ನಿನ್ನಿಂಚರದ ಹೊನಲೊಳೆನ್ನೋಡವೋಡುತಿದೆ;
ಸುತ್ತಲೂ ಬೆಳ್ದಿಂಗಳೆಸೆಯುತಿಹುದು.
ತೇಲುತಿದೆ, ತೇಲುತಿದೆ; ತುದಿಯಿಲ್ಲ, ಮೊದಲಿಲ್ಲ;
ಎಲ್ಲಿಯೂ ನೀರವತೆ ಹಬ್ಬಿರುವುದು.

ಎಂದೇತಕೆಂದಾನು ದೋಣಿಯಡರಿದೆನರಿಯೆ;
ಯಾವೆಡೆಗೆ ತೇಲುತಿಹೆನೆಂಬುದರಿಯೆ!
ದೋಣಿಯಲಿ ನಾನೊಬ್ಬನೇ ಮಲಗಿಹೆನು, ದೇವ,
ಕಣ್ಮುಚ್ಚದರಿಲುಗಳ ನಿಟ್ಟಿಸಿಹೆನು.

ಎಲ್ಲಾದರೂ ತೀರವೊಂದಿರುವುದಿಲ್ಲವೇನು?
ಅಲ್ಲಾದರೂ ನನ್ನ ಜೊತೆಯಿರುವುದಿಲ್ಲವೇನು?
ಎಂದಾದರೂ ನೀನು ಮೈದೋರದಿರುವೆಯೇನು?
ಎಂತಾದರೇಕರಿಯೆ, ಕೂಡುವೆವು ನಾನು ನೀನು?

೧೬-೮-೧೯೨೮