’ಹೊನಗೊನೆ ಸೊಪ್ಪು ಹೋದ ಕಣ್ಣು ತಂತು’, ಎಂಬ ನಾಣ್ಣುಡಿಯಿದೆ. ಅದರಲ್ಲಿ ಹೆಚ್ಚಿನ ’ಎ’ ಜೀವಸತ್ವ ಇರುವುದರಿಂದ ಕಣ್ಣುಗಳ ದೃಷ್ಟಿಗೆ ಒಳ್ಳೆಯದು. ಜೀವಸತ್ವದ ಜೊತೆಗೆ ಇತರ ಪೋಷಕಾಂಶಗಳೂ ಸಹ ಸಾಕಷ್ಟಿರುತ್ತದೆ.

ಪೌಷ್ಟಿಕ ಗುಣಗಳು : ಈ ಮೊದಲೇ ಹೇಳಿದಂತೆ ಈ ಸೊಪ್ಪಿನಲ್ಲಿ ಶರೀರದ ಬೆಳವಣಿಗೆಗೆ ಅಗತ್ಯವಿರುವ ಹಲವಾರು ಪೋಷಕಾಂಶಗಳು ಇವೆ.

೧೦೦ ಗ್ರಾಂ ಸೊಪ್ಪಿನಲ್ಲಿರುವ ಪೋಷಕಾಂಶಗಳು

ತೇವಾಂಶ – ೭೭.೪ ಗ್ರಾಂ
ಪ್ರೊಟೀನ್ – ೫.೦ ಗ್ರಾಂ
ನಾರು ಪದಾರ್ಥ – ೨.೮ ಗ್ರಾಂ
ರಂಜಕ – ೬೦ ಮಿ.ಗ್ರಾಂ
’ಸಿ’ ಜೀವಸತ್ವ – ೧೭.೦ ಮಿ. ಗ್ರಾಂ
ಪಿಷ್ಟ – ೫.೦ ಗ್ರಾಂ
ಕೊಬ್ಬು – ೦.೭ ಗ್ರಾಂ
ಕ್ಯಾಲ್ಸಿಯಂ – ೨.೮ ಮಿ.ಗ್ರಾಂ
ಕಬ್ಬಿಣ – ೧೬.೭ ಮಿ.ಗ್ರಾಂ

ಔಷಧೀಯ ಗುಣಗಳು : ಇದರ ಸೇವನೆಯಿಂದ ಕಣ್ಣಿನ ತೊಂದರೆ ದೂರವಾಗುತ್ತದೆ. ನಾರಿನ ಅಂಶವಿರುವ ಕಾರಣ ಮಲಬದ್ಧತೆ ದೂರಗೊಳ್ಳುತ್ತದೆ. ಇದರಿಂದ ತಯಾರಿಸಿದ ಕಾಡಿಗೆಯನ್ನು ಕಣ್ಣುಗಳ ರೆಪ್ಪೆಗಳಿಗೆ ಹಚ್ಚುವುದರಿಂದ ಕಣ್ಣುಗಳ ಕಾಂತಿ ಹೆಚ್ಚುತ್ತದೆ.

ಉಗಮ ಮತ್ತು ಹಂಚಿಕೆ : ಇದರ ಮೂಲ ಬ್ರೆಜಿಲ್ ಅಥವಾ ದಕ್ಷಿಣ ಭಾರತದ ಪೂರ್ವ ಕರಾವಳಿ ಪ್ರದೇಶ. ರೆವರೆಂಡ್ ಪೋಪ್ ಇದನ್ನು ಎಂಟನೇ ಶತಮಾನದಲ್ಲಿ ರೋಮ್ ಪಟ್ಟಣಕ್ಕೆ ಒಯ್ದನಂತೆ. ಭಾರತದ ಎಲ್ಲಾ ಕಡೆ ಇದರ ಬಳಕೆ ಕಂಡುಬರುತ್ತದೆ.

ಸಸ್ಯ ವರ್ಣನೆ : ಇದು ಅಮರಾಂತೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಮೂಲಿಕೆ. ಹೆಚ್ಚಾಗಿ ನೆಲದ ಮೇಲೆ ತೆವಳಿ ಹರಡುತ್ತದೆ. ಕಾಂಡ ಬಲಹೀನ; ಕವಲುಗಳು ಅನೇಕ. ಪ್ರತಿಗೆಣ್ಣಿನ ತಳಭಾಗದಲ್ಲಿ ಬೇರು ಮೂಡಿರುತ್ತವೆ. ಕಾಂಡ ಕವಲುಗಳು ಹಲವು. ಗೆಣ್ಣಿನಂತರ ಸಾಕಷ್ಟು ಉದ್ದ, ೧೦-೨೦ ಸೆಂ.ಮೀ. ವರೆಗೆ ಇರುವುದುಂಟು. ತಾಯಿ ಬೇರುಗಟ್ಟಿ ಇದ್ದು ನೆಲದಲ್ಲಿ ಆಳವಾಗಿ ಇಳಿದಿರುತ್ತದೆ. ಕಾಂಡ ಭಾಗ ಸ್ವಲ್ಪಮಟ್ಟಿಗೆ ಚಚ್ಚೌಕವಿದ್ದು ಏಣುಗಳಿಂದ ಕೂಡಿರುತ್ತದೆ. ಎಲೆಗಳು ಎದುರುಬದುರಾಗಿರುತ್ತವೆ. ಎಲೆತೊಟ್ಟು ಅಷ್ಟೊಂದು ಉದ್ದವಾಗಿರುವುದಿಲ್ಲ. ಎಲೆಗಳು ಅಂಡಾಕಾರ ಇಲ್ಲವೇ ಸ್ವಲ್ಪ ಓರೆಯಾಗಿದ್ದು ಉದ್ದನಾಗಿರುತ್ತವೆ. ಎಲೆಗಳ ಬಣ್ಣ ಹಸುರು. ಹೂವು ಸಣ್ಣಗುಚ್ಛಗಳಲ್ಲಿದ್ದು ಎಲೆ ತೊಟ್ಟುಗಳ ಕಂಕುಳಲ್ಲಿ ಮೂಡಿರುತ್ತವೆ. ಕೆಲವೊಂದೆ ಪ್ರಭೇದದಲ್ಲಿ ಎಲೆಗಳು ಕುಂಕುಮ ಬಣ್ಣದ್ದಿರುತ್ತವೆ.

ಹವಾಗುಣ : ಉಷ್ಣ ಹಾಗೂ ಸಮಶೀತೋಷ್ಣ ಹವೆ ಇದಕ್ಕೆ ಸೂಕ್ತ. ತೇವದ ವಾತಾವರಣದಲ್ಲಿ ಬಹು ಚೆನ್ನಾಗಿ ಫಲಿಸುತ್ತದೆ.

ಭೂಗುಣ : ನೀರು ಹಿಡಿದಿಡುವ ಮಣ್ಣು ಹಾಗೂ ಫಲವತ್ತಾದ ಮಣ್ಣುಗಳಲ್ಲಿ ಹುಲುಸಾಗಿ ಬೆಳೆಯುತ್ತದೆ

ತಳಿಗಳು : ಹೊನಗೊನೆಯಲ್ಲಿ ಹೆಸರಿಸುವಂತಹ ತಳಿಗಳಾವುವೂ ಇಲ್ಲ. ಸಾಮಾನ್ಯವಾಗಿ ಕಂಡುಬರುವುದು ನೆಲದಲ್ಲಿ ಹರಡಿ ಬೆಳೆಯುವ ಬಗೆ. ಇದಲ್ಲದೆ ಮತ್ತೊಂದು ಬಗೆಯೂ ಇದೆ. ಅದರಲ್ಲಿ ಗೆಣ್ಣಿ ನಂತರ ಉದ್ದನಾಗಿರುತ್ತವೆ.

ಸಸ್ಯಾಭಿವೃದ್ಧಿ : ಇದನ್ನು ಬೀಜ ಬಿತ್ತಿ ಅಥವಾ ಕಾಂಡದ ತುಂಡುಗಳನ್ನು ನೆಟ್ಟು ವೃದ್ಧಿ ಮಾಡಬಹುದು. ಮೂರು ನಾಲ್ಕು ಗೆಣ್ಣಗಳಿರುವ ಕಾಂಡದ ತುಂಡುಗಳನ್ನು ಮಳೆಗಾಲದಲ್ಲಿ ಒಟ್ಲು ಪಾತಿಗಳಲ್ಲಿ ನೆಟ್ಟು ಬೇರು ಬಂದ ನಂತರ, ಸಿದ್ಧಗೊಳಿಸಿದ ಭೂಮಿಗೆ ವರ್ಗಾಯಿಸಬೇಕು. ನಿರ್ಲಿಂಗ ವಿಧಾನ ಸುಲಭ.

ಭೂಮಿ ಸಿದ್ಧತೆ ಮತ್ತು ಬಿತ್ತನೆ : ತಿಪ್ಪೆಗೊಬ್ಬರ ಮಣ್ಣಿನಲ್ಲಿ ಬೆರೆಸಿ ಅನುಕೂಲಕ್ಕೆ ತಕ್ಕಂತೆ ಪಾತಿಗಳನ್ನು ಮಾಡಿ ಬೀಜ ಬಿತ್ತಬೇಕು. ಬೀಜ ಬಹಳ ಸಣ್ಣ ಗಾತ್ರ. ಒಂದು ವೇಳೆ ಕಾಂಡದ ತುಂಡುಗಳನ್ನು ನೆಡುವುದಿದ್ದಲ್ಲಿ ೧೫ ಸೆಂ.ಮೀ. ಅಂತರದ ಸಾಲುಗಳಲ್ಲಿ ನೆಡಬೇಕು. ಮಣ್ಣು ಹಸಿಯಾಗಿರುವುದು ಮುಖ್ಯ. ಬಿತ್ತನೆ ಅಥವಾ ನಾಟಿಗೆ ಜೂನ್-ಜುಲೈ ಸರಿಯಾದ ಕಾಲ.

ಗೊಬ್ಬರ : ಈ ಬೆಳೆಗೆ ತಿಪ್ಪೆಗೊಬ್ಬರವನ್ನು ಮಾತ್ರವೇ ಕೊಡುವ ರೂಢಿ ಇದೆ. ರಾಸಾಯನಿಕ ಗೊಬ್ಬರಗಳ ಅಗತ್ಯದ ಬಗ್ಗೆ ತಿಳಿದು ಬಂದಿಲ್ಲ. ಹೆಕ್ಟೇರಿಗೆ ೧೫-೨೦ ಟನ್ನುಗಳಷ್ಟು ತಿಪ್ಪೆಗೊಬ್ಬರ ಹರಡಬೇಕಾಗುತ್ತದೆ.

ನೀರಾವರಿ : ಇದಕ್ಕೆ ಹದವರಿತು ನೀರು ಕೊಡಬೇಕು. ತೇವ ಚೆನ್ನಾಗಿದ್ದರೆ ಸೊಪ್ಪು ಹುಲುಸಾಗಿ ಬೆಳೆದು ಸಾಕಷ್ಟು ಪ್ರಮಾಣದಲ್ಲಿ ಕೊಯ್ಲಿಗೆ ಬರುತ್ತದೆ

ಅಂತರ ಬೇಸಾಯ ಮತ್ತು ಕಳೆ ಹತೋಟಿ : ಆಗಿಂದಾಗ್ಗೆ ಕಳೆಗಳನ್ನು ಕಿತ್ತು ತೆಗೆಯಬೇಕು. ಪ್ರತಿ ಕೊಯ್ಲಿನ ನಂತರ ತಿಪ್ಪೆಗೊಬ್ಬರ ಹರಡಿ ಸಾಲು ಎಳೆಯುವುದು ಒಳ್ಳೆಯದು.

ಕೊಯ್ಲು ಮತ್ತು ಇಳುವರಿ : ಮಳೆಗಾಲದಲ್ಲಿ ಇಳುವರಿ ಜಾಸ್ತಿ. ಬೇಸಿಗೆಯಲ್ಲಿ ಕಡಿಮೆ. ಹೆಕ್ಟೇರಿಗೆ ೧೦-೧೫ ಟನ್ ಸೊಪ್ಪು ಸಾಧ್ಯ.

ಕೀಟ ಮತ್ತು ರೋಗಗಳು : ಕೀಟ ಮತ್ತು ರೋಗಗಳಾವುವೂ ವರದಿಯಾಗಿಲ್ಲ.

* * *