ಮುಳುಗುತಿದೆ, ಮುಳುಗುತಿದೆ ಕಿರುದೋಣಿ, ಗುರುದೇವ,
ಮೇರೆಯಿಲ್ಲದ ಕಡಲು ಬಳಸಿ ಮೊರೆಯುತಿದೆ;
ಕತ್ತಲೆಯು ಕವಿಯುತಿದೆ; ಬಿರುಗಾಳಿ ಬೀಸುತಿದೆ;
ಗುಡುಗುತಿದೆ, ಮಿಂಚುತಿದೆ, ಸಿಡಿಲು ಬಡಿಯುತಿದೆ.
ಕೆರಳಿರುವ ಕೇಸರಿಗಳಂದದಲಿ ಗರ್ಜಿಸುತ
ನುಗ್ಗುತಿಹವಪ್ಪಳಿಸಿ ಬಲ್ದೆರೆಗಳಾಳಿ;
ನೆಚ್ಚಿಲ್ಲ, ಕೆಚ್ಚಿಲ್ಲ, ಬಲವಿಲ್ಲ, ಚಲವಿಲ್ಲ,
ಹುಟ್ಟು ಕೈಯಿಂದುದುರಿ ಕೆಳಗೆ ಬಿದ್ದಿಹುದು!

ತೆರೆಗಳೋಡನು ನುಂಗುವಾ ಮುನ್ನ ಬಂದು ಕಾಯಿ!
ಅರೆಗೆ ದೋಣಿಯು ಬಡಿದೊಡೆವ ಮುನ್ನ ಬಂದು ಕಾಯಿ!
ಮುಳುಗಿ ನಾ ಕಡಲಡಿಯೊಳೊರಗುವಾ ಮುನ್ನ ಕಾಯಿ!
ಎದೆಯೊಡೆದು ಅಸುವಳಿವ ಮುನ್ನ ನೀನೆನ್ನ ಕಾಯಿ!

೨೬-೧೧-೧೯೨೮