ಶೂನ್ಯಾಂತರಂಗದಿಂದಡವಿಯೊಳು ಬೆಳೆದಿರುವ
ಕಿರುಬಿದಿರಿನಂತೆ ನಾನಿಹೆನು, ಗುರುವೆ.
ಸಮೆದದನು ಮಾಡಿ ಕೊಳಲನು ನಿನ್ನ ಉಸಿರೂದಿ
ಶೂನ್ಯತೆಯ ಕಳೆದು ಪೂರ್ಣತೆಯ ನೀಡು.
ಟೊಳ್ಳಿನಿಂದಿಂಚರದ ರಸಲಹರಿ ಹೊಮ್ಮುವುದು
ನಿನ್ನ ಕೈಯಲಿ ನಾನು ವೇಣುವಾಗೆ!
‘ಮೂಕಂ ಕರೋತಿ ವಾಚಾಲಮ್’ ಎಂಬಂದದಲಿ
ಸೊನ್ನೆಯಿಂದುಣ್ಮುವುದು ಸುರಗಾನವು!

ನೀನುಳಿಯೆ ನಾನೇನು? ಬರಿ ಬಿದಿರಿನಂತೆ!
ಶ್ರೀಕೃಷ್ಣನಿಲ್ಲದಿಹ ಕೊಳಲಿನಂತೆ!
ಶೇಷಾರ್ಯನಿಲ್ಲದಿಹ ವೀಣೆಯಂತೆ!
ಭಾವವಿಲ್ಲದ ಬರಿಯ ಜಡಮೂಕನಂತೆ!

೨೯-೧೦-೧೯೨೮