ರಸಋಷಿಯೆ, ಕವಿಗುರುವೆ, ಕವಿಚಕ್ರವರ್ತಿ,

ಕನ್ನಡದ ಕಬ್ಬಿಗರ ಕಬ್ಬಿಗನೆ, ರನ್ನ,
ನೀನಂದು ಬಾಜಿಸಿದ ರಣಭೇರಿ, ನನ್ನ
ಹೃದಯದಲಿ ಮೊಳಗುತಿದೆ, ವೀರರಸಮೂರ್ತಿ!
ಶತಮಾನಗಳ ತಳಹದಿಯ ನಿನ್ನ ಕೀರ್ತಿ
ಪೂತಿಹುದು, ಕಾತಿಹುದು, ರಸಿಕರೆದೆಯನ್ನ!
ಕಡಲ ಮೊರೆ ಕೊಳಲದನಿ ಸಂಗಮಿಸೆ, ನಿನ್ನ
ಗಂಭೀರ ವಾಣಿಯಿಂ ಮೂಡಿತೈ ಸ್ಫೂರ್ತಿ!

ನಿನ್ನೋಜೆ, ಮಾಧುರ್ಯ, ನವ ಸೌಕುಮಾರ್ಯ,
ಹೊಸದೇಸಿ, ಹೊಸಕಾಂತಿ, ಹೊಸರೀತಿ, ಭಾವ,
ಮೊಳಗಿ ಮಿಂಚುತ ಸುರಿಯುವುವು ಬೆರಗುಮಾಡಿ!
ಹಿಮಗಿರಿಗೆ, ಸಾಗರಕೆ, ಕವಿಗಳಾಚಾರ್ಯ,
ಬಾಂದಳಕೆ, ನಿನಗೆ, ನಾ ನಮಿಸುವೆನು; ದೇವ,
ಹರಸೆನ್ನ, ನನ್ನೆದೆಗೆ ನಿನ್ನೆದೆಯ ನೀಡಿ!

೧೬-೧೦-೧೯೨೮