ಮೂಡಲಿಂದವತರಿಸಿ ಜಗವ ತಮದಿಂದೆತ್ತಿ
ಬೆಳಕ ತುಳುಕಿಸಿ ನಿಂದ ಶ್ರೀಸುದರ್ಶನ ಚಕ್ರ
ವಿಶ್ರಮಿಸುತಿಹುದದೋ ಪಡುಗಡಲ ಶೇಷ ಶಾ-
ಯಿಯ ಮಡಿಲ ! ದಿವ್ಯ ಕರುಣೆಯ ತೀರ್ಥ ಹೊನಲಾಗಿ
ಹರಿದಂತೆ, ಸಂಜೆ ಹೊಂಬಣ್ಣವನು ಕುಡಿದ ಹೊಳೆ
ಸಾಗಿಹುದು ಮೃದು ಮಧುರ ಗೀತೆಯೊಲು ! ಹೊನ್ನ ಬೆಳಕಿನ
ಮಂತ್ರ ಜಲಸೇಚನದಿ ಮುಗ್ಧವಾದಂತಿಹುದು
ಈ ಬಯಲು ! ಹೊತ್ತು ಮುಳುಗಿತು ; ಮತ್ತೆ ಇರುಳಾಯ್ತು.

ಮುಳುಗಿತೆ ಹೊತ್ತು ? ಅಥವ ಮುಳುಗಿದೆವೆ ನಾವುಗಳೆ
ಕತ್ತಲಿನ ಕಡಲೊಳಗೆ ! ಹೊತ್ತು ಮುಳುಗುವುದುಂಟೆ
ಅಥವ ಮೂಡುವುದುಂಟೆ ? ಬರಿಸುಳ್ಳು. ದಿನದಿನವು
ಬೆಳಕಿಗೆ ಮೂಡಿ ಕತ್ತಲೆಗೆ ಮುಳುಗುವರು ನಾವು !
ಆದರೂ ಸಾಗುತಿದೆ ಪ್ರಾರ್ಥನೆ ; ‘ಕವಿದ ತಮ-
ದೊಳಗಿಂದ ಜ್ಯೋತಿಯೆಡೆ ಕೈವಿಡಿದು ನಡೆಸೆಮ್ಮ.’