ಕರ್ನಾಟಕದ ಒಂದು ಭಾಗವಾಗಿರುವ ‘ಹೈದರಾಬಾದು ಕರ್ನಾಟಕ’ವು ಈಚಿನ ವರ್ಷಗಳಲ್ಲಿ ಕೆಲವು ಸಂಗತಿಗಳಿಂದ ಸುದ್ದಿಯಲ್ಲಿದೆ. ಈ ಪ್ರಾಂತದಲ್ಲಿ ಆಗಸ್ಟ್ – ೧೫ರ ಬದಲಾಗಿ, ಸೆಪ್ಟೆಂಬರ್ – ೧೭ರಂದು ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವುದು, ಈ ಪ್ರಾಂತದ ವಿಮೋಚನೆಯು ವಲ್ಲಭಬಾಯಿ ಪಟೇಲರಿಂದ ಸಾಧ್ಯವಾಯಿತೆಂದು, ಅವರ ಮೂರ್ತಿ ಸ್ಥಾಪಿಸಿರುವುದು; ಆಳುವ ಸರಕಾರಗಳು ಈ ಪ್ರಾಂತವನ್ನು ನಿರ್ಲಕ್ಷಿಸುತ್ತ ಬಂದಿವೆಯೆಂದು; ಅದಕ್ಕಾಗಿ ‘ಪ್ರತ್ಯೇಕ ರಾಜ್ಯ’ದ ಬೇಡಿಕೆಯನ್ನಿಟ್ಟು ಹೋರಾಟವನ್ನು ಸಂಘಟಿಸುತ್ತಿರುವುದು; ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಲು ಸರಕಾರವು ಡಾ. ಡಿ.ಎಂ. ನಂಜುಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ, ಅದರಿಂದ ವರದಿಯನ್ನು ಪಡೆದಿರುವುದು; ಇದಕ್ಕಿಂತ ಹಿಂದೆಯೇ ಈ ಪ್ರಾಂತದ ಅಭಿವೃದ್ಧಿಗಾಗಿ ‘ಹೈದರಾಬಾದು ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ಯನ್ನು ಸ್ಥಾಪಿಸಿದ್ದುದು; ಕೇಂದ್ರ ಸರಕಾರದಿಂದ ನೆರವನ್ನು ಪಡೆಯಲು ಸಂವಿಧಾನದ ೩೭೧ ಪರಿಚ್ಛೇದದ ಪ್ರಯೋಜನ ಪಡೆಯಲು ಪ್ರಯತ್ನ ನಡೆಸಿದ್ದುದು;

ಮೂವತ್ತು ವರ್ಷಗಳಾದರೂ ಕೃಷ್ಣಾ ಕೊಳ್ಳದ ಯಾವ ನೀರಾವರಿ ಯೋಜನೆಗಳು ಪೂರ್ತಿಯಾಗದೆ ಉಳಿದಿರುವುದು ಮುಂತಾದ ಸಂಗತಿಗಳಿಂದ ಈ ಪ್ರಾಂತ ಗಮನ ಸೆಳೆಯುತ್ತಿದೆ. ಯಾಕೆ ಇಂಥ ಬೆಳವಣಿಗೆಗಳು ಈ ಪ್ರಾಂತದಲ್ಲಿ ನಡೆಯುತ್ತಿವೆ? ಮತ್ತು ‘ಹೈದರಾಬಾದು ಕರ್ನಾಟಕ’ ಎಂದರೆ ಫ್ಯೂಡಲ್ ವ್ಯವಸ್ಥೆ ಇನ್ನೂ ಜೀವಂತವಾಗಿರುವುದು, ಅತಿಯಾದ ಶೋಷಣೆಯಿರುವುದರಿಂದಲೇ ಅಭಿವೃದ್ಧಿಯಾಗಲು ಸಾಧ್ಯವಾಗಿಲ್ಲದುರುವುದು, ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲದ ಸಂಘಟನೆಗಳು ತಲೆ ಎತ್ತುತ್ತಿರುವುದು, ದುಡಿಯುವ ವರ್ಗ ಬಡತನದಿಂದ ವಲಸೆ ಹೋಗುತ್ತಿರುವುದು, ಶೈಕ್ಷಣಿಕವಾಗಿ, ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿಯೇ ಪೂರ್ಣ ಹಿಂದುಳಿದಿರುವುದು ಮುಂತಾದ ಸಂಗತಿಗಳು ಈ ಪ್ರಾಂತದ ಬೆನ್ನಿಗೆ ಸೇರಿಕೊಂಡಿರುವುದು ಸಾಮಾನ್ಯವಾಗಿದೆ.

ಬಹಮನಿ-ಆದಿಲ್‍ಶಾಹಿಗಳ ಕಾಲದಿಂದ ಹಿದಿದು ನಿಜಾಮರ ಕಾಲದವರೆಗೆ ಸುಮಾರು ೬೦೦ ವರ್ಷಗಳ ಕಾಲ ಮುಸಲ್ಮಾನರ ಆಳ್ವಿಕೆ ಇದ್ದರೂ ಯಾಕೆ ಈ ಪ್ರಾಂತದ ಮುಸ್ಲಿಮ್ ಸಮುದಾಯಗಳು ಉರ್ದು ಭಾಷೆಯನ್ನು ಕಲಿಯಲಿಲ್ಲ? ಧಾರ್ಮಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಯಾಕೆ ದುರ್ಬಲರಾಗಿಯೇ ಉಳಿದಿದ್ದಾರೆ? ಮುಸ್ಲಿಮ್ ಪ್ರಭುತ್ವ ಇದ್ದಾಗಲೂ ಮುಸ್ಲಿಮೇತರರೇ ಉರ್ದು ಭಾಷೆಯಲ್ಲಿ ಶಿಕ್ಷಣವನ್ನು ಪಡೆದು ಸಕಲ ಸೌಲಭ್ಯವನ್ನು ಪಡೆಯಲು ಸಾಧ್ಯವಾಯಿತು. ಧಾರ್ಮಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಸಬಲರಾಗಿಯೇ ಮುನ್ನಡೆಯಲು ಸಾದ್ಯವಾಯಿತು? ಮುಂತಾದ ಪ್ರಶ್ನೆಗಳು ಕುತೂಹಲ ಹುಟ್ಟಿಸುತ್ತವೆ?

ಸ್ವಾತಂತ್ರ್ಯೋತ್ತರ ಕಾಲದಿಂದಲೂ ಈ ಪ್ರಾಂತದಲ್ಲಿ ಯಾಕೆ ಸಾಕ್ಷರತೆಯ ಪ್ರಮಾಣವು ಗಣನೀಯವಾಗಿ ಇಳಿಮುಖವಾಯಿತು. ಐವತ್ತು ವರ್ಷಗಳಾದರೂ ಶೈಕ್ಷಣಿಕ ತೀರಾ ಹಿಂದುಳಿಯಲು ಕಾರಣಗಳೇನು? ಯಾಕೆ ಈ ಪ್ರಾಂತದ ಹತ್ತಾರು ನೀರಾವರಿ ಯೋಜನೆಗಳು ಮೂವ್ವತ್ತು ವರ್ಷಗಳಾದರೂ ಪೂರ್ಣಗೊಳ್ಳಲು ಸಾಧ್ಯವಾಗಿಲ್ಲ ? ಈ ಪ್ರಾಂತದಲ್ಲಿ ಅಭಿವೃದ್ಧಿ ಎನ್ನುವುದು ಯಾಕೆ ಗಗನ ಕುಸುಮವಾಗಿ ಪರಿಣಮಿಸಿದೆ? ಮುಂತಾದ ಹತ್ತಾರು ಪ್ರಶ್ನೆಗಳಿಗೆ ಇ ಅಧ್ಯಯನದಲ್ಲಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಲಾಗಿದೆ.

ಈ ಹೊತ್ತಿನ ‘ಹೈದರಾಬಾದು ಕರ್ನಾಟಕ’ ದ ಭೌಗೋಳಿಕ ವ್ಯಾಪ್ತಿಯನ್ನು ಗಮನದಲ್ಲಿಟ್ಟುಕೊಂಡು. ಈ ಭೌಗೋಳಿಕ ಪರಿಸರದ ಸಾಂಸ್ಕೃತಿಕ ಚರಿತ್ರೆಯನ್ನು ಅವಲೋಕಿಸುವ ಪ್ರಯತ್ನ ಇಲ್ಲಿದೆ. ಮೌರ್ಯರ ಕಾಲದಿಂದ ಹಿಡಿದು ಈ ಹೊತ್ತಿನ ಆಧುನಿಕ ಪ್ರಭುತ್ವದವರೆಗಿನ ಕಾಲಾವಧಿಯಲ್ಲಿ ಪ್ರಭುತ್ವ, ಧರ್ಮ, ಭಾಷೆ, ಸಾಹಿತ್ಯ ಮತ್ತು ಸಮಾಜಗಳ ನಡುವಿನ ಸಂಬಂಧವನ್ನು ತಿಳಿಯಲು ಪ್ರಯತ್ನಿಸಲಾಗಿದೆ. ‘ಹಾಡು ಪಾಡು’ ಎಂಬ ನುಡಿಗಟ್ಟಿಗೆ ವಿಶಾಲವಾದ ಅರ್ಥವಿದೆ. ಸಾಂಸ್ಕೃತಿಕ ಅಧ್ಯಯನ ಎಂಬುದಕ್ಕೆ ಸಂವಾದಿಯಾಗಿ ಇಲ್ಲಿ ಬಳಸಲಾಗಿದೆ. ಈ ಅಧ್ಯಯನದಲ್ಲಿ ಚರಿತ್ರೆಯನ್ನು ಸೃಜನಾತ್ಮಕ ಪ್ರತಿಕ್ರಿಯೆಯ ಮಾದರಿಯಲ್ಲಿ ಮರುಗ್ರಹಿಸಲಾಗಿದೆ.

ಕನ್ನಡ ಭಾಷಾಭಿವೃದ್ಧಿ ವಿಭಾಗದ ಡಾ. ಕೆ.ವಿ.ನಾರಾಯಣ, ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಡಾ. ರಹಮತ್ ತರೀಕೆರೆ, ಅಭಿವೃದ್ಧಿ ಅಧ್ಯಯನ ವಿಭಾಗದ ಶ್ರೀ ಟಿ.ಆರ್. ಚಂದ್ರಶೇಖರ್ ಅವರು ಈ ಕೃತಿಯನ್ನು ಓದಿ ಉಪಯುಕ್ತ ಸಲಹೆಗಳನ್ನು ನೀಡಿದ್ದಾರೆ. ಇವರೆಲ್ಲರ ಸಲಹೆಗಳನ್ನು ಈ ಕೃತಿಯಿಂದ ಅಳವಡಿಸಿಕೊಳ್ಳಲು ಕಾಲಾವಕಾಶದ ಕೊರತೆಯಿಂದ ಸಾಧ್ಯವಾಗಿಲ್ಲ. ಅವರ ಸಲಹೆಗಳು ನನ್ನ ಮುಂದಿನ ಅಧ್ಯಯನಗಳಲ್ಲಿ ಅಳವಡುತ್ತವೆ.

ಈ ಯೋಜನೆಗೆ ಅವಕಾಶವನ್ನು ಕಲ್ಪಿಸಿಕೊಟ್ಟ ಕುಲಪತಿಗಳಾದ ಡಾ. ಎಚ್.ಜೆ. ಲಕ್ಕಪ್ಪಗೌಡ ಅವರಿಗೆ, ಪ್ರೋತ್ಸಾಹಿಸಿದ ಅಧ್ಯಯನಾಂಗದ ನಿರ್ದೇಶಕರಾದ ಡಾ. ಕರೀಗೌಡ ಬೀಚನಹಳ್ಳಿ ಮತ್ತು ಪ್ರಸಾರಾಂಗದ ನಿರ್ದೇಶಕರಾದ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೆ ನನ್ನ ಕೃತಜ್ಞತೆಗಳು.

ವಿಭಾಗದ ಯೋಜನೆಗಳಿಗೆ ಸಲಹೆ ನೀಡುವ ಡಾ. ಬಿ.ಎಂ.ಪುಟ್ಟಯ್ಯ, ಡಾ.ವೆಂಕಟೇಶ ಇಂದ್ವಾಡಿ, ಡಾ.ಶಿವಾನಂದ ವಿರಕ್ತಮಠ, ಡಾ.ಎಚ್.ನಾಗವೇಣಿ, ಡಾ.ಮಾಧವ ಪೆರಾಜೆ, ಡಾ. ಮಲ್ಲಿಕಾರ್ಜುನ ವಣೇನೂರು ಇವರಿಗೆ ನನ್ನ ಕೃತಜ್ಞತೆಗಳು.

ಸಹಾಯಕ ನಿರ್ದೇಶಕರಾದ ಶ್ರೀ ಸುಜ್ಞಾನಮೂರ್ತಿ, ಕೆ.ಎಲ್.ರಾಜಶೇಖರ್, ಕಲಾವಿದ ಕೆ.ಕೆ.ಮಕಾಳಿ, ಕೆ.ಎಂ. ಪಾರ್ವತಮ್ಮ, ಭೀಮೇಶ, ಯು.ಮಲ್ಲಿಕಾರ್ಜುನ, ಡಿ.ಟಿ.ಪಿ. ಮಾಡಿದ ಸೋಮನಾಥ ಕುಡಿತಿನಿ, ರಾಜಶೇಖರ ಹಳೆಮನೆ ಇವರೆಲ್ಲರ ನೆರವನ್ನು ಈ ಸಂದರ್ಭದಲ್ಲಿ ನೆನೆಯುತ್ತೇನೆ.

ಅಮರೇಶ ನುಗಡೋಣಿ
ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗ