ಶ್ರೀ ವಾಗ್ದೇವಿಯ ವೀಣೆಯಿ

ನಾವಗಮುಗುವಿಂಚರವೊನಲೆಮ್ಮೀ ಕರ್ನಾ
ಟಾವನಿಯಂ ಪುಗಲಾಯ್ತು ಸ
ರೋವರಮದರೊಳ್ ಸರೋಜವಾದೈ, ಪಂಪಾ!

ಪೆಂಪುಂ ಕಂಪುಂ ತಾವರೆ
ಗೆಂಪುಂ ಪಸರಿಸಿವೆ ನಾಡೊಳೆಲ್ಲಿಯುಮಳಿವಿಂ
ಡಿಂಪಿಂಗೆ ಬಯಸುವಂದದಿ
ಸೊಂಪಿಂಗಾಸಿಸಿ ಮೊರೆಯುವೆ ನಿನ್ನೆಡೆ, ಪಂಪಾ!

ಕೊಳಲಿಂಪು ಬೀಣೆದನಿ ಕಾ
ರ್ಮೊಳಗಂ ಕಡಲಮೊರೆಯಂ ಗಿಳಿಗಳುಲಿಯಂ ಕೋ
ಗಿಲೆಯಿಂಚರಮಂ ಮೇಳೈ
ಸಲರಿಚ ಮಾಡಿದನು ನಿನ್ನನೆಲೆ ಕವಿ ಪಂಪಾ!

ಕನ್ನಡನುಡಿವೆಣ್ಣಿಗೆ ಮನ
ದನ್ನಂ; ಕನ್ನಡದ ಕಬ್ಬಿಗರ ಗುರು, ಮಿತ್ರಂ;
ಕನ್ನಡ ನುಡಿಯೋಜೆಗೆ ನೀಂ
ಕನ್ನಡಿಯಾಗಿಹೆ! ನಿನಗೆಣೆಯಾರೈ, ಪಂಪಾ?

ತಳಿತಿಹ ಬನಮಂ ಕಂಡೊಡ
ಮೆಳವೆಲರಾಟವ ಮಡಲ್ತ ಪೊದೆಯೊಳ್ ಕಾಣಲ್
ಪೊಳೆಯಲ್ತಣ್ಗದಿರಂಬರ
ದೊಳಮೆನ್ನಯ ಮನ ನೆನೆವುದು ನಿನ್ನಂ, ಪಂಪಾ!

ಕೂರಸಿಯ ಕಾಣೆ, ಕದನ ವಿ
ಶಾರದರಂ ನೋಡೆ, ನಾಡೆ ವೀರೋಕ್ತಿಗಳಂ
ಸಾರುವರ ಕಾಣೆ ನೀ ಮೈ
ದೋರುವೆ ಎನ್ನೀ ಮನವನದೆಡೆ, ಕವಿ ಪಂಪಾ!

ಮುನಿಸೊಲ್ಮೆ ಕೂರ್ಮೆ ಮೊದಲಹ
ಮನುಜರ ಮನದೊಳ್ ಸುಳಿಯುವ ಭಾವಗಳೆಲ್ಲಂ,
ಮನಸಿಜನುರಿಯಿಂ ಪೊರಮಡು
ವನಿತಂ ಕರುವಿಟ್ಟು ತೋರಿ ಬರೆದಿಹೆ, ಪಂಪಾ!

ಮರಿದುಂಬಿಯಾಗಿ ಪುಟ್ಟಿದೆ,
ಮರಿಗೋಗಿಲೆಯಾಗಿ ಹಾಡಿ ನಂದನವನದೊಳ್
ತಿರುಗಾಡಿದೆ; ಬನವಾಸಿಯ
ಸುರಸೌಂದರ್ಯವನನುಭವಿಸಿದೆ, ಕವಿ ಪಂಪಾ!

ಕಂಡೆನ್ ಕಾಮ್ಯಕ ವನಮಂ,
ಪಾಂಡವರೊಡಗೂಡಿ ಹಣ್ಣು ಹಂಪಲುಗಳನಾ
ನುಂಡೆನ್, ಭೀಮಾರ್ಜುನರಾ
ಗಂಡುಮನಾರೈದೆ, ಸೇವಿಸಿದೆ ಧರ್ಮಜನಂ.

ತುದಿಯೊಳ್ ಕುರುಭೂಪಾಲನ
ಗದೆಯಂ ತಾಗುವನಿಲಜನ ಗದೆಯಿಂ ಪೊರಮ
ಟ್ಟೆದೆಯಂ ಬಿರಿಯುವ ಬೆಂಕಿಯೊ
ಳುದಿಸಿದ ಕಂಬನಿವೊಳೆಯಲಿ ತೋಯ್ದೆನ್, ತೇಲ್ದೆನ್!

ಮುಡಿಯೊಳ್ ಭಾರತಮೆಲ್ಲಮ
ನಡಗಿಸಿ, ಕೂದಲೆಳೆಯೊಂದೆ ನಾರಿಗೆ ಸಾಲ್ಗುಂ
ಮೃಡನಂ ಮೀರುವ ವೀರರ
ಖಡುಗಗಳಂ ಕಡಿಯಲೆಂದು ಸಾಧಿಸಿ ತೋರ್ದಯ್!

ತುಳಿದಲೆವೆ ನಿನ್ನೊಡನೆ ಕುರು
ನೆಲಮಂ, ದ್ವಾಪರವ ಸೇರಿ ನಲಿವೆಂ, ನಗುವೆಂ,
ಅಳುವೆನೊಲಿವೆ; ನಿನ್ನೊಡಗೂ
ಡಲೆವೆನ್ ಕಲ್ಪನೆಯೆರಂಕೆಯ ಕೆದರಿ, ಪಂಪಾ!

ಸ್ಮೃತಿರೂಪವಾಂತ ಭಾವಂ
ಮತಿಯೊಳ್ ಸಂಚರಿಸಿ ಮೂರ್ತಿಗೊಂಡೊಡೆ ಛಂದೋ
ಗತಿಯಿಂದಕ್ಕುಂ ಸರಸ ಕ
ವಿತೆಯೆಂಬುದ ನಿನ್ನಯ ಕೃತಿ ತೋರ್ಕುಂ, ಪಂಪಾ!

ಬಲಮಿಲ್ಲ ಭೀಮನಂತಾ
ಚಲಮಿಲ್ಲ ಕೌರವನರಪನಂತಾ ಪಾರ್ಥಂ
ಗೊಲಿದಾ ಶೌರ್ಯಂ, ಧರ್ಮಂ
ಗೊಲಿದಾ ಧರ್ಮಂ ತೆರಳಿದುವೆಮ್ಮೀ ನಾಡಿಂ!

ನೀಡಯ್ ಭೀಮನ ಬಲಮಂ;
ನೀಡಯ್ ಕೌರವತಿಲಕನ ಚಲಮಂ, ಕೆಚ್ಚಂ;
ನೀಡಯ್ ಯಮಸುತನೊಲವಂ;
ನೀಡಯ್ ಸೂತಜನ ನನ್ನಿ ಚಾಗಮನೆಲ್ಲಂ!

ಕನ್ನಡನಾಡಿನೊಳುದಿಸಯ್
ಮುನ್ನಮೆ ಮೈದೋರಿದಂತೆ; ಬೆಳಕಂ ನೀಡಯ್!
ಇನ್ನೊಮ್ಮೆ ಹರಿದು ಕತ್ತಲೆ,
ಮನ್ನಿನ ಚೈತನ್ಯದೋಜೆ ಮೆರೆಯಲಿ, ಪಂಪಾ!

೧೪-೭-೧೯೨೮