ಮೇಲೇಳು; ಸಾಕು, ಬಿಡು; ಜಪಮಣಿಯನಾಚೆಯಿಡು; ಮೂಡಣವ ನೋಡು:
ಸಿರಿಗೆಂಪನೆರಚುತ್ತ ಮೂಡುತಿದೆ ಬೆಂಗದಿರು, ಮೆರೆಯುತಿದೆ ನಾಡು;
ಪಸುರುಡೆಯ ದೇಸಿಯಿಂ ಹಿಮಮಣಿಯ ಮಾಲೆಯಿಂ ತಳಿತೆಸೆಯೆ ಸುಗ್ಗಿ
ಬಗ್ಗಿಸುವ ಕೋಗಿಲೆಗಳಿಂಚರವ ಬೀರುತಿವೆ ಸೊಬಗಿಂಗೆ ಹಿಗ್ಗಿ!

ನಿಲ್ಲದಲೆ ಹಾರುತಿದೆ ಕಾಲವೆಂಬುವ ಹಕ್ಕಿ ರೆಕ್ಕೆಯನು ಬಿಚ್ಚಿ;
ಹರಿಯುತಿದೆ ಜೀವನದ ಹೊಳೆ ಬಾಳಿನಾಸೆಗಳನೆಲ್ಲವಂ ಕೊಚ್ಚಿ;
ಕುಳಿತಿಂತು ಮೂಲೆಯಲಿ ಕಲ್ಪನೆಯ ದೇವನಂ ಕೊರಕೊರಗಿ ಕರೆದು
ಮಿಂಚುತಿಹ ಸೊಗವನೇಕಿಂತು ದೂಡುವೆ, ನಿನ್ನ ಪುಣ್ಯವನೆ ತೊರೆದು?

ಬಾಳ ಬಟ್ಟಲೊಳೆಸೆವ ಸೋಮರಸ ಬತ್ತಿಹೋಗುವ ಮುನ್ನ ಹೀರು;
ಬೇರೊಂದು ಸಗ್ಗವಿಹುದೆಂಬ ನಂಬಿಕೆ ನಂಜು; ಮನದಿಂದ ತೂರು.
ಬೇರೆ ಸಗ್ಗವದೆಲ್ಲಿ? ಬೇರೆ ಜೀವನವೆಲ್ಲಿ? ಎಲ್ಲ ತಿರೆಯಲ್ಲಿ!
ಹಿರಿಯರೆಂದೊಡೆ ಏನು? ಹಿರಿಯರೆಂಬುವರೆಲ್ಲಿ? ಬರಿ ಸೊನ್ನೆಯಲ್ಲಿ!

ವೇದವೆಂಬುವ ಗೋಳ ಹಾಡಿರುವ ಹೇಡಿಗಳ ಬಳಗವೀಗೆಲ್ಲಿ?
ಗೀತೆಯೆಂಬುವ ಮಹಾ ನೀತಿತತ್ತ್ವವ ನುಡಿದ ವೈಕುಂಠನೆಲ್ಲಿ?
ಮಣ್ಣಿನಿಂದೈತಂದು ಮಣ್ಣಿನಲ್ಲಡಗಿದರು; ನುಂಗಿದುದು ಮಿತ್ತು:
ಕಡೆಯಲ್ಲಿ ಹುಡಿಯೊಳಡಗುವ ನೀನು ವೈರಾಗ್ಯವಂ ಬಿಸುಡು ಕಿತ್ತು!

ನಾವು ಒಲಿದೆವು ಕೆಲರ ಮೋಹದಿಂದೆದೆಗೊತ್ತಿ ಮುತ್ತುಗಳ ಕೊಟ್ಟು;
ಮೆಲ್ಲನಿಳಿದರು ಎಲ್ಲ ನೆಲದಾಳದಲ್ಲೊರಗೆ ರಂಗವಂ ಬಿಟ್ಟು.
ಅವರುಳಿದ ರಂಗದಲಿ ನಾವೀಗ ನಲಿಯುತಿಹೆವಾನಂದದಿಂದ;
ನಾವಳಿದು ಮರೆಯಾಗಲೀ ರಂಗ ಮೆರೆಯುವುದು ಬೇರೆಯವರಿಂದ!

ರವಿಯುದಯದಲಿ ಮೂಡುತಿನ ಮುಳುಗೆ ಬಾಡುವುವು ಹೂವುಗಳು ಬಿದ್ದು;
ಮೇಲೆ ಮತ್ತಿನನೇಳೆ ಹೊಸಮುಗಳು ಮೈದೋರಿ ಮೆರೆಯುವುವು ಎದ್ದು.
ಬಿದ್ದಲರು ಮತ್ತೆಂದು ಬಾರದೈ, ತೆರಳುವುದು ಪುಡಿಯೊಳೊಂದಾಗಿ.
ಅಂತೆ ಮನುಜನ ಜೀವ: ಹೂವು ನಗುವುದು ನಿನ್ನನೆಲೆ ಮರುಳೆ ಚಾಗಿ!

ತಿಂದುಂಡು ಸುಖದಿಂದಲಿರುವುದೊಂದನೆ ನೆನೆದು ಬಾಳುವವರನ್ನೂ
ಮುಂದೆ ದಿಟ್ಟಿಯನಟ್ಟಿ ತಿಂದುಣದೆ ದೇಹವನು ನೋಯಿಸುವರನ್ನೂ
ಮಿರ್ತುವಿನ ದನಿಯೊಂದು ಕರೆಯುತಿದೆ ನಿಶೆಯಂತರಾಳದಿಂದಿರದೆ!
ಇಂತಿರಲು ಪಾಪವೆಂದೇಕಿಂತು ಚಿಂತಿಸುತ ಗೋಳಿಡುವೆ ಬರಿದೆ?

ಉಣಲನ್ನ ಉಡಲುಡೆಯು, ತೊಡಲೊಡವೆ, ಮನೆಯಿರಲು, ನಲಿಯೆ ಜೊತೆಯಲ್ಲಿ
ನುಣ್ದನಿಯ ನಗೆಮೊಗದ ಕೋಮಲೆಯು ಸಾಕು! ಬೇರೇನು ಬೇಕಿಲ್ಲಿ?
ತಣ್ಗದಿರ ಕಾಂತಿಯಲಿ ಕಾಂತೆಯಿರೆ ಬೀಣೆಯಿರೆ ಮೇಣಿರಲು ಕಬ್ಬ
ವೈಕುಂಠವಿನ್ನೇಕೆ? ಕೈಲಾಸವಿನ್ನೇಕೆ? ಮೇಲಿಹುದೆ ಹಬ್ಬ?

ಬಾಳಿನೊಳು ದುಃಖವಿಹುದೆಂದೇಕೆ ಬಾಳೀವ ಸುಖಗಳನು ಬಿಡುವೆ?
ನೊರೆಹಾಲು ಸಿಕ್ಕದಿರೆ ನೀರಡಿಕೆಯಾರುವುದೆ ನಂಜ ನೀಂ ಕುಡಿಯೆ?
ಗಿಡದಲ್ಲಿ ಮುಳ್ಳಿರುವುದೆಂದೇತಕಲರುಗಳ ನರುಗಂಪ ಹಳಿವೆ?
ಸಾವು ಮುಂದಹುದೆಂದು ಕೂರಸಿಗೆ ತಲೆಯೊಡ್ಡಿ ಇಂದೇತಕಳಿವೆ?

ಇಹಪರವ ಕುರಿತು ಚಿಂತೆಯ ಮಾಡಿ ವಾದಿಸಿದ ಪಂಡಿತರದೇಕೆ
ಮಣ್ಣಿನೊಳಗಡಗಿದರು? ಮೂರ್ಖರಾ ದುರ್ಗತಿಯು ನಿನಗಾಗಬೇಕೆ?
ಒಂದಿರಲಿ, ಎರಡಿರಲಿ, ಒಂದೆ ಎರಡಾಗಿರಲಿ, ಚಿಂತೆ ನಿನಗೇಕೆ?
ಸೂರ್ಯಕಿರಣದ ಸಂಖ್ಯೆ ಕಾಂತಿಯನೆ ಕಾಣದಿಹ ಕುರುಡಂಗದೇಕೆ?

ಸೇವಿಸಿದೆ ಸಾಧುಗಳನೋದಿದೆನು ವೇದಗಳ ಪಂಡಿತರ ಕೂಡಿ.
ನಾಕಾರ ಸಾಕಾರಗಳ ಕುರಿತು ಯುಗವೆಲ್ಲ ವಾದವನು ಮಾಡಿ
ಮನವಳುಕಿ, ಬಗೆ ಕದಡಿ, ಮೊಗ ಕಂದಿ, ಕಳೆಗುಂದಿ ಬಲುಬಳಲಿ ಬೆಂದೆ:
ಪಡೆದ ಬೆಳಕನು ಕಳೆದು ಕಗ್ಗತ್ತಲಲಿ ನಿಂದೆ, ಸಂದೆಯವ ತಂದೆ!

ಇಹಸುಖವನರಿತಿಹೆವು; ಪರಸುಖವದೆಂತಿಹುದೊ ಬಲ್ಲವರದಾರು?
ಕರದೊಳಿಹ ಮಣಿಯೊಂದು ಮಿಗಿಲು ಶರಧಿಯ ಸಿರಿಗೆ: ಎಂಬುದನು ಸಾರು!
ಕುರುಡ ಕುರುಡನ ಹಿಡಿದು ಕೊರಕಲೊಳಗಿಳಿವಂತೆ ಪಂಡಿತರ ನೆಚ್ಚೆ!
ಕುಂಟ ಕುಂಟನ ನಂಬುತಿದ್ದೆಡೆಯೆ ಇರುವಂತೆ ಶಾಸ್ತ್ರಗಳ ಮೆಚ್ಚೆ!

ಸ್ವರ್ಗನರಕಗಳಂತೆ, ಪಾಪಪುಣ್ಯಗಳಂತೆ, ಕರ್ಮಫಲವಂತೆ!
ಹರಿಯಂತೆ, ಶಿವನಂತೆ, ಬೇರೊಂದು ಬಾಳಂತೆ, ಬರಿಯಂತೆ ಕಂತೆ!
ಎಂತು ಬರುವೆವೊ ನಾವು? ಎಂತು ಪೋಪೆವೊ ನಾವು? ಮಿಂಚು ಹೊಳೆವಂತೆ!
ನಾವಿರಲು ಸಾವಿಲ್ಲ; ಸಾವಿರಲು ನಾವಿಲ್ಲ; ನಮಗೇಕೆ ಚಿಂತೆ?

ಬಿದಿಯ ಕೈ ಬರೆಯುವುದು, ಹಿಂತಿರುಗಿ ನೋಡದದು; ಸಾಗುವುದು ಮುಂದೆ.
ಏನು ಬೇಡಿದರೇನು? ಎನಿತು ಮೊರೆಯಿಡಲೇನು? ದಾರಿಯದಕೊಂದೆ!
ಬಾಂದಳಕೆ ಕೈಮುಗಿದು ಕಂಬನಿಯ ಕರೆಕರೆದು ಬೇಡುತಿಹೆ ಯಾರ?
ತಾರೆಗಳು ರವಿಶಶಿಗಳೆಮ್ಮಂತೆ ಬಂಧಿಗಳು; ತೋರದಿದೆ ತೀರ!

ನೂಕಾಚೆ ಶಂಕರನ; ಸಾಕು, ಬಿಡು ವೇದಾಂತವಂತಿರಲಿ ಯೋಗ!
ಪಂಡಿತರು ವಾದಿಸಲಿ ಸಾಂತ ನಾಂತವ ಕುರಿತು; ಬಾ ಹೊರಗೆ ಬೇಗ!
ಬರಿದೆ ತರ್ಕದೊಳೆನಿತು ಕಾಲವನು ಕಳೆವೆ? ತುದಿಯಿಲ್ಲ, ಬುಡವಿಲ್ಲ!
ಸಾರಿದುವು ವೇದಾಳಿ, ಚೀರಿದರು ಋಷಿನಿಕರ; ಕೊನೆಗಾಣಲಿಲ್ಲ……..

(ಸಶೇಷ)
೧೯೨೭-೨೮