ಕೊಬ್ಬಿದ ಹೊತ್ತಗೆಗಳ ನೀನೋದುವೆ;
ವಾದವ ಹೂಡುವೆ ಸಭೆಗಳಲಿ!
ವಿಧವಿಧ ಪದಗಳ ತೂಗಿ ವಿಭಾಗಿಸಿ
ಕರುಳನು ತಿರುಳನು ಖಂಡಿಸಿ ತುಂಡಿಸಿ
ಟೀಕೆಯ ಮಾಡುವೆ ನೀನಣ್ಣಾ!

ನದಿ ವನ ಗಿರಿ ನಭ ತಾರೆಗಳಿರುವೀ
ವಿಶ್ವದ ವೇದವನೋದುವೆಯಾ?
ಸಾಸಿರ ಕೊರಲಿನ ಹಕ್ಕಿಗಳಿಂಚರ-
ಕರ್ಥವ ಮಾಡುವೆಯೇನಣ್ಣಾ?
ಹರಿಯುವ ಹೊಳೆಗಳ ಮೊರೆಯುವ ಹರಟೆಗೆ
ಟೀಕೆಯ ಬರೆಯುವೆಯೇನಣ್ಣಾ?
ಮೂಡಿ ಮುಳುಗುವಿನಶಶಿಗಳ ಲೀಲೆಗೆ
ಭಾಷ್ಯವ ಗೀಚುವೆಯೇನಣ್ಣಾ?

ಮೂಡಲಳೊಸೆಯುವ ರವಿಯ ತಳಾರರು
ತಿರೆವೆಣ್ಣಿನ ಪಸುರುಡುಗೆಯ ಮೇಲೆ
ಬಣ್ಣಬಣ್ಣದಕ್ಷರಗಳ ಪೋಣಿಸಿ
ಹೊಸ ಕವಿತೆಗಳನು ಬರೆಯಲು, ಭಾವಿಸಿ

ಭಾವವನರಿಯುವೆಯೇನಣ್ಣಾ?
ನೀಲಾಕಾಶದಿ ಬೆಳ್ಮುಗಿಲಾವಳಿ
ದಿನದಿನ ಚಿತ್ರಿಪ ಮಂತ್ರದ ಮರ್ಮವ
ನೀನರಿಯ ಬಲ್ಲೆಯೇನಣ್ಣಾ?
ಸುಗ್ಗಿಯು ಬನಗಳ ಓಲೆಯ ಮೇಲೆ
ಪುಷ್ಪಾಕ್ಷರಗಳ ಜೋಡಿಸಿ ಬರೆಯುವ
ಪರ ಸಂದೇಶವನರಿಯುವೆಯೇನೈ?
ವೇದಾಂತವು ಅಲ್ಲಿರದೇನೈ?

೨೦-೧-೧೯೨೯