ಬೆಟ್ಟ ಬೇಸಗೆಯಲಿ ಮೆಲ್ಲನಲೆವ ಬಿಳಿಯ ಮುಗಿಲಿನಂತೆ
ದಟ್ಟವಾದ ಮಲೆಯನಾಡ ತಳಿತ ಬನಗಳಡಿಯಲಿ,
ಬಿಟ್ಟು ಕಳೆದು ತಿರೆಯಹೊರೆಯ, ತಿರುಗಿ ತೊಳಲಿ ಬರುತಲಿರಲು,
ದಿಟ್ಟಿಗೊಂದು ಪೂತ ಅಸುಗೆ ಬನವು ಮಿಂಚಿ ಮೆರೆಯಿತು.

ಒಂದು! ಎರಡು! ಮೂರು! ನಾಲ್ಕು! ಹತ್ತು! ನೂರು! ಲಕ್ಷ! ಕೋಟಿ!
ಚಂದದಿಂದ ಜೊಂಪಜೊಂಪವಾಗಿ ಗಣನೆಯಿಲ್ಲದೆ,
ಮಂದವಾಗಿ ತೀಡುವೆಲರಿನಲ್ಲಿ ತಲೆಯನೊಲೆದು ತೂಗಿ
ಮಿಂದು ಕುಂಕುಮದಲಿ ಬಂದ ತೆರದೊಳಸುಗೆವೂಗಳು;

ಹಸುರು ಹೊಗೆಯ ಮೀರುತೆದ್ದು, ಮುದ್ದೆ ಮುದ್ದೆಯಾಗಿ ತೋರಿ,
ಅಸುಗೆವೂಗಳೊಡಲನಾಂತ ಕೆಂಪು ಬೆಂಕಿಯಂದದಿ
ಹಸುರು ತಳಿರಿನಿಂದ ತುಂಬಿ ತುಳುಕುವಸುಗೆ ಮರಗಳಲ್ಲಿ
ಒಸಗೆ ಬೀರಿ ಕಣ್ಣುಗಳಿಗೆ ಬೆರಗನಿತ್ತು ಮೆರೆದುವು!

ಕೆಂಪು, ಹಸುರು! ಹಸುರು, ಕೆಂಪು! ಹಸುರು ಹಸುರು! ಕೆಂಪು ಕೆಂಪು!
ಕೆಂಪು, ಹಸುರು, ಎರಡೆ ಲೋಕ! ಬೇರೆ ಸೃಷ್ಟಿಯಿಲ್ಲವು!
ಪೆಂಪ ನೋಡುತಿದ್ದ ನಾನು, ಈಗ ಹಸುರು, ಈಗ ಕೆಂಪು!
ಕೆಂಪು, ಹಸುರು, ಎರಡೆ ಎನ್ನ ಜೀವ ಭಾವವಾದುವು!

ಹಸುರೊ? ಕೆಂಪೊ? ಅರಿಯೆ ನಾನು! ಕೆಂಪಿನೊಡನೆ ಹಸುರು ಕೂಡಿ
ಹಸುರಿನೊಡನೆ ಕೆಂಪು ಕೂಡಿ ಸರಸವಾಡುತಿದ್ದುವು!
ಹಸುರು ಅವನು! ಕೆಂಪು ನಾನು! ಅವನೊಳಾನು ಇಳಿವವರೆಗೆ
ಹಸುರು ಹಸುರೆ! ಕೆಂಪು ಕೆಂಪೆ! ಲೋಕವಸುಗೆದೋಟವು!

೨೪-೯-೧೯೨೮