ನೇಸರಿಳಿಯಲು ಮುಳುಗಿ ಪಡುಗಡಲಿನೆದೆಯಲ್ಲಿ,
ಮರೆಯಾಗುವುದು ತಿರೆಯು ಕತ್ತಲಲ್ಲಿ;
ಬೇರೊಂದು ಬಿತ್ತರದ ಲೋಕ ಮೈದೋರುವುದು,
ಗ್ರಹ ಚಂದ್ರ ತಾರೆಗಳ ಜೋತಿಯಿಂದ!
ಸುತ್ತಲಿಹ ಧಾರಿಣಿಯ ಹಗಲು ತೋರಿದರೇನು?
ಕತ್ತಲೆಯು ಬೆಳಗುವುದು ದೂರದೂರ!
ಹಗಲು ಮುಚ್ಚುವ ಸಿರಿಯ ಬಿಚ್ಚಿ ತೋರುವುದಿರುಳು:
ಬುವಿಗಿಂತ ಮಿಗಿಲು ಬಾಂದಳದ ಮೈಮೆ!

ಹಗಲಿನಂತಿರೆ ಬಾಳು, ಸಾವಿರುಳಿನಂತೆ!
ಬಾಳು ಬೆಳಗುವುದಿಹವ; ಬೆಳಗುವುದು ಸಾವು
ಬಾಳು ಮುಚ್ಚಿಹ ಪರದ ನೂರ್ಮಡಿಯ ಸಿರಿಯ!
ಬಾಳೆ ಕುರುಡಿರಬಹುದೆ? ಸಾವೆ ಸಿರಿಗಣ್ಣೆ?

೬-೮-೧೯೨೮