ಹುಡುಗನಿಗೆ ನಾಲ್ಕೂವರೆ ವರ್ಷ ವಯಸ್ಸು, ಮಾತನಾಡಲು ಬರುವುದಿಲ್ಲ. ಸದ್ಯ ಅವ್ವ ಅನ್ನುತ್ತಾನೆ. ಎಲ್ಲರಿಗೂ ಅವ್ವ ಎನ್ನುತ್ತಾನೆ, ಕರೆದದ್ದು ಕೇಳಿಸುತ್ತದೆ. ಏನಾದರು ತರಲು ಹೇಳಿದರೆ ಒಂದೊಂದು ಸಲ ತರುತ್ತಾನೆ. ಒಂದೊಂದು ಸಲ ತಿಳಿಯದ ಹಾಗೆ ನೋಡುತ್ತಾ ಸುಮ್ಮನಿರುತ್ತಾನೆ. ಊಟ ಮಾಡಿಸಬೇಕು. ತಾನೇ ತೆಗೆದುಕೊಂಡು ಸರಿಯಾಗಿ ತಿನ್ನುವುದಿಲ್ಲ, ಹಟ ಬಂದರೆ ಬಹಳ ಸಿಟ್ಟು, ಸಂತೋಷವಾಗಿದ್ದಾಗ ಬಹಳ ಖುಷಿಯಿಂದ ಕುಣಿದಾಡುತ್ತಾನೆ. ವಾದ್ಯಗಳ ಸಪ್ಪಳವಾದರೆ ನೋಡಲು ಹೋಗುತ್ತಾನೆ. ಸಣ್ಣ ಮಕ್ಕಳ ಕೂಡ ಆಟ ಆಡುತ್ತಾನೆ. ಏನಾದರೂ ಬೇಕಾದರೆ ಆ ವಸ್ತು ಇದ್ದ ಸ್ಥಳಕ್ಕೆ ನಮ್ಮನ್ನು ಕರೆದುಕೊಂಡು ಹೋಗಿ ಅದನ್ನು ಕೊಡಲು ತೋರಿಸುತ್ತಾನೆ. ಹಟ ಬಂದಾಗ ಸಿಕ್ಕವರನ್ನ ಜಿಗುಟುವುದು, ಹೊಡೆಯುವುದು ಮಾಡುತ್ತಾನೆ. ತನಗೆ ತೋಚಿದಂತೆ ಮಾಡುವುದು ಹೆಚ್ಚು, ಹೇಳಿದ್ದನ್ನು ಮಾಡುವುದು ಕಡಿಮೆ. ಕಾಲಪ್ರವೃತ್ತಿಗೆ ಹೇಳದೆಯೇ ತಾನೇ ಹೊರಗೆ ಹೋಗುತ್ತಾನೆ.

ನಿಮ್ಮ ಮಗುವಿಗೆ ಬುದ್ಧಿ ಮಾಂದ್ಯ ಹಾಗೂ ಸಾಮಾನ್ಯವಾಗಿ ಅದರ ಜೊತೆಯಲ್ಲಿಯೇ ಕಾಣಿಸಿಕೊಳ್ಳುವ ’ಹೈಪರ‍್ ಕೈನೆಟಿಕ್ ಸಿಂಡ್ರೊಮ’ ಎಂಬ ಮೆದುಳಿಗೆ ಅಘಾತ ಉಂಟಾದಾಗ ಆಗುವ ಸ್ಥಿತಿ ಗತಿಯ ಲಕ್ಷಣಗಳು ಕಂಡು ಬರುತ್ತವೆ. ಬುದ್ದಿಮಾಂದ್ಯವೆಂದರೆ ದೋಷಪೂರ್ಣ ಮೆದಳಿನ ಒಂದು ಅವಸ್ಥೆ. ಸಾಮಾನ್ಯವಾಗಿ ಮೆದುಳಿನ ಬೆಳವಣಿಗೆ ದೇಹದ ಬೆಳವಣಿಗೆಗೆ ಅನುಗುಣವಾಗಿ ಆಗತಕ್ಕದ್ದು. ಉದಾಹರಣೆಗೆ ನಾಲ್ಕು ವರ್ಷದ ಮಗುವಿನ ತಲೆಯಲ್ಲಿ ನಾಲ್ಕು ವರ್ಷದ ಮೆದುಳಿದ್ದರೆ, ಹದಿನೈದು ವರ್ಷದ ಮಗುವಿನ ತಲೆಯಲ್ಲಿ ಹದಿನೈದು ವರ್ಷ ಬಲಿತ ಮೆದುಳು ಇರುವುದು ಸಹಜ ಸ್ಥಿತಿ. ಎಷ್ಟೋ ಬಾರಿ ಹಲವು ಮಕ್ಕಳೊಡನೆ ಒಡನಾಡಿದಾಗ ಈ ಮಗುವಿಗೆ ವಯಸ್ಸಿಗೆ ಮೀರಿದ ಬುದ್ಧಿ ಇದೆ ಎಂದು ಉದ್ಗಾರ ಎಳೆಯುತ್ತೇವೆ. ಇಲ್ಲಿ ಮಗುವಿನ ವಯಸ್ಸು ಎಂಟಾದರೆ ಮೆದುಳಿನ ಬೆಳವಣಿಗೆ ಒಂಭತ್ತು ಹತ್ತು ಇರುವ ಸಾಧ್ಯತೆ ಉಂಟು. ಆದರೆ ಬುದ್ಧಿ ಮಾಂದ್ಯ ತದ್ವಿರುದ್ಧವಾದ ಮೆದುಳಿನ ದೋಷಪೂರ್ಣ ಅವಸ್ಥೆ. ಇಲ್ಲಿ ಮೆದುಳಿನ ಬೆಳವಣಿಗೆ ದೈಹಿಕ ಬೆಳವಣಿಗೆಗೆ ಸರಿಹೊಂದದೆ ನಿಧಾನವಾಗಬಹುದು, ಕುಂಠಿತವಾಗಬಹುದು, ಇಲ್ಲವೆ ನಿಂತು ಬಿಡಬಹುದು. ಆಗ ದೈಹಿಕವಾಗಿ ಮಗು ಬೆಳೆಯುತ್ತಲೆ ಹೋಗುತ್ತದೆ. ಆದರೆ ಬುದ್ಧಿಯ ಬೆಳವಣಿಗೆ ಆಗುವುದಿಲ್ಲ.

ಬುದ್ಧಿಮಾಂದ್ಯತೆ ಗುರುತಿಸಲು ಯಾರೇನು ವೈದ್ಯರಾಗಬೇಕಿಲ್ಲ, ಮಗುವಿನ ಪ್ರಾಥಮಿಕ ಬೆಳವಣಿಗೆಯ ಮೈಲುಗಲ್ಲುಗಳು ದಿಕ್ಸೂಚಿಯಾಗುತ್ತವೆ. ಮಗು ಐದು ತಿಂಗಳಿಗೆ ಮಗುಚಿಕೊಳ್ಳುವುದು, ಕತ್ತು ನಿಲ್ಲುವುದು, ಎಂಟ್ಹತ್ತು ತಿಂಗಳಿಗೆ ಕುಳಿತುಕೊಳ್ಳುವುದು, ವರ್ಷಕ್ಕೆ ನಡೆಯುವುದು, ಒಂದೂವರೆ ವರ್ಷಕ್ಕೆ ಮಾತನಾಡುವುದು ಇವೆಲ್ಲವೂ ಸಕ್ರಮವಾಗಿ ಮೆದುಳು ಬೆಳೆಯುತ್ತಿರುವ ಲಕ್ಷಣಗಳು. ಇದರಲ್ಲಿ ಏರುಪೇರಾದರೆ ಬುದ್ಧಿಮಾಂದ್ಯತೆ ಎಂದು ಗುರುತಿಸಬೇಕಗುತ್ತದೆ. ಉದಾಹರಣೆಗೆ ಮಗು ನಾಲ್ಕು ವರ್ಷಕ್ಕೆ ನಡೆದರೆ ದೈಹಿಕ ವಯಸ್ಸು ನಾಲ್ಕು. ಆದರೆ ಇತರ ಚಟುವಟಿಕೆ ಇಲ್ಲದಿದ್ದರೆ ಮೆದುಳಿನ ವಯಸ್ಸು ಒಂದು ಎಂದು ಅಂದಾಜಿಸಬೇಕಾಗುತ್ತದೆ. ಆದ್ದರಿಂದ ನೀವು ಕೂಡಲೆ ಸಮೀಪದ ಮನೋವೈದ್ಯರನ್ನು ನರ ರೋಗತಜ್ಞರನ್ನು ಕಾಣುವ ಅವಶ್ಯಕತೆ ಇದೆ. ಮುಖ್ಯವಾಗಿ ಮೂರು ವಿಷಯಗಳನ್ನು ಗಮನಿಸಿ.

ಒಂದು, ನಶಿಸಿಹೋದ ಮೆದುಳು ಪುನಶ್ಚೇತನ ಗೊಳ್ಳುವುದಿಲ್ಲ. ಎರಡು, ಮೆದುಳಿನ ಬೆಳವಣಿಗೆಯ ಗತಿ ಹದಿನಾರು ಹದಿನೆಂಟರ ವಯಸ್ಸಿಗೆ ನಿಧಾನಿಸುತ್ತದೆ., ಮೂರು, ಮೆದುಳಿನ ಬೆಳವಣಿಗೆಗೆಂದೇ ನಿರ್ದಿಷ್ಟ ಔಷಧಿ, ಚುಚ್ಚು ಮದು ಇಲ್ಲ. ಆ ರೀತಿ ಇದಿದ್ದರೆ ನಾವೆಲ್ಲರೂ ಅದನ್ನು ತೆಗೆದುಕೊಳ್ಳಬೇಕಾಗಿತ್ತೇನೋ! ಅಲ್ಲದೆ ತಾಂತ್ರಿಕವಾಗಿ, ಸಾಮಾನ್ಯ ಬುದ್ಧಿ ಮತ್ತೆ ತೊಂಭತ್ತರಿಂದ ನೂರಾ ಹತ್ತು ಗುಣಗಳು. ತೊಂಭತ್ತು ಗುಣಕ್ಕಿಂತ ಕಡಿಮೆ ಇರುವವರನ್ನು ಬುದ್ಧಿ ಮತ್ತೆಗನುಗುಣವಾಗಿ ಸ್ವಸಹಾಯ, ಮಲಮೂತ್ರ ವಿಸರ್ಜನೆ ಮೇಲೆ ನಿಯಂತ್ರಣ, ಅಪಾಯಗಳಿಂದ ರಕ್ಷಿಸಿಕೊಳ್ಳುವಿಕೆ ಮುಂತಾದ ತರಬೇತಿಯನ್ನು ಬುದ್ಧಿ ಮಾಂದ್ಯರಿಗೆ ಮೀಸಲಾಗಿರುವ ವಿಶೇಷ ಶಾಲೆಗಳಲ್ಲಿ ನೀಡಲಾಗುವುದು. ಈ ಮಕ್ಕಳು ಅನುಕರಣೆಯಿಂದ ಕಲಿಯಬಲ್ಲರೇ ಹೊರತು ಅರ್ಥೈಸಿಕೊಂಡು ಕಲಿಯುವುದು ಸಾಧ್ಯ. ಆದ್ದರಿಂದ ಸರಿಯಾದ ಶಾಲೆಗಳಲ್ಲಿ ಇವರ ಶಿಕ್ಷಣ ಸಾಧ್ಯ.

’ಹೈಪರ್ ಕೈನೆಟಿಕ್ ಸಿಂಡ್ರೊಮ್’ ಮೆದುಳಿಗೆ ಆಗಿರುವ ಅಲ್ಪ ಪ್ರಮಾಣದ ಆಘಾತದ ಲಕ್ಷಣ ಇದು. ಮಗು ಹರಿಯುವುದು, ಮುರಿಯುವುದು, ರಚ್ಚೆ ಹಿಡಿಯುವುದು, ಅಲ್ಲಿಂದಿಲ್ಲಿ ಓಡಾಡುವುದು, ನಿಂತಲ್ಲಿ ನಿಲ್ಲದೇ ಇರುವುದು, ಹಟ, ರಚ್ಚೆ – ರಂಪಾಟಗಳನ್ನು ಮಾಡುವುದರ ಮೂಲಕ ಕಾಣಿಸಿಕೊಳ್ಳುತ್ತದೆ. ದುರದೃಷ್ಟವಶಾತ್ ಇದರ ನಿಯಂತ್ರಣಕ್ಕೆ ಮೀಸಲಾದ ಮಾತ್ರೆ ಡೆಕ್ಸಿಡ್ರಿನ್ ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿಲ್ಲ. ಇತರೆ ಸಣ್ಣ ಪ್ರಮಾಣದ ಸಮಾಧಾನಕರ ಮಾತ್ರೆಗಳನ್ನು ಬಳಸಬೇಕಾಗುತ್ತದೆ. ಬುದ್ಧಿ ಮಾಂದ್ಯ ತಪ್ಪಿಸಲು ಎಲ್ಲರೂ ಅನುಸರಿಸಬೇಕಾದ ನಿರ್ದಿಷ್ಟ ಕ್ರಮ ಸ್ವಸಬಂಧಿ ವಿವಾಹವನ್ನು ತಪ್ಪಿಸುವುದು.