ಮೂಡಲಲಿ ಮೆಲುಮೆಲನೆ ಮುಂಬೆಳಕು ಮೂಡುತಿರೆ,

ತಂಬೆಲರ ತೀಟದಲಿ ತಿರೆಯು ಕಣ್ದೆರೆಯುತಿರೆ,
ಮೈತಿಳಿದು ಮೊಗ್ಗುಗಳು ಬಳ್ಳಿಯಲಿ ಬಿರಿಯುತಿರೆ,
ಪೂತ ತರುನಿಕರದಲಿ ದುಂಬಿಗಳು ಮೊರೆಯುತಿರೆ,
ನೀರವತೆಯಿಂದಿಂಚರದ ಸರಿಯು ಸುರಿಯುತಿರೆ,
ನವಜೀವ ರಸವೇರಿ ಜಗದಿ ಸಂಚರಿಸುತಿರೆ,
ಮೂಡಿದೆವು ನಾವು!
ಕೂಡಿದೆವು ನಾವು!
ಹಾಡಿ ಹಾರಾಡಿ
ಮುದದಿ ಮಾತಾಡಿ
ಮೈಮರೆತೆವಂದು,
ಎಲೆ ಗೆಳೆಯ ಚಂದು!
ಹೊಸಬಾಳು, ಹೊಸ ಬೆಳಕು ಮೆರೆದುವಲ್ಲಿ:
ಹಾಡಿದುವು ಹಕ್ಕಿಗಳು ತರುಗಳಲ್ಲಿ;
ತಿಳಿಯ ಹೊಳೆ ಹರಿಹರಿದು ಬನಗಳಲ್ಲಿ
ನಮ್ಮ ಲೀಲೆಯ ಕೂಡಿ ನಲಿದುದಲ್ಲಿ,
ಹಸುರು ಮನಮೋಹಿಸುತ ಬೆಳೆದುದಲ್ಲಿ;
ನಾವಿಬ್ಬರೊಡಗೂಡಿ ಬಳೆದುವಲ್ಲಿ!
ಹೂವುಗಳ ಕೊಯ್ದು
ಹಾರಗಳ ನೇಯ್ದು
ನಿನಗೆ ನಾ ಸೂಡಿ
ನನಗೆ ನೀ ಸೂಡಿ
ನಾವೊಲಿದೆವಲ್ಲಿ
ಮಲೆನಾಡಿನಲ್ಲಿ!

ನೆನಪಿದೆಯೆ, ಎಲೆಗೆಳೆಯ, ನಿನಗೆನ್ನ ಚಂದು?
ಮರೆತೆಯಾದರೆ ನೀನು ನಾ ಮರೆಯೆನೆಂದೂ!
ಹಕ್ಕಿಗಳನಣಕಿಸುತ ಹಾಡಿದೆವು ಅಂದು;
ಆ ಹಾಡು ಮೊರೆಯದೇ ನಿನ್ನೆದೆಯೊಳಿಂದು?
ಅರಿಯದಲೆ ಅರಿತವರ ಸಂತಸವ ಪಡೆದು
ಬಾಳಿದೆವು ಮುಂದುಮುಂದಕೆ ನಡೆದು, ನಡೆದು.
ಹಾಡುಗಳ ಹಾಡಿ
ಲೀಲೆಗಳ ಹೂಡಿ
ನಡೆಯುತಿರಲಿಣುಕಿ
ಕಾಲವನು ಕೆಣಕಿ
ಮೂಡುತಿಹ ಹೊತ್ತು
ಮೇಲೇರುತಿತ್ತು!

ತರುವಾಯ ಹರಿವ ಹೊಳೆಯನು ಹಾದು ದಾಂಟಿ
ಬಳಲಿಕೆಯ ಪರಿಹರಿಸೆ ತಿಳಿನೀರನೀಂಟಿ
ಹಿರಿತನದ ಹೆಮ್ಮೆಯಲಿ ತೆಕ್ಕೆಯನು ಬಿಟ್ಟು
ಒಂದನೆರಡನು ಮಾಡಿ ನಡೆದೆವಡಿಯಿಟ್ಟು.
ಬರಬರುತ ಕಾಡಿನಲಿ ನೀನು ಮರೆಯಾದೆ
ಕವಲೊಡೆದ ಹಾದಿಯಲಿ ನಾ ಬೇರೆಯಾದೆ!
ಬೇರೆ ಗೆಳೆಯರು ಬಂದು
ನನ್ನ ಬಳಿಯಲಿ ನಿಂದು
ಮಾತಾಡಿದರು, ಚಂದು;
ನಿನ್ನ ಮರೆತೆನು ಅಂದು!
ನೀನೆನ್ನ ಮರೆತೆ;
ಹೊಸಬರಲಿ ಬೆರೆತೆ!
ಬನಗಳಲಿ ಸಂಚರಿಸೆ ಬನದೇವಿಯೈತಂದು
ಒಲಿದು ಸಲಹಿದಳೆನ್ನ ‘ಮುದ್ದು ಮಗನೇ’ ಎಂದು!
ಕೋಗಿಲೆಗಳಿಂಚರವ ಕಲಿಸಿದಳು ನನಗೆ;
ಹೂವುಗಳ ದೇಸಿಯನು ಕೊಯ್ದಿತ್ತಳೆನಗೆ!
ಬಂಡೆಗಳ ಕಠಿನತೆಯನಾಯ್ದಿತ್ತಳೆನಗೆ!
ಕಮಲಗಳ ಕೋಮಲತೆಯನ್ನಿತ್ತಳೆನಗೆ!
ಬಾಂದಳದ ನೀಲಿಯಲಿ
ಕಾಡಿಗೆಯ ಹಚ್ಚಿ
ಕತ್ತಲೆಯ ಕಪ್ಪಿನಲಿ
ಕುರುಳುಗಳ ಮುಚ್ಚಿ
ಮುದ್ದುಮಗನನು ಮೆಚ್ಚಿ
ಬ್ರಹ್ಮಾಂಡವನು ಬಿಚ್ಚಿ
ನಿತ್ಯತೆಯ ಹೊಯ್ದಳೆನಗೆ!
ಸಂಚರಿಸುತಿರೆ ನಾನು
ಕವಿತೆಯೈತಂದು
ಮೋಹದಲಿ ಬಳಿನಿಂದು
ಮುದ್ದಿಸಿದಳಂದು!
ನಮ್ಮೊಲ್ಮೆ ಬೇರೂರಿ
ಕವಿತೆಯೆಂಬುವ ನಾರಿ
ಕಡೆಗಿನಿಯಳಾದಳೆನಗೆ!

ಬಾಳುತಿರೆ ನಾನಿಂತು ದೂರ ಮಲೆನಾಡಿನಲಿ
ನೀನು ಬಂಡಿಯನೇರಿ ತಿರುಗಿ ಹೊರನಾಡಿನಲಿ
ಹೊಸ ನಗರಗಳ ನೋಡಿ
ನಾಗರಿಕರೊಡಗೂಡಿ
ಕಲಿತು ಹೊಸ ಬಿಜ್ಜೆಗಳ ಬಿಜ್ಜೆವಳನಾದೆ!
ಎಳೆತನದ ಹಳ್ಳಿಗನ ನೀ ಮರೆತು ಹೋದೆ!
ಒಲ್ಮೆ ಕಟ್ಟಿದ ಕಣ್ಣಿ ಹರಿವುದೇನೈ, ಚಂದು?
ಎಳೆದಷ್ಟು ಉರುಳು ಬಿಗಿಬಿಗಿಯಾಗದೇ, ಚಂದು?
ನನ್ನ ಬಾಳಿನ ಬಾನಿನಲಿ ಕಾರ್ಮುಗಿಲು ಮುತ್ತಿ
ಸಿಡಿಲೆದ್ದು ಮಿಂಚೆಸೆದು ಬಿರುಗಾಳಿ ಬೀಸೊತ್ತಿ
ಬಲ್ಸರಿಯು ಸುರಿದು
ನೀರು ಹರಿಹರಿದು
ಕೊಚ್ಚಿತೈ ಕೊಳೆಯ,
ಪ್ರೀತಿಯಾ ಗೆಳೆಯ:
ಕಬ್ಬಿಗನ ಹೆಮ್ಮೆ
ಕಂಪಿಸಿತು ಒಮ್ಮೆ!

ನೀನನಿತರೊಳು ಬಗೆ ಬಗೆಯ ಕನಸುಗಳ ಕಂಡು
ಜೀವನದರಣ್ಯದಲಿ ಸುಖದುಃಖಗಳನುಂಡು
ಹಳೆಯ ಬಾಳನು ನೆನೆದು ಬರುತಿದ್ದೆ ಹಿಂತಿರುಗಿ!
ಹಳೆಯ ಗೆಳೆಯನ ನೆನೆದು? ಮನಮರುಗಿ? ಎದೆ ಕರಗಿ?
ವನವಿಹಂಗಮದಂತೆ ಕಾಡಿನಲಿ ನಾನು
ಮೈಮರೆತು ಹಾಡುತಿರಲೈತಂದೆ ನೀನು!
ಎನ್ನ ದನಿಯನು ಕೇಳಿ
ಮನದಿ ಮುದವನು ತಾಳಿ
ಬೆರಗಾಗಿ ನೀ ನಿಂತೆ
ನಾನರಿಯದಂತೆ!
ಬೆಂಕಿಯಲಿ ಮಿಂದೆದ್ದ
ವರುಷಗಳ ಕಳೆದಿದ್ದ
ನನ್ನ ಮೊಗವನು ನೋಡಿ
ಗುರುತಾಗಲಿಲ್ಲ!
ಕಣ್ಣು ಹೇಳದೆ ಹೋಯ್ತು!
ಬಗೆಯು ತಿಳಿಯದೆ ಹೋಯ್ತು!
ಕಣ್ಣರಿಯದಿರಲೇನು?
ಕರುಳರಿಯದಿಹುದೆ?
ಕಣ್ಣು ಕಾಣದು ನನಗೆ!
ಹಾಡು ಹೇಳಿತು ನಿನಗೆ!
ಹಳೆಯ ಗೆಳೆತನವೆಲ್ಲ
ನೂರುಮಡಿಯಾಯ್ತು!

ಕಂಬನಿಗಳುಕ್ಕಿದುವು; ಎದೆಯುಬ್ಬಿ ನಡುಗಿದುದು!
ಕಂಠದಲಿ ಮಾತು ಹೊರಹೊಮ್ಮಲೆಳಸುಡುಗಿದುದು!
ನೀನೆನ್ನ ಬಳಿ ಬಂದೆ;
ನಸುನಗುತ ನಿಂತೆ.
ಹಳೆಯ ಗೆಳೆತನವಪ್ಪಿ
ಮರಸೊಂದಿ ನಿಂತೆ!
ಹಳೆಯ ಗೆಳೆಯನ ಬಳಿಯೊಳಿಹ ಕವಿತೆಯನು ನೋಡಿ
ಸಂತಸದ ಹೊನಲುಕ್ಕಿ ಮೈನವಿರು ಮೇಲ್ಮೂಡಿ
ಧನ್ಯ ನಾನೆಂದೆ!
ಧನ್ಯ ನೀನೆಂದೆ!
ನೀನೆನ್ನ ಕರೆದೆಡೆಗೆ
ನಾ ಬರುವೆನೆಂದೆ!
ವಿಲಯ ಕಾಲದವರೆಗು
ನಿನ್ನ ಬಿಡೆನೆಂದೆ!

ಮೂಡಲಲಿ ಮೆಲುಮೆಲನೆ ಮುಂಬೆಳಕು ಮೂಡಿತೈ!
ತಂಬೆಲರ ತೀಟದಲಿ ತಿರೆಯು ಕಣ್ದೆರೆಯಿತೈ!
ಮೈತಿಳಿದು ಮೊಗ್ಗುಗಳು ಬಳ್ಳಿಯಲಿ ಬಿರಿದುವೈ!
ಪೂತ ತರುನಿಕರದಲಿ ದುಂಬಿಗಳು ಮೊರೆದುವೈ!
ನೀರವತೆಯಿಂದಿಂಚರದ ಸರಿಯು ಸುರಿದುದೈ!
ನವ ಜೀವ ರಸವೇರಿ ಜಗದಿ ಸಂಚರಿಸಿತೈ!
ಮೂಡಿದೆವು ಮರಳಿ!
ಕೂಡಿದೆವು ಮರಳಿ!
ಹಾಡಿ ಹಾರಾಡಿ
ಮುದದಿ ಮಾತಾಡಿ
ಮೈಮರೆತೆವಂದು
ಮರಳಿ, ಓ ಚಂದು!

೧೪-೧೨-೧೯೨೮