ಬಂದಿಹನು ಎನ್ನಿನಿಯ!
ಬಂದಿಹನು ಎನ್ನಿನಿಯ
ಇಂದೆನ್ನ ಎದೆಯ ಬನಕೆ!
ಸೊಬಗಿನಲಿ ಗಾನದಲಿ
ಕುಣಿಕುಣಿದು ನಲಿನಲಿದು
ಬಂದಿಹನು ಎದೆಯಬನಕೆ!

ಪೆಂಪಿನಿಂದುಬ್ಬಿಹುದು!
ಹೆಮ್ಮೆಯಲಿ ಹಿಗ್ಗಿಹುದು
ಮೈಮರೆತು ಎದೆಯ ಬನವು!
ಇನಿಯನೊಡಗೂಡುವೆನು!
ಅವನೊಡನೆ ಹಾಡುವೆನು!
ಸೇರುವೆನು ಸೊಗದ ಕಡಲ!

ಅವನೆದೆಯ ಎದೆಗೊತ್ತಿ,
ಮೊಗದಲ್ಲಿ ಮೊಗವಿಟ್ಟು
ಹೀರುವೆನು ಅವನ ಬಾಳ,
ಅವನಿರವು ಎನ್ನಿರವು
ಜಗುನೆ ಗಂಗೆಯರಂತೆ
ಸಂಗಮಿಸಿ ಹರಿಯುವಂತೆ!

೩೧-೮-೧೯೨೮