ಹೆಚ್.ಡಿ. ಕುಮಾರಸ್ವಾಮಿ      

ಮುಖ್ಯಮಂತ್ರಿ

ವಿಧಾನಸೌಧ

ಬೆಂಗಳೂರು ೫೬೦ ೦೦೧                                                 ದಿನಾಂಕ ೦೩-೧೦-೨೦೦೬

 

ಹೊನ್ನುಡಿ

 

ಕನ್ನಡ ನಾಡಿನ ಜಾನಪದ ಜಗತ್ತು ಅತ್ಯಂತ ವಿಸ್ತಾರವಾದುದು, ಸಮೃದ್ಧವಾದುದು ಮತ್ತು ವೈವಿಧ್ಯಮಯವಾದುದು. ಜನಪದ ಗೀತ ಸಂಗೀತ, ನೃತ್ಯ, ನಾಟಕ, ಚಿತ್ರಕಲೆ ಶಿಲ್ಪಕಲೆಗಳಿಂದ ಕಿಕ್ಕಿರಿದಿರುವ ಜಾನಪದವು ಜಗತ್ತಿನ ಮನುಕುಲದ ಸಂಸ್ಕೃತಿಯ ಹಾಗೂ ಎಲ್ಲಾ ಜ್ಞಾನ – ವಿಜ್ಞಾನಗಳ ಮೂಲ ನಡವಳಿಕೆ.

ಯಾವುದೇ ದೇಶದ ಜಾನಪದ ಸಂಪತ್ತು ಆ ದೇಶದ ಸಾಂಸ್ಕೃತಿಯ ತೋರುದೀವಿಗೆ, ಪಾರಂಪರಿಕವಾಗಿ ಶತಶತಮಾನಗಳಿಂದ ಉಳಿದು ಬೆಳೆದುಕೊಂಡು ಬಂದ ಈ ಸಂಪತ್ತು ದೇಶದ ಅಮೂಲ್ಯ ಆಸ್ತಿ. ನಮ್ಮ ಹಿರಿಯರ ಜ್ಞಾನ ವಿವೇಕ ಸಾಹಿತ್ಯಕ ಸಾಧನೆಗಳನ್ನು ಪರಿಚಯಿಸುವ ತಿಳವಳಿಕೆಯನ್ನು ಹೊರಹೊಮ್ಮಿಸುವ ಮಣ್ಣಿನ ಮಕ್ಕಳ ಸಾಹಿತ್ಯವಾದ ಜಾನಪದವನ್ನು ಒಂದು ನಿಧಿಯಂತೆ ಕಾಪಾಡಿಕೊಂಡು ಬರದಿದ್ದರೆ ಅದು ದೇಶಕ್ಕಾಗುವ ದೊಡ್ಡ ನಷ್ಟವೇ ಸರಿ.

ಕನ್ನಡ ನಾಡಿನ ಜಾನಪದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕ್ರಿ.ಶ. ೯ನೇ ಶತಮಾನದ ಗದ್ಯ ಗ್ರಂಥವಾದ ವಡ್ಡಾರಾಧನೆಯು ಕನ್ನಡದ ಪ್ರಪ್ರಥಮ ಜನಪದ ಕಥಾ ಸಂಕಲನವೆನಿಸುತ್ತದೆ. ಇದುವರೆಗೂ ಅಸಂಖ್ಯಾತ ವಿದ್ವಾಂಸರು ಈ ಸಾಹಿತ್ಯವನ್ನು ಹೊರತರಲು ಶ್ರಮಿಸಿರುತ್ತಾರೆ. ಆದರೂ ಕರ್ನಾಟಕ ಜನಪದ ಸಾಹಿತ್ಯ ಪರಂಪರೆಯ ಹಿರಿಮೆಯನ್ನು ಒಟ್ಟಾಗಿ ಕೂಡಿಸಿ ಜಗತ್ತಿಗೆ ಪರಿಚಯಿಸುವ ಸದ್ದುದೇಶದಿಂದ ಕರ್ನಾಟಕ ಸರ್ಕಾರವು ತನ್ನ ಆದ್ಯ ಕರ್ತವ್ಯವೆಂದು ತಿಳಿದು, ಸಮಗ್ರ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಪ್ರಕಟಣೆ ಯೋಜನೆಯನ್ನು ಹಮ್ಮಿಕೊಂಡು ಈ ಸಮೃದ್ಧ ಸಾಹಿತ್ಯ ರಾಶಿಯನ್ನು ಕನ್ನಡ ಜನತೆಗೆ ಅರ್ಪಿಸುತ್ತಿದೆ. ಈ ಯೋಜನೆಯಲ್ಲಿ ಜನಪದ ಪದ್ಯ, ಗದ್ಯ ರಂಗಭೂಮಿ ಮತ್ತು ಭಾಷಿಕ ಪ್ರಕಾರಗಳಿಗೆ ಸಂಬಂಧಿಸಿದಂತೆ ಹಲವು ಸಂಪುಟಗಳಲ್ಲಿ ಹೊರತರಲಾಗುತ್ತಿದೆ. ಈ ಸಾಹಿತ್ಯಮಾಲೆಯ ಕೃತಿ ಸಂಪುಟಗಳನ್ನು ಸಹೃದಯ ಓದುಗರು ಆಸ್ವಾದಿಸಿದರೆ ಕರ್ನಾಟಕ ಪ್ರಜಾ ಸರ್ಕಾರದ ಶ್ರಮ ಸಾರ್ಥಕವಾಗುತ್ತದೆ.

ಈ ಯೋಜನೆಯ ನೇತೃತ್ವ ವಹಿಸಿ ದುಡಿದ ಪ್ರೊ. ಹಿ.ಶಿ. ರಾಮಚಂದ್ರೇಗೌಡರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಂಪಾದಕ ಮಂಡಳಿಯ ಮಾರ್ಗದರ್ಶನವನ್ನು, ವಿವಿಧ ಸಂಪುಟಗಳ ಸಂಪಾದಕರಾಗಿ ನಾಡಿನ ಅನೇಕ ಜಾನಪದ ವಿದ್ವಾಂಸರು ತೋರಿರುವ ಆಸಕ್ತಿ ಹಾಗೂ ನೆರವನ್ನು ಸ್ಮರಿಸುತ್ತಾ ಸಮಗ್ರ ಕರ್ನಾಟಕದ ಪ್ರಾತಿನಿಧಿಕ ಜನಪದ ಮತ್ತು ಯಕ್ಷಗಾನ ಸಾಹಿತ್ಯ ಸಂಪುಟಗಳನ್ನು ಸುವರ್ಣ ಕರ್ನಾಟಕ ವರ್ಷದ ಈ ಸುಸಂದರ್ಭದಲ್ಲಿ ಅತ್ಯಂತ ಸಂತೋಷದಿಂದ ಕನ್ನಡ ಜನತೆಗೆ ಸಮರ್ಪಿಸುತ್ತಿದ್ದೇನೆ.

(ಹೆಚ್.ಡಿ. ಕುಮಾರಸ್ವಾಮಿ)