ಹೊಸ ಕಬ್ಬವೆಂದೇಕೆ ಹಳಿಯುತಿಹೆ ನೀನು?
ಹಳೆಯ ಕಬ್ಬವ ಬರಿದೆ ಹೊಗಳುತಿಹೆ ನೀನು?
ಕವಿತೆಯಲ್ಲಿಹ ರಸವು ಹೆಂಡದಂತೇನು
ಹಳೆಯದಾದಂತೆಲ್ಲ ಸವಿಯಪ್ಪುದೇನು?
ಕಬ್ಬಿಗನು ಹಳೆತಾದರವನ ಕೃತಿ ಸವಿಯೆ?
ಮಸಣದಲಿ ಮರೆಯಾದ ಮೇಲೆಯೇ ಕವಿಯೆ?
ಹೊಸಬನೊಬ್ಬನು ಹಳೆಯ ಕವಿಯಾಗುವುದಕೆ,
ಹೇಳೆನಗೆ, ಎನಿತುದಿನ ಕಳೆಯ ಬೇಕದಕೆ?
ನೂರು ವರ್ಷವು ಸಾಕೆ? ಇನ್ನೂರು ಬೇಕೆ?
ಮುನ್ನೂರು? ನಾನೂರು? ಇನ್ನು ಹೆಚ್ಚೇಕೆ?
ದಮ್ಮಯ್ಯ, ಪಂಡಿತನೆ, ಬೇಡುವೆನು ನಿನ್ನ;
ಕವಿಗಾಗಿ ಸೆರಗೊಡ್ಡಿ ಬೇಡುವೆನು ನಿನ್ನ.
ಅಯ್ಯಯ್ಯೊ! ಮಾರಾಯ, ಕಗ್ಗಲ್ಲು ನೀನು!
ಜಗ್ಗದೆಯೆ ಕೂತಿರುವೆ ಬೇಡುತಿರೆ ನಾನು!
ಹಳೆಯದಾಗಲು ಹೊಸದು, ಐನೂರು ಸಾಕು!
ನಿನಗಾಗಿ ನೂರನ್ನು ಹೆಚ್ಚಿಸಿದೆ; ಸಾಕು!

ನೀನು ಪಂಡಿತ, ನಾನು ಪಾಮರನು, ಶಾಸ್ತ್ರಿ!
ನಿನ್ನ ಶಾಲನು ಕಂಡು ಹೆದರುವೆನು, ಶಾಸ್ತ್ರಿ!
ನಿನ್ನ ಬಿಜ್ಜೆಯ ಕಂಡರೆನಗೆ ಭಯವಿಲ್ಲ!
ನಿನ್ನ ಬೊಜ್ಜನು ಕಂಡರೆನಗೆ ಮೈಯೆಲ್ಲ
ನಡುಗುವುದು! ರೋಮಾಂಚವಾಗುವುದು, ಶಾಸ್ತ್ರಿ!
ನಿನ್ನ ಡೊಳ್ಳಿನ ಹೆಮ್ಮೆಯೇ ಹೆಮ್ಮೆ, ಶಾಸ್ತ್ರಿ!
ಹೊಸಕವಿಯು ಹಳೆಯ ಕವಿಯಾಗಲೈನೂರು
ವರ್ಷಗಳು ಸಾಕೆಂದೆ! ಮಸಲ, ಒಂದಾರು
ದಿನ ಕಡಮೆಯಾಯ್ತೆಂದು ತಿಳಿಯೋಣ! ಆಗ?
“ತೆಗೆದೆ ಹೊಸಬರ ತಳಕುಪಳಕುಗಳನೀಗ!”
ಎನ್ನದಿರು. ಸರಿಯಾದ ಲೆಕ್ಕ ಸಿಗಬೇಕು!
ಕಡಮೆಯಾದರು ಚಿಂತೆಯಿಲ್ಲೆಂಬೆ; ಸಾಕು.
ಧರ್ಮಾತ್ಮನಯ್ಯ! ಎಷ್ಟಂದರೂ ನೀನು
ಧರ್ಮಶಾಸ್ತ್ರವನೋದಿದವನಲ್ಲವೇನು?
ತರ್ಕವನು ತಿಳಿದವನು; ವೇದಾಂತಿ ನೀನು.

ಕುದುರೆ ಬಾಲದ ನವಿರ ಕಿತ್ತುಬಲ್ಲೇನು?
ತಪ್ಪಾಯ್ತು ಕಮಿಸೆನ್ನ! ಬೋಳಿಯರ ನೀನು
ಕ್ಷೌರಿಕರು ಕೆತ್ತುವುದ ಕಂಡಿರುವೆಯೇನು?
ಕಂಡಿಲ್ಲದೇನಂತೆ? ಜೋಯಿಸನು ನೀನು!
ಮಕ್ಕಳಿಗೆ ಮದುವೆ ಮಾಡಿಸುವವನು ನೀನು!
ಕ್ಷೌರಿಕನು ಕೆತ್ತುತಿರೆ ತಲೆ ನುಣ್ಣಗಾಗಿ
ಪಾತ್ರೆಗೆ ಕಲಾಯಿ ಮಾಡಿಸಿದಂತೆಯಾಗಿ
ಹೊಳೆಯುವುದು. ಅಂತೆಯೇ ದಿನದಿನವ ಕಳೆದು
ಐನೂರು ವರ್ಷಗಳು ಕರಕರಗಿ ಇಳಿದು
ಮೂವತ್ತು, ಇಪ್ಪತು, ಹತ್ತು, ಏಳಾಗಿ,
ಪ್ರಾಚೀನರೆಂಬುವರು ಆಧುನಿಕರಾಗಿ
ಆಧುನಿಕರೆಂಬುವರು ಪ್ರಾಚೀನರಾಗಿ
ಕೆಂಪು ಶಾಲುಗಳೆಲ್ಲ ಕಪ್ಪುಕಪ್ಪಾಗಿ
ಹೊಸಕಬ್ಬ ಹಳೆಕಬ್ಬದಂತೆ ರಸವತ್ತಾಗಿ
ಹೊಸತೆಲ್ಲ ಹಳೆತಾಗಿ, ಹಳೆತೆಲ್ಲ ಹೊಸತಾಗಿ,
ಹಳೆತೆಲ್ಲ ಹೊನ್ನೆಂಬ, ಹೊಸತೆಲ್ಲ ಮಣ್ಣೆಂಬ
ಮಡ್ಡತನದಿಂದುದಿಸಿ ಬೆಳೆದಿರುವ ಭ್ರಾಂತಿ
ಮರೆಯಾಗಿ, ಪಂಡಿತನಿಗಾಗುವುದು ಶಾಂತಿ!
ಪಂಡಿತ ಮಹಾಶಯನೆ, ತೆರಳುವೆ ನಮಸ್ಕಾರ!
ಮಾರಾಯ, ಸುಮ್ಮನಿರು! ಅದೆ ನಿನ್ನ ಉಪಕಾರ!

೨-೮-೧೯೨೮