ಹೊಯ್ಸಳಕನ್ನಡದಲ್ಲಿ ಮಕ್ಕಳಿಗಾಗಿ ಸೊಗಸಾದ ಸಾಹಿತ್ಯವನ್ನು ರಚಿಸಿದರು. ವಿದ್ಯಾರ್ಥಿಗಳು ಬಹಳ ಮೆಚ್ಚಿಕೊಂಡ ಅಧ್ಯಾಪಕರು. ಸರಳ ಜೀವನ, ಸ್ನೇಹಪರ ಸ್ವಭಾವ.

ಹೊಯ್ಸಳ

ವಿಚಿತ್ರ ಹೆಸರಿನ ಗೇಣುದ್ದದ ಒಂದು ಪುಟ್ಟ ಪುಸ್ತಕ ನಮ್ಮ ಅಂಗೈಯಷ್ಟು ಅಗಲದ ಅತಿಪುಟ್ಟ ಪುಸ್ತಕ. ಎಳೆಯ ಮಕ್ಕಳೂ ತಮ್ಮ ಅಂಗಿಯ ಜೋಬಿನಲ್ಲಿ ತುರುಕಿ ಕೊಳ್ಳಬಹುದು, ಅಷ್ಟು ಚಿಕ್ಕ ಪುಸ್ತಕ. ೧೯೨೩ನೆಯ ಇಸವಿಯಲ್ಲಿ ಪ್ರಕಟವಾಯಿತು. ಅದರಲ್ಲಿ ಐದು ಗದ್ಯದ ಚೂರುಗಳು, ಏಳು ಪದ್ಯಗಳು. ಈ ಪುಟಾಣಿ ಪುಸ್ತಕ ‘ತಿರುಗ ಮುರುಗ.’

‘ತಿರುಗ ಮುರುಗ’ದ ಲೇಖಕರು ನಮ್ಮ ನಾಡಿನ ಮಕ್ಕಳ ಬದುಕು ಬಂಗಾರವಾಗಬೇಕು ಎಂದು ಬಯಸಿದರು. ಅವರು ಅದಕ್ಕಾಗಿ ತಮ್ಮ ಲೇಖನಿಯನ್ನು ಮುಡಿಪಾಗಿಟ್ಟರು. ಅವರು ಬೆಟ್ಟದಷ್ಟು ಮಕ್ಕಳ ಸಾಹಿತ್ಯವನ್ನು ಸೃಷ್ಟಿ ಮಾಡಿದರು. ಅವರ ನಿತ್ಯ ದುಡಿಮೆಯಿಂದ ನಮ್ಮ ಕನ್ನಡ ಮಕ್ಕಳ ಸಾಹಿತ್ಯ ಶ್ರೀಮಂತವಾಯಿತು.

‘ಉದ್ದೇಶ ಘನವಾದದ್ದು’

‘ತಿರುಗ ಮುರುಗ’ ೧೯೨೩ ರಲ್ಲಿ ಪ್ರಕಟವಾಗಿ ಬಂತಲ್ಲ ಆ ಕಾಲದಲ್ಲಿ ಮೂರು ತಿಂಗಳಿಗೆ ಒಂದು ಸಂಚಿಕೆಯಂತೆ ‘ಪ್ರಬುದ್ಧ ಕರ್ಣಾಟಕ’ ಬರುತ್ತಿತ್ತು. ‘ಪ್ರಬುದ್ಧ ಕರ್ಣಾಟಕ’ ಆಗ ಬಹಳ ಪ್ರಸಿದ್ಧವಾದ ಪತ್ರಿಕೆ. ಸಾಹಿತಿಗಳಿಗೆ, ಪಂಡಿತರಿಗೆ ಬಲು ಅಚ್ಚುಮೆಚ್ಚು. ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕರ್ಣಾಟಕ ಸಂಘ ‘ಪ್ರಬುದ್ಧ ಕರ್ಣಾಟಕ’ವನ್ನು ಪ್ರಕಟಿಸಿತ್ತು. ಪುಸ್ತಕಗಳ ಯೋಗ್ಯತೆ ಕುರಿತು ಆ ಪತ್ರಿಕೆಯು ಅಭಿಪ್ರಾಯಗಳಿಗೆ ತುಂಬಾ ಮಾನ್ಯತೆ ಇತ್ತು.

‘ಪ್ರಬುದ್ಧ ಕರ್ಣಾಟಕ’ ದಲ್ಲಿ ‘ತಿರುಗ ಮುರುಗ’ದ ವಿಮರ್ಶೆಯಾಯಿತು, ‘ಅಡಿ ಚಿಕ್ಕದಾದರೂ ನಮ್ಮ ಸುತ್ತ ಮುತ್ತಲೂ ಈಗ ಗಾಳಿಪಟಗಳಂತೆ ವಿರಾಮವಿಲ್ಲದೆ ಹಾರಾಡುತ್ತಿರುವ ಚಿಕ್ಕ ಪುಸ್ತಕಗಳಂತೆ ಇದು ಅಲ್ಪವಾದುದುದಲ್ಲ. ಇದರ ಉದ್ದೇಶವೂ ಘನವಾದದ್ದು. ರಾಮರಾಜ್ಯದಂಥ ಸ್ವರ್ಗಸದೃಶವಾದ ಬೇರೊಂದು ತರದ ಪ್ರಪಂಚವನ್ನು ಮಾಡಿಕೊಂಡು ನಮ್ಮ ಬಾಲಕರು ಹೊಸರೀತಿಯಲ್ಲಿ ಬದುಕುವಂತೆ ಮಾಡಬಕೆಂಬುದೇ ಇದರ ಆಸೆ. ಆತ್ಮಗುಣ, ಸಂಯಮ, ಪರೋಪಕಾರ ಇವೇ ಇದು ಬೋಧಿಸುವ ತಪಶ್ಚರ‍್ಯ.’

‘ತಿರುಗ ಮುರುಗ’ವನ್ನು ವಿಮರ್ಶಿಸಿದವರು ಸಾಮಾನ್ಯರಲ್ಲ.  ಪ್ರಸಿದ್ಧ ಕವಿ,  ಶ್ರೇಷ್ಠ  ವಿಮರ್ಶಕ ಎನ್ನಿಸಿಕೊಂಡ ವಿ. ಸೀತಾರಾಮಯ್ಯನವರು.

‘ನಮ್ಮ ಕನ್ನಡ ಭಾಷೆಯಲ್ಲಿ ಇಷ್ಟು ರಮ್ಯವಾಗಿ ಬರೆದು ಜೀವಕಲೆಯನ್ನು ತುಂಬಿ ನಮ್ಮ ಭಾಷೆಯಲ್ಲಿ ಈ ರೀತಿ ಕವಿತೆ ಮಾಡುವುದು ಪ್ರಶಂಸಾರ್ಹ’ ಎಂದು ವಿ.ಸೀ ‘ತಿರುಗ ಮುರುಗ’ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಶ್ರೇಷ್ಠ ಕೃತಿಯ ಕಿರೀಟವನ್ನಿಟ್ಟರು. ‘ತಿರುಗ ಮುರುಗ’ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಶ್ರೇಷ್ಠ ಸ್ಥಾನ ಪಡೆಯಿತು. ಅದರ ಲೇಖಕರು ಶ್ರೇಷ್ಠ ಸಾಹಿತಿಗಳು ಎಂದು ಗಣ್ಯರಾದರು.

‘ತಿರುಗ ಮುರುಗ’ದ ಲೇಖಕರು

ಪ್ರಬುದ್ಧ ಕರ್ಣಾಟಕದಲ್ಲಿ ‘ತಿರುಗ ಮುರುಗ’ಕ್ಕೆ ಒಳ್ಳೆಯ ವಿಮರ್ಶೆ ಬಂತಲ್ಲ. ಕೂಡಲೆ ಸಾಹಿತಿಗಳ, ಸಾಹಿತ್ಯ ಪ್ರೇಮಿಗಳ ಕಣ್ಣು ಅದರ ಮೇಲೆ ಬಿತ್ತು. ಎಲ್ಲರ ಬಾಯಲ್ಲೂ ‘ತಿರುಗ ಮುರುಗ’ದ ಮಾತೇ ಮಾತು. ಅದರ ಲೇಖಕರ ಪ್ರಶಂಸೆಯೇ ಪ್ರಶಂಸೆ. ಆದರೆ ‘ತಿರುಗ ಮುರುಗ’ದ ಲೇಖಕರು ಯಾರೆಂದು ಯಾರೂ ಅರಿಯರು. ಅದರ ಪ್ರಕಾಶಕರು ಪುಸ್ತಕದ ರಕ್ಷಾಪತ್ರದ ಮೇಲಾಗಲೀ ಒಳಗಾಗಲೀ ಎಲ್ಲೂ ಲೇಖಕರ ಹೆಸರನ್ನು ಮುದ್ರಿಸಿರಲಿಲ್ಲ. ಇದು ಎಂಥ ಚೋದ್ಯ !

ಲೇಖಕರ ಹೆಸರನ್ನು ಎಷ್ಟು ದಿನ ಗುಟ್ಟಾಗಿಡಲು ಸಾಧ್ಯ! ರಹಸ್ಯ ಕಡೆಗೆ ರಟ್ಟಾಯಿತು. ‘ತಿರುಗ ಮುರುಗ’ದ ಲೇಖಕರು ಆರಗಂ ಲಕ್ಷ್ಮಣರಾಯರಂತೆ. ‘ಹೊಯಿಸಳ’ ಎಂಬ ಕಾವ್ಯ ನಾಮವಂತೆ. ಅವರು ಶಾಂತಿಕೇತನದಲ್ಲಿ ಎರಡು, ಮೂರು ವರ್ಷಗಳಿದ್ದು ಈಗತಾನೆ ಬಂದಿರುವರಂತೆ. ವಿಶ್ವಕವಿ ಗುರುದೇವ ರವೀಂದ್ರನಾಥ ಠಾಕೂರರ ಪ್ರೀತಿಗೆ ಪಾತ್ರರಾದ ಶಿಷ್ಯರಂತೆ. ಸ್ವದೇಶಿ ಚಳುವಳಿಯ ಡಾಕ್ಟರ್ ಆನಿಬೆಸೆಂಟ್ ಸ್ಥಾಪಿಸಿದ ಮದನಪಲ್ಲಿ ನ್ಯಾಷನಲ್ ಕಾಲೇಜಿನಲ್ಲಿ ಓದಿದ್ದಾರಂತೆ. ಬಿ.ಎ ಪದವಿ ಪಡೆದರುವರಂತೆ. ಐರಿಷ್ ಮಹಾಕವಿ ಜಿ.ಎಚ್ ಕಸಿನ್ಸ್, ದೀನಬಂಧು ಸಿ. ಎಫ್ ಆಂಡ್ರೂಸ್, ಈ ಮಹಾಶಯರುಗಳು ‘ಹೊಯಿಸಳ’ರಿಗೆ ಮಾರ್ಗ ದರ್ಶಕರಂತೆ. ‘ಹೊಯಿಸಳ’ರು ಮೈಸೂರು ಸಂಸ್ಥಾನದ ಪ್ರೌಡಶಾಲೆಯೊಂದರಲ್ಲಿ ಉಪಾಧ್ಯಾಯರಾಗಿದ್ದಾರೆ. ಇಂಗ್ಲಿಷ್, ಚರಿತ್ರೆ-ಭೂಗೋಳ ಪಾಠಗಳನ್ನೂ ಕಲಿಸುತ್ತಾರೆ. ಅವರು ನಿರಾಡಂಬರ ವ್ಯಕ್ತಿ, ವಿನಯ ಮೂರ್ತಿ, ಮೃದು ಸ್ವಭಾವದ ಸುಸಂಸ್ಕೃತ ಜೀವಿ. ಖಾದಿವಸ್ತ್ರ ಧಾರಿ’ ಹೀಗೆ ‘ಹೊಯಿಸಳ’ರನ್ನು ಕಂಡು ಕೇಳಿದ ಜನ ಮಾತಾಡಿ ಕೊಂಡರು.

ಯಾರೀ ‘ಹೊಯಿಸಳ’ ?

ಲಕ್ಷ್ಮಣರಾಯರು ‘ಹೊಯಿಸಳ’ ಎಂಬ ಹೆಸರಿನಿಂದ ಮಕ್ಕಳ ಸಾಹಿತ್ಯವನ್ನು ಸೃಷ್ಟಿ ಮಾಡ ತೊಡಗಿದರಲ್ಲ. ತಂದೆತಾಯಿಗಳು ಇಟ್ಟ ಹೆಸರನ್ನು ಬಿಟ್ಟು ‘ಹೊಯಿಸಳ’ರೆಂದು ಲೇಖನ ನಾಮವನ್ನು ಇಟ್ಟು ಕೊಂಡರಲ್ಲ, ಏಕೆ?

ಬೇಲೂರು, ಹಳೆಬೀಡು, ಸೋಮನಥಪುರಗಳ ದೇವಾಲಯಗಳ ಶಿಲಾ ಶಿಲ್ಪ ವೈಭವ ಕಲಾ ರಸಿಕರ ಕಣ್ಣು ಕೋರಯಿಸುತ್ತದೆ. ಈ ಜಗತ್ಪ್ರಸಿದ್ಧ ಶಿಲ್ಪ ಕಲಾಧ್ಭುತ ಸೌಂದರ‍್ಯದ ದೇವಾಲಯಗಳನ್ನು ನಿರ್ಮಿಸಿದವರು ಯಾರು? ಅವರು ಹೊಯಿಸಳ ಸಾಮ್ರಾಜ್ಯವನ್ನು ಆಳಿದ ಹೊಯಿಸಳ ರಾಜವಂಶದ ಚಕ್ರವರ್ತಿ ಸಾರ್ವಭೌಮರು ಗಳು. ಈ ಹೊಯಿಸಳ ರಾಜವಂಶದ ಮೂಲ ಪುರುಷ ಸಳ. ಹಾಗೆ ಹೊಯಿಸಳ ಸಾಮ್ರಾಜ್ಯ ಕಲೆಯ ಗೂಡು, ಸಾಹಸದ ಬೀಡು ಎನ್ನಿಸಿಕೊಂಡಿತು.

ಈ ಮಹಾ ಹೊಯಿಸಳ ಕರ್ನಾಟಕ ಸಾಮ್ರಾಜ್ಯದಲ್ಲಿ ಹಲವಾರು ಬ್ರಾಹ್ಮಣ ಪಂಗಡಗಳು ವಲಸೆ ಬಂದು ನೆಲೆಸಿದವು. ಚೆನ್ನಾಗಿ ಬಾಲಿ ಬದುಕಿದವು. ಅಂತ ಬ್ರಾಹ್ಮಣ ಪಂಗಡಗಳಲ್ಲಿ ಒಂದು ಬ್ರಾಹ್ಮಣ ಪಂಗಡ ತನ್ನನ್ನು‘ಹೊಯಿಸಳ ಕರ್ಣಾಟಕ ಬ್ರಾಹ್ಮಣರು’ ಎಂದು ಕರೆದುಕೊಂಡಿತು. ಲಕ್ಷ್ಮಣರಾಯರು ಹೊಯಿಸಳ ಕರ್ಣಾಟಕ ಬ್ರಾಹ್ಮಣರು. ಈ ಕಾರಣ ಅವರು ತಮ್ಮ ಕಾವ್ಯ ನಾಮವನ್ನು ಹೊಯಿಸಳ ಎಂದು ಇಟ್ಟುಕೊಂಡರು. ಲಕ್ಷ್ಮಣರಾಯರ ಹುಟ್ಟುಹೆಸರು ರೂಢಿತಪ್ಪಿತು; ಸರಕಾರದ ದಾಖಲೆಯಲ್ಲಿ ಮಾತ್ರ ಉಳಿಯಿತು. ಅವರು ಲೇಖನ ನಾಮವಾಗಿ ಇಟ್ಟುಕೊಂಡ ‘ಹೊಯಿಸಳ’ ಜನಪ್ರಿಯ ವಾಯಿತು.

ಬಾಲ್ಯ-ಜೀವನ ಗುರಿ

ಆರಗ ಎಂಬ ಗ್ರಾಮ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿಗೆ ಸೇರಿದೆ. ಹೊಯಿಸಳರ ಪೂರ್ವಿಕರು ಆ ಗ್ರಾಮವಾಸಿಗಳು. ಕ್ರಮೇಣ ಹೊಯಿಸಳರ ತಂದೆ ತಾಯಿಗಳು ಎಡೆಹಳ್ಳಿಗೆ ಬಂದು ನೆಲೆಸಿದರು. ದು ಈಗ ನರಸಿಂಹಪುರವೆಂದಾಗಿ ಚಿಕ್ಕಮಗಳೂರು ಜಿಲ್ಲೆಗೆ ಸೇರಿದೆ. ಲಕ್ಷ್ಮಣರಾಯರು ನರಸಿಂಹರಾಜಪುದಲ್ಲಿ ೧೮೯೩ನೆಯ ಇಸವಿ ಮೇ ತಿಂಗಳ ೭ನೆಯ ದಿನಾಂಕದಂದು ಹುಟ್ಟಿದರು.

ಸುಬ್ಬಯ್ಯ ಹೊಯಿಸಳರ ತಂದೆ. ಅವರು ವ್ಯವಸಾಯ ಮಾಡಿಕೊಂಡು ಜೀವಿಸುತ್ತಿದ್ದರು. ಅವರ ಮೊದಲ ಹೆಂಡತಿಗೆ ಇಬ್ಬರು ಮಕ್ಕಳು, ನಾಗಪ್ಪ ಮತ್ತು ಶೇಷಾಚಲಯ್ಯ. ಸುಬ್ಬಯ್ಯನವರ ಎರಡನೆಯ ಹಂಡತಿ ಸುಬ್ಬಮ್ಮ. ಅವರಿಗೆ ಐದು ಮಂದಿ ಗಂಡು ಮಕ್ಕಳು, ಇಬ್ಬರು ಹೆಣ್ಣು ಮಕ್ಕಳು. ಗಂಡುಮಕ್ಕಳು ಸೀತಾರಾಮಯ್ಯ, ಸುಬ್ಬರಾವ್, ಅನಂತಯ್ಯ, ಲಕ್ಷ್ಮಣ ರಾವ್ ಅಥವಾ ‘ಹೊಯಿಸಳ.’ ಹೊಯಿಸಳರಿಗೆ ಇಬ್ಬರು ಸೋದರಿಯರು ನಾಗಮ್ಮ, ಲಕ್ಷ್ಮಮ್ಮ.

ಹೊಯಿಸಳರ ಪ್ರಾಥಾಮಿಕ ಮಾಧ್ಯಮಿಕ ಶಾಲಾ ವಿದ್ಯಾಭ್ಯಾಸ ನರಸಿಂಹರಾಜಪುರದಲ್ಲಿ ನಡೆಯಿತಂತೆ. ಅವರ ಪ್ರೌಢಶಾಲಾ ವಿದ್ಯಾಭ್ಯಾಸ ಮೈಸೂರಿನ ಮರಿಮಲ್ಲಪ್ಪ ಹೈಸ್ಕೂಲಿನಲ್ಲಿ ಪೂರೈಸಿತು.

ಮನದನಪಲ್ಲಿಗೆ

ಎಫ್. ಎ. ತರಗತಿಯಲ್ಲಿ ಓದುತ್ತಿದ್ದಾಗ ಭಾರತ ದೇಶದಲ್ಲಿ ಇದ್ದಕ್ಕಿದ್ದ ಹಾಗೆ ನಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ಆಂದೋಳನ ಪ್ರಾರಂಭವಾಯಿತು. ಥಿಯಾಸಫಿ ಧರ್ಮದ ಮುಂದಾಳುಗಳೂ ಆಗಿನ ಭಾರತ ದೇಶದ ನಾಯಕರೂ ಆಗಿದ್ದ ಡಾಕ್ಟರ್ ಆನಿಬೆಸೆಂಟ್ ಸ್ವದೇಶಿ ಚಳುವಳಿಯನ್ನು ಪ್ರಾರಂಭಿಸಿದರು. ಬಾಲಕ ಹೊಯಿಸಳ ಮಹಾದೇಶಾಭಿಮಾನಿ, ಆತನ ಅಣ್ಣ ಅನಂತಯ್ಯ ಈಗಾಗಲೇ ದೇಶದ ಸ್ವದೇಶೀ ಚಳುವಳಿಯಲ್ಲಿ ನುಸುಳಿದ್ದರು. ಸಮಾಜ ಸುಧಾರಣೆಗೆ ತೊಡಗಿದ್ದರು. ಹರಿಜನೋದ್ಧಾರಕ್ಕಾಗಿ ಶ್ರಮಿಸಿದ್ದರು, ಇದು ತಮ್ಮನ ಮೇಲೆ ಪರಿಣಾಮ ಮಾಡಿತು. ಯುವಕ ಲಕ್ಷ್ಮಣ ಮೈಸೂರನ್ನು ಬಿಟ್ಟು ಮುಂದಿನ ವಿದ್ಯಾಭ್ಯಾಸಕ್ಕೆಂದು ಮದನಪಲ್ಲಿಗೆ ಹೋದ. ಆನಿಬೆಸೆಂಟ್ ಪ್ರಾರಂಭಿಸಿದ್ದ ಮದನಪಲ್ಲಿ ನ್ಯಾಷನಲ್ ಕಾಲೇಜ್ ವಿದ್ಯಾರ್ಥಿಯಾಗಿ ಸೇರಿಕೊಂಡ. ವಿಶ್ವಕವಿಯೆಂದು ಮಾನ್ಯರಾದ ಗುರುದೇವ ರವೀಂದ್ರರು ಮದನಪಲ್ಲಿ ನ್ಯಾಷನಲ್ ಕಾಲೇಜಿನ ಗೌರವ ಕುಲಪತಿ ಗಳಾಗಿದ್ದರಂತೆ. ಈರ‍್ಲೆಂಡಿನ ಮಹಾಕವಿ ಜಿ. ಎಚ್. ಕಸಿನ್ಸ್ ಉಪಕುಲಪತಿಗಳಾಗಿದ್ದರಂತೆ. ದೀನ ಬಂಧು ಸಿ.ಎಫ್. ಆಂಡ್ರೋಸ್ ಅಧ್ಯಾಪಕರಾಗಿದ್ದರಂತೆ. ಮಹಾನ್ ಮಹಾನ್ ವ್ಯಕ್ತಿಗಳಾದ ಈ ಮೂವರ ಪ್ರಭಾವಕ್ಕ ಒಳಗಾದ ಲಕ್ಷ್ಮಣ, ಹಾಗೂ ಹೀಗೂ ಬಿ.ಎ ಪದವಿ ಪಡೆಯುವಷ್ಟರಲ್ಲೆ ಅವನ ಮನಸ್ಸು ದೇಶಸೇವೆ ಮಾಡಲು ಹಾತೊರೆಯಿತು. ಎಂ.ಎ. ಪದವಿ ಪರೀಕ್ಷೆಗೆ ಕೂಡಲು ಸಿದ್ಧತೆ ನಡೆದಿತ್ತು. ಅದಕ್ಕೆ ಅರ್ಧದಲ್ಲಿಯೇ ಕೈ ಮುಗಿದ.

ಶಾಂತಿನಿಕೇತನ

ಗುರುದೇವ ರವೀಂದ್ರರ ಶಾಂತಿನಿಕೇತನ ಕರೆಯುತ್ತಿತ್ತು. ತನ್ನ ಎಂ.ಎ. ವಿದ್ಯಾಭ್ಯಾಸವನ್ನು ಬಿಟ್ಟು ಶಾಂತಿನಿಕೇತನಕ್ಕೆ ಇಂಗ್ಲಿಷ್ ಅಧ್ಯಾಪಕನಾಗಿ ಹೋದ.

ಏಕೆ ಲಕ್ಷ್ಮಣ ಶಾಂತಿನಿಕೇತನಕ್ಕೆ ಹೋದ? ಅದನ್ನು ಸ್ಪಷ್ಟವಾಗಿ ಕವಿ ತಮ್ಮ ಹೃದಯಂತರಾಳದಿಂದ ಬಂದ ಆವೇಶದಿಂದ ನುಡಿದ್ದಾರೆ:

ದೇವ ಗುರುದೇವನು ಒಲಿದಾಡುತಿಹನಲ್ಲಿ
ಭಾವತೀರ್ಥ ಕ್ಷೇತ್ರವಾ ಶಾಂತಿನಿಕೇತನ

ತಂದೆಯ ಮೇಲ್ಪಂಕ್ತಿ

ಲಕ್ಷ್ಮಣನ ತಂದೆ ಪ್ರಾಮಾಣಿಕರು; ಸಹೋದರರು ಕಲಾವಂತರು, ದೇಶಭಕ್ತರು. ಲಕ್ಷ್ಮಣನಲ್ಲಿ ಈ ಗುಣಗಳು ಮೂಗೂಡಿದ್ದವು. ತಂದೆ ಸುಬ್ಬಯ್ಯ ನರಸಿಂಹರಾಜಪುರಕ್ಕೆ ಏಳೇಂಟು ಮೈಲಿ ಫಾಸಲೆ ಯಲ್ಲಿದ್ದ ಒಂದು ಕಾಫಿತೋಟ ವನ್ನು ಒಬ್ಬ ‘ದೊರೆಯ’ ಪರವಾಗಿ ನೋಡಿಕೊಳ್ಳತ್ತಿದ್ದರಂತೆ. ಅವನು ಇಂಗ್ಲಿಷ ರವನು. ದೇಶೀಜನ ಬಿಳೀಜನವನ್ನು ‘ದೊರೆ, ದೊರೆ’ ಎಂದು ಕರೆಯುತ್ತಿದ್ದರು. ಆ ದೊರೆ ಸ್ಥಳದಲ್ಲಿರಲಿಲ್ಲ. ಪರಸ್ಥಳದಲ್ಲಿದ್ದ. ಕಾಫಿಬೆಳೆ ಬಂದಾಗ ಬಂದು, ಮಾರಿದ ಹಣ ತೆಗೆದುಕೊಂಡು ಹೋಗುತ್ತಿದ್ದ. ಇಲ್ಲವೇ ಸುಬ್ಬಯ್ಯನವರೇ ಕಾಫಿ ಬೆಳೆ ಮಾರಿ, ಬಂದ ಹಣವನ್ನು ಅವನಿಗೆ ತಪ್ಪದೆ ಕಳಿಸುತ್ತಿದ್ದರು. ತಮ್ಮ ಧಣಿ ದೊರೆಗೆ ವಂಚನೆ ಮಾಡದೆ ಪ್ರಾಮಾಣಿಕರಾಗಿ ನಡೆದು ಕೊಳ್ಳುತ್ತಿದ್ದರು. ಧಾತು-ಈಶ್ವರ ಸಂವತ್ಸರಗಳಲ್ಲಿ ದೇಶದಲ್ಲೆಲ್ಲ ಅಗಾಧ ಕ್ಷಾಮ ಬಂತು. ಮಳೆ ಹೋಯಿತು. ಬೆಳೆ ಆಗಲಿಲ್ಲ. ಭೂಮಿ ನೀರಿನ ದಾಹದಿಂದ ಬಿರುಕು ಬಿಟ್ಟಿತು. ದನಕರುಗಳು ನೀರು ಹುಲ್ಲು ಇಲ್ಲದೆ ಸತ್ತವು. ಜನ ಹೊಟ್ಟೆಗಿಲ್ಲದೆ ಕ್ರಿಮಿಗಳಂತೆ ಸತ್ತರು. ಸುಬ್ಬಯ್ಯ ಮಾಮೂಲಿನಂತೆ ತಪ್ಪದೆ ಕಳಿಸುತ್ತಿದ್ದ ಕಾಫಿ ಬೆಳೆಯ ಹಣ ಆ ವರ್ಷಗಳಲ್ಲಿ ದೊರೆಗೆ ಸಂದಾಯವಾಗಲಿಲ್ಲ. ದೊರೆ ರೋಷದಿಂದ ಭೂತ ಮೈಮೇಲೆ ಬಂದವನಂತೆ ಆವೇಶ ದಿಂದ ಊರಿಗೆ ಬಂದ. ಸುಬ್ಬಯ್ಯನವರ ಪ್ರಾಮಾಣಿಕತ ನವನ್ನು ನಂಬಲಿಲ್ಲ. ಅವರನ್ನು ಕರೆದು ಕೊಂಡು ತೋಟಕ್ಕೆ ಹೋದ. ಸತ್ಯದ ಅರಿವಾಯಿತು. ಆದರೆ ಸುಬ್ಬಯ್ಯ ಪವಾಡ ಮಾಡಿ ಹಣವನ್ನು ಝಣ ಝಣ ಸುರಿಸಿದರಂತೆ. ದೊರೆ ಸುಬ್ಬಯ್ಯನವರ ಪ್ರಾಮಾಣಿಕತನವನ್ನು ಮೆಚ್ಚಿಕೊಂಡ. ‘ತಪ್ಪಾಯಿತು ಕ್ಷಮಿಸಿ’ ಎಂದು ಕ್ಷಮಾಪಣೆ ಬೇಡಿದ. ಲಕ್ಷ್ಮಣ ತಂದೆಯಂತೆ ಪ್ರಾಮಾಣಿಕನಾಗಿದ್ದ.

ಅಣ್ಣಂದಿರೊಡನೆ

ಲಕ್ಷ್ಮಣನ ಮಲಅಣ್ಣಂದಿರಲ್ಲಿ ಒಬ್ಬರಾದ ಶೇಷಾಚಲಯ್ಯ ಆಶು ಕವಿಗಳಂತೆ. ಅವರ ಮದುವೆ ಮನೆಗಳಲ್ಲಿ ಬೀಗರ ಹಾಡುಕಟ್ಟಿ ಹಾಡುತ್ತಿದ್ದರಂತೆ. ಲಕ್ಷ್ಮಣನ ಅಣ್ಣ ಸೀತಾರಾಮಯ್ಯನೂ ಅಷ್ಟೆ. ಕೂತಕತಲ್ಲಿ, ನಿಂತನಿಂತಲ್ಲಿ ಕವನ ಕಟ್ಟಿ ಹಾಡುವರು. ಸುಬ್ಬರಾವ್ ಇನ್ನೊಬ್ಬ ಅಣ್ಣ. ಅವರು ವಿದ್ಯುಚ್ಛಕ್ತಿ ಇಲಾಖೆಯಲ್ಲಿದ್ದರು. ತೋಟಗಾರಿಕೆ, ಮರಗೆಲಸ, ಹಸು ಸಾಕಣೆ, ಕೈ ಕೆಲಸ, ರುಚಿರುಚಿ ತಿಂಡಿತೀರ್ತ ಮಾಡುವುದರಲ್ಲಿ ಬಲು ನಿಪುಣರು. ಲಕ್ಷ್ಮಣ ಅಣ್ಣಂದಿರಿಂದ ಈ ಗುಣಗಳನ್ನು ಕಲಿತಿದ್ದ. ಸೀತಾರಾಮಯ್ಯ ಬರೆಯುತ್ತಿದ್ದ ನಾಟಕಗಳಲ್ಲಿ ಲಕ್ಷ್ಮಣ ಮುಖ್ಯ ಪಾತ್ರ ವಹಿಸುತ್ತಿದ್ದ. ಹಾಡುತ್ತಿದ್ದ. ಅವನಿಗೆ ಆಗ ಕೇವಲ ಹತ್ತು ವರ್ಷ.

ಬಾಲಕ ಲಕ್ಷ್ಮಣ ಚಿತ್ತಾರ ಬರೆಯುವುದರಲ್ಲಿ ಕುಶಲತೆ ಪಡೆದಿದ್ದ. ಅವನು ತನ್ನ ಮನೆಯಲ್ಲಿ ಭತ್ತ ತುಂಬಲು ಇಟ್ಟಿದ್ದ ಆಳೆತ್ತರದ ಪಣತೆಗಳನ್ನೇ ತನ್ನ ಚಿತ್ತಾರ ರಚನೆಗೆ ಸಲಕರಣೆ ಮಾಡಿಕೊಳ್ಳುತ್ತಿದ್ದ. ಸುಣ್ಣ, ಕೆಮ್ಮಣ್ಣು ಉಂಡೆಗಳು, ತನಗೆ ಬೇಕಾದ ಬಣ್ಣಗಳು, ಸಗಣಿಯಿಂದ ಸಾರಿಸಿದ ಪಣತಗಳ ಸುತ್ತ ಪಕ್ಷಿ ಪ್ರಾಣಿಗಳು, ಹೂಬಳ್ಳಿಗಳು ಜೀವಕಳೆ ತುಂಬಿಕೊಂಡು ರೂಪು ಗೊಳ್ಳುತ್ತಿದ್ದವು ಬಾಲಕ ಲಕ್ಷ್ಮಣನಿಂದ.

ಹಾಡಲಾರೆಯ ಹಕ್ಕಿ

ಮಲೆನಾಡಿನ ಮಡಿಲಲ್ಲಿ ತಾನೆ ಲಕ್ಷ್ಮಣ ಹುಟ್ಟಿದ್ದು. ಬಾಲಕ ಲಕ್ಷ್ಮಣನ ಮಲೆನಾಡಿನ ವನಶ್ರಿಗೆ ಮಾರುಹೋಗಿದ್ದ. ಹಚ್ಚಹಸಿರು ಗುಡ್ಡಬೆಟ್ಟಗಳ ಸೌಂದರ್ಯಕ್ಕೆ ಬೆರಗಾಗಿದ್ದ. ಮಲೆನಾಡಿನ ಹುಳು ಹುಪ್ಪಟೆ, ಪಶು ಪಕ್ಷಿಗಳು ಅವನನ್ನು ಸೆರೆಹಿಡಿದಿದ್ದವು. ಲಕ್ಷ್ಮಣ ಶಾಂತಿನಿಕೇತನದಿಂದ ಬಂದ ಮೇಲೆ ಹೊಯಿಸಳ ಎಂಬ ಲೇಖನ ನಾಮವನ್ನು ಇಟ್ಟು ಕೊಂಡು ಕಥೆ ಕವನ ಬರೆಯತೊಡಗಿದರಷ್ಟೆ. ಅವುಗಳಲ್ಲೆಲ್ಲ ಅವರ ಕಣ್ಣು ಸೆರೆಹಿಡಿದ ಭಾವಚಿತ್ರ ಜೀವಂತವಾಗಿದೆ. ಮಕ್ಕಳ ಸಾಹಿತ್ಯೋದ್ಯಾನದಲ್ಲಿ ಅವರು ಹಕ್ಕಿಯಂತೆ ಮಂಜುಳ ರವದಿಂದ ಹಾಡತೊಡಗಿದರು. ಆ ಹಂಬಲವನ್ನು ತಮ್ಮ ಒಂದು ಕವನದಲ್ಲಿ ಸ್ಪಷ್ಟಪಡಿಸಿದ್ದಾರೆ, ಕೇಳಿ –

‘ಹಾಡೆಂದು ಕಾಡುತಿದೆ
ಹಾಡಲಾರೆಯ ಹಕ್ಕಿ ಒಂದು ಹಾಡ?’

ಶಿಕ್ಷಕರು

ಮೈಸೂರು ರಾಜ್ಯದಿಂದ ಆರಗಂ ಲಕ್ಷ್ಮಣರಾವ್ ಶಾಂತಿನಿಕೇತನಕ್ಕೆ ಹೋಗಿ ಮೂರು ನಾಲ್ಕು ವರ್ಷಗಳವರೆಗೆ ಇದ್ದರು. ಶಾಂತಿನಿಕೇತನದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಹೇಳಿಕೊಟ್ಟರು. ರವೀಂದ್ರ ನಾಥರಿಗೆ ಪಟ್ಟ ಶಿಷ್ಯರಾದರು. ಅವರಿಗೆ ಕನ್ನಡವನ್ನು ಹೇಳಿಕೊಡುತ್ತಿದ್ದಂತೆ. ಶಾಂತಿನಿಕೇತನದ ಕಲಾಮಯ ಜೀವನ ಅವರನ್ನು ಹೊಸ ಮನುಷ್ಯನನ್ನಾಗಿ ಮಾಡಿತು. ಅವರು ೧೯೨೨ ರಲ್ಲಿ ಅಲ್ಲಿಂದ ತಮ್ಮ ತಾಯಿನಾಡಾದ ಮೈಸೂರಿಗೆ ಬಂದರಲ್ಲ. ಆ ಹೊತ್ತಿಗೆ ಅವರು ಕವಿ ‘ಹೊಯಿಸಳ’ರಾಗಿ ಬದಲಾಗಿದ್ದರು. ಆ ಫಲವೇ ಹೊಯಿಸಳರ ಚೊಚ್ಚಳ ಕೃತಿ ‘ತಿರುಗ ಮುರುಗ’. ಅದರಲ್ಲಿ ಒಂದು ಕವನ ಹೀಗೆ ಗುಡುಗುತ್ತದೆ, ಹೊಯಿಸಳರ ಕೆಚ್ಚು ಎಷ್ಟು? ಕೇಳಿ –

ಅಂಕುಶದಂಕೆಯ ಸೊಂಕೆಂಬುದಿಲ್ಲ

ನಿರಂಕುಶರು |
ನಾವು ನಿರಂಕುಶರು ||

ಹೊಯಿಸಳರು ಮೈಸೂರಿಗೆ ಬರುತ್ತಿದ್ದ ಹಾಗೆಯೇ ಅವರನ್ನು ನಮ್ಮ ಶಿಕ್ಷಣ ಇಲಾಖೆ ಸ್ವಾಗತಿಸಿತು. ಪ್ರಸಿದ್ಧ ವಾಗ್ಮಿ, ಶಿಕ್ಷಣ ತಜ್ಞರು ಎನ್ನಿಸಿಕೊಂಡ ಸಿ. ಆರ್ ರೆಡ್ಡಿ ಆಗ ಮೈಸೂರು ಸಂಸ್ಥಾನದ ವಿದ್ಯಾ ಇಲಾಖೆಯ ಮುಖ್ಯಾಧಿ ಕಾರಿಯಾಗಿದ್ದರು. ಅವರು ಹೊಯಿಸಳರನ್ನು ‘ನೀವು ನಮ್ಮ ಇಲಾಖೆಗೆ ಬರಬೇಕು. ಅಧ್ಯಾಪಕರಾಗಿ ನಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು. ಹೊಯಿಸಳರು ಒಪ್ಪಿಕೊಂಡರು. ಚೆನ್ನಪಟ್ಟಣದಲ್ಲಿ ಪ್ರೌಢ ಶಾಲೆಯ ಉಪಾಧ್ಯಾಯರಾಗಿ ಅವರು ತಮ್ಮ ಜೀವನವನ್ನು ೧೯೨೨ ರಲ್ಲಿ ಪ್ರಾರಂಭಿಸಿದರು. ಚೆನ್ನಪಟ್ಟಣ, ದಾವಣಗೆರೆ, ಚಿತ್ರದುರ್ಗ, ಮಧುಗಿರಿ ಹೀಗೆ ನಾನಾ ಊರುಗಳಲ್ಲಿ ಉಪಾಧ್ಯಾಯರಾಗಿದ್ದರು. ಅವರು ನಿವೃತ್ತರಾಗುವ ಕಾಲದಲ್ಲಿ ಬೆಂಗಳೂರು ಮಲ್ಲೇಶ್ವರಂ ಪ್ರೌಢಶಾಲೆ ಯಲ್ಲಿದ್ದರು. ಈ ವರ್ಷಗಳಲ್ಲಿ ಅವರು ಸಾವಿರಾರು ಜನ ಶಿಷ್ಯರನ್ನು ಸಂಪಾದಿಸಿದರು. ಹೊಯಿಸಳರ ವಿದ್ಯಾರ್ಥಿ ಗಳಲ್ಲಿ ಬಹಳ ಮಂದಿ ನಾನಾ ವೃತ್ತಿಗಳಲ್ಲಿ ಪ್ರವೀಣರಾಗಿ ಗುರುಗಳಿಗೆ ಕೀರ್ತಿ ತಂದರು. ಸಾಹಿತ್ಯ ಕಲಾಕ್ಷೇತ್ರಗಳಲ್ಲಿ ಪ್ರಸಿದ್ಧರಾಗಿರುವ ಶಿಷ್ಯರುಗಳಂತು ನಿತ್ಯವೂ ಹೊಯಿಸಳ ರನ್ನು ನೆನೆಸಿಕೊಳ್ಳುತ್ತಾರೆ.

ಮಕ್ಕಳಿಗೆ ಖುಷಿ ಅವರ ಪಾಠ ಎಂದರೆ

ಹೊಯಿಸಳರು ಚರಿತ್ರೆ ಭೂಗೋಳಗಳನ್ನು ಪಾಠ ಹೇಳುತ್ತಿದ್ದರಷ್ಟೆ. ವಿದ್ಯಾರ್ಥಿಗಳಿಗೆ ತಮ್ಮ ಗುರುಗಳ ಪಾಠಗಳೆಂದರೆ ತುಂಬ ಶ್ರದ್ಧೆ. ಹೊಯಿಸಳರು ಚರಿತ್ರೆ ಭೂಗೋಳಗಳ ಪಾಠ ಮಾಡುವಾಗ ತಮ್ಮದೇ ಆದ ಪದ್ಧತಿಯನ್ನು ಅನುಸರಿಸುತ್ತಿದ್ದರು. ಅವರು ಭೂಪಟ ವನ್ನು ಉಪಯೋಗಿಸದೆ ಇತಿಹಾಸ, ಭೂಗೋಳ ಪಾಠಗಳನ್ನು ಮಾಡುತ್ತಲೇ ಇರಲಿಲ್ಲ. ತಮ್ಮ ಪಾಠಕ್ಕೆ ತೊಡಗುವ ಮೊದಲೇ ಆ ಪಾಠದ ಉಪಕರಣಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದರು. ಕಾಲಕ್ಕೆ ಸರಿಯಾಗಿ ಅವರು ತರಗತಿಯಲ್ಲಿರುತ್ತಿದ್ದರು.

ಹೊಯಿಸಳರು ಎರಡು ತರಗತಿಗಳನ್ನು ಸೇರಿಸಿ ಪಾಠ ಮಾಡಬೇಕಾಯಿತೆನ್ನಿ. ಎರಡು ತರಗತಿಗಳೂ ಕಾರ್ಯ ನಿರತವಾಗಿರುತ್ತಿದ್ದವು. ಕಾಲ ಒಂದು ನಿಮಿಷವೂ ಪೋಲಾಗುತ್ತಿರಲಿಲ್ಲ. ಈ ವೇಳೆಯನ್ನು ವಿದ್ಯಾರ್ಥಿಗಳ ರಚನಾತ್ಮಕ ಶಕ್ತಿಯನ್ನು ಗುರುತಿಸಲು ಪ್ರಯತ್ನಿಸುತ್ತಿದ್ದರು. ವಿದ್ಯಾರ್ಥಿಗಳಿಂದಲೇ ಹಾಡಿಸುವರು. ಕಥೆ ಹೇಳಿಸುವರು. ಚಿತ್ರಗಳನ್ನು ಬಿಡಿಸುವಂತೆ ಮಾಡುವರು. ಕಥೆ ಪದ್ಯಗಳನ್ನು ಬರೆಯುವ ವಿಧಾನ ಹೇಳಿಕೊಡುವರು. ಹೊಯಿಸಳರು ತೆಗೆದುಕೊಳ್ಳುತ್ತಿದ್ದ ತರಗತಿ ಚಟುವಟಿಕೆಯ ಬುಗ್ಗೆ ಯಾಗಿರುವುದು. ವಿದ್ಯಾರ್ಥಿಗಳು ಕಳಕಳಿಸುತ್ತಿರುವರು.

ವಸ್ತು ಸಂಗ್ರಹಾಲಯ

ಹೊಯಿಸಳರು ಇದ್ದ ಪಾಠಶಾಲೆ ಬೇರೆ ಶಾಲೆಗಳಿಗಿಂತ ಒಂದು ಹೆಜ್ಜೆ ಮುಂದೆ ಇರುವುದು ಚಟುವಟಿಕೆಗಳಲ್ಲಿ. ವಿದ್ಯಾರ್ಥಿಗಳಿಂದ ನಾನಾ ಬಗೆಯ ವಸ್ತುಗಳನ್ನು ಸಂಗಹ್ರಹಿಸುವರು. ವಿದ್ಯಾರ್ಥಿಗಳಿಂದ ಸಂಗ್ರಹವಾದ ಎಲೆಗಳು, ಕಪ್ಪೆ ಚಿಪ್ಪುಗಳು, ಬಣ್ಣ ಬಣ್ಣದ ಗರಿಗಳು, ಪಕ್ಷಿಗಳ ಗೂಡುಗಳು, ವಿಧವಿಧ ಶಿಲೆಗಳು, ಪುರಾಣ, ಚರಿತ್ರೆ, ಭೂಗೋಳಗಳಿಗೆ ಸಂಬಂಧಪಟ್ಟ ಚಿತ್ರಗಳು, ಅಂಚೆ ಚೀಟಿಗಳು, ಶಾಲೆಯ ವಸ್ತು ಸಂಗ್ರಹಾಲ ಯದಲ್ಲಿ ಪ್ರದರ್ಶಿತವಾಗಿರುವವು. ಸಂಗ್ರಹಿಸಿದ ವಿದ್ಯಾರ್ಥಿ ಗಳಿಗೆ ತಾವು ಸಂಗ್ರಹಿಸಿದ ವಸ್ತುಗಳೆಂದು ಹೆಮ್ಮೆ.

ಹೊಯಿಸಳರು ಅನೇಕ ಸಂದರ್ಭಗಳಲ್ಲಿ ಐದು ರೂಪಾಯಿ (ಮಿಡ್ಲ್ ಸ್ಕೂಲ್ ನಾಲ್ಕನೆಯ ತರಗತಿ) ಹನ್ನೆರಡು ರೂಪಾಯಿ (ಎಸ್.ಎಸ್.ಎಲ್.ಸಿ) ಪ್ರಶ್ನೆ ಪತ್ರಿಕೆಗಳನ್ನು ಕೊಡುತ್ತಿದ್ದರು. ಆ ಸಮಯದಲ್ಲಿ ಅವರು ಬಹಳ ಕಟ್ಟುನಿಟ್ಟಾಗಿರುವರು. ಯಾರನ್ನೂ ತಮ್ಮ ಕೊಠಡಿಗೆ ಬಿಡುತ್ತಿರಲಿಲ್ಲ. ತಮ್ಮ ಪೆಟ್ಟಿಗೆಗೆ ಬೀಗ ಹಾಕಿ ಹೊರಹೋಗುವರು. ಆರಗಂ ಕೃಷ್ಣಮೂರ್ತಿ ಹೊಯಿಸಳರ ಅಣ್ಣನ ಮಗ. ಹೊಯಿಸಳರ ವಿದ್ಯಾರ್ಥಿ. ಅವರ ಮನೆಯಲ್ಲಿ ಓದುತ್ತಿದ್ದ. ಆದರೂ ಆತನಿಗೆ ಚಿಕ್ಕಪ್ಪ ಪರೀಕ್ಷಾ ಪತ್ರಿಕೆ ಕೊಟ್ಟಾಗ ಯಾವ ಸುಳಿವೂ ದೊರೆಯುತ್ತಿರಲಿಲ್ಲವಂತೆ. ಏನೂ ತಿಳಿಯುತ್ತಿರ ಲಿಲ್ಲವಂತೆ.

ಹೊಯಿಸಳರು ತಮ್ಮ ಸಂಗಡ ವಿದ್ಯಾರ್ಥಿ ಗಳನ್ನು ಕರೆದುಕೊಂಡು ಸ್ಥಳದ ಸುತ್ತಮುತ್ತ ಸಂಚಾರ ಹೊರಡುವರು ವಿರಾಮ ವೇಳೆಯಲ್ಲಿ. ಅವರು ಮಗುವಿ ನೊಡನೆ ಮಗುವಾಗಿ, ಬಾಲಕರೊಡನೆ ಬಾಲಕನಾಗಿ ಬೆರೆತು ಹೋಗುವರು.

ನಾವು ಗೊಲ್ಲರು ಬಂದೆವು, ನಿಮ್ಮ ನಗರಿಗೆ ಹಾಲು ಮೊಸರು ತಂದೆವು ಹೇಳಿಕೊಂಡು ಕುಣಿಯುವರು.

ಸ್ಕೌಟ್ ಚಳುವಳಿಯಲ್ಲಿ

ಸ್ಕೌಟ್ ಚಳುವಳಿ ಲಾರ್ಡ್ ಬೇಡನ್ ಪೊವೆಲ್ ಮಹಾಶಯನಿಂದ ಜನ್ಮ ತಾಳಿತು. ಅದು ಪ್ರಪಂಚಕ್ಕೆಲ್ಲ ಬಲು ಬೇಗ ಹರಡಿತು. ಭಾರತದಲ್ಲೂ ಬೇರೂರಿತು. ಮೈಸೂರಿನ ಯುವರಾಜ ನರಸಿಂಹರಾಜ ಒಡೆಯರು ಸ್ಕೌಟ್ ಚಳುವಳಿಯಲ್ಲಿ ಶ್ರದ್ಧೆವಹಿಸಿದರು. ನಮ್ಮ ಶಾಲೆಗಳು ಸ್ಕೌಟ್ ಚಳುವಳಿಯಲ್ಲಿ ವಹಿಸಿದ ಪಾತ್ರ ಅಪಾರ. ಶಾಲೆಗಳ ಅಧ್ಯಾಪಕರುಗಳು ಬಹು ಮಂದಿ ಸ್ಕೌಟುಗಳಾಗಿ ಈ ಚಳುವಳಿಯ ಬೆನ್ನೆಲುಬಾದರು. ಸ್ಕೌಟ್ ಚಳುವಳಿಯಲ್ಲಿ ಹೊಯಿಸಳರ ಪಾತ್ರ ಮುಖ್ಯವಾಗಿತ್ತು. ಅವರು ಹೋದ ಕಡೆಗಳಲ್ಲೆಲ್ಲ ಕಬ್ ಪ್ಯಾಕ್‌ಗಳನ್ನು ಪ್ರಾರಂಭಿಸಿದರು. ಸ್ಕೌಟ್ ದಳಗಳನ್ನು ಕಟ್ಟಿದರು.

ಕೆಲಸ ಮಾಡಿಸುವ ರೀತಿ

ಹೊಯಿಸಳರು ಸ್ಕೌಟ್‌ದಳದೊಡನೆ ಎಡಬಿಡದೆ ಸಂಬಂಧ ಇಟ್ಟುಕೊಂಡಿದ್ದರು. ಯಾವ ಸ್ಕೌಟ್ ರ‍್ಯಾಲಿಯನ್ನೂ ತಪ್ಪಿಸುತ್ತಿರಲಿಲ್ಲ. ಸ್ಕೌಟ್‌ಗಳು ಏರ್ಪಡಿಸುತ್ತದ್ದ ಶಿಬಿರಾಗ್ನಿ ಕಾರ್ಯಗಳಲ್ಲಿ ಪಾಲುಗೊಳ್ಳು ತ್ತಿದ್ದರು. ಸಮಯ ಸ್ಫ್ಪೂರ್ತಿ ನೀಡಿ ಸ್ಕೌಟುಗಳಿಂದ ಕೆಲಸ ಮಾಡಿಸುತ್ತಿದ್ದರು. ಅವರ ಚಿತ್ರದುರ್ಗದ ಸ್ಕೌಟ್ ದಳದಲ್ಲಿ ಅವರಿಗೆ ಪ್ರಿಯರಾದ ಇಬ್ಬರು ವಿದ್ಯಾರ್ಥಿ ಸ್ಕೌಟುಗಳಿದ್ದರು. ಒಬ್ಬ ಅವರ ಅಣ್ಣನ ಮಗ ಆರಗಂ ಕೃಷ್ಣಮೂರ್ತಿ, ಇನ್ನೊಬ್ಬ ಪಿ.ಆರ್ ತಿಪ್ಪೇಸ್ವಾಮಿ. ಅದು ಹೊಯಿಸಳರಿಂದ ಪರ್ಟಿ (ಪಿ.ಆರ್.ಟಿ) ಕಾವ್ಯಮಯ ವಾಯಿತು ತಿಪ್ಪೆಸ್ವಾಮಿಗೆ.

ಹೊಯಿಸಳರು ಈ ಇಬ್ಬರೂ ಸ್ಕೌಟ್ ಬಾಲಕರಿಂದ ಹೇಗೆ ಕೆಲಸ ಮಾಡಿಸಿದರು ಮೈಸೂರ್ ಸ್ಕೌಟ್ ರ‍್ಯಾಲಿಯಲ್ಲಿ? ಅದರ ವಿವರ ಹೀಗಿದೆ ೧೯೩೯ ರಲ್ಲಿ ಬೆಂಗಳೂರಿನಲ್ಲಿ ಮೈಸೂರು ಸ್ಟೇಟ್‌ರ‍್ಯಾಲಿ ನಡೆಯಿತು. ಆ ರ‍್ಯಾಲಿಗೆ ಆಯಾ ಜಿಲ್ಲೆಯವರ ಗುಡಾರ ಗಳ ಮುಂದೆ ಮಹಾದ್ವಾರಗಳನ್ನು ನಿರ್ಮಿಸಬೇಕೆಂದು ಗೊತ್ತಾಯಿತು. ಈ ಕೆಲಸ ಹೊಯಿಸಳರಿಗೆ ಸೇರಿತ್ತು. ಅವರು ‘ಪರ್ಟಿ’ಯನ್ನು ಕರೆದು ಹೇಳಿದರು.

‘ನೋಡು ಪರ್ಟಿ, ಈತ ನಮ್ಮ ಹುಡುಗ ಕಲಾ ವಿದ್ಯಾರ್ಥಿ. ನೀವಿಬ್ಬರೂ ಸೇರಿ ಚಿತ್ರದುರ್ಗದ ಮಹಾದ್ವಾರವನ್ನು ಬಹು ಬೇಗ ಮುಗಿಸಬೇಕು.’

ಆರಗಂ ಕೃಷ್ಣಮೂರ್ತಿ, ಪಿ.ಆರ್ ತಿಪ್ಪೇಸ್ವಾಮಿ ಆಗಲಿ ಎಂದು ಒಪ್ಪ್ಪಿಕೊಂಡರು. ಚಿತ್ರದುರ್ಗದ ಮಹಾದ್ವಾರ ನಿರ್ಮಾಣಕ್ಕೆ ಬೇಕಾದ ಬಟ್ಟೆ, ವಾರ್‌ನಿಷ್ ಬಣ್ಣಗಳು, ಬ್ರಷ್ ಸಲಕರಣೆಗಳನ್ನು ಕೊಡಿಸಿದರು. ಹುಡುಗರಿಗೆ ಹೊಯಿಸಳರು ಬಹಳ ಸುಂದರವಾಗಿ ಚಿತ್ರದುರ್ಗ ಮಹಾದ್ವಾರ ನಿರ್ಮಿತವಾಯಿತು ಉತ್ಸಾಹಿ ಸ್ಕೌಟ್ ಬಾಲಕರಿಂದ. ಈ ಮಹಾದ್ವಾರ ಉಳಿದ ಜಿಲ್ಲೆಗಳ ಮಹಾದ್ವಾರಗಳಿಗಿಂತ ಹೆಚ್ಚು ಸುಂದರವಾಗಿತ್ತಂತೆ. ಚಿತ್ರದುರ್ಗ ಸ್ಕೌಟ್ ಶಿಬಿರಕ್ಕೆ ಒಳ್ಳೆಯ ಹೆಸರು ಬಂತಂತೆ.

ಸ್ಕೌಟರ ಕವನಗಳು

ಹೊಯಿಸಳರು ತಮ್ಮ ಲೇಖನಿಯನ್ನು ಮೀಸಲಾಗಿರಿಸಿ ಸ್ಕೌಟ್‌ಗಳಿಗಾಗಿಯೇ ಒಂದು ಕವನ ಸಂಗ್ರಹ ಮಾಡಿದ್ದಾರೆ. ಅದರ ಹೆಸರು ‘ಹಾಡಿನ ಚಿಲುಮೆ’. ಸ್ಕೌಟುಗಳ ಕುಣಿತಕ್ಕೆ ಎಂದೇ ತಲೆಬರಹ ಹೊತ್ತು ಪ್ರಕಟವಾಗಿz. ‘ಹಾಡಿನ ಚಿಲುಮೆ’. ‘ಸ್ಕೌಟನಾರು?’ ‘ಸ್ಕಾಟನಾಗ ಬಾರಣ್ಣ’ ‘ಸ್ಕೌಟರ ಕೂಟ’ ‘ಸ್ಕೌಟುದಳ’ ಮೊದಲಾದ ಸ್ಕೌಟ್ ಚಳುವಳಿಯ ಗೊತ್ತು ಗುರಿಗಳನ್ನು ಸ್ಟಷ್ಟವಾಗಿ ಪರಿಚಯ ಮಾಡಿ ಕೊಡುತ್ತವೆ. ‘ಅಗ್ನಿದೇವ’ ಶಿಬಿರಾಗ್ನಿ ಏರ್ಪಟ್ಟಾಗ ಪ್ರಾರಂಭಿಸುವ ಗೀತೆ. ಸ್ಕೌಟುಗಳು ಒಕ್ಕೊರೊಲಲ್ಲಿ ಹಾಡಬಹುದು. ಅದರ ಪ್ರಾರಂಭ ಹೇಗಿದೆ

ಬೋ ಬೋ ಬೋ
ಹೋ ಹೋ ಹೋ
ಬಾ ಬಾ ಬಾ.
ಬಾ ಅಗ್ನಿದೇವ | ಭೋ ಅಗ್ನಿ ದೇವ |
ಬಾರೋ ಬೇಗ ದೇವ |
|| ಓ ಹೋ ಹೋ ||’

ಮಕ್ಕಳ ಸಾಹಿತ್ಯ ನಿರ್ಮಾಪಕರಾಗಿ

ಕನ್ನಡ ಮಕ್ಕಳ ಸಾಹಿತ್ಯಕ್ಕೆ ಪಂಜೆ ಮಂಗೇಶ ರಾಯರು ತಂದೆಯಂತೆ ಇದ್ದಾರೆ. ಅವರೇ ಮಕ್ಕಳ ಸಾಹಿತ್ಯವನ್ನು ಪ್ರಾರಂಭಿಸಿದವರಲ್ಲಿ ಮೊದಲಿಗರು. ಅವರು ಮಕ್ಕಳಿಗಾಗಿ ಕಥೆ ಬರೆದರು. ಕವನ ಕಟ್ಟಿದರು. ಎಂ.ಎನ್. ಕಾಮತರು ಕಥೆ ಪದ್ಯಗಳನ್ನು ಬರೆದುದಕ್ಕಿಂತ ಹೆಚ್ಚಾಗಿ ಮಕ್ಕಳ ನಾಟಕಗಳನ್ನು ಬರೆದರು.

ಪಂಜೆ ಮಂಗೇಶರಾಯರು, ಎಂ.ಎನ್.ಕಾಮತ ರು ತೋರಿಸಿದ ಮಾರ್ಗವನ್ನು ಹೊಯಿಸಳರು ಇನ್ನಷ್ಟು ವಿಸ್ತರಿಸಿದರು. ಪಂಜೆಯಂತೆ ಮಕ್ಕಳಿಗಾಗಿ ಕಥೆ ಬರೆದರು. ಕವಿತೆ ಕಟ್ಟಿದರು. ಎಂ.ಎನ್. ಕಾಂತರಂತೆ ಮಕ್ಕಳ ನಾಟಕ ಗಳನ್ನು ಸೃಷ್ಟಿಮಾಡಿದರು. ಪಂಜೆಯವರು ಎಂ.ಎನ್ ಕಾಮತರು ಒಂದೊಂದು ಬಗೆಯ ಸಾಹಿತ್ಯವನ್ನು ಮಾತ್ರ ರಚನೆ ಮಾಡಿ ತಮ್ಮನ್ನು ಗುರುತಿಸಿಕೊಂಡರು. ಹೊಯಿಸಳರಾದರೋ ಪಂಜೆಯವರಂತೆ, ಎಂ.ಎನ್ ಕಾಮತರಂತೆ ಮಕ್ಕಳಿಗಾಗಿ ಕತೆಗಳನ್ನು ಬರೆದರು, ಕವನಗಳನ್ನೂ ಕಟ್ಟಿದರು, ನಾಟಕಗಳನ್ನೂ ರಚಿಸಿದರು. ಹೀಗೆ ಹೊಯಿಸಳ ಮಕ್ಕಳ ಸಾಹಿತ್ಯ ಬೊಕ್ಕಸ ಕನ್ನಡ ಸಾಹಿತ್ಯದಲ್ಲಿ ಶ್ರೀಮಂತವಾಯಿತು.

ಮಕ್ಕಳ ಪುಸ್ತಕ

‘ಮಕ್ಕಳ ಪುಸ್ತಕ’ ಕನ್ನಡ ನಾಡಿನಲ್ಲಿ ಮಕ್ಕಳಿಗಾಗಿ ಪ್ರಾರಂಭವಾದ ಮೊಟ್ಟ ಮೊದಲ ಪತ್ರಿಕೆ. ಅದು ೧೯೨೬ ರಲ್ಲಿ ಪ್ರಾರಂಭವಾದ ಮೊಟ್ಟ ಮೊದಲ ಪತ್ರಿಕೆ. ಅದು ೧೯೨೬ ರಲ್ಲಿ ಪ್ರಾರಂಭವಾಯಿತು. ಬೆಳ್ಳಿಯ ಹಬ್ಬವನ್ನು ಕಂಡ ಮಕ್ಕಳ ಮಾಸಪತ್ರಿಕೆಯದು. ಅದರ ಸಂಪಾದಕರು ಚಕ್ರಾಲ (ಸಿ) ಅಶ್ವತ್ಥನಾರಾಯಣರಾಯರು. ಅವರೂ ಹೊಯಿಸಳರೂ ಮದನಪಲ್ಲಿಯ ನ್ಯಾಷನಲ್ ಕಾಲೇಜಿನಲ್ಲಿ ಒಂದೇ ತರಗತಿಯ ಸ್ನೇಹಿತರು. ಅಶ್ವಥನಾರಾಯಣ ರಾಯರು ಹೊಯಿಸಳರನ್ನು ಮಕ್ಕಳ ಪುಸ್ತಕಕ್ಕೆ ಬರೆಯುವಂತೆ ಕೇಳಿದರು. ಹೊಯಿಸಳರು ಆ ಪತ್ರಿಕೆಯಲ್ಲಿ ಕಥೆ ಬರೆದರು, ಕವಿತೆ ಬರೆದರು, ನಾಟಕ ಬರೆದರು. ಅವರ ಹೆಸರು ಮಕ್ಕಳ ಸಾಹಿತ್ಯದಲ್ಲಿ ಮನೆ ಮಾತಾಯಿತು ಅವರ ಪ್ರಸಿದ್ಧ ಮಕ್ಕಳ ಕವನ ಸಂಗ್ರಹ ‘ಮಗುವಿನ ಕೂಗು’ ಪ್ರಕಟವಾದದ್ದು ಈ ಸಮಯದಲ್ಲೆ.

ಮಕ್ಕಳ ಕವನಗಳು

ಹೊಯಿಸಳರು ಮಕ್ಕಳಿಗಾಗಿ ತುಂಬ ಕವಿತೆ ಗಳನ್ನು ಕಟ್ಟಿ ತಾವೂ ಹಾಡಿದರು. ಮಕ್ಕಳಿಂದಲೂ ಹಾಡಿಸಿ ಕೇಳಿ ಸಂತೋಷಪಟ್ಟರು. ‘ಮಗುವಿನ ಕೂಗು’ ‘ಕೋಗಿಲೆ’, ‘ಅಂಜೂರ’, ‘ಚಂದುಮಾಮ’, ‘ಕೋಲು ಕುದುರೆ’ಅವರ ಮಕ್ಕಳ ಕವನ ಸಂಗ್ರಹಗಳಲ್ಲಿ ಪ್ರಾಮುಖ್ಯವಾದುವು. ಮಕ್ಕಳನ್ನು ಕುಣಿಸಿ ನಲಿಸುವ ಗುಣಗಳು ಈ ಸಂಗ್ರಹಗಳಿಗಿವೆ.

ಹೊಯಿಸಳರ ಕವನಗಳಿಗೆ ವಸ್ತುಗಳು, ಸೂರ್ಯ, ಚಂದ್ರ, ಗಾಳಿ, ಮಳೆ, ಪಶು ಪಕ್ಷಿ, ಪ್ರಪಂಚದಲ್ಲಿ ಏನೇನಿವೆಯೋ ಅವೆಲ್ಲ. ನಿರ್ಜೀವ ವಸ್ತುವನ್ನೂ ಅವರು ಮಾತಾಡಿಸಬಲ್ಲರು ತಮ್ಮ ಕವಿತೆಗಳಲ್ಲಿ.

ಪುಸ್ತಕ ಮಾತನು ಹೇಳುತಿದೆ,
ಚಿತ್ತವ ಹತ್ತಿಸಿ ಕೇಳು ಮಗು-?

ಎನ್ನುತ್ತಾರೆ ಹೊಯಿಸಳರು. ಮಳೆ ಹನಿಯನ್ನು ನೋಡಿದಾಗ ಹೀಗೆನ್ನುತ್ತಾರೆ.

‘ಮಳೆಹನಿ ಮಳೆಹನಿ ಬೀಳುವೆ ಎಲ್ಲಿ?
ದಳದಳ ಉದುರಿಸಿ ಹೂಗಳ ಮೇಲೆ
ಪಟ ಪಟ ಉದುರದೆ ಇರು ನೀನು.’

ಸೂರ್ಯನನ್ನು ಹೊಯಿಸಳರು ಕಾಣುವ ರೀತಿ ನೋಡಿ. ಅವರ ಭಕ್ತಿ ಎಷ್ಟು !

‘ದಿನವೆಲ್ಲ ಬೆಳಕಿತ್ತೆ ಸುಖವಿತ್ತೆ ಆರ್ಯ
ಕೈಮುಗಿದು ವಂದಿಸುವೆ ಸಂಜೆಯಲಿ ಸೂರ್ಯ.’

ಆಫ್ರಿಕದ ಜಿರಾಫೆಯನ್ನು ನಮ್ಮ ಮಕ್ಕಳಿಗೆ ಹೊಯಿಸಳರು ಪರಿಚಯಿಸುವ ಬಗೆ ಹೀಗೆ !

ಭಲ್ ಭಲ್ ಜಿರಾಫೆ
ರಾಫೆ ರಾಫೇ ರಾಫೇ!
‘ಎಲ್ಲಿ ಎಲ್ಲಿ ನಿನ್ನ ನಾಡು ಎಲ್ಲಿ ಎಲ್ಲಿ ನಿನ್ನ  ಕಾಡು?’

ಎಂದು ಹೊಯಿಸಳರು ಜಿರಾಫೆಯನ್ನು ಪ್ರಶ್ನಿಸುತ್ತಾರೆ. ಜಿರಾಫೆ ಉತ್ತರ ಕೊಡುತ್ತದೆ  ‘ಬಿರಿ ಬಿರು ಬಿಸಿಲು- ಕರಿಕರಿ ಕಾಡು  ಮರು ಮರುಭೂಮಿ – ಇರುವ ನಾಡೇ ಆಫ್ರಿಕ.’

ಹೊಯಿಸಳರ ಮಕ್ಕಳ ಕವನಗಳಲಿ ಕೆಲವು ಬಹಳ ಪ್ರಸಿದ್ಧವಾದವು. ಒಂದು ಕಾಲದಲ್ಲಿ ಮೈಸೂರು ಸಂಸ್ಥಾನದಲ್ಲಿ ಅವು ಮಕ್ಕಳ ಬಾಯಲ್ಲಿ ಅಭಿನಯ ದೊಡನೆ ಲೀಲಾಜಾಲವಾಗಿ ಉಲಿಯುತ್ತಿದ್ದವು. ಅವುಗಳ ಹೆಸರುಗಳನ್ನಾದರೂ ಕೇಳಿ ತೃಪ್ತಿ ಪಡೋಣ. ‘ನಂಗೊತ್ತಿಲ್ಲಪ್ಪ’ ಕೇಳಿದ್ದೀರಾ ಕೇಳಿ, ಅದರ ಪ್ರಾರಂಭ ಹೀಗೆ

ಮಸಿಕುಡಿಕೆಯನೇ ಉರುಟಿಟ್ಟು
ಹಸಿಕಾಗದದೋಳೊತ್ತಿಟ್ಟು
ಹೊಸ ದೋತರದೋಳ್ಮುಚ್ಚಿಟ್ಟ
ಹಸುಗೂಸಾರೈ – ಪೇಳುವೆಯಾ?
ನಾಂ-ಗೋ-ತ್ತಿ-ಲ್ಲಾ-ಪ್ಪಾ ||

ಹೊಯಿಸಳರ ಮಕ್ಕಳಲ್ಲಿ ಒಬ್ಬ ಪುಟ್ಟಾಣಿ ಮಸಿಕುಡಿಕೆಗೆಯನ್ನು ಉರುಡಿಸಿಬಿಟ್ಟ ಸಂದರ್ಭ. ಯಾಕೋ ನಮಸಿ ಕುಡಿಕೆಯನ್ನು ಉರುಳಿಸಿದೆ ಎಂದು ಕೇಳಿದಾಗ ಬಂತು ಉತ್ತರ ‘ನಂಗೊತ್ತಿಲ್ಲಪ್ಪ’ ಆಗ ಹುಟ್ಟಿಕೊಂಡಿತು, ಈ ಕವನ ‘ನಾ-ಗೋ-ತ್ತಿ-ಲ್ಲಾ-ಪ್ಪಾ’

ಹೊಯಿಸಳರ ಕಾಲದಲ್ಲಿ ಮಕ್ಕಳಲ್ಲಿ ಒಬ್ಬ ಚಿನ್ನಾರಿ ‘ಭಾನುವಾರ ಬಂದರೆ ರಜ, ಆಗ ನೋಡು ಮಜ’ ಎಂದು ರಜದ ಭಾನುವಾರವನ್ನು ಪ್ರತಿದಿನವೂ ನಿರೀಕ್ಷಿಸುತ್ತಿದ್ದನಂತೆ. ಆಗ ಹುಟ್ಟಿಕೊಂಡಿತಂತೆ ‘ಆದಿತ್ಯವಾರ’ ಪದ್ಯ.

‘ಸೊಮ್ಮಂಗಳ್ ಬುಧರು ದವಡಿಟ್ಟು ಬಂದರು
ಸೋಮಾರಿಯಾದಿತ್ಯ ಬರಲಿಲ್ಲವೇ’

ಹೊಯಿಸಳರು ರಚಿಸಿದ ಶಿಶು ಕವನಗಳಲ್ಲಿ ಬಹು ಪ್ರಸಿದ್ಧ ‘ಸಣ್ ತಮ್ಮಣ್ಣ’

ಸಂತಂಮಣ್ಣ

ಕಲ್ಯಾಣ ಸೇವೆ ಜೇಬಿನ ಬುಡದಲಿ
ಪುಟ್ಟಾಣಿ ಪುರಿಯು ಮೇಲೊಂದಿಷ್ಟು
ಗೋಲಿ ಬಳಪ ಮತ್ತೊಂದಿಷ್ಟು
ಬಂದ ಬಂದ ಸಣ್ಣ ತಮ್ಮಣ್ಣ
ಪಠಾಸು ಪೆಟ್ಲು ಒಳ ಜೇಬಲ್ಲಿ
ಕಾಸಿನ ಸಾಲು ಕಳ್ಳ ಜೇಬಲ್ಲಿ
ಚಂಡು ದಾಂಡು ಎಡ ಬಲದಲ್ಲಿ
ಬಂದ ಬಂದ ಸಂತಂಮಣ್ಣ

ಮತ್ತೊಬ್ಬ ಪುಟಾಣಿ ತನ್ನ ಜೋಬಿನಲ್ಲಿ ಏನೇನೋ ತುರುಕಿಕೊಂಡಿದ್ದನಂತೆ. ಆ ಸಂದರ್ಭದಲ್ಲಿ ಹುಟ್ಟಿಕೊಂಡ ಕವನವಿದು.

ಮಕ್ಕಳ ಹಬ್ಬ ಹುಣ್ಣಿಮೆಗಳಲ್ಲಿ ತಿಂಡಿ ತಿನಿಸು ಬಟ್ಟೆ ಬರೆಗಳನ್ನು ಅಪೇಕ್ಷಿಸುವುದು ಸರ್ವ ಸಾಧಾರಣ. ಅಂಥ ಮಕ್ಕಳಿಗೆ ಹೊಯಿಸಳರು ಏನು ಹೇಳುತ್ತಾರೆ? ಆ ಪದ್ಯ ಕೇಳಿ –

‘ದುಡ್ಡು ಬಟ್ಟೆಯಿಂದ ದೊಡ್ಡವರಾದೋರಿಲ್ಲ ! ದೊಡ್ಡ ಕೆಲಸ ಮಾಡಿ ದೊಡ್ಡವರಾದೋರೆಲ್ಲ !

ಮೈಯ ಬಣ್ಣದಿಂದ ದೊಡ್ಡವರಾದೋರಿಲ್ಲ

ದೊಡ್ಡ ಗುಣವಿದ್ದು ದೊಡ್ಡವರಾದೋರೆಲ್ಲ! ಎಷ್ಟು ಸತ್ಯ ಈ ಮಾತುಗಳು. ಈ ಪದ್ಯ ‘ಗುಣ’ ಎಂಬ ಮಕ್ಕಳ ಕಥೆಯಲ್ಲಿದೆ. ಹೊಯಿಸಳರೇ ಹೇಳಿದ್ದು ಈ ಕಥೆಯನ್ನು ಮಕ್ಕಳಿಗೆ.

ಮಕ್ಕಳ ಕತೆಗಳು

ಹೊಯಿಸಳರು ಮಕ್ಕಳ ಪ್ರಿಯ ಕವಿಗಳು ಹೇಗೋ ಹಾಗೆ ಮಕ್ಕಳ ಕುಶಲ ಕತೆಗಾರರಾಗಿದ್ದರು. ಪಂಚತಂತ್ರದ ಕಥೆಗಳು, ಈಸೋಪನ ಕಥೆಗಳು ಪ್ರಾಣಿ ಪಕ್ಷಿಗಳನ್ನೂ ಮಾತಾಡಿಸಿಲ್ಲವೇ? ಹೊಯಿಸಳರೂ ತಮ್ಮ ಮಕ್ಕಳ ಕಥೆಗಳಲ್ಲಿ ಪ್ರಾಣಿ ಪಕ್ಷಿಗಳು, ಕ್ರಿಮಿಕೀಟಗಳು, ಹೀಗೆ ಕಂಡುಕೇಳಿದ ಜೀವರಾಶಿಗಳನ್ನು ಮಾತಾಡಿಸಿ ದ್ದಾರೆ. ಪ್ರಪಂಚದ ಮಾನವ ಕೋಟಿಯೆಲ್ಲ ಹೊಯಿಸಳರಿಗೆ ‘ನಮ್ಮವರು.’ ಚೀನ, ಜಪಾನ್, ಫ್ರಾನ್ಸ್, ಜರ್ಮನಿ, ಆಫ್ರಿಕ, ಇಂಗ್ಲೆಂಡ್ ಈ ದೇಶಗಳೆಲ್ಲ ಒಂದಲ್ಲ ಒಂದು ಕಾರಣದಿಂದ ಅವರ ಮಕ್ಕಳ ಕಥೆಗಳಲ್ಲಿ ಹೇಗೋ ಆಯಾ ದೇಶಗಳ ಇತಿಹಾಸ ಭೂಗೋಳಗಳನ್ನು ನುಸುಳಿಸಿಬಿಡುತ್ತಾರೆ. ಕಥೆಗಾಗಿ ಕಥೆಯನ್ನು ಹೇಳಿದ್ದೂ ಆಯಿತು. ಜೊತೆಗೆ ವಿಷಯವನ್ನು ತಿಳಿಸಿದ್ದೂ ಆಯಿತು. ಇದು ಹೊಯಿಸಳರ ಜಾಣ್ಮೆ. ಕಥನ ಕೌಶಲ. ಹೊಯಿಸಳರ ಕಥೆಗಳಲ್ಲಿ ಬರುವ ಮಕ್ಕಳು ಎಂಥವರು? ಅವರು ಪೆದ್ದರು, ಜಾಣರು, ನಗುತ್ತಾರೆ. ಅಳುತ್ತಾರೆ. ಚುಡಾಯಿಸುತ್ತಾರೆ, ಗೇಲಿ ಮಾಡುತ್ತಾರೆ. ಕೆಲವು ಸಲ ದೊಡ್ಡವರಿಗೆ ಹಿತಮಿತವಾಗಿ ಬುದ್ಧ ಕಲಿಸುವುದೂ ಉಂಟು.

ಹೊಯಿಸಳರ ಮಕ್ಕಳ ಕಥಾ ಬೊಕ್ಕಸವೇ ನಿಮ್ಮ ಮುಂದೆ ಇದೆ, ಓದಿಕೊಳ್ಳಿ ‘ಪೂರಿ’, ‘ವೀರಕುಮಾರ’, ‘ಅದಕ್ಕೆ ಆ ಹೆಸರು’, ‘ರಾಜನ ಬುದ್ಧವಂತಿಕೆ’, ‘ಖೈದಿಗಳ ಕಷ್ಟ’, ‘ಆನೆ ಇರುವೆ’ ‘ಶುಭಾಂಗ’, ‘ಬದುಕುವ ಯಂತ್ರ”, ‘ಗಂಟೆ ಗೋಪುರ’ ಈ ಪುಸ್ತಕಗಳ ಪುಟಗಳು ಕೇವಲ ಮೂವತ್ತೆರಡು. ಎಲ್ಲವೂ ಸಚಿತ್ರ. ಒಂದೊಂದು ಪುಸ್ತಕದಲ್ಲೂ ಕೇವಲ ಐದಾರು ನಿಮಿಷಗಳಲ್ಲಿ ಮುಗಿಸಬಹುದಾದಷ್ಡು ಚೋಟು-ಮೋಟು ಕಥೆಗಳು. ಸ್ವಾರಸ್ಯ, ತುಂಬ ಸ್ವಾರಸ್ಯ. ‘ಹೂವಿನ ಹಾಸಿಗೆ’, ‘ಪುಟ್ಟರಸು’, ‘ಪಟಾಕ್ಷಿ’ಈ ಮೂರು ಮಕ್ಕಳ ಕಥಾ ಪುಸ್ತಕಗಳು ನೂರು ಪುಟಗಳನ್ನು ಮೀರಿ ಕೈಯಲ್ಲಿ ಹಿಡಿಯುವಷ್ಟು ಗಾತ್ರದ ಕಥಾ ಸಂಗ್ರಹಗಳಿಂದ ಕೂಡಿವೆ. ಸ್ವಲ್ಪ ಬುದ್ಧಿ ಬಲಿತ ಮಕ್ಕಳಿಗೆ ಇವು ತಕ್ಕ ಕಥೆಗಳು.

ನಾಟಕಗಳು

ಮಕ್ಕಳಿಗೆ ನಾಟಕಗಳೇ ಇಲ್ಲ ಎಂಬ ಕೊರತೆಯನ್ನ ತುಂಬಿದ ಕೀರ್ತಿ ಹೊಯಿಸಳರಿಗೆ ಸಲ್ಲತಕ್ಕದು. ‘ಅಗಲಿನ ಮಗಳು’, ‘ವಾತಾಪಿ’, ‘ಕುಳ್ಳ ಮಳ್ಳ ಸುಳ್ಳ’, ‘ಪ್ರಸಾದ’, ‘ಮಗ’, ‘ಚಂದ್ರಹಾಸ’ ಅಚ್ಚು ಕಂಡವು. ಹೊಯಿಸಳರ ಮಕ್ಕಳ ನಾಟಕಗಳು ಬಹು ಸಂಖ್ಯೆಯಲ್ಲಿವೆ, ಅಚ್ಚಾಗಿಲ್ಲ. ಅಚ್ಚಾಗಿರುವವುಗಳನ್ನು ಕಣ್ಣೆತ್ತಿ ನೋಡುವವರಿಲ್ಲ, ಆಡುವವರಿಲ್ಲ. ಈ ನಾಟಕಗಳಲ್ಲಿ ಗೊಂಬೆ, ಮರ, ಕಾಡು, ಬೆಂಕಿ, ಗಿಣಿ, ಬೆಕ್ಕು, ನಾಯಿ, ಪಾತ್ರವಹಿಸುತ್ತವೆ. ಮಂತ್ರವಾದಿ ಬರುತ್ತಾನೆ. ಚಿಪ್ಪಿಗ ಬರುತ್ತಾನೆ, ಚಿನಿವಾರ ಬರುತ್ತಾನೆ. ಇಂದ್ರಾದಿ ದೇವತೆಗಳು ಬರುತ್ತಾರೆ.

ಹೊಯಿಸಳರು ಕೆಲವು ಕಾಲ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ವಾರದ ಪುರವಣಿಯಲ್ಲಿ ಮಕ್ಕಳ ವಿಭಾಗವನ್ನು ‘ಬಾಲ ಭಾರತಿ’ ಎಂಬ ಹೆಸರಿನಲ್ಲಿ ನೋಡಿ ಕೊಳ್ಳುತ್ತಿದ್ದರು. ‘ಅಣ್ಣಾಜಿ’ಯಾಗಿದ್ದರು. ಬೆಂಗಳೂರಿನ ‘ಆಕಾಶವಾಣಿ’ಯಲ್ಲೂ ಹೊಯಿಸಳರ ಧ್ವನಿ ಯನ್ನು ನಮ್ಮ ಮಕ್ಕಳು ಒಂದೆರಡು ವರ್ಷಗಳು ಕೇಳಿದ್ದುಂಟು ಸುಮಾರು ೧೯೫೬ರ ಸಾಲಿನಲ್ಲಿ. ಹೊಯಿಸಳರು ಅಳಿಲ ಕರ್ನಾಟಕ ಮಕ್ಕಳ ಕೂಟಕ್ಕೂ ಅಪಾರ ಸೇವೆ ಸಲ್ಲಿಸಿದ್ದಾರೆ.

ಹೊಯಿಸಳರು ‘ಕನಕ’ ಎಂಬ ಮಾಸಪತ್ರಿಕೆ ಯನ್ನು ಕೆಲವು ಕಾಲ ನಡೆಸಿ ಕೈ ಸುಟ್ಟು ಕೊಂಡರು.

ವ್ಯಕ್ತಿತ್ವ

ಹೊಯಿಸಳರು ಸಾಹಸಿ ಮಕ್ಕಳು ತಮ್ಮ ಜೀವ ದುಸಿರು ಎಂದು ನಂಬಿ ಅವರ ಸಾಹಿತ್ಯ ಸೃಷ್ಟಿ ಮಾಡಿದರು. ವಿದ್ಯುಚ್ಛಕ್ತಿಯ ದೀಪವಿಲ್ಲದ ಮನೆಯಲ್ಲಿ ವಾಸವಾಗಿದ್ದಾಗ ಬುಡ್ಡಿದೀಪ ಹಚ್ಚಿಟ್ಟು ರಾತ್ರಿಯೆಲ್ಲ ಕೂತು ಮಕ್ಕಳಿಗೆ ಕಥೆ ಕವನಗಳನ್ನು ಹೊಸೆಯುತ್ತಿದ್ದರಂತೆ. ಸೀಮೆಎಣ್ಣೆ ಲಾಂದ್ರ ಹಚ್ಚಿಟ್ಟುಕೊಂಡು ಗಂಟೆಗಟ್ಟಲೆ ಯಾರನ್ನೂ ಬಿಡದೆ ತಮ್ಮ ಕೊಠಡಿಯಲ್ಲಿ ಕುಳಿಉ ಕಥೆ ಕವನ ಬರೆಯುತ್ತಿದ್ದರಂತೆ. ಸಂಗೀತ ಪ್ರಿಯರು ಸಾರೋದ್ ವಾದ್ಯ ನುಡಿಸಲು ಕಲಿತಿದ್ದರು. ಚಿತ್ರ ಬಿಡಿಸುತ್ತಿದ್ದರು. ರಾತ್ರಿಯಲ್ಲಿ ಬರಹ, ಹಗಲಲ್ಲಿ ದುಡಿತ ಇದು ಅವರ ನಿತ್ಯ ಜೀವನ.

ಹೊಯಿಸಳರು ನಿರಾಡಂಬರ ವ್ಯಕಿ. ವಿನಯ ಪರ. ಮೃದು ಭಾಷಿ. ಸದಾ ಖಾದಿ ಧಾರಿ. ತಲೆಯ ಮೇಲೆ ಖಾದಿಯ ಸ್ವಚ್ಛ ಬಿಳಿಯ ದಪ್ಪ ರುಮಾಲು. ಮೈಮೇಲೆ ಕಂಠ ಮುಚ್ಚಿದ ಖಾದಿ ಶರಾಯಿ, ಕಾಲಿಗೆ ಕ್ಯಾನ್ವಾಸ್ ಷೂಸ್. ಕಣ್ಣಿಗೆ ದಪ್ಪ ಗಾಜಿನ ಕನ್ನಡಕ. ಅವರು ಅಂಥ ಎತ್ತರ ಇರಲಿಲ್ಲ.

ಹೊಯಿಸಳರ ಜೇಬಿನಲ್ಲಿ ಸದಾ ಬಿಸ್ಕತ್ತೋ ಪೆಪ್ಪರಮೆಂಟೋ ಇರುತ್ತಿತ್ತು. ತಮ್ಮ ಸಂಗಡಿಗರಿಗೂ ಕೊಟ್ಟು ತಾವೂ ಪೆಪ್ಪರಮೆಂಟು ಚೀಪುತ್ತಾ, ಬಿಸ್ಕತ್ತು ಕುರುಕುತ್ತ ಸರಸವಾಗಿ ಮಾತಾಡುತ್ತಾ ನಿಧಾನವಾಗಿ ನಡೆಯುತ್ತಿದ್ದರು. ಹೊಯಿಸಳರ ಸಂಗಾತಿಗಳು, ಗೆಳೆಯರು ಇದನ್ನು ಚೆನ್ನಾಗಿ ಬಲ್ಲರು. ಅವರನ್ನು ನೆನೆಸಿಕೊಂಡಾಗ ಈ ಚಿತ್ರ ಹಚ್ಚ ಹಸಿರಾಗಿ ಎದ್ದು ನಿಲ್ಲುತ್ತದೆ.

ಮನೆಯಲ್ಲಿ

ಹೊಯಿಸಳರು ಮುಂಜಾವದಲ್ಲಿ ಏಳುವರು. ಮಕ್ಕಳನ್ನೂ ಎಬ್ಬಿಸಿ ಕೂಡಿಸಿಕೊಂಡು ಭಗವದ್ಗೀತೆಯಿಂದ ಸ್ಥಿತಪ್ರಜ್ಞನ ಲಕ್ಷಣಗಳ ಶ್ಲೋಕಗಳನ್ನು ಒಕ್ಕೋರಲಲ್ಲಿ ಹೇಳುವರು. ಅನಂತರ ಮನೆ ಪಾಠಕ್ಕೆ ಹೋಗುವರು. ರಾತ್ರಿ ಮನೆ ಪಾಠ ಮುಗಿಸಿಕೊಂಡು ಬಂದಾಗ ಮಕ್ಕಳೆಲ್ಲ ನಿದೆ ಹೋಗಿರುವರು. ಈ ಕಾರಣ ಭಾನುವಾರ ಹಬ್ಬ ಹರಿದಿನಗಳಲ್ಲಿ ಮಕ್ಕಳೊಡನೆ ಸಹಪಂಕ್ತಿ ಊಟ ತಪ್ಪದೆ ನಡೆಯುವಂತೆ ನೋಡಿಕೊಳ್ಳುವರು. ಹೊಯಿಸಳರು ಮುಗ್ಧ ಮಗುವಿನಂತೆ. ಮಕ್ಕಳ ಕೈಯಲ್ಲಿದ್ದ ತಿಂಡಿಯನ್ನು ಕೇಳಿ ಇಸಿಕೊಳ್ಳುವರು. ಕಾರಣ, ಮಗುವು ಒಡನಾಡಿಗರೊಡನೆ ಹಂಚಿಕೊಂಡು ತಿನ್ನಬೇಕು. ಇದನ್ನು ಕಲಿಯಬೇಡವೇ! ಅರಿತುಕೊಳ್ಳಬೇಡವೇ !

ಮನೆಯಲ್ಲಿ ಮಕ್ಕಳು ತಂದೆ ಕೋಪಗೊಂಡು ದನ್ನು ಕಾಣರು. ತಂದೆಯಿಂದ ಪೆಟ್ಟನ್ನು ಎಂದೂ ತಿಂದವರಲ್ಲ. ಹೊಯಿಸಳರು ತಮ್ಮ ಪತ್ನಿ ಲಕ್ಷಮ್ಮನವರನ್ನು ತುಂಬ ಗೌರವದಿಂದ ಕಾಣುತ್ತಿದ್ದರು. ಆಕೆ ಅವರ ಪಾಲಿಗೆ ಕೇವಲ ಹೆಂಡತಿಯಲ್ಲ ‘ಎಲ್ಲರ ತಾಯಿ.’

ಹೊಯಿಸಳರು ಜೀವನದಲ್ಲಿ ಶ್ರೀಮಂತಿಕೆಯನ್ನು ಕಾಣಲಿಲ್ಲ. ಆದರೆ ಅವರು ಗುಣದಲ್ಲಿ ಶ್ರೀಮಂತರಾಗಿದ್ದರು. ಗಾಂಧೀಜಿಯಲ್ಲಿ ಅವರಿಗೆ ಅಪಾರ ಶ್ರದ್ಧೆ ಭಕ್ತಿಗಳು. ಮನೆಯಲ್ಲಿ ಬಿಡುವು ವೇಳೆಯಲ್ಲಿ ಚರಕ ತಿರುಗಿಸಿದ್ದುಂಟು. ದಾವಣೆಗೆರೆಗೆ ಗಾಂಧಿ ದಯಾಮಾಡಿ ಸಿದರು. ಹೊಯಿಸಳರು ತಾವು ಬರೆಯುತ್ತಿದ್ದ ಪೆನ್ನನ್ನು ಬಾಪೂಗೆ ಒಪ್ಪಿಸಿದರು. ಅವರಿಂದ ಕನ್ನಡದಲ್ಲಿ ‘ಮೋಕ. ಗಾಂಧಿ’ ಎಂಬ ಸಹಿ ಪಡೆದರು.

ಅರಸರಿಂದ ಗೌರವ

ಹೊಯಿಸಳರು ಜನಪ್ರಿಯ ಸಾಹಿತಿ ಎಂದು ಕೀರ್ತಿ ಪಡೆದರು. ಆದರೆ ಅವರು ಬದುಕಿದ್ದಾಗ ಸನ್ಮಾನಿಸಿದವರೆಷ್ಟು? ಸಾಹಿತ್ಯ ಸಮ್ಮೇಳನಗಳಲ್ಲಿ ಕವಿ ಗೋಷ್ಠಿಗೆ ಕರೆದದ್ದೆಷ್ಟು? ಇಲ್ಲ, ಇಲ್ಲ, ಇಲ್ಲವೇ ಇಲ್ಲ. ಚಿತ್ರದುರ್ಗಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರು ೧೯೪೦ ರಲ್ಲಿ ದಯಮಾಡಿಸಿದ್ದರಂತೆ ಆಗ ರಂಗಯ್ಯ ಎಂಬ ಮೇಷ್ಟ್ರು ಹೊಯಿಸಳರು ರಚಿಸಿದ್ದ ಪ್ರಾರ್ಥನಾ ಪದ್ಯವನ್ನು ಮಹಾರಾಜರು ಮಂಡಿಸಿದ ಮಹಾಸಭೆಯಲ್ಲಿ ಹಾಡಿದರಂತೆ. ಮಹಾರಾಜರು ಪ್ರಾರ್ಥನಾ ಪದ್ಯವನ್ನು ಬಲು ಮೆಚ್ಚಿಕೊಂಡರಂತೆ. ಹೊಯಿಸಳರನ್ನು ಕರೆಸಿ ಕೊಂಡು ಒಂದು ನೂರು ರೂಪಾಯಿಗಳ ಗೌರವಧನ ವನ್ನಿತ್ತು ಪುರಸ್ಕರಿಸಿ ಸಂತೋಷ ವ್ಯಕ್ತಪಡಿಸಿದರಂತೆ. ಇದೊಂದು ಹೊಯಿಸಳರ ಜೀವಮಾನದಲ್ಲಿ ಸಂದ ಗೌರವ ಅರಮನೆಯಿಂದ.

ಜೀವನ ಯಾತ್ರೆ ಮುಗಿಯಿತು

ಹೊಯಿಸಳರು ಕಡೇ ದಿನಗಳಲ್ಲಿ ಆಸ್ತಮ ರೋಗಕ್ಕೆ ತುತ್ತಾದರು. ದೀಪಾವಳಿ ಹಬ್ಬ ಇನ್ನೇನು ಹತ್ತಿರ ವಾಗುತ್ತಿತ್ತು; ಹೊಯಿಸಳರು ೧೯೫೯ ನೆಯ ಇಸವಿ ಅಕ್ಟೋಬರ್ ೨೮ ರಂದು ಈ ಲೋಕ ಬಿಟ್ಟು ಹೋದರು. ಮಕ್ಕಳ ಸಾಹಿತ್ಯಕ್ಕೆ ರತ್ನಪ್ರಾಯರಾದ ಜಿ.ಪಿ ರಾಜರತ್ನಂ ಹೊಯಿಸಳರನ್ನು ‘ನಮ್ಮ ಪಾಲಿಗೆ ಅವರು ಋಷಿಗಳು’ ಎಂದು ಭಕ್ತಿ ಕಾಣಿಕೆ ಸಲ್ಲಿಸಿದ್ದಾರೆ. ರಸಋಷಿ ಹೊಯಿಸಳರು ತಮ್ಮ ‘ದೀಪಾವಳಿ’ಯ ಮುಂದೆ ಹಚ್ಚಿದ ಹಣತೆ ಹೀಗಿದೆ-

ಹಣತೆಯು ನಾಡಿನ ಮಣ್ಣಿನದು
ಬತ್ತಿಗೆ ತೈಲವು ಗೆಯ್ಮೆಯದು
ಮಿನುಗುವ ದೀಪವು ತಿಳಿವಿನದು
ತನುಮನ ಸಂತಸ ಎಲ್ಲರದು
ಬಂದಿಹುದಿಂದಿಗೆ ದೀವಳಿಗೆ