ಸ್ವಾತಂತ್ರ್ಯಪೂರ್ವದ ಕೊನೆಯ ಎರಡೂವರೆ ದಶಕಗಳ ಅವಧಿಯಲ್ಲಿ ಆಳಿದ ನಿಜಾಮರ ಅಧೀನದ ಕರ್ನಾಟಕ ಪ್ರದೇಶವು ‘ಹೈದರಾಬಾದು ಕರ್ನಾಟಕ’ ಎಂದು ಕರೆಸಿಕೊಂಡಿದೆಯಷ್ಟೆ. ಆದರೆ ಈ ಭೌಗೋಳಿಕ ವ್ಯಾಪ್ತಿಯು ಅದು ನಿಜಾಮರ ಆಳ್ವಿಕೆಯ ಪೂರ್ವಕಾಲದಲ್ಲಿ ನಿರ್ದಿಷ್ಟವಾಗಿರಲಿಲ್ಲ. ಮೌರ್ಯರ ಕಾಲದಲ್ಲಿ ಅದು ದಖನ್ ಪ್ರದೇಶದಲ್ಲಿ ಸೇರಿಕೊಂಡಿತ್ತು. ಆನಂತರದ ಕಾಲದಲ್ಲಿ ‘ಕರ್ನಾಟಕ’ ಎಂಬುದು ರೂಪಗೊಂಡ ಮೇಲೆ ಈ ಪ್ರಾಂತ ಕರ್ನಾಟಕದ ಉತ್ತರ ಭಾಗದಲ್ಲಿ ಒಳಗೊಂಡಿತ್ತು. ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿ-ಆದಿಲ್‍ಶಾಹಿಯೇ ಸಾಮ್ರಾಜ್ಯಗಳ ಕಾಲದಲ್ಲಿ ತುಂಗಭದ್ರಾ ನದಿ ಗಡಿಯಾಗಿ ಉತ್ತರ ಮತ್ತು ದಕ್ಷಿಣಗಳು ಇಲ್ಲಿಂದಲೇ ಭಾಗವಾಗಿರುವಂತೆ ತೋರುತ್ತದೆ. ‘ಹೈದರಾಬಾದು ಕರ್ನಾಟಕ’ ಎಂಬ ನಿರ್ದಿಷ್ಟ ಭೌಗೋಳಿಕ ವ್ಯಾಪ್ತಿ ರೂಪಗೊಂಡದ್ದು ನಿಜಾಮರ ಆಳ್ವಿಕೆಯ ಕೊನೆಯ ಶತಮಾನದಲ್ಲಿ. ಏನೇ ಆದರೂ ಈ ಭೌಗೋಳಿಕ ವ್ಯಾಪ್ತಿಯನ್ನು ನೆಪದಲ್ಲಿಟ್ಟುಕೊಂಡು ಅದರ ಆಚೆ-ಈಚೆ ಈ ಪ್ರಾಂತದಲ್ಲಿ ಸಂಭವಿಸಿದ ಸಾಂಸ್ಕೃತಿಕ ಸ್ಥಿತ್ಯಂತರಗಳನ್ನು ಗುರುತಿಸುವ ಪ್ರಯತ್ನವನ್ನು ಈ ಅಧ್ಯಯನದಲ್ಲಿ ಮಾಡಲಾಗಿದೆ.

ಬಹಮನಿಗಳ ಪೂರ್ವ ಕಾಲಾವಧಿಯಲ್ಲಿ ನಡೆದ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ ಮತ್ತು ಸಾಹಿತ್ಯಿಕ ಸ್ಥಿತ್ಯಂತರಗಳನ್ನು ಗುರುತಿಸಿದರೂ ಅವುಗಳನ್ನು ಬಹು ಆಯಾಮಗಳಲ್ಲಿ ಶೋಧಿಸಲು ಇಲ್ಲಿ ಸಾದ್ಯವಾಗಿಲ್ಲ. ಬಹಮನಿ- ಆದಿಲ್‍ಶಾಹಿಗಳ ಆಳ್ವಿಕೆಯಿಂದೀಚೆಗೆ ಸಮಾಜದಲ್ಲಿ ಆದ ಬದಲಾವಣೆಗಳನ್ನು, ಅದರಲ್ಲೂ ಪ್ರಭುತ್ವ, ಧರ್ಮ, ಸಮಾಜ, ಭಾಷೆ ಮತ್ತು ಸಾಹಿತ್ಯ ಮುಂತಾದ ಸಾಂಸ್ಕೃತಿಕವಾಗಿ ಆದ ಪಲ್ಲಟಗಳನ್ನು ಗುರುತಿಸಲು ಈ ಅಧ್ಯಯನದಲ್ಲಿ ಪ್ರಯತ್ನಿಸಲಾಗಿದೆ. ಆದರೂ ಈ ಕಾಲಾವಧಿಯಲ್ಲಿ ಕೃಷಿ ಚಟುವಟಿಕೆಗಳು ಯಾವ ಸ್ವರೂಪದಲ್ಲಿದ್ದವು. ಕುಶಲ ಕಲೆಗಾರರು, ಅವರ ಉತ್ಪನ್ನಗಳನ್ನು ಮಾರಾಟ ಮಾಡುವವರ ನಡುವಿನ ಸಂಬಂಧಗಳು ಹೇಗಿದ್ದವು ಎಂಬುದರ ಬಗ್ಗೆ ಅಧ್ಯಯನ ಮಾಡುವ ಅಗತ್ಯವಿದೆ. ಆದಿಲ್‍ಶಾಹಿ-ವಿಜಯನಗರ ಸಾಮ್ರಾಜ್ಯಗಳ ನಂತರ ಈ ಪ್ರಾಂತದಲ್ಲಿ ಉದ್ಭವಿಸಿದ ಅರಾಜಕತೆ, ಅದರಿಂದ ಉತ್ಪಾದನಾ ಚತುವಟಿಕೆಗಳ ಮೇಲೆ ಆದ ಪರಿಣಾಮಗಳನ್ನು ಅಧ್ಯಯನ ಮಾಡಿದರೆ ಈ ಹೊತ್ತಿನ ‘ಹಿಂದುಳಿಯುವಿಕೆಗೆ’ ಕಾರಣಗಳು ಸೇರಬಹುದು. ಪ್ರಾದೇಶಿಕ ಅಸಮಾನತೆಗೆ ಕಾರಣಗಳು ಎಲ್ಲಿಂದ, ಯಾಕೆ ಆರಂಭವಾದವು ಎಂಬುದನ್ನು ಇನ್ನು ಬಲವಾಗಿ ಹುಡುಕಬೇಕಾಗಿದೆ. ಈ ಪ್ರಾಂತದಲ್ಲಿ ರೂಪುಗೊಂಡ ಸಂಕರ ಸಂಸ್ಕೃತಿಯ ಅನನ್ಯತೆಗಳನ್ನು ಇನ್ನೂ ಹೆಚ್ಚಾಗಿ ಗುರುತಿಸುವುದಕ್ಕೆ ಅವಕಾಶಗಳಿವೆ. ಹಬ್ಬಗಳು, ಜಾತ್ರೆಗಳು, ಉರುಸುಗಳು, ಮೊಹರಂ ಮುಂತಾದವು ಸಂಕರ ಸಂಸ್ಕೃತಿಯ ವಿಶಿಷ್ಟ ಸಂದರ್ಭಗಳಾಗಿ ಪರಿಣಮಿಸಿವೆ. ಜತೆಗೆ ಮೌಖಿಕವಾಗಿ ಅನನ್ಯ ರಚನೆಗಳು ಹುಟ್ಟಿಕೊಂಡಿವೆ. ಅವುಗಳ ಲಯ, ಆಶಯಗಳನ್ನು ಈ ಅಧ್ಯಯನದಲ್ಲಿ ಒಳಗು ಮಾಡಲು ಸಾಧ್ಯವಾಗಿಲ್ಲ. ಈ ಕುರಿತು ಬಹುಶಿಸ್ತೀಯ ನೆಲೆಯಿಂದ ಅಧ್ಯಯನಗಳಾಗಬೇಕು.

ಬಹುಭಾಷೆಗಳು, ಬಹುಧರ್ಮಗಳು, ಬಹುಸಂಸ್ಕೃತಿಗಳಿಗೆ ನೆಲೆಯಾದ ಈ ಪ್ರಾಂತದ ಸಾಂಸ್ಕೃತಿ ಚರಿತ್ರೆಯನ್ನು ಪುನಾರಚಿಸುವ ಅಗತ್ಯ ಈಗ ಹೆಚ್ಚಾಗಿದೆ. ಬಹುಸಂಸ್ಕೃತಿ ಇರುವ ನಾಡಿನಲ್ಲಿ ಮತೀಯ ಶಕ್ತಿ ರೂಪುಗೊಳ್ಳುವುದಕ್ಕೆ ಅವಕಾಶಗಳಿರುವುದಿಲ್ಲ. ಧರ್ಮ, ದೇವರುಗಳ ಆಚೆ ದೈವ ಸಂಸ್ಕೃತಿಯನ್ನು ಜನಸಮುದಾಯಗಳು ರೂಪಿಸಿಕೊಂಡು ಬದುಕುವುದಕ್ಕೆ ಶಕ್ತಿಯನ್ನು ಪಡೆದುಕೊಂಡಿರುತ್ತವೆ. ಈ ದೈವ ಸಂಸ್ಕೃತಿಯನ್ನು ಒಡೆಯುವ, ನಾಶಮಾಡುವ ಮತೀಯ ಶಕ್ತಿಗಳ ಪ್ರಯತ್ನ ನಿರಂತರವಾಗಿ ನಡೆದಿರುತ್ತದೆ. ಈಚೆಗೆ ಇದು ಒಂದು ರಾಜಕೀಯ ಶಕ್ತಿಯ ಬೆಂಬಲದೊಂದಿಗೆ ಬಲಗೊಳ್ಳುತ್ತಿದೆ. ಇದು ಬಲಗೊಳ್ಳುದಂತೆ ತಡೆಯಲು ಬಹುಸಂಸ್ಕೃತಿಯ, ದೈವ ಸಂಸ್ಕೃತಿಯ ಸಮಾಜವು ಸಹಜವಾಗಿ ಗಟ್ಟಿಗೊಳ್ಳುತ್ತಿರುತ್ತದೆ.

ಸಮಾಜದ ಮೇಲೆ ನಿರಂತರವಾಗಿ ಆಗುವ ದಾಳಿಗಳನ್ನು ಜನಸಮುದಾಯಗಳು ಭಯಭೀತಿಗಳಿಂದಲೇ ಎದುರಿಸುತ್ತವೆ. ತಮಗೆ ಬೇಕಾದಂತೆ ಕರಗಿಸಿಕೊಳ್ಳುವ ಗುಣವನ್ನು ಪಡೆದಿರುತ್ತವೆ. ಈ ಧಾರಣ ಶಕ್ತಿಯನ್ನು ಗುರುತಿಸುವ ಅಧ್ಯಯನಗಳು ನಡೆಯಬೇಕು. ಅದಕ್ಕಾಗಿ ಈ ಹಾಡುಪಾಡಿಗೆ ಅಂತ್ಯವೆಂಬುದು ಇಲ್ಲ.