ಇದು ಸ್ವಾತಂತ್ರ್ಯ ಪೂರ್ವದ ಚರಿತ್ರೆಗೆ ಮಾತ್ರ ಸಂಬಂಧಿಸಿದ್ದಲ್ಲ. ಸ್ವಾತಂತ್ರ್ಯ ಬಂದು ಐದೂವರೆ ದಶಕವಾದರೂ ಈ ಪ್ರಾಂತದಲ್ಲಿ ಸಾಂಸ್ಕೃತಿಕ ಅಭಿವೃದ್ಧಿ ಎಂಬುದು ಕನಸಿನಮಾತಾಗಿದೆ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಈ ಪ್ರಾಂತ ಅತಿ ಹಿಂದುಳಿದಿದೆ ಎಮ್ದು ಸರಕಾರದ ಸಮೀಕ್ಷೆಗಳಿಂದ ಬಹಿರಂಗಗೊಂಡಿದೆ. ಇತರ ಕ್ಷೇತ್ರಗಳಲ್ಲಿ ಇದಕ್ಕಿಂತ ಭಿನ್ನವಾಗಿಲ್ಲ. ಕೇವಲ ಉದಾಹರಣೆಗಾಗಿ ಈಚಿನ ಪತ್ರಿಕೆಗಳ ವರದಿಗಳನ್ನು ಅವಲೋಕಿಸಬಹುದು: ಜೇವರ್ಗಿ ಮತ್ತು ಇದೇ ಜಿಲ್ಲೆಯ ಅಫಜಲಪುರ ಅಕ್ಕಪಕ್ಕದ ತಾಲೂಕುಗಳು. ಆದರೆ ಅಫಜಲಪುರ ಮತ್ತು ಜೇವರ್ಗಿ ಪಟ್ಟಣಗಳನ್ನು ಜೋಡಿಸುವ ನೇರ ರಸ್ತೆ ಸಂಪರ್ಕವೇ ಇಲ್ಲ. ಜೇವರ್ಗಿಯಿಂದ ಅಫಜಲಪುರಕ್ಕೆ ಸುಮಾರು ೧೦೦ ಕಿ.ಮೀ. ಸುತ್ತುಬಳಸಿ ಹೋಗಬೇಕು. ಗಾಣಗಾಪುರದ ಬಳಿ ಭೀಮಾ ನದಿಗೆ ಅಡ್ದಲಾಗಿ ಬ್ಯಾರೇಜ್-ಸೇತುವೆ ನಿರ್ಮಾಣವಾದರೆ ಈ ಅಂತರ ಕೇವಲ ೬೦ ಕಿ.ಮೀ.ಗೆ ಇಳಿಯುತ್ತದೆ. ಪ್ರಯಾಣದ ಸಮಯವೂ ಉಳಿತಾಯವಾಗುತ್ತದೆ. ಈ ಬ್ಯಾರೇಜ್ ಸೇತುವೆಗೆ ಅಡಿಗಲ್ಲು ಬಿದ್ದು ೧೯ ವರ್ಷ ಆಗಿದೆ. ಅಭಿವೃದ್ಧಿಯ ದೃಷ್ಟಿಯಿಂದ ಜೇವರ್ಗಿ ತಾಲೂಕು ಕರ್ನಾಟಕದಲ್ಲಿಯೇ ಕಟ್ಟಕಡೆಯ ಅಂದರೆ ೧೭೪ನೇ ಸ್ಥಾನವನ್ನು ಪಡೆದಿದೆ. (ವರದಿ:ಪ್ರಜಾವಾಣಿ ಕನ್ನಡ ದಿನಪತ್ರಿಕೆ: ೩೦.೯.೨೦೦೧)

೨೧ನೇ ಶತಮಾನ ಆರಂಭವಾದ ಮೆಲೆ, ತಮಾಷೆಯಾಗಿ ಕಾಣುವ ಕೆಲವು ಸಂಗತಿಗಳು ಪತ್ರಿಕೆಯಲ್ಲಿ ವರದಿಯಾಗುತ್ತಲೇ ಇವೆ. ಈ ಸಂಗತಿಗಳ ಹಿಂದೆ ಈ ಪ್ರಾಂತದ ನಿಜವಾದ ಪರಿಸ್ಥಿತಿ ಅರಿವಿಗೆ ಬರುತ್ತದೆ. ಉದಾ: ತಾಲೂಕು ಕೇಂದ್ರವಾದ ದೇವದುರ್ಗದಿಂದ ಬೆಂಗಳೂರಿಗೆ ನೇರ ಬಸ್ಸೊಂದನ್ನು ಓಡಿಸುವ ವ್ಯವಸ್ಥೆಯನ್ನು ಮೊನ್ನೆಮೊನ್ನೆ ಮೊದಲ ಸಲ ಮಾಡಿದಾಗ ದೇವದುರ್ಗದ ಜನರು ಅ ಬಸ್ಸನ್ನು ಮೆರವಣಿಗೆಯಲ್ಲಿ ಕರೆತಂದದ್ದು, ಲಿಂಗಸೂಗೂರು ತಾಲೂಕಿನ ಒಂದು ಹಳ್ಳಿಗೆ ವಿದ್ಯುತ್ ಬಂದಾಗ ಜನರು ಅ ಕ್ಷೇತ್ರದ ಶಾಸಕನನ್ನು ಕೊಂಡಾಡಿ ಸನ್ಮಾನ ಮಾಡಿದ್ದು, ಬೀದರ್ ಜಿಲ್ಲೆಯ ಹಲಸೂರು ವಿಧಾನಸಭಾ ಕ್ಷೇತ್ರದ ಮಿರಕಲ್ ಗ್ರಾಮಕ್ಕೆ ಮೊದಲ ಸಲ ರಸ್ತೆ ಬಂದ ನಿಮಿತ್ತ ಜನರು ಶಾಸಕನನ್ನು ಸತ್ಕರಿಸಿದ್ದುದು ಇವೆಲ್ಲವೂ ೨೦೦೦-೦೧ರಲ್ಲಿ ಜರುಗಿದ ಸಂಗತಿಗಳು. ಬಡತನದಿಂದ ಚಿಂಚೋಳಿ ಗ್ರಾಮದ ತಾಂಡಾದ ಜನ ತಮ್ಮ ಹೆತ್ತ ಕೂಸುಗಳನ್ನು ಮಾರಿಕೊಂಡಿದ್ದು, ದೇವದುರ್ಗ ತಾಲೂಕಿನ ಬೆಂಚಿಗಡ್ಡೆ ಎಂಬ ಹಳ್ಳಿ ಕೃಷ್ಣನದಿಗೆ ಹೊಂದಿಕೊಂಡಿರುವ ನಡುಗಡ್ಡೆಯಲ್ಲಿದ್ದು, ಆ ಹಳ್ಳಿ ತನ್ನ ವ್ಯವಹಾರವನ್ನೆಲ್ಲ ನದಿಯಾಚೆ ಇರುವ ಕಕ್ಕೇರಾ ಎಂಬ ಹಳ್ಳಿಯ ಜತೆಗಿರಿಸಿಕೊಂಡಿವೆ. ೧೦೦ ಮನೆಗಳಿರುವ ಹಳ್ಳಿಯ ಜನರು ಯಾವುದಕ್ಕೂ ಕೃಷ್ಣಾನದಿ ದಾಟಿ ಹೋಗಬೇಕು. ಯಾವ ಪಕ್ಷಗಳು ಅಧಿಕಾರಕ್ಕೆ ಬಂದರೂ ಈ ಊರಿನ ಜನರಿಗೆ ನದಿ ದಾಟಲು ಸೇತುವೆಯನ್ನು ನಿರ್ಮಿಸಿ ಕೊಡಲಿಲ್ಲ. ೨೧ನೇ ಶತಮಾನದ ಆರಂಭದಲ್ಲಿ ಈ ಹಳ್ಳಿಗೆ ಸೇತುವೆಯಾಗಿ ಜನ ಸಂಭ್ರಮದಿಂದ ‘ಮುಕ್ತ’ರಾದಂತೆ ನಿಟ್ಟುಸಿರು ಬಿಟ್ಟಿದ್ದಾರೆ. ಇಂಥಹ ನೂರಾರು ಸಂಗತಿಗಳು ಈ ಪ್ರಾಂತದಲ್ಲಿ ಸಾಮಾನ್ಯ ವಿಷಯಗಳಾಗಿವೆ.

ಈ ಪ್ರಾಂತದಲ್ಲಿ ಅಪಾರ ನೈಸರ್ಗಿಕ ಸಂಪತ್ತು ಇದೆ ಎಂದರೆ ಯಾರೂ ಅಚ್ಚರಿ ಪಡಬೇಕಾಗಿಲ್ಲ. ಬಡತನ ಮಾತ್ರ ಎದ್ದು ಕಾಣುತ್ತಿದೆ. ಸಾಂಸ್ಕೃತಿಕವಾಗಿ ತೀರಾ ಹಿಂದುಳಿದಿದೆ ಎಂದು ಯಾರು ಬೊಟ್ಟುಮಾಡಿ ತೋರಿಸಬಹುದು, ಅಷ್ಟು ದಾರಿದ್ರ್ಯ ತುಂಬಿದೆ. ಇಂತಹ ಪ್ರಾಂತದಲ್ಲಿ, ಒಂದು ರಾಜಕೀಯ ಮುಖಂಡರು, ಬುದ್ಧಿವಂತರು ಅಪಾರ ಕಾಳಜಿಯಿಂದ ಕ್ರಿಯಾಶೀಲರಾಗಿ ಅಭಿವೃದ್ಧಿ ಕಾರ್ಯಗಳಿಗಾಗಿ ಒತ್ತಾಯಿಸಬೇಕು. ಕಾರ್ಯಗತವಾಗುವಂತೆ ಮಾದಬೇಕು. ಇದಕ್ಕೆ ಜನ ಸಮುದಾಯಗಳೂ ಜಾಗೃತವಾಗಿದ್ದು ಹೋರಾಟದ ಮನೋಭಾವ ಹೊಂದಿರಬೇಕು. ಇದು ಇಲ್ಲವಾದರೂ ಆಳುವ ಸರಕಾರವಾದರೂ ಕನಿಷ್ಠ ಕಾಳಜಿಯನ್ನು ಹೊಂದಿ, ಜನತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು, ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಬೇಕು. ದುರ್ದೈವವೆಂದರೆ ಇದು ಯಾವುದೂ ಈ ಪ್ರಾಂತಕ್ಕೆ ಅನ್ವಯಿಸುವುದಿಲ್ಲ. ಅದರಿಂದಾಗಿಯೇ ಅಪಾರ ಸಂಪತ್ತಿದ್ದರೂ ಬದತನ ತುಂಬಿ ತುಳುಕುತ್ತಿದೆ. ಈ ಪ್ರಾಂತ ಪ್ರಾಚೀನ ಕಾಲದಿಂದಲೂ ಹತ್ತಿ ಬೆಳೆಗೆ ಹೆಸರಾಗಿದೆ. ಅಪಾರ ಖನಿಜ ಸಂಪತ್ತಿಗೆ ಹೆಸರಾಗಿದೆ. ಜಲ ಸಂಪತ್ತನ್ನು ಪ್ರತಿನಿಧಿಸುವ ತುಂಗಭದ್ರಾ, ಕೃಷ್ಣಾ, ಭೀಮಾ ನದಿಗಳಲ್ಲದೆ ಅಮರ್ಜಾ, ಕಾಗಿಣಾ, ಬೆಣ್ಣಿತೊರೆ, ಮುಲ್ಲಾಮಾರಿ, ಕಲಾವತಿ ಎಂಬ ಉಪನದಿಗಳು, ಸಾವಿರಾರು ಹಳ್ಳಗಳು, ಕೆರೆಗಳು ಈ ಪ್ರಾಂತದಲ್ಲಿದ್ದು ಈಚಿನ ದಶಕಗಳಲ್ಲಿ ನಿರ್ಮಾಣವಾಗುವ ನೀರಾವರಿ ಯೋಜನೆಗಳಿಂದ, ಅವು ಉಂಟುಮಾಡಿದ ಸಮಸ್ಯೆಗಳಿಂದ ಕುಡಿಯುವ ನೀರಿಗೂ ಅಭಾವ ತಲೆದೋರಿದೆ. ಗುಲಬರ್ಗಾ ಜಿಲ್ಲೆಯಂತೂ ‘ಸಪ್ತನದಿಗಳ ನಾಡಾಗಿ’ ನೀರಿಗಾಗಿ ಜನರು ಪರಿತಪಿಸುವಂತಾಗಿದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಈ ಪ್ರಾಂತದಲ್ಲಿ ತುಂಗಭದ್ರಾ, ಕೃಷ್ಣಾ, ಭೀಮಾ ಮೂರು ದೊಡ್ದನದಿಗಳು, ಉಪನದಿಗಳು, ಕೆರೆ, ಹಳ್ಳಗಳು ಹೆಚ್ಚಾಗಿವೆ. ಈ ಪ್ರಾಂತ ಈ ನೀರನ್ನು ಕ್ರಮಬದ್ಧವಾಗಿ, ಸಾರ್ಥಕವಾಗಿ ಬಳಸಿಕೊಳ್ಳಲು ಸಾಧ್ಯವಾಗಿಲ್ಲದಿರುವುದೇ ದುರಂತವಾಗಿ ಪರಿಣಮಿಸುತ್ತಿದೆ. ತುಂಗಭದ್ರಾ ಮೇಲ್ದಂಡೆ ಯೋಜನೆ ಮಾತ್ರ ಸಕಾಲದಲ್ಲಿ ನಿರ್ಮಾಣವಾಗಿ ರಾಯಚೂರು ಜಿಲ್ಲೆಯ ಕೆಲವು ತಾಲುಕಿನ ಭೂಮಿಗೆ ನಾಲ್ಕು ದಶಕಗಳಿಂದ ನೀರುಣಿಸುತ್ತಿದೆ. ಕೃಷ್ಣಾ ಮೇಲ್ದಂಡೆ ಯೋಜನಾದಿಯಾಗಿ ಹತ್ತಾರು ನೀರಾವರಿ ಯೋಜನೆಗಳು ಮೂವತ್ತು ವರ್ಷಗಳಿಂದ ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ಕುಂಟುತ್ತ ನಿರ್ಮಾಣವಾಗುತ್ತಿವೆ. ಅವುಗಳಿಗೆ ಒದಗಿದ ಅಡ್ಡಿ ಆತಂಕಗಳ ವಾಸ್ತವ ಸ್ಥಿತಿಯನ್ನು ಅರಿತರೆ ಈ ಪ್ರಾಂತದ ಬಗ್ಗೆ ಯಾರೂ ವಿಷಾದ ಪಡಬಹುದೇನೋ.

ತುಂಗಭದ್ರಾ ನೀರಾವರಿ ಯೋಜನೆ : ಒದಗಿದ ಬಿಕ್ಕಟ್ಟುಗಳು

ತುಂಗಭದ್ರಾ ನೀರಾವರಿ ಯೋಜನೆಯೇ ಈ ಪ್ರಾಂತದಲ್ಲಿ ಆರಂಭವಾದ ಮೊದಲ ಯೋಜನೆ. ಮುನ್ನೂರು ವರ್ಷಗಳಿಂದ ಈಚೆಗೆ ಈ ಪ್ರಾಂತದಲ್ಲಿ ಮೇಲಿಂದ ಮೇಲೆ ಬರ ಕಾಣಿಸಿಕೊಂಡಿತು. ‘ಕಂಡರಿಯದ, ಕೇಳರಿಯದಂತಹ’ ಬರಗಾಲವನ್ನು ಜನರು ಅನುಭವಿಸಿದ್ದಾರೆಂದು ನಮ್ಮ ಪೂರ್ವಿಕರು ಹೇಳಿಕೊಂಡಿದ್ದಾರೆ ಸ್ವಾತಂತ್ರ್ಯಪೂರ್ವದಲ್ಲಿ ಬಳ್ಳಾರಿ, ರಾಯಚೂರು, ಕೊಪ್ಪಳ ಪ್ರದೇಶಗಳಲ್ಲಿ ದೊಡ್ದ ಬರಗಾಲ ಬಂದಾಗ ಜನರು ಹೊಟ್ಟೆಪಾಡಿಗಾಗಿ ಕಾಮಗಾರಿಯನ್ನು ಕೈಗೊಳ್ಳಲು ನಿಜಾಮ ಸರಕಾರಕ್ಕೆ ಬೆನ್ನುಬಿದ್ದರು. ಅಗ ಈ ತುಂಗಭದ್ರಾ ಯೋಜನೆಗೆ ಸಿದ್ಧತೆಗಳು ನಡೆದವು. ನಿಜಾಮ ಮತ್ತು ಮದ್ರಾಸು ಸರಕಾರಗಳು ಕೂಡಿ ೧೯೪೫ರಲ್ಲಿ ತುಂಗಭದ್ರಾ ನದಿಗೆ ಹೊಸಪೇಟೆ ಬಳಿ ಅಣೆಕಟ್ಟು ಕಟ್ಟಲು ಅಡಿಗಲ್ಲನ್ನಿಟ್ಟು ಅರಂಭಿಸಿದವು. ೧೮.೯೮ ಕೋಟಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಿಸುವ ಕೆಲಸ ನಡೆದು ೧೯೫೩ರ ಹೊತ್ತಿಗೆ ಮುಗಿಸಲಾಯಿತು. ಈ ಅಣೆಕಟ್ಟಿನ ಬಲದಂಡೆ ಕಾಲುವೆ ೧೯೬೦ರಲ್ಲಿಯು (೩೩.೨೨ ಕೋಟಿವೆಚ್ಚದಲ್ಲಿ), ಎಡದಂಡೆ ಕಾಲುವೆ ೧೯೬೪ರಲ್ಲಿಯು (೧೬.೧೭ ಕೋಟಿ ವೆಚ್ಚದಲ್ಲಿ) ಸಿದ್ಧವಾದವು. ಬಳ್ಳಾರಿ, ರಾಯಚೂರು ಜಿಲ್ಲೆಯ ೮.೭ ಲಕ್ಷ ಎಕರೆ ಭೂಮಿಗೆ ಹಾಗೂ ಆಂಧ್ರಪ್ರದೇಶದ ಅನಂತಪುರ, ಕರ್ನೂಲ್, ಕಡಪ ಜಿಲ್ಲೆಗಳ ೪ ಲಕ್ಷ ಎಕರೆ ಭೂಮಿಗೆ ನೀರನ್ನು ಒದಗಿಸಲಾಯಿತು.

೪೦ ವರ್ಷಗಳಿಂದಲೂ ಹೊಸಪೇಟೆ, ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ತಾಲೂಕುಗಳಲ್ಲಿ ಈ ಯೋಜನೆಯು ನೀರಿನಿಂದ ವ್ಯವಸಾಯ ನಡೆಯುತ್ತ ಬಂದಿದೆ. ೧೯೭೫ – ೮೫ರ ದಶಕದಲ್ಲಿ ಬೆಳೆದ ಹತ್ತಿಯ ಪ್ರಮಾಣದಿಂದ, ೧೯೮೫ರಿಂದ ಈಚೆಗೆ ಬೆಳೆಯುತ್ತಿರುವ ಭತ್ತದ ಪ್ರಮಾಣದಿಂದ ಅಳೆಯ ಅಭಿವೃದ್ಧಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಭಾಗದಲ್ಲಿ ರೈತ ಸಮುದಾಯಕ್ಕೆ ನೆಮ್ಮದಿ ಇದೆಯೇ? ಎಂಬ ಪ್ರಶ್ನೆ ರೈತರನ್ನು ಕಾಡುತ್ತಿದೆ. ಹಸಿರು ಕ್ರಾಂತಿ ಆಗಿದೆ ಎಂದು ಹೇಳಲಾಗುತ್ತಿದೆ. ಆದರೆ ರೈತರು ಮಾತ್ರ ಸಾಲಗಾರರಾಗಿದ್ದಾರೆ. ಸಾಲದ ಕ್ರಾಂತಿ ಮಾತ್ರ ಆಗಿದೆ.

ಮೊದಲಿನಿಂದಲೂ ರೈತ ಸಮುದಾಯ ಒಂದಿಲ್ಲೊಂದು ಸಮಸ್ಯೆಯನ್ನು ಎದುರಿಸುತ್ತ ಬಂದಿದೆ. ಸರಕಾರದ ನೀತಿ ನಿಯಮಗಳಿಂದಲೂ, ಬೇಜವಾಬ್ದಾರಿಯಿಂದಲೂ ಮತ್ತು ರೈತರಲ್ಲಿ ಹೋರಾಟಸ, ಮನೋಭಾವದ ಕೊರತೆಯಿಂದಲೂ ಅನೇಕ ಬಿಕ್ಕಟ್ಟುಗಳನ್ನು ರೈತ ಸಮುದಾಯ ಅನುಭವಿಸುತ್ತಿದೆ. ಸ್ವಾತಂತ್ರ್ಯಪೂರ್ವದಿಂದಲೂ ಬಳ್ಳಾರಿ, ರಾಯಚೂರು ಜಿಲ್ಲಾ ಪ್ರದೇಶಗಳಲ್ಲಿ ಮೇಲಿಂದ ಮೇಲೆ ಬರ ಕಾಣಿಸಿಕೊಂಡು, ರೈತರು ತಮ್ಮ ಭೂಮಿಗೆ ರಕಂ (ಕರ) ಕಟ್ಟಿ ಬೇಸತ್ತಿದ್ದರು. ತುಂಗಭದ್ರಾ ನೀರಾವರಿ ಯೋಜನೆಯಿಂದ ನೀರು ಬಂದ ಸಂದರ್ಭದಲ್ಲಿ ರೈತರಿಗೆ ತಮ್ಮ ಭೂಮಿಯನ್ನು ಸಾಗುವಳಿ ಮಾಡಿಕೊಳ್ಳಲು ಆರ್ಥಿಕ ಬಲ ಇರಲಿಲ್ಲ. ಯಾವ ಬ್ಯಾಂಕುಗಳೂ ಸುಲಭವಾಗಿ ಸಾಲ ನೀಡುತ್ತಿರಲಿಲ್ಲ. ಸಹಕಾರ ಸಂಘಗಳು ಹುಟ್ಟಿಕೊಳ್ಳಲಿಲ್ಲ. ಇರುವ ಭೂಮಿಯಲ್ಲಿ ತಕ್ಕಮಟ್ಟಿಗೆ ಸಾಗುವಳಿ ಮಾಡಿಕೊಂಡರು. ಅಪಾರವಾದ ಭೂಮಿ ಸಾಗುವಳಿ ಇಲ್ಲದೆ ಉಳಿದಿತ್ತು. ಈ ಪರಿಸ್ಥಿತಿಯನ್ನು ಮನಗಂಡು ಪಕ್ಕದ ಆಂಧ್ರದ ರೈತರು ಈ ಜಿಲ್ಲೆಯ ತಾಲೂಕುಗಳಿಗೆ ಉತ್ಸಾಹದಿಂದ ಬಂದರು. ಅವರಿಗೆ ಈ ರೈತರು ತಮ್ಮ ಭೂಮಿಯನ್ನು ೫೦೦ ರಿಂದ ೧೦೦೦ ರೂಪಾಯಿಗಳಿಗೆ ಎಕರೆಯಂತೆ ಮಾರಿಕೊಂಡರು. ೮೦ರ ದಶಕದಿಂದ ಇಲ್ಲಿಯವರೆಗೆ ಹೊಸಪೇಟೆಯಿಮ್ದ ಗಂಗಾವತಿ, ಸಿಂಧನೂರು, ಮಾನ್ವಿ, ರಾಯಚೂರು ತಾಲೂಕುಗಳು ತುಂಬ ಆಂಧ್ರದ ರೈತರು ಭೂ ಒಡೆಯರಾಗಿ ವ್ಯವಸಾಯ ಮಾಡುತ್ತಿದ್ದಾರೆ. ಹಿರಿಯ ರೈತ ಮುಖಂಡರಾದ ಚೆನ್ನಬಸವಪ್ಪ ಬೆಟ್ಟದೂರು ಅವರು, ‘…..ಜಿಲ್ಲೆಯ ಒಣ ಪ್ರದೇಶದ (ಮಳೆಯಾಧಾರಿತ ಕೃಷಿ) ಜನರಿಗೆ ತಮ್ಮ ದೊಡ್ಡ ಹಿಡುವಳಿಗಳಿಗೆ ನೀರುಪಯೋಗಿಸಿಕೊಂಡು ಬೆಳೆ ಬೆಳೆಯುವುದು ಅಸಾಧ್ಯವೆಂದು ತೋರಿತು. ಮಳೆ ಇಲ್ಲದ ಕಾಲದಲ್ಲಿಯೂ ಹೊಲಗಳ ‘ಹಪ್ತಿ’ (ಭುಕಂದಾಯ) ಕಟ್ಟಿ ಬೇಸತ್ತ ಜನರು, ನೀರಿನ ಮಹತ್ವವನ್ನು ಅರಿತು ಆಂಧ್ರದಿಂದ ನುಗ್ಗಿಬಂದ ಜನರಿಗೆ ‘ನಾಮುಂದು ತಾಮುಂದು’ ಎಂದು ಭೂಮಿಗಳನ್ನು ಮಾರಾಟ ಮಾಡಿದರು. ಹೀಗೆ ತಿಳುವಳಿಕೆಯಿಲ್ಲದ ಜನರು (ಕನ್ನಡಿಗರು) ತಮ್ಮ ಆಸ್ತಿಯನ್ನು ಕಳೆದುಕೊಂಡು ‘ಆಂಧ್ರ’ದವರ ಆಳುಗಳಾಗಿ ದುಡಿಯುತ್ತಿರುವುದು ಈ ನಾಡಿನ ದೊಡ್ಡ ದುರಂತ!’

[1] ಎಂದಿದ್ದಾರೆ. ಈ ಭಾಗದ ರೈತರು ಆಂಧ್ರದ ರೈತರಿಗೆ ಭೂಮಿ ಮಾರಿದ್ದು, ನಂತರ ಅವರ ಮನೆ – ಹೊಲಗಳಲ್ಲಿ ದುಡಿಯಲು ನಿಂತದ್ದು, ನಿರ್ಗತಿಕರಾದದ್ದು ಕಂಡುಬರುತ್ತಿದೆ. ಆಂಧ್ರದ ರೈತರಿಗೆ ಬರೀ ಭತ್ತದ ವ್ಯವಸಾಯ ಗೊತ್ತಿರುವುದರಿಂದ ವರ್ಷಕ್ಕೆ ಎರಡು ಬೆಳೆ ಭತ್ತವನ್ನೇ ಬೆಳೆಯಲಾರಂಭಿಸಿದರು. ಇದರಿಂದ ನೀರಿನ ಬಳಕೆ ವಿಪರೀತವಾಯಿತು. ಜೋಳ, ಹತ್ತಿ, ಗೋಧಿ, ನವಣೆ, ಸಜೆ, ಕಾಳುಕಡಿ ಬೆಳೆಗಳು ಕಾಣೆಯಾದವು. ಭತ್ತವನ್ನೇ ಬೆಳೆಯುತ್ತಿರುವುದರಿಂದ ಭೂಮಿ ಜವಳಾಗಿ ಉಪ್ಪು ತೇಲುತ್ತಿದೆ. ಇದರಿಂದ ಈಗ ಆಂಧ್ರದ ರೈತರು ಕೃಷ್ಣಾ ಮೇಲ್ದಂಡೆ ಕಡೆ ಹೋಗಿ ತಳ ಊರುತ್ತಿದ್ದಾರೆ. ಕಾನೂನಿನ ಪ್ರಕಾರ ವರ್ಷಕ್ಕೆ ಒಂದು ಬೆಳೆ ಮಾತ್ರ ಭತ್ತ ಬೆಳೆದು, ಇನ್ನೊಂದು ಬೆಳೆ ಒಣ ಬೇಸಾಯ ಮಾಡಬೇಕು. ಆದರೆ ತುಂಗಭದ್ರಾ ಎಡದಂಡೆ ಕಾಲುವೆಯ ನೀರಿನಿಂದ ವರ್ಷಕ್ಕೆ ಎರಡು ಸಲ ಭತ್ತದ ಬೆಳೆಯನ್ನೇ ಬೆಳೆಯಲಾಗುತ್ತಿದೆ. ಇದರಿಂದ ನೀರಿನ ಬಳಕೆ ವಿಪರೀತವಾಗಿದೆ. ಕಾಲುವೆ, ಉಪಕಾಲುವೆಗಳ ಕೊನೆ ಭಾಗದ ರೈತರಿಗೆ ನೀರಿಲ್ಲದೆ ಆಹಾಕಾರ ಎದ್ದಿದೆ. ಈ ಒಂದು ಬಿಕ್ಕಟ್ಟು ತಲೆದೋರಿರುವ ಸಮಯದಲ್ಲಿ, ತುಂಗಭದ್ರಾ ಅಣೆಕಟ್ಟಿನಿಂದ ಬೃಹತ್ ಉದ್ದಿಮೆಗಳಿಗೆ ನೀರು ಹರಿದು ಹೋಗುತ್ತಿರುವುದು ರೈತರಿಗೆ ಇನ್ನೊಂದು ಬಿಕ್ಕಟ್ಟನ್ನು ತಂದಿದೆ.

ತುಂಗಭದ್ರಾ ಅಣೆಕಟ್ಟಿನ ನೀರಿನ ಶೇಖರಣೆಯ ಸಾಮರ್ಥ್ಯ ಆರಂಭದಲ್ಲಿ ೧೩೨ ಟಿ.ಎಂ.ಸಿ. ಇತ್ತು. ೧೯೯೫ರ ಸಮೀಕ್ಷೆಯ ಪ್ರಕಾರ ೧೦೪ ಟಿ.ಎಂ.ಸಿ.ಗೆ ಇಳಿದಿತ್ತು. ಈಗ ಇನ್ನೂ ಕಮ್ಮಿಯಾಗಿ, ೧೦೦ ಟಿ.ಎಂ.ಸಿ. ಶೇಖರಣೆ ಸಾಮರ್ಥ್ಯ ಹೊಂದಿದೆ. ಇದಕ್ಕೆ ಮುಖ್ಯ ಕಾರಣ ಹೂಳು ತುಂಬುತ್ತಿರುವುದು. ತುಂಬುವ ಹೂಳನ್ನು ತಕ್ಕಮಟ್ಟಿಗೆ ತಡೆಗಟ್ಟಲು ಕೊಪ್ಪಳದ ಹಿರೇಹಳ್ಳದ ನೀರಾವರಿ ಯೋಜನೆಯನ್ನು ಕೈಕೊಳ್ಳಲಾಗಿತ್ತು. ೧೯೭೩ರಲ್ಲಿ ಆರಂಭವಾಗಿ ೨೦೦೨ ಬಂದರೂ ಆ ಯೋಜನೆಯನ್ನು ಇನ್ನೂ ಮುಗಿದಿಲ್ಲ. ಹೂಳು ತುಂಬಿ ಸುಮಾರು ೩೦ ಟಿ.ಎಂ.ಸಿ. ನೀರು ತುಂಗಭದ್ರಾ ಜಲಾಶಯಕ್ಕೆ ಕಮ್ಮಿಯಾಗಿದೆ. ಇದರ ಜೊತೆಗೆ ಹೊಸಪೇಟೆಯ ಸುತ್ತ ಮುತ್ತ ತಲೆ ಎತ್ತಿರುವ ಜಿಂದಾಲ್, ಮುಕುಂದ್, ಕಿರ್ಲೊಸ್ಕರ್, ಕಲ್ಯಾಣಿ ಮುಂತಾದ ಬೃಹತ್ ಉಕ್ಕಿನ ಕಾರ್ಖಾನೆಗಳಿಗೆ ಮತ್ತು ಅವುಗಳನ್ನು ಅವಲಂಬಿಸಿದ ಸಣ್ಣ ಉದ್ದಿಮೆಗಳು ಸೇರಿದಂತೆ ಈ ಎಲ್ಲವೂ ನೀರನ್ನು ಅವಲಂಭಿಸಿದ ಉದ್ದಿಮೆಗಳಾಗಿರುವುದರಿಂದ ತುಂಗಭದ್ರಾ ಜಲಾಶಯದಿಂದಲೇ ಸು. ೧೦ -೧೫ ಟಿ.ಎಂ.ಸಿ. ನೀರನ್ನು ಪಡೆಯುತ್ತಿವೆ. ಹೀಗಾಗಿ ರೈತರಿಗೆ ಒಟ್ಟು ಸುಮಾರು ೪೦ ರಿಂದ ೪೫ ಟಿ.ಎಂ.ಸಿ. ನೀರು ಕಮ್ಮಿಯಾಗಿದೆ.

ಇದುವರೆಗೂ ರೈತರ ಒತ್ತಡದಿಂದಾಗಲಿ, ನೀರಿನ ಸಂರಕ್ಷಣೆಯ ಹಿತದೃಷ್ಟಿಯಿಂದಾಗಲಿ ಸರಕಾರ ಹೂಳು ತೆಗೆಸುವ ಬಗ್ಗೆ ಗಂಭೀರವಾಗಿ ಆಲೋಚನೆ ನಡೆಸಿಲ್ಲ. ಇದೇ ಮೊದಲಸಲ ೨೦೦೨-೦೩ ಸಾಲಿನಲ್ಲಿ ಈ ಪ್ರದೇಶದಲ್ಲಿ ವರ್ಷದ ಎರಡನೆಯ ಬೆಳೆಗೆ ನೀರು ಇಲ್ಲ. ರೈತರು ಭತ್ತದ ಬೆಳೆಯನ್ನು ನಿಲ್ಲಿಸಿದರೆ ಕೂಲಿಕಾರರಿಗೆ ವಿಪರೀತ ತೊಂದರೆಯಾಗುತ್ತದೆ. ಈ ತಾಲ್ಲೂಕುಗಳಿಂದಲೂ ಇನ್ನು ಮೇಲೆ ಗುಳೆಹೋಗುವುದು ಆರಂಭವಾಗುತ್ತದೆ. ಈ ಸಮಸ್ಯೆ ಒಂದು ಕಡೆಯಾದರೆ, ಇನ್ನೊಂದು ದೊಡ್ಡ ಸಮಸ್ಯೆ ತಲೆದೋರಿದೆ. ಅದೆಂದರೆ, ತುಂಗ-ಭದ್ರಾ ನದಿಗಳು ಹುಟ್ಟುವ ಪಶ್ಚಿಮ ಘಟ್ಟಗಳ (ಶಿವಮೊಗ್ಗ, ಶೃಂಗೇರಿ) ಪ್ರದೇಶದಲ್ಲಿ ಕುದುರೆಮುಖ ಗಣಿಗಾರಿಕೆಯು ಕಳೆದ ೩೦ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ಈ ಗಣಿಗಾರಿಕೆಯಿಂದ ಪರಿಸರಕ್ಕೆ, ನದಿಗಳಿಗೆ ಸರಿಪಡಿಸಲಾಗದಷ್ಟು ಪೆಟ್ಟು ಬಿದ್ದಿದೆ. ಗಣಿಗಾರಿಕೆಯನ್ನು ನಿಲ್ಲಿಸುವಂತೆ ‘ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ’ವು ವಿರೋಧಿಸಿ ನಿರಂತರವಾಗಿ ಹತ್ತಾರು ವರ್ಷಗಳಿಂದ ಹೋರಾಟ ಕೈಗೊಂಡಿದೆ. ಜನತೆಯ ಈ ಹೋರಾಟವನ್ನು ಸರಕಾರಗಳು ನಿರ್ಲಕ್ಷಿಸುತ್ತ ನಡೆದಿವೆ. ಈ ಗಣಿಗಾರಿಕೆಯಿಂದ ಉತ್ಪನ್ನವಾದ ಉಕ್ಕು ಸಂಪೂರ್ಣ ರಫ್ತಾಗುತ್ತಿದೆ. ತುಂಗ-ಭದ್ರಾ ನದಿಗಳು ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಹಾವೇರಿ, ಗದಗ, ಬಳ್ಳಾರಿ ಮತ್ತು ರಾಯಚೂರು ಅಲ್ಲದೆ ಪಕ್ಕದ ಆಂಧ್ರಪ್ರದೇಶದ ಜನ ಸಮುದಾಯಗಳಿಗೆ, ಜೀವ ಸಂಕುಲಕ್ಕೆ ಆಧಾರವಾಗಿವೆ. ೧೫ ಲಕ್ಷ ಎಕರೆ ಭೂಮಿಗೆ ನೀರುಣಿಸುವ ಈ ನದಿಗಳು ಕುದುರೆಮುಖ, ಗಂಗಡಿಕಲ್ಲು, ನೆಲ್ಲಬೀಡು ಗಣಿಗಾರಿಕೆಯಿಂದ ಬತ್ತಿಹೋಗುವ ಸ್ಥಿತಿ ತಲುಪಿವೆ. ಈ ನದಿಗಳು ಕ್ಷೀಣಿಸಿದರೆ ತುಂಗಭದ್ರಾ ಜಲಾಶಯಕ್ಕೆ ನೀರು ಎಲ್ಲಿಂದ ತರುವುದು? ಈ ತುಂಗಭದ್ರಾ ಮೇಲ್ದಂಡೆ ಯೋಜನೆಯ ಫಲಾನುಭವಿಗಳು ಈ ಅಪಾಯವನ್ನು ಬೇಗ ಅರಿತುಕೊಳ್ಳಬೇಕಾಗಿದೆ. ‘ತುಂಗಭದ್ರಾ ಉಳಿಸಿ ಹೋರಾಟ ಒಕ್ಕೂಟ’ವು ಈ ಅಪಾಯದ ಬೇಗ ಅರಿವನ್ನು ಮೂಡಿಸಲು ‘ನದಿಜನ ಜಾಥ’ ವನ್ನು ಜುಲೈ-೨೦೦೨ರಲ್ಲಿ ಬಳ್ಳಾರಿ, ಹೊಸಪೇಟೆ, ಮಾನ್ವಿ, ಗಂಗಾವತಿ, ಸಿಂಧನೂರು ಪಟ್ಟಣಗಳಲ್ಲಿ ಸಂಚರಿಸಿ ಎಚ್ಚರಿಸುವ ಮಹತ್ವದ ಪ್ರಯತ್ನ ಮಾಡಿದೆ. ಆದರೂ, ತುಂಗಭದ್ರಾ ಮೇಲ್ದಂಡೆಯ ಫಲಾನುಭವಿಗಳಾದ ಜನರು ಕಿವಿಗೊಡದೆ ತಣ್ಣಗಿರುವುದು ಅಪಾಯವೇ ಸರಿ.

ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆ : ವಿಳಂಬಕ್ಕೆ ಮಿತಿಯಿಲ್ಲ

ಕೃಷ್ಣಾ ಮೇಲ್ದಂಡೆ ನೀರಾವರಿ ಯೋಜನೆಯ ಈ ಪ್ರಾಂತದ ಬಹುದೊಡ್ಡ ಯೋಜನೆಯಾಗಿದೆ. ಕಳೆದ ೧೦-೧೨ ವರ್ಷಗಳಿಂದ ಈ ಯೋಜನೆಯ ಬಗ್ಗೆ ಮೇಲಿಂದ ಮೇಲೆ ಅನೇಕ ಬಗೆಯ ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಇವೆ. ವಿಳಂಬ, ಕೆಟ್ಟ ಕಾಮಗಾರಿ, ಭ್ರಷ್ಟಾಚಾರ, ನೀರು ಬಳಕೆಯ ಸಮಸ್ಯೆಗಳು ಇವೇ ಸುದ್ದಿಯಲ್ಲಿದ್ದು ಶಾಪಗ್ರಸ್ಥವಾಗಿ ಈ ಯೋಜನೆ ನಿಂತಂತಿದೆ. ಪ್ರಮುಖ ದೊಡ್ಡನದಿಯೂ ಆಗಿರುವ ಕೃಷ್ಣಾನದಿ ಈ ಪ್ರಾಂತದ ವರ. ಮಹಾರಾಷ್ಟ್ರದ ಪಶ್ಚಿಮಘಟ್ಟದ ಮಹಾಬಲೇಶ್ವರ ಗಿರಿಶ್ರೇಣಿಗಳಲ್ಲಿ ಜನ್ಮ ಪಡೆದು ಕರ್ನಾಟಕ ಮತ್ತು ಆಂಧ್ರಪ್ರದೇಶದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ೧೯೬೩ರಲ್ಲಿ ಈ ಯೋಜನೆ ಆರಂಭವಾಯಿತು. ವಿಜಾಪುರ, ಗುಲಬರ್ಗಾ, ರಾಯಚೂರು ಜಿಲ್ಲಾ ಪ್ರದೇಶದ ಒಟ್ಟು ೨೬ ಲಕ್ಷ ಎಕರೆಗೆ ನೀರೊದಗಿಸುವ ಗುರಿ ಹೊಂದಿದೆ. ಆಲಮಟ್ಟಿ ಅಣೆಕಟ್ಟಿನಿಂದ ೧೦.೫ ಲಕ್ಷ ಎಕರೆಗೆ, ನಾರಾಯಣಪುರ ಅಣೆಕಟ್ಟಿನಿಂದ ೧೫.೫ ಲಕ್ಷ ಎಕರೆಗೆ ನೀರಾಗಬೇಕು. ಈ ಯೋಜನೆಯ ಆರಂಭದ ಅಂದಾಜು ವೆಚ್ಚ ೧೨೮ ಕೋಟಿಯಿತ್ತು. ಈಗ ೪೦೦೦ ಕೋಟಿಗೆ ಏರಿದೆ. ಸುಮಾರು ೩೫ ವರ್ಷಗಳಿಂದ ಈ ಯೋಜನೆಯ ಕಾಮಗಾರಿ ನಡೆಯುತ್ತಿದೆ. ಈಗ ಸು.೫ ಲಕ್ಷ ಎಕರೆಗೆ ನೀರೊದಗಿರಬಹುದು. ಯೋಜನೆ ಮಾತ್ರ ಪೂರ್ತಿಯಾಗಿಲ್ಲ. ಬೇಗ ಮುಗಿಯುವ ಭರವಸೆ ಕಾಣುವುದಿಲ್ಲ. ಬಚಾವತ್ ಆಯೋಗದ ತೀರ್ಪಿನಂತೆ ಕರ್ನಾಟಕ ೭೦೦ ಟಿ.ಎಂ.ಸಿ. ನೀರನ್ನು ೨೦೦೦ದ ಒಳಗೆ ಬಳಸಿಕೊಳ್ಳಬೇಕಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ದುರಂತವೆಂದರೆ ಈ ಯೋಜನೆಯ ಕಾಮಗಾರಿಕೆಯನ್ನು ಕಂಡವರು ಯಾವ ಭರವಸೆಯನ್ನು ಉಳಿಸಿಕೊಳ್ಳುತ್ತಿಲ್ಲ. ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿದ ವಿಜಾಪುರ, ಗುಲಬರ್ಗಾ ಜಿಲ್ಲೆಯ ಜನ ಸಮುದಾಯಗಳು ಕಳೆದ ೩೦ ವರ್ಷಗಳಿಂದ ತಮ್ಮ ಭೂಮಿಗೆ ನೀರು ಬಂದಾವೆಂದು ಹಂಬಲಿಸುತ್ತಿವೆ. ‘೧೯೫೬ರ ಏಕೀಕರಣಪೂರ್ವದಲ್ಲಿ ವಿಜಾಪುರ ಮಹಾರಾಷ್ಟ್ರದ ಭಾಗವಾಗಿತ್ತು. ಮಹಾರಾಷ್ಟ್ರ ಕೊಯ್ನಾ ನೀರಾವರಿ ಯೋಜನೆ ರೂಪಿಸುವಾಗ, ನೀರಾವರಿಗೆ ವಿಜಾಪುರದ ಪ್ರದೇಶವನ್ನು ಒಳಗೊಳಿಸಿತ್ತು. ಪ್ರತ್ಯೇಕಾನಂತರ ೧೯೫೮ರಲ್ಲಿ ವಿಜಾಪುರಕ್ಕೆ ಕೊಯ್ನಾದ ನೀರಿಕೊಡಲು ಮಹಾರಾಷ್ಟ್ರ ಕರ್ನಾಟಕಕ್ಕೆ ಒಂದು ಕೋಟಿ ರೂಪಾಯಿ ಪರಿಹಾರವನ್ನು ಕೇಳಿತು. ಆಗ ಸಂಕುಚಿತ ಪಾಳೇಗಾರಿ ದೃಷ್ಟಿಯ ನಾಯಕತ್ವ ಅದಕ್ಕೆ ಒಪ್ಪಲಿಲ್ಲ. ಅಂದು ಒಂದು ಕೋಟಿ ಕೊಟ್ಟಿದ್ದರೆ ಕೊಯ್ನಾದ ನೀರು ವಿಜಾಪುರದ ಬಣಗುಟ್ಟುವ ಹೊಲಗಳಿಗೆ ನೀರು ಹರಿದು ಇಂದಿಗೆ ೩೪ ವರ್ಷಗಳೇ ಸಂದಿರುತ್ತಿದ್ದವು.’[2] ಆಗ ನೀರಾವರಿಯಾಗಿದ್ದರೆ ವಿಜಾಪುರ ಜಿಲ್ಲೆಯ ಬಡವರು ಹೊಟ್ಟೆಪಾಡಿಗಾಗಿ ಹೊರರಾಜ್ಯಗಳಿಗೆ ಹೋಗುವುದಾದರೂ ತಪ್ಪುತಿತ್ತೇನೋ! ನಾರಾಯಣಪುರ ಬಲದಂಡೆ ಕಾಲುವೆಯಿಂದ ರಾಯಚೂರು ಜಿಲ್ಲೆಯ ದೇವದುರ್ಗ, ಲಿಂಗಸೂಗೂರು ಹಾಗೂ ರಾಯಚೂರು ತಾಲೂಕುಗಳ ಭೂಮಿಗೆ ನೀರೊದಗುವುದಿದೆ. ಕಳೆದ ಮೂರು ದಶಕಗಳಿಂದ ಈ ತಾಲೂಕಿನ ರೈತರು ತಮ್ಮ ಹೊಲಗಳಿಗೆ ನೀರು ಬರುವುದನ್ನು ನಿರೀಕ್ಷಿಸಿ ಬೇಸತ್ತಂತೆ ಕಾನುತ್ತಿದೆ. ಈ ಎಲ್ಲ ತಾಲೂಕುಗಳಲ್ಲಿ ಹಾಯ್ದು ಹೋಗಿರುವ ಕಳಪೆ ಕಾಲುವೆಗಳನ್ನು ಕಂಡು ನೀರಿನ ಆಸೆಯನ್ನೇ ತೊರೆದಿದ್ದಾರೆಂದು ಪತ್ರಿಕೆಗಳಲ್ಲಿ ವರದಿಗಳು ಮೇಲಿಂದ ಮೇಲೆ ಬರುತ್ತಲೇ ಇವೆ.

ಭೀಮಾ ನದಿಯ ಕಥೆ : ಕೃಷ್ಣಾನದಿ ಕೊಳ್ಳದ ನದಿಗಳಲ್ಲಿ ಭೀಮಾನದಿ ದೊಡ್ಡದು. ಮಹಾರಾಷ್ಟ್ರದ ಸಹ್ಯಾದ್ರಿಪರ್ವತ ಶ್ರೇಣಿಗಳ ಭೀಮಾಶಂಕರ ಎಂಬಲ್ಲಿ ಜನ್ಮತಳೆದು ಬರುತ್ತ ಕರ್ನಾಟಕದಲ್ಲಿ ಸುಮಾರು ೨೦೬ ಕಿ.ಮೀ. ಹರಿದು ಆಂಧ್ರಪ್ರದೇಶದ ಗಡಿಯಲ್ಲಿ ಕೃಷ್ಣಾನದಿಯನ್ನು ಸೇರುತ್ತದಷ್ಟೆ. ಸುಮಾರು ೧೬೪ ಹಲ್ಳಿಗಳು ಭೀಮಾನದಿ ದಡದಲ್ಲಿವೆ. ೪೭,೪೩,೬೮೦ ಎಕರೆ ಜಲಾನಯನ ಪ್ರದೇಶವನ್ನೊಳಗೊಂಡಿದೆ. ಬಚಾವತ್ ತೀರ್ಪಿನ ಪ್ರಕಾರ ೩೫೧ ಟಿ.ಎಂ.ಸಿ. ವಾರ್ಷಿಕ ನೀರಿನ ಸಾಮರ್ಥ್ಯವನ್ನು ಗುರುತಿಸಿ, ಮಹಾರಾಷ್ಟ್ರ ೩೦೦.೬, ಕರ್ನಾಟಕ ೪೫.೩, ಆಂಧ್ರ ೫.೧ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳಲು ನಿಗದಿ ಮಾಡಿದೆ. ಜತೆಗೆ ಭೀಮಾನದಿ ನೀರಿನಲ್ಲಿ ಮಹಾರಾಷ್ಟ್ರವು ೯೫ ಟಿ.ಎಂ.ಸಿ. ನೀರಿಗಿಂತ ಅಧಿಕವಾಗಿ ಬಳಸಬಾರದು. ಅದರಂತೆ ಮುಖ್ಯವಾಹಿನಿಯಿಂದ ಕರ್ನಾಟಕವೂ ೧೫ ಟಿ.ಎಂ.ಸಿ. ನೀರಿಗಿಮ್ತ ಅಧಿಕವಾಗಿ ಬಳಸಬಾರದು ಎಂದು ಬಚಾವತ್ ತೀರ್ಪಿನಲ್ಲಿ ವಿಧಿಸಿದೆ. ಮಹಾರಾಷ್ಟ್ರ ರಾಜ್ಯವು ೯೫ ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಶುರುಮಾಡಿ ೧೦ ವರ್ಷಗಳು ಮೇಲಾಗಿದೆ. ಈಗ ೧೩೫ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳುತ್ತಿದೆ. ಕರ್ನಾಟಕ ರಾಜ್ಯವು ೧೫ ಟಿ.ಎಂ.ಸಿ. ನೀರನ್ನು ಬಳಸಿಕೊಳ್ಳಲು ಇದುವರೆಗೂ ಸಮರ್ಥವಾಗಿಲ್ಲ. ಏಕೆಂದರೆ ಅದರ ಯಾವ ನೀರಾವರಿ ಯೋಜನೆಗಳು ಪೂರ್ತಿಯಾಗಿಲ್ಲ. ಮಹಾರಾಷ್ಟ್ರ ರಾಜ್ಯವೇ ಭೀಮಾನದಿ ನೀರನ್ನು ಪೂರ್ತಿಯಾಗಿ ಬಳಸಿಕೊಳ್ಳುತ್ತಿರುವುದರಿಂದ ಕರ್ನಾಟಕದಲ್ಲಿ ಹರಿವ ಭೀಮಾನದಿ ಬುತ್ತಿಹೋಗಿದೆ. ದಡದ ಉದ್ದಕ್ಕೂ ಇರುವ ಸುಮಾರು ೨೦೦ ಹಳ್ಳಿಗಳ ಜನ ಸಮುದಾಯಗಳಿಗೆ, ಜಾನುವಾರುಗಳಿಗೆ, ಜೀವ ಸಂಕುಲಗಳಿಗೆ, ಸಸ್ಯ ಸಂಕುಲಗಳಿಗೆ ನೀರಿಲ್ಲದ ದುರಂತ ಒದಗಿದೆ. ಮಳೆ ಕಡಿಮೆಯಾಗುತ್ತಿರುವುದರಿಂದ ಭೀಮಾನದಿ ಉದ್ದಕ್ಕೂ ಬರಡುತನ ಮೂಡಿದೆ. ಈ ಗತಿ ಒದಗಿದೆ. ಭೀಮಾನದಿ ದಡದ ರೈತರು ಮಹಾರಾಷ್ಟ್ರ ರಾಜ್ಯದ ಜಲನೀತಿಯ ವಿರುದ್ಧ ಸುಪ್ರೀಮ್ ಕೋರ್ಟಿಗೆ ಹೋಗಿದ್ದಾರೆ. ಈಗ ಕಾವೇರಿ ನದಿ ನೀರಿಗಾಗಿ ಮೈಸೂರು ಪ್ರಾಂತದ ಕರ್ನಾಟಕ – ತಮಿಳು ನಾಡಿಗೆ ನಡೆಯುತ್ತಿರುವ ಸಂಘರ್ಷದ ಜತೆಗೆ, ಭೀಮಾನದಿ ನೀರಿಗಾಗಿ, ಈ ಪ್ರಾಂತದ ಕರ್ನಾಟಕ – ಮಹಾರಾಷ್ಟ್ರಕ್ಕೆ ಸಂಘರ್ಷ ಆರಂಭವಾಗಿ ಬಿಟ್ಟಿದೆ. ಕೃಷ್ಣ ಮೇಲ್ದಂಡೆ ಯೋಜನೆಯ ಸಂಬಂಧವಾಗಿ ಆಂಧ್ರದ ಜತೆ ಜಗಳ ಆರಂಭವಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಕರ್ನಾಟಕವು ನದಿನೀರಿಗಾಗಿ ನೆರೆಯ ಮೂರು ರಾಜ್ಯಗಳ ಜತೆ ಸಮಸ್ಯೆಗಳನ್ನು ಎದುರಿಸಿ ನಿಭಾಯಿಸಿಕೊಳ್ಳಬೇಕಾಗಿದೆ.

ಹಿರೇಹಳ್ಳ ನೀರಾವರಿ ಯೋಜನೆ : ತುಂಗಭದ್ರಾ ನದಿಯ ಉಪನದಿಯಾಗಿ ಹಳ್ಳಕ್ಕೆ ಕೊಪ್ಪಳ ತಾಲೂಕಿನ ಕಿನ್ನಾಳ ಎಂಬ ಹಳ್ಳಿಯ ಬಳಿ ಅಣೆಕಟ್ಟನ್ನ ಕಟ್ಟಲಾಗಿದೆ. ಈ ಯೋಜನೆಯಿಂದ ಎರಡು ಪ್ರಮುಖ ಪ್ರಯೋಜನಗಳಿವೆ. ಹಿರೇಹಳ್ಳ ಹಾಗೂ ವೀರಾಪುರ ಹಳ್ಳಿಗಳು ಕಿನ್ನಾಳದ ಕೆಳಗೆ ೪ಕಿ.ಮೀ. ದೂರದಲ್ಲಿ ಕೂಡಿಕೊಂಡು ೨೪ ಕಿ.ಮೀ. ಹರಿದು ತುಂಗಭದ್ರಾ ಅಣೆಕಟ್ಟಿನ ಜಲಾಶಯವನ್ನು ಸೇರುವುದರಿಂದ ಅಪಾರ ಪ್ರಮಾಣದ ಹೂಳು ಹರಿದು ಜಲಾಶಯದಲ್ಲಿ ತುಂಬುವುದನ್ನು ತಡೆಯುವುದು. ಇನ್ನೊಂದು ಮಳೆ ನೀರನ್ನು ಆಶ್ರಯಿಸಿರುವ ಕೊಪ್ಪಳ ನಾಡಿನ ೨೦,೫೮೨ ಎಕರೆಗೆ ನೀರೊದಗಿಸುವುದು. ಚಿಕ್ಕ ಯೋಜನೆಯಾದ ಇದನ್ನು ೧೯೭೭ರಲ್ಲಿ ಆರಂಭಿಸಲಾಯಿತು. ಆರಂಭದ ಅಂದಾಜು ವೆಚ್ಚ ೬.೩೫ ಕೋಟಿ. ಇತ್ತೀಚಿನ ಅಂದಾಜು ವೆಚ್ಚ ೧೬೦ ಕೋಟಿ. ೨೫ವರ್ಷಗಳಾದರೂ ಈ ಯೋಜನೆ ಪೂರ್ತಿಯಾಗಿಲ್ಲ.

ಮಸ್ಕಿನಾಲಾ ನೀರಾವರಿ ಯೋಜನೆ : ಇದೂ ಕೂಡ ತುಂಗಭದ್ರಾ ನದಿಯ ಉಪನದಿಯಾದ ಮಸ್ಕಿನಾಲಾಗೆ ಲಿಂಗಸೂಗೂರು ತಾಲೂಕಿನ ಮಾರಲದಿನ್ನಿ ಬಳಿ ಅಣೆಕಟ್ಟನ್ನು ಕಟ್ಟಲಾಗುತ್ತಿದೆ. ಈ ಯೋಜನೆಯಿಂದ ೭,೫೦೦ ಎಕರೆಗೆ ನೀರಾವರಿ ಬರಲಿದೆ. ನಿಜಾಮರ ಕಾಲದಲ್ಲಿ ಈ ಯೋಜನೆಯನ್ನು ಮಾಡಲು ಯೋಚಿಸಿದ್ದರೆಂದು ಹೇಳಲಾಗುತ್ತಿದೆ. ೧೯೭೬ರಲ್ಲಿ ಆರಂಭಿಸಿದ್ದು ಆಗಿನ ಅಂದಾಜುವೆಚ್ಚ ೩.೧೧ ಕೋಟಿಯಾಗಿತ್ತು. ಈಚಿನ ಅಂದಾಜು ವೆಚ್ಚ ೪೭.೦೦ ಕೋಟಿಗೆ ಬಂದು ನಿಂತಿದೆ. ೨೫ ವರ್ಷಗಳಾದರೂ ಭೂಮಿಗೆ ನೀರನ್ನು ಒದಗಿಸಲಾಗಿಲ್ಲ.

ರಾಮಾಪುರ ಏತ ನೀರಾವರಿ ಯೋಜನೆ : ಕೃಷ್ಣಾ ಮೇಲ್ದಂಡೆ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಈ ಯೋಜನೆಯು ನಾರಾಯಣಪುರ ಜಲಾಶಯದ ಹಿನ್ನೀರಿನ ಸದುಪಯೋಗ ಪಡಿಸಿಕೊಂಡು ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕು, ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲೂಕಿನ ಒಟ್ಟು ೩೮ ಹಳ್ಳಿಗಳ ೩೩,೦೦೦ ಹೆಕ್ಟೇರ್ ಭೂಮಿಗೆ ನೀರನ್ನು ಕಲ್ಪಿಸುವ ಗುರಿ ಹೊಂದಿದೆ. ೧೯೮೯ – ೯೦ರ ಅವಧಿಯಲ್ಲಿ ಈ ಯೋಜನೆಯ ಅಂದಾಜು ವೆಚ್ಚ ೪೨.೪೦ ಕೋಟಿ. ಪರಿಷ್ಕೃತ ಅಂದಾಜು ವೆಚ್ಚವೆಂದು ೧೯೯೨ ಜುಲೈ ತಿಂಗಳಲ್ಲಿ ಈ ಯೋಜನೆಗೆ ಸರಕಾರವು ೧೧೪ ಕೋಟಿ ರೂ. ಎಂದು ಮಂಜೂರು ಮಾಡಿ ಅಂಗೀಕಾರ ನೀಡಿತು. ೨೦೦೨ರ ಹೊತ್ತಿಗೆ ೪.೧೩೧ ಹೆಕ್ಟೇರ್ ಭೂಮಿಗೆ ನೀರು ಒದಗುತ್ತವೆ ಎಂದು ಸರಕಾರ ಭರವಸೆ ನೀಡಿತ್ತು. ಲಿಂಗಸೂಗೂರು ತಾಲೂಕಿನ ೩೪ ಹಳ್ಳಿಗಳ ರೈತರು ೧೦ ವರ್ಷಗಳಿಮ್ದ ನೀರಿಗಾಗಿ ಕಾಯ್ದು ನಿಟ್ಟುಸಿರು ಬಿಡುತ್ತಿದ್ದಾರೆ. ಇದುವರೆಗೂ ಭೂಮಿಗೆ ನೀರುಣಿಸಲು ಸಾಧ್ಯವಾಗಿಲ್ಲ.

ಹುಲುಗುಡ್ಡ (ಸಿಂಗಟಾಲೂರು) ಏತ ನೀರಾವರಿ ಯೋಜನೆ : ತುಂಗಭದ್ರಾ ನದಿಗೆ ಕಟ್ಟಿರುವ ಅಣೆಕಟ್ಟನ್ನು ಈಗಿರುವ ಸ್ಥಳಕ್ಕಿಂತ ಇನ್ನೂ ಹಿಂಭಾಗದಲ್ಲಿ ಕಟ್ಟಿದ್ದರೆ ಈ ಯೋಜನೆಯಿಂದ ಬಳ್ಳಾರಿ ಜಿಲ್ಲೆಯ ಪಶ್ಚಿಮದ ಹಡಗಲಿ, ಹಗರಿಬೊಮ್ಮನಹಳ್ಳಿ, ಹರಪ್ಪನಹಳ್ಳಿ, ಗದಗ, ಕೊಪ್ಪಳ ಹಾಗೂ ಮುಂಡರಗಿ ತಾಲೂಕುಗಳ ರೈತರಿಗೆ ನೀರಾವರಿ ಸೌಲಭ್ಯ ದೊರೆಯುತ್ತಿತ್ತೆಂದು ಹೇಳಲಾಗುತ್ತಿದೆ. ಅದು ಕೈಗೂಡದ ಕಾರಣ ಈ ‘ಹುಲಿಗುಡ್ಡ ಏತ ನೀರಾವರಿ’ ಯೋಜನೆಯನ್ನು ರೂಪಿಸಲಾಯಿತು. ಈ ಯೋಜನೆಯನ್ನು ಕಾರ್ಯಗತಗೊಳಿಸಲು ಎಂ.ಪಿ.ಪ್ರಾಕಾಶ ಪ್ರಯತ್ನಿಸಿದರು. ಹಡಗಲಿ ತಾಲೂಕಿನ ೨೫,೦೦೦, ಮುಂಡರಗಿ ತಾಲೂಕಿನ ೧೭,೦೦೦, ಕೊಪ್ಪಳ ತಾಲೂಕಿನ ೩೦,೦೦೦ ಎಕರೆ ಭೂಮಿಗೆ ನೀರುಣಿಸುವ ಗುರಿಹೊಂದಿದ ಈ ಯೋಜನೆಯ ವೆಚ್ಚ ಅರಂಭದಲ್ಲಿ ೪೮ ಕೋಟಿ ರೂ. ಇದ್ದದ್ದು, ೧೯೯೦ರ ಹೊತ್ತಿಗೆ ೬೨ ಕೋಟಿ ರೂಪಾಯಿಗೆ ಏರಿತು. ೧೯೯೭ – ೯೮ರಲ್ಲಿ ಪರಿಷ್ಕೃತ ಅಂದಾಜು ವೆಚ್ಚ ೧೨೩ ಕೋಟಿ ರೂ. ಎಂದು ಮಾಡಲಾಯಿತು. ಈ ಯೋಜನೆಯ ಸ್ಥಳಕ್ಕೆ ಮಾಜಿ ಪ್ರಧಾನ ಮಂತ್ರಿಗಳಾದ ಎಚ್.ಡಿ. ದೇವೇಗೌಡರು ಭೇಟಿ ನೀಡುದ್ದಾರೆ. ೭.೬೪ ಟಿ.ಎಂ.ಸಿ. ನೀರಿನ ಸಾಮರ್ಥ್ಯ ಇದ್ದುದ್ದನ್ನು ಎಚ್.ಕೆ. ಪಾಟೀಲರು ಆಸಕ್ತಿ ವಹಿಸಿ ೧೦ ಟಿ.ಎಂ.ಸಿ. ಶೇಖರಣೆ ಸಾಮರ್ಥ್ಯಕ್ಕೆ ಹೆಚ್ಚಿಸಲು ಯೋಜಿಸಿದರು. ತುಂಗಭದ್ರಾ ಜಲಾಶಯದ ನೀರಿನ ಫಲಾನುಭವಿಗಳು ತೆಗೆದ ತಕರಾರಿನಿಂದಲೂ, ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಲೂ ಈ ಯೋಜನೆ ನಿಂತೇ ಹೋಗಿದೆ.[1] ಚನ್ನಬಸವಪ್ಪ ಬೆಟ್ಟದೂರು : ಪಂಪಾಸಾಗರ : ಪ್ರದೇಶದ ನೀರಾವರಿ ಸಮಸ್ಯೆಗಳು ಮತ್ತು ಅದರ ಪರಿಹಾರೋಪಾಯಗಳು, ತಿರುಳ್ಗನ್ನಡ (೧೯೯೩) ಪುಟ-೫೦

[2] ಗಂಗಾಧರ ಕುಷ್ಟಗಿ : ಕೃಪೆಯ ಕಥೆ – ವ್ಯಥೆ, ತಿರುಳ್ಗನ್ನಡ (೧೯೯೩) ಪುಟ-೩೩