ಕಾವ್ಯ ಎಂದರೇನು? ಕವಿ ತನ್ನ ಅನುಭವಗಳಿಗೆ ಭಾಷಾಮಾಧ್ಯಮದಲ್ಲಿ ಆಕಾರ ನೀಡುವಾಗ ಅವನಿಗೆ ಒದಗುವ ಸಮಸ್ಯೆಗಳೂ, ಸವಾಲುಗಳೂ ಯಾವುವು ಇತ್ಯಾದಿ ಸಂಗತಿಗಳನ್ನು ಕುರಿತ ಬಿಡಿಬಿಡಿ ಕವಿತೆಗಳು ಹೊಸಗನ್ನಡದಲ್ಲಿ ಸಾಕಷ್ಟಿವೆ. ಈ ಕವಿತೆಗಳ ಮೂಲಕ ನಿಷ್ಪನ್ನವಾಗುವ ಕಾವ್ಯತತ್ವದ ಬಗೆಗೆ, ನವೋದಯ ಕವಿಗಳಿಗೂ, ನವ್ಯ ಹಾಗೂ ಅನಂತರದ ಕವಿಗಳಿಗೂ ಗುರುತಿಸಬಹುದಾದ ವ್ಯತ್ಯಾಸವಿದೆ.

ಮೊದಲ ಸಂಗತಿ ಎಂದರೆ ಸ್ಫೂರ್ತಿ ತತ್ವದಲ್ಲಿನ ನಂಬಿಕೆಗೆ ಸಂಬಂಧಿಸಿದ್ದು. ಸ್ಫೂರ್ತಿತತ್ವದ ಹಾಗೂ ಅದಕ್ಕೆ ಸಂಗಡಿಸಿಕೊಂಡು ಬರುವ ದೈವಿಕತೆಯ ಅಥವಾ ಅಪೌರುಷೇಯದ ವಿಚಾರದಲ್ಲಿ ನವೋದಯ ಕವಿಗಳಿಗಿರುವ ನಂಬಿಕೆ, ನವ್ಯ ಹಾಗೂ ಅನಂತರದ ಕವಿಗಳಿಗೆ ಇಲ್ಲ. ನವೋದಯ ಕವಿಗಳಿಗೆ ಇರುವ ಭಾರತೀಯ ಕಾವ್ಯ ಮೀಮಾಂಸೆಯ, ಹಾಗೂ ತತ್ವಶಾಸ್ತ್ರ ವೇದಾಂತ ಯೋಗ ವಿಜ್ಞಾನಗಳ ತಿಳಿವಳಿಕೆಯೂ, ಕಾವ್ಯದ ಬಗೆಗಿನ ಅಪೌರುಷೇಯತೆಯ ಭಾವನೆಗಳನ್ನು ದೃಢಪಡಿಸಿರಬಹುದು. ಹೀಗಾಗಿ, ಅವರು ಕಾವ್ಯನಿರ್ಮಿತಿಯ ಹಿಂದೆ ಸ್ಫೂರ್ತಿಯ ಪಾತ್ರವನ್ನು ಗುರುತಿಸುತ್ತಾರೆ. ಕವಿ ಸ್ಫೂರ್ತಿಯಿಂದ ಬರೆಯುತ್ತಾನೆ ಎಂದರೆ ಆತ ಬೇರೊಂದು ಶಕ್ತಿಗೆ ವಶವಾಗಿ ಬರೆಯುತ್ತಾನೆ ಎಂದು ಅರ್ಥ. ಮತ್ತು ಈ ತಿಳಿವಳಿಕೆ ಹೊಸಗನ್ನಡ ಕಾವ್ಯಪರಂಪರೆಗೆ ಹೊಸದೇನೂ ಅಲ್ಲ. ಪ್ರಾಚೀನ ಕನ್ನಡ ಕಾವ್ಯ ಪರಂಪರೆಯಿಂದ ಬಳುವಳಿಯಾಗಿ ಬಂದ ಸ್ಪೂರ್ತಿತತ್ವ, ಮೂಲತಃ ಕವಿಯೊಳಗಿನ ಅನುಭವಗಳನ್ನು ಮೂರ್ತೀಕರಿಸುವ ಒಂದು ವಿಶೇಷ ಸಾಮರ್ಥ್ಯ ಎಂದು ಭಾವಿಸಬೇಕೇ ಹೊರತು, ಕಾವ್ಯನಿರ್ಮಿತಿಯಲ್ಲಿ ಚಿಂತನೆಯ ಬುದ್ಧಿಯ ಹಾಗೂ ವ್ಯಕ್ತಿ ವಿಶಿಷ್ಟತೆಯ ಪಾತ್ರವನ್ನು ನಿರಾಕರಿಸುವ ನಿಲುವು ಎಂದು ತಿಳಿಯಬೇಕಾಗಿಲ್ಲ. ಇಂಥದೊಂದು ಶಕ್ತಿ ತಮ್ಮ ಹಿಂದೆ ನಿಂತು, ಕಾವ್ಯವನ್ನು ಬರೆಯಿಸುತ್ತಿದೆ ಎಂಬ ಭಾವನೆ ಆಯಾ ಕವಿಗಳಿಗೆ ಇದ್ದರೆ, ಅದು ಅವರವರ ಶ್ರದ್ಧೆಗೆ ಸಂಬಂಧಿಸಿದ ವಿಚಾರವೆಂದು ತಿಳಿದುಕೊಳ್ಳುವುದು ಒಳ್ಳೆಯದು. ಆದರೆ ಅಂಥ ನಂಬಿಕೆಯಿಂದ ಬರೆಯಲಾದ ಕಾವ್ಯ, ಸಾಹಿತ್ಯ ವಿಮರ್ಶೆಯ ಯಾವುದೇ ಮಾನದಂಡಗಳ ಪ್ರಕಾರ ‘ಕಾವ್ಯ’ವಾಗಿದೆಯೆ ಇಲ್ಲವೆ ಎನ್ನುವುದು ಮುಖ್ಯ. ಹಾಗೆಯೇ ಸ್ಫೂರ್ತಿತತ್ವವನ್ನು ನಿರಾಕರಣೆ ಮಾಡಿದ ಮಾರ್ಗದವರು ಬರೆದ ಎಲ್ಲ ಕಾವ್ಯವೂ ಒಂದೇ ಗುಣಮಟ್ಟದ್ದಾಗಿರುತ್ತದೆ ಎಂದು ಹೇಳಲು ಬಾರದು. ಈ ದೃಷ್ಟಿಯಿಂದ ಸ್ಫೂರ್ತಿತತ್ವವನ್ನು ವಿಮರ್ಶೆಯ ಮಾನದಂಡವನ್ನಾಗಿ ಬಳಸುವುದೇ ಸರಿಯಲ್ಲ. ಯಾಕೆಂದರೆ ಅದು ಕವಿಯ ಸೃಜನ ಪ್ರಕ್ರಿಯೆಯ ಒಂದು ಉಪಕರಣ. ಕವಿ ಸ್ಫೂರ್ತಿಯಿಂದ ಬರೆಯುತ್ತಾನೆ, ಎಂದರೆ, ಕವಿ ತಾನು ಇಷ್ಟಪಟ್ಟ ಸಂದರ್ಭದಲ್ಲೆಲ್ಲಾ ಬರೆಯಲು ಸಾಧ್ಯವಿಲ್ಲ. ಕಾವ್ಯವು ರೂಪುಗೊಳ್ಳುವ ಸಮಯಕ್ಕಾಗಿ ಕಾಯಬೇಕು ಎಂದು ಅರ್ಥ. ಈ ವಿಚಾರದಲ್ಲಿ ನವ್ಯರಿಗೂ ತಕರಾರೇನೂ ಇರಲಾರದು. ಇದನ್ನೆ ಬೇಂದ್ರೆಯವರು ‘ಕುದುರಿಯವರು’ ಎಂಬ ಕವನದಲ್ಲಿ –

ಸಂಜೀ ಮುಂಜಾನೆ ನಾವು
ಎಂದಾರೆ ಒಂದು ದಿನ
ಅಲಕ್ನಂತ ನಿಮ್ಮ ಮುಂದ
ಬರತೇವಿ, ಆವಾಗ
ಬೊಗಸೀ ತುಂಬ ಭಕ್ತಿ ಹಿಡಿದು
ಅಗಸೀಬಾಗಿಲ್ಗೆ ನಿಂದ್ರು
ಕುದುರೀಯವರು ಅಂದ್ರು

ಎಂಬ ರೂಪಕದಲ್ಲಿ ಹಿಡಿದಿರಿಸಿದ್ದಾರೆ. ಕವಿ ಕಾಯಬೇಕು, ಅನುಭವದ ಪಾಕಕ್ಕೆ ಹಾಗೂ ಅಭಿವ್ಯಕ್ತಿಗೆ, ಆ ಸಂದರ್ಭವೇ ಸ್ಫೂರ್ತಿ. ಬೇಂದ್ರೆಯವರ ‘ಗಂಗಾವತರಣ’ ಸ್ಫೂರ್ತಿಯ ಮಾತೃಶಕ್ತಿಯೊಳಗಿರುವ ನಂಬಿಕೆಯನ್ನೂ, ತತ್ಪರಿಣಾಮವಾದ ಸೃಜನಶೀಲತೆಯ ಆವಾಹನೆಯನ್ನೂ ಪ್ರಕಟಿಸುವ ಕವಿತೆಯಾಗಿದೆ. ಕುವೆಂಪು ಅವರ ‘ಕಲಾಸುಂದರಿ’ ಜಗತ್ತನ್ನು ಮುನ್ನಡೆಸುವ ಸೃಜನಶಕ್ತಿಯ ಪ್ರತಿಮೆಯಾಗಿದೆ. ಪು.ತಿ.ನ. ಅವರ ‘ರಸಸರಸ್ವತಿ’ ಕಾವ್ಯನಿರ್ಮಿತಿಯ ಸ್ವರೂಪವನ್ನು ಕುರಿತ ವರ್ಣನೆಯಾಗಿದೆ, ಒಟ್ಟಾರೆಯಾಗಿ ನವೋದಯ ಕಾವ್ಯದ ಸೆಳೆತ-ರಭಸಗಳು, ಸಮೃದ್ಧಿ, ಅದು ಗ್ರಹಿಸಿದ, ಹಾಗೂ ವ್ಯಾಖ್ಯಾನಿಸಿದ ಅನುಭವ ಪ್ರಪಂಚ, ತತ್‌ಪೂರ್ವದ ಕಾವ್ಯ ಪರಂಪರೆಯೊಂದಿಗೆ ಹೋಲಿಸಿದರೆ ಕಂಡುಬರುವ ಹೊಸತನ, ಇವೆಲ್ಲವೂ ಭಾರತೀಯ ಪುನರುಜ್ಜೀವನದ ಕಾರಣದಿಂದ ಹೊಸ ಎಚ್ಚರವನ್ನು ಪಡೆದ ಮನಸ್ಸಿನ ಅಭಿವ್ಯಕ್ತಿಯಾಗಿದೆ.

ನಾಡಿನ ಪುಣ್ಯದ ಪೂರ್ವ ದಿಗಂತದಿ
ಹೊಸ ಅರುಣೋದಯ ಹೊಮುತಿದೆ
ಚಿರನೂತನ ಚೇತನದುತ್ಸಾಹದ
ನವೀನ ಜೀವನ ಚಿಮ್ಮುತಿದೆ
(ನವಿಲು : ಪು. ೮೫)

ಎಂದು ಕುವೆಂಪು ಅವರೂ

ನೂರು ಮರ ನೂರು ಸ್ವರ
ಒಂದೊಂದೂ ಅತಿ ಮಧುರ
ಬಂಧವಿರದ ಬಂಧುರ
ಸ್ವಚ್ಛಂದ ಸುಂದರ

ಎಂದು ಬೇಂದ್ರೆಯವರೂ ವರ್ಣಿಸಿದ, ಈ ಕಾಲದ ಕಾವ್ಯನಿರ್ಮಿತಿ ಸ್ಫೂರ್ತಿತತ್ವದ ಸಮರ್ಥನೆಯಾಗಿರುವುದು ಆಶ್ಚರ್ಯವೇನಲ್ಲ. ಮತ್ತು ಆ ಕಾಲವೇ ಅಂಥ ಸೃಜನ ಶೀಲತೆಯ ಉತ್ಕರ್ಷದ ಕಾಲವಾಗಿತ್ತು ಎನ್ನುವುದೂ ಸುಳ್ಳಲ್ಲ.

ನವೋದಯದ ಕಾವ್ಯ ಕಲ್ಪನೆಯ ಪ್ರಕಾರ ಕಾವ್ಯವು ವ್ಯಕ್ತಿ ವಿಶಿಷ್ಟವಾದ ಅನುಭವದ ಅಭಿವ್ಯಕ್ತಿಯಾದರೆ, ನವ್ಯಕಾವ್ಯದವರ ಪ್ರಕಾರ ಕಾವ್ಯವು ವ್ಯಕ್ತಿ ವಿಶಿಷ್ಟತೆಗಾಗಿ ಕೈಕೊಳ್ಳುವ ಅನುಭವದ ಶೋಧನೆಯಾಗಿದೆ. ನವೋದಯದಲ್ಲಿಯಂತೆ, ತನಗೆ ತಾನೇ ಸಹಜ ಪ್ರಾಸಗಳನ್ನು ನಿರ್ಮಿಸಿಕೊಂಡು ನಡೆಯುವ ಭೃಂಗ ಮಾರ್ಗದ ನಿರರ್ಗಳತೆಯ ಅಭಿವ್ಯಕ್ತಿ ಇದಲ್ಲ. ಅತ್ಯಂತ ಎಚ್ಚರಿಕೆಯಿಂದ, ಶ್ರಮದಿಂದ ನಿರ್ವಹಿಸಬೇಕಾದ ಮತ್ತು ಹೊಚ್ಚ ಹೊಸತನ್ನು ನಿರ್ಮಿಸಬೇಕೆನ್ನುವ ಕಸುಬುಗಾರಿಕೆ, ಹೊಸ ಹೊಸತರ ಅನ್ವೇಷಣೆಯ ತೀವ್ರ ಹಂಬಲ, ಉದ್ದಕ್ಕೂ ಕಂಡುಬರುವ ಸಂಗತಿಯಾಗಿದೆ. ಆ ಹೊಚ್ಚ ಹೊಸತು ತನ್ನದೇ ಆಗಿರಬೇಕು, ಅವರಿವರು ಹೇಳಿದ್ದು ಆಗಿರಬಾರದು ಎಂಬ ತುಡಿತ ‘ಒರಿಜಿನಾಲಿಟಿ’ಯ ಅನ್ವೇಷಣೆಯಾಗಿದೆ. ಈ ನಿಲುವನ್ನು ಕಪ್ಪು ಕಡಲತಡಿಯಲ್ಲಿ ನಿಂತು, ಅದರಲ್ಲಿ ಮುಳುಗಿ ಅದರೊಳನ್ನು ಅನ್ವೇಷಿಸುವವನ, ಮತ್ತು ಗಣಿ ಕೆಲಸದವನ ಎರಡು ಪ್ರತೀಕಗಳ ಮೂಲಕ ಅಡಿಗರು ಅಭಿವ್ಯಕ್ತಪಡಿಸುತ್ತಾರೆ. ಅವರ ಮೊಟ್ಟಮೊದಲ ಕವನ ಸಂಗ್ರಹವಾದ ಭಾವತರಂಗ (೧೯೩೭-೪೭)ದಲ್ಲಿರುವ ‘ಏನಿರಬಹುದು’ ಎಂಬ ಕವಿತೆ –

ಏನಿರಬಹುದಹೊ ಏನಿರಬಹುದಹೊ
ಏನಡಗಿರಬಹುದು ?
ಒಳಗೆ ಒಳಗೆ ಒಳಗೆ ನನ್ನೀ ಮನದ ಕಾಳದೊಳಗೆ
ಅಂತರಂಗದ ಅನಂತವಾರಿಧಿಯಂತರಾಳದೊಳಗೆ

ಎಂಬ ಪ್ರಶ್ನೆಯನ್ನೆತ್ತಿ –

ಮುತ್ತು ರತುನಗಳೊ ಹೊನ್ನಿನೆಸಳುಗಳೊ ಬರಿಯ ಕೆಸರು ಕೆಸರೊ;
ಜನ್ಮ ಜನ್ಮದ ಜಘನ್ಯ ಭಾವಗಳ ಹುಚ್ಚು ಹಸುರೋ
ಬೆಳಕು ಬಿತ್ತುಗಳು ಬಳಲಿ ಬಂದಿಲ್ಲ ಪವಡಿಸಿಹವೋ

ಎಂಬ ಕನಸು ಕಾಣುತ್ತ, ಅದರೊಳಗೆ ಮುಳುಗುವ ದುಸ್ಸಾಧ್ಯತೆಯನ್ನು ಯೋಚಿಸುತ್ತ-

ಕಪ್ಪು ಕಪ್ಪು ಕಡಲಿದರ ತಡಿಯೆ ನಾ ನಿಂದು ನೋಡುತಿಹೆನು
ಬೆಪ್ಪನಂತೆ ಅಲ್ಲಲ್ಲೆ ನಿಂತು ತಲ್ಲಣಿಸಿ ಕೋಡುತಿಹೆನು.
…………………………..
ಜಗದ ಚೆಲುವು, ಮೊಗಮೊಗದ ಚೆಲುವು ಹಾ ತಡೆಯದಲ್ಲ ನನ್ನ
ಓ ಮುಳುಗಬೇಕು, ಮುಳುಮುಳುಗಬೇಕು ಆ ತಳವು ಕಾಣುವನ್ನ
ಮುಳುಗಿದ ಒಡವೆ ದೊರೆಯುವನ್ನ
(ಸಮಗ್ರ ಕಾವ್ಯ, ಪು. ೫೪)

ಎಂಬ ನಿರ್ಧಾರವನ್ನು ಪ್ರಕಟಿಸುತ್ತದೆ. ಕವಿತೆಯ ಭಾಷೆ ಬಂಧ ನವೋದಯದ ಮಾದರಿಯದೇ ಆದರೂ, ಕಡಲಾಳಕ್ಕೆ ಮುಳುಗಿ, ಅಲ್ಲಿನ ಒಡವೆಯನ್ನು ಹುಡುಕುವ ಪ್ರತೀಕ ಮಾತ್ರ, ಅನುಭವದ ಶೋಧನೆಯಲ್ಲಿ ತೊಡಗುವ ಕವಿಯ ತುಡಿತವನ್ನು ಸ್ಪಷ್ಟವಾಗಿ ಧ್ವನಿಸುತ್ತದೆ. ಮುಂದೆ ಅವರು ಬರೆದ ‘ಭೂಮಿಗೀತ’ (೧೯೫೩-೧೯೫೯) ಕವಿತೆಯಲ್ಲಿ ಇದೇ ಪ್ರತೀಕ ನವ್ಯ ಕಾವ್ಯದ ಶೈಲಿಯಲ್ಲಿ ಹೀಗೆ ಅಭಿವ್ಯಕ್ತವಾಗಿದೆ :

ಹಿತ್ತಲ ಜಗಲಿ ಮೇಲೆ ಕುಳಿತು ಧುಮ್ಮಿಕ್ಕಿದೆನು
ಮತ್ತೂ ಕೆಳಗೆ ತಳಕೆ ಕುಂಗ
ಹಸುರು ತೆರೆ ಅಪ್ಪಳಿಸುತಿರೆ ಮೇಲೆ ನೊರೆಕಾರಿ, ಬೀಸುತಿರೆ
ಬಿರುಗಾಳಿ, ಗುಡುಗು ಮೊಳಗೆ
ತಳದಾಣಿ ಮುತ್ತುಗಳ ಮತ್ತದೀಪ್ತಿಗೆ ಕಣ್ಣಕುಕ್ಕಿ
ಕುರುಡಾಡಿದೆನು ಸಂಜೆವರೆಗೆ
(ಸಮಗ್ರ ಕಾವ್ಯ, ಪು. ೨೭೭)

ಕವಿಯು ಕೈಕೊಳ್ಳುವ ಅನುಭವ ಶೋಧನೆಯನ್ನು ಕುರಿತ, ಅಡಿಗರಿಗೆ ಪ್ರಿಯವಾದ ಇನ್ನೊಂದು ಪ್ರತೀಕವೆಂದರೆ, ಮಣ್ಣಿನಲ್ಲಿ ಚಿನ್ನವನ್ನು ಶೋಧಿಸಿ ತೆಗೆಯುವ ಕ್ರಿಯೆಗೆ ಸಂಬಂಧಿಸಿದ್ದು. ಈ ಪ್ರತೀಕ ಅವರ ‘ಭೂತ’ ಕವನದಲ್ಲಿ ಹೀಗೆ ಕಾಣಿಸಿಕೊಂಡಿದೆ :

ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು;
ಕೆಳಕ್ಕೆ, ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ
ಕಂಡೀತು ಗೆರೆಮಿರಿವ ಚಿನ್ನದದಿರು
ಹೊರತೆಗೆದು ಸುಟ್ಟು ಸೋಸುವಪರಂಜಿವಿದ್ಯೆಗಳ
ಇನ್ನಾದರೂ ಕೊಂಚ ಕಲಿಯಬೇಕು
ಹೊನ್ನ ಕಾಯಿಸಿ ಹಿಡಿದು ಬಡಿದಿಷ್ಟದೇವತಾ
ವಿಗ್ರಹಕ್ಕೊಗ್ಗಿಸುವ ಅಸಲು ಕಸುಬು
(ಭೂಮಿಗೀತ : ಪು. ೨೯೪)

ಈ ಪ್ರತೀಕ ಕಾವ್ಯ ಹಾಗೂ ಜೀವನಗಳೆರಡರಲ್ಲೂ, ವ್ಯಕ್ತಿ ವಿಶಿಷ್ಟತೆಯನ್ನು ಸಾಧಿಸುವ ಕ್ರಮವನ್ನು ಹೇಳುತ್ತದೆ. ಹೀಗೆ ಅನುಭವಗಳನ್ನು ಅತ್ಯಂತ ಆಳವಾಗಿ ಶೋಧಿಸಿ ಅದನ್ನು ಕರಗಿಸಿ ಕಾಯಿಸಿ ತನ್ನದೇ ಆದ ಅಭಿವ್ಯಕ್ತಿಗೆ ಒಗ್ಗಿಸಿಕೊಳ್ಳುವ ಕ್ರಿಯೆಯ ಕಾವ್ಯನಿರ್ಮಿತಿ. ಇದೊಂದು ರೀತಿಯ ಹೋರಾಟ; ಅಥವಾ ಬಂಡಾಯವೇಳುವ, ಆ ಮೂಲಕ ‘ತನ್ನ-ಚಿನ್ನದ್ದೊ, ರನ್ನದ್ದೊ, ಕಬ್ಬಿಣದ್ದೊ, ಮರದ್ದೊ ಅಥವಾ ಬರೀ ಮಣ್ಣಿನದೊ-ಸಿಂಹಾ ಸನವ ಹುಡುಕಿ ತೆಗೆದು ಗುರುತಿಸಿ ಅಲ್ಲಿ ಆಸನಾರೂಢವಾಗುವ’ (ಬಂಡಾಯ : ಚಿಂತಾಮಣಿಯಲ್ಲಿ ಕಂಡ ಮುಖ, ಪು. ೨೬) ಪ್ರಯತ್ನ; ಯಾರೋ ಬಿಟ್ಟು ಕೊಟ್ಟ ಸಿಂಹಾಸನದ ಮೇಲೆ ಕೂತು ದರ್ಬಾರು ಮಾಡುವ ಚಲಪವಲ್ಲ, ‘ತನ್ನ ವ್ಯಕ್ತಿತ್ವಕ್ಕೆ ಚಹರೆ ಪಟ್ಟಿ’ಯನ್ನು ಸಿದ್ಧಮಾಡಿಕೊಳ್ಳುವ ಸಾಹಸ. ಇದೊಂದು ರೀತಿಯಲ್ಲಿ ‘ಒರಿಜಿನಾಲಿಟಿ’ಯ ಅನ್ವೇಷಣೆ.

ಕವಿಯ ಕಾವ್ಯನಿರ್ಮಿತಿಯ ಸಂದರ್ಭದ ಅಭಿವ್ಯಕ್ತಿಯ ಸ್ವರೂಪವನ್ನೂ, ಆ ಹೊತ್ತಿನಲ್ಲಿ ಕವಿಗೊದಗುವ ಸವಾಲುಗಳನ್ನೂ ಹೊಸಗನ್ನಡ ಕಾವ್ಯ ಸಂದರ್ಭದ ಅನೇಕ ಕವಿತೆಗಳು ನಿರೂಪಿಸುತ್ತವೆ. ಮೂಲಭೂತವಾಗಿ ಕಾವ್ಯನಿರ್ಮಾಣಪೂರ್ವದ ಕವಿಯ ಅನುಭವ ದ್ರವ್ಯವು, ಅಮೂರ್ತವೂ, ಆಸ್ತವ್ಯಸ್ತವೂ, ಅಖಚಿತವೂ ಆದುದು. ಈ ಅನುಭವವನ್ನು ಭಾಷೆಯಲ್ಲಿ, ತನ್ನದೆ ಆದ ವ್ಯಕ್ತಿವಿಶಿಷ್ಟ ಭಾಷೆಯಲ್ಲಿ ಒಂದು ಆಕಾರಕ್ಕೆ ತರುವುದು ಶೈಲಿಯ ಸಮಸ್ಯೆ. ಅಭಿವ್ಯಕ್ತಿಪೂರ್ವದ ಅನುಭವದ ಅಸ್ತವ್ಯಸ್ತ ಸ್ಥಿತಿಯನ್ನು ಅಡಿಗರು, ಗಡಿಯಾರವನ್ನು ರಿಪೇರಿಗೆ ಬಿಚ್ಚಿ ಅದರೆದುರು ಕೂತವನು ಅವಸ್ಥೆಯ ಪ್ರತೀಕದಲ್ಲಿ ಚಿತ್ರಿಸಿದ್ದಾರೆ –

ಈಗ ಲೋಕ ಅಸ್ತವ್ಯಸ್ತ. ಗಡಿಯಾರ
ಬಿಚ್ಚಿ ಯಂತ್ರೋಪಯಂತ್ರಗಳ ಚೆಲ್ಲಾಪಿಲ್ಲಿ
ಚೆಲ್ಲಿ ಕೈಕಟ್ಟಿ ಕುಳಿತ ರಿಪೇರಿಯವನಂತೆ
ಯಾವ ತಿರುಗಣಿ ಮೊಳೆಯನಲ್ಲಿ ಹಾಕಲಿ ? ಮತ್ತೆ ಈ
ಸುರುಳಿ ತಂತಿಯನ್ನೆಲ್ಲಿ ತುರುಕಲಿ ?
ಗಡಿಯಾರವಿದೆ, ಯಂತ್ರವಿದೆ, ಎಲ್ಲ ಇವೆ, ಇಲ್ಲ
ಸಾವಯವ ಶಿಲ್ಪದ ಸಮಗ್ರೀಕರಣ ಬಲ.
(ಶರದ್ಗೀತೆ: ಸಮಗ್ರ ಕಾವ್ಯ ಪು. ೩೦೨)

ಇದು ಅಸ್ತವ್ಯಸ್ತ ಅನುಭವ ದ್ರವ್ಯವನ್ನು, ಅಭಿವ್ಯಕ್ತಿಯೊಳಕ್ಕೆ ತರುವ ಮುನ್ನಿನ ಕವಿಯ ಚಡಪಡಿಕೆ. ಈ ಎಲ್ಲ ಅನುಭವಗಳನ್ನು ಹಿಡಿದು ಕಟ್ಟುವ ‘ಸಾವಯವ ಶಿಲ್ಪದ ಸಮಗ್ರೀಕರಣಬಲ’ ಇಲ್ಲದ ಹೊರತು, ಅನುಭವಕ್ಕೆ ತಕ್ಕ ಆಕಾರ ದೊರೆಯದು. ಇದು ಎಲ್ಲ ಕವಿಗಳ ಸಮಸ್ಯೆಯೂ ಹೌದು. ಪು.ತಿ.ನ. ಅವರ ಪ್ರಕಾರ ಅದೊಂದು ಭಯದ ಹಾಗೂ ಸಂತೋಷದ ಸಂದರ್ಭ –

ಬಳ್ಳಿಯೊಡಲ ಕುಸುಮದಂತೆ
ಹದುಗಿದೆನ್ನ ಗೀತವು
ಮೆಲ್ಲನೊಡೆದು ಬರುವುದೆಂದು ?
ಎಂದು ನಲಿವೆ ಬೆದರುವೆ
(ಹಣತೆ : ಪು. ೧)

ಎನ್ನುತ್ತಾರೆ ಪು.ತಿ.ನ. ಕವನ ಕವಿಯ ಪಾಲಿಗೆ ಸಹಜವಾದ ಕ್ರಿಯೆ-ಬಳ್ಳಿಯೊಳಗಿರುವ ಹೂವು ಅರಳುವಂತೆ. ಹೀಗೆ ಕವಿಯೊಳಗೆ ಹುದುಗಿರುವ ಈ ಗೀತ ಮೆಲ್ಲನೆ ಒಡೆದು ಬರುವ ಕ್ರಿಯೆ, ಸಂತೋಷದ್ದು ಮಾತ್ರವಲ್ಲ, ಆತಂಕದ್ದು ಕೂಡ. ಗಂಗಾಧರ ಚಿತ್ತಾಲರು ಇದು ಒಂದು ಯಾತನೆಯ ಸಂದರ್ಭ ಎಂದು ವರ್ಣಿಸುತ್ತಾರೆ,

ಭಾವ ಭಾವ ಬೇಡುತಿಹುದು
ಹಾಡಿನಂಥ ಮಾತನೆ,
ಇಲ್ಲದಿರಲು ಮರಣದಂಥ
ಮೂಕ ಮೌನ ಯಾತನೆ
(ಕಾಲದ ಕರೆ : ಪು. ೧)

ಕುವೆಂಪು ಅದರ ಪಾಲಿಗೆ ಇದೊಂದು ‘ಉಭಯ ಸಂಕಟ’ದ ಸಂದರ್ಭ, ಯಾಕೆಂದರೆ –

ಹೇಳಿದರೆ ಹಾಳಾಗುವುದೋ
ಈ ಅನುಭವದ ಸವಿಯು
ಹೇಳದಿರೆ ತಾಳಲಾರನೊ ಕವಿಯು
(ಪಕ್ಷಿಕಾಶಿ, ಪು. ೩)

ಬಂಡಾಯ ಕವಿ, ಜಂಬಣ್ಣ ಅಮರಚಿಂತ ಅವರ ಮಾತಿನಲ್ಲಿ ಹೇಳುವುದಾದರೆ –

ಚದುರಿದ ಶಬ್ದಗಳನ್ನು ಸಂಚಯಿಸಿ
ವಾಕ್ಯದ ಅರ್ಥ ತುಂಬುವುದು ಹೇಗೆ?
ವಿವಿಧ ವರ್ಣಗಳಲ್ಲಿ ವಿಭಜನೆಗೊಂಡ
ಮೂಲವರ್ಣವನ್ನು ಕಾಣುವುದು ಹೇಗೆ ?
ಕ್ಷರವಾಗುತ್ತಿರುವ ಬದುಕನ್ನು ಅಕ್ಷರವಾಗಿಸುವುದು ಹೇಗೆ ?
ಅಕಾವ್ಯ ಅಧೋಜಗತ್ತನ್ನು ಕಾವ್ಯವಾಗಿಸುವುದು ಹೇಗೆ?
(ಬಂಡಾಯ ಕಾವ್ಯ ಪು. ೧೨೧)

ಅಭಿವ್ಯಕ್ತಿ ಪೂರ್ವದ ಈ ಅನುಭವದ ಸ್ವರೂಪವನ್ನು ಬೇಂದ್ರೆಯವರ ‘ಪ್ರಳಯ – ಸೃಷ್ಟಿ’ ಎಂಬ ಸಾನೆಟ್ ತುಂಬ ಸೊಗಸಾಗಿ ವರ್ಣಿಸುತ್ತದೆ –

ಹೊಗೆ ಮೋಡ ಹಿಂಜಿ ಕಣ್ಮರೆಯಾಗುವಂತೆ, ನೆನ-
ಸಿದ ರೂಪ ಹುಡಿಯಾಗುತಿದೆ; ಮಬ್ಬು ಕವಿದು ಬರು-
ತಿದೆ; ಸ್ವಪ್ನ ಲೋಕದೊಳು ಆಕಾರ ಪ್ರಳಯವಿರು-
ವಂತೆ, ತುಂಬಿದೆ ನಿರಾಕಾರ ತಮ ಚಿತ್ತಘನ
ನಿಬಿಡವನ : ಹೊತ್ತುಗೊತ್ತಿಲ್ಲ; ಮಿಸುಗುಡದೆ ಮನ
ತನ್ನ ನುಂಗಿದೆ ತಾನು. ಯಾವ ಲೋಕವೊ ಇದಿರು ?
ಸೃಷ್ಟಿಯಿಲ್ಲದ ದೃಷ್ಟಿ, ಚಿತ್ರ ! ನಿಶ್ಚಿತ್ರ ಇರು
ವೆನೊ ನಾನು ? ಇಹುದೇನು? ಬರಿಬಯಲನಿರ್ವಚನ
(ಉಯ್ಯಾಲೆ, ಪು. ೪)

ಇದೊಂದು ಅನುಭವಗಳ ‘ಪ್ರಳಯ’ ಸ್ಥಿತಿ. ಇದೊಂದು ಅನಿರ್ವಚನೀಯವಾದ, ಅಸ್ತವ್ಯಸ್ತತೆಯ ದಿಗ್‌ಭ್ರಮೆಗೊಳಿಸುವ ಒಳ ಜಗತ್ತು. ಈ ಒಳಜಗತ್ತಿನ ಪ್ರಳಯದಿಂದಲೇ ಸೃಷ್ಟಿ. ವಾಸ್ತವವಾಗಿ ಈ ಪ್ರಳಯ ಜಗತ್ತು, ಮನುಷ್ಯನ, ಇಲ್ಲಿ ಕವಿಯ-ಅಜ್ಞಾತವಲಯ (World of unconcious). ಕವಿತೆ ಹುಟ್ಟುವುದು, ಕೇವಲ ಮೇಲ್ಪದರದ ಅನುಭವಗಳಿಂದ ಅಲ್ಲ. ಆತನ ಆಳವಾದ ಅಜ್ಞಾತದ ತಲಾತಲದಿಂದ. ಇದು ಅಡಿಗರು ವರ್ಣಿಸುವ ‘ಭೂತ’ವೂ ಹೌದು, ಅದು –

‘ನೀರ ಮೇಲಕ್ಕೊಂದು ಮಡಿ
ಕೆಳಕ್ಕೇಳು ಮಂಜಿನ ಶಿಖರಿ,
(ಸಮಗ್ರ ಕಾವ್ಯ : ಪು. ೨೯೩)

ಈ ಅಜ್ಞಾತವೆನ್ನುವುದು ಒಂದು ಮಹಾ ಮೌನದ ಕಡಲು-ರಾಮಚಂದ್ರಶರ‍್ಮರ ಪ್ರಕಾರ,

ಮಾತನ್ನೆ ಕಬಳಿಸಿದ ಈ ಸಮುದ್ರ ಮೌನಕ್ಕೆ
ಮತ್ತೆ ಮತ್ತೆ ದಾಳಿ ಹೂಡಲೆ ಬೇಕು.
(ಮಾತು ಮಾಟ : ಸಮಗ್ರ ಕಾವ್ಯ ಪು. ೨೭೯)

ಇದು ಕವಿಯ ಕೆಲಸ. ಈ ಸಮುದ್ರಮೌನದೊಳಗೆ ಮುಳುಗಿ ತಳಮಳದ ತಳದಿಂದ ಆರಿಸಿ ತಂದ ಚಿಪ್ಪುಗಳನ್ನು ಪರೀಕ್ಷಿಸಿ, ಎಸೆದು, ಮತ್ತೆ ಮುಳುಗಿ ತಂದು ಮತ್ತೆ ಎಸೆಯುವ ಈ ಸಂದರ್ಭದಲ್ಲಿ ಯಾವುದೋ ಒಂದರಲ್ಲಿ ‘ಸಮುದ್ರಸೋಸಿ ನೀಲಿ ಘನಿಸಿದ ಹಾಗೆ’ ಒಂದು ಆಣಿ ಮುತ್ತು ದೊರೆತರೂ ದೊರೆಯಬಹುದು. ಅದು ಅವನವನ ಅದೃಷ್ಟ. ಆದಕಾರಣ ಕಾವ್ಯಾಭಿವ್ಯಕ್ತಿ ಅನ್ನುವುದು, ಅನುಭವವನ್ನು ಮಾತಿನಲ್ಲಿ ಸೆರೆಹಿಡಿಯುವ ಸಾಹಸ.

‘ಒಂದೊಂದು ಕವನವೂ ಭರವಸೆಯ ವ್ಯವಸಾಯ
ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ
(ಸಮಗ್ರ ಕಾವ್ಯ ಪು. ೨೭೯)

ಮಾತಿನಾಚೆಯ ಅನುಭವವನ್ನು ಮಾತಿನೊಳಗೆ ಹಿಡಿದು ಕಟ್ಟುವ ಅಭಿವ್ಯಕ್ತಿ- ಮೂಲತಃ ಒಂದು ಭಾಷೆಯ ಸಂದರ್ಭದಲ್ಲಿ ನಡೆಯುವ ಕೆಲಸ. ಈ ಕ್ರಿಯೆಯ ಸ್ವರೂಪವನ್ನು ಕುರಿತ ಅಂದಿನ ಗ್ರಹಿಕೆಗಳು ಆಧುನಿಕ ಕನ್ನಡದ ಕವಿತೆಗಳಲ್ಲಿ ಅಭಿವ್ಯಕ್ತವಾಗಿವೆ. ಇಲ್ಲಿಯೂ ಈ ಕುರಿತು ಮುಖ್ಯವಾದ ವ್ಯತ್ಯಾಸಗಳಿರುವುದು ನವೋದಯ ಹಾಗೂ ನವ್ಯ ಕವಿಗಳ ನಿಲುವುಗಳಲ್ಲಿ.

ನವೋದಯ ಕವಿಗಳ ಪಾಲಿಗೆ ಕಾವ್ಯಾಭಿವ್ಯಕ್ತಿ ಎನ್ನುವುದು, ತೀರಾ ಸಹಜವಾದ ಕ್ರಿಯೆಯಾಗಿದೆ. ಈ ಮಾರ್ಗದ ಮುಖ್ಯವಾದ ಕವಿಗಳ ಬರೆಹವೆಲ್ಲ ಒಂದು ಬಗೆಯ ಅನಾಯಾಸನಿರ್ಮಿತಿಗಳಂತೆಯೆ ತೋರುತ್ತವೆ. ಅವರಿಗಿದ್ದ ಭಾಷಾಪರಂಪರೆಯ ಅರಿವು, ವಿವಿಧ ಕವಿಗಳ ಅಭಿವ್ಯಕ್ತಿಯ ಮಾದರಿಗಳ ಪರಿಚಯ ಮತ್ತು ಸತತಾಭ್ಯಾಸ ಪ್ರಯತ್ನ ಇತ್ಯಾದಿಗಳಿಂದ ಅವರು ಭಾಷೆಯನ್ನು ಒಂದು ರೀತಿಯಲ್ಲಿ ವಾಚೋವಿಧೇಯವನ್ನಾಗಿ ಮಾಡಿಕೊಂಡಂತೆ ಕಾಣುತ್ತದೆ. ಕಾವ್ಯದ ಬಗ್ಗೆ ಅಥವಾ ಪ್ರತಿಭೆಯ ದೈವಿಕತೆಯ ಬಗ್ಗೆ ಇದ್ದ ನಂಬಿಕೆಯಿಂದಲೋ ಏನೋ –

ಪದಗಳೆಂಬ ಮಣಿಗಳೆಲ್ಲ
ಭಾವವೆಂಬ ದಾರದಲ್ಲಿ
ತಮಗೆ ತಾವೆ ಕೋದುಕೊಂಡು ಕುವೆಂಪು
(ಕೊಳಲು ; ಪು. ೯)

ಕವಿತೆಯಾಗುವ ವಿಸ್ಮಯವನ್ನು ಅನುಭವಿಸಬಲ್ಲವರಾಗಿದ್ದರು. ಬೇಂದ್ರೆಯವರ ಪಾಲಿಗೆ, ಕಾವ್ಯ ಒಂದು ಲೀಲೆ; ಅದೊಂದು ಅದ್ಭುತ ಸೃಷ್ಟಿ. ಭೃಂಗದ ಬೆನ್ನೇರಿ ಕಲ್ಪನಾ ವಿಲಾಸವು ತನಗೆ ತಾನೇ ಸಹಜ ಪ್ರಾಸವನ್ನು ಪಡೆದುಕೊಳ್ಳುತ್ತಾ ಮಾತು ಮಾತು ಮಥಿಸಿ ಬಂದ ನಾದದ ನವನೀತವಾಗುವ ಪರಿಯನ್ನು ಅವರ ಸುಪ್ರಸಿದ್ಧ ಕವಿತೆಯಾದ ‘ಭಾವಗೀತ’ವು ಅಮೋಘವಾಗಿ ವರ್ಣಿಸುತ್ತದೆ. ಕವಿತೆ ಒಂದು ಗಾರುಡಿ. ಅಷ್ಟೇ ಅಲ್ಲ ಅದೊಂದು ಮಂತ್ರ ಅಥವಾ ಮಾಟ, Magic ಅನ್ನು ಅರ್ಥದಲ್ಲಿ –

ಇದು ಮಂತ್ರ; ಅರ್ಥಕೊಗ್ಗದ ಶಬ್ದಗಳ ಪವಣಿಸುವ ತಂತ್ರ
ತಾನೆ ತಾನೆ ಸಮರ್ಥ ಛಂದ ; ದೃಗ್ಬಂಧ, ದಿ –
ಗ್ಬಂಧ, ಪ್ರಾಣವ ಕೆಚ್ಚು ಕೆತ್ತಿ ರಚಿಸಿದೆ; ಉಸಿರ
ಹೆದೆಗೆ ಹೂಡಿದ ಗರಿಯು ನಿರಿಯಿಟ್ಟು ಬರು
ತಿದೆ ತೂರಿ ಲೀಲೆಯಲನಾಯಾಸ, ಗರುಡನಂ
ತೆರಗಿ ಬಂದಿತು.
(ಉಯ್ಯಾಲೆ, ಗಾರುಡಿಗೆ, ಪು. ೩೨)

ಇದು ಅಭಿವ್ಯಕ್ತಿಯ ರೀತಿ. ಅದೊಂದು ಗಾರುಡಿ. ಶಬ್ದಕ್ಕೆ ಒಗ್ಗದ ಅರ್ಥಗಳನ್ನು ಹಿಡಿದು ಪವಣಿಸುವ ತಂತ್ರ, ತನಗೆ ತಾನೆ ಸಮರ್ಥ ಛಂದೋರೂಪವನ್ನು ಪಡೆದುಕೊಂಡು, ಹೆದೆಗೆ ಹೂಡಿದ ಬಾಣದಂತೆ ನೆಟ್ಟಗೆ ಗುರಿಯ ಕಡೆ ಧಾವಿಸುವ, ಅಥವಾ ಗರುಡನಂತೆ ಎರಗಿಬರುವ, ಒಂದು ಅದಮ್ಯವಾದ ಸಹಜಕ್ರಿಯೆ. ಅದನ್ನು ದೈವದತ್ತ ಅನ್ನಬಹುದು; ಸ್ಫೂರ್ತಿಯ ಪರಿಣಾಮ ಎನ್ನಬಹುದು. ಆದರೆ ಅದೊಂದು ಅಪ್ರತಿಹತವಾದ ಸೃಷ್ಟಿ ಎಂಬುದಂತೂ ನಿಜ.

ಆದರೆ ನವ್ಯಕಾವ್ಯದ ಸಂದರ್ಭದ ಅಭಿವ್ಯಕ್ತಿಯ ಕಲ್ಪನೆ, ಈಗ ಪ್ರಸ್ತಾಪಿಸಿದ ವಿಚಾರಕ್ಕಿಂತ ಭಿನ್ನವಾದದ್ದು. ಅದೊಂದು ರೀತಿಯಲ್ಲಿ ಅನುಭವವನ್ನು ಹೇಗೋ, ಭಾಷೆಯನ್ನೂ ಹಾಗೆಯೆ ಶೋಧನೆಗೆ ಒಳಗುಪಡಿಸಿಕೊಳ್ಳುವ ಒಂದು ಕ್ರಮವಾಗಿದೆ. ಅಗೆತದ ಮೂಲಕ ಚಿನ್ನದ ಅದುರನ್ನು ತೆಗೆದು, ಕರಗಿಸಿ ಕಾಯಿಸಿ ಬಡಿದು ತನ್ನ ಇಷ್ಟ ದೇವತಾ ವಿಗ್ರಹವನ್ನಾಗಿ ಮಾಡುವಂಥ ಒಂದು ಕಸುಬು. ಕವಿ ಮಾತಿನಿಂದಲೆ ತನ್ನ ಅಭಿವ್ಯಕ್ತಿಯನ್ನು ಸಾಧಿಸಿಕೊಳ್ಳುತ್ತಾನಾದರೂ, ಮಾತೇ ಕಾವ್ಯವಲ್ಲ; ಮಾತಿನಲ್ಲಿ ಯಾವುದು ಸಾಚಾ, ಯಾವುದು ಖೋಟಾ ಎಂಬುದನ್ನು ಪರೀಕ್ಷಿಸಬೇಕು ಎನ್ನುತ್ತಾರೆ ಅಡಿಗರು-

ಮಾತು ದೂರದ ಮಿಂಚು ತಂತಿಗಳಿರುವ ಹಾಗೆ
ಒದೆಸಿಕೊಳ್ಳದೆ ಒಳಗುಮಿಂಚು ಬಲ ತಿಳಿಯದು
ಆದ ಕಾರಣವೆ ಮಾತಿನಲ್ಲಿದು ಸಾಚ, ಇದು ಮೋಸ
ಎನ್ನುವುದು ಬಡಪಾಯಿ ಕಿವಿಗಲ್ಲ ಸುಲಭ
(ಸಮಗ್ರ ಕಾವ್ಯ : ಶರದ್ಗೀತ. ಪು, ೩೦೦)

ಯಾಕೆಂದರೆ

ಲಾಲಿ ಹಾಡಿ ತಟ್ಟಿ ಮಲಗಿಸುವ ನಿಯತಗತಿಯ ಕವಾತು
ನುಡಿಯೇ ಇಲ್ಲಿ
ತೊಂಬತ್ತಾರು ಪೈಸೆ. ಎಲ್ಲಾದರೊಂದೊಂದು ಸಲ ಮಾತ್ರ
ಜ್ಯೋತಿರ್ಲಿಂಗವಾಗಿ ಭುಗಿಲೆದ್ದು ಭೇದಿಸಿ ಸಿಗಿದು
ಬಗೆದು ಬೊಬ್ಬಿರಿಯುವುದು
ನಿಯಮದಾಚೆಗೆ ನಿಗಮದೆಡೆಗೆ
(ಮೂಲಕ ಮಹಾಶಯರು, ಪು. ೩೯)

ಈ ದೃಷ್ಟಿಯಿಂದ ಕಾವ್ಯನಿರ್ಮಿತಿ ‘ಅರಗದಂಥ ಕಚ್ಚಾಗಾಳಿ ಗೀಳುಗಳ ಕಾಗದದ ಮೇಲೆಲ್ಲ ಕಾರಿಕೊಳ್ಳುವ’ ಕ್ರಿಯೆಯಲ್ಲ. ನಿಜವಾದ ರತಿಕ್ರೀಡೆಯಂಥ ಸೃಜನ ಕ್ರಿಯೆ ಅದು; ‘ತುಂಬಿ ನವಮಾಸ ಬರುವ ಜೀವಪವಾಡ.’ ಈ ವಿಚಾರಗಳನ್ನು ಒಳಗೊಳ್ಳುವ ಅಡಿಗರ ಪ್ರಾರ್ಥನೆ ಎನ್ನುವ ಕವಿತೆ ಸೃಜನಕ್ರಿಯೆಯ ವ್ಯಾಖ್ಯಾನವಾಗಿದೆ. ಕೆ.ಎಸ್.ನ. ಅವರ ಪ್ರಕಾರ

ಆಳದನುಭವವನ್ನು ಮಾತು ಕೈಹಿಡಿದಾಗ
ಕಾವು ಬೆಳಕಾದಾಗ ಒಂದು ಕವನ
(ಮಲ್ಲಿಗೆ ಮಾಲೆ, ಪು. ೪೨೬)

ಒಲವಿನ ಕವಿಯ ನಿಲುವಿಗೆ ತಕ್ಕ ಸೂತ್ರ. ದಾಂಪತ್ಯದ ರೂಪಕದಲ್ಲಿಯೆ ಭಾವ ಭಾಷೆಗಳ ಬಾಂಧವ್ಯ ಇಲ್ಲಿ ಸೂಚಿತವಾಗಿದೆ. ಈ ಸಂದರ್ಭದಲ್ಲಿ ಕವಿತೆ ಹುಟ್ಟುವ ಬಗೆಯನ್ನು ಕುರಿತು ಗಂಗಾಧರ ಚಿತ್ತಾಲರು ಬರೆದಿರುವ ‘ಕವನ’ ಎಂಬ ಹೆಸರಿನ ಪದ್ಯ ಗಮನಿಸತಕ್ಕದ್ದಾಗಿದೆ. ಕವಿತೆ ಹುಟ್ಟುವ ಮೂರು ಹಂತಗಳು ಹೀಗಿವೆ :

ಹತ್ತು ದಿನದಿಂದ ಹುಡುಕಾಟ ಮಿಲಿ ಮಿಲಿ ತಡಕಾಟ
ಬಾಯ್ಗೆ ಬರದು,
ಮುಳ್ಳೂರಿ ಕಾಡಿಸುವ ಬಿತ್ತದಂತಹದೇನೋ
ಮೊಳಕೆ ತೋರದು
……………………
ಹೊಸ್ತಿಲಂಚಿಗೂ ಬಂದು ಮುಖ ಮರೆಸಿ ತಡವರಿಸುವೀ ಇದಕೆ
ಕತ್ತಲವಾಸ ಮುಗಿಯುವುದು ಯಾವಾಗ ?

ಇದು ಮೊದಲ ಹಂತ. ಕವಿತೆ ಹುಟ್ಟುವ ಕ್ರಿಯೆ ಒಂದು ರೀತಿಯ ಹುಡುಕಾಟದ, ತಡಕಾಟ ತಳಮಳ. ಹೇಳಬೇಕು ಅನ್ನುವುದು ಬಾಯಿಗೇ ಬರುವುದಿಲ್ಲ. ನೆಲದಾಳದಲ್ಲಿರುವ ಬೀಜ, ಮಣ್ಣಿನ ಎದೆಯನ್ನು ಬಿರಿಯುವಾಗ ಆಗುವಂಥ ಒಂದು ವೇದನೆ. ಆದರೂ ಅದು ಮೊಳಕೆಯಾಗಿ ಕಾಣಿಸದೆ ಇರುವಂಥ ಸ್ಥಿತಿ.

ಈ ಅನುಭವ, ಹೊಸ್ತಿಲವರೆಗೂ ಬರುತ್ತದೆ; ಸ್ವಲ್ಪ ಮುಖ ತೋರಿಸಿ ಮರೆಯಾಗುತ್ತದೆ. ಇದಕ್ಕೆ ಕತ್ತಲವಾಸ ಮುಗಿಯುವುದು ಯಾವಾಗ ? ವಾಸ್ತವವಾಗಿ ಅಜ್ಞಾತದ ಕತ್ತಲಿನಿಂದ ಅನುಭವಗಳು ಅಭಿವ್ಯಕ್ತಿಯನ್ನು ಪಡೆಯುವ ಕ್ರಿಯೆ ಯಾವಾಗ ಎನ್ನುವುದನ್ನು ಯಾರೂ ಹೇಳಲಾರರು, ಎಂಬುದನ್ನು ಒಂದು ಪ್ರಶ್ನೆಯಾಗಿ ಇಲ್ಲಿ ಮಂಡಿಸಲಾಗಿದೆ. ಕವಿತೆ ಮುಂದುವರಿಯುತ್ತದೆ –

ಅಲೆ, ಉಲಿ, ಉಲುಹು, ಅಲ್ಲಲ್ಲಿ
ಮಿನುಗು ಮಾತಿನ ಮಿಸುನಿ ಹೊಳಪು
ಒಮ್ಮೆಲೇ
ತಾನಾಗಿ ನಾಲ್ಕಾರು ನುಡಿ ಸಾಲು

ಇದು ಎರಡನೆಯ ಹಂತ. ಇಲ್ಲಿ ‘ಕಂಡದ್ದು ಉಂಡದ್ದು ಅನಿಸಿದ್ದು ಕನಸಿದ್ದು’ ಮಾತಿನ ತೆಕ್ಕೆಗೆ ಸಿಕ್ಕುವ, ಸಿಕ್ಕಿಸಿಕೊಳ್ಳುವ ಒಂದು ನಿರಂತರ ‘ಮಾತುಮಿದ್ದುವ ಮಸಕ’,

ಇನ್ನು ಮುಂದಕ್ಕೆ –

‘ಬಂದಾದ ಮೇಲೆ ಬರಿ ಬಂದುದಷ್ಟೇ ಗೊತ್ತು
ಯಾಕೆ ಬಂತು? ಹ್ಯಾಗೆ ಬಂತು? ಅದರ ಗತ್ತು ಗಮ್ಮತ್ತು
ಎಲ್ಲ ಉಹಾಪೋಹ’

ಕಡೆಗೂ ಕಾವ್ಯನಿರ್ಮಿತಿಯ ರಹಸ್ಯ ಕವಿಗೂ ಗೊತ್ತಾಗುವುದಿಲ್ಲ, ತಾಯ ಬಸಿರಲ್ಲಿ ಪಿಂಡವಾಗಿ ಆಕಾರಗೊಳ್ಳುವ ಮಗು, ಹೆರಿಗೆಯಾಗುವವರೆಗೂ ತಾಯಿಗೆ ಹೇಗೆ ತಿಳಿಯುವುದಿಲ್ಲವೋ ಹಾಗೆ.

ಇಲ್ಲಿಗೆ ಕವಿತೆಯ ಹುಟ್ಟು ಮುಗಿಯಿತು – ಒಂದರ್ಥದಲ್ಲಿ ಮಾತ್ರ. ಆದರೆ ಇದರ ಪ್ರಯಾಣಕ್ಕೆ ಇನ್ನೂ ಒಂದು ಆಯಾಮವಿದೆ. ಚಿತ್ತಾಲರ ಕವಿತೆ, ಆ ನಾಲ್ಕನೆಯ ಹಂತವನ್ನು ಚಿತ್ರಿಸುತ್ತದೆ. ಅದೆಂದರೆ, ಈ ಕವಿತೆ, ಮತ್ತೆ ಓದುಗನ ಮನಸ್ಸಿನಲ್ಲಿ ಪಡೆಯುವ ಪುನರ್ಭವದಲ್ಲಿ ಅದರ ಸಾರ್ಥಕತೆ ಇದೆ ಎನ್ನುವುದು –

ಈ ಮುಖೋದ್ಗತ ನಿನ್ನ ಹೃದ್ಗತವೆ ಆದ ದಿನ
ಸುದಿನ.
ಆವರೆಗ        ಇದು
ತಕ್ಕಮಣ್ಣಿನ ತೇವಕ್ಕಾಗಿ ಕಾದೇ ಇರುವ
ಬೀಜ

ಅಂದರೆ, ಕಾವ್ಯ ಕೂಡ ಕವಿಯ ಅನುಭವದ ಬೀಜ; ಮತ್ತೆ ಇದು ಸಹೃದಯರ ಮನಸ್ಸಿನ ಮಣ್ಣಿನ ತೇವದಲ್ಲಿ ಬಿದ್ದು, ತಕ್ಕ ಆಕಾರವನ್ನು ಪಡೆದುಕೊಳ್ಳಬೇಕು. ಅಂದರೆ ಕಾವ್ಯಾಸ್ವಾದ ಅನ್ನುವುದು ಕೂಡ ಮತ್ತೊಂದು ಸೃಜನ ಕ್ರಿಯೆಯೇ.

ಕವಿತೆ ಇಷ್ಟೇಯೆ? ಕವಿಯಿಂದ ರೂಪುಗೊಂಡು, ಸಹೃದಯಾನುಭವದಲ್ಲಿ ಪರ‍್ಯವಸಾನವಾಗುವ ಅನುಭವವಷ್ಟೆ ಕವನವೆ? ಅಲ್ಲ. ಕವನ, ಇನ್ನೂ ಬರೆಯದ ಕವನ, ಬರೆಯಬೇಕಾದ ಕವನ ಅನಂತವಾಗಿದೆ. ಅದೇ ಈ ಜೀವನ. ಕವಿ. ಕೆ.ಎಸ್.ನ. ಹೇಳುತ್ತಾರೆ;

ಎಲ್ಲಿ ನಡೆದರೂ ಎಲ್ಲಿ ನಿಂತರೂ ತಲೆಯ ಮೇಲೆ ಗಗನ
ಏನು ನಡೆದರೂ ಅದರ ಕೆಳಗೆ-ಇದು ನಾನು ಕಂಡ ಕವನ
(ಮಲ್ಲಿಗೆ ಮಾಲೆ : ಪು. ೩೯೦)

ದಲಿತ ಕವಿ ಸಿದ್ದಲಿಂಗಯ್ಯ ಹೇಳುತ್ತಾರೆ :

ನನ್ನ ಜನದೊಡನೆ ನಾನಾಡಿದ ಮಾತು
ನಾನು ಕೊಡುವ ಕವನ
ನನ್ನ ಜನರ ನಾ ನೋಡಿದ ರೀತಿ
ನನ್ನ ಒಡಲ ಕವನ.
(ಬಂಡಾಯ ಕಾವ್ಯ : ಪು. ೩೯೨)