ತಿರುತಿರುಗಿ ಬಲುಬಳಲಿ, ಬಾಳಿನ ತಿರುಳ ಪರಿಯನು ಕಂಡು ಬೇಸರ
ಗೊಂಡು, ವೈರಾಗ್ಯದಲಿ ಕಾವಿಯನುಟ್ಟ ಯತಿಯಂತೆ,
ಮುನಿಸನುಳಿದತಿಶಾಂತವಾಗಿಹ ಮೊಗದ ಬಗೆಯನು ಬೀರಿ, ಪಡುವಣ
ಬೆಟ್ಟದುದಿಯೊಳು ತಳಿತ ಬನದೆಡೆ ರವಿಯು ರಂಜಿಸಿದ.

ತನ್ನಿನಿಯ ಸನ್ಯಾಸಿಯಾಗುವನೆಂಬ ಹೆದರಿಕೆಯಿಂದ ಸಂಜೆಯ
ಹೆಣ್ಣು, ಕುಂಕುಮ ರಾಗರಂಜಿತ ನವದುಕೂಲವನು
ಧರಿಸಿ, ಮುಗಿಲಿನ ಕರಿಯ ಮುಂಗುರುಳಾಡೆ ಕೆನ್ನೆಯ ಮೇಲೆ, ಲಜ್ಜೆಯ
ತೋರಿ, ಮೆಲ್ಲನೆ ಮೋಹಿಸೆರೆಯನ ಮುಂದೆ ಚರಿಸಿದಳು!

ಬಾಲೆ ತಾರೆಯು ಕೆಳದಿಯರ ಕೂಡಿಂಚರವಗೈಯುತ್ತ ಗೂಡಿಗೆ
ಹಾರುವೆಣೆವಕ್ಕಿಗಳ ಬಳಗವ ನೋಡುತನುಕರಿಸಿ
ತನ್ನ ವಾಣಿಯೊಳವರ ವಾಣಿಯ ನಗುವ ಹೆಮ್ಮೆಯೊಳುಬ್ಬಿ ಬಿಂಕದಿ
ಕೆಳದಿಯರ ಮೊಗನೋಡಿ ನಿಂತಿರೆ ರವಿಯು ಮುಳುಗಿದನು.

ಎಂಟು ವರುಷದ ಬಾಲೆ, ಲೋಕದ ಭಾವಗಳನರಿಯದಿಹ ಮುಗ್ಧೆಗೆ
ಸಾವು ಬಾಳುಗಳೆಂಬ ಭೇದವ ತಿಳಿಯದಂಗನೆಗೆ
ಇನಿಯನಂತಕನೂರ ಸೇರಲು ಚಿತೆಯನೇರುವ ಕಾಲ ಬಂದಿರೆ
ಘೋರದೃಶ್ಯವ ನೊಡುವನೆ ರವಿ? ಹೊಕ್ಕನಂಬುಧಿಯ!

ಮಾವ ಬಂದನು, ಕರೆದು ತಾರೆಯನೆತ್ತಿಕೊಂಡನು; ಕಂಬನಿಯ ಕರೆ
ಯುತ್ತ ನುಡಿದನು: “ತಾರೆ, ಗಂಡನ ಕೂಡಿ ನೀ ಹೋಗು!
ಹದಿಬದೆಗೆ ಸೊಗವಹುದು ಮೇಲಿನ ಲೋಕದಲಿ, ಹೆದರದಿರು, ಮಗಳೇ!”
ತಾರೆಗಳು ಮೂದಲಿಸಿ ಮಾವನ, ಮಿಣುಕಿದುವು ನಭದಿ!

ತನಗೆ ಸಕ್ಕರೆ ಕೊಟ್ಟು ಸಲಹಿದ ಮಾವನಕ್ಕರೆಯಿಂದ ನುಡಿದುದ
ಕೇಳಿ ನಕ್ಕಳು ತಾರೆ, ಚಿಮ್ಮಿದಳವನ ತೆಕ್ಕೆಯಲಿ!
ಬಿದಿರ ದಂಡಿಗೆಯೇರಿ ಮಲಗಿದ ಪತಿಯ ಬಳಿಯಲಿ ತಾರೆ ಕುಳಿತಳು
ಪೊಂದೊಡಿಗೆಗಳ ತೊಟ್ಟು, ಚಂದನವಿಟ್ಟು, ಬಾಚಿ ಬೈತಲೆಯ!

ಮೊಳಗಿದುವು ಭೇರಿಗಳು ಮುಳುಗಿಸಿ ಬಂಧುಗಳ ರೋದನವ! ಬಂದರು
ವಿಪ್ರವೇಷವನಾಂತ ಯುಮಭಟರಂತೆ ಜೋಯಿಸರು!
ಮಂತ್ರಗಳ ಜಪಿಸುತ್ತ ನಡೆದರು ಮುಂದೆ, ಹೊರಟಿತು ಬಿದಿರ ದಂಡಿಗೆ
ಹಿಂದೆ ಜವದಿಂ ಮಸಣದಲ್ಲಿಹ ಚಿತೆಯ ಮಂಟಪಕೆ!

ಜೀವದಾಸೆಯ ಕೊಚ್ಚಿ ಮಿತ್ತುವಿನೂರಿಗೋಡುವ ಕಾಲವಾಹಿನಿ
ಯಲ್ಲಿ ತೇಲುವ ಯಮನ ನೌಕೆಯ ತೆರದಿ ದಂಡಿಗೆಯು
ಮಂತ್ರಗಳ ಲೆಕ್ಕಿಸದೆ, ಗಣನೆಗೆ ತಾರದಳುತಿಹ ನಂಟರಿಷ್ಟರ,
ಬಾಲೆ ತಾರೆಯ ನೋಡದೋಡಿತು ಮಸಣದೆಡೆಗಾಗಿ!

ಬಾಯ್ದೆರೆದು ನರಬಲಿಯ ಕಾಯುವ ಯಮನೂರ ಹೆಬ್ಬಾಗಿಲಂದದಿ,
ಮೂಢತನ ಮೈದೋರಿ ಕಾರೊಡಲಾಂತು ಬಂದಂತೆ,
ಪಂಡಿತರ ಪಾಪಗಳು ನುಂಗಲು ಪಾಮರರನೊಟ್ಟಾಗಿ ಬಂದಿಹ
ವೆಂಬಂತೆ ತೋರಿತು ಭಯಂಕರ ಚಿತೆಯು ದೂರದಲಿ:
ಗಂಡನೊಡನೇರಿದಳು ತಾರೆಯು ಚಿತೆಯನತ್ತೆಯು ಬಳಿಗೆ ಬಂದಳು
ಕಳಚಲಾಭರಣಗಳ: ನಡುಗಿತು ಬೆದರಿ ಸುಡುಗಾಡು!

ಗಾಳಿ ನಿಂತಿತು ನಡುಗಿ, ಚುಕ್ಕಿಗಳೆಲ್ಲ ಕಂಪಿಸಿಯವಿತುಕೊಂಡುವು;
ಮೋಡ ಮುಸುಗಿತು; ಭೂಮಿದೇವಿಯು ಘೋರದೃಶ್ಯವನು
ನೋಡಲಾರದೆ ತನ್ನ ಮೊಗವನು ಮುಚ್ಚಿದಳು ಸೆರಗಿಂದ; ಕತ್ತಲೆ
ಹಬ್ಬಿದುದು! ಬಾಲಕಿಯು ಕುಳಿತಳು ಮುಂದನರಿಯದಲೆ!

ಮಾವನಲ್ಲಿಹನತ್ತೆಯಲ್ಲಿಹಳಿನಿಯನೆಡೆಯೊಳು ಮಲಗಿ ನಿದ್ರಿಪ
ನಲ್ಲಿ ಪೂಜ್ಯರು, ನರರು, ಭೂಸುರರೆಂಬ ಜೋಯಿಸರು;
ವೇದಗಳ ಬಲ್ಲವರು; ನೀತಿಯನರಿತವರು; ಧಾರ್ಮಿಕರು; ಧರ್ಮದ
ನೆಲೆಯ ಮರ್ಮವ ಕಂಡವರು ಬಳಸಿರಲು ಭಯವೇಕೆ?

ಧೂಮವೆದ್ದಿತು! ಚಿತೆಯ ಮುತ್ತಿತು! ಬಾಲೆ ತಾರೆಯ ಬಳಸಿಕೊಂಡಿತು!
ಮೊಳಗಿದವು ಭೇರಿಗಳು! ಮಂತ್ರಗಳುಲಿಯು ಪೆರ್ಚಿದುದು!
ಕಾಳ್ಗಿಚ್ಚಿನಲಿ ಸಿಲುಕಿ ಬೇಯುವ ಚೈತ್ರವನಲತೆಯಂತೆ ತರಳೆಯು
ಕುಂದಿದಳು, ಕಂದಿದಳು, ಬಾಡುತ ಬೆಂದಳುರಿಯಲ್ಲಿ!

ಚೀರಿದುದು ಕೋಗಿಲೆಯು: ಪೂಗಳಲುಲಿದ ದುಂಬಿಗಳುರಿದು ಸೀದುವು;
ಪುತ್ತಿನಿಂ ಪೊರಮಟ್ಟ ಪಾವುಗಳಳಿದುವಗ್ಗಿಯಲಿ!
ಕೊಳದ ತಾವರೆಯೊಡನೆ ಕುದಿದುವು ಸಂಚರಿಪ ಮೀನುಗಳು; ಬೆಂದುವು
ಬಾಳೆ, ಸಂಪಗೆಯರಳು ಸುಟ್ಟುರಿದಾಯ್ತು ವನದಹನ!

ಚೀರಿದುದೆ ಕೋಗಿಲೆಯು? ತಾರೆಯು ಕೂಗಿದಳು! ದುಂಬಿಗಳು ಸೀದುವೆ?
ಕಮಲ ಬೆಂದುದೆ? ಮೊಗವ ಮುತ್ತಿದ ಕುರುಳು ಕರಿಯಾಯ್ತು!
ಫಣಿಗಳಳಿದುವೆ? ಬೂದಿಯಾದುವು ಕೇಶಪಾಶಗಳಾಳಿ! ಕುದಿದುವೆ
ಮೀನುಗಳು? ಮರುಗಿದುವು ಕಂಗಳು! ಬನದುರಿಯೆ? ಚಿತೆಯು!

ಒರಲಿದಳೆ ಬಾಲಕಿಯು? ಕೇಳಿರಿ ಭೇರಿಗಳ! ಹೊರಳಿದಳೆ? ಕೇಳಿರಿ
ಧೂಮವನು! ಕೋಮಲೆಯೆ? ಕೇಳಿರಿ ಸುಟ್ಟ ಬೆಂಕಿಯನು!
ಧಗಧಗಿಸಿ ಭುಗಿಭುಗಿಲು ಭುಗಿಲೆಂದುರಿಯು ಕಾಳಿಯ ರಕ್ತಜಿಹ್ವೆಗ
ಳಂತೆ ರಂಜಿಸಿತಿರುಳು ಕಾಳಿಯ ಕರಿಯ ಮೈಯಾಯ್ತು!

೨೮-೭-೧೯೨೮