“ಕನ್ನಡದ ಕಬ್ಬದಲಿ ರಸವುಕ್ಕುತಿಲ್ಲ;
ಕನ್ನಡದ ಕಬ್ಬಿಗರು ಬರಿಯರೆಗಳಂತೆ
ಹೆರರ ಕೊಳಲಿನ ದನಿಯ ಬೀರುತಿಹರಂತೆ;
ಕನ್ನಡಕೆ ಕೊರಳಿಲ್ಲ; ಹುರುಳು ತಿರುಳಿಲ್ಲ;
ಬೆಳಕಿಲ್ಲ; ಜೀವನದ ಹುರುಪೆಂಬುದಿಲ್ಲ.”
ಎಂಬುದನು ಕೇಳಲೆದೆಗಲುಗಿಕ್ಕಿದಂತೆ
ಬಾಳು ಬಾಯಾರುವುದು; ಮೂಡುವುದು ಚಿಂತೆ:
ನನ್ನಿಯಿಹುದದರಲ್ಲಿ; ಎಲ್ಲ ಸುಳ್ಳಲ್ಲ!

ಕನ್ನಡಾಂಬೆಯ ಮಗನು, ಕನ್ನಡಿಗ ನಾನು!
ತಾಯ ನಿಂದೆಯ ಕೇಳಿ ನಡುಗುವುದು ಹೆಮ್ಮೆ!
ಪಂಪ ರನ್ನರ ಹೆತ್ತ ನುಡಿಗೆ ಕುಂದೇನು?
ಕವಿಚಕ್ರವರ್ತಿಗಳು ಬರುವರಿನ್ನೊಮ್ಮೆ!

ಸರಸತಿಯೆ, ಕನ್ನಡಿಗನಾಸೆಯಿದು ಸಲ್ಗೆ!
ನನ್ನಮ್ಮ, ತಾಯೆ, ಸಿರಿಗನ್ನಡಂ ಗೆಲ್ಗೆ!

೧೮-೧೦-೧೯೨೮