ಪತ್ರಿಕೆ ಎಸೆದು ಹೋಗುತ್ತಾನೆ ಹುಡುಗ
ಬೆಳಿಗ್ಗೆ ಅಷ್ಟೊತ್ತಿಗೇ ಮನೆಯಂಗಳಕ್ಕೆ.
ಎತ್ತಿಕೊಳ್ಳುತ್ತೇನೆ ನಾನು ಆತಂಕದಿಂದ.
ಮೊದಲ ಪುಟದಲ್ಲೇ ರಸ್ತೆಯಪಘಾತಕ್ಕೆ

ಸಿಡಿದ ಹತ್ತು ಮಂದಿಯ ರಕ್ತ. ಜತೆಗೆ
ಘನ ಸರ್ಕಾರದಿಂದ ಪರಿಹಾರ ಘೋಷಣೆ.
ಅದರ ಕೆಳಗೇ ವರದಕ್ಷಿಣೆಯ ದಳ್ಳುರಿಗೆ
ದಗ್ಧವಾದ ಮುಗ್ಧ ವಧುವಿನ ಬವಣೆ.

ಪಕ್ಕದಲ್ಲೇ ಮಾನ್ಯಮಂತ್ರಿ ಮಹೋದಯರ
ವದನಾರವಿಂದ ! ಮೈಕಿನ ಮುಂದೆ
ಪೊಳ್ಳು ಆಶ್ವಾಸನೆಯ ಜಡಿಮಳೆಗೆ
ಕಾಲುವೆ ತೆಗೆದು ಬೆಳೆದ ಸುದ್ದಿಯ ಗದ್ದೆ.

ಪುಟ ತಿರುವಿದರೆ ಇಷ್ಟಗಲ ಜಾಹೀರಾತು
ಮೆಲ್ಲಗೆ ಬಳಕುತ್ತಾಳೆ ಭುವನ ಸುಂದರಿ :
ನಾನೂ ಇದೇ ಸೋಪನ್ನು ಉಪಯೋಗಿಸು-
ತ್ತೇನೆ. ನೀವು? ಇಂದೇ ತ್ವರೆ ಮಾಡಿರಿ.

ಇವಳ ಬದಿಗೀಗಷ್ಟೆ ಸೆರೆ ಸಿಕ್ಕ ಕುಖ್ಯಾತ
ಭೂಗತ ದೊರೆಯ ಹುಲಿಮುಖದ ಚಿತ್ರ.
ಅದರ ಜತೆ ಗಟಾರಗಳ ಮೇಲೆ ಗುಡಿಕಟ್ಟಿ
ಪರಮಾತ್ಮನನ್ನು ಪ್ರತಿಷ್ಠಾಪಿಸಿದ ವಿಚಿತ್ರ.

ಮತ್ತೆ ಪುಟ ತಿರುವಿದರೆ, ಕುಡಿಯುವ ನೀರು ಬೆಂಕಿ-
ಯಾಗುರಿದದ್ದು, ದಲಿತ ಮಹಿಳೆಯ ಮೇಲೆ
ಅತ್ಯಾಚಾರ ನಡೆದದ್ದು, ಭಯೋತ್ಪಾದಕರ
ದಾಳಿಗೆ ಸಿಕ್ಕಿದಮಾಯಕರು ಬಸ್ಸಿನಲ್ಲೇ

ಭಸ್ಮವಾದದ್ದು. ಓದುತ್ತ ಓದುತ್ತ ತುಟಿ-
ಗಿಟ್ಟ ಬಟ್ಟಲ ಕಾಫಿ ಕಹಿಯಾಗುತ್ತ, ಪುಟ
ತಿರುವಿದರೆ ಹಳ್ಳಿಯ ಹೆಣ್ಣು ತಿಮ್ಮಕ್ಕ ತನ್ನೂ-
ರಿನಲ್ಲಿ ಸಾಲುಮರಗಳ ನಟ್ಟು ಬಹುಕಾಲ

ಸದ್ದಿರದೆ ನೀರೆರೆದು ಬೆಳೆಸಿದ್ದಕ್ಕೆ ರಾಷ್ಟ್ರೀಯ
ಪರಿಸರ ಪ್ರಶಸ್ತಿ ! ಮನಸ್ಸು ಹಗುರಾಗುತ್ತದೆ.
ಪತ್ರಿಕೆಯನ್ನತ್ತಕಡೆಗೆಸೆದು ಆ ಸಾಲು ಮರ-
ಗಳ ಕೆಳಗೆ ಹೊರದಾರಿ ಹುಡುಕುತ್ತದೆ.