ನನ್ನ ಪುಣ್ಯದೊಳೆನಗೆ ನೆಚ್ಚಿಲ್ಲ, ಗುರುದೇವ,
ನಿನ್ನ ಕರುಣೆಯೆ ನನಗೆ ಹಿರಿಯ ನೆಚ್ಚು.
ನನ್ನ ಬಿಜ್ಜೆಯ ಬಲ್ಮೆಯಲ್ಲಿನಿತು ನೆಚ್ಚಿಲ್ಲ,
ನಿನ್ನೊಲ್ಮೆಯೇ ನನಗೆ ಹಿರಿಯ ಬಲ್ಮೆ!

ಕತ್ತಲಲಿ ಮುಗ್ಗುರಿಸಿ ಬೀಳುತಿರೆ ನಾನೆನ್ನ
ಬಿಜ್ಜೆ, ಬೆಳಕನು ತೋರಿ, ಪೊರೆಯದೆನ್ನ;
ಎನಿತು ಬಿಗಿ ಹಿಡಿದೊಡೆಯು ಮನಮಳುಕಿ ಬಳುಕುವುದು;
ಬಾಯ್ಬಿಡುತಲೆದೆ ಸೋತು ಕಾತರಿಪುದು.

ಕಂಬನಿಯ ಕರೆವೆ ಗೆಲ್ವಾಸೆಯಳಿದೊಮ್ಮೆ;
ಸೋತೊಡನೆ ಹೋರಾಟ ಸಾಕೆಂಬೆನೊಮ್ಮೆ;
ಸಿಟ್ಟಿನಲಿ ನೀನಿಲ್ಲವೆಂದೊರೆವೆನೊಮ್ಮೆ!
ದೈನ್ಯದಲಿ ಮನನೊಂದು ಕೈಮುಗಿವೆನೊಮ್ಮೆ!

೪-೮-೧೯೨೮