ದೇವಮಾಡಿಹ ಲೋಕದಚ್ಚರಿಯದಂತಿರಲಿ,
ನಾವು ಮಾಡಿಹ ಲೋಕದಚ್ಚರಿಯ ನೋಡು!
ಹೊರಗೆ ಹೊರಳುವ ಜಗದ ಮೆರೆವ ಸೊಬಗಂತಿರಲಿ
ನಮ್ಮ ಎದೆಯೊಳು ನಲಿವ ಜಗದೆಸಕ ನೋಡು!
ಮೂಡಿ, ಜಗವೆಲ್ಲವನು ಬೆಳಗಿ, ಮುಳುಗುವ ರವಿಯ
ಮಹಿಮೆಯಂತಿರಲಿ!
ಇರುಳು ಬಾನೊಳು ಹೊಳೆದು ಕಾಂತಿಯನು ಚೆಲ್ಲುವಾ
ತುಹಿನಕರನಿರಲಿ!
ಬೆರಗಿನೊಳು ನಮ್ಮ ಮೂಕರ ಮಾಡಿ ಮೆರೆಯುತಿಹೆ
ತಾರೆಗಳ ಬೆಡಗದಂತಿರಲಿ ಇರಲಿ!
ಮೇರೆಯನು ಮೀರಿರುವ ಬಿತ್ತರದ ಕಡಲುಗಳ
ಮೊರೆಯುವಾನಂದವಂತಿರಲಿ ಇರಲಿ!
ಎಂದು ಮನವನು ಮಾಡಿ, ಎಂದು ಬುದ್ಧಿಯ ನೀಡಿ,
ಎಂದಿಗೀ ಆತ್ಮವನು ನಮಗಿತ್ತನೋ
ಅಂದೆ ಧಾರೆಯನೆರೆದನೀ ವಿಶ್ವವನು ನಮಗೆ,
ಅಂದೆ ಸ್ವಾತಂತ್ರ್ಯವನು ಕೊಟ್ಟನೆಮಗೆ!
ಎಲ್ಲ ಮಾಡಿರುವವನು ಇನ್ನು ಮಾಡುವುದೇನು?
ಎಲ್ಲ ನೀಡಿರುವವನು ಇನ್ನು ನೀಡುವುದೇನು?
ಎಲ್ಲ ಮಾಡಿದ ಅವನು ಏನು ನೀಡಿದರೇನು?
ಕಲ್ಪನೆಗೆ ರೆಕ್ಕೆಗಳ ಕಲ್ಪಿಸಿದರೇನು?
ತಿಳುವಳಿಕೆಗೆಲ್ಲೆಯನು ಮಾಡಿರುವನೇಕೆ?
ಬುದ್ಧಿಯೊಳು ಸಂಶಯದ ಮುಳ್ಳಿಟ್ಟನೇಕೆ?
ನಮ್ಮ ಮುಕ್ತಿಯೊಳೆಮ್ಮ ಬಂಧಿಸಿದನೇಕೆ?
ನಮ್ಮ ಭಕ್ತಿಯೊಳೆಮ್ಮ ಕಟ್ಟಿರುವನೇಕೆ?


ಮಲೆಯನಾಡಿನ ಕೋಡುಗಲ್ಲಿನ ಮೇಲೆ, ರವಿಯೇ, ಮೂಡು, ಮೂಡು!
ಬಾನೊಳೊಲವಿನ ಪೆಂಪನೆರಚುತ, ನಾಡಿಗದನೇ ನೀಡು, ನೀಡು!
ಏಳು, ಕೋಗಿಲೆ, ಏಳು, ಸೃಷ್ಟಿಯ ಗುಟ್ಟುಹೊಳೆಯಲಿ, ಹಾಡು, ಹಾಡು!
ನಲಿಯಿರೈ, ಎಲೆ ತರುಲತಾಳಿಯೆ, ಸೊಬಗುಬೀಡೆನೆ ಮಲೆಯನಾಡು!
ನಿಮ್ಮ ಎದೆಯನು ಬಲ್ಲೆನು,
ಎದೆಯ ಭಾವವ ಬಲ್ಲೆನು;
ಎನ್ನೊಳಿಹ ಚೈತನ್ಯವಾಹಿನಿ ನಿಮ್ಮ ನಾಳದಿ ಹರಿವುದು.
ತಳಿರಿನಾಟವದಲ್ಲ ನಿಮ್ಮದು, ನಿಮ್ಮ ಗೆಳೆಯನ ಕರೆವುದು!
ಬಾಲ್ಯದಿಂದಲು ನಿಮ್ಮ ಗೆಳೆತನವೆನ್ನದಾಗಿಹುದು;
ದಿನವು ಹೆಚ್ಚುತ ಬಂದು ಈಗದು ಒಂದುಗೂಡಿಹುದು!
ಮೊದಲು ನಿಮ್ಮಯ ಬೆಡಗಿಗೊಲಿದೆನು;
ಮೇಲೆ ನಿಮ್ಮಯ ಜೀವಕೊಲಿದೆನು;
ಈಗ ನಿಮ್ಮನೆ ಒಲಿದಿಹೆ!
ಮೊದಲು ಕೆಳದಿಯೆ ಎಂದು ಬಂದೆನು,
ಮೇಲೆ ಪ್ರೇಮದ ರಮಣಿ ಎಂದೆನು,
ದೇವಿ, ಪೂಜಿಸೆ ಬಂದಿಹೆ!

ಮೊದಲು ನೋಟವು, ಮೇಲೆ ಬೇಟವು, ಮತ್ತೆ ಕೂಟವು ಕರೆದುವು;
ಇಂದು ಪೂಜೆಯ ಮಾಡೆ ಬಂದಿಹೆ, ಮನ್ನಿಸೆನ್ನನು, ದೇವಿಯೆ!
ನೋಟ ಕಣ್ಣಿಗೆ ಹೊಳೆವುದು,
ಅದರೆದೆಯನು ಸೆಳೆಯದು;
ಬೇಟವೆದೆಯಲಿ ಮೊಳೆವುದು
ಆದರಾತ್ಮವನೆಳೆಯದು!
ಅಂದು ನಿಮ್ಮೀ ಶ್ಯಾಮಲತೆಯಲಿ ಕಂಡೆನಾ ವನಮಾಲಿಯ;
ಇಂದು ಕಾಣುವೆ ಕೃಷ್ಣರೂಪವನಾಂತ ತಾಯಿಯ: ಕಾಳಿಯ!


ಅಂದಿನ ಕಾಲದ ಕಂಗಳಿಗೆಸೆದುವು
ಗಿರಿಗಳು ಮಲಗಿಹ ರಕ್ಕಸರಂತೆ!
ಇಂದವು ತೋರುವುವೆನ್ನಯ ಕಣ್ಮನ
ಎದೆಗಳಿಗಾತ್ಮದ ರೂಪಗಳಂತೆ!
ವಿಶ್ವವನೆಲ್ಲವ ಒಂದೇ ಜೀವವು ತುಂಬುತ ಮರೆಯಾಗಡಗಿಹುದು;
ಒಂದೇ ವೀಣೆಯ ಮೋಹಿಪ ನಾದವು ತರತರವಾಗಿಹತೊಡಗಿಹುದು!
ಒಂದೇ ಚೈತನ್ಯಾಂಬುಧಿ ನಾನಾ ಹೊಳೆಗಳರೂಪದಿ ಹರಿಯುತಿದೆ,
ಒಂದೇ ಗುಟ್ಟಿನ ತತ್ತ್ವದ ಜೋತಿಯು ನಾನಾ ರೂಪದಿ ಮೆರೆಯುತಿದೆ!
ಬೆಟ್ಟದ ಕಿಬ್ಬಿಯ ಹೂಗಳ ಹೀರುವ ತುಂಬಿಗಳಣಕಿಸವೆ
ಮುಕ್ತಿಯ ಪಡೆದಿಹ ಯೋಗಿಗಳ?
ಕತ್ತಲೆಯೊಳು ಮಿಣುಮಿಣುಕುವ ಮಿಂಚಿನ ಹುಳು ಹೀಯಾಳಿಸವೆ
ನಿಶೆಯೊಳು ಮಿಣುಕುವ ತಾರೆಗಳ?
ಹರಿಯಿರಿ ತೊರೆಗಳೆ, ಮೆರೆಯಿರಿ ಕೆರೆಗಳೆ, ಬನಗಳೆ ರಾಜಿಸಿರಿ,
ಧ್ಯಾನದಿ ಕುಳಿತಿಹ ಋಷಿಗಳ ತೆರದೊಳು ಗಿರಿಗಳೆ ಪೂಜಿಸಿರಿ;
ಬೊಮ್ಮದ ಮನದೊಳು ಹೊಳೆಯುವ ಕನಸುಗಳಂದದ ಮೋಡಗಳೆ,
ತೇಲಿರಿ ನೀಲಾಕಾಶದೊಳೆಲೆ ತಿಳಿನೀರಿನ ಬೀಡುಗಳೆ!
ಅಂದಿನ ನಿಮ್ಮಯ ನೇಹವು ಇಂದಿಗು
ನೂತನವಾಗಿದೆ ಭಾವದೊಳು;
ನಿಮ್ಮೊಡಗೂಡುವ ಕವಿತಾನಂದವ
ಕೆಡಿಸವು ಲೋಕದ ನೋವುಗಳು!
ಶಿಲೆಗಳ ನೆಗೆಯುತ ಹರಿಯುವ ತೊರೆಗಳ ನೀರೊಳು ಹರಿಯುವೆನು,
ಮೈಯನು ಮರೆಯುವೆನು!
ಸುಳಿಸುಳಿವೆಲರೊಳು ಲೀಲೆಯನಾಡುವ ಅಲೆಗಳ ಕರೆಯುವೆನು
ಹಾಡನು ಬರೆಯುವೆನು!
ಕಾಣುವ ಸೊಬಗಿನೊಳಾತ್ಮದ ಕಾಣದ ಸೊಬಗನು ನೋಡುವೆನು,
ಹರುಷದ ಲಹರಿಯು ಉಕ್ಕಲು ಎದೆಯೊಳು ಗೀತವ ಹಾಡುವೆನು;
ನಿಮ್ಮೀ ಮಂಗಳ ಸಂಗವ ತೊರೆಯೆ,
ನಿಮ್ಮಾನಂದವನೆಂದಿಗು ಮರೆಯೆ;
ನಿಮ್ಮೊಳಗೆನ್ನನು ಕಂಡಿಹೆನು,
ಕವಿತಾನಂದವನುಂಡಿಹೆನು!


ಕಡಲೊಳೇಳುವಲೆಗಳಂತೆ, ಎಲ್ಲೊ ಬಿದ್ದು ಎಲ್ಲೊ ಎದ್ದು
ಬ್ರಹ್ಮದಲ್ಲಿ ಮರಳಿ ಮರಳಿ ಅಲೆಯುತಿರುವೆವು!
ಬಾನಿನಲ್ಲಿ ತಾರೆಯಾಳಿ ಮೂಡಿ ಹೊಳೆದು ಮುಳುಗುವಂತೆ
ಮೂಡಿ ಮುಳುಗಿ, ಮುಳುಗಿ ಮೂಡಿ ಕುಣಿಯುತಿರುವೆವು!
ವಿಶ್ವವೆಲ್ಲ ದೇವ ನುಡಿದ
ಸವಿಯ ಸುಳ್ಳು ಎಂದು ಎಲ್ಲ
ಒಳಗೆ ಬಲ್ಲರು!
ಮೋಹಪಾಶದಲ್ಲಿ ಸಿಲುಕಿ
ತಿಳಿದ ಗುಟ್ಟ ಹೇಳಲಂಜಿ,
ಹೇಳಲೊಲ್ಲರು!
ತೊರೆಯ ನೀರಿನಲ್ಲಿ ಇಳಿಯೆ, ನಿಜವ ನುಡಿಯಬೇಡ ಎಂದು
ಬೇಡುತಿರುವುದು!
ನಲಿವ ಸುಮದ ಬಳಿಗೆ ಹೋಗೆ, ಗುಟ್ಟನಾಡಬೇಡ ಎಂದು
ಕಾಡುತಿರುವುದು!
ಸದ್ದೆಯಿಲ್ಲದಿರುಳಿನಲ್ಲಿ ಇಂದುವನ್ನು ನೋಡೆ ನಾನು
ಬೇಗ ಕಿರಣಗಳನು ಅಟ್ಟಿ ಕೆನ್ನೆಗೊಂದು ಮುತ್ತು ಕೊಟ್ಟು
ನಿಜವನರಿತ ನೀನು, ಕವಿಯೆ, ಆಟವನ್ನು ಕೆಡಿಸಬೇಡ
ಸುಮ್ಮನಾಗು ಎಂಬನು!….

೧೯೨೭-೧೯೨೮