ದೇವನೆಂಬುವನಾರು?

ಸೃಷ್ಟಿಯೆಂದರೆ ಏನು?
ಯೋಗಿಗಳ ಭ್ರಾಂತಿಯಿದೊ?
ಸತ್ಯದೊಳು ನೆಲಸಿಹುದೊ?
ನಂಬಿಕೆಯ ತತ್ವವಿದು ಮಿಥ್ಯೆಯಾಗಿರಬಾರದೇಕೆ?

ಮಾಯೆಯೆಂಬುವುದೇಕೆ?
ಗುಣರಹಿತನಾದವಗೆ
ಲೀಲೆಯೆಂಬುದು ಬೇಕೆ?
ಭ್ರಾಂತಿಯಲ್ಲದೆ ಬ್ರಹ್ಮ?
ತತ್ವಗಳು ಚೀರಿದೊಡೆ ನಂಬಿಕೆಗೆ ಇಹುದೊಂದು ಮೇರೆ.

ಐತಿಹ್ಯದಿಂ ಬಂದ
ಮಿಥ್ಯೆಯನು ಖಂಡಿಸದೆ
ಬೊಮ್ಮವೆಂದುಸುರಿದೊಡೆ
ಬೊಮ್ಮವಿರಲೇಬೇಕೆ?
ಇದು ಎಲ್ಲರೊಳಗಿರುವ ರೋಗವಾಗಿರಬಾರದೇಕೆ?

ನೀತಿಯನು ಬೋಧಿಪರು;
ಪ್ರೀತಿಸೆಂದುಸುರುವರು;
ವಿಶ್ವಾತ್ಮನಾದವಗೆ
ನೀತಿ ಎಂಬುದು ಏಕೆ?
‘ಲೀಲೆ’ ಎನ್ನುವ ಬದಲು ದೇವನಿಲ್ಲೆನಬಾರದೇಕೆ?

ನೀತಿಯೆಂಬುದು ಸುಖದ
ಪ್ರೀತಿಯಿಂದುದಿಸಿದುದು;
ನೀತಿ ನಿತ್ಯವು ಎಂಬ
ಮಾತಿಗಿಲ್ಲವು ಬುಡವು;
ನೀತಿಗಾಶ್ರಯ ಮುಂದೆ ಜನ್ಮವೊಂದಿಹುದೆಂಬ ಭೀತಿ.

ಮುಂದಿಲ್ಲ; ಹಿಂದಿಲ್ಲ;
ಇಂದು ನಾಳೆಗಳಿಲ್ಲ;
ಇಂದು ನಾಳೆಯ ತಂದು
ನಿನ್ನೆಯಹುದೆಂದಿಗೂ:
ಮುಂದೆ ನಾವಿಹೆವೆಂಬ ಕಲ್ಪನೆಗೆ ಆಧಾರವಿಲ್ಲ.

ಸುಣ್ಣ ಎಲೆ ಅಡಿಕೆಯಿಂ
ಬಣ್ಣವಾಗುವ ತೆರದಿ
ಭೂತಸಂಯೋಗದಿಂ
ಉದಿಸುವುದು ಚೈತನ್ಯ:
ಜನ್ಮವೆತ್ತಿದುದೆಲ್ಲವಳಿವಂತೆ ಚೈತನ್ಯದಂತ್ಯ!

ನೆಣ ಮಜ್ಜೆ ಮಾಂಸ ನರ
ರಕ್ತ ಮಿದುಳೆಲುಬುಗಳ
ಸಂಯೋಗದಿಂದಾದ
ಕಾಯದಾಕಾರವಿದು:
ಎಂದಿಗೂ ಎಲ್ಲಿಯೂ ಇರದ ಪರಮಾತ್ಮವಿಹುದೆಲ್ಲಿ?

ಮಿಥ್ಯೆಯೆಂಬರು ಮರಣ,
ಮಿಥ್ಯೆಯೆಂಬರು ಜನನ;
ನಿತ್ಯನೆಂಬರು ಆತ್ಮ,
ಸತ್ಯವೆಂಬರು ವೇದ:
ಸ್ವಾರ್ಥತೆಯ ಸೃಷ್ಟಿಯಿದು; ಸತ್ಯದಾ ತಳಹದಿಯೆ ಮಿಥ್ಯೆ!

ಆತ್ಮ ಜೀವಗಳೆಲ್ಲ
ಕಲ್ಪನೆಯ ಛಾಯೆಗಳು:
ಶೂನ್ಯವೆಮ್ಮಯ ತಾಯಿ!
ತಿಮಿರವೆಮ್ಮಯ ಮೋಕ್ಷ!
ಅಮೃತಪಾನದ ಬಯಕೆ ಬಯಲಾಗೆ ವಿಷಪಾನವೇಕೆ?

ಕಂಗಳಿಗೆ ಕಣ್ಣಂತೆ;
ಕಿವಿಗಳಿಗೆ ಕಿವಿಯಂತೆ;
ಬುದ್ಧಿಗೆ ಬುದ್ಧಿಯಂತೆ;
ಚಿಂತೆಗಸದಳವಂತೆ;
‘ಕಂಡರೂ ಕಾಣಿಸನು’ ಎಂಬರಿದು ಬರಿಯಂತೆ ಕಂತೆ!

ನಂಬದಿರು ನಂಬದಿರು
ಡಂಭದಾ ತತ್ತ್ವಗಳ;
ಸಾಂಖ್ಯವನು ದೂರುತಿದೆ
ಯೋಗವಾ ಯೋಗವನು
ವೇದಾಂತ ಖಂಡಿಪುದು: ತತ್ತ್ವ ಬುದ್ಧಿಯ ಬರಿಯ ಜೂಜು!

ಉಪನಿಷತ್ತುಗಳೆಲ್ಲ
ಸಾಮಾನ್ಯವಲ್ಲದಾ
ವಿಪರೀತ ಹುಚ್ಚಿನಲಿ
ಉತ್ಪತ್ತಿಯಾಗಿಹವು:
ಮಾನವಾ, ಮರುಳರಾ ನುಡಿಗೇಳಿ ಮರುಳಾಗಬೇಡ!

ತತ್ತ್ವವೇತ್ತನೆ ನಿನ್ನ
ಸ್ವತ್ವವೆಲ್ಲವು ವ್ಯರ್ಥ!
ಖ್ಯಾತಿಗೋಸುಗ ನೀನು
ಮಿಥ್ಯೆಯನು ಬೋಧಿಸುವೆ!
ಒಳಗೊಂದು, ಹೊರಗೊಂದು; ಠಕ್ಕರೈ ತತ್ತ್ವಜ್ಞರೆಲ್ಲ!

ಆದಿಯಿಲ್ಲದ ಮಾಯೆ
ಅಂತ್ಯವಾಗುವುದೆಂತು?
ಎಂದು ಬಾರದ ಬಂಧ
ಮುಂದೆ ತೊಲಗುವುದೆಂತು?
ಮಾಯೆಯಾಗಿರಲೆಲ್ಲ ದೇವಭಾವವೂ ಮಹಾಮಾಯೆ!

ದುಃಖವಿರೆ ಜೀವನದಿ
ಸುಖವ ತೊರೆಯುವುದೇಕೆ?
ಸಣ್ಣ ಮಿಡಿ ಹುಳಿಯೆಂದು
ಹಣ್ಣ ಹಳಿಯುವುದೇಕೆ?
ಸಾಕೆಮಗೆ ದೊರೆತ ಸುಖ, ದುಃಖಮಯವಾದರೂ ಬಾಳು!

ಭ್ರಮೆಯಾದರೂ ಸುಖವು
ಎಮಗೇತಕಾ ಚಿಂತೆ?
ಸುಖದ ಭ್ರಮೆ ಪ್ರಮೆ ಅಲ್ಲ
ಬೇಕಾದುದೆಮಗೆ ಸುಖ!
ಹೋಳಿಗೆಯ ರುಚಿ ಮಾಯೆಯೆಂದೊಡಳಿವುದೆ ಮಧುರಭಾವ?

ಮಾರುತನ ಕೇಳೆ ನಾ
ಇಂತೆಂದನವನೆನಗೆ:
“ಬೀಸುವೆನು, ನಲಿಯುವೆನು
ವಾದವಿಲ್ಲದೆ ನಾನು.
ಇಹಪರದ ಗೋಜಿಲ್ಲ; ಬಹ ಸುಖವ ಕೈಬಿಡುವುದಿಲ್ಲ!”

ಶಶಿ ಸೂರ್ಯರಿಂತೆನಗೆ
ಉಪದೇಶ ಮಾಡಿದರು:
“ಪರವ ಚಿಂತಿಸುತೇಕೆ
ಮರುಳನಾಗುವೆ ನೀನು?
ತೊಳಗುವೆವು, ಬೆಳಗುವೆವು; ಮುಂದಿನಾ ಚಿಂತೆಯೆಮಗಿಲ್ಲ!”

ಉಪವನದ ಸುಮವೆನ್ನ
ಕರೆದಿಂತು ಬೋಧಿಸಿತು:
“ಎಲರ ಸೇವಿಸಿ ನಲಿವೆ;
ಜಲವನೀಂಟುತ ನಲಿವೆ!
ಇರಬಾರದೇಕೆ ನೀನೆನ್ನವೊಲೆ ವದನ ಹೂವಾಗಿ?”

“ಯೋಚನೆಯ ಮಾಡುವೆನು
ಮನದ ಸಂತಸಕಾಗಿ,
ನಿಜವನರಿಯಲು ಅಲ್ಲ.
ನಿಜವೆಂಬುದೂ ಇಲ್ಲ!
ತತ್ತ್ವ ತಾನ್ಮತಿಭೋಗ!” ಇಂತು ಲೋಕಾಯತಿಕನೆಂದ.

ನಾವಿರಲು ಸಾವಿಲ್ಲ,
ಸಾವಿರಲು ನಾವಿಲ್ಲ;
ಸಾವು ಸಾವೆಂದೇಕೆ
ಜೀವವನು ಹಿಂಗಿಸುವೆ?
ಸಾವರಿಯದೆಮ್ಮ, ನಾವರಿಯೆವದನಿನ್ನೇಕೆ ಭೀತಿ!

ವಿಧಿ ಆಟವಾಡುತಿಹ
ಚೆಂಡುಗಳು ನಾವೆಲ್ಲ;
ಉರುಳುವೆವು, ಹೊರಳುವೆವು,
ತಾಗುವೆವು, ಬಾಗುವೆವು:
ಸ್ವಾತಂತ್ರ್ಯವಿಲ್ಲದೆಡೆ ಇಹುದೆಂಬ ಹುಸಿಚಿಂತೆ ಏಕೆ?

ತತ್ತ್ವವೊಂದಿರಲಿಷ್ಟು
ಶುಷ್ಕವಾದವದೇಕೆ?
ಅವತಾರ ಪುರುಷರೊಳು
ಮತಭೇದವಿಹುದೇಕೆ?
ಆಚಾರ್ಯರೊಬ್ಬೊಬ್ಬರೊಂದೊಂದ ಬೋಧಿಸುವುದೇಕೆ?

ಸುಕೃತ ದುಷ್ಕೃತವಂತೆ;
ಸುಜನ ದುರ್ಜನರಂತೆ;
ಹರಿಯೊಬ್ಬನಿಹನಂತೆ;
ಹರಿ ಬರಿಯ ಸತ್ತಂತೆ:
ತರ್ಕದಿಂ ಠಕ್ಕಿಸುವ ಬದಲರಿಯೆನೆನಬಾರದೇಕೆ?

ಭಯಕೆ ಕಾರಣ ದೇವ;
ಕೈವಲ್ಯದಾನಂದ
ಮೋಕ್ಷ ವೈಕುಂಠಗಳು
ಕಾರಣವು ಜಡತನಕೆ:
ದೈನ್ಯಭಾವದ ತತ್ತ್ವದಿಂದಹುದು ಹೃದಯದೌರ್ಬಲ್ಯ!

ಮಿಥ್ಯೆಭಯವನು ಹೇಳಿ
ನೀತಿಗೆಳೆಯುವ ಬದಲು
ಧೀರತನವನು ನೂಂಕಿ
ಭೀತಿಯನು ತುಂಬುವರು;
ಅಶುಚಿಯಿಂ ಶುಚಿಯತೊಳೆದೊಡೆ ಅದು ಪವಿತ್ರಮಹುದಂತೆ!

ಸ್ವರ್ಗ ನರಕಗಳಂತೆ;
ಇಂದ್ರ ಯಮರಿಹರಂತೆ;
ವಿಧಿ ಕರ್ಮ ಫಲವಂತೆ;
ಅಹಹ! ಇದು ಹೇಡಿಗಗೆ
ಇಂಪಾಗಿ ತೋರಿದೊಡೆ ಧೀರನಿಗೆ ಈ ತತ್ತ್ವವೇಕೆ?

ದೇವನೆಂಬುವ ತತ್ತ್ವ
ಬದುಕಿ ಸಾಯಲು ಬೇಕೆ?
ಜೀವನದ ಕಷ್ಟಗಳು
ದೇವನೆನೆ ತೊಲಗುವೊಡೆ
ದೇವನಿಲ್ಲೆಂದು ಧೈರ್ಯದಿ ಪೇಳುವೊಡೆ ತೆರಳವೇಕೆ?

ಹಣೆಗೆ ಬೂದಿಯ ಬಳಿದು
ಕುಣಿಯೆ ಮಂಗನ ತೆರದಿ,
ಶಿರದ ಕೇಶವ ಹರಿದು
ಬರಿದೆ ತೂರಾಡಿದರೆ
ಪರಮಾತ್ಮ ಬರುವನೇಂ ಶೂನ್ಯದಿಂ, ಮಂಕರಾಚಾರ್ಯ?

ಹರಿಯ ನಾ ಪೂಜಿಸಿದೆ;
ಗುರುಗಳನು ಸೇವಿಸಿದೆ;
ವೇದಗಳನೋದಿ ನಾ
ಬೋಧನೆಯನಾಲಿಸಿದೆ;
ಸಂದೇಹವಿಮ್ಮಡಿಸಿತೆನ್ನ ಕಂಗೆಡಿಕೆಯತಿಯಾಯ್ತು!

ಕುರುಡ ಕುರುಡನ ಪಿಡಿದು
ಕೊರಕಲೊಳಗಿಳಿವಂತೆ,
ಕುಂಟ ಕುಂಟನ ನಂಬಿ
ಇದ್ದೆಡೆಯೆ ಇರುವಂತೆ
ಧೈರ್ಯಗುಂದಿಪ ತತ್ತ್ವಗಳ ನಂಬಿ ಕುಂದುವುದದೇಕೆ?

ಜೀವನದ ಮಾರ್ಗ ತಾ
ದೇವನಿಹನೆನಲು, ಬದ
ಲಾವಣೆಯ ಹೊಂದುವುದೆ?
ಸಾವಿಗಂಜುತ ನಾವು
ದೇವನೆಂಬಿನ್ನೊಂದು ಸಾವ ರಚಿಸಲಳಿವುದೆ ನೋವು?

ಇಹಸುಖವನರಿತೆಹೆವು;
ಪರಸುಖವದೆಂತಿಹುದೊ?
ಕರದೊಳಿಹ ರತ್ನ ತಾ
ಮಿಗಿಲು ಶರಧಿಯ ಸಿರಿಗೆ:
ಪರಸುಖವ ಪಡೆಯಲೆಂದಿಹಸುಖವ ಬಿಡುವೆಯಾ? ಜೋಕೆ!

ಕಾಡುಕುಸುಮವು ತಾನು
ದೇವನನು ಪೂಜಿಸುತ
ಕಾಲ ಕಳೆವುದೆ? ನೀನು
ಬರಿದೆ ದೇವನ ನೆನೆವೆ;
ಇಹುದ ತೊರೆಯುತಲಿರದಿಹುದ ಬಯಸಿ ಮರುಳಾಗಬೇಡ.

ತಿಂದುಂಡು ಸುಖದೊಳಿರು!
ಒಂದಿರಲಿ, ಎರಡಿರಲಿ,
ಒಂದೆ ಎರಡಾಗಿರಲಿ,
ಎಲ್ಲ ಮಾಯೆಯೆ ಇರಲಿ,
ಸೂರ್ಯಕಿರಣದ ಸಂಖ್ಯೆ ಕುರುಡನಾದವಗೇಕೆ ಬೇಕು?

ತ್ಯಾಗವೆಂಬುದದು ಕೈ
ಲಾಗದರಿಗಾಶ್ರಯವು!
ಸಿಹಿಯ ಹಳಿದರೆ ರೋಗಿ
ಕಹಿತನವದಕೆ ಬಹುದೆ?
ಗೂಬೆ ತಿಂಗಳಬೆಳಕ ನಿಂದಿಸಿದೊಡಿಂದುಗದು ಕುಂದೆ?

ಬುದ್ಧದೇವನು ಜಗವ
ನಿದ್ದೆಯಿಂದೆಬ್ಬಿಸಲು
ಜೀವಾತ್ಮ ದೇವರನು
ಶೂನ್ಯಜಾಲದಿ ಕೆಡಹಿ
ಬೋಧಿಸಿದನೆಲ್ಲರಿಗೆ ತಮ್ಮ ಗತಿ ನಿರ್ವಾಣವೆಂದು!

ಮಿಥ್ಯೆಯದು ಚೈತನ್ಯ!
ಸತ್ಯವೆಂಬುದು ಶೂನ್ಯ!
ಚಿತ್ತವೆಂಬದು ಜನರ
ಪಿತ್ತವದು ಬಿಡಿರೆಂದು
ಒತ್ತಿ ನುಡಿಯನೆ ಯೋಗಿವರ ಪರಮ ಚಾರ್ವಾಕದೇವ!

ವೇದಗಳ ನೀ ನಂಬಿ
ಸಾಧನೆಯ ಮಾಡುತಿರೆ
ಧೂಳ ಕಣ್ಣಿಗೆ ತೂರಿ
ಮಣ್ಣ ಬಾಯಿಗೆ ಬೀರಿ
ಕೋರೆದಾಡೆಯ ಮೃತ್ಯು ಬಂದೆಳೆಯೆ ರಕ್ಷಿಸುವರಾರು?

ಆಗ ಮರ್ಕಟನಂತೆ
ಹಲ್ಲ ಕಿರಿಯುವೆ ನೀನು!
ತ್ಯಾಗವನು ನೀ ನಂಬಿ
ರೋಗವಾಯಿತೆ ಜೀವ?
ಶೂನ್ಯತಿಮಿರವ ಹೋಗುವೆ ಶಾಸ್ತ್ರಗಳ ಶಪಿಸಿ ಭಯದಿಂದೆ!

ಇಹಸುಖವು ನಿನಗಿಲ್ಲ;
ಪರದ ಭರವಸೆಯಿಲ್ಲ!
ಶೂನ್ಯಗರ್ಭದಿ ಬಂದು
ಕ್ಷಣಿಕ ಲೋಕದಿ ನಿಂದು
ಶೂನ್ಯವಾಗುವ ನಿನ್ನ ಮತ್ಸರದಿ ವಂಚಿಸಿತೆ ವೇದ?

ಬ್ರಹ್ಮವೊಂದೆಂದುಸುರು;
ಆತ್ಮ ಚಿತ್ತೆಂದುಸುರು;
ಸಚ್ಚಿದಾನಂದನೆನು:
ಏನು ಹೇಳಿದರೇನು?
ಆಶಾನುಭವ ಭಯಗಳಿಂದಿಡಿದ ನರಗದು ರಹಸ್ಯ!

ಸರ್ವಶಕ್ತಗೆ ಅವಗೆ
ನಿಯಮಬಂಧನವೇಕೆ?
ಸರ್ವವ್ಯಾಪಿಗೆ, ಹೇಳು,
ಚಲನೆಯೇಕಾತನಿಗೆ?
ಸರ್ವಜ್ಞನಾದವನು ದುಷ್ಕೃತವ ಸೃಷ್ಟಿಸಿದನೇಕೆ?

ನ್ಯಾಯವನು ಖಂಡಿಪುದು
ದಯೆ; ನಿಯಮ ಖಂಡಿಪುದು
ಸರ್ವಶಕ್ತಿತ್ವವನು;
ನೀತಿ ಸರ್ವಜ್ಞತೆಯ;
ಈ ತತ್ತ್ವಗಳ ಬೆದರಿಪುದು ವರಕೃಪಾನಿಧಿಯ ಭಾವ.

‘ದೇವ’ ಎಂದವರೆಲ್ಲ
ಸಾವ ದಾಂಟಿದರೇನು?
‘ದೇವ’ ಎಂದರು ಒಂದೆ
ಎನ್ನದಿದ್ದರು ಒಂದೆ!
ಆದುದಾಗಲಿ, ಪರಮಸುಖವಿರಲಿ, ಚಿಂತೆಯೆಮಗೇಕೆ?

ಬಂದೆವೆಲ್ಲಿಂದೇಕೆ?
ಎಲ್ಲಿಗಾಗೈತಂದೆ?
ಇದನರಿತರಾರಿಹರು?
ಯೋಗಿ ತಪಸಿಗಳೆಲ್ಲ
ಜೀವಗಳ ಸಮೆದರೈ; ಫಲವಿಲ್ಲ; ಫಲವಿಲ್ಲವಯ್ಯಾ!

ಏಕಾಂತಕೈತಂದು
ಕಣ್ಣೆವೆಗಳನು ಮುಚ್ಚಿ
ನಾಸಿಕವ ಬಂಧಿಸಲು
ಉಸಿರು ನಿಂತಿತೆ ಹೊರತು
ದಿವ್ಯದೃಷ್ಟಿಗೆ ದೇವನೆಂಬುವನು ಗೋಚರಿಸಲಿಲ್ಲ!

ಎಂತೊ ಬಂದೆವು ನಾವು!
ಎಂತೊ ಪೋಪೆವು ನಾವು!
ಇಂತಿರಲು ಇಲ್ಲದಿಹ
ಚಿಂತೆಗೊಳಗಾಗೇಕೆ
ಭ್ರಾಂತಿಯಿಂ ವಿರಚಿಪುದು ಪರವನಿಹಮೆಮಗೀಗ ಸಾಕು!

‘ಬ್ರಹ್ಮಾಸ್ಮಿ’ ‘ತತ್ತ್ವಮಸಿ’
‘ಶಿವ ನಾನು’ ಇವುಗಳಿಗೆ
ಭ್ರಾಂತಿಯೇ ತವರೂರು.
ಶಾಂತಿಯೆಂಬುದು ಡಂಭ.
ಮೋಹಿಸುವ ತತ್ತ್ವಗಳಿಗಿಂತ ನಾಸ್ತಿಕ್ಯವೇ ಲೇಸು!

ಜ್ಞಾನಸೂರ್ಯನ ಮುನ್ನ
ಸಂಶಯಾರುಣನುದಯ!
ಸಂದೇಹವಿದು, ದೇವ,
ಪ್ರಥಮವಾಗಿಹ ಧ್ಯಾನ!
ಬ್ರಹ್ಮತ್ವವನು ಪಡೆಯೆ
ಇದು ಒಂದು ಸೋಪಾನ!
ಪರಮಾತ್ಮ, ಕ್ಷಮಿಸಿದು ಕಿಶೋರಚಂದ್ರನ ದುರಭಿಮಾನ!

೧೯೨೬-೧೯೨೭


* ತರುಣಕವಿಚೇತನದಲ್ಲಿ ಶ್ರದ್ಧೆ ಸಂದೇಹಗಳ ದೇವಾಸುರಯುದ್ದ ನಡೆಯುತ್ತಿದ್ದಂದು.