ಈ ಪ್ರಾಂತದಲ್ಲಿ ಸ್ವಾತಂತ್ರ್ಯೋತ್ತರ ಕಾಲದಲ್ಲಿ ಕನ್ನಡ ಕಲಿಕೆ ಮತ್ತು ಕನ್ನಡ ಭಾಷೆಯ ಅಭಿವೃದ್ಧಿ ಚುರುಕಾಗಿ ನಡೆಯಲಿಲ್ಲ. ಇದಕ್ಕೆ ಅನೇಕ ಕಾರಣಗಳಿವೆ. ಹೈದರಾಬಾದು ಕರ್ನಾಟಕ ವಿಮೋಚನೆ ಚಳುವಳಿಯ ಸಂದರ್ಭದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದವರಿಗೆ, ಹೈದರಾಬಾದು ರಾಜ್ಯ ಸರಕಾರವು ಪುನಃ ಶಿಕ್ಷಣವನ್ನು ಮುಂದುವರಿಸಲು ಅವಕಾಶ ನೀಡಿತು. ಪದವಿಗಳನ್ನು ಮುಗಿಸಿಕೊಳ್ಳಲು ವಿದ್ಯಾರ್ಥಿಗಳು ಪುನಃ ಅದೇ ಉರ್ದು ಮಾಧ್ಯಮದಲ್ಲಿಯೇ ಓದಲು ತೊಡಗಿದರು. ಈ ವಿದ್ಯಾರ್ಥಿ ವರ್ಗವು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟವರಾಗಲಿ, ಮುಂದುವರಿಸಿ ಪದವಿಗಳನ್ನು ಪಡೆದವರಾಗಲಿ ಉರ್ದು ಭಾಷೆಯಲ್ಲಿ ವ್ಯವಹಾರವನ್ನು ಮುಂದುವರಿಸಿದರು. ಮೈಸೂರು, ಧಾರವಾಡ ಪ್ರಾಂತಗಳಲ್ಲಿ ಇಂಗ್ಲಿಶ್ ಕಲಿತು, ಇಂಗ್ಲೀಶಿನಲ್ಲಿ ಮಾತನಾಡುವುದು ಒಂದು ಅಭಿಮಾನದ, ಹೆಮ್ಮೆಯ ಸಂಗತಿ ಹೇಗೆ ಆಗಿತ್ತೋ ಅದೇ ರೀತಿ ಈ ಪ್ರಾಂತದಲ್ಲಿ ಉರ್ದು ಕಲಿತು, ಉರ್ದುವಿನಲ್ಲಿ ಮಾತಾಡುವುದು ಹೆಮ್ಮೆಯ ಸಂಗತಿಯಾಗಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಉರ್ದು ಕಲಿತವರು ಸ್ವಾತಂತ್ರ್ಯೋತ್ತರ ಕಾಲದಲ್ಲಿಯೂ ಅದನ್ನು ಬಿಡದೆ ಉಳಿಸಿಕೊಂಡರು. ಮೇಲಾಗಿ ಸ್ವಾತಂತ್ರ್ಯಪೂರ್ವದಲ್ಲಿ ವಿದ್ಯಾರ್ಥಿಗಳಿಗೂ, ಅ ವಿದ್ಯಾರ್ಥಿಗಳ ಪೋಷಕರಿಗೂ ಇದ್ದ ಹಂಬಲವೆಂದರೆ ತಹಶೀಲದಾರ, ವಕೀಲ ವೃತ್ತಿಗೆ ಸೇರಿಕೊಳ್ಳುವುದಾಗಿತ್ತು. ವೈದ್ಯಕೀಯ, ತಂತ್ರಜ್ಞಾನ ಶಿಕ್ಷಣಕ್ಕಿಂತ ಆ ಹುದ್ದೆಗಳಿಗೆ ಹಂಬಲಿಸುವವರು ಹೆಚ್ಚಾಗಿದ್ದರು. ಇಂಥಹ ವೃತ್ತಿಗಳಲ್ಲಿ ಸೇರಿಕೊಂಡವರು ಉರ್ದು ಭಾಷೆಯಲ್ಲಿಯೇ ವೃತ್ತಿ ವ್ಯವಹಾರ ಮುಂದುವರಿಸಿದರು. ಸಿದ್ಧಯ್ಯ ಪುರಾಣಿಕರು ತಹಶೀಲ್ದಾರರಾಗಿ ಸೇವೆಗೆ ಸೇರಿಕೊಂಡರು. ‘ಹೈದರಾಬಾದು ಕರ್ನಾಟಕದಿಂದ ನಾವು ಹತ್ತು ಜನ ಆಯ್ಕೆಯಾಗಿ ತಹಶೀಲ್ದಾರರೆಂದು ನೇಮಕಗೊಂಡೆವು’

[1] ಎಂದು ಜಯತೀರ್ಥ ರಾಜ ಪುರೋಹಿತರು ಹೇಳಿದ್ದಾರೆ. ಸಾಹಿತ್ಯಾಸಕ್ತರಾದ, ಸಾಹುತ್ಯವನ್ನು ರಚಿಸಿ ಬೆಳೆಸಬೇಕಾದ ಇಂಥವರು ತಹಶೀಲ್ದಾರರಾಗಿ ಅಲೆದಾಡುತ್ತ ಸರಕಾರದ ಆಡಳಿತಾತ್ಮಕ ಸಮಸ್ಯೆಗಳತ್ತ ಒತ್ತು ಕೊಡುವಂತಾಯಿತು. ಆದರೂ ಇಂತಹ ಕೆಲವರು ಇದೇ ಪ್ರಾಂತದಲ್ಲಿ ತಮ್ಮ ವೃತ್ತಿಯನ್ನು ಮಾಡುತ್ತ ಭಾಷೆ ಸಾಹಿತ್ಯ-ಸಂಸ್ಕೃತಿಯ ಪರಿಸರವನ್ನು ಪುನರ್ ಸೃಷ್ಟಿಸಲು ಶ್ರಮಿಸಿದರು. ಸಿದ್ಧಯ್ಯ ಪುರಾಣಿಕರು, ಜಯತೀರ್ಥ ರಾಜಪುರೋಹಿತರು ಹೈದರಾಬಾದು ರಾಜ್ಯದಲ್ಲಿ ಕನ್ನಡ ಸಂಸ್ಕೃತಿಯನ್ನು ಬೆಳೆಸಲು ಅಧಿಕಾರಿಗಳಾಗಿ ಪ್ರಯತ್ನಿಸಿದರು. ನಾಂದೇಡ, ಉಸ್ಮಾನಾಬಾದು, ಕರೀಮನಗರ ಸೇರಿದಂತೆ ಬೀದರ, ಗುಲಬರ್ಗಾ ಜಿಲ್ಲೆಗಳ ತಾಲೂಕುಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಜನರ ಸಹಕಾರದೊಂದಿಗೆ ಕೈಗೊಂಡರು. ಅವರ ಈ ಕೆಲಸದಿಂದ ಕನ್ನಡ ಪರಿಸರವನ್ನು ಪುನರ್ ನಿರ್ಮಾಣ ಮಾಡಲು ತಕ್ಕಮಟ್ಟಿಗೆ ಸಹಾಯವಾಯಿತು. ಹೈದರಾಬಾದಿನ ಕನ್ನಡ ವಿದ್ಯಾರ್ಥಿಗಳ ತರುಣ ತಂಡ ಹೊರತಂದ ‘ಮೊಗ್ಗಿನ ಮಾಲೆ’ ೧೯೩೭ರಲ್ಲಿ ಪ್ರಕಟವಾಯಿತು. ಕರ್ನಾಟಕ ಸಾಹಿತ್ಯ ಮಂದಿರದಿಂದ ಹೊರ ಬಂದ ‘ಶ್ರೀಕಾರ’ ಎಂಬ ಕವನ ಸಂಕಲನವು, ‘ಪ್ರಬಂಧಮಾಲೆ’ ಎಂಬ ಸಾಹಿತ್ಯ ಸಮ್ಮೇಳನಗಳ ಅಧ್ಯಕ್ಷರ ಭಾಷಣಗಳ-ಲೇಖನಗಳ ಸಂಕಲನವು ೧೯೫೪ರಲ್ಲಿ ಪ್ರಕಟವಾದವು. ಈ ಎರಡು ಕೃತಿಗಳ ಸಂಪಾದಕರು ಸಿದ್ಧಯ್ಯ ಪುರಾಣಿಕ ಮತ್ತು ರಾಘವೇಂದ್ರಾಚಾರ್ಯ ಇಟಗಿ. ೧೯೫೩ರಲ್ಲಿ ಹೊರಬಂದ ‘ಒರೆಗಲ್ಲು’ ಈ ಕೃತಿಗಳೆಲ್ಲವೂ ಗಮನಾರ್ಹವಾಗಿವೆ.

ಆದರೆ ಕನ್ನಡ ಶಾಲೆಗಳ ಅಭಿವೃದ್ಧಿ ಚುರುಕಾಗಲಿಲ್ಲ. ಕನ್ನಡ ಕಲಿಕೆಯೂ ಉತ್ಸಾಹದಿಂದ ಆರಂಭವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣವೆಂದರೆ ಪ್ರಾಥಮಿಕ ಶಾಲೆಗಳು ಮಂದಗತಿಯಲ್ಲಿ ಹುಟ್ಟಿಕೊಂಡವು. ಕನ್ನಡ ಭಾಷೆಯನ್ನು ಕಲಿಸಲು ಕನ್ನಡ ಶಾಲಾ ಶಿಕ್ಷಕರ ತರಬೇತಿಯನ್ನು ಪಡೆದ ಶಿಕ್ಷಕರು ಈ ಪ್ರಾಂತದಲ್ಲಿ ಇರಲಿಲ್ಲ. ಉರ್ದು ಮಾಧ್ಯಮದಲ್ಲಿ ಕಲಿತ ಅದೂ ಮಿಡ್ಲ್ ಸ್ಕೂಲ್ ಪರೀಕ್ಷೆ ಪಾಸಾದ ಅಭ್ಯರ್ಥಿಗಳನ್ನು ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಯಿತು. ಈ ಭಾಗದಲ್ಲಿ ಮೆಟ್ರಿಕ್ಯೂಲೇಟ್‍ವರೆಗೆ ಓದಿದವರ ಅಭಾವವಿತ್ತು. ಇದರಿಂದಾಗಿ ಕನ್ನಡ ಭಾಷೆಯನ್ನು ಈ ಶಿಕ್ಷಕರು ಸರಿಯಾಗಿ ಕಲಿಸಲು ಅಸಮರ್ಥರಾದರು. ಈ ಬೆಳವಣಿಗೆಯನ್ನು ಕಂಡ ಚಂದ್ರಶೇಖರ ಶಾಸ್ತ್ರಿಗಳು ಮಾನ್ವಿಯಲ್ಲಿ ನಡೆದ ೨ನೇ ಹೈದರಾಬಾದ್ ಸಾಹಿತ್ಯ ಸಮ್ಮೇಳನದಲ್ಲಿ (೧೪೪೬) ‘ಈ ಪ್ರಾಥಮಿಕ ಶಾಲೆಗಳಲ್ಲಿ ಸರಿಯಾದ ಕನ್ನಡ ಶಿಕ್ಷಣವು ದೊರೆಯುವುದಿಲ್ಲವೆಂದು ವ್ಯಸನದಿಂದ ಹೇಳಬೇಕಾಗಿದೆ. ಯಾಕೆಂದರೆ ಅಲ್ಲಿ ಕನ್ನಡ ಕಲಿಸತಕ್ಕ ಶಿಕ್ಷಕರಿಗೂ ಕೂಡ ಸರಿಯಾದ ಕನ್ನಡ ಶಿಕ್ಷಣವು ದೊರೆಯಲು ಅನುಕೂಲ ಇಲ್ಲವೆಂದ ಮೇಲೆ ಇಂತಹ ಸ್ಥಿತಿಯಲ್ಲಿ ಅವರು ಕನ್ನಡದಲ್ಲಿ ಶಿಕ್ಷಣವನ್ನು ಕೊಡಲು ಅಸಮರ್ಥರಾಗಿರುವುದು.’[2] ಈ ಪರಿಸ್ಥಿತಿಯು ಹಾಗೆ ಐದಾರು ವರ್ಷಗಳ ಕಾಲ ಮುಂದುವರಿದಂತೆ ಕಾಣುತ್ತದೆ. ಹೈದರಾಬಾದು ಸಾಹಿತ್ಯ ಸಮ್ಮೇಳನವು ಪುನಃ ೫ ವರ್ಷಗಳ ಮೇಲೆ ಜರುಗಿದ ಸಂದರ್ಭದಲ್ಲಿಯೂ ಅದರ ಅಧ್ಯಕ್ಷತೆಯನ್ನು ಸಿದ್ಧಯ್ಯ ಕಲ್ಲಿನಂಥ ಶಾಸ್ತ್ರಿ ಪುರಾಣಿಕ ವಹಿಸುತ್ತಾರೆ. ಆಗ ಅವರೂ ಈ ಪ್ರಾಂತದ ಶಾಲೆಗಳಲ್ಲಿ ಕನ್ನಡ ಕಲಿಕೆಯನ್ನು ಕಂಡು, ‘ನಮ್ಮ ಮೂರು ಕನ್ನಡ ಜಿಲ್ಲೆಗಳಲ್ಲಿ ಎಲ್ಲ ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿ ಕನ್ನಡಿಗರಲ್ಲದಿದ್ದರೂ ಕನ್ನಡ ಬಲ್ಲ ಶಿಕ್ಷಕರನ್ನು, ಕನಿಷ್ಠ ಕನ್ನಡದ ಹಿತಶತ್ರುಗಳಲ್ಲದ ಶಿಕ್ಷಕರನ್ನು ಸರಕಾರವು ಒದಗಿಸಬೇಕು’[3] ಎಂದು ಹೇಳಿದರು.

೧೯೫೬ರಲ್ಲಿ ಭಾಷಾವಾರು ಪ್ರಾಮ್ತ ರಚನೆಯಾದ ಮೇಲೆ ಹೆಚ್ಚಾಗಿ ಕನ್ನಡ ಶಾಲೆಗಳು ಹುಟ್ಟಿಕೊಳ್ಳತೊಡಗಿದವು. ಕನ್ನಡ ಶಾಲೆಗಳು ಆರಂಭಗೊಂಡಾಗ ಬೀದರ, ಗುಲಬರ್ಗಾ ಈ ಎರಡೂ ಜಿಲ್ಲೆಗಳಲ್ಲಿ ಕನ್ನಡ ಕಲಿಸುವ ಶಿಕ್ಷಕರು ಇರಲಿಲ್ಲವೆಂದು, ಅದಕ್ಕಾಗಿ ಪ್ರಭುರಾವ್ ಕಂಬಳಿವಾಲೆ, ಶಂಕರ ಶೆಟ್ಟಿ ಪಾಟೀಲ್, ಮಹಾದೇವಪ್ಪ ರಾಮಪುರೆ ಮೊದಲಾದವರು ಕನ್ನಡ ಶಿಕ್ಷಕರನ್ನು ಕಳಿಸಿಕೊಡಬೇಕೆಂದು ಜಯದೇವಿತಾಯಿ ಲಿಗಾಡೆ ಅವರನ್ನು ವಿನಂತಿಸಿಕೊಂಡರೆಂದು, ತಾಯಿಯವರು ವಿಜಾಪುರ ಜಿಲ್ಲೆಯ ಕನ್ನಡ ಶಿಕ್ಷಕರನ್ನು ಕರೆಸಿ ಕಳಿಸಿದರೆಂದು ತಿಳಿದುಬರುತ್ತದೆ.[4] ಪ್ರಾಥಮಿಕ ಹಂತದಲ್ಲಿ ಕನ್ನಡ ಶಾಲೆಗಳು ಇಂತಹ ಬಿಕ್ಕಿಟ್ಟಿನಿಂದ ಬೆಳವಣಿಗೆ ನಿಧಾನಗತಿಯಲ್ಲಿ ಆಯಿತು. ಈ ನಿಧಾನ ಈ ಹೊತ್ತಿಗೂ ತನ್ನ ಗತಿಯನ್ನು ಕಾಯ್ದುಕೊಂಡಿದೆ. ೨೧ನೇ ಶತಮಾನದ ಆರಂಭದ ಹೊತ್ತಿನಲ್ಲಿಯೂ ಕರ್ನಾಟಕದಲ್ಲಿಯೇ ಈ ಪ್ರಾಂತ ಶೈಕ್ಷಣಿಕವಾಗಿ ಹಿಂದುಳಿದಿದೆ. ಸ್ವಾತಂತ್ರ್ಯಾನಂತರ ಉನ್ನತ ಶಿಕ್ಷಣಕ್ಕೆ ಬೇಕಾದ ಅವಕಾಶಗಳು ಹೆಚ್ಚಾಗಿರಲಿಲ್ಲ. ೧೯೪೯-೫೦ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ಆರಂಭವಾಯಿತಷ್ಟೆ. ಧಾರವಾಡ, ಬೆಳಗಾವಿ, ವಿಜಾಪುರ, ಉತ್ತರ ಕನ್ನಡ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅವಕಾಶವಿತ್ತು. ೧೯೫೭ರಲ್ಲಿ ಬೀದರ, ಗುಲಬರ್ಗಾ, ರಾಯಚೂರು ಜಿಲ್ಲಾ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಲಾಯಿತು. ಅವಕಾಶ ಕಲ್ಪಿಸಲಾಯಿತೇ ಹೊರತು ನಿಜವಾದ ಅರ್ಥದಲ್ಲಿ ಈ ಪ್ರಾಂತದ ವಿದ್ಯಾರ್ಥಿಗಳಿಗೆ ಅವಕಾಶಗಳು ಲಭ್ಯವಾಗುತ್ತಿರಲಿಲ್ಲ. ೧೯೭೦ರಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರ ಗುಲಬರ್ಗಾದಲ್ಲಿ ಆರಂಭವಾಯಿತು. ಈ ಕೇಂದ್ರಕ್ಕೆ ಬೋಧಕರಾಗಿ ಬಂದವರೂ ಕೂಡ ಮುಂಬಯಿ ಪ್ರಾಂತದವರೇ.

ಉನ್ನತ ಪದವಿಗಳನ್ನು ಪದೆಯಲು ಅವಕಾಶಗಳು ಇಲ್ಲದ ಕಾರಣ ಶಾಂತರಸ ಅವರಂಥ ಸಾಹಿತ್ಯಾಸಕ್ತರಿಗೆ ಎಂ.ಎ ಪದವಿ ಪಡೆಯಲಾಗಿರಲಿಲ್ಲ (ಆನಂತರದಲ್ಲಿ ಪಡೆದರು). ಅದರಿಂದಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಾಗಲಿ, ಗುಲಬರ್ಗಾ ಸ್ನಾತಕೋತ್ತರ ಕೇಂದ್ರದಲ್ಲಾಗಲಿ ಬೋಧಕರಾಗುವ ಅವಕಾಶಗಳಿಂದ ವಂಚಿತರಾದರು. ೧೯೯೦ರಲ್ಲಿ ಕಲುಬುರ್ಗಿಯಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು. ಸಾಹಿತ್ಯ ಚಟುವಟಿಕೆಗಳಿಗೆ ಸಂಬಂಧಿಸಿ ಹೇಳುವುದಾದರೆ ಆಧುನಿಕ ಸಾಹಿತ್ಯದ ಬೆಳವಣಿಗೆಗೆ ಬೇಕಾದ ಪರಿಸರವನ್ನು ಇಲ್ಲಿ ನಿರ್ಮಾಣ ಮಾಡಲಾಗಲಿಲ್ಲ. ಇಂಗ್ಲಿಶ್ ಸಾಹಿತ್ಯ ಅಧ್ಯಯನದ ಕೊರತೆಯಿಂದ ಹೊಸ ಸಾಹಿತ್ಯದ ಚರ್ಚೆ, ಸಂವಾದ ನಡೆಯಲಿಲ್ಲ. ಜಾನಪದ, ವಚನ, ಪ್ರಾಚೀನ ಪಠ್ಯಗಳ ಅಧ್ಯಯನಕ್ಕೆ ಆಧುನಿಕ ಜ್ಞಾನ ಬಳಕೆಯಾಗಲಿಲ್ಲ. ಸಾಂಪ್ರದಾಯಿಕ ಅಧ್ಯಯನಗಳೇ ಮುಂದುವರಿದವು. ಬೀದರ, ಗುಲಬರ್ಗಾ ಜಿಲ್ಲೆಗಳು ಇದರಿಂದ ಇನ್ನೂ ಮುಕ್ತವಾಗಿಲ್ಲ. ವಿಶ್ವವಿದ್ಯಾಲಯದಿಂದ ಹೊರಗಿರುವ ಶೈಲಜಾ ಉಡಚಣ, ಶಿವಶರಣ ಪಾಟೀಲ್ ಜಾವಳಿ, ಗೀತಾ ನಾಗಭೂಷಣ, ವೀರೇಂದ್ರ ಸಿಂಪಿ ಮುಂತಾದವರು ಅಧುನಿಕ ಹೊಸ ಸಾಹಿತ್ಯ ಪ್ರಕಾರಗಳಲ್ಲಿ ಬರೆದರು. ರಾಯಚೂರು ಭಾಗದಲ್ಲಿ ಸೂಗವೀರ ಶರ್ಮರು ಕನ್ನಡ ಕಲಿಯುವ ಮಕ್ಕಳಿಗೆ ನೆರವಾದರು. ಶಾಂತರಸರು ಅವರಿಂದ ಪ್ರೇರಿತರಾದರು. ಚೆನ್ನಬಸವಪ್ಪ ಬೆಟ್ಟದೂರು, ವೀರನಗೌಡ ನೀರಮಾನ್ವಿ, ಕಲಾನಂದ ಗೂಗಲ್, ಶಿವಲಿಂಕ ಮುಂತಾದವರ ಜತೆ ಶಾಂತರಸರು ಸಂಘಟಿತರಾಗಿ ಸಾಹಿತ್ಯಕ್ಕೆ ವಾತಾವರಣವನ್ನು ಬಲಪಡಿಸಿದರು. ಅದರ ಫಲವಾಗಿ ‘ಮುಸುಕು ತೆರೆ’ ಎಂಬ ಸಂಕೀರ್ಣ ಕೃತಿಯನ್ನು ಪ್ರಕಟಿಸಿದರು. ನಂತರ ‘ಸತ್ಯಸ್ನೇಹ’ ಪ್ರಕಾಶನ ಆರಂಭಿಸಿದರು. ಚಂದ್ರಕಾಂತ ಕುಸನೂರು, ಚೆನ್ನಣ್ನ ವಾಲೀಕಾರ, ಜಿ.ಕೃಷ್ಣರಾವ್, ಜಿ. ಶಾಮಾಚಾರ್, ಲಿಂಗಣ್ಣ ಸತ್ಯಂಪೇಟೆ, ಜಂಬಣ್ಣ ಅಮರಚಿಂತ, ರಾಜಶೇಖರ ನೀರಮಾನ್ವಿ ರಾಯಚೂರಲ್ಲಿ ಸೇರಿದರು. ಸಾಹಿತ್ಯ ಚರ್ಚೆ, ಚಿಂತನೆ ನಡೆಸಿದರು. ಹೊಸಗನ್ನಡ ಸಾಹಿತ್ಯದ ಬೆಳವಣಿಗೆಗೆ ಕಾರಣರಾದರು. ಸತ್ಯಸ್ನೇಹ ಪ್ರಕಾಶನದಿಂದ ಕಥೆ, ಕಾದಂಬರಿ, ಕವಿತೆ, ನಾಟಕ, ಸಂಶೋಧನೆ ಮುಂತಾದ ಪ್ರಕಾರಗಳ ಪುಸ್ತಕಗಳನ್ನು ಪ್ರಕಟಿಸಿದರು. ‘ಬೆನ್ನ ಹಿಂದಿನ ಬೆಳಕು’ ಎಂಬ ಕವಿತಾ ಸಂಕಲನ ಇಂದನ್ನು ಶಾಂತರಸರು ಸಂಪಾದಿಸಿದರು. ಹೈದರಾಬಾದು ಕರ್ನಾಟಕದ ಮುಖ್ಯ ಕವಿಗಳ ಕವಿತೆಗಳು ಈ ಸಂಕಲನದಲ್ಲಿ ಸೇರಿದವು. ಶಾಂತರಸರು ರಾಯಚೂರಿನಲ್ಲಿ ಸುಮಾರು ೫೦ ವರ್ಷಗಳ ಉದ್ದಕ್ಕೂ ಬರಹಗಾರರನ್ನು ಸೇರಿಸಿಕೊಂಡು ಬೆಳೆಸಿದರು. ಸ್ವಾತಂತ್ರ್ಯಪೂರ್ವದ ‘ಮುಸುಕು ತೆರೆ’ ಸ್ವಾತಂತ್ರ್ಯಾನಂತರದ ‘ಬೆನ್ನ ಹಿಂದಿನ ಬೆಳಕು’ ಕೃತಿಗಳ ಹುಟ್ಟಿಗೆ ಅವರ ಸಂಘಟನಾತ್ಮಕವಾದ ಪ್ರಯತ್ನಕ್ಕೆ ನಿದರ್ಶನ. ಇದರಿಂದ ಅನೇಕ ಬರಹಗಾರರು ಸಾಹಿತ್ಯ ಲೋಕಕ್ಕೆ ಪರಿಚಿತರಾದರು. ಇಂಥ ಪ್ರಯತ್ನಗಳು ಹೊರಗಿನ ಪ್ರಾಂತದವರಿಗೆ ಸಣ್ಣ ಪ್ರಯತ್ನಗಳಾಗಿ ಇಲ್ಲ ತಕರಾರುಗಳಾಗಿ ಕಾಣಬಹುದು. ಆದರೆ ಈ ಪ್ರಾಂತದ ಚರಿತ್ರೆಯಲ್ಲಿ ಈ ಪ್ರಯತ್ನಗಳ ಸಾಧನೆ ಗಮನಾರ್ಹವಾದುದು.

ವಲಸಿಗರ ಮಕ್ಕಳ ಶೈಕ್ಷಣಿಕ ಸಮಸ್ಯೆಗಳು

ಈ ಪ್ರಾಂತದಲ್ಲಿ ಬಡತನ ಹೆಚ್ಚಾಗಿದೆ. ಬಡವರು, ಕೆಳವರ್ಗದವರು ದುಡಿಮೆಗಾಗಿ ನೆರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ರಾಜ್ಯದ ಒಳಗೆ ಇರುವ ದೊಡ್ದ ನಗರಗಳಿಗೂ ಹೋಗುತ್ತಾರೆ. ದುಡಿಮೆಗಾಗಿ ವಲದೆ ಹೋಗುವವರು ಇಲ್ಲಿಯ ಬೇರು ಕಡಿದುಕೊಂಡು ಹೋಗುವುದಿಲ್ಲ. ಯಾಕೆಂದರೆ ಮನೆ, ಚೂರುಚಾರು ಭೂಮಿ ಇರುತ್ತದೆ. ಇರುವ ಭೂಮಿಯನ್ನು ಉತ್ತು, ಬಿತ್ತುವಾಗ ಮತ್ತು ಸುಗ್ಗಿ ಬಂದಾಗ ಇಲ್ಲಿಗೆ ಬರುವುದು, ಸುಗ್ಗಿ ಮುಗಿದ ಕೂಡಲೇ ಪುನಃ ಹೋಗುವುದು ಮಾಡುತ್ತಾರೆ. ಅವರ ಬೇರುಗಳು ಈ ಪ್ರಾಂತದಲ್ಲಿಯೇ ಇರುತ್ತವೆ. ಈ ಬಗೆಯದು ಒಂದು ವರ್ಗವಾದರೆ. ಇನ್ನೊಂದು ವರ್ಗ ಈ ಪ್ರಾಂತದಲ್ಲಿಯೇ ನೀರಾವರಿ ಪ್ರದೇಶಗಳಿಗೆ ಹೋಗಿ ದುಡಿದು ಪುನಃ ತಮ್ಮ ಜಿಲ್ಲೆಗಳಿಗೆ ಹೋಗುತ್ತಾರೆ. ರಾಯಚೂರು ಜಿಲ್ಲೆಯಲ್ಲಿ ನೀರಾವರಿ ಇರುವ ಮಾನ್ವಿ, ಸಿಂಧನೂರು, ಗಂಗಾವತಿ ತಾಲೂಕುಗಳಿಗೆ ನೆರೆಯ ತಾಲೂಕುಗಳಿಂದ ಸುಗ್ಗಿಗೆ ಬರುತ್ತಾರೆ. ಪುನಃ ಹೋಗುತ್ತಾರೆ. ಈ ಬಗೆಯ ವಲಸಿಗರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಲೇ ಇರುತ್ತಾರೆ. ಬಡತನದಿಂದ ಚಿಕ್ಕವಯಸ್ಸಿನಲ್ಲೆ ದುಡಿಮೆಗೆ ಒಳಗಾಗುವುದರಿಂದ ಶಾಲೆಗೆ ಹೋಗುವುದು. ಈ ಮಕ್ಕಳಿಗೆ ಆಗುವುದಿಲ್ಲ. ಇಂತಹ ಸಾವಿರಾರು ಮಕ್ಕಳೇ ಕನ್ನಡ ಶಾಲೆಗೆ ಹೋಗಿ ಕಲಿಯಬೇಕಾಗಿರುವವರು. ನಿರಂತರವಾಗಿ ಶಾಲೆಗಳಿಗೆ ಹೋಗಿ ಕಲಿಯುವುದು ಈ ಮಕ್ಕಳಿಗೆ ಸಾಧ್ಯವಾಗುವುದಿಲ್ಲ. ಹೀಗಾಗಿ ಸಾಕ್ಷರತೆಯ ಪ್ರಮಾಣ ಕುಸಿದಿದೆ. ರಾಜ್ಯದಲ್ಲಿ ೬ರಿಂದ ೧೪ ವರ್ಷ ವಯಸ್ಸಿನ ೧೦,೫೩,೭೪೪ ಮಕ್ಕಳು ಶಾಲೆಯಿಂದ ಹೊರಗಿದ್ದು ಶಿಕ್ಷಣದಿಂದ ವಂಚಿತರಾಗಿರುವುದು ಸರ್ಕಾರ ನಡೆಸಿರುವ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ರಾಜ್ಯದಲ್ಲಿ ೬ರಿಂದ ೧೪ ವರ್ಷ ವಯಸ್ಸಿನ ೯೪,೭೯,೧೭೧ ಮಕ್ಕಳಿದ್ದು, ಅವರಲ್ಲಿ ಶಾಲೆಯಿಂದ ಹೊರಗಿರುವವರ ಪ್ರಮಾಣ ಶೇಕಡಾ ೧೧.೭೨ರಷ್ಟಿದೆ. ಈ ವಯಸ್ಸಿನ ೮೪,೨೫,೪೨೭ ಮಕ್ಕಳು ಶಾಲೆಗೆ ಹಾಜರಾಗುತ್ತಿದ್ದಾರೆ. ಐದು ವರ್ಷದೊಳಗಿನ ಮಕ್ಕಳ ಸಂಖ್ಯೆ ೮೯,೯೧,೭೬೭. ಈ ಅಂಕಿ ಅಂಶಗಳು ರಾಜ್ಯದ ಶಿಕ್ಷಣ ಇಲಾಖೆ ನಡೆಸಿದ ವ್ಯಾಪಕ ಸಮೀಕ್ಷೆಯಿಂದ ಬಹಿರಂಗಗೊಂಡಿದೆ. ಶಾಲೆಯಿಂದ ಹೊರಗಿರುವ ಮಕ್ಕಳಲ್ಲಿ ಹೆಣ್ಣುಮಕ್ಕಳ ಪ್ರಮಾಣ ಶೇಕಡಾ ೧೧.೧೨ ಇದ್ದರೆ, ಗಂಡುಮಕ್ಕಳ ಪ್ರಮಾಣ ಶೇಕಡಾ ೧೧.೫೩ರಷ್ಟಿದೆ.

ಶಾಲೆಯಿಂದ ಹೊರಗಿರುವ ಮಕ್ಕಳ ಸಂಖ್ಯೆ ಹೈದರಾಬಾದು ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ರಾಯಚೂರು ಜೆಲ್ಲೆಯಲ್ಲಿ ೧,೧೬,೮೯೨ (ಶೇ. ೨೬.೭೩) ಇದ್ದು ರಾಜ್ಯದಲ್ಲೇ ಅತಿ ಹೆಚ್ಚು. ನಂತರ ಸ್ಥಾನಗಳು ಕಲ್ಬುರ್ಗಿ ಜಿಲ್ಲೆ ೧,೮೫,೯೯೭ (ಶೇ. ೨೫.೭೬), ಕೊಪ್ಪಳ ೫೮,೧೩೬ (ಶೇ. ೨೨.೧೮), ಬಳ್ಳಾರಿ ೭೩,೫೭೫ (ಶೇ. ೧೭.೯೦), ಬೀದರ ೪೨,೭೯೯ (ಶೇ. ೧೨.೪೫), ಉತ್ತರ ಕರ್ನಾಟಕದ ಬಿಜಾಪುರ ೮,೧೩,೩೩೦ ಮತ್ತು ಬಾಗಲಕೋಟೆ ೬೦,೨೬೩ (ಶೇ. ೧೫.೧೩) ಈ ಏಳು ಜಿಲ್ಲೆಗಳಲ್ಲಿ ಶಾಲೆಯಿಂದ ಹೊರಗಿರುವ ಮಕ್ಕಳ ಸಂಖ್ಯೆ ರಾಜ್ಯದ ಶೇಕಡಾ ೫೭.೭೯ರಷ್ಟಿದೆ.

ಪರಿಶಿಷ್ಟ ಜಾತಿಯ ಶೇಕಡಾ ೧೫.೫೫ರಷ್ಟು ಮಕ್ಕಳು ಶಾಲೆಯಿಂದ ಹೊರಗಿವೆ. ಅವುಗಳ ಒಟ್ಟು ಸಂಖ್ಯೆ ೩,೦೯,೭೬೩. ಇವರಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಶೇ. ೧೬.೭೯ ಗಂಡು ಮಕ್ಕಳ ಪ್ರಮಾಣ ಶೇ. ೧೪.೩೬. ಪರಿಶಿಷ್ಟ ಪಂಗಡಗಳಿಗೆ ಸೇರಿದ ೧,೪೪,೧೪೨ ಮಕ್ಕಳು ಶಾಲೆಯಿಂದ ಹೊರಗಿವೆ. ಅವರಲ್ಲಿ ಹೆಣ್ಣು ಮಕ್ಕಳ ಪ್ರಮಾಣ ಶೇ. ೨೦.೭೧. ಗಂಡು ಮಕ್ಕಳ ಪ್ರಾಮಾಣ ಶೇ. ೧೬.೬೯.

ಪರಿಶಿಷ್ಟ ಜಾತಿಯ ಮಕ್ಕಳಲ್ಲಿ ಶಾಲೆಯಿಂದ ಹೊರಗಿರುವವರ ಸಂಖ್ಯೆ ಜಿಲ್ಲಾವರು ಈ ರೀತಿ ಇದೆ. ರಾಯಚೂರು ೩೦.೯೬೧ (ಶೇ. ೩೨.೬೦), ಕಲ್ಬುರ್ಗಿ ೬೦,೪೭೩ (ಶೇ. ೩೦.೧೧), ಕೊಪ್ಪಳ ೧೩.೨೯೧ (ಶೇ. ೨೮.೯೫), ಬಳ್ಳಾರಿ ೨೧,೧೪೩ (ಶೇ. ೨೪.೪೪), ವಿಜಾಪುರ ೨೩,೭೫೦ (ಶೇ. ೨೪.೨೬), ಬಾಗಲಕೋಟೆ ೧೪,೩೫೯ (ಶೇ. ೨೨.೭೨).

ಪರಿಶಿಷ್ಟ ಪಂಗಡಕ್ಕೆ ಸೇರಿದ ಮಕ್ಕಳಲ್ಲಿ ಶಾಲೆಯಿಂದ ಹೊರಗಿರುವವರು ಸಂಖ್ಯೆ ಕಲ್ಬುರ್ಗಿ ಜಿಲ್ಲೆಯಲ್ಲಿ ಹೆಚ್ಚಿದ್ದಾರೆ. ಅದರಂತೆ ಆ ಜಿಲ್ಲೆಯಲ್ಲಿ ೧೫,೫೭೭ (ಶೇ. ೪೧.೩೧), ರಾಯಚೂರು ೩೩,೯೯೦ (ಶೇ. ೩೯.೩೬), ಕೊಪ್ಪಳ ೧೦,೩೪೩ (ಶೇ. ೩೦.೪೫), ಬಳ್ಳಾರಿ (ಶೇ. ೨೪.೨೭), ಬಾಗಲಕೋಟೆ ೪,೦೨೯ (ಶೇ. ೨೧.೧೨), ವಿಜಾಪುರ ೨.೦೪೪ (ಶೇ. ೧೯.೭೦), ಬೀದರ ೭,೩೭೫ (ಶೇ. ೧೮.೧೮).

ಈ ಸಮೀಕ್ಷೆಯಲ್ಲಿ ಜನವರಿ ೧೮ರಿಂದ ಫೆಬ್ರವರಿ ೨೦, ೨೦೦೧ರವರೆಗೆ ನಡೆಸಲಾಯಿತು. ಇದರಲ್ಲಿ ಶಿಕ್ಷಣ ಇಲಾಖೆಯ ಸಿಬ್ಬಂದಿ ಹಾಗು ಶಿಕ್ಷಕರು ಭಾಗವಹಿಸಿ ಒಟ್ಟು ಒಂದು ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂದರ್ಶಿಸಿ ಪ್ರತಿಯೊಬ್ಬ ಬಾಲಕ, ಬಾಲಕಿಯರ ಹಾಗೂ ಕುಟುಂಬದವರ ಹೆಸರುಗಳನ್ನು ದಾಖಲು ಮಾಡಿಕೊಂಡಿದ್ದಾರೆ. (ವರದಿ : ಪ್ರಜಾವಾಣಿ ದಿನಪತ್ರಿಕೆ : ೧೪.೩.೨೦೦೧)

೨೦೦೧ – ೦೨ನೇ ಶೈಕ್ಷಣಿಕ ವರ್ಷದಲ್ಲಿ ನಡೆದ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರ ಪ್ರಮಾಣ ಎಂದಿನಂತೆ ಈ ಪ್ರಾಂತ ಕೊನೆಯ ಸ್ಥಾನದಲ್ಲಿದೆ. ಅದರಲ್ಲೂ ಗುಲಬರ್ಗಾ ಜಿಲ್ಲೆಯಲ್ಲಿ ಶೇ. ೫೮.೮೦ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಸರಕಾರವು ಈ ಪ್ರಾಂತವನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವ ಸಲುವಾಗಿಯೇ ಪ್ರತ್ಯೇಕ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ಸ್ಥಾಪಿಸಿದ ಮೊದಲನೇ ವರ್ಷವೇ ಪ್ರಾಥಮಿಕ ಶಾಲೆಯ ಫಲಿತಾಂಶ ಹಿಂದಿಗಿಂತ ಹೆಚ್ಚು ಕುಸಿದಿದೆ. ಪ್ರಾಥಮಿಕ ಮತ್ತು ಫ್ರೌಢಶಾಲೆಗಳ ಫಲಿತಾಂಶವು ಕೆಳಕ್ಕೆ ಕುಸಿದಿರುವ ಪರಿಣಾಮವಾಗಿ ಪಿ.ಯು.ಸಿ.ಯಲ್ಲಿಯೂ ಕೂಡ ಇದು ಮುಂದುವರಿಯುತ್ತಿದೆ. ೨೦೦೧-೦೨ರ ಸಾಲಿನ ಫಲಿತಾಂಶವನ್ನು ಗಮನಿಸಬೇಕು. ರಾಯಚೂರು ಜಿಲ್ಲೆಯಲ್ಲಿ ಶೇ. ೨೮.೮೦ ಇದ್ದು, ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾದವರು ೧೮ ವಿದ್ಯಾರ್ಥಿಗಳು. ಕೊಪ್ಪಳ ಜಿಲ್ಲೆಯಲ್ಲಿ ಶೇ. ೨೮.೬೫ ಇದ್ದು, ೧ ಡಿಸ್ಟಿಂಕ್ಷನ್ ಮಾತ್ರ. ಗುಲಬರ್ಗಾ ಜಿಲ್ಲೆಯಲ್ಲಿ ಶೇ. ೨೭.೧೧ ಇದ್ದು, ಡಿಸ್ಟಿಂಕ್ಷನ್ ೩೮. ಬೀದರ್ ಜಿಲ್ಲೆಯಲ್ಲಿ ಶೇ. ೨೨.೦೯ ಇದ್ದು ಡಿಸ್ಟಿಂಕ್ಷನ್ ೧೬ ಮಾತ್ರ.

ಇಷ್ಟು ಪ್ರಮಾಣದಲ್ಲಿ ಫಲಿತಾಂಶ ಕುಸಿದಿರುವುದು, ತೇರ್ಗಡೆಯಾಗದ ಮಕ್ಕಳನ್ನು ಪುನಃ ಶಾಲೆಗೆ ಬರುವಂತೆ ಮಾಡುವುದು ಈ ಎರಡು ಪ್ರಮುಖ ಸಮಸ್ಯೆಗಳನ್ನು ಸುಧಾರಿಸುವುದು ಸುಲಭದ ಕೆಲಸವಲ್ಲ. ಸರಕಾರವೆನೋ ಈ ಪ್ರಾಂತದಲ್ಲಿ ಪ್ರತ್ಯೇಕ ಶಿಕ್ಷಣ ನಿರ್ದೇಶನಾಲಯವನ್ನು ಸ್ಥಾಪಿಸಿದೆ. ಮಧ್ಯಾಹ್ನದ ಊಟವನ್ನು ಮಕ್ಕಳಿಗೆ ನೀಡುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ವಲಸೆ ಹೋಗಿ ಬರುವ ಅಸಂಖ್ಯಾತ ಕುಟುಂಬಗಳಿಗೆ ಈ ಪ್ರಾಂತಗಳಲ್ಲೇ ದುಡಿಯುವ ಅವಕಾಶಗಳು ಸೃಷ್ಟಿಯಾಗಬೇಕು. ಅಂದಾಗ ಮಾತ್ರ ಈ ಕುಟುಂಬಗಳ ಮಕ್ಕಳಉ ಒಂದುಕಡೆ ನೆಲೆ ನಿಲ್ಲುವಂತಾಗುತ್ತದೆ. ಆಗ ಅವರ ಕಲಿಕೆ ನಿರಾಂತಕವಾಗಿ ಸಾಗಿದಂತಾಗುತ್ತದೆ. ದುಡಿಯುವ ಕುಟುಂಬಗಳಲ್ಲಿ ಹೆಣ್ಣುಮಕ್ಕಳೂ, ಅನಿವಾರ್ಯವಾಗಿ ದುಡಿಯಬೇಕಾಗಿದೆ. ಈ ಪ್ರಾಂತದಲ್ಲಿ ದುಡಿಯುವ ಮಹಿಳೆಯರ ಸಂಖ್ಯೆ ಅಪಾರವಾಗಿದೆ. ಐದು ಜಿಲ್ಲೆಗಳಲ್ಲಿರುವ ಒಟ್ಟು ಕೂಲಿಕಾರರ ಸಂಖ್ಯೆ ೧೬.೬೯ ಲಕ್ಷ. ಇವರಲ್ಲಿ ಮಹಿಳೆಯರ ಸಂಖ್ಯೆ ೧೦.೩೧ ಲಕ್ಷ (ಶೇ. ೬೧.೭೪) ದಷ್ಟಿದೆ. [ಪುರುಷರ ಸಂಖ್ಯೆ ೬.೩೮ ಲಕ್ಷ (ಶೇ. ೩೮.೨೬)ದಷ್ಟಿದೆ.] ಇದರಿಂದ ಮಕ್ಕಳ ಪಾಲನೆ ಅವರ ಕಲಿಕೆಯ ಕಡೆ ಗಮನ ಕೊಡಬೇಕಾಗಿರುವ ತಾಯಂದಿರೇ ದುಡಿಯುವ ಭಾರದಿಂದ ತತ್ತರಿಸುತ್ತಿದ್ದಾರೆ. ಕುಟುಂಬದಲ್ಲಿ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕನಿಷ್ಟ ಪ್ರಮಾಣದ ಕಾಳಜಿ ವಹಿಸಲು ಮಹಿಳೆಯರಿಗೆ ಅವಕಾಶಗಳು ಇಲ್ಲ. ಇದರಿಂದಾಗಿ ಮಕ್ಕಳು ಕಲಿಕೆಯಿಂದ ವಂಚಿತವಾಗುತ್ತಿವೆ. ದುಡಿಯುವ ಕುಟುಂಬಗಳಲ್ಲಿ ಮಕ್ಕಳ ಗತಿ ಹೀಗಾಗುತ್ತಿದ್ದರೆ, ಅನುಕೂಲಸ್ಥರ ಮಕ್ಕಳಿಗೆ ಬೇರೆ ಸಮಸ್ಯೆಗಳಿವೆ.

ಈ ಹೊತ್ತಿನ ಜಾಗತೀಕರಣವು ಇಂಗ್ಲಿಶ್ ಭಾಷೆಯನ್ನು ಬೇಡುತ್ತದೆ ಎಂದು ಮಧ್ಯಮ ವರ್ಗದಿಂದ ಹಿಡಿದು, ಮೇಲ್ವರ್ಗ ಸೇರಿದಂತೆ ಆರ್ಥಿಕವಾಗಿ ತಕ್ಕಮಟ್ಟಿಗೆ ಸುಸ್ಥಿತಿಯಲ್ಲಿರುವ ಬಹುತೇಕ ಕುಟುಂಬಗಳು ಇಂಗ್ಲಿಶ್ ಮಾಧ್ಯಮದಲ್ಲಿ ತಮ್ಮ ಮಕ್ಕಳು ಕಲಿಯಲಿ ಎಂಬ ಹೆಬ್ಬಯಕೆಯನ್ನು ಹೊತ್ತಿವೆ. ಪಡಬಾರದ ಪಾಡುಪಟ್ಟು ಇಂಗ್ಲಿಶ್ ಶಾಲೆಗಳಿಗೆ ಕಳಿಸಲು ಪ್ರಯತ್ನಿಸುತ್ತಾರೆ. ಪಟ್ಟಣ, ನಗರ ವಾಸಿ ಮಕ್ಕಳು ಹೇಗೋ ಇಂಗ್ಲಿಶ್ ಕಲಿಕೆಯನ್ನು ಮುಂದುವರಿಸುತ್ತಾರೆ. ಗ್ರಾಮಾಂತರ ಮಕ್ಕಳಿಗೆ ಇದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಗ್ರಾಮಾಂತರ ಪ್ರದೇಶಗಳಲ್ಲಿ ತಲೆ ಎತ್ತುತ್ತಿರುವ ಶಾಲೆಗಳಲ್ಲಿ ಇಂಗ್ಲಿಶ್ ಕಲಿಕೆ ಎಂಬುದು ಹೆಸರಿಗೆ ಮಾತ್ರ ಇರುತ್ತದೆ. ಅದು ಪ್ರಾಥಮಿಕ ಹಂತದವರೆಗೆ ಮಾತ್ರ. ಈ ಶಾಲೆಗೆ ಸೇರುವ ಮಕ್ಕಳು ಪ್ರಾಥಮಿಕ ಹಂತದಲ್ಲೇ ಮಾತೃಭಾಷೆಯಿಂದ ವಂಚಿತರಾಗುತ್ತಾರೆ. ಅತ್ತ ಇಂಗ್ಲಿಶ್ ಕಲಿಕೆಯನ್ನು ವ್ಯವಸ್ಥಿತವಾಗಿ ಕಲಿಯುವುದಿಲ್ಲ. ಹೀಗಾಗಿ ಗ್ರಾಮಾಂತರ ಪ್ರದೇಶದ ಮಕ್ಕಳು ಅತ್ತ ಕನ್ನಡ ಕಲಿಕೆಯಿಂದಲೂ, ಇತ್ತ ಇಂಗ್ಲಿಶ್ ಕಲಿಕೆಯಿಂದಲೂ ವಂಚಿತರಾಗಿ ಅತಂತ್ರ ಸ್ಥಿತಿಯಲ್ಲಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಾಂತರ ಪ್ರದೇಶದ ರೈತರ ಮಕ್ಕಳು ಈ ಪರಿಸ್ಥಿತಿಗೆ ಬಲಿಯಾಗುತ್ತಿದ್ದಾರೆ. ಆರ್ಥಿಕವಾಗಿ ಸುಸ್ಥಿತಿಯಲ್ಲಿರುವ ರೈತರ ಮಕ್ಕಳು (ಮಧ್ಯಮ ವರ್ಗದ ನೌಕರರ ಮಕ್ಕಳೂ) ಇಂಗ್ಲಿಶ್ ಮಾಧ್ಯಮದಲ್ಲಿ ಕಲಿಯಲು ಆರಂಭಿಸಿ ಕಾಲೇಜು ತಲುಪುವ ಹೊತ್ತಿಗೆ ಮಧ್ಯಂತರದಲ್ಲಿ ಶಿಕ್ಷಣಕ್ಕೆ ಶರಣರು ಹೊಡೆಯುತ್ತಾರೆ. ಇಂತಹ ವಿದ್ಯಾರ್ಥಿ ವರ್ಗವು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗುತ್ತಿದೆ. ಅತ್ತ ಕನ್ನಡವೂ ಬರುವುದಿಲ್ಲ. ಇತ್ತ ಇಂಗ್ಲಿಶ್ ಬರುವುದಿಲ್ಲ. ಈ ಬಿಕ್ಕಟ್ಟು ತಲೆದೋರಿದೆ.

ಅಕ್ಷರ ಕಲಿತು, ಕೇವಲ ಸಾಕ್ಷರರಾಗುವುದಕ್ಕೆ ಇಷ್ಟು ಸಮಸ್ಯೆಗಳಿರುವಾಗ ಇನ್ನು ಉನ್ನತ ಶಿಕ್ಷಣ ಲಭ್ಯವಾಗುವುದು ಎಷ್ಟು ಜನಕ್ಕೆ? ಈಗ ಜಾಗತೀಕರಣದಿಂದ ನಮ್ಮ ಜಗತ್ತೇ ಬದಲಾಗಿಹೋಗಿದೆ. ಸರಕಾರಿ ಕೆಲಸಗಳು ಮಾಯವಾಗುತ್ತಿವೆ. ಖಾಸಗೀಕರಣದಲ್ಲಿ ಈ ಪ್ರಾಂತದ ವಿದ್ಯಾರ್ಥಿಗಳು ಕೆಲಸ ಪಡೆಯುವುದು ಕನಸಿನ ಮಾತಾಗುತ್ತಿದೆ. ದೊಡ್ಡ ದೊಡ್ಡ ಉದ್ಯಮಗಳು ಉದಾರೀಕರಣದಿಂದ ಮುಚ್ಚುತ್ತಿವೆ. ದುಡಿವ ವರ್ಗಕ್ಕೆ ದುಡಿಮೆಗೆ ಅವಕಾಶಗಳು ಕಮ್ಮಿಯಾಗುತ್ತಿವೆ. ಪದವಿಧರರಿಗೆ ಉದ್ಯೋಗಾವಾಕಾಶಗಳು ಇಲ್ಲ. ಈ ಪ್ರಾಂತದ ಅರ್ಧದಷ್ಟು ಭೂಮಿಗೆ ನೀರೊದಗಿಸುವ ಎಲ್ಲ ನೀರಾವರಿ ಯೋಜನೆಗಳು ಕಲೆದ ಮೂವ್ವತ್ತು ವರ್ಷಗಳಿಂದ ನಿಧಾನ ಗತಿಯಲ್ಲಿ ಸಾಗಿರುವುದರಿಂದ ರೈತರೂ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ನೀರಾವರಿ ಯೋಜನೆಗಳು ಈ ಹೊತ್ತಿಗೆಲ್ಲ ಪೂರ್ಣಗೊಂಡಿದ್ದರೆ ರೈತರಿಗೂ, ರೈತ ಕಾರ್ಮಿಕರೂ, ದುಡಿಯುವ ವರ್ಗಕ್ಕೂ ಕನಿಷ್ಟ ಮಟ್ಟದಲ್ಲಿ ಸಹಾಯಕವಾಗುತ್ತಿತ್ತು. ಮಧ್ಯಮ ವರ್ಗದ ಜನಸಮುದಾಯಗಳಂತೂ ಹೇಳದಷ್ಟು ದುಸ್ಥಿತಿಯಲ್ಲಿವೆ.

ನೆಲೆಸಿರುವ ಆಂಧ್ರದ ರೈತರು

ರಾಯಚೂರು ಜಿಲ್ಲಾ ಪ್ರದೇಶಕ್ಕೆ ಆಂಧ್ರಪ್ರದೇಶ ಹೊಂದಿಕೊಂಡಿದೆ. ರಾಯಚೂರು ನಗರದಲ್ಲಿ ಮೊದಲಿನಿಂದಲೂ ವ್ಯವಹಾರವು ತೆಲುಗಿನಲ್ಲಿಯೇ ಹೆಚ್ಚು. ದುಡಿಯುವ ಬಹುತೇಕ ವರ್ಗವು ತೆಲುಗನ್ನೇ ಮಾತಾಡುತ್ತದೆ. ಕಳೆದ ೨೫ ವರ್ಷಗಳಿಂದ ರಾಯಚೂರು ಜಿಲ್ಲೆಯ ಗಂಗಾವತಿ, ಸಿಂಧನೂರು, ಮಾನ್ವಿ ಹಾಗೂ ರಾಯಚೂರು ತಾಲೂಕುಗಳಲ್ಲಿ ಆಂಧ್ರದ ರೈತರು ನೆಲೆಸಿದ್ದಾರೆ. ತುಂಗಭದ್ರ ಅಣೆಕಟ್ಟಿನ ಕೆಳಗೆ ನೀರಾವರಿ ಭೂಮಿ ಕೊಂಡುಕೊಂಡು ವಾಸವಾಗಿದ್ದಾರೆ. ಇದರಿಂದ ಗಡಿಯಲ್ಲಿದ್ದ ತೆಲಗು ಭಾಷೆ-ಸಂಸ್ಕೃತಿ ಈಗ ಜಿಲ್ಲೆಯ ಒಡಲೊಳಗೆ ಸೇರಿಕೊಂಡಿದೆ. ಆಂಧ್ರದ ತೆಲಗು ಭಾಷೆ, ಊಟ, ಉಡುಗೆ, ತೊಡುಗೆಗಳು ಸ್ಥಳೀಯರ ವ್ಯವಹಾರದಲ್ಲಿ ಸೇರಿಕೊಂಡಿವೆ. ಆಂಧ್ರ ರೈತರು ೨೫ ವರ್ಷಗಳಿಂದ ಭತ್ತ ಬೆಳೆಯುತ್ತಿದ್ದಾರೆ. ಭೂಮಾಲೀಕರಾಗಿ ಬೆಳೆದಿದ್ದಾರೆ. ಇಲ್ಲಿಯ ಬಹುಸಂಖ್ಯಾತ ಬಡವರು, ಕೆಳವರ್ಗದವರು ಈ ಆಂಧ್ರ ಭೂ ಮಾಲೀಕರ ಅಧೀನದಲ್ಲಿ ದುಡಿಯುತ್ತಿದ್ದಾರೆ. ಆಂಧ್ರ ಭೂ ಮಾಲೀಕರ ಅಧೀನದಲ್ಲಿ ದುಡಿಯುವುದು ದಡಿವ ವರ್ಗಕ್ಕೆ ಕೇವಲ ಹೊಟ್ಟೆಪಾಡಿನ ಪ್ರಶ್ನೆ ಮಾತ್ರವಾಗಿಲ್ಲ. ಒಂದು ಬಗೆಯ ‘ಅಸ್ಪೃಶ್ಯತೆ’ ಯನ್ನು ಕಳೆದುಕೊಂಡಂತಾಗಿದೆ. ಜಾತಿಯ ಕಟ್ಟುಪಾಡುಗಳಿಲ್ಲದ ಆಂಧ್ರ ಅಧೀನದಲ್ಲಿ ಕರ್ನಾಟಕದ ಬಡವರು, ಕೆಳವರ್ಗದವರು ದುಡಿಯುತ್ತಿದ್ದಾರೆ. ಇದು ಆಂಧ್ರದ ಸಂಸ್ಕೃತಿಯನ್ನು ಅನುಸರಿಸಿಸಲು ಕಾರಣವಾಗಿದೆ. ಹೀಗೆ ದುಡಿವ ವರ್ಗವು ತೆಲಗು ಭಾಷೆಯನ್ನು ರೂಢಿಸಿಕೊಂಡಿದೆ. ಈ ವರ್ಗದ ಮಕ್ಕಳು ಕನ್ನಡ ಶಾಲೆಗೆ ಹೋಗಿ ಕಲಿಯುವ ಉತ್ಸಾಹವನ್ನೇ ಕಳೆದುಕೊಂಡಿವೆ. ಈಗ ಈ ಆಂಧ್ರದ ರೈತರು ಗುಲಬರ್ಗಾ ಜಿಲ್ಲೆಯನ್ನು ಸೇರಿದ್ದಾರೆ. ಕೃಷ್ಣ ಮೇಲ್ದಂಡೆ ಯೋಜನೆಯಿಂದ ನೀರಾವರಿಯಾಗಿರುವ ತಾಲೂಕುಗಳಲ್ಲಿ ಭೂಮಿ ಕೊಂಡು ಅಲ್ಲಿ ನೆಲೆಸತೊಡಗಿದ್ದಾರೆ. ಒಂದು ಸಮೀಕ್ಷೆಯ ಪ್ರಕಾರ ‘ಕೃಷ್ಣಾ ಅಚ್ಚು ಪ್ರದೇಶದ ಒಟ್ಟು ಭತ್ತದ ಪ್ರದೇಶದಲ್ಲಿ ಆಂಧ್ರದ ರೈತರು ಸುಮಾರು ೪೨ ಸಾವಿರ ಹೆಕ್ಟೆರ್ ಭತ್ತ ಬೆಳೆಯುತ್ತಿದ್ದರೆ. ಸ್ಥಳೀಯರು ಸುಮಾರು ೧೩ ಸಾವಿರ ಹೆಕ್ಟರ್ ಪ್ರದೆಶದಲ್ಲಿ ಭತ್ತ ಬೆಳೆಯುತ್ತಿದ್ದಾರೆ.’[5] ತುಂಗಭದ್ರಾ ಮೇಲ್ದಂಡೆಯ ನೀರಾವರಿ ಪ್ರದೇಶದಲ್ಲಾಗಲಿ, ಈಗ ಕೃಷ್ಣ ಮೇಲ್ದಂಡೆಯ ನೀರಾವರಿ ಪ್ರದೇಶದಲ್ಲಾಗಲಿ ಯಾಕೆ ಆಂಧ್ರದ ರೈತರು ಬಂದು ಭೂಮಿಯನ್ನು ಕೊಂಡು ವ್ಯವಸಾಯಗಾರರಿಗೆ ನೆಲೆ ನಿಲ್ಲುತ್ತಾರೆ? ನೀರಾವರಿ ಬಂದರೂ ಯಾಕೆ ತಮ್ಮ ಭೂಮಿಯನ್ನು ನೀರಾವರಿಗೆ ಹೊಂದಿಸಿಕೊಂಡು ವ್ಯವಸಾಯ ಮಾಡದೆ ಸ್ಥಳೀಯ ಜನರು ಆಂಧ್ರರಿಗೆ ತಮ್ಮ ಭೂಮಿಯನ್ನು ಮಾರುತ್ತಾರೆ? ಎಂಬ ಪ್ರಶ್ನೆ ಉದ್ಭವಾಗುತ್ತದೆ. ಈ ಪ್ರಶ್ನೆಗೆ ಉತ್ತರ ಸರಳವಾಗಿಲ್ಲ ಎಂದು ಕಾಣುತ್ತದೆ. ಆಂಧ್ರದವರು ಬಂಡವಾಳ ತಂದು ಭೂಮಿಯನ್ನು ಕೊಂಡು, ವ್ಯವಸಾಯಕ್ಕೆ ಅದನ್ನು ಹದಗೊಳಿಸಿ ನೀರಾವರಿ ಮಾಡಿಕೊಂಡು ಭತ್ತವನ್ನು ಬೆಳೆಯುತ್ತಾರೆ. ಈ ಪ್ರಾಂತದ ಸ್ಥಳೀಯರಿಗೆ ತಮ್ಮ ಇರುವ ಭೂಮಿಯನ್ನೇ ವ್ಯವಸಾಯಕ್ಕೆ ಹದಗೊಳಿಸಿಕೊಂಡು ನೀರಾವರಿ ಮಾಡಿಕೊಳ್ಳಲು ಬಂಡವಾಳದ ಕೊರತೆ ಇದೆ. ರೈತರನ್ನು ಒಗ್ಗೂಡಿಸಿಕೊಂಡು ಬಂಡವಾಳವನ್ನು ಕ್ರೋಡೀಕರಿಸುವ ಮತ್ತು ಅದನ್ನು ಸಾಲದ ರೂಪದಲ್ಲಿ ವಿತರಿಸುವುದನ್ನು ಮುಖಂಡರಾಗಲಿ, ಶಾಸಕರಾಗಲಿ, ಸಹಕಾರ ಸಂಘಗಳಾಗಲಿ, ಬ್ಯಾಂಕುಗಳಾಗಲಿ ಮಾಡಲು ಪ್ರಯತ್ನಿಸಿಲ್ಲವೆಂದು ಕಾಣುತ್ತದೆ. ಬ್ಯಾಂಕುಗಳಿಂದ ಬೆಳೆ ಸಾಲ ದೊರೆಯಬಹುದು. ಈಗಾಗಲೇ ಸಾಗುವಳಿ ಇರುವ ಕಡೆ ಸಾಲ ತಕ್ಕಮಟ್ಟಿಗೆ ಸಾಕಾಗಬಹುದು. ಆದರೆ ಮೊದಮೊದಲು ಸಾಗುವಳಿ ಮಾಡುವ ಭೂಮಿಗೆ ಹೆಚ್ಚಿನ ಬಂಡವಾಳ ಬೇಕಾಗುತ್ತದೆ. ಕರ್ನಾಟಕದ ಕೃಷ್ಣ ಮೇಲ್ದಂಡೆ ನೀರಾವರಿಗೆ ಒಳಪಡುವ ಭೂಮಿಗೆ, ಅದರ ರೈತರಿಗೆ ಹೆಚ್ಚಿನ ಬಂಡವಾಳ ದೊರೆಯದೇ ಇರುವುದರಿಂದ ಇರುವ ತಕ್ಕಮಟ್ಟಿನ ಭೂಮಿಯನ್ನು ಮಾರಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ. ಇಂಥವರ ಭೂಮಿಯನ್ನು ಈಗ ಆಂಧ್ರದವರು ಕೊಂಡುಕೊಂಡು ನೆಲೆಸತೊಡಗಿದ್ದಾರೆ. ಮೇಲಾಗಿ ಆಂಧ್ರಪ್ರದೇಶದ ನೀರಾವರಿ ಪ್ರದೇಶಗಳಲ್ಲಿ ನೀರಿನ ಬಳಕೆಗೆ ಅನೇಕ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿವೆ. ಭೂಮಿಯ ಫಲವತ್ತತೆಯನ್ನು ರಕ್ಷಿಸಲು ಮುಂಗಾರಿನಲ್ಲಿ ಭತ್ತದ ಬೆಳೆಯನ್ನು ಬೆಳೆಯಲು ಮಾತ್ರ ಅವಕಾಶವಿದೆ. ಹಿಂಗಾರಿನಲ್ಲಿ ಭತ್ತವನ್ನು ಬೆಳೆಸಲು ಅವಕಾಶ ಇರುವುದಿಲ್ಲ. ಹಿಂಗಾರಿನಲ್ಲಿ ಒಣ ಬೆಳೆಯನ್ನು ಬೆಳೆದುಕೊಳ್ಳಬಹುದು. ಈ ನಿಯಮ ಕರ್ನಾಟಕದಲ್ಲಿ ಇದ್ದರೂ ಅದನ್ನು ಅನುಸರಿಸುವುದಿಲ್ಲ. ರೈತರು ತುಂಗಭದ್ರಾ ಮೇಲ್ದಂಡೆಯಲ್ಲಿ ವರ್ಷಕ್ಕೆ ಎರಡು ಭತ್ತವನ್ನು ಬೆಲೆಯುತ್ತಲೇ ಬಂದಿದ್ದಾರೆ. ಈಗ ಕೃಷ್ಣ ಮೇಲ್ದಂಡೆಯಲ್ಲಿ ಕೂಡ ಇದು ಮುಂದುವರಿದಿದೆ. ಇದು ಆಂಧ್ರದ ರೈತರನ್ನು ಆಕರ್ಷಿಸುತ್ತಿದೆ. ಹೀಗಾಗಿ ಈಗ ಗುಲಬರ್ಗಾ ಜಿಲ್ಲೆಯ ತಾಲೂಕುಗಳಲ್ಲೂ ಆಂಧ್ರದ ಜನರು ತುಂಬಿಕೊಳ್ಳುತ್ತಿದ್ದಾರೆ. ಬಳ್ಳರಿ, ಗಂಗಾವತಿ, ಮಾನ್ವಿ ಮತ್ತು ರಾಯಚೂರು ತಾಲೂಕುಗಳಲ್ಲಿ ಆಂಧ್ರದವರೇ ಚುನಾವಣೆಗೆ ನಿಂತು ಎಂ.ಪಿ. ಮತ್ತು ಎಂ.ಎಲ್.ಎ.ಗಳಾಗಿ ಚುನಾಯಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಇದು ಬಲಗೊಳ್ಳಬಹುದು.

ಗುಲಬರ್ಗಾ ಜಿಲ್ಲೆಯ ಆಂಧ್ರದ ಗಡಿಯ ತಾಲೂಕುಗಳ ಪರಿಸ್ಥಿತಿ ಇನ್ನೂ ವಿಚಿತ್ರವಾಗಿದೆ. ‘ಗುರುಮಠಕಲ್ ಮೊದಲು ಮಾಡಿ ಯಾದಗಿರಿ, ಸೇಡಂ ತಾಲೂಕುಗಳ ಆಂಧ್ರದ ಗಡಿಹಳ್ಳಿಗಳಲ್ಲಿ ವಿಚಿತ್ರ ಪರಿಸ್ಥಿತಿಯಿದೆ. ಮನೆ ಮಾತು ಮಾತ್ರ ತೆಲುಗು. ವ್ಯವಹಾರ ಭಾಷೆ ಉರ್ದು. ಬರವಣಿಗೆ ಮರಾಠಿ. ಧಾರ್ಮಿಕ-ಸಾಂಸ್ಕೃತಿಕ ಭಾಷೆ ಮಾತ್ರ ಕನ್ನಡ. ಭಜನೆ ಕೋಲಾಟಗಳೆಲ್ಲ ಕನ್ನಡದಲ್ಲಿ, ಸಣ್ಣಾಟ-ದೊಡ್ದಾಟ ಆಡಿದರೂ ಕನ್ನಡದಲ್ಲಿಯೇ.’[6] ಇಂಥದ್ದೇ ಅನುಭವವನ್ನು ಮರಿಯಮ್ಮನಹಳ್ಳಿ ಕಲಾವಿದೆ ನಾಗರತ್ನಮ್ಮನವರು ತಮ್ಮ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ. ತುಂಗಭದ್ರ-ಗೋದಾವರಿ ನದಿಗಳ ನಡುವಿನ ಕನ್ನಡ ನಾಡು ಕಾಲಾಂತರದಲ್ಲಿ ಅದು ಬಹುಭಾಷೆ-ಸಂಸ್ಕೃತಿಗಳ ಒತ್ತಡವನ್ನು ಅರಗಿಸಿಕೊಂಡು ಹೊಸ ರೂಪವನ್ನು ಪಡೆದು ಈ ಜಾಗತೀಕರಣವನ್ನು ಎದುರಿಸುತ್ತ ಮುನ್ನಡೆದಿದೆ.[1] ಜಯತೀರ್ಥ ರಾಜಪುರೋಹಿತ : ಜಯತೀರ್ಥ (ಅಭಿನಂದನ ಗ್ರಂಥ) ಪುಟ-೩೧

[2] ಚಂದ್ರಶೇಖರ ಶಾಸ್ತ್ರಿ : ಹೈದರಾಬಾದು ರಾಜ್ಯದಲ್ಲಿ ಕನ್ನಡದ ಸಮಸ್ಯೆಗಳು, ಪ್ರಬಂಧ ಮಾಲೆ (ಸಂ: ಸಿದ್ಧಯ್ಯ ಪುರಾಣಿಕ, ರಾಘವೇಂದ್ರಾಚಾರ್ಯ ಇಟಗಿ),(೧೯೫೪), ಪುಟ-೧೦೧

[3] ಸಿದ್ಧಯ್ಯ ಕಲ್ಲಿನಾಥ ಶಾಸ್ತ್ರಿ : ಸಾಹಿತ್ಯ ಸಂಪಾದನೆ, ಪ್ರಂಬಂಧ ಮಾಲೆ (ಸಂ: ಸಿದ್ಧಯ್ಯ ಪುರಾಣಿಕ, ರಾಘವೇಂದ್ರಾಚಾರ್ಯ ಇಟಗಿ), (೧೯೫೪), ಪುಟ-೭೬

[4] ಬಿ.ಮಹಾದೇವಪ್ಪ : ಕಲ್ಲರಳಿ ಹೂವಾಗಿ (೨೦೦೦) ಪುಟ-೧೧೦

[5] ಎಸ್.ಆರ್. ಮಣ್ಣೂರು : ಹೈ.ಕ. ವಿಶೇಷ ಸಂಚಿಕೆ, ಸಂಯುಕ್ತ ಕರ್ನಾಟಕ ೨೨.೧೦.೨೦೦೧, ಪುಟ-೪

[6] ಬಿ.ಮಹಾದೇವಪ್ಪ : ಮೋಟ್ನಳ್ಳಿ ಹಸನಸಾಬ (೧೯೯೭) ಪುಟ-೩