಂಶೋಧನಾತ್ಮಕ ಬರಹಗಳಿಗೆ ಒತ್ತು ನೀಡಲು ಚಂದ್ರಶೇಖರಶಾಸ್ತ್ರೀ ತಮ್ಮ ‘ಅಮರವಾಣಿ’ ಪತ್ರಿಕೆಯಲ್ಲಿ ಪ್ರಯತ್ನಿಸಿದರು. ಆದರೂ ಆಧ್ಯಾತ್ಮಿಕ ವಿಷಯಗಳು ಹೆಚ್ಚಾಗಿರುತ್ತಿದ್ದವು. ‘ಸೇವಾ’ ಎನ್ನುವ ಪತ್ರಿಕೆ ಕಲಿಗಣನಾಥ ಹೀರೆಮಠರ ನೇತೃತ್ವದಲ್ಲಿ ಪ್ರಕಟವಾಗುತ್ತಿತ್ತು. ರಾಯಚೂರಿನಲ್ಲಿ ಜೆ.ಕೆ. ಪ್ರಾಣೇಶಾಚಾರ್ಯರ ‘ಸಾಧನಾ’ ಪತ್ರಿಕೆಯು ಕ್ರಿಯಾಶೀಲವಾಗಿ ಪ್ರಕಟವಾಗುತ್ತಿತ್ತು. ‘ಲೋಕವಾಣಿ’, ‘ಸೇವಕ’ ಪತ್ರಿಕೆಗಳೂ ಬಂದು ಮರೆಯಾದವು. ತಾರಾನಾಥರ ‘ಪ್ರೇಮ’ ಕೆಲಕಾಲ ಹೊರಬಂದ ಪತ್ರಿಕೆ. ‘ಉದಯ’ (ಸಂ: ವಸಂತ ಕುಷ್ಟಗ್, ಲಕ್ಷ್ಮಿಕಾಂತ್), ‘ಪ್ರಕಾಶ’ (ಹನುಮಂತರಾವ್ ಕನ್ಯಾಳ), ರಂಗಂಪೇಟೆಯ ಸಾಹಿತ್ಯಾಸಕ್ತರ ‘ಅರುಣ’ ಮುಂತಾದ ಕೆಲವು ಕೈ ಬರಹದ ಪತ್ರಿಕೆಗಳು ಹೊರಬಂದು ತಕ್ಕಮಟ್ಟಿಗೆ ಚುರುಕಾಗಿ ಕೆಲಸ ಮಾಡಿದವು. ಹೀಗೆ ಬೆರಳೆಣಿಕೆಯಷ್ಟು ಪತ್ರಿಕೆಗಳು ಈ ಪ್ರಾಂತದಲ್ಲಿ ಕಾಣಿಸಿಕೊಂಡವು. ಇವು ಭಾಷೆ, ಸಾಹಿತ್ಯ, ಕಲೆ-ಸಂಸ್ಕೃತಿಯನ್ನು ಅಭಿವೃದ್ಧಿಪಡಿಸುವಷ್ಟು ಶಕ್ತವಾಗಿರಲಿಲ್ಲ. ಆ ದೃಷ್ಟಿಕೋನವನ್ನು ಹೊಂದಿರಲಿಲ್ಲ. ಆದರೂ ಆಳರಸರ ಅವಕೃಪೆಗೆ ಒಳಗಾಗಿದ್ದವು. ಸ್ವಾತಂತ್ರ್ಯಾನಂತರವೂ ಪತ್ರಿಕೆಗಳು ಹೆಚ್ಚಾಗಿ ಹುಟ್ಟಿಕೊಳ್ಳಲಿಲ್ಲ. ಭಾಷೆ, ಸಾಹಿತ್ಯ, ಕಲೆ ಮುಂತಾದ ಸಾಂಸ್ಕೃತಿಕ ಪರಿಸರವನ್ನು ಬಲಪಡಿಸುವುದಕ್ಕೆ ಮಾಧ್ಯಮಗಳ ಕೊರತೆ ಈ ಪ್ರಾಂತದಲ್ಲಿ ಈ ಹೊತ್ತಿಗೂ ಇದೆ. ಮಾಧ್ಯಮಗಳು ಬೆಂಗಳೂರು ನಗರಕ್ಕೆ ಸೀಮಿತವಾಗಿವೆ. ಪ್ರತಿಭಾವಂತ ಕಲಾವಿದರು ಅವಕಾಶಗಳಿಲ್ಲದೆ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಅಸಹಾಯಕರಾಗಿದ್ದಾರೆ. ಸಂಗೀತ, ಚಿತ್ರಕಲೆ, ನಾಟಕ ಮುಂತಾದ ಕ್ಷೇತ್ರದ ಕಲಾವಿದರು ಅವಕಾಶಗಳನ್ನು ಪಡೆಯಲು ಬೆಂಗಳೂರನ್ನು ಸೇರುತ್ತಿರುವುದು ಕಂಡುಬರುತ್ತಿದೆ. ಈಗ ಇದು ಬಲಗೊಂಡಿದೆ. ಅರ್ಥಿಕವಾಗಿ ದುರ್ಬಲವಿರುವವರು ‘ಗಣ್ಯ’ರ ಬೆಂಬಲ ಇಲ್ಲದವರು ಇಂಥವುಗಳಿಂದ ವಂಚಿತರಾಗಿ ಮೂಲೆ ಗುಂಪಾಗುತ್ತಿದ್ದರೆ.

ಪ್ರತಿಭಾನ್ವಿತ ಕಲಾವಿದರು ಹೆಚ್ಚಿನ ಅವಕಾಶಗಳಿಗಾಗಿ ಬೆಂಗಳೂರು ನಗರಕ್ಕೆ ವಲಸೆ ಹೋಗುತ್ತಿರುವುದು ಈಗೀಗ ಬಲಗೊಂಡಿದೆ. ಉತ್ತರ ಕರ್ನಾಟಕದಲ್ಲೇ ಹಿಂದೂಸ್ತಾನಿ ಸಂಗೀತ ನೆಲೆಗೊಂಡಿತ್ತು. ಈಗ ಅದು ಬೆಂಗಳೂರಿನಲ್ಲಿ ನೆಲೆಗೊಳ್ಳುತ್ತಿದೆ. ಪ್ರಸಾರ ಮಾಧ್ಯಮಗಳೂ ಇದಕ್ಕೆ ಕಾರಣವಾಗಿವೆ. ‘ಸಾಂಸ್ಕೃತಿಕ ರಾಜಧಾನಿ’ ಎಂದು ಕರೆಸಿಕೊಂಡಿರುವ ಹುಬ್ಬಳ್ಳಿ, ಧಾರವಾಡ ಈಗ ಸೊರಗತೊಡಗಿದೆ ಎಂಬ ಮಾತುಗಳು ಹಿರಿಯ ಕಲಾವಿದರಿಂದ ಕೇಳಿಬರುತ್ತಿವೆ. ಉತ್ತರ ಕರ್ನಾಟಕದ ಕಲಾವಿದರಿಗೆ ಸರಕಾರಿ, ಖಾಸಗಿ ಟಿ.ವಿ. ಚಾನೆಲ್ ಮತ್ತು ಸಂಘ-ಸಂಸ್ಥೆಗಳು ಅವಕಾಶವನ್ನು ನೀಡದೆ ನಿರ್ಲಕ್ಷಿಸಲಾಗುತ್ತಿವೆ ಎಂಬ ಸಂಗತಿಯನ್ನು ನೋವಿನಿಂದ ಗಂಗೂಬಾಯಿ ಹಾನಗಲ್ಲು ಅವರು ವ್ಯಕ್ತಪಡಿಸಿರುವರು (ಸುಧಾ: ೪, ಅಕ್ಟೋಬರ್, ೨೦೦೧) ಮುಂದುವರೆದ ಉತ್ತರ ಕರ್ನಾಟಕದವರ ಪಾಡು ಹೀಗಾಗಿರುವಾಗ ಇನ್ನು ಹೈದರಾಬಾದು ಕರ್ನಾಟಕದ ಕಲಾವಿದರ ಪಾಡನ್ನು ಊಹಿಸಬಹುದು. ಕಲೆಯೂ ಒಂದು ವ್ಯಾಪಾರವಾಗಿರುವ ಈ ದಿನಗಳಲ್ಲಿ ವಲಸೆ ಅನಿವಾರ್ಯವೂ ಆಗಿದೆ.

ಮೇಲ್ವರ್ಗದ ಲಿಂಗಾಯತರು, ಬ್ರಾಹ್ಮಣರು ಹೆಚ್ಚಾಗಿ ಉರ್ದು ಭಾಷೆಯಲ್ಲಿಯೂ ಸಾಹಿತ್ಯವನ್ನು ರಚಿಸಿದ್ದಾರೆ. ಒಂದು ವೇಳೆ ಮುಸ್ಲಿಮರಾದ ಪಿಂಜಾರರಿಗೆ, ಜಾತಿಗಾರರಿಗೆ ಸ್ವಾತಂತ್ರ್ಯ ಪೂರ್ವದಲ್ಲಿ ನಿಜಾಮ ಸರಕಾರದ ಉರ್ದು ಮಾಧ್ಯಮದ ಶಿಕ್ಷಣ ದೊರೆತಿದ್ದರೆ ಅವರು ತಕ್ಕಮಟ್ಟಿಗಾದರೂ ಪ್ರಗತಿ ಹೊಂದಬಹುದಾಗಿತ್ತು. ಸಾಹಿತ್ಯ, ಸಂಗೀತ, ಕಲೆ, ಶಿಕ್ಷಣ ಮುಂತಾದ ಸಾಂಸ್ಕೃತಿಕ ವಲಯದಲ್ಲಿ ಕಾಣಿಸಿಕೊಳ್ಳಬಹುದಾಗಿತ್ತು. ಯಾಕೆಂದರೆ ೨೦ನೇ ಶತಮಾನ ಮುಗಿದರೂ ಈ ಪ್ರಾಂತದಲ್ಲಿ ಹೆಸರಿಸುವಂಥ ಒಬ್ಬ ಮುಸ್ಲಿಮ್ ಕವಿ-ಸಾಹಿತಿ, ಸಂಗೀತ, ಚಿತ್ರ ಕಲಾವಿದರು ಹುಟ್ಟಿಲ್ಲ. ವಿಪರ್ಯಾಸವೆಂದರೆ ಬಹಮನಿ-ಆದಿಲ್ ಶಾಹಿ, ನಿಜಾಮರು ೬೦೦ ವರ್ಷಗಳಿಂದ ಈ ಪ್ರಾಂತದಲ್ಲಿ ರಾಜ್ಯಾಡಳಿತ ಮಾಡಿದ್ದಾರೆ. ಅವರ ಭಾಷೆ ಶಿಕ್ಷಣ, ಕಲೆ, ಸಂಸ್ಕೃತಿ ಆರು ಶತಮಾನಗಳಿಂದ ಈ ಪ್ರಾಂತ್ಯದಲ್ಲಿ ನೆಲೆಯೂರಿದ್ದರೂ ಇದು ಸಾಧ್ಯವಾಗಿಲ್ಲ. ಯಾಕೆಂದರೆ ಯಾರ ಆಳ್ವಿಕೆ ಬಂದರೂ ಶಿಕ್ಷಣವನ್ನು ಮುಸ್ಲಿಮರಿಗೆ, ಕೆಳವರ್ಗದವರಿಗೆ, ಬಡವರಿಗೆ ಕೊಡಲಾಗಿಲ್ಲ ಎಂಬ ಸತ್ಯ ಎದ್ದು ಕಾಣುತ್ತಿದೆ.[1] ಬಿ. ವಿರೂಪಾಕ್ಷಪ್ಪ : ನಿಜಾಂ ಕಾಲದ ಶಿಕ್ಷಣ ಪದ್ಧತಿ (೨೦೦೦) ಪುಟ-೨೩

[2] ತಾರಾನಾಥ : ಮುನ್ನುಡಿ (ಕತೆಗೊಂಚಲು) (೧೯೩೦) ಪುಟ-೧

[3] ಪದ್ಮನಾಭಾಚಾರ್ಯ ಪುರಾಣಿಕ : ನಮ್ಮ ಇಂದಿನ ಶಿಕ್ಷಣ ಸಮಸ್ಯೆಗಳು, ಹೈದರಾಬಾದ್ ಕರ್ನಾಟಕ (೧೯೪೧) ಪುಟ-೪೭

[4] ಆರ್.ಜಿ. ಜಾಗೀರದಾರ, ಲಿಂಗಸೂಗೂರು ವಿಠ್ಠಲರಾವ್ : ಹೈದರಾಬಾದ್ ಕರ್ನಾಟಕ (೧೯೪೧), ಪು-೪೯

[5] ಪದ್ಮನಾಭಾಚಾರ್ಯ ಪುರಾಣಿಕ : ಹೈದರಾಬಾದ್ ಕರ್ನಾಟಕ (೧೯೪೧) ಪುಟ-೪೭