ಮೂಡಿಹನು ಚಂದಿರನು
ನೋಡು, ಬಾ, ತರಳೆಯೆ ||ಪ||
ಮೋಡಗಳ, ಮಾಲೆಯನು
ಸೂಡಿಹನು! ಮೂಡಿಹನು! ||ಅ.ಪ||
ಬನಗಳನು ಮುದ್ದಿಸುತ
ಗಿರಿಗಳನು ಚುಂಬಿಸುತ
ಹೊಳೆಗಳೆದೆಯ ಬೆಳಗಿ ತೊಳಗಿ
ಕವಿಜನಮನ ಮೋಹಿಸುತ….
ಮಿಳಿರುವೆಳೆಯ ತಳಿರ ಮೇಲೆ
ಕೋಮಲತರ ಹಸುರ ಮೇಲೆ
ಬೆಳುದಿಂಗಳ ಬೆಳಕ ಲೀಲೆ
ಮಗುವಿನಂತೆ ಮಲಗಿಹುದು….
ಬಾನೊಳುರುಳಿ ಏರಿಯಲೆವ
ಪೊನ್ನಪೊಸ ಚೆಂಡಿನೊಲು;
ಗಗನರಮಣಿ ಹಣೆಯೊಳಿಟ್ಟ
ಕುಂಕುಮದ ಬಟ್ಟಿನೊಲು;….
ಮುಗಿಲತೆರೆಯ ಮರೆಯ ನುಸಿದು
ಅಡಗಡಗಿ ಮರಳಿ ತೋರಿ
ಎರೆಯನನು ನೋಡಿ ಕೂಡೆ
ಮರೆಯಾಗುವ ತರಳೆಯಂತೆ;….
ಪೊನ್ನ ನೀರನೆರಚಿದಂತೆ
ಜೊನ್ನ ಕಾಂತಿ ಮೆರೆಯುತಿಹುದು:
ನಿನ್ನಿನಿಯನ ತೋರಲೆಂದು,
ಚೆನ್ನೆ, ನಿನ್ನ ಕರೆಯುತಿಹುದು!….
ಕುಸುಮಶರನ ಕಣೆಗಳಂತೆ
ಅಮೃತಕಿರಣಗಳನು ಸೂಸಿ,
ಸುಗ್ಗಿಯೊಡೆಯನೊಲವಿನಂತೆ
ಒಲಿದವರನು ಸೆಳೆಸೆಳೆದು;….
ಬಗೆಯ ಕೇರಿನಲ್ಲಿ ಹಳೆಯ
ಕನಸುಗಳನು ಸುಳಿಸಿ, ನಲಿಸಿ;
ಬಾಳನೆಲ್ಲ ಕನಸುಮಾಡಿ,
ತಾನೆ ಕನಸಿನೊಡವೆಯಾಗಿ;….
ಸದ್ದೆಯಿಲ್ಲದಿರುಳು, ಬಾರ!
ನಿದ್ದೆಯಿಲ್ಲದಿರುಳು, ಬಾರ!
ಮುದ್ದು ಮುದ್ದೆಯಾದ ತೆರದಿ
ತಿಂಗಳಿಹುದು, ತರಳೆ, ಬಾರ!….
ಸೊಬಗಿನಲಿ ಶಿವನಿಹನು;
ಶಿವನೆ ಸೊಬಗಾಗಿಹನು!
ಸೊಬಗನೊಲಿಯೆ ಶಿವನ ಭಕುತಿ!
ಸೊಬಗೆ ನಮಗೆ ಕಡೆಯ ಮುಕುತಿ!….
ತಿರೆಗೆ ಸೊಬಗೆ ಶಿವನ ದಾನ,
ಇದನು ತಿಳಿದ ನರನೆ ಜಾಣ;
ಇದುವೆ ವೇದ ನುಡಿವ ಜಾನ:
ಇದುವೆ ನಮ್ಮ ಎದೆಯ ಧ್ಯಾನ!….
೩೧-೮-೧೯೨೮
Leave A Comment