ನಡುರಾತ್ರಿಯಾಗಿತ್ತು; ಬೆಳುದಿಂಗಳೆಸೆದಿತ್ತು;
ಬಂಧುಗಳ ನಿಂದೆಯಲಿ ಕಡುನೊಂದ ಜೀವವನು
ಎಲ್ಲವನು ಮನ್ನಿಸುವ ಕರುಣಾಳು ದೇವನಿಗೆ
ಯಜ್ಞಮಾಡಲು ಎಂದು ದಿಕ್ಕಿಲ್ಲದಾ ವನಿತೆ

ಮಲಗಿದರ ನಿದ್ದೆಯನು ಕೆಡಿಸದಲೆ ಮನೆಯಿಂದ
ಮೆಲುನಡೆಯನಿಕ್ಕುತ್ತ ಹೊರಟಳವಳು!
ಮನೆಯ ಅಂಗಳದೆಡೆಯ ಸೇರುತ್ತ, ನಿಂತಲ್ಲಿ,
ಕಣ್ದಣಿಯೆ ಮುಂದೆಂದು ಕಾಣದಿಹ ಮನೆಯನ್ನು ನಿಟ್ಟಿಸಿದಳು!
ಚಂದಿರನ ತಿಳಿಯಾದ ಸೊಬಗಿನಲಿ ಮಲಗಿದ್ದ
ತುಳಸಿಯನು ಸುತ್ತುವರಿವರಿದಡ್ಡಬಿದ್ದು
ನಡುಗಿದಳು, ಬೇಡಿದಳು ಮರುಕದಿಂದ;
ಒಲಿದಿದ್ದ ಹತ್ತಿರದ ಗಿಡಮರಗಳೆಲ್ಲರಿಗು
ಕಡೆಯ ಸಲ ಕೈಮುಗಿದು ಕಂಬನಿಯ ಸೂಸಿದಳು;

ಹದಿನಾರು ವರುಷದಾ ಬಾಲವಿಧವೆ!
ಹತ್ತಿರದ ಮರದಲ್ಲಿ ಗೂಬೆ ಕೂಗಿದರೇನು?
ಸಾವನಪ್ಪಿದ ರಮಣಿ ಅಪಶಕುನಕಂಜುವಳೆ?
ಹಜ್ಜೆಯಿಟ್ಟಳು ತನ್ನ ಮುದ್ದುಮನೆಯನು ಬಿಟ್ಟು!
ಮುದ್ದುಮನೆಯೇ? ಅಲ್ಲ! ಮುದ್ದುಮನೆಯಾಗಿತ್ತು
ತನ್ನಿನಿಯನಿರುವಾಗಲಾ ರಮಣಿಗೆ:
ಮದ್ದುಮನೆ ಇಂದದುವೆ ತಾನವಳಿಗೆ!
ಕೊಟ್ಟಿಗೆಯ ಸೇರದಲೆ ಹೊರಗಿದ್ದ ದನವೊಂದು
ನಿಂತುನೋಡಿತು ಸದ್ದುಮಾಡದಲೆ ನಡೆಯುತಿಹ
ಮಾರುತಿಯ ವಿಸ್ಮಯದಲಿ!
ತರಳೆ ನಿಂತಳು ನೋಡಿ: ತನಗೆ ಬಳುವಳಿಯಾಗಿ
ಬಂದ ದನವನು ಕಂಡು, ಎದೆಯ ಮರುಕವು ಉಕ್ಕಿ
ಕಣ್ಣ ಕಾಲುವೆಯಾಗಿ ಬಳಬಳನೆ ಹರಿಯೆ.
ಮೆರೆಯಿತಾಕೆಯ ಅಳಲ ಕಂಬನಿಯ ಲೋಕದಲಿ
ಹಿಂದಿನಾ ವೈಭವದ ಮದುವೆ ಮೆರವಣಿಗೆ!
ಅಯ್ಯೊ ಲೋಕವೆ, ನಿನ್ನ ಮಧುರ ಸಂಗದ ಕಣ್ಣಿ
ಕಬ್ಬಿಣವೊ ವಜ್ರವೋ ಹೇಳಬಲ್ಲವರಾರು?

ಕೇಳಿದಳು ಓಲಗದ ಕೊಳಲುಗಳ ಇನಿದನಿಯ;
ಮದ್ದಲೆಯ ತಾಳಗಳ ವೈಭವದ ಕೂಗುಗಳ!
ಬಂದ ನಂಟರ ಹಿರಿಯ ಗದ್ದಲದ ಮಾತುಗಳ!
ತನ್ನ ಸಖಿಯರು ಲೀಲೆಯಿಂದಂದ ಕಟಕಿಗಳ!
ನೋಡಿದಳು ಚಿನ್ನದಾಭರಣಗಳ ರಾಶಿಗಳ;
ತನಗೆಲ್ಲ ಮೈಯಿಟ್ಟ ನಾಣ್ಯಗಳ ಕಾಂತಿಗಳ;
ತಾನು ದಂಡಿಗೆ ಏರಿ ತನ್ನಿನಿಯನೊಡಗೂಡಿ
ಮುಂದನರಿಯದೆ ಬಂದ ಆಗಿನಾ ಪರಿಯ!
ಅಯ್ಯಯ್ಯೊ! ಆ ಆಗ ಎಂತುಟಾಗಿಹುದೀಗ?

ಬೆಚ್ಚಿದಳೆ? ಬೆದರಿದಳೆ? ಸಾವಿನಲಿ ತನ್ನಿನಿಯ-
ನೊಡಗೂಡಿ ಬಾಳ್ವೆನೆಂಬುವ ಬಯಕೆ ಬರಿದಾಯ್ತೆ?
ಇಲ್ಲ; ಎಂದೂ ಇಲ್ಲ! ತಿರುಗಿದಳು ರಮಣಿ;
ಮನೆಯಿಂದ ಹೊರಟಳವಳು!
ಜಗವೆಲ್ಲ ನೋಡುತ್ತ, ನೋಡುತ್ತ ನಿಂತಿತ್ತು!
ಕರುಣಾಳು ಜಗದೀಶ ನೋಡದಿಹನೆ?
ಗಗನದಲಿ ತಾರೆಗಳು ಮಿಣುಕಿದುವು, ಇಣಿಕಿದುವು;
ಚಂದಿರನು ಭಯದಿಂದ ಬೆಳ್ಳಗಾದ!
ಕಣ್ಣುಗಳ ಮುಚ್ಚಿದುವು ಗಿರಿತರುಗಳೆಲ್ಲಾ!
ಮೋಹದಲಿ ಬಿದ್ದಿವರು ಮರಣಕಳುಕದೆ ಇಹರೆ?

ಮುಂದೆ ನಡೆದಳು ರಮಣಿ, ಮೋಹಪಾಶವ ಹರಿದು,
ಕೋಮಲೆಯು ಕಲ್ಲಿನೆದೆಯಾಗಿ!
ಅಬಲೆ ಎಂಬರೆ ಅವಳ? ಪಾಪಿ ಎಂಬರೆ ಅವಳ?
ಅವಳೆದುರು ಯಮರಾಯ ನಡುಗದಿಹನೆ?
ಕಾಡು ಹತ್ತಿರವಾಯ್ತು; ಊರು ದೂರಾಯ್ತು!
ಯಮನ ಕಣ್ಣಿಯ ಹಿಡಿದು ತನ್ನ ಹೂವಿನ ಕೈಲಿ
ಬಂಧುಗಳ ನಿಂದೆಯಲಿ ಕಡುನೊಂದ ಜೀವವನು
ಎಲ್ಲವನು ಮನ್ನಿಸುವ ಕರುಣಾಳು ದೇವನಿಗೆ
ಯಜ್ಞಮಾಡಲು ಎಂದು ಹೊರಟಳವಳು!
ಮನೆಯಿಂದ ಹೊರಟಳವಳು!

ಮನುಜ ಲೋಕವೆ ನರಕ, ಬೇರೆ ನರಕವದೆಲ್ಲಿ
ಆ ವಿಧವೆಗೆ?
ಪತಿಯ ಲೋಕವೆ ನಾಕ, ಬೇರೆ ನಾಕವದೆಲ್ಲಿ
ಆ ಬಾಲೆಗೆ?
ಧರ್ಮಶಾಸ್ತ್ರಜ್ಞರೇ ಬನ್ನಿ ಧರ್ಮವ ತೋರಿ!
ನೀತಿಯಲಿ ಪಂಡಿತರೆ ಬನ್ನಿ ದಾರಿಯ ತೋರಿ!
ಧಾರೆಯನು ಎರೆದವನೆ, ಜೋಯಿಸನೆ, ಬಾ ಈಗ
ಕರೆ ನಿನ್ನ ಸಾಕ್ಷಿಗಳ! ಅಪರಾಧಿ ಯಾರು?
ಇದನೆಲ್ಲ ಸರಿಯೆಂದು ಹೊಗಳುವ ಸಮಾಜವೇ
ಎಲ್ಲಿ ಗೊರಕೆಯ ಹೊಡವೆ? ಬಾ ಬೇಗ ಇಲ್ಲಿ!
ಇಲ್ಲಿ ನ್ಯಾಯಾಸ್ಥಾನ! ಇಲ್ಲಿ ಧರ್ಮವ ಹೇಳು!
ಮರದ ಕರಿನೆರಳಲ್ಲಿ ಕೊರಲ ಕಣ್ಣಿಯನಪ್ಪಿ
ನೇತಾಡುತಿರುವಳೈ ಬಾಲವಿಧವೆ!

೨೫-೨-೧೯೨೮