ಹೆರರ ತೋಟದ ಹೂವೆ, ಮೋಹನದ ಚೆಲುವೆ
ಬಾರಿಬಾರಿಗು ನನ್ನನೇಕಿಂತು ಗೆಲುವೆ?
ನಿನ್ನೆದುರು ನಾ ನಿಲ್ಲಲೆದೆಯು ಜುಮ್ಮೆನ್ನುವುದು;
ನಿನ್ನ ಸೊಬಗಿನ ಸಿರಿಯ ನಾ ತಾಳಲಾರೆ.
ನಿನ್ನ ಕಂಗಳ ಬೆಳಕು ನನ್ನಾತ್ಮದಾಳದೊಳು
ಸುಳಿಯುವುದು, ಹುಡುಕುವುದು ಮನದಾಸೆಗಳನೆಲ್ಲ.
ಎದೆಯೊಳಿಹ ಕಗ್ಗಲ್ಲು-ತತ್ತ್ವಗಳ, ಶಾಸ್ತ್ರಗಳ,
ನೀತಿಗಳ, ವೇದಗಳನೋದಿ ನಾ ರಚಿಸಿರುವ
ಜಗ್ಗದಿಹ ಕಗ್ಗಲ್ಲು ಕರಗುವುದು ನೀರಾಗಿ!
ಮನದೊಳಿಹ ಬಜ್ಜರವು ತನ್ನ ಬಲ್ಮೆಯನುಳಿದು
ನಲಿಯುವುದು ಕೋಮಲದ ಸುಗ್ಗಿಯಂತಾಗಿ!

ನಿನ್ನ ನಿಲುವಿನ ಪರಿಯು, ನಿನ್ನ ಚೆಲುವಿನ ಸಿರಿಯು,
ತೆಂಗಾಳಿ ತೀಡುತಿರೆ ಬಳುಕಿ ತೆರೆತೆರೆಯಾಗಿ
ಕುಣಿವ ಮಾಂದಳಿರಂತೆ ನಲಿವ ಸೀರೆಯ ನಿರಿಯು,
ಮುದ್ದಾದ ಸಿರಿಮೊಗವ ಮುತ್ತಿರುವ ಮುಂಗುರುಳು;
ನಿನ್ನ ಮೋಹದ ಚೆಲುವು ತುಂಬಿದರು ನನ್ನೆದೆಯ
ಜೀವದೊಳು ಶೂನ್ಯತೆಯ ತರುತಿರುವುದೇಕೆ?

ನೀನೆನ್ನ ತಾಯೆಂದು ಕೈಮುಗಿಯುವನಿತರೊಳೆ
ನಸುನಗುವುದೆನ್ನೆದೆಯು ಪರಿಹಾಸ್ಯ ಮಾಡಿ!
ನೀನು ಸೋದರಿಯೆಂದು ಬಗೆವೆನೆಂದೊಡೆ, ಮನವು,
ಬೆದರುವುದು, ಬೆಚ್ಚುವುದು, ನಾಚುವುದು, ಚೆಲುವೆ!
ನೀನೆನ್ನ ಮಗಳೆಂದು ತಿಳಿವೆನೆಂದೊಡೆ, ಜೀವ
ಬಾಯಾರಿ ಬತ್ತುವುದು ಬೇಗೆಯಲಿ ಬೆಂದು!
ಪೂಜಿಸುವ ದೇವಿಯೆನೆ ಭಕ್ತಿ ಹಿಂಜರಿಯುವುದು!
ತಾಯಿ ನೀನೆನಲೆನ್ನ ಎದೆಯೊಪ್ಪದಿಹುದು!
ತಂಗಿ ನೀನೆನೆ ಎನ್ನ ಮನ ಬೆಚ್ಚಿ ನಾಚುವುದು!
ಮಗಳೆನಲು ಬಾಯಾರಿ ಬೀಳುವುದು ಜೀವ!
ದೇವಿಯೆನೆ, ನಾಚುವುದು, ನಡುಗುವುದು ಭಕ್ತಿ!
ಇನಿಯಳೆನೆ ಪಾತಕವು! ಮೋಹನದ ಚೆಲುವೆ,
ಬರಿದೆ ಏತಕೆ ನನ್ನನಿಂತು ನೀ ಗೆಲುವೆ?

೯-೧೦-೧೯೨೮