ಬಾ, ಗುರುವೆ, ಕತ್ತರಿಸು ನನ್ನೆದೆಯ ಕೀಳ್ತನವ:
ಭಕ್ತಿಯಿಂ ಬೇಡುವೆನು ಬೆಂದು ನೊಂದು.
ಹಾರಲೆಳಸುವೆ ನಾನು; ರೆಕ್ಕೆಗಳ ಬಲವಿಲ್ಲ;
ಹೊರಳುವೆನು ಪುಡಿಯಲ್ಲಿ ಬರಿದೆ ಬಳಲಿ.
ಕೆಚ್ಚಳಿವ ಮುನ್ನ ಬಾ, ನೆಚ್ಚಳಿವ ಮುನ್ನ ಬಾ,
ಕೊಚ್ಚಿ ಹೋಗುವ ಮುನ್ನ ಬಾ, ಗುರುವೆ, ಬಾರೈ!
ಶಕ್ತಿಸಾಗರ ನೀನು; ಮುಕ್ತಿಗಾಗರ ನೀನು;
ಹನಿಯೊಂದನಿತ್ತು ಬಂಧನವ ಬಿಡಿಸು!

ನಿನ್ನ ಪದತಳದಲ್ಲಿ ಶರಣುಹೊಕ್ಕಿರುವೆ, ಗುರುವೆ.
ನನ್ನೊಲ್ಮೆಯುರುಳಿನಲಿ ನಿನ್ನ ಬಿಗಿದಿರುವೆ, ಗುರುವೆ.
ಕೈನೀಡು, ಬಾ, ನನ್ನ ಮೇಲೆತ್ತು, ಬರುವೆ, ಗುರುವೆ.
ಪುಡಿಯಲ್ಲಿ ನಾ ಹೊರಳೆ, ನೀನು ಬಾ ಹೊರಳು, ಗುರುವೆ!

೭-೮-೧೯೨೮