ಗೊಂಬೆಯಾಟ ವಿಶ್ವವ್ಯಾಪಿಯಾಗಿರುವ ಒಂದು ಜನಪದ ಕಲೆಯಾಗಿದೆ. ಮಾನವನ ಅಭಿನಯ ಕಲೆ, ಪ್ರಾರಂಭದ ಹಂತದಲ್ಲಿ, ಅಭಿವ್ಯಕ್ತಗೊಳ್ಳುತ್ತ ಬಂದಿರುವುದಕ್ಕೆ ಈ ಗೊಂಬೆಯಾಟ ಉತ್ತಮ ಮಾಧ್ಯಮವಾಗಿ ಬರುತ್ತದೆ. ಬದುಕಿನ ಪ್ರತಿಬಿಂಬ ಎನ್ನುವಂತೆ. ಸೂತ್ರಧಾರನು ತನ್ನ ಕೈಚಳಕದಿಂದ ಈ ಆಟದಲ್ಲಿ ಗೊಂಬೆಗಳನ್ನು ಕುಣಿಸುತ್ತ ಬಂದಿದ್ದಾನೆ. ಹೀಗೆ ಆಟ ಆಡಿಸುವ ಸೂತ್ರಧಾರನ ಕಲಾವಂತಿಕೆಗೆ ತಲೆದೂಗುತ್ತ ಮೈ ಜಿಡ್ಡು ಹಗುರು ಮಾಡಿಕೊಳ್ಳಬಹುದಾಗಿದೆ. ಜೊತೆಗೆ ಹೆಚ್ಚಿನ ತಿಳಿವನ್ನು, ಬುದ್ಧಿಯನ್ನೂ ದೊರಕಿಸಿಕೊಂಡು ಹೆಮ್ಮೆ ಪಟ್ಟುಕೊಳ್ಳಬಹುದು.

ಗೊಂಬೆಯಾಟವನ್ನು ಹಿಂದಿ ಭಾಷೆಯಲ್ಲಿ ’ಕಟಪುತಲಿ’ ಎಂದು ಕರೆಯುವರು. ಅದೇ ರೀತಿಯಾಗಿ ಮರಾಠಿಯಲ್ಲಿ ’ಕಳಸೂತ್ರಿ ಬಿಂಹಾಯಿ’ ಎಂದೂ ತೆಲುಗಿನಲ್ಲಿ ’ಬೊಮ್ಮಲಾಟ’ ಎಂದೂ ಇಂಗ್ಲಿಷಿನಲ್ಲಿ puppetry, puppet show, shadowplay ಎಂದೂ ಕರೆಯುವರು.

ಗೊಂಬೆಯಾಟದಲ್ಲಿ ಸೂತ್ರಕ್ಕೆ ಹೆಚ್ಚಿನ ಪ್ರಾಧಾನ್ಯ ಇರುತ್ತದೆ. Formula ಎನ್ನುವ ಅರ್ಥದ ಈ ಸೂತ್ರ ಗೊತ್ತಿದ್ದವರಿಗೆ ಮಾತ್ರ ಈ ಆಟದ ಗುಟ್ಟು ತಿಳಿಯಬಹುದಾಗಿದೆ. ಈ ಸೂತ್ರವನ್ನು ಕರಗತ ಮಾಡಿಕೊಂಡಿರುವ ಆಟಗಾರನನ್ನು ಸೂತ್ರಧಾರ. ಭಾಗವತ ಎಂದೂ ಕರೆಯುವವಾಡಿಕೆ. ದಾರದ ಸಹಾಯದಿಂದ ಗೊಂಬೆಗಳನ್ನು ಕುಣಿಸುವುದಕ್ಕೆ ಸೂತ್ರದ ಗೊಂಬೆಯಾಟವೆಂದೂ. ಕೈಗಳ ಬೆರಳುಗಳಿಂದ ಕುಣಿಸುವುದಕ್ಕೆ ಸೂತ್ರದ ಗೊಂಬೆಯಾಟವೆಂದೂ, ಕೈಗಳ ಬೆರಳುಗಳಿಂದ ಕುಣಿಸುವುದಕ್ಕೆ ಕೈಗೊಂಬೆಯಾಟವೆಂದೂ, ಛಡಿಯ ಸಹಾಯದಿಂದ ಕುಣಿಸುವುದಕ್ಕೆ ತೊಗಲು ಗೊಂಬೆಯಾಟವೆಂದೂ ಕರೆಯಲಾಗುತ್ತದೆ. ಅದೇ ರೀತಿ ಬಯಲಾಟ, ನಾಟಕ, ವಾಸ್ತುಶಿಲ್ಪದ ಹೊಣೆಹೊತ್ತವರಿಗೆ ಸೂತ್ರಧಾರ ಎಂದು ಕರೆಯುತ್ತ ಬಂದಿದ್ದಾರೆ. ಯಾರು ಇನ್ನೊಬ್ಬರನ್ನು ತನ್ನ ಅಧೀನದಲ್ಲಿಟ್ಟುಕೊಂಡು ತಮ್ಮ ಇಚ್ಛೆಯಂತೆ, ಹೇಳಿಕೆಯಂತೆ ನಡೆಯುವ ಹಾಗೆ ಮಾಡುತ್ತಾರೋ ಅಂಥವರನ್ನು ’ಸೂತ್ರಧಾರ’ ಎಂದು ಕರೆಯುವುದು ಈಗಲೂ ರೂಢಿಯಲ್ಲಿದ್ದ ಮಾತು. ಇನ್ನೊಬ್ಬನ ಜುಟ್ಟು ಈತನ ಕೈಯಲ್ಲಿ, ಈತನ ಕೈಗೊಂಬೆಯಾಗಿ ಆತ ಕುಣಿಯಬೇಕಾಗುತ್ತದೆ. ಇನ್ನೊಂದರ್ಥದಲ್ಲಿ ಈ ಪ್ರಪಂಚದಲ್ಲಿ ಜೀವಿಗಳೆಲ್ಲರೂ ಗೊಂಬೆಗಳೇ. ಜಗನ್ನಿಯಾಮಕನಾದ ಶಿವ ಇಲ್ಲಿ ಸೂತ್ರಧಾರ, ’ತನ್ನ ವಿನೋದಕ್ಕಾಗಿ ತಾನೇ ಸೃಷ್ಟಿಸಿದ ಸಕಲ ಪ್ರಪಂಚವನ್ನು ಆ ವಿಲಾಸ ಸಾಕಾದೊಡೆ ಮತ್ತೆ ಪರಿವನದರಮಾಮಾ ಸಾರಾವನು’ ಎಂದು ಮಹಾದೇವಿಯಕ್ಕ ಹಾಡಿದಂತೆ ಆಟ ಸಾಕೆನಿಸಿದಾಗ ಸೂತ್ರ ಸಡಿಲಾಗುತ್ತದೆ. ಪ್ರಪಂಚದಾಟ ನಿಂತುಹೋಗುತ್ತದೆ. ಅಣುರೇನೂ ತೃಣಕಾಷ್ಟ್ರದಲ್ಲಿ ಪೂರ್ಣನೆನಿಸಿದ ಶಿವನು ನಿತ್ಯವಲ್ಲದ ತನುವೆಂಬ ಗೊಂಬೆಯನ್ನು ಸೃಷ್ಟಿಸಿ ಆಟ ಆಡಿಸುತ್ತಾನೆಂದು ಕನಕದಾಸರು ನುಡಿದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಅದೇ ರೀತಿ ’ಎಂಬತ್ನಾಲ್ಕು ಲಕ್ಷ ಜೀವರಾಶಿಗಳ ಗೊಂಬೆಗಳ ಮಾಡಿ ಕುಣಿಸುವ ದೇವ ’ನನ್ನ ಪುರಂದರದಾಸರು ಹಾಡಿ ಕೊಂಡಾಡಿದ್ದಾರೆ.

ಗಾಳಿ, ಮಳೆ, ಗುಡುಗು, ಸಿಡಿಲು, ಬೇಸರಿಕೆಗಳಿಗೆ ಭಯಭೀತರಾಗಿ ದಾರಿಕಾಣದಾಗ ಶ್ರೀ ಸಾಮಾನ್ಯರು ಈ ಗೊಂಬೆಯಾಟ ಆಡಿಸಲು ದೇವರಿಗೆ ಹರಕೆ ಹೊರುವ ಸಂಪ್ರದಾಯವಿದೆ. ಗೊಂಬೆಯಾಟ ಆಡಿಸಿ, ದೇವದೇವತೆಗಳನ್ನು ಸಂತುಷ್ಟಪಡಿಸಿದರೆ ಮಳೆ ಬರುತ್ತದೆ. ರೋಗ, ರುಜಿನಗಳು ದೂರಾಗುತ್ತವೆ. ಪಾಪಹರಿಹಾರವಾಗುತ್ತದೆ ಎಂಬ ನಂಬಿಕೆಯಿರುವುದುರಿಂದ ಇವುಗಳ ಹಿನ್ನೆಲೆಯಲ್ಲಿ ಗೊಂಬೆಯಾಟ ಕಲೆ ಬದುಕಿಕೊಂಡು ಬಂದಂತಿದೆ. ಶ್ರೀಸಾಮಾನ್ಯರಿಂದ ಹಿಡಿದು ರಾಜಮಹಾರಾಜರೂ ಕೂಡ ಗೊಂಬೆಯಾಟಗಳನ್ನು ಆಮಂತ್ರಿಸಿ, ಆಡಿಸಲುಹಚ್ಚಿ, ಸಂತೋಷಪಟ್ಟು, ಪ್ರಜೆಗಳನ್ನೂ ಸಂತೋಷಗೊಳಿಸುತ್ತ ಬಂದಿದ್ದಾರೆ.

ಈ ಆಟಗಳನ್ನು ಎಂದಿನಿಂದ ಆಡಿಸುತ್ತ ಬಂದಿದ್ದಾರೆ ಎಂಬುದಕ್ಕೆ ಉತ್ತರ ಮೂಕವಾಗಿದೆ. ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ (೧೪೧೯-೧೪೪೬) ಆಗಿಹೋದ ನೂರೊಂದು ವಿರಕ್ತರಲ್ಲಿ ’ಗೊಂಬೆಯಾಡಿಸುವ ಕಾಯಕದ ಶಾಂತ’ ಹೆಸರಿನ ವಿಕ್ತನಿದ್ದನ್ನುವುದು ತಿಳಿದುಬರುತ್ತದೆ. ರಾಜನ ಆಹ್ವಾನ ಎದುರಿಸಿ, ಗೊಂಬೆಗಳಿಗೆ ಜೀವ ತುಂಬಿಸಿದ ಘಟನೆಗಳು ಕೇಳಬರುತ್ತವೆ. ಪಾರ್ವತಿದೇವಿ ತಾನು ಸ್ಥಾನಕ್ಕೆ ಹೋಗುವಾಗ ಮಣ್ಣುಗೊಂಬೆ ಮಾಡಿ ಅದಕ್ಕೆ ಜೀವತುಂಬಿದ ಪೌರಾಣಿಕ ಕಥೆಯೂ ಇದೆ. ಅನೇಕ ಸಾಧು ಸತ್ಪುರುಷರು ಗೊಂಬೆಗಳಿಗೆ ಜೀವ ನೀಡಿ ಪವಾಡಗಳನ್ನು ಮೆರೆದ ಹಲವಾರು ಉದಾಹರಣೆಗಳೂ ಜನಜನಿತವಾಗಿವೆ. ಗುಲಬರ್ಗಾ ಜಿಲ್ಲಾ ಕೋಳಕೂರ ಗ್ರಾಮದ ಸುತ್ತಮುತ್ತಲಿನ ಜನರು ಸೊಪ್ಪೆಯ ಬಸವಣ್ಣನ ಪವಾಡವನ್ನು ಈಗಲೂ ಹೇಳುತ್ತಿರುತ್ತಾರೆ. ಭರತ್ ಚಕ್ರವರ್ತಿಯ ಆಸ್ಥಾನಕ್ಕೆ ಭೆಟ್ಟಿಕೊಟ್ಟ ಕಲಾಕಾರರಲ್ಲಿ ಬೊಂಬೆಯಾಟದವರೂ ಇದ್ದರೆಂದು ಭರತೇಶವೈಭವ ಕಾವ್ಯ ಸೇರುತ್ತದೆ. ಶ್ರೀ ಹರ್ಷವರ್ಧನನ ನೃಷಧೀಯ ಚರಿತೆಯ ೧೮ನೇ ಸರ್ಗದ ೧೩ನೇ ಶ್ಲೋಕದಲ್ಲಿ ನಲರಾಜನು ಪ್ರಮೋದ ಭವನದಲ್ಲಿ ಗೊಂಬೆ ಆಟ ಆಡಿಸುವವರನ್ನು ಕರೆಸಿ ಆಟ ಆಡಿಸುತ್ತಿದ್ದ ವರ್ಣನೆ ಬರುತ್ತದೆ. ರಾಜಶೇಖರನ (೧೧ನೇಯ ಶತಮಾನ) ಬಾಲರಾಮಾಯಣ ನಾಟಕದ ೫ನೇ ಅಂಕದಲ್ಲಿ ಸೂತ್ರಧಾರನೊಬ್ಬನು ಸೀತೆ ಮತ್ತು ಅವಳ ಸಖಿ ಸಿಂಧೂರಿಕಾ ಅವರ ಗೊಂಬೆಗಳನ್ನು ಆಡಿಸುತ್ತಿದ್ದಾಗ ರಾವಣನು ಆ ಸೀತೆಯ ಗೊಂಬೆಯನ್ನು ನೋಡಿ ಸೀತೆಯೇ ಎಂದು ಭಾವಿಸಿ ಮುಟ್ಟಲು ಹೋಗಿ ನಿರಾಶನಾದ ಘಟನೆಯೊಂದಿದೆ. ಮಹಾಭಾರತ ಕಾವ್ಯದ ೧೫೦ನೇ ಶ್ಲೋಕದಲ್ಲಿ ಗೊಂಬೆಯಾಟದ ವಿಷಯ ಬರುತ್ತದೆ. ಪ್ರೀತಿಯಿಂದ ಗೊಂಬೆಗಳನ್ನು ಕಾಣಿಕೆಯಾಗಿ ಕೊಡುವ ವಿಷಯವೂ ಅನೇಕ ಕಾವ್ಯಗಳಲ್ಲಿ ದೊರಕುತ್ತದೆ. ೧೨ನೇ ಶತಮಾನದ ಗೋಯದೇವನ ಕಥಾಸರಿತ್ಯಾಗರದ ಮಾಯಾಸುರ ಎಂಬ ಕಥೆಯಲ್ಲಿ ಶಿಲ್ಪರಾಜನ ಮಗಳು ಸೋಮಪ್ರಭೆ ತನ್ನ ಸಖಿ ಕಲ್ಯಾಣಸೇನಾಳಿಗೆ ಕೀಲು ಗೊಂಬೆಗಳ ಪೆಟ್ಟಿಗೆಯೊಂದನ್ನು ಕಾಣಿಕೆಸಲ್ಲಿಸಿದ ವಿಷಯ ತಿಳಿದು ಬರುತ್ತದೆ. ಇದರಿಂದಾಗಿ ಗೊಂಬೆಯಾಟವಾಗಲಿ ಗೊಂಬೆಗಳ ಬಳಕೆಯಾಗಲಿ ಪ್ರಾಚೀನಕಾಲದಿಂದಲೂ ಜನತರೆಯಲ್ಲಿ ಇತ್ತು ಎಂಬುದಕ್ಕೆ ಹಲವಾರು ನಿದರ್ಶನಗಳಿವೆ.

ವಿಶ್ವದ ಅತ್ಯಂತ ಪ್ರಾಚಿನವಾದ ಈ ಗೊಂಬೆಯಾಟ ರಂಗ ಪ್ರದರ್ಶನ ಕಲೆಗಳಲ್ಲಿಯೆ ಮೊದಲಿನದೆಂದು ವಿದ್ವಾಂಸರು ಅಭಿಪ್ರಾಯ ತಾಳಿದ್ದಾರೆ. ಜಾನ್‌ಬಾಸೆಲ್ ಎನ್ನುವವರು ತಮ್ಮ ’ದಿ ಪಪೆಟ್ ಥೇಟರ್’ ಕೃತಿಯಲ್ಲಿ (P.13) ಗೊಂಬೆಯಾಟ ಅತಿ ಪ್ರಾಚೀನವಾದ ಕಲೆ ಎಂಬುದನ್ನು ಹೇಳಿದ್ದಾರೆ.

“Puppets have been shown from early times. No country or date can be given nor their birth. They appeared in ancient chinese religious ceremonies, in Indian magical rites and have been discovered in early Egyptian tombs.”

ಮಾನವನು ಮೊದಮೊದಲು ವೇಷಹಾಕಿ ಪಾತ್ರವಹಿಸುವುಕ್ಕೆ ಹೆರಿದಂತೆ ಕಾಣುತ್ತದೆ. ಅಂತೆಯೇ ಗೊಂಬೆಗಳನ್ನು ಕುಣಿಸಹತ್ತಿದನು. ಆ ಮೇಲೆ ತಾನೇ ಪಾತ್ರ ತೋಡುತ್ತ ಬಂದುದನ್ನು ಅರಿಯಬಹುದಾಗಿದೆ. ಹೀಗಾಗಿ ಜನಪದ ಬಯಲಾಟಗಳಿಗೂ ಸಂಸ್ಕೃತ ನಾಟಕಗಳಿಗೂ ಮೂಲವಾದುದು ಮತ್ತು ಪ್ರಾಚೀನವಾದುದು ಈ ಗೊಂಬೆಯಾಟ. ಇವುಗಳಲ್ಲಿ ಮೊದಲು ಹುಟ್ಟಿಕೊಂಡದ್ದು ಸೂತ್ರದ ಗೊಂಬೆಯಾಟ ನಂತರದ್ದು ತೊಗಲುಗೊಂಬೆಯಾಟ ಎಂಬುದನ್ನು ನಿರ್ಧರಿಸಬಹುದಾಗಿದೆ. ತೊಗಲುಗೊಂಬೆಯಾಟವನ್ನು ಒಂದು ಚಿಕ್ಕದಾದ ಆಟವೆಂದು ಬಗೆದು ಅವುಗಳನ್ನು ಆಡಿಸುವವರಿಗೆ ಶಿಳ್ಳೆಕ್ಯಾತರು ಎಂದು ಕರೆಯಲಾಗುತ್ತದೆ. ಉತ್ತರ ಕರ್ನಾಟಕದ  ಬೆಳಗಾವಿ, ಧಾರವಾಡ, ವಿಜಾಪುರ, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಈ ಆಟ ಆಡಿಸುವವರನ್ನು ಕಿಳ್ಳಿಕ್ಯಾತರೆಂದು ಕರೆಯುವವರು. ಗುಲಬರ್ಗಾ ಜಿಲ್ಲೆಯಲ್ಲಿ ಕಟಬರಾಟವೆಂದೂ ಕರೆಯುವರು. ಗುಲಬರ್ಗಾದ ಸಾಯಬಣ್ಣಾ ಶಟಬರ ಎಂಬವನ ತಂದೆ ಮತ್ತು ಅವರ ಅಜ್ಜ. ಮುತ್ತಜ್ಜರು ಈ ತೊಗಲುಗೊಂಬೆಯಾಟ ಆಡಿಸುತ್ತಿದ್ದುದು ತಿಳಿದುಬರುತ್ತದೆ. ಸಾಯಬಣ್ಣ ಮತ್ತು ಅನ ಸಹೋದರರೂ ಈ ಕಲೆಯನ್ನು ತಂದೆಯಿಂದ ಕಲಿತು ಗೊಂಡಿಲ್ಲ. ತಮ್ಮಲ್ಲಿದ್ದ ನೂರಾರು ತೊಗಲಿನ ಗೊಂಬೆಗಳನ್ನು ತಂದು ನಮ್ಮ ವಿಶ್ವವಿದ್ಯಾಲಯಕ್ಕೆ ಕೊಟ್ಟಿದ್ದಾರೆ. ಸಾಬಣ್ಣನ ಪೂರ್ವಜರು ವಿಜಾಪುರ ಜಿಲ್ಲೆಯ ದೇವಣಗಾಂವದವರೆಂದೂ ತಿಳಿದುಬರುತ್ತದೆ. ಗುಲಬರ್ಗಾ ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರ ಎಂಬುವನು ಕಟಬರವನು. ತನ್ನ ತಂದೆ ಮತ್ತು ಕಕ್ಕಂದಿರಂತೆ ಈ ಶಂಕರನೂ ಗೊಂಬೆಗಳನ್ನು  ಆಡಿಸುವಂಥವನಾಗಿದ್ದಾನೆ. ಇವನ ಸಂಬಂಧಿಕರು ವಿಜಾಪುರ ಜಿಲ್ಲೆ ಸಾಲೋಟಗಿಯಲ್ಲಿದ್ದು ಅಲ್ಲಿ ಸಾವಿರಾರು ಗೊಂಬೆಗಳು ಇರುತ್ತವೆ. ಚಿಂಚೋಳಿ ತಾಲೂಕಿನ ಬೊಮ್ಮನಖೇಡದ ಭೀಮಪ್ಪ, ಮೈಂದರ್ಗಿ ಗ್ರಾಮದ ಬಾಪು ಕ್ಷೇತ್ರಿ ಮತ್ತು ಈತನ ಮಗ ರಾಚುಕ್ಷೇತ್ರಿ ಅದೇ ಗ್ರಾಮದ ಉಪ್ಪಾರ ಮಾರೂತಿ, ಆಳಂದ ತಾಲೂಕಿನ ಕರೂರ ಗ್ರಾಮದ ರಾಮಚಂದ್ರ ಮೊದಲಾದವರು ಗೊಂಬೆಯಾಟ ಆಡಿಸುವಲ್ಲಿ ಹೆಸರುವಾಸಿಯಾಗಿದ್ದಾರೆ.

ಮೈಂದರ್ಗಿಯ ರಾಚು ಮತ್ತು ಮಾರುತಿ ಉಪ್ಪಾರ ಇವರಿಬ್ಬರೂ ಸೇರಿಕೊಂಡು ಅರಬರಾಟದ ಕಥೆಯನ್ನು ರಚಿಸಿದ್ದಾರೆ. ಇವರಿಬ್ಬರೂ ಸ್ವತಃ ಗೊಂಬೆಯಾಟ ಆಡಿಸುವ ಕಲಾಕಾರರಾಗಿದ್ದು ರಾಚು  ಹಾಡುಗಾರಿಕೆಯಲ್ಲೂ, ಮಾರುತಿ ಡಪ್ಪ ಬಾರಿಸುವಲ್ಲೂ, ಪಳಗಿದವರಾಗಿದ್ದರು. ಅಂತೆಯೇ ತೊಗಲುಗೊಂಬೆ ಆಟಕ್ಕೊಂದು ’ಅರಬರಾಟ’ ಕಥೆಯೊಂದನ್ನು ಈ ಸ್ನೇಹಿತರಿಬ್ಬರೂ ಸೇರಿಕೊಂಡು ರಚಿಸಲು ಉತ್ಸುಕರಾಗುತ್ತಾರೆ. ಅದೇ ರೀತಿ ಮೊದಲಿಗರಾಗಿ ಈ ಕಥೆಯನ್ನು ಅನುಸರಿಸಿ ಮಾದನ ಹಿಪ್ಪರಗಾ, ನಿಂಬರ್ಗಿ, ಅಕ್ಕಲಕೋಟ, ಮೈಂದರ್ಗಿಭಾಗಗಳಲ್ಲಿ ಗೊಂಬೆಯಾಟ ಆಡಿಸಿ ಜನರ ಪ್ರೀತಿಯನ್ನು ಗಳಿಸಿಕೊಂಡ ವಿಷಯ ಜನರಿಂದ ತಿಳಿದುಬರುತ್ತದೆ. ಮುಂದೆ ಈ ಅರಬರಾಟ ಕಥೆಯನ್ನು ಗೊಂಬದಲಿಗರ ಆಟದಲ್ಲೂ. ಡಪ್ಪಿ ನಾಟಕದಲ್ಲೂ ಉಪಯೋಗಿಸಿಕೊಂಡು ಆಟ ಆಡಿಸಿದರೆಂದೂ ಜನವದಂತಿಯಿದೆ. ಅರಬರಾಟ ಸಾಮಾಜಿಕ ಕಥೆಯಾಗಿದ್ದು ವಾಸ್ತವಿಕ ಘಟನೆಯೊಂದರ ಆಧಾರವಿಟ್ಟುಕೊಂಡು ಈಕಥೆ ರಚಿಸಿರುವ ವಿಷಯ ತಿಳಿದುಬರುತ್ತದೆ. ದೇವರು ಪ್ರತ್ಯಕ್ಷ ಆಗುವುದು, ಸತ್ತವರನ್ನು ಬದುಕಿಸುವುದು, ವಚನಭ್ರಷ್ಟರನ್ನು, ದುಷ್ಟರನ್ನು ಕೈಗೂಡಿಸಿ ಕೊಡುವುದು-ಈ ಮೊದಲಾದ ವಿಷಯಗಳು ಸಂಪ್ರದಾಯಕ್ಕೆ ಜೋತು ಬಿದ್ದು ಈ ಆಟದಲ್ಲಿ ಚಿತ್ರಣಗೊಂಡಿವೆ. ಕಾಮವಾಸನೆಯ ಬಲೆಗೆ ಬಿದ್ದು, ಏನೆಲ್ಲ ಮಾಡಲು ಹೇಸದ ಜನತೆಗೆ ಈ ಕಥೆಯು ಪಾಠಕಲಿಸುವಂತಿದೆ. ಕಾಮುರಿಂದ ಅತಿಪ್ರಾಚೀನ ಕಾಲದಿಂದಲೂ ಇಂಥ ನೀಚತನದ ಕೃತ್ಯಗಳು ನಡೆಯುತ್ತ ಬಂದಿರುತ್ತವೆ. ಅವುಗಳನ್ನು ತಡೆಗಟ್ಟಿ ನೈತಿಕ ನೆಲಗಟ್ಟಿನ ಮೇಲೆ ಜೀವನ ಸಾಗುವಂತೆ ಮಾಡುವ ಪ್ರಯತ್ನ ಈ ಆಟದಲ್ಲಿ ಅಡಕವಾಗಿದೆ. ಮಹಾರಾಷ್ಟ್ರದ ಗಡಿಗುಂಟ ಮೊದಮೊದಲು ಈ ಅರಬರಾಟ ಕಥೆ ಗೊಂಬೆಯಾಟ, ಗೊಂದಲಿಗರ ಆಟಗಳಲ್ಲಿ ಪ್ರದರ್ಶನಗೊಂಡು ಮುಂದೆ ಡಪ್ಪಿನಾಟವಾಗಿ ಜಯಭೇರಿ ಬಾರಿಸಿದೆ.

ರಾಜು ಮತ್ತು ಮಾರುತಿ ಕವಿಗಳು ಅದೇ ಗ್ರಾಮದ ಮುಸಲ್ಮಾನ ಸಂತ ಗೈಬಿಪೀರನ ಶಿಷ್ಯರಾಗಿದ್ದ ವಿಷಯ ಅವರ ಹಾಡುಗಳ ಅಂಕಿತದ ಮೇಲಿಂದ ತಿಳಿದು ಬರುತ್ತದೆ. ಊರ ಮಧ್ಯದಲ್ಲಿ ಈ ಗೈಬಿಪೀರನ ಗದ್ದುಗೆಯೂ ಇದ್ದು ಅವನ ಆಶೀರ್ವಾದದಿಂದ ತಮ್ಮ ಕಲೆ ವಿಕಾಸಗೊಂಡದ್ದನ್ನು ಈ ಕಲಾಕಾರರು ಸ್ಮರಿಸಿಕೊಳ್ಳುತ್ತಿದ್ದರಂತೆ. ಅದೇ ರೀತಿ ರಾಚುಕವಿಯ ತಂದೆ ಬಾಪು ಕ್ಷೇತ್ರಿಕೂಡ ಕಲಾಕಾರನಿದ್ದು ಗೊಂಬೆಯಾಟ ಆಡಿಸುತ್ತಿದ್ದಂತೆ.

ರಾಯಚೂರು ಹಿಂದೊಮ್ಮೆ ತೊಗಲುಗೊಂಬೆಯಾಟಕ್ಕೆ ಹೆಸರು ಪಡೆದ ಜಿಲ್ಲೆ, ಈಗಲೂ ಈ ಜಿಲ್ಲೆಯ ಮಜಾನ್ವಿತಾಲೂಕಿನ ಕುರ್ಡಿ ಗ್ರಾಮದ ಕೃಷ್ಣಪ್ಪ ತೊಗಲುಗೊಂಬೆಯಾಡಿಸುವಲ್ಲಿ ಎತ್ತಿದ ಕೈ. ಇವನನ್ನು ಶಿಳ್ಳೀಕ್ಯಾತರ ಕೃಷ್ಣಪ್ಪ ಎಂದೇ ಕರೆಯುವರು. ಈ ಕಲೆ ಕೃಷ್ಣಪ್ಪನಿಗೆ ವಂಶಪಾರಂಪರ್ಯವಾಗಿ ಬಂದುದಾಗಿದೆ. ಚಕ್ಕಳದ ಗೊಂಬೆಗಳನ್ನು ಮಾಡಿ ಅವುಗಳಿಗೆ ಆಕಾರಕೊಟ್ಟು, ಜೀವತುಂಬಿ, ಹೊಸಲೋಕವನ್ನು ಸೃಷ್ಟಿ ಮಾಡುವ  ಕಲೆಗಾರಿಕೆ ಕೃಷ್ಣನದು. ಈ ಇಳಿವಯಸ್ಸಿನಲ್ಲೂ ಕೃಷ್ಣಪ್ಪ ಈ ಭಾಗದಲ್ಲಿ ಗೊಂಬೆಯಾಟ ಆಡಿಸುತ್ತಿದ್ದು ಹಲವಾರು ಲಕ್ಷ್ಮಣನೂ ತೊಗಲುಗೊಂಬೆ ಆಡಿಸುವುದನ್ನು ರೂಢಿಸಿಕೊಂಡಿದ್ದಾನೆ. ೧೯೮೬ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಕೃಷ್ಣಪ್ಪನಿಗೆ ತೊಗಲುಗೊಂಬೆಯಾಟದ ಶ್ರೇಷ್ಠ ಕಲಾಕಾರನೆಂದು ಗುರುತಿಸಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅದೇ ರೀತಿ ಇದೇ ಜಿಲ್ಲೆಯ ಕೊಪ್ಪಳ ತಾಲೂಕಿನ ಮೋರನಳ್ಳಿ ಗ್ರಾಮದ ದೊಡ್ಡ ಬಾಳಪ್ಪನಿಗೂ ಜಾನಪದ ಅಕಾಡೆಮಿಯು ಪ್ರಶಸ್ತಿ ನೀಡಿರುತ್ತದೆ. ಇವರಿಬ್ಬರೂ ಕಿಳ್ಳೀಕ್ಯಾತರ ಪಂಗಡಕ್ಕೆ ಸೇರಿದವರು. ಇದೇ ರೀತಿ ಬಳ್ಳಾರಿ ಜಿಲಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಯಡ್ರಾಮಿನ ಹಳ್ಳಿಯ ಕಿಳ್ಳೀಕ್ಯಾತರ ದೊಡ್ಡ ಭರಮಪ್ಪನನ್ನು ಅಕಾಡೆಮಿಯು ಪ್ರಶಸ್ತಿ ನೀಡಿ ಗೌರವಿಸಿದೆ. ಈತನ ಕಲೆ ಜರ್ಮನ್ ಮೊದಲಾದ ಪರದೇಶಗಳಲ್ಲೂ ಜಯಭೇರಿ ಬಾರಿಸಿದದು. ಅಭಿಮಾನದ ವಿಷಯವಾಗಿರುತ್ತದೆ.

ಈ ಆಟದ ಪ್ರಧಾನ ಗೊಂಬೆಗಳನ್ನು ಚಿಗರೆ ಚರ್ಮದಿಂದ ಸಿದ್ಧ ಪಡಿಸುತ್ತಿದ್ದರು. ಉಳಿದ ಗೊಂಬೆಗಳಿಗೆ ಎಮ್ಮೆ, ಕತ್ತೆಯ ಚರ್ಮಗಳನ್ನು ಉಪಯೋಗಿಸುತ್ತಿದ್ದರು. ಆಗೊಂಬೆಗಳಿಗೆ ರೇಖೆಗಳನ್ನು ಎಳೆದು ಅರದಾಳ ಇಲ್ಲವೆ ಗಿಡದ ತೊಪ್ಪಲಿನಿಂದ ತಯಾರಿಸಿದ ಬಣ್ಣವನ್ನು ಲೇಪಿಸುವುದುಂಟು. ಈ ಗೊಂಬೆಗಳನ್ನು ಮೊದಲು ಕಿಟ್ಟದಿಂದ ಮಾಡುವ ಪರಿಪಾಠವಿತ್ತಂತೆ. ರಾಯಚೂರ ಜಿಲ್ಲೆಯ ಕೊಪ್ಪಳ ತಾಲೂಕಿನ ’ಕಿನ್ನಾಳೆ’ ಗ್ರಾಮದಲ್ಲಿ ಹಿಂದಕ್ಕೆ ಗೊಂಬೆಗಳನ್ನು ತಯಾರಿಸುವ ಪ್ರಸಿದ್ಧ ಕಲಾಕಾರರಿದ್ದರಂತೆ. ಈ ಆಟದ ಗೊಂಬೆಗಳು ೧ ರಿಂದ ೬ ಫೂಟ ವರೆಗೂ ರಚನೆಗೊಂಡುದು ಕಂಡು ಬರುತ್ತದೆ. ನೇರವಾಗಿ ಈ ಗೊಂಬೆಗಳು ನಿಲ್ಲುವಂತಾಗಲು ಬಿದಿರಿನ ಕಡ್ಡಿಗಳಿಂದ ಜೋಡಿಸುವರು. ಅವುಗಳ ತಲೆ, ಎದೆ, ಕೈ ಕಾಲುಗಳು ಅಲ್ಲಾಡುವಂತಾಗಲು ದಾರದಿಂದ ಜೋಡಿಸುವರು. ಗೊಂಬೆಗಳ ಅವಯವಗಳನ್ನು ಬಿದಿರಿನ ಸಲಾಕೆಗಳಿಂದ ತಿವಿದಾಗ ಅವು ಅಲ್ಲಾಡುತ್ತವೆ. ಇಂಥ ಗೊಂಬೆಗಳನ್ನು ಬಿಳಿಯ ಪರದಯ ಮೇಲೆ ಒತ್ತಿಹಿಡಿಯುವರು. ಸಭಾಗೃಹದಲ್ಲಿ ಬೆಳಕಿರುವುದಿಲ್ಲ. ಪರದಯ ಹಿಂದೆ ಮಾತ್ರ ದೀಪ ಉರಸುತ್ತಾರೆ. ಆಗ ಆ ಪರದೆಯ ಹಿಂದೆ ಗೊಂಬೆಗಳ ನೆರಳು ಬೀಳುತ್ತದೆ. ಗೊಂಬೆಗಳ ದೇಹದ ವಿವಿಧ ಭಾಗಗಳಲ್ಲಿ ಕಟ್ಟಿದ ಬಿದಿರಿನ ಸಲಾಕೆಗಳಿಂದ ತಿವಿದಾಗ ಇಲ್ಲವೆ ಒತ್ತಿದಾಗ ಆ ಗೊಂಬೆಗಳು ಅಭಿನಯ ನೀಡಿದಂತೆ ಕಾಣಿಸಿಕೊಳ್ಳುತ್ತವೆ. ಸೂತ್ರಧಾರನು ಪರದೆಯ ಹಿಂದುಗಡೆ ನಿಂತು ಮಾತು, ಹಾಡು ಹೇಳಿ, ವಾದ್ಯ ಬಾರಿಸುತ್ತ ಕಥೆಯನ್ನು ಸಂಭಾಷಣೆಗಳ ರೂಪದಲ್ಲಿ ನಡೆಸಿಕೊಂಡು ಹೋಗುತ್ತಾನೆ. ಹೀಗೆ ಪ್ರದರ್ಶನಗೊಳ್ಳುವ ಈ ಕಲೆ ಪ್ರೇಕ್ಷಕರಿಗೆ ಮನರಂಜನೆ ನೀಡಿ ಜೊತೆಗೆ ನೀತಿಯ ಪಾಠವನ್ನು ಕಲಿಸುವಲ್ಲಿ ಸಹಾಯಕಾರಿಯಾಗಿರುತ್ತದೆ. ಕಿಳ್ಳಿಕ್ಯಾತ ಮತ್ತು ಬಂಗಾರಕ್ಕ ಪಾತ್ರಗಳು ಹಾಸ್ಯರಸಕ್ಕೆ ಹೇಳಿ ಮಾಡಿಸಿದ ಪಾತ್ರಗಳಾಗಿರುತ್ತವೆ. ಹಾಡಿನ ಧಾಟಿ ಮೂಡಲಪಾಯ ದೊಡ್ಡಾಟದ್ದು. ವಾದ್ಯಗಳಲ್ಲಿ ಡೋಲು, ಗೆಜ್ಜೆ ಪ್ರಮುಖ.

ಗೊಂಬೆಯಾಟಗಳಿಗೆ ಪೌರಾಣಿಕ ಕಥೆಗಳನ್ನೇ ಆಯ್ದುಕೊಳ್ಳುವ ಪರಿಪಾಠವಿರುತ್ತದೆ. ರಾಮಾಯಣ, ಮಹಾಭಾರತ ಕಥೆಗಳಿಗೂ ಸಂಬಂಧಿಸಿದಂತೆ ಕಥೆಗಳು ಗೊಂಬೆಯಾಟಕ್ಕೆ ರಚನೆಗೊಂಡಿರುತ್ತದೆ. ಇತ್ತೀಚೆಗೆ ಐತಿಹಾಸಿಕ ಮತ್ತು ಸಾಮಾಜಿಕ ಕಥೆಗಳನ್ನು ಆಯ್ದುಕೊಂಡು ಆಟ ಆಡಿಸುತ್ತಲೂ ಬಂದಿದ್ದಾರೆ. ಲಂಕಾದಹನ ರಾಮಾಯಣ, ಸುಂದರಕಾಂಡ, ವೀರಅಭಿಮನ್ಯ, ಬಬ್ರುವಾಹನ, ಕೀಚಕವಧೆ, ದಶಾವತಾರದ ಕಥೆಗಳು, ಪಾರಿಜಾತದ ಕಥೆ, ಭಸ್ಮಾಸುರ, ಯಮಾತಿ, ರತಿಕಲ್ಯಾಣ, ಗಿರಿಜಾಕಲ್ಯಾಣ, ಸೀತಾ ಸ್ವಯಂವರ, ಭೀಷ್ಮವಿಜಯ ಈ ಮೊದಲಾದ ಆಟಗಳನ್ನು ಈ ಭಾಗದಲ್ಲಿ ಆಡಿಸುವುದುಂಟು. ಕಥೆಗಳನ್ನೇ ಎತ್ತಿಕೊಂಡು ಬಯಲಾಟಗಳು ನಡೆಯತೊಡಗಿದವು. ಹೀಗಾಗಿ ಇಂದು ಬಯಲಾಟಗಳಿಗೆ ರಚನೆಗೊಂಡು ಕಥೆಗಳನ್ನು ಗೊಂಬೆಯಾಟಕ್ಕೂ ಗೊಂಬೆಯಾಟಕ್ಕೆ ರಚನೆಗೊಂಡ ಕಥೆಗಳನ್ನು ಬಯಲಾಟಗಳಿಗೂ ಉಪಯೋಗಿಸುವ ವಾಡಿಕೆಯಿದೆ. ಇಷ್ಟೇ ಬಯಲಾಟದಲ್ಲಿ ಇರುವ ಉದ್ದುದ್ದ ಮಾತುಗಳನ್ನು ಗೊಂಬೆಯಾಟಗಳಲ್ಲಿ ಮೊಟಕುಗೊಳಿಸುವರು. ಹೈದ್ರಾಬಾದ ಕರ್ನಾಟಕದಲ್ಲಿರುವ ಈ ಆಟದ ವೈಶಿಷ್ಟ್ಯ ಮುಖ್ಯವಾಗಿ ಭಾಷೆಯಲ್ಲಿ. ತೆಲುಗರ ಗೊಂಬೆರಾಮರ ಪ್ರಭಾವದಿಂದ ತೆಲುಗನ್ನೂ, ಮಹಾರಾಷ್ಟ್ರದ ಕಟಬರ ಪ್ರಭಾವದಿಂದ ಮರಾಠಿಯನ್ನೂ, ಬೀದರ ಜಿಲ್ಲೆಯಲ್ಲಿ ಉರ್ದು, ಮರಾಠಿ, ರಾಯಚೂರದಲ್ಲಿ ತೆಲುಗು, ಮರಾಠಿ, ಗುಲಬರ್ಗಾದಲ್ಲಿ ಮರಾಠಿ ಪ್ರಭಾವ ಇದ್ದದ್ದು ತಿಳಿದುಬರುತ್ತದೆ. ಅರಸರ ಪ್ರೀತಿ ಸಂಪಾದನೆಗಾಗಿ ಉರ್ದುಭಾಷೆಯನ್ನೂ ಕನ್ನಡದಲ್ಲಿ ಬೆರೆಸುತ್ತಾರೆ.

ಇಂದಿನ ವೈಜ್ಞಾನಿಕ ಯುಗದಲ್ಲಿ ಈ ಗೊಂಬೆಯಾಟಗಳನ್ನು ಯಾರು ಕೇಳುವವರು? ಎಂದು ಮರುಗಬೇಕಾಗಿಲ್ಲ. ಆಟದ ಮೂಲಸ್ವರೂಪದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡು ಮೂಕ ಅಭಿನಯದಂತಹ ಛಾಯಾ ಚಿತ್ರಗಳನ್ನು ಪ್ರದರ್ಶಿಸುತ್ತಲಿದ್ದಾರೆ. ಮನರಂಜನೆ ಇಲ್ಲವೆ ನೀತಿಬೋಧೆಯೊಂದೇ ಇವುಗಳ ಉದ್ದೇಶವಲ್ಲ. ಶಿಕ್ಷಣ ಪ್ರಸಾರ, ಹಸಿರು ಕ್ರಾಂತಿ, ಕುಟುಂಬ ಯೋಜನೆ, ಆರೋಗ್ಯ ಶಿಕ್ಷಣ ಮುಂತಾದ ಹಲವಾರು ಯೋಜನೆಗಳ ಪ್ರಸಾರಕ್ಕಾರ‍್ಯಕ್ಕಾಗಿಯೂ ಈ ಗೊಂಬೆಯಾಟಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ತೆಲುಗು ಗೊಂಬೆಯಾಟದ ತಂತ್ರವನ್ನೇ ಬಳಸಿಕೊಂಡು ಇಂದಿನ ಚಿತ್ರಗಳು ರೂಪಗೊಂಡಿರುತ್ತದೆ. ಮೂಲಕಲೆಯನ್ನುಮೂಲೆಗೊತ್ತಿ. ತುದಿಗೆ ಜೋತು ಬೀಳುವಂತಾಗಬಾರದು.

ಇಂದು ಈ ಕಲೆಯನ್ನು ಮೂಲಸ್ವರೂಪದಲ್ಲಿ ಉಳಿಸಿಕೊಳ್ಳುವ ಪ್ರಯತ್ನ ನಡೆಯಬೇಕಾಗಿದೆ. ಬರಿಯ ಪ್ರದರ್ಶನ. ಪ್ರಶಸ್ತಿ ನೀಡಿ ಹಾಡಿ ಹೊಗಳುವದಲ್ಲಿಯೆ ಸಮಾಧಾನಪಟ್ಟುಕೊಳ್ಳದೆ ಆ ಹಿರಿಯ ಕಲಾಕಾರರನ್ನು ಕೋಚ್ ಎಂದು ಶಾಲೆ ಕಾಲೇಜುಗಳಲ್ಲಿ ನಿಯಮಿಸಿಕೊಂಡು ಅವರಿಂದ ವಿದ್ಯಾರ್ಥಿಗಳಿಗೆ ಒಂದಾದರೂ ಜನಪದ ಕಲೆಯಲ್ಲಿ ತರಬೇತಿ ಕೊಡಿಸುವಂತಾಬೇಕು. ಅದಕ್ಕೆಂದು ಕಾಲೇಜುಗಳಲ್ಲಿ ಅದರಲ್ಲೂ ಪದವಿ ಪರೀಕ್ಷೆಗಳಿಗೆ ಈ ಕಲೆಯ ಪ್ರಾಯೋಗಿಕ ಅರಿವು ಕಡ್ಡಾಯವಾಗಿ ಅದು ಪಠ್ಯ ಕ್ರಮದಲ್ಲಿ ಸೇರ್ಪಡೆಯಾಗಬೇಕು. ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳು ಮೇಜರ್ ವಿಷಯವನ್ನಾಗಿ ಅಧ್ಯಯನ ಮಾಡುವ ಅವಕಾಶ ಒದಗಿಸಿಕೊಟ್ಟದ್ದನ್ನು ಇಲ್ಲಿ ಉದಾಹರಿಸಬಹುದಾಗಿದೆ. ‘At the university of California at Los Angeles puppetry was offered as a major course in the Theater-Arts Department  ಬ್ರಿಟಾನಿಕಾ ವಿಶ್ವ ಕೋಶ ಸಂ. ೧೮, ಪುಟ ೮೭೫)

ಗೊಂಬೆಯಾಟ ಕಲೆ ಜಾನಪದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲುಗಲ್ಲಾಗಿದೆ. ಪ್ರಾಚೀನಕಾಲದಿಂದಲೂ ಮನರಂಜನೆಗಾಗಿ ಮೂರ್ತಸ್ವರೂಪ ತಾಳಿ ಶ್ರೀಸಾಮಾನ್ಯರ ಪಾಠ ಶಾಲೆಯಾದುದನ್ನು ಕಾಣುತ್ತೇವೆ. ಮುಗ್ಧ ಮಕ್ಕಳ ಮನೋವಿಕಾಸಕ್ಕೂ ಇದು ದಾರಿದೀಪ. ಹಬ್ಬ ಹರಿದಿನ, ಜಾತ್ರೆಗಳಲ್ಲಿ ನಮ್ಮ ಪೂರ್ವಜರು ಗೊಂಬೆಯಾಟ ಆಡಿಸುವ ಸಂಪ್ರದಾಯ ಇಟ್ಟುಕೊಂಡು ಬಂದಿದ್ದಾರೆ.

* * *