ಮುಂಗಾರ ಮಳೆಯಿಲ್ಲ; ಹಿಂಗಾರ ಮಳೆಯಿಲ್ಲ;

ಚಳಿಗಾಲದಲ್ಲಿ ಹಿಂಬೆಳೆ ಬೆಳೆಯುತಿತ್ತು!
ಹಾಲುತೆನೆ ನೆಲಕುದುರಿ ಪೈರೆಲ್ಲ ಹಾಳಾಗಿ
ನೋಡುವರ ಕಂಗಳಲಿ ನೀರಿಳಿಸುತಿತ್ತು!

ಬರಗಾಲ ಮೈದೋರಿ ಹಸಿವ ಬಡಜನರೆಲ್ಲ
ಮುತ್ತಿ ಕುಳಿತರು ಮಠದ ಬಾಗಿಲೆಡೆಯಲ್ಲಿ;
ಮಠದ ಕಣಜದ ತುಂಬ ಹಿಂದೆ ರೈತರು ಕೊಟ್ಟ
ಕಾಳಿದ್ದ ಸುದ್ದಿಯನು ತಿಳಿದಿದ್ದರೆಲ್ಲ.

ಕಟ್ಟಕಡೆಗೊಂದು ದಿನ ಮಠದ ಕೆಟ್ಟಧಿಕಾರಿ
ತಡವ ಮಾಡದೆ ಜನರ ಬಾಯ್ಮುಚ್ಚಲೆಂದು,
ಮರುದಿನದ ಬೆಳಗಿನಲಿ ಜನರು ಬರಬಹುದೆಂದು,
ಸಾರಿದನು ಕಣಜದಾ ಕಾಳ್ ಅವರದೆಂದು!

ಕೇಳಿದನು ಸಂತಸದಿ: ದಿನದ ಮುಂಜಾನೆಯಲಿ
ಜನರು ಬಂದರು ಬೇಗ ಗುಂಪುಗುಂಪಾಗಿ;
ಕಿಕ್ಕಿರಿದರಾ ದೊಡ್ಡ ಕಣಜ ಹಿಡಿಯುವವರೆಗೆ
ಹೆಂಗಸರು, ಮುದುಕ, ಮಕ್ಕಳು, ತರುಣರೆಲ್ಲ!

ಕೆಟ್ಟ ಮಠದಧಿಕಾರಿ ಜನರೆಲ್ಲ ಕಿಕ್ಕಿರಿಯೆ
ಮುಚ್ಚಿದನು ಬಾಗಿಲನು ಬೀಗವನು ಹಾಕಿ!
ಒಳಗೆಲ್ಲ ಗೋಳಾಡಿ ‘ಹರಿ!’ ಎಂದು ಕೂಗುತಿರೆ
ಬೆಂಕಿ ಹಾಕಿದನಾಗ ಸುಟ್ಟುರಿದರೆಲ್ಲ!

ಧಗಧಗಿಸಿ ಭುಗಿಲೆಂದು ಮೇಲಕುರಿಯೇಳುತಿರೆ
ಕಾಳುಂಬ ಮೂಷಿಕಗಳಿಂದಳಿದುವೆಂದು,
ದೇಶದಲಿ ಬರಗಾಲ ಬಂದಿರಲು ತನ್ನಿಂದ
ದೇಶಕೊಂದುಪಕಾರವಾಯ್ತೆಂದು ನುಡಿದ!

ಇಂತೆಂದು ಸಂತಸದಿ ತನ್ನ ಮಠವನು ನುಗ್ಗಿ,
ಗುರುವು, ಹೆಗ್ಗಣದಂತೆ ಕೂಳುಂಡು ಹಿಗ್ಗಿ,
ತಪ್ಪಿಲ್ಲದವನಂತೆ ಸುಖದಿ ಮಲಗಿದನಂದು:
ಮಲಗಲಿಲ್ಲವನಂತೆ ಮುಂದೆ ಎಂದೆಂದೂ!

ಮುಂಜಾನೆ ಅವನೆದ್ದು ತನ್ನ ಚಿತ್ರವನಿಟ್ಟ
ಮಠದ ನಡುಮಂದಿರದ ಗೋಡೆಯನು ನೋಡೆ,
ಬೆವರಿದನು, ಹೆದರಿದನು ಮೈನಡುಗಿ, ಮಠದಗುರು:
ಇಲಿ ಹರಿದು ಪುಡಿಮಾಡಿದಾ ಪಟವ ಕಂಡು!

ನೋಡುತಿರಲೊಬ್ಬ ಮಠದಾಳೋಡುತೈತಂದು
ಬೆಪ್ಪಾಗಿ ಭಯದಿಂದ ನುಡಿದನಿಂತೆಂದು:
“ನನ್ನೊಡೆಯ, ಕಣಜದಲಿ ತೆನೆ ಹೆಸರಿಗೊಂದಿಲ್ಲ!
ಮೂಷಿಕಗಳೈತಂದು ಮುಗಿಸಿರುವುವೆಲ್ಲ!”

ಬಾಯ್ದೆರೆದು, ಬೆರಗಾಗಿ ಮತ್ತೊಬ್ಬನೈತಂದು:
“ನನ್ನೊಡೆಯ ಬೇಗೋಡು! ಬೇಗೋಡು! ಓಡು!
ಇಲಿಯ ಸೈನ್ಯವೆ ಇಲ್ಲಿಗೈತರುತಲಿದೆ, ಓಡು!
ಹರಿ ನಿನ್ನ ರಕ್ಷಿಸಲಿ! ಬೇಗೋಡು” ಎಂದ!

“ತೆರಳುವೆನು ನಾನೀಗ ತುಂಗೆಯಾಚೆಯ ಮಠಕೆ;
ದುರ್ಗಮದ ಕೋಟೆಯಿದೆ; ಯಾರು ಬಹರಲ್ಲಿ?
ಬಿತ್ತರದ ಕಂದಕವು! ಕಡಿದಾದ ತೀರವಿದೆ!
ಕೊಚ್ಚಿ ಹರಿವುದು ಹೊನಲು! ನೀರಾಳವಲ್ಲಿ!”

ಇಂತೆಂದು ಮಠದಗುರು ಬೇಗ ತುಂಗೆಯ ದಾಟಿ,
ಹೊಳೆಯಾಚೆಯಾ ಮಠದ ಶಿಖರವನು ಸೇರಿ,
ಹೆಬ್ಬಾಗಿಲನು ಮುಚ್ಚಿ, ಕಿಟಕಿಗಳ ಬಲಪಡಿಸಿ,
ಭದ್ರಪಡಿಸಿದನಲ್ಲಿ ನೊಣ ಸುಳಿಯದಂತೆ!

ಹಾಸಗೆಯ ಮೇಲ್ಮಲಗಿ ಕಂಗಳನು ಮುಚ್ಚುತಿರೆ,
ತಲೆದಿಂಬಿನೆಡೆ ಏನೊ ಚೀರಿದಂತಾಯ್ತು!
ಬೆಚ್ಚಿದನು; ಮೇಲೆದ್ದು ದಿಟ್ಟಿಸಲು, ಕತ್ತಲಲಿ
ಬೆಂಕಿಯಂದದಿ ಹೊಳೆವ ಕಣ್ಣೆರಡ ಕಂಡ!

ಕೇಳಿದನು! ನೋಡಿದನು! ಬೆಕ್ಕೊಂದು ಕುಳಿತಿತ್ತು!
ಮಠದ ಗುರುವಿಗೆ ಭಯವು ಮಿತಿಮೀರಿಹೋಯ್ತು!
ಮುತ್ತಿ ಅಟ್ಟುತಲೋಡಿಬರುವಿಲಿಗಳಟಮಟಕೆ
ಬೆಕ್ಕು ಬಾಯಾರಿ ಕುಳಿತಳುತಲಿತ್ತಲ್ಲಿ!

ಈಜಿದುವು ತುಂಗೆಯನು! ಹತ್ತಿದುವು ತೀರವನು!
ಹಾರಿದುವು ಕಂದಕವ! ಕೋಟೆಯನು ನುಗ್ಗಿ,
ಕೊರೆಕೊರೆದು ಗೋಡೆಯನು, ಮುರಿಮುರಿದು ಬಾಗಿಲನು,
ಮಿಂಚಿ ಬಂದುವು ಬೇಗ ಶಿಖರದೆಡೆಗಾಗಿ!

ಒಂದಲ್ಲ, ಎರಡಲ್ಲ, ಹತ್ತಲ್ಲ, ನೂರಲ್ಲ,
ಲೆಕ್ಕವಿಲ್ಲದೆ ಹಿಂಡು ಹಿಂಡಾಗಿ ಬಂದು,
ಮುತ್ತಿದುವು: ಹಿಂದಾರು ಕಂಡಿಲ್ಲ, ಕೇಳಿಲ್ಲ!
ಹಿಂದಂಥ ಶಿಕ್ಷೆ ಯಾರಿಗೂ ಆಗಲಿಲ್ಲ!

ಮಠದಗುರು, ಕೈಮುಗಿದು ಬೇಡಿದನು ದೇವರನು,
ಬಲುಬೇಗ ಜಪಮಾಡಿ, ಮಂತ್ರಗಳ ಹೇಳಿ!
ಭಯದಿಂದ ಬೇಡುತಿರೆ ಹಲ್ಲುಮಸೆಯುವ ಸದ್ದು
ಬಳಿಯಾಗಿ ಬಳಿಸಾರಿ ಹೆಚ್ಚುತ್ತ ಬಂತು!

ಕಿಟಕಿಯಲಿ, ಬಾಗಿಲಲಿ, ಸಂದಿಯಲಿ, ಗೊಂದಿಯಲಿ,
ಮಾಳಿಗೆಯ, ಮೇಲಿಂದ ನೆಲದುದರದಿಂದ,
ಮೇಲಿಂದ, ಕೆಳಗಿಂದ, ಬಲದಿಂದ, ಎಡದಿಂದ,
ಹಿಂದುಗಡೆ, ಮುಂದುಗಡೆ, ಹೊರಗೊಳಗಿನಿಂದ,

ಹಾರಿದುವು, ಜಾರಿದುವು, ತೂರಿದುವು, ಚೀರಿದುವು,
ಹೊರಳಿದುವು, ಉರುಳಿದುವು; ನುಗ್ಗಿದುವು ಮತ್ತೆ;
ಬೀಳುತ್ತ, ಏಳುತ್ತ, ಚಿಮ್ಮುತ್ತ, ನೆಗೆಯುತ್ತ,
ಕುಣಿಯುತ್ತ ಗುರುವಿನೆಡೆಗೈತಂದವೆಲ್ಲ!

ಬಟ್ಟೆಯನು ಕಚ್ಚಿದವು; ಚರ್ಮವನು ಬಿಚ್ಚಿದವು;
ಕಿತ್ತೆಳೆದು ಗಡ್ಡವನು ಕುಟುಕಿದವು ಕಣ್ಣ!
ನುಜ್ಜಾದುವೆಲುಬುಗಳು: ಕೊಚ್ಚಿದುವು ಪಚ್ಚಿಯನು!
ತಾನು ಮಾಡಿದ ಕರ್ಮ ತನ್ನಳಿವಿಗಾಯ್ತು!

೧೨-೧೦-೧೯೨೮


* “Bishop Hatto” by Robert Southey–ಕವನದ ಅನುವಾದ.