ದುಃಖ ಮಲಗಿಹುದೆಮ್ಮ ಸುಖದ ಎದೆಯಲ್ಲಿ!
ಪಾಪವಡಗಿಹದೆಮ್ಮ ಪುಣ್ಯದೆದೆಯಲ್ಲಿ!
*          *           *           *
ಮನದಲಿ ಕಾಮ ಬಾಯಲಿ ರಾಮ;
ಕೈಲಾಗದಿದ್ದರು ಕಲಿಭೀಮ!
*          *           *           *
ಉಳುವುದು ಬಿತ್ತುವುದೆಮ್ಮಿಚ್ಛೆ,
ಬೆಳೆವುದು ಬಿಡುವುದು ದೈವೇಚ್ಛೆ!
*          *           *           *
ಶಕ್ತಿಯು ದೇಹದ ಕರ್ತವ್ಯ;
ಭಕ್ತಿಯು ಹೃದಯದ ಕರ್ತವ್ಯ;
ಮುಕ್ತಿಯು ಆತ್ಮದ ಕರ್ತವ್ಯ!
*          *           *           *
ಸತ್ತಂತೆ ಬದುಕುವುದಕಿಂತ
ಸತ್ತು ಬದುಕುವುದೆ ಲೇಸು.
*          *           *           *
ಸದ್ದಿರದ ಎದೆಯ ಸೊಬಗಿನ ಬನದಿ ಕುಳಿತಾವ
ಹಾಡ ನಿನಗರ್ಪಿಸಲಿ, ಗಾನನಿಧಿಯೆ?
ಗಾನಲೋಕವನೆಲ್ಲ ನುಂಗಿ ಗರ್ಭದೊಳಾಂತ
ಮೌನವಿದು ಮಧುರತರ ಗಾನವೈಸೆ!
*          *           *           *
ಇದು ಯಾವ ತರ್ಕವೋ? ನಾನರಿಯಲಾರೆ!
ತಿಳಿದವರ ಛಲವಾದಕಿಹುದೆಲ್ಲಿ ಮೇರೆ?
ನಾನು ಪುಣ್ಯವ ಮಾಡೆ ನೀನು ಹೊಣೆಯಂತೆ!
ನನ್ನ ಪಾಪಕೆ ಮಾತ್ರ ನಾನೆ ಹೊಣೆಯಂತೆ!
ನನಗೆ ಸದ್ಗತಿ ದೊರಕೆ ನಿನ್ನ ಕೃಪೆಯಂತೆ!
ತಪ್ಪಿ ದುರ್ಗತಿಯಾಗೆ ಕರ್ಮಫಲವಂತೆ!
*          *           *           *
ನರರು ನರರಾಗಿರುವ ಕತದಿಂದ ಹರಿಯಿಹನು!

೨೨-೧-೧೯೨೯