ಕೂರಸಿಯ ಮೇಲೆ ನೀ ನಡೆಯಬಲ್ಲೆಯ ಹೇಳು?
ಬೆಂಕಿಯಲಿ ಬೀಳ್ವ ಬಲವಿರುವುದೇನು?
ನಿನ್ನ ಕಣ್ಣನು ನೀನೆ ಕೀಳಬಲ್ಲೊಡೆ ಹೇಳು!
ನಿನ್ನೆದೆಯ ನೀನಿರಿಯ ಬಲ್ಲೆಯೇನು?
ಆ ಧೈರ್ಯ ನಿನಗಿರಲು ಸನ್ಯಾಸಿಯಾಗು, ನಡೆ;
ನಿನ್ನ ಕೈವಶವಾಗದಿರದು ಮುಕ್ತಿ!
ಕಾವಿಯೆಂಬುದು ಬರಿಯ ಬಟ್ಟೆಯಲ್ಲದು ಬೆಂಕಿ!
ಸನ್ಯಾಸ ಸಾಧನೆಯು ಲೀಲೆಯಲ್ಲ!

ದಡದಲ್ಲಿ ನಿಂತು ನೀನುರಿಯುವುದಕಿಂತ
ಕಡಲಲ್ಲಿ ಮುಳುಗಿ ತೇಲಾಡುವುದೆ ಮೇಲು.
ಬರಿದೆ ಪಶ್ಚಾತ್ತಾಪ ಪಡದಿರಾಮೇಲೆ
ಬೇಯುವುದಕಿಂತ ನೀ ಸಾಯುವುದೆ ಲೇಸು!

೬-೮-೧೯೨೮