ಸಾವಯವದ ಗಾಳಿ ಜೋರಾಗಿದೆ. ಟ್ರ್ಯಾಕ್ಟರ್‌ಗಳಲ್ಲಿ ರಾಸಾಯನಿಕ ಗೊಬ್ಬರಗಳನ್ನು  ಹೊಲಕ್ಕೆ ಒಯ್ಯುತ್ತಿದ್ದ ಊರುಗಳಲ್ಲಿಯೂ ಸಾವಯವ ಪರ ಮಾತು ಶುರುವಾಗಿದೆ. ಗೋಮೂತ್ರ, ದೊಡ್ಡಿಗೊಬ್ಬರ, ಎರೆಗೊಬ್ಬರ, ಶೂನ್ಯ ಕೃಷಿ, ಸಹಜ ಕೃಷಿ ಮಾತು ಕೇಳುತ್ತಿದೆ. ಪ್ರಚಾರ, ಭಾಷಣ, ಆಂದೋಲನಗಳ ಆಚೆ ನಿಂತು ನಾವು ಸಾವಯವ ಸಾಧ್ಯತೆ ಗಮನಿಸಬೇಕು. ಹೊಲದ ಸುತ್ತಲಿನ ಪರಿಸರವನ್ನು  ಇಂದು  ಸಾವಯವಕ್ಕೆ ಪೂರಕವಾಗಿ ಹೇಗೆ ಉಳಿಸಿಕೊಂಡಿದ್ದೇವೆ ಎಂಬುದನ್ನು ಗಮನಿಸಬೇಕು. ಕಬ್ಬಿನ ಸಿಪ್ಪೆ, ಜೋಳದ ದಂಟು, ಹತ್ತಿ ಕಟ್ಟಿಗೆ, ಭತ್ತದ ಹೊಟ್ಟು ಹೀಗೆ ಕೃಷಿ ತ್ಯಾಜ್ಯ ಭೂಮಿಗೆ ಮರಳಿಸುವ ಪ್ರಯತ್ನ ಒಳ್ಳೆಯದು. ಎಲ್ಲಕ್ಕಿಂತ ಮುಖ್ಯವಾಗಿ ಹೊಲದ ಸರಹದ್ದಿನಲ್ಲಿ ಎಷ್ಟು ಮರ ಉಳಿಸಿಕೊಂಡಿದ್ದೇವೆ? ಪ್ರಶ್ನೆ  ಯಶಸ್ಸಿನ ಮೂಲವಾಗುತ್ತದೆ.

ಮಲೆನಾಡಿನ ಸೀಮೆಯಲ್ಲಿ ಕಾಡುಗಳಿವೆ, ಇಲ್ಲಿನ ಕೃಷಿಕರು ಕಾಡಿನ ಹುಲ್ಲು, ಸೊಪ್ಪು, ಒಣ ಎಲೆಗಳನ್ನು ಸಂಗ್ರಹಿಸಿ ಕೃಷಿ ಗೊಬ್ಬರಕ್ಕೆ ಬಳಸುವ ಪರಿಪಾಠವಿದೆ. ಕೃಷಿ ವಿಸ್ತರಣೆ ಕಾರಣದಿಂದ ಅರಣ್ಯದ ಮೇಲೆ ಒತ್ತಡ ಹೆಚ್ಚಿದೆ. ೨೫-೩೦ ಕಿಲೋ ಮೀಟರ್ ದೂರದ ಕಾಡಿನಿಂದ ಸೊಪ್ಪು, ಒಣ ಎಲೆಗಳನ್ನು ಸಂಗ್ರಹಿಸಿ ಕೃಷಿ ನೆಲಕ್ಕೆ ಸಾಗಿಸುವ ಕೆಲಸ ನಡೆಯುತ್ತಿದೆ. ಪರಿಸರ ಬಿಕ್ಕಟ್ಟಿನ ಮಧ್ಯದಲ್ಲಿ  ಬೃಹತ್ ಯೋಜನೆಗಳನ್ನು ಸದಾ ವಿರೋಧಿಸುವ ಜಾಗೃತ ಮಲೆನಾಡಿಗರು ಕೃಷಿ ಬಳಕೆಗೆ ಕಾಡು ಬಳಸುವದನ್ನು ನಿಯಂತ್ರಣಕ್ಕೆ ತರಬೇಕಾಗುತ್ತದೆ. ಮರದಿಂದ ಬಿದ್ದ ಒಣ ಎಲೆ ಸಂಗ್ರಹಿಸಿದರೆ ಕಾಡಿಗೆ ಬೆಂಕಿ ಬರುವದು ತಪ್ಪುತ್ತದೆ ಎಂದು ಹೇಳುವವರಿದ್ದಾರೆ! ಮರದ ಎಲೆಗಳು ನೆಲಕ್ಕೆ ಸೇರಿದಾಗ ಮಳೆಗಾಲದ ಭೂಸವಕಳಿ ನಿಯಂತ್ರಣ, ಫಲವತ್ತಾದ ಮಣ್ಣಿನ ರಚನೆ, ನೈಸರ್ಗಿಕ ಸಸ್ಯಗಳ ಪುನರುತ್ಪತ್ತಿ, ಅಂತರ್ಜಲ ಹೆಚ್ಚಳ ಸಾಧ್ಯವಾಗುತ್ತದೆ. ಕಾಡಿನಲ್ಲಿ ಬೀಳುವ ಒಣ ಎಲೆಗಳೆಲ್ಲ ಊರಿನ ಕೃಷಿ ನೆಲಕ್ಕೆ ಎಂಬ ತಿಳುವಳಿಕೆ ಸರಿಯಲ್ಲ. ಕೃಷಿ ಅಗತ್ಯಕ್ಕೆ ಪೂರಕವಾಗಿ ನಮ್ಮ ಭೂಮಿಯಲ್ಲಿ ಮರ ಗಿಡ ಬೆಳೆಸುವದು  ಉತ್ತಮ ಮಾರ್ಗ. ನಾವು ಮರ ಕಡಿದು ಹೊಲ, ತೋಟ ಮಾಡಿದ್ದೇವೆ. ಬೆಳೆ ಬೆಳೆಯಲು ಮತ್ತೆ ಕಾಡಿಗೆ ನುಗ್ಗಿದ್ದೇವೆ. ಆದರೆ ಇನ್ನು  ಬಳಕೆಯಲ್ಲಿ ಸ್ವನಿಯಂತ್ರಣ ಸಾಧಿಸುವ ಜವಾಬ್ದಾರಿ ನಮ್ಮ ಮೇಲಿದೆ.

ಗದಗ, ರಾಯಚೂರು, ಸಿಂಧನೂರು, ಬಿಜಾಪುರ ಹೀಗೆ ಬಯಲು ನಾಡಿನ ಯಾವುದೇ ಊರಿಗೆ ಹೋಗಿ ಅಲ್ಲಿನ ಹೊಲದ ಮರದ ಸ್ಥಿತಿ ನೋಡಬೇಕು. ಅಲ್ಲಿ  ವಯಸ್ಸಾದ, ಮುರುಟಿದ ಒಂದಿಷ್ಟು ಮರ ಲೆಕ್ಕ ಹಾಕಬಹುದು. ಒಂದು ಕಾಲಕ್ಕೆ ಎಕರೆಗೆ ಕನಿಷ್ಟ ೧೦-೨೫ ಮರಗಳಿರುತ್ತಿದ್ದವು. ಬೇವು, ಕರಿಜಾಲಿ, ಹುಣಸೆ ಮರಗಳನ್ನು  ಇಲ್ಲಿ ಗಮನಿಸಬಹುದಿತ್ತು.  ದಣಿದ ರೈತರು ಸಂಸಾರ ಸಮೇತವಾಗಿ ಹೊಲದ ನೆರಳಲ್ಲಿ ಕುಳಿತು ಬುತ್ತಿ ತಿನ್ನುವ ದ್ರಶ್ಯ ಕಾಣಬಹುದಿತ್ತು. ಈಗ ಬಯಲಿನ ನೋಟಕ್ಕೆ ಸಾವಿರ ಎಕರೆ ಹೊಲ ಕಾಣುತ್ತದೆ, ನೂರು  ಮರಗಳೂ  ಅಲ್ಲಿ ಉಳಿದಿಲ್ಲ! ಹಳೆಯ ಮರಗಳ ಸಾವಿನ ಬಳಿಕ ಹೊಸ ಸಸಿ ನೆಡುವ ಕಾಳಜಿಯಲ್ಲ. ಮರವಿಲ್ಲದೇ ಕೃಷಿ ಸಾಧ್ಯವಿಲ್ಲ ಎಂದು ಪರಂಪರೆಯ ವಿಧಾನಗಳು ಸಾರಿದ್ದವು. ಈಗ ಉಳುಮೆಗೆ ಟ್ರ್ಯಾಕ್ಟರ್ ಬಂದ ಬಳಿಕ ಮರದ ಬೇರುಗಳಿಗೆ ಗಾಯವಾಗಿದೆ, ಹೊಲ ವಿಸ್ತೀರ್ಣದ ಭರಾಟೆಯಲ್ಲಿ ಮರ ಕಡಿಯುವ ಕೆಲಸ ನಡೆದಿದೆ.

ರಾಜ್ಯದ ಬಯಲು ಸೀಮೆಯ ನೀರಾವರಿ ಪ್ರದೇಶ ಅಪ್ಪಟ ಮರದ್ವೇಶಿ ನೆಲೆಗಳಂತೆ ಕಾಣುತ್ತಿವೆ. ಅತಿಯಾದ ನೀರಾವರಿಯಿಂದ ಬೇವು, ಕರಿಜಾಲಿಯಂತಹ ಬರದ ಸೀಮೆಯ ಮರಗಳು ಸಾವನ್ನಪ್ಪಿವೆ. ಭತ್ತದ ಬದುವಿನಲ್ಲಿ ಬೇವಿನ ಮರವಿದ್ದರೆ ನೆರಳಿನಿಂದ ಇಳುವರಿ ಕಡಿಮೆಯಾಗುತ್ತದೆಂದು ಸ್ವತಃ ರೈತರೇ ಕಡಿಸಿದ್ದಾರೆ. ಎಕರೆಗೆ ೫೫-೬೦ ಚೀಲ ಭತ್ತ ಬೆಳೆಯುವವರಿಗೆ ಅಲ್ಲಿ ಮರದ ನೆರಳಿದ್ದರೆ ಕೃಷಿ ನಷ್ಟವೆಂಬ ಅರಿವು ಮರನಾಶಕ್ಕೆ ಮೂಲ. ಕಾಡಿದ್ದರೆ ಮಳೆ ಎಂಬುದು ನಮಗೆ ತಿಳಿದಿದೆ. ಮಳೆ ಸುರಿದಾಗ ಜಲಾಶಯಗಳಲ್ಲಿ ನೀರು ತುಂಬಿ ಕೃಷಿಗೆ ಅನುಕೂಲವಾಗುತ್ತದೆ. ನಾವು ಜಲಾಶಯ, ಕಾಲುವೆ ನಿರ್ಮಾಣಕ್ಕೆ ಅಪಾರ ಪ್ರಮಾಣದ ಭೂಮಿ ಬಳಸಿದ್ದೇವೆ, ಅರಣ್ಯ ನಾಶ ಮಾಡಿದ್ದೇವೆ. ನೀರಾವರಿ ನಮ್ಮ ಕೃಷಿ ಜೀವನಕ್ಕೆ  ಹೊಸ ಬರವಸೆ ಮೂಡಿಸಿರುವಾಗ ಮರ ಬೆಳೆಸುವ ಕಾಯಕವನ್ನು  ಮಾಡಬೇಕಾಗುತ್ತದೆ. ಭೂಮಿಯ ಮಣ್ಣಿನ ಸತ್ವ ರಕ್ಷಣೆ, ಅರಣ್ಯದ ಮೇಲಿನ ಒತ್ತಡ ಕಡಿಮೆಗೊಳಿಸುವ ಪ್ರಯತ್ನವಾಗಿ  ಗಿಡ ಬೆಳೆಸಬೇಕು. ನಮ್ಮ ಹೊಲದ ಮರದ ಸೊಪ್ಪು, ಎಲೆಗಳು ಭೂಮಿಗೆ ಸಾವಯವ ವಸ್ತು ಸೇರಿಸಲು ನೆರವಾಗುತ್ತವೆ. ನೀರಾವರಿ ಕ್ಷೇತ್ರದ ರೈತರು  ಮರ ಬೆಳೆಸುವದನ್ನು ಕಡ್ಡಾಯ ಮಾಡಬೇಕು, ಅಗತ್ಯವಿದ್ದರೆ ಕಠಿಣ ಕಾನೂನು ರೂಪಿಸಬೇಕು.

‘ಮೈಸೂರು ಲ್ಯಾಂಡ್ ರೆವಿನ್ಯೂ ಕೋಡ್’ ಪ್ರಕಾರ  ರೈತರು ಎಕರೆಗೆ ಆರು ಮರ ಬೆಳೆಸಬೇಕು ಎಂದು ಶತಮಾನಗಳ ಹಿಂದೆಯೇ ಸೂಚಿಸಲಾಗಿದೆ. ಆಳಕ್ಕೆ ಬೇರಿಳಿಸುವ ಹಲಸು, ಮಾವು, ಹುಣಸೆ, ಬೇವು ಮುಂತಾದ ಮರಗಳಿಗೆ  ಆಗ ಆದ್ಯತೆ ನೀಡಲಾಗಿದೆ.  ಅಂತೆಯೇ ಈಗ ಹೊಲದಲ್ಲಿ ಮರ ಹೆಚ್ಚಿಸುವ ಕೆಲಸ ಮತ್ತೆ ನಡೆಯಬೇಕು. ಕರ್ನಾಟಕ ಅರಣ್ಯ ಇಲಾಖೆ, ಕೃಷಿ, ತೋಟಗಾರಿಕಾ ಇಲಾಖೆ, ನೀರಾವರಿ ಇಲಾಖೆ ಸಹಯೋಗದಲ್ಲಿ ಈ ಕೆಲಸ ಸಮರೋಪಾದಿಯಲ್ಲಿ ನಡೆಯಬೇಕು.  ಮರ ಪ್ರೀತಿಸುವಂತೆ ರೈತರ ಮನಸ್ಸು ಬದಲಿಸುವದು ಇಲ್ಲಿ ಮುಖ್ಯವಾದುದು. ನಮ್ಮ ಕಂದಾಯ ಇಲಾಖೆ ಗ್ರಾಮಲೆಕ್ಕಿಗರಿಗೆ ಕುರ್ಚಿ ಬಿಟ್ಟೇಳಲು ಪ್ರೇರೇಪಿಸಬೇಕು. ಹೊಲದ ಮರದ ನೋಂದಣಿ ಮಾಡಿಸಿ ವಾಸ್ತವ ಸ್ಥಿತಿ ಅರಿಯಬೇಕು. ಹೊಲ ಗದ್ದೆಗಳಲ್ಲಿ  ಎಕರೆಗೆ ನಿಗದಿತ ಪ್ರಮಾಣದ ವಿವಿಧ ಜಾತಿಯ ಮರ ಬೆಳೆಸುವುದು ಕಡ್ಡಾಯ ಮಾಡಬೇಕು.