ಯಾರೊ ಅಡಗಿಹರಲ್ಲಿ ಸಂಪಗೆಯ ಮರದಲ್ಲಿ!
ನನ್ನಂತೆ ಚೈತನ್ಯವುಳ್ಳವರು; ನನ್ನಂತೆ
ಗಾಳಿಯಲಿ ಉಸಿರೆಳೆದು ಬದುಕುವರು; ನನ್ನಂತೆ
ಬೆಳಕಿನಲಿ ನಲಿದಾಡಿ ಬಾಳುವರು; ನಲ್ಮೆಯಲಿ
ನನ್ನಂತೆ ಹಿಗ್ಗುವರು; ಅಳಲಿನಲಿ ಕುಗ್ಗುವರು;
ಸೃಷ್ಟಿಸೌಂದರ್ಯದಲಿ ನನ್ನಂತೆ ತೇಲುವರು;
ನನ್ನಂತೆ ಚಿಂತಿಪರು; ನನ್ನಂತೆ ಸೊಗದಲ್ಲಿ
ಕಂಬನಿಯ ಸೂಸುವರು; ನನ್ನಂತೆ, ನನ್ನಂತೆ
ಯಾರೊ ಅಡಗಿಹರಲ್ಲಿ ಸಂಪಗೆಯ ಮರದಲ್ಲಿ!

ದಿನಮಣಿಯು ಮರೆಯಾದ ತರುವಾಯ, ಕತ್ತಲಲಿ
ಜಗವೆಲ್ಲ ಮೌನದಲಿ ಮುಳುಗಿರಲು, ಸಂಪಗೆಯ
ಮರದಲ್ಲಿ ಹಾಡುವುದ ಕೇಳಿಹೆನು! ಪಿಸುಮಾತ
ಆಲಿಸಿಹೆ! ಇನನುದಯವಾಗಿ ಬಹ ಸಮಯದಲಿ
“ಏಳಿ ಮಕ್ಕಳೆ ಏಳಿ! ಜಗದ ಸೊಬಗನು ಸೇರಿ”
ಎಂದಾರೊ ಯಾರನೋ ಕರೆವುದನು ಆಲಿಸಿಹೆ!
ಮಕ್ಕಳಿರುವರು ಅಲ್ಲಿ: ತಾಯಿ ಇರುವಳು ಅಲ್ಲಿ:
ತಂದೆ ಇರುವನು ಅಲ್ಲಿ: ಸಂಪಗೆಯ ಸಂಸಾರಿ!
ಮರದೆದೆಯ ಬನದಲ್ಲಿ ಋಷಿಯೊಬ್ಬನೈತಂದು
ಎಲೆವನೆಯ ಮಾಡಿಕೊಂಡಾನಂದದಿಂದಿಹನು!
ನನಗವನು ಗುರುವಾಗಿ ಹಾಡುವುದ ಕಲಿಸಿಹನು!
ಜಗದ ಗುಟ್ಟನು ನನಗೆ ಹೇಳಿಕೊಟ್ಟಿಹನವನು!
ಶೂದ್ರನೆನ್ನದೆ ನನಗೆ ವೇದಗಳ ಸಾರವನು
ತಿಳಿಸಿಹನು! ದುಃಖದಲಿ ಎದೆ ಬೆಂದ ಕಾಲದಲಿ
ಸಂತೈಸಿ, ಹೃದಯದಲಿ ಶಾಂತಿಯನು ತುಂಬಿಹನು!
ತಿರೆಯು ತಿಳಿಯದ ತೆರದಿ ಕಬ್ಬಿಗನು ನೀನೆಂದು
ನನಗೆ ದರ್ಶನವಿತ್ತು ಮುದ್ದಾಡಿ, ಮಾತಾಡಿ,
ನಲ್ಗಬ್ಬಗಳ ಹಾಡಿ ಹರಸಿಹನು! ಬೇಸರವು
ಬರಲೆನಗೆ, ಸಂಪಗೆಯ ಎದೆಯಲ್ಲಿ ನಲಿಯುತಿಹ
ಎಲೆವನೆಗೆ ಹಾರುವೆನು! ಗುರುವರನ ಸೇರುವೆನು!
ಅಡಿಗೆರಗಿ ಹರಕೆಯನು ಕೈಕೊಂಡು ಹಿಗ್ಗುವೆನು!

ಸುಗ್ಗಿ ಎಂದರೆ ಏನು? ಋಷಿಯ ಬೀಣೆಯ ದನಿಯು
ತಳಿರು ಹೂವುಗಳಂತೆ ಮೂಡುವುದು ಹೊರಹೊಮ್ಮಿ!
ರಿಸಿಯ ತವಸಿನ ಬೇಗೆ ಬೇಸಗೆಯ ರೂಪದಲಿ
ತೋರುವುದು! ಕೋಗಿಲೆಯ ಮೈಯಾಂತು ಹಾಡುವುದು
ಋಷಿಯ ವೀಣೆಯ ವಾಣಿ! ಗುರುವರನ ಆನಂದ
ತುಂಬಿ ಹರಿವುದು ತಿರೆಯ!

ಒಂದುದಿನ ನನಗವನು
ಕಲಿಸುವನು ಅವನಂತೆ ಮರದೆದೆಯ ಬನದಲ್ಲಿ
ಮನೆಮಾಡಿ ಬಾಳುವುದ! ಗುರುವು ಬಾಳುವನಲ್ಲಿ
ಸಂಪಗೆಯ ಮರದಲ್ಲಿ! ಕೈಮುಗಿದು ಬಳಿಸಾರು!
ಜಡವೆಂದು ಜರಿಯದಲೆ ಭಕ್ತಿಯಲಿ ಅಡಿಮುಟ್ಟು!
ಎಲೆ ತಂಗಿ, ಸಂಪಗೆಯ ಹೂಕೊಯ್ಯೆ ಹೋಗುವಡೆ
ಮಿಂದು ಮಡಿಯುಟ್ಟು ತಿಳಿಯಾದ ಮನದಿಂದ ನಡೆ;
ಹೂವ ಕೊಯ್ಯುವ ಮೊದಲು ಋಷಿಯಡಿಗಳಾಗಿರುವ
ಬುಡಕೆರಗಿ ಕೈಮುಗಿದು ಮನ್ನಣೆಯ ನೀ ಬೇಡು!

ಪರಮಾತ್ಮನಂತೆ ಪರಿಶುದ್ಧವಹ ದಿವ್ಯಾತ್ಮ
ಅಲ್ಲಿಹನು! ಸಂಪಗೆಯ ಮರವಲ್ಲ: ಋಷಿವರನ
ಆಶ್ರಮವು! ಹೂವಾಡಿಗನೆ, ನೀನು ಹೂಕೊಯ್ಯೆ
ಹತ್ತುವೆಯ? ಅಡಿಗೆರಗಿ ತರುವಾಯ ಮೇಲೇರು!
ಸಂಪಗೆಯ ಮರದಲ್ಲಿ ಕಬ್ಬಿಗನಿಗೊಬ್ಬನಿಗೆ
ತಿಳಿದಿರುವ ಮಂಗಳದ ಗುಡಿಯೊಂದು ಅಡಗಿಹುದು!
ಮೆಲ್ಲನಡಿಯಿಡು, ಹತ್ತು: ತಾಯ ತೊಡೆಯನು ಅಡರಿ
ಮೇಲೆದೆಗೆ ಏರುತಿಹ ಎಳೆಮಗುವಿನಂದದಲಿ!
ಕೊಂಬೆಯನು ಮುರಿಯದಲೆ, ಕೆಂದಳಿರ ನೋಯಿಸದೆ,
ಹೂಕೊಯ್ದು ಕೆಳಗಿಳಿದು ಭಕ್ತಿಯಲಿ ಕೈಮುಗಿದು
ಅಡಿಗೆರಗಿ ಮುಂದೆನಡೆ! ಏಕೆಂದು ಕೇಳುವೆಯ?
ಯಾರೊ ಅಡಗಿಹರಲ್ಲಿ ಸಂಪಗೆಯ ಮರದಲ್ಲಿ!

೨೯-೯-೧೯೨೮