ಕಾಂತಿಯ ಕೊಲ್ಲುವ ಕಾಳಿಯ ಕಾಯದ
ಕಪ್ಪನು ಕರೆದುದು ಕಾರಿರುಳು;
ಕಾಳಿಯ ಕಂಗಳ ಕೋಪದ ಕಿಡಿಗಳ
ಜೋತಿಯ ಜರೆದುದು ಕಾರ್ಮಿಂಚು.
ಕಾಳಿಯು ಉಟ್ಟಿಹ ಕುರುಡಿನ ಸೀರೆಯ
ಕರಿಯಂಚಾದುದು ಕಾರಿರುಳು;
ಕಾಳಿಯು ತೊಟ್ಟಿಹ ಕೈಗಳ ಬಳೆಗಳ
ಕುಡಿಮಿಂಚಾದುದು ಕಾರ್ಮಿಂಚು.
ಕಾಳಿಯು ಕೆದರಿದ ಕೇಶದ ಕೂರಾ-
ದೊಡ್ಡಂತಾದುದು ಕಾರಿರುಳು;
ಕಾಳಿಯು ಮುಡಿದಿಹ ಕಿಚ್ಚಿನ ಮುಗುಳಿನ
ಥಳಕಂತೆಸೆದುದು ಕಾರ್ಮಿಂಚು.
ಕಾಳಿಯ ಸಿಟ್ಟಿನ ಕಾಳ ಕರಾಳದ
ಮೊಗದೊಲು ಮೆರೆದುದು ಕಾರಿರುಳು;
ಕಾಳಿಯ ಆಸ್ಯದ ಹಾಸ್ಯದ ಹಾಸ ವಿ-
ಲಾಸವ ಹೋಲಿತು ಕಾರ್ಮಿಂಚು.
೧೫-೯-೧೯೨೭
Leave A Comment