ಅಚ್ಚರಿಯಿದ ಚ್ಚರಿಯಿದೀ ತೋರ್ಪರೂಪ, ಗುಣಕಲಾಪ,

ದುರಿತ ಕೋಪ, ಪಾಪಶಾಪ, ಬಹುಪ್ರತಾಪ, ದುರಾಪ|

ನೀಲೋತ್ಪಲವ ಸೋಲಿಸುವ ಕಾಳಿಮೆಯ ಮೈಗಪ್ಪು|

ಮೇಲೆ ಜೋಲಾಡುವ ವಿಶಾಲವಹ ಪೀತಾಂಬರದ ವಸನದೊಪ್ಪು,

ಇದ ನೋಡಲಾರದಿಹುದು ನಮ್ಮದೇ ತಪ್ಪು|

ಏನಿದು ವಿಲಕ್ಷಣದ ನಾಲ್ದೋಳ ವೇಷ|

ಕಾಣಿಸುವುದು ಕೋಟಿ ರವಿಭಾಸ, ಮುನಿಹೃದಯವಾಸ ಶ್ರೀಶ

ಸುಜನಪೋಷ, ವಿಗತದೋಷ, ಮಂಗಲಭೂಷ|

ಇದು ಶ್ರೀ ಹೊಸಕೆರೆ ಚಿದಂಬರಯ್ಯನವರು, ಹರಿಕಥಾ ಕೀರ್ತನ ಕಲೆಯು ಯಾವ ರೀತಿಯಲ್ಲಿ ಮೂಡಿಬಂದಿದೆ, ಹರಿಕಥೆಯನ್ನು  ನಿರ್ವಹಿಸುವ ಹರಿದಾಸರು ಎಷ್ಟೆಷ್ಟು ಅಧ್ಯಯನ, ಮನನ, ಸ್ಮರಣ ಇವುಗಳಲ್ಲಿ ಉನ್ನತ ಸಿದ್ಧಿ ಸಾಧಿಸಿದ್ದಲ್ಲಿ ಅವರು ನಡೆಸಿಕೊಡುವ ಕಥೆ-ಕೀರ್ತನೆಯೂ ಅಷ್ಟೇ ಉಕ್ಕೃಷ್ಟವಾಗುವುದೆಂಬುದೆಲ್ಲವನ್ನೂ ಚಿಂತನೆಗೊಳಪಡಿಸಿ, ರಚಿಸಿದ “ಕೀರ್ತನ ಕಂಠಾಭರಣ”ದಲ್ಲಿನ ಒಂದು ಚೂರ್ಣಿಕೆಯ ಕೆಲವು ಸಾಲುಗಳು. ಶ್ರೀ ಚಿದಂಬರಯ್ಯನವರು ತಾವು ಸಾಧಿಸಿದ ಅಪಾರ ವಿದ್ವತ್ತು, ಕಾವ್ಯಗಳ ಅಧ್ಯಯನ, ಎಲ್ಲವನ್ನೂ “ಕೀರ್ತನಕಂಠಾಭರಣ”ದ ಶ್ರೀರಾಮಾಯಣ ಸಮಗ್ರ ಕಥಾಕೀರ್ತನ ರೂಪೀ ಗ್ರಂಥದ ಮೂಲಕ ಸಮರ್ಥರೀತಿಯಲ್ಲಿ ಅಭಿವ್ಯಕ್ತಿಸಿದ್ದಾರೆ. ಕೀರ್ತನ ಕಂಠಾಭರಣದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಆಕರಗ್ರಂಥ, ದಾಸರ ಪದಗಳನ್ನೂ ಸೇರಿದಂತೆ ಸಾಂದರ್ಭಿಕ ಉಲ್ಲೇಖ, ಇವೆಲ್ಲ ಅಳವಟ್ಟಿವೆ. ಚಿದಂಬರಯ್ಯನವರ ಈ ಕೃತಿಯ ನಂತರ ಇತ್ತೀಚೆಗೆ ಮೂಡಿಬಂದಿರುವ, ಕೀರ್ತನ ಕಲೆ ಕುರಿತ ಉದ್ಗಂಥ ಸನ್ಮಾನ್ಯ ಶ್ರೀ ಭದ್ರಗಿರಿ ಅಚ್ಯುತ ದಾಸರದ್ದು ಬಿಟ್ಟರೆ, ಇನ್ನಾವುದೇ ಕೃತಿ ಇಂಥ ತೆರನಾದ ಆಕರ ಕೃತಿಯಾಗಿ (Reference Work) ಕಾಣಬಂದಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಶ್ರೀಯುತ ಚಿದಂಬರಯ್ಯನವರಿಗೆ ಪ್ರಧಾನತಃ ಆಧ್ಯಾತ್ಮಿಕ ಒಲವು-ಪರಮಾರ್ಥ ಚಿಂತನೆ-ಅದೇ ಅವರ ಅನೇಕ ಗ್ರಮಥಗಳ ಧ್ಯೇಯ. ಭಾಗವತ ಗ್ರಂಥ ನಿರೂಪಿಸುವ ನವವಿಧ ಭಕ್ತಿ ಕುರಿತ ಶ್ಲೋಕ-“ಶ್ರವಣಂ ಕೀರ್ತನಂ ವಿಷ್ನೋಃ ಸ್ಮರಣಂ ಪಾದಸೇವನಂ ಅರ್ಚನಂ ವಂದನಂ ದಾಸ್ಯಂ ಸಖ್ಯಂ ಆತ್ಮನಿವೇದನಮ್‌” ಎಂಬುವುದರಲ್ಲಿ ಉಕ್ತಿಗೊಂಡಿರುವ ‘ಕೀರ್ತನ’ ಭಕ್ತಿ ಕುರಿತಂತೆ ಗ್ರಂಥ-ಕಾವ್ಯ ರಚಿಸುವ ಉನ್ನತ ಧ್ಯೇಯದಿಂಧ “ಕೀರ್ತನ ಕಂಠಾಭರಣ” ರಚಿಸಿರಲು ಸಾಕು.

“ಸ್ವರಾಜ್ಯ ನನ್ನ ಜನ್ಮ ಸಿದ್ಧ ಹಕ್ಕು” ಎಂದೇ ಘೋಷಿಸಿದ ಕೇಸರಿ ಲೋಕ ಮಾನ್ಯ ತಿಲಕರು, ಗಣಪತಿ ಉತ್ಸವ-ಶಿವಾಜಿ ಉತ್ಸವ, ನಾಡಹಬ್ಬಗಳ ಆಚರಣೆ-ನಾಡಿಗಾಗಿ ದುಡಿದವರ ಸ್ಮರಣೆ-ಇವುಗಳನ್ನು ಕೀರ್ತನದ ಮೂಲಕ ಕೂಡ ಜನಮನ ತಲುಪಿಸಲು ಅಪಾರವಾಗಿ ಶ್ರಮಿಸಿದರು. ತಿಲಕರ ಶಿಷ್ಯ ಪರಂಪರೆಗೆ ಸೇರಿದ ದಿವಂಗತ ಕೊಪ್ಪ ಳ ಜಯರಾಮಾಚಾರ್ಯ ರೆಂಬುವರು ಅನೇಕ ವರ್ಷಗಳ ಹಿಂದೆಯೆ ಬಳ್ಳಾರಿಯಲ್ಲಿ ಕರ್ಣಾಟಕ ಕೀರ್ತನಕಾರರ ಸಮ್ಮೇಳನ ನಡೆಸಿದರು. ಸೋಸಲೆ ರಾಮದಾಸರು, ನಾರಾಯಣದಾಸರು, ನರಸಿಂಹಮೂರ್ತಿಗಳು, ದೊರೆಸ್ವಾಮಯ್ಯನವರು, ಮುಳಗುಂದದ ರಾಮಾಶಾಸ್ತ್ರಿಗಳು, ಶಿವಯೋಗಮಂದಿರದ ಬಸವಲಿಂಗಶಾಸ್ತ್ರಿಗಳು, ದೊಡ್ಡಾಬಳ್ಳಾಪುರದ ಶಿವದೇವಶಾಸ್ತ್ರಿಗಳು, ತುಮಕೂರಿನ ಟಿ.ಕೆ. ವೇಣುಗೋಪಾಲದಾಸರು, ಗೋಪೀನಾಥದಾಸರು, ಜಯಸಿಂಹದಾಸರು, ಹರಿದಾಸರತ್ನ ಗೋಪಾಲದಾಸರು , ಭದ್ರಗಿರಿ ಸಹೋದರರು, ಅವರವರ ಶಿಷ್ಯ ಪರಂಪರೆಯೂ ಮುಂದುವರಿದು ಕೀರ್ತನ ಕಲೆಯನ್ನು ಮುಂದುವರಿಸಿದ್ದಾರೆ. ಈ ನಿಟ್ಟಿನಲ್ಲಿಯೇ ನೆನಪಾಗುವ ಹೆಸರುಗಳೆಂದರೆ ಬೆಳ್ಳಾವೆ ನರಹರಿಶಾಸ್ತ್ರೀ, ಮಾಗಡಿ ವೀರಪ್ಪಶಾಸ್ತ್ರಿ, ಹೊಸಕೆರೆಕ ಚಿದಂಬರಯ್ಯನವರು-ಅವರು ಕೀರ್ತನ ಕಲೆ ಕುರಿತ ಗ್ರಂಥಗಳನ್ನು ಬರೆದಿರುವುದರಿಂದ! ಸಮರ್ಥರಾಮದಾಸರು ತಮ್ಮ “ದಾಸಬೋಧ” ಗ್ರಂಥದಲ್ಲಿ ಕೀರ್ತನದ ಮಹತ್ವ-ಕೀರ್ತನಕಾರರ ಲಕ್ಷಣಗಳನ್ನು ಕೂಡ ತಿಳಿಸುತ್ತಾರೆ.

ಬಹುಮುಖ ಪ್ರತಿಭೆಯ ಹೊಸಕೆರೆ ಚಿದಂಬರಯ್ಯನವರು ಹುಟ್ಟಿದ್ದು ತುಮಕೂರಿಗೆ ಸೇರಿದ ಗುಬ್ಬಿ ಸನಿಹದಲ್ಲಿರುವ ಹೊಸಕೆರೆ ಗ್ರಾಮದಲ್ಲಿ. ಜನನ ೧೮೭೦ರಲ್ಲಿ ಹಾಗೂ ಅವರು ದೈವಾಧೀನರಾದದ್ದು ೧೭.೪.೧೯೩೮ರಂದು (೬೮ ವರ್ಷದ ಬದುಕಿನ ಅವಧಿ). ಚಿಕ್ಕಂದಿನಲ್ಲಿ ಶಾಲಾಭ್ಯಾಸಕ್ಕೆ ಅನುಕೂಲತೆ ಕೇವಲ ಸ್ವಂತ ಪರಿಶ್ರಮ-ಪ್ರಯತ್ನಗಳಿಂದಲೇ ಕನ್ನಡ-ಸಂಸ್ಕೃತಗಳಲ್ಲಿ ಪಾಂಡಿತ್ಯ ಗಳಿಸಿದ್ದಲ್ಲದೆ ತಕ್ಕಮಟ್ಟಿಗೆ ಇಂಗ್ಲಿಷನ್ನು ಅವರು ಬಲ್ಲವರಾಗಿದ್ದರು.

ಅಂದಿನ ಲೋಯರ್ ಸೆಕೆಂಡರಿ(L.S.) ಪರೀಕ್ಷೆಯಲ್ಲಿ ಉತ್ತೀರ್ಣರಾದ ಚಿದಂಬರಯ್ಯನವರು, ಆಮೇಲೆ, ತಮ್ಮ ಸತತ ಅಭ್ಯಾಸದಿಂದ ಕನ್ನಡ (ಹಳಗನ್ನಡ, ಸೇರಿದಂಥೆ), ಮರಾಠೀ, ಸಂಸ್ಕೃತಗಳಲ್ಲಿ ಪರಿಣತಿಗಳಿಸಿದ್ದರು. ಮೊದಲಿಂದಲೇ ಅಧ್ಯಾತ್ಮದೆಡೆ ಒಲವು. ದಾವಣಗೆರೆ, ಮೊದಲಾದ ಊರುಗಳಲ್ಲಿ, ಮಾಧ್ಯಮಿಕ ಶಾಲಾ ಉಪಾಧ್ಯಾಯರಾಗಿ, ಮುಖ್ಯೋಪಾಧ್ಯಾಯರಾಗಿ, ಕೆಲಸ ಮಾಡಿದರು . ದೇಶಪ್ರೇಮ, ಪರಮಾರ್ಥಿಕ ಪ್ರವೃತ್ತಿಯಿಂದ ಉಪಾಧ್ಯಾಯ ಹುದ್ದೆಗೆ ರಾಜೀನಾಮೆ ನೀಡಿದರೂ ಧಾರವಾಡದ ರಾಷ್ಟ್ರೀಯ ಶಿಕ್ಷಣಸಮಿತಿಯಲ್ಲಿ ಸೇವೆ ಸಲ್ಲಿಸಿದರು. ಭಾರತೀಯ ತರುಣ ಸಮೂಹವನ್ನು  ಪರಧರ್ಮ-ಪರಭಾಷಾ ವ್ಯಾಮೋಹದ ಅಂಧತ್ವದಿಂದ ಮುಕ್ತರಾಗಿಸಿ, ಸ್ವಧರ್ಮ ಸ್ವಭಾಷಾ ಪ್ರೇಮಿಗಳಾಗಿಸಲು ರಾಷ್ಟ್ರೀಯ ಶಿಕ್ಷಣ ಸಮಿತಿಯ ಮೂಲಕ ಚಿದಂಬರಯ್ಯಹನವರು ಅವಿರತವಾಗಿ ಶ್ರಮಿಸಿದರು. ವಿದ್ಯಾರ್ಥಿಗಳಿಗೆ ಧರ್ಮ-ಸದಾಚಾರ ಸಂಹಿತೆಗಳ ಬೋಧನೆಯೊಂದಿಗೇ ರಾಷ್ಟ್ರಾಭಿಮಾನವನ್ನೂ ಬೆಳೆಸಿದರು.

 

ಅಧ್ಯಾತ್ಮ ಪೀಪಾಸುವಾದರೂ ಬೋಧನ, ಕೀರ್ತನಕಲೆ,ಕವಿ-ವಚನಕರರ ಕೃತಿಗಳಿಗೆ ಸ್ವರಸಂಯೋಜಿಸಿ ಸಂಗೀತಕ್ಕೆಕ ಅಳವಡಿಕೆ, ಧಾರ್ಮಿಕ ಪ್ರೌಢಗ್ರಂಥಗಳ ಆಳವಾದ ಅಧ್ಯಯನ, ಹೀಗೆ ಚಿದಂಬರಯ್ಯನವರು ವಿವಿಧ ಕ್ಷೇತ್ರಗಳಲ್ಲಿ ದುಡಿದದ್ದು, ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣವನ್ನು  ನೀಡಿದ್ದು. ಮೂವತ್ತಕ್ಕೂ ಹೆಚ್ಚು ಗ್ರಂಥ ರಚಿಸಿದರು. ಗದ್ಯಪದ್ಯ, ನಾಟಕ, ಶಾಸ್ತ್ರ-ಗ್ರಂಥ ಹೀಗೆ ಚಿದಂಬರಯ್ಯನವರು ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ವೇದ-ವೇದಾಂತ, ಭಾರತೀಯ ವಿವಿಧ ಮತ-ಅನ್ಯದೇಶೀ ಯ ಧರ್ಮಗಳ ಆಳವಾದ ಜ್ದಞಾನ ಮತ್ತು ತತ್ವದ ಅಂತರಂಗದರ್ಶನ ಇವರಿಗಿತ್ತು . ಭಾಷಾಂತರೆಗಳು, ಕೆಲವಾರು ಟೀಕೆ-ವ್ಯಾಖ್ಯಾನ ಹೀಗೆ. ‘ಆರ್ಯಧರ್ಮ ಪ್ರದೀಪಿಕಾ’ ಇವರ ಶ್ರೇಷ್ಠ ಗ್ರಂಥಗಳಲ್ಲೊಂದು . ಗೀತೆ-ವೇದೋಪನಿಷತ್ತುಗಳು, ಪುರಾಣ-ಧರ್ಮಸೂತ್ರ-ಹಲವಾರು ಉಪಕಥೆಗಳೊಂದಿಗೆ ಕನ್ನಡ ಪ್ರಾಚೀನ ಕವಿಗಳ ಕಾವ್ಯಗಳ ಉದಾಹರಣೆಗಳೊಡನೆ ಕನ್ನಡಕ್ಕೆ ತಂದವರು ಚಿದಂಬರಯ್ಯನವರು. ಗ್ರಂಥ ರಚನೆ-ಪ್ರಕಾಶನಗಳ ಸಂಗಡವೇ “ಪಾರಮಾರ್ಥ” ಹಾಗೂ “ಭಕ್ತ ಬಂಧು” ಎಂಬ ಮಾಸಪತ್ರಿಕೆಗಳ ಸಂಪಾದಕರಾಗಿದ್ದರು. ಬೆಂಗಳೂರಿನಲ್ಲಿ ಕೀರ್ತನಕಾರರಕ ಸಮ್ಮೇಳನವನ್ನು ನಡೆಸಿ ಕೀರ್ತನ ಕಲೆಯನ್ನು ಶಾಸ್ತ್ರೀಯ ನೆಲೆಗಟ್ಟಿಗೇರಿಸಲು ಅಷ್ಟೇ ಮಟ್ಟಿಗೆ ಜನಪ್ರಿಯವಾಗಿಸಲು ಶ್ರಮಿಸಿದ ಸಾತ್ವಿಕ ಸಜ್ಜನರು ಹೊಸಕೆರೆ ಚಿದಂಬರಯ್ಯನವರು. ಕೆಲವು ಕೀರ್ತನ ಗ್ರಂಥಗಳನ್ನು ರಚಿಸಿದರು.

ಚಿದಂಬರಯ್ಯನವರ ಗ್ರಂಥ ರಚನೆ ವೈವಿಧ್ಯಮಯ. ಉಪಾಧ್ಯಾಯರ ವೃತ್ತಿ ಕುಂದು ಕೊರತೆಗಳನ್ನು ರಚಿಸಿರುವ ಕೃತಿಗಳು-ಮನಃಶಿಕ್ಷಣ, ಬೋಧನ ಸ್ವಭಾವ, ಬೋಧನಕ್ರಮ, ಉಪಾಧ್ಯಾಯರ ಯೋಗ್ಯತೆಗಳು ಗಣಿತಾಜ್ಞ ಭಾಸ್ಕರ, ತಮ್ಮ ಪ್ರಿಯ ಗುರುವರ್ಯ ಕುರ್ತುಕೋಟಿ ಮಹಾಭಾಗವತರ ಮರಾಠಿ ಯ “ಮನಾಚೆಶ್ಲೋಕ” (Manache sloka) ವೆಂಬ ಗ್ರಂಥವಾಧರಿಸಿದ “ಮನಸ್ಸಿಗು ಪರದೇಶ” ಎಂಬುವ ಕನ್ನಡ ಗ್ರಂಥ ರಚಿಸಿದ್ದಾರೆ. “ನೀತಿಗಳ ನೆಲೆಗಟ್ಟು” ಗುಣನಿರೂಪಣೆ, ಭರತನ ಬಂಧುಪ್ರೇಮ, ಸುಧರ್ಮ ಪ್ರಭಾವ ಕೃಷ್ಣಮಹೇಶ್ವರಿ, ನವೀನಕಲ್ಪ, ಮುಂತಾದ ನಾಟಕಗಳು; ವಿದ್ಯಾರಣ್ಯಕಾವ್ಯ, ಪರಮಾತ್ಮಸ್ತುತಿ, ಸಂಗೀತಕ್ಕೆ ಅಳವಡುವ ‘ಭಕ್ತಿಗೀತಾವಳಿ’ ಎಂಬುವ ಗ್ರಂಥವನ್ನು ರಚಿಸಿರುತ್ತಾರೆ. “ಕೀರ್ತನ ಕಂಠಾಭರಣ” (ರಾಮಾಯಣಂ)-ಕೀರ್ತನ ರೂಪದಲ್ಲಿ ಇಡೀ ರಾಮಾಯಣವನ್ನು ಬರೆದಿದ್ದಾರೆ. ಅಲ್ಲಿರುವ ಹಾಡು, ಸೀಸಪದ್ಯ, ಚೂರ್ಣಿಕೆ, ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ, ಎಲ್ಲವೂ ಚಿದಂಬರಯ್ಯನವರ ಕೊಡುಗೆ.

ಗೀತಾಸಾರವಿಚಾರ, ತೀತಾರ್ಥಚಂದ್ರಿಕೆ, ಪಂಚದಶೀ ತತ್ವ, ವೇದಾಂತ ರೂಪರೇಖೆ, ಮಾಂಡೂಕ್ಯ ಸಂವಾದ, ವೇದಾಂತ ಕೀರ್ತನೆ ಮೊದಲಾದ ಗ್ರಂಥಗಳೇ ಅಲ್ಲದೆ ಕನ್ನಡಕವಿ ಕಮಹ ಲಿಂಗರಂಗನ “ಅನುಭವಾಮೃತ” ಕಾವ್ಯಕ್ಕೆ ಸರ್ವಾರ್ಥ ಸಂದರ್ಶಿನೀ ಎಂಬ ವ್ಯಾಖ್ಯಾನವನ್ನು ಚಿದಂಬರಯ್ಯನವರು ರಚಿಸಿದ್ದಾರೆ.

ಮಲ್ಲಾರಿಯ ಮಹಾತ್ಮೆ, ಬ್ರಹ್ಮಸೂತ್ರಗಳ ಬೆಳಕು, ಭರತಖಂಡದ ಜೀವಜ್ಯೋತಿಗಳು ಭಾಗವತದ ಕೆಲವು ಕತೆಗಳು, ಭಾರತದ ಕೆಲವು ಕತೆಗಳು, ಮಕ್ಕಳ ಕೈ ಗೀತೆ, ರಾಮನಾಮದ ಮಹಿಮೆ, ರಾಜಭಕ್ತಿ, ಮಕ್ಕಳಗೀತ, ಜೀವನ್ಮುಕ್ತಿ ಆತ್ಮಶಕ್ತಿಯ ತೇಜಸ್ಸು, ಮೊದಲಾದವು ಚಿದಂಬರಯ್ಯನವರ ಗ್ರಂಥಗಳು.

 

ಹೀಗೆ ವೇದಾಂತ, ನ್ಯಾಯಶಾಸ್ತ್ರ, ಧರ್ಮಶಾಸ್ತ್ರ, ಪುರಾಣಗಳ ವಿಮರ್ಶೆ, ಆರ್ಯಸಮಾಜ, ಯಹೂಧ್ಯ, ಇಸ್ಲಾಂ ಪಾರ್ಸಿ, ಕ್ರೈಸ್ತ ಮತ ಕುರಿಕತ ಅಧ್ಯಯನ ಮಾಡಿದ್ದರು./ ಆಯಧರ್ಮ ಪ್ರದೀಪಿಕಾ ಗ್ರಂಥವು ೧೯೨೪ ಮೊದಲು ಬೆಳಕಲು ಕಂಡು, ಅನಂತರ ಮೂರು ಮುದ್ರಣ ಕಂಡಿತು.

 

ದೇವರು, ಧರ್ಮ, ಜಗತ್ತು, ಅವತಾರ ಮತ್ತು ಜನ್ಮಾಂತರ, ಕರ್ಮಯೋಗ, ಕೀರ್ತಿಯೋಗ, ಭಕ್ತಿ-ಜ್ಞಾನಯೋಗಗಳು ಇವುಗಳನ್ನು ಕುರಿತಂತೆ ಚಿದಂಬರಯ್ಯನವರು ಬರೆದಿರುವ ಗ್ರಂಥಗಳು ಜನಪ್ರಿಯವಾಗಿವೆ. “ಕರ್ನಾಟಕ ಕವಿರತ್ನ” ಚಿದಂಬರಯ್ಯನವರಿಗೆ ದೊರೆತ ಪ್ರಶಸ್ತಿ.

ಕೀರ್ತನ ಕಂಠಾಭರಣ (೧೯೨೮) ಕೀರ್ತನಕಾರರ ಕೈಪಿಡಿಯಾಗಿದೆ. ಸಂಸ್ಕೃತ ಕಾವ್ಯಗ್ರಂಥಗಳ ಜತೆ ಕನ್ನಡ ಪ್ರಾಚೀನ ಸಾಹಿತ್ಯ ಹಾಗೂ ಕವಿಗಳನೇಕರ ಪದ್ಯಗಳನ್ನು ಸಂದರ್ಭಾನುಸಾರ ಧಾರಾಳವಾಗಿ ಬಳಸಿಕೊಂಡು ಶ್ರೀರಾಮಾಯಣ ಕಾವ್ಯದ ಕೀರ್ತನ ರೂಪೀ ಗ್ರಂಥ-ಕೀರ್ತನಕಂಠಾಭರಣವನ್ನು ಬರೆದಿದ್ದಾರೆ.

ಹೊಳೆನರಸೀಪುರದ ಸ್ವಾಮಿ ಸಚ್ಚಿದಾನಂದ ಸರಸ್ವತಿಗಳವರ ಅನುಗ್ರಹ, ನಿಡುಗಾಲದ ಸಂಪರ್ಕವಿದ್ದಂತೆಯೇ ಚಿದಂಬರಯ್ಯನವರಿಗೆ ಶೃಂಗೇರಿ ಶ್ರೀ ಶ್ರೀ ಶಿವಾಭಿನವ ನೃಸಿಂಹ ಭಾರತಿಯವರ ಅನುಗ್ರಹವು ದೊರೆತಿತ್ತು. ಶ್ರೀ ಗೋಂದಾವಲೀ ಮಹಾರಾಜರ ಸಂಪರ್ಕ ಚಿದಂಬರಯ್ಯನವರಲ್ಲಿದ್ದು ಪರಮಾರ್ಥ ಸ್ವಭಾವವನ್ನು ಇನ್ನೂ ವೃದ್ಧಿಗೊಳಿಸಿತು.

 

ಸಹಜವಾಗಿಯೇ ಅವರು ತಮ್ಮ ಬದುಕಿನ ಅಂತ್ಯ ನದಿ ತೀರದಲ್ಲಿ, ಶಾಂತ ಪರಿಸರದಲ್ಲಿ ಕಳೆಯ ಬಯಸಿ, ತಿರುಮಕೂಡಲು ನರಸೀಪುರದ ಕಪಿಲಾ ನದಿ ತಳದ ಪರಿಸರದಲ್ಲಿ ಏಕಾಂತ ತಪಸ್ವಾಧ್ಯಾಯ ನಿರತರಾಗಿದ್ದು, ೧೭.೪.೧೯೩೮ರಂದು ಬ್ರಹ್ಮೈಕ್ಯರಾದರು.

ಒಟ್ಟಾರೆ, ಇಪ್ಪತ್ತನೆ ಶತಮಾನದ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹೊಸಕೆರೆಕ ಚಿದಂಬರಯ್ಯನವರ ಕೊಡುಗೆ ವಿಶಿಷ್ಟವಾದುದು ಹಾಗೂ ಕೀರ್ತನ ಕಲೆ ಇರುವ ತನಕ ಅವರು ಚಿರಸ್ಮರಣೀಯರು.