(ಕೆಲವು ಪ್ರತಿಕ್ರಿಯೆಗಳು)

ಕಾವ್ಯ ನಿರ್ಮಿತಿ ಮತ್ತು ಕಾವ್ಯವನ್ನು ಕುರಿತ ಚಿಂತನೆ ಅಥವಾ ಚರ್ಚೆ ಈ ಎರಡೂ ತಮಗೆ ತಾವೇ ಪ್ರತ್ಯೇಕವಾದ ಚಟುವಟಿಕೆಗಳಾದರೂ, ಇವು ಒಂದಕ್ಕೊಂದು ಪೂರಕವಾದ ವಿಷಯಗಳಾಗಿವೆ. ಕಾವ್ಯ ನಿರ್ಮಿತಿಯಲ್ಲಿ ತೊಡಗುವವನು ಕವಿ; ಕಾವ್ಯವನ್ನು ಕುರಿತ ಚಿಂತನೆಯಲ್ಲಿ ಅಥವಾ ಚರ್ಚೆಯಲ್ಲಿ ತೊಡಗುವವನು ಆಲಂಕಾರಿಕ ಅಥವಾ ಲಾಕ್ಷಣಿಕ; ಇವತ್ತಿನ ಪರಿಭಾಷೆಯಲ್ಲಿ ಹೇಳುವುದಾದರೆ ವಿಮರ್ಶಕ. ಕವಿಯ ಹಾಗೂ ಸಾಹಿತ್ಯ ಚಿಂತಕನ ಚಟುವಟಿಕೆಗಳು ಮೂಲಭೂತವಾಗಿ ಬೇರೆಬೇರೆಯೆ ಆದ ಸಾಹಿತ್ಯ ಪ್ರಕಾರಗಳಿಗೆ ಕಾರಣವಾದರೂ, ಈ ಎರಡೂ ಕೆಲವರಲ್ಲಿ ತಕ್ಕ ಪ್ರಮಾಣದಲ್ಲಿ ಬೆರೆತುಕೊಂಡಿರುವುದೂ ಉಂಟು. ಕವಿಯಲ್ಲಿ ವಿಮರ್ಶಕನ ಲಕ್ಷಣಗಳೂ, ವಿಮರ್ಶಕನಲ್ಲಿ ಕವಿಯ ಲಕ್ಷಣಗಳೂ ಇದ್ದರೂ, ಯಾರಲ್ಲಿ ಈ ಎರಡರಲ್ಲಿ ಒಂದು ಅಧಿಕ ಪ್ರಮಾಣದಲ್ಲಿ ಸ್ಥಾಯಿಯಾಗುತ್ತದೆಯೋ, ಅಂಥವನು ಆಯಾ ಪ್ರಕಾರಗಳಲ್ಲಿ ನೆಲೆ ನಿಂತವನಾಗುತ್ತಾನೆ. ಭಾರತೀಯ ಕಾವ್ಯಮೀಮಾಂಸೆಯ ಚರಿತ್ರೆಯನ್ನು ನೋಡಿದರೆ ಆನಂದವರ್ಧನ, ರಾಜಶೇಖರ, ಜಗನ್ನಾಥರಂಥ ಮಹತ್ವದ ಆಲಂಕಾರಿಕರು ಪ್ರಧಾನವಾಗಿ ಕಾವ್ಯ ಚಿಂತಕರಾಗಿದ್ದು, ಕಾವ್ಯಮೀಮಾಂಸೆಗೆ ಮೌಲಿಕವಾದ ಕೊಡುಗೆಗಳನ್ನು ನೀಡಿದ್ದರೂ ಕಾವ್ಯ ಕ್ಷೇತ್ರಕ್ಕೂ ಅವರು ಗಣನೀಯವಾದ ಕೃತಿಗಳನ್ನು ಕೊಟ್ಟವರಾಗಿದ್ದಾರೆ. ಹಾಗೆಯೆ ಎಷ್ಟೋ ಶ್ರೇಷ್ಠ ಕವಿಗಳೂ, ತಮ್ಮ ಕಾವ್ಯ ನಿರ್ಮಿತಿಯ ಸಂದರ್ಭದಲ್ಲಿ ಪ್ರಾಸಂಗಿಕವಾಗಿ ಕಾವ್ಯವನ್ನು ಕುರಿತು ತಮ್ಮದೇ ಆದ ಚಿಂತನೆಗಳನ್ನೂ, ಕಲ್ಪನೆಗಳನ್ನೂ ಅಭಿವ್ಯಕ್ತಪಡಿಸಿದ್ದಾರೆ ಮತ್ತು ಸಮಕಾಲೀನವಾದ ಸಾಹಿತ್ಯಕ ವಾಗ್ವಾದಗಳನ್ನು ಕುರಿತು ತಮ್ಮ ಪ್ರತಿಕ್ರಿಯೆಗಳನ್ನು ದಾಖಲು ಮಾಡಿದ್ದಾರೆ. ಕಾವ್ಯವನ್ನು ಬರೆಯುವುದು ಕವಿಯಾದವನ ಮೊದಲ ಕಾಳಜಿಯೆ ಹೊರತು ಕಾವ್ಯ ವಿಚಾರವನ್ನು ಕುರಿತು ಚರ್ಚೆಗೆ ತೊಡಗುವುದಲ್ಲ; ಮತ್ತು ಯಾವ ನಿಜವಾದ ಕವಿಯೂ ಕಾವ್ಯವನ್ನು ಬರೆಯುವುದು ಹೇಗೆ ಎಂಬುದನ್ನು ಕುರಿತು ಮೊದಲು ಚಿಂತನೆಯಲ್ಲಿ ತೊಡಗಿ ಅನಂತರ ತನ್ನ ಕೃತಿ ರಚನೆಯನ್ನು ಪ್ರಾರಂಭಿಸುವುದಿಲ್ಲ. ಆದರೂ ಒಂದು ಕಾವ್ಯಪರಂಪರೆಯ ಹಾಗೂ ಭಾಷೆಯ ಸಂದರ್ಭದಲ್ಲಿ ನಿಂತು ತನ್ನ ಅಭಿವ್ಯಕ್ತಿಗಾಗಿ ಹಾತೊರೆಯುವ ಸೃಜನಶೀಲನಾದ ಕವಿಗೆ, ಕಾವ್ಯವನ್ನು ಕುರಿತು ಅವನದೇ ಆದ ಕೆಲವು ಕಲ್ಪನೆಗಳು ಹಾಗೂ ವಿಚಾರಗಳು, ಅವನ ಕೃತಿ ನಿರ್ಮಿತಿಯ ಹಿನ್ನೆಲೆಯಲ್ಲಿ ಇದ್ದೇ ಇರುತ್ತವೆ ಎಂಬ ಅಂಶವನ್ನು ತಳ್ಳಿಹಾಕುವಂತಿಲ್ಲ. ಅಲ್ಲದೆ ಪ್ರತಿಯೊಬ್ಬ ಕವಿಯ ಕಾವ್ಯಕಲ್ಪನೆಯ ಹಿಂದೆ, ಅದುವರೆಗೂ ಸಿದ್ಧವಾದ ಸುದೀರ್ಘ ಕಾವ್ಯ ಪರಂಪರೆಯೊಂದು ಇರುವಂತೆಯೆ, ಕಾವ್ಯ ಚರ್ಚೆಯನ್ನು ಕುರಿ ಪರಂಪರೆಯೂ ಇರುತ್ತದೆ. ಈ ದೃಷ್ಟಿಯಿಂದ ಹೇಳುವುದಾದರೆ ನಮ್ಮ ಪ್ರಾಚೀನ ಕನ್ನಡ ಕವಿಗಳ ಕಾವ್ಯ ನಿರ್ಮಿತಿಯ ಹಿಂದೆ, ಕನ್ನಡ ಹಾಗೂ ಸಂಸ್ಕೃತ-ಪ್ರಾಕೃತ ಕಾವ್ಯಪರಂಪರೆಯೂ ಮತ್ತು ಒಂದು ಸಾವಿರ ವರ್ಷಗಳ ಕಾಲಮಾನದಲ್ಲಿ ಆಲಂಕಾರಿಕರಿಂದ ನಡೆದ ಕಾವ್ಯ ಚರ್ಚೆಯನ್ನೊಳಗೊಂಡ ‘ಭಾರತೀಯ ಕಾವ್ಯಮೀಮಾಂಸೆ’ಯ ವಿಚಾರಧಾರೆಯೂ ಇದೆ. ಈ ಕಾವ್ಯ ಹಾಗೂ ಕಾವ್ಯ ಚರ್ಚೆಯ ಹಿನ್ನೆಲೆಯಲ್ಲಿ ನಮ್ಮ ಪ್ರಾಚೀನ ಕನ್ನಡ ಕವಿಗಳು ಉದ್ದಕ್ಕೂ ತಮ್ಮ ಕಾವ್ಯ ನಿರ್ಮಿತಿಯ ಸಂದರ್ಭದಲ್ಲಿ, ಕಾವ್ಯ ಸ್ವರೂಪವನ್ನು ಕುರಿತು, ತಮ್ಮ ಗ್ರಹಿಕೆಗಳನ್ನು, ಕಲ್ಪನೆಗಳನ್ನು, ಪ್ರತಿಕ್ರಿಯೆಗಳನ್ನು, ತಮ್ಮ ಕೃತಿರಚನೆಯ ಪ್ರಾಸ್ತಾವಿಕ ಹಂತಗಳಲ್ಲಿ ಅಭಿವ್ಯಕ್ತಪಡಿಸುವುದರ ಮೂಲಕ ಕಾವ್ಯಾಂತರ್ಗತ ಕಾವ್ಯ ಚರ್ಚೆಯೊಂದನ್ನು ಬೆಳೆಯಿಸಿದ್ದಾರೆ ಎನ್ನುವುದು ಒಂದು ವಿಶೇಷದ ಸಂಗತಿಯಾಗಿದೆ. ಈ ಬಗೆಯ ಕಾವ್ಯ ಚರ್ಚೆಯ ಪ್ರಸ್ತಾವನೆಗಳಲ್ಲಿ ನಮ್ಮ ಕನ್ನಡ ಕವಿಗಳು, ಬಹುಮಟ್ಟಿಗೆ ಭಾರತೀಯ ಕಾವ್ಯಮೀಮಾಂಸೆಯ ಪರಿಕಲ್ಪನೆ ಹಾಗೂ ಪರಿಬಾಷೆಗಳನ್ನೆ ಧಾರಾಳವಾಗಿ ಬಳಸಿಕೊಂಡರೂ, ಕಾವ್ಯ ನಿರ್ಮಿತಿಯ ಬಗ್ಗೆ ತಮ್ಮದೇ ಆದ ಹೊಳಹುಗಳನ್ನೂ ಪ್ರಕಟಿಸಿದ್ದಾರೆ. ಜತೆಗೆ ಅವರು ತಮ್ಮ ಹಿಂದಿರುವ ಕಾವ್ಯ ಪರಂಪರೆಯನ್ನೂ ಅದರ ನಿಯಂತ್ರಕ ಶಕ್ತಿಗಳನ್ನೂ ಕುರಿತು ತೋರುವ ಪ್ರತಿಕ್ರಿಯೆಗಳೂ ಮತ್ತು ದಾಖಲಿಸುವ ಸಮಕಾಲೀನ ಸಾಹಿತ್ಯಕ ಚರ್ಚೆಗಳೂ ತುಂಬ ಸ್ವಾರಸ್ಯವೂ, ಗಣನೀಯವೂ ಆಗಿವೆ. ಅದರಲ್ಲಿಯೂ ಕನ್ನಡ ಕಾವ್ಯದ ಮೇಲೆ ಆಕರ್ಷಕವೂ ದಟ್ಟವೂ ಆದ ಪ್ರಭಾವ ಮತ್ತು ಸವಾಲುಗಳನ್ನು ಒಡ್ಡಿದ ಸಂಸ್ಕೃತ ಕಾವ್ಯ ಪರಂಪರೆಯ ಹಿನ್ನೆಲೆಯಲ್ಲಿ, ಉದ್ದಕ್ಕೂ ಪ್ರಾಚೀನ ಕನ್ನಡ ಕವಿಗಳು ತಮ್ಮ ಕಾವ್ಯ ಭಾಷೆಯನ್ನು ಕುರಿತು ನಡೆಯಿಸಿದ ಚರ್ಚೆಯ ಸಂದರ್ಭದಲ್ಲಿ ನಿಷ್ಪನ್ನಗೊಂಡ ‘ಮಾರ್ಗ’ ಮತ್ತು ‘ದೇಸಿ’ಗಳನ್ನು ಕುರಿತ ಚಿಂತನೆಗಳು ಭಾರತೀಯ ಕಾವ್ಯಮೀಮಾಂಸೆಯ ‘ರೀತಿ ಸಿದ್ಧಾಂತ’ಕ್ಕೆ, ಕನ್ನಡವು ನೀಡಿದ ಕೊಡುಗೆಗಳಾಗಿವೆ.

ತುಂಬ ಸ್ವಾರಸ್ಯದ ಸಂಗತಿ ಎಂದರೆ, ಹಳಗನ್ನಡ ಕವಿಗಳಿಂದ ಪ್ರಾರಂಭವಾದ ಈ ಕಾವ್ಯಾಂತರ್ಗತ ಕಾವ್ಯ ಚರ್ಚೆ, ಹೊಸಗನ್ನಡ ಕವಿಗಳಲ್ಲಿಯೂ ಮುಂದುವರಿದಿದೆ ಎನ್ನುವುದು. ಆದರೆ ಪ್ರಾಚೀನ ಹಾಗೂ ಆಧುನಿಕ ಕಾವ್ಯ ಸಂದರ್ಭಗಳೊಳಗೆ ಈ ಕುರಿತು ಒಡೆದು ಕಾಣುವ ಒಂದು ವ್ಯತ್ಯಾಸವೆಂದರೆ, ಭಾರತೀಯ ಕಾವ್ಯಮೀಮಾಂಸೆಯ ತಿಳಿವಳಿಕೆಯಿಂದ ಪ್ರಾಚೀನ ಕನ್ನಡ ಕಾವ್ಯಗಳೊಳಗೆ ನಡೆದ ಈ ಕಾವ್ಯ ಚರ್ಚೆ ಆಯಾ ಕಾವ್ಯಗಳ ಪ್ರಾಸ್ತಾವಿಕ ಭಾಗಗಳಲ್ಲಿ, ಎಂದರೆ ತನ್ನ ಆಯ್ಕೆಯ ಕಥಾವಸ್ತುವಿನೊಳಕ್ಕೆ ಕವಿ ಪ್ರತಿಭೆ ಪ್ರವೇಶಿಸುವ ಮೊದಲಿನ ಹಂತಗಳಲ್ಲಿ ನಡೆದದ್ದಾಗುತ್ತಿತ್ತು. ಕವಿ ತಾನು ಆರಿಸಿಕೊಂಡ ವಸ್ತುಪರಂಪರೆಗೆ ಸಂಬಂಧಿಸಿದಂತೆ, ತನ್ನ ಕಾವ್ಯೋದ್ದೇಶವನ್ನು ಕುರಿತು, ತನ್ನ ಕೃತಿಯ ಭಾಷೆಯನ್ನು ಕುರಿತು, ತನ್ನ ವಯ್ಯಕ್ತಿಕ ಸಂಗತಿಗಳನ್ನು ಕುರಿತು, ಸತ್ಕಾವ್ಯ ಲಕ್ಷಣವನ್ನು ಕುರಿತು, ಅಸತ್ಕಾವ್ಯವನ್ನು ಕುರಿತು, ಅಕವಿಗಳನ್ನು ಕಾವ್ಯಕ್ಕೆ ಸುಮುಖರಲ್ಲದವರನ್ನು ಕುರಿತು ಪ್ರಸ್ತಾಪಿಸುವ ಮೂಲಕ ತನ್ನ ಕಾವ್ಯಕಲ್ಪನೆಯನ್ನೂ, ತನ್ನ ವಿಚಾರಗಳನ್ನೂ ಈ ಕಾವ್ಯ ಚರ್ಚೆ ಒಳಗೊಂಡದ್ದಾಗಿರುತ್ತಿತ್ತು. ಈ ಕಾವ್ಯ ಚರ್ಚೆಯೊಳಗಿನ ಸಂಗತಿಗಳು ಅಲಂಕಾರ ಶಾಸ್ತ್ರದಲ್ಲಿಯಂತೆ ಶುದ್ಧ ಶಾಸ್ತ್ರೀಯವಾಗದೆ ಸ್ವಲ್ಪಮಟ್ಟಿಗೆ ಕಾವ್ಯದ ಸ್ಪರ್ಶವನ್ನು ಪಡೆದುಕೊಂಡ ಅಭಿವ್ಯಕ್ತಿಗಳಾಗಿ, ಕಾವ್ಯದ ಚೌಕಟ್ಟಿನೊಳಕ್ಕೆ ಹೊದಿಕೊಳ್ಳುವ ಸ್ವರೂಪದವುಗಳಾಗಿವೆ. ಆದರೆ ಹೊಸಗನ್ನಡ ಕವಿಗಳಾಲ್ಲಾದರೊ, ಹಿಂದಿನ ಕಥನ ಸಂಪ್ರದಾಯದಿಂದ ಭಿನ್ನವಾದ, ಬಿಡಿಬಿಡಿಯಾದ ವ್ಯಕ್ತಿನಿಷ್ಠ ಕವನಾಭಿವ್ಯಕ್ತಿಗಳಲ್ಲಿ ಈ ಕಾವ್ಯಚಿಂತನೆ ಕೂಡಾ ಪ್ರಾಸಂಗಿಕವಾಗಿ ‘ಕಾವ್ಯವಸ್ತು’ವಾಗಿ ನಿರ್ವಹಣೆಗೊಂಡಿದೆ ಎನ್ನುವುದು ವಿಶೇಷದ ಸಂಗತಿಯಾಗಿದೆ. ಮತ್ತು ಆಧುನಿಕ ಕನ್ನಡದ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯಗಳೆಂಬ ಸಾಹಿತ್ಯ ಚಳುವಳಿಗಳ ಸಂದರ್ಭದ ಕವಿಗಳು ಅಂದಂದಿನ ನೆಲೆಗಳಲ್ಲಿ ನಿಂತು ಕಾವ್ಯವನ್ನು ಕುರಿತು ನಡೆಯಿಸಿದ ಚಿಂತನೆಗಳು ಆಯಾ ಮಾರ್ಗದ ದಿಕ್ಕು – ದೆಸೆ ಧೋರಣೆಗಳನ್ನು ನಿರೂಪಿಸುವ, ಮತ್ತು ತಮಗೆ ಹಿನ್ನೆಲೆಯಾದ ಸಾಹಿತ್ಯ ಸಂಪ್ರದಾಯಕ್ಕೆ ಪ್ರತಿಕ್ರಿಯಿಸಿದ ರೀತಿಯನ್ನು ಸ್ವಾರಸ್ಯವಾಗಿ ನಿರೂಪಿಸುತ್ತವೆ ಮತ್ತು ಬಹುಮಟ್ಟಿಗೆ ಈ ಚಿಂತನೆಗಳು, (ಹಿನ್ನುಡಿ – ಮುನ್ನುಡಿಗಳನ್ನು ಹೊರತುಪಡಿಸಿದರೆ) ಕವಿತೆಗಳ ಮೂಲಮಾನದಲ್ಲಿ ಅಭಿವ್ಯಕ್ತಿವಾಗಿವೆ. ಮತ್ತು ಒಂದರ್ಥದಲ್ಲಿ ಸೃಜನಶೀಲತೆಯನ್ನು ಅಥವಾ ಕಾವ್ಯರಹಸ್ಯವನ್ನು ಕುರಿತ ಒಳ್ಳೆಯ ಕವಿತೆಗಳಾಗಿಯೂ ರೂಪುಗೊಂಡವುಗಳಾಗಿವೆ. ಹಳಗನ್ನಡ ಕವಿಗಳಿಂದ ಪ್ರಾರಂಭವಾದ ಕಾವ್ಯಾಂತರ್ಗತ ಕಾವ್ಯ ಚರ್ಚೆಯ ವಿಶಿಷ್ಟ ಪರಂಪರೆಯೊಂದು ಹೊಸಗನ್ನಡ ಕವಿಗಳಲ್ಲಿಯೂ ಮುಂದುವರಿದಿರುವುದನ್ನು ನೋಡಿದರೆ, ಯಾವತ್ತೂ ಕಾವ್ಯವೇ ಸಾಹಿತ್ಯ ಚರ್ಚೆಯ ಕೇಂದ್ರವಾಗಿದೆ; ಮತ್ತು ಈ ಸಾಹಿತ್ಯಬಗೆಯ ಕಾವ್ಯಕೇಂದ್ರಿತ ಮೂಲಮಾನದಲ್ಲಿ ನಿಷ್ಪನ್ನವಾದ ಸಾಹಿತ್ಯ ತತ್ವಗಳೇ ಅಂದಂದಿನ ಸಾಹಿತ್ಯವನ್ನು ರೂಪಿಸುವ ಹಾಗೂ ನಿರ್ದೇಶಿಸುವ ನಿಲುವುಗಳಾಗಿವೆ – ಎಂದು ತೋರುತ್ತದೆ.

ಕಾವ್ಯ ನಿರ್ಮಿತಿ ಒಂದು ಸಾಹಿತ್ಯಪರಂಪರೆಯ ಹಿನ್ನೆಲೆಯಲ್ಲಿ ನಡೆಯುವ ಕ್ರಿಯೆಯಾದುದರಿಂದ, ಈ ಪರಂಪರೆಯ ವಿವಿಧ ಕಾಲಮಾನಗಳಲ್ಲಿ ತಮ್ಮ ಅಭಿವ್ಯಕ್ತಿಯನ್ನು ಕಂಡುಕೊಳ್ಳುವ ಕವಿಗಳು ತಾವು ನಿಂತ ಪರಂಪರೆಗೆ ಯಾವ ರೀತಿಯ ಪ್ರತಿಕ್ರಿಯೆಗಳನ್ನು ತೋರುತ್ತಾರೆ ಎನ್ನುವುದು ಅವರ ಕಾವ್ಯ ಕಲ್ಪನೆಯಲ್ಲಿ ಬಹುಮುಖ್ಯವಾದ ಸಂಗತಿಯಾಗಿದೆ. ಸುಮಾರು ಒಂದೂವರೆ ಸಾವಿರ ವರ್ಷಗಳ ಅವಧಿಯೊಳಗೆ, ಬಹುಮಟ್ಟಿಗೆ ಸಂಸ್ಕೃತ-ಪ್ರಾಕೃತ ಸಾಹಿತ್ಯ ಪರಂಪರೆಯ ಮತ್ತು ತನ್ನ ಪ್ರಾದೇಶಿಕ ಸಾಹಿತ್ಯ ಪರಂಪರೆಯ ಪ್ರಜ್ಞೆ ಮತ್ತು ಹಿನ್ನೆಲೆಯಲ್ಲಿ, ತನ್ನ ವಿಶಿಷ್ಟತೆ ಹಾಗೂ ಸ್ವೋಪಜ್ಞತೆಗಳನ್ನು ಕಾಯ್ದುಕೊಂಡ ಕನ್ನಡ ಕಾವ್ಯವು, ಹತ್ತೊಂಬತ್ತನೆಯ ಶತಮಾನದ ಕೊನೆಯ ಹೊತ್ತಿಗೆ, ಭಾರತೀಯ ಪುನರುಜ್ಜೀವನದ ಪರಿಣಾಮವಾಗಿ, ಪಶ್ಚಿಮದ ಪ್ರೇರಣೆ ಪ್ರಭಾವಗಳಿಂದ ಪಡೆದುಕೊಂಡ ಮರುಹುಟ್ಟಿನ ಸಂದರ್ಭದಲ್ಲಿ, ತನ್ನ ಅದುವರೆಗಿನ ಕಥನ ಪರಂಪರೆಯಿಂದ ಹಠಾತ್ತನೆ ವ್ಯಕ್ತಿನಿಷ್ಠ ಕಾವ್ಯಾಭಿವ್ಯಕ್ತಿಯ ಕಡೆಗೆ ಹೊರಳಿದ್ದು ಕನ್ನಡ ಕವಿಗಳ ಕಾವ್ಯ ಕಲ್ಪನೆಯಲ್ಲಿ ಕಂಡುಬರುವ ಬಹುಮುಖ್ಯವಾದ ಬದಲಾವಣೆಯಾಗಿದೆ. ಇದರಿಂದ ಸೂಚಿತವಾಗುವುದೇನೆಂದರೆ ಕಾವ್ಯದಲ್ಲಿ ‘ವಸ್ತು’ ಮುಖ್ಯವಲ್ಲ; ಆ ವಸ್ತುವಿನ ಮೂಲಕವಾಗಿ ಕವಿ ಏನನ್ನು ಹೇಳುತ್ತಾನೋ ಅದು ಮುಖ್ಯ. ಈ ದೃಷ್ಟಿಯಿಂದ ವಸ್ತು ಕೇವಲ ನಿಮಿತ್ತ ಮಾತ್ರ, ಹಾಗೂ ಆ ವಸ್ತುವಿನ ನಿಮಿತ್ತವಾಗಿ ಅಭಿವ್ಯಕ್ತವಾಗುವ ಭಾವ, ಭಾವನೆಗಳೇ ಇಲ್ಲಿ ಪ್ರಧಾನ. ಇದರಿಂದಾಗಿ ಅದುವರೆಗಿನ ಕಾವ್ಯಪರಂಪರೆಯಲ್ಲಿ ‘ವಸ್ತು’ವಿಗಿದ್ದ ಪ್ರಾಧಾನ್ಯತೆ ಗೌಣವಾದದ್ದು ಒಂದು ಮಹತ್ವದ ಬದಲಾವಣೆಯಾಗಿದೆ. ಜತೆಗೆ ‘ಕಾವ್ಯಕ್ಕೆ ಏನು ಬೇಕಾದರೂ ವಸ್ತುವಾಗಬಹುದು’ ಎಂಬ ಪ್ರಾಚೀನ ಆಲಂಕಾರಿಕರ ಘೋಷಣೆ ನಿಜವಾಗಿಯೂ ಅರ್ಥಪೂರ್ಣವಾದದ್ದು ಇಲ್ಲಿಯೇ. ಇದು ಸಾಧ್ಯವಾದದ್ದು ಕನ್ನಡ ನವೋದಯದ ಸಂದರ್ಭದಲ್ಲಿಯೇ. ‘ಕವಿ ಜೀವದ ಬ್ಯಾಸರ ಹರಿಸಾಕ, ಹಾಡ ನುಡಿಸಾಕ, ಹೆಚ್ಚಿಗೇನು ಬೇಕ, ಒಂದ ಹೂತ ಹುಣಸೀ ಮರ ಸಾಕ’ (ಬೇಂದ್ರೆ : ಸಖೀಗೀತ, ಪು. ೮೦) ಎನ್ನುವ ಧೈರ್ಯವೇ ನವೋದಯ ಕಾವ್ಯ ಕಲ್ಪನೆಯ ಬಹು ಮುಖ್ಯವಾದ ಸಂಗತಿಯಾಗಿದೆ. ಈ ‘ನವೋದಯ’ವನ್ನು ‘ಪುನರುಜ್ಜೀವನ’ ಎಂಬ ಮಾತಿನಿಂದ ನಿರ್ದೇಶಿಸಿದ ಆಚಾರ್ಯ ಶ್ರೀ ಅವರು. ‘ಪುನರುಜ್ಜೀವನ ಎಂದರೆ ಏನೋ ಒಂದು ಧೈರ್ಯದಿಂದ ಕೂಡಿದ ವಿಚಾರ’ (ಶ್ರೀ ಸಾಹಿತ್ಯ : ಪು. ೨೮೫) ಎಂದು ಗುರುತಿಸಿದ್ದು ಸರಿಯಾಗಿದೆ. ಕಾವ್ಯಕ್ಕೆ ಏನನ್ನು ಬೇಕಾದರೂ ವಸ್ತುವನ್ನಾಗಿ ಮಾಡಿಕೊಳ್ಳಬಲ್ಲೆನೆಂಬ ಸ್ವತಂತ್ರ ನಿಲುವಿನ ಸಂದರ್ಭದಲ್ಲಿ, ತನ್ನ ಭಾವ ಭಾವನೆಗಳಿಗೆ ತಕ್ಕ ಆಕಾರವನ್ನು ಕೊಡಲು, ಅದುವರೆಗಿನ ಕಾವ್ಯಸಂಪ್ರದಾಯದೊಳಗಿನ ರೂಪಗಳು ನಿಷ್ಟ್ರಯೋಜಕವೆಂಬುದನ್ನು ಕಂಡುಕೊಂಡದ್ದು ಮತ್ತು ಅದಕ್ಕಾಗಿ ಹೊಸ ಭಾಷೆಯನ್ನು ಹೊಸ ನುಡಿಗಟ್ಟನ್ನು ನಿರ್ಮಾಣ ಮಾಡಿಕೊಳ್ಳುವ ಪ್ರಯೋಗ ಪರಿಣತಿಯಲ್ಲಿ ತೊಡಗಿದ್ದು, ಈ ಧೈರ್ಯದ ಮತ್ತೊಂದು ಪರಿಣಾಮವಾಗಿದೆ. ‘ನಾನೇನು ಕಂದಗಳ ವೃತ್ತಗಳ ಮಂದೆಗಳ ಕಾಯುವ ಕುರುಬರವನೂ ಅಲ್ಲ’- (ಕರಿಸಿದ್ದ : ಕಥನ ಕವನಗಳು ಪು. ೧೨) ಎಂದು ಕುವೆಂಪು ಹೇಳಿಕೊಂಡದ್ದು ಈ ಅರ್ಥದಲ್ಲಿಯೇ. ಯಾಕೆಂದರೆ, ಸ್ಥಗಿತಗೊಂಡ ಕನ್ನಡ ಕಾವ್ಯಕ್ಕೆ ಹೊಸರೂಪಗಳನ್ನು ಹುಡುಕುವ ಮೊದಲ ಪ್ರಯತ್ನಗಳಲ್ಲಿ ಅದುವರೆಗಿನ ಕಂದ-ವೃತ್ತ-ಷಟ್ಪದಿ-ಸಾಂಗತ್ಯಾದಿ ರೂಪಗಳು ಹೊಸ ಸಂವೇದನೆಯ ಅಭಿವ್ಯಕ್ತಿಗಳಾಗಬಲ್ಲವೇ ಎಂಬುದನ್ನು ಪರೀಕ್ಷಿಸಿದ ಹಲವರ ಪ್ರಯೋಗಗಳು, ವಿಲಕ್ಷಣವಾದ ಪಳೆಯುಳಿಕೆಗಳಂತೆ ತೋರುತ್ತವೆಯೇ ವಿನಾ, ಭಾಷೆಯನ್ನು ನಿಜವಾಗಿಯೂ ಸೃಜನಾತ್ಮಕವಾಗಿ ಬಳಸಿದ ಲಕ್ಷಣಗಳಂತೆ ತೋರುವುದಿಲ್ಲ. ಶ್ರೀ ಎಸ್.ಜಿ. ನರಸಿಂಹಾಚಾರ್, ಜಯಾಚಾರ್ಯ, ಅಳಸಿಂಗರಾಚಾರ್ಯ ಮತ್ತಿತರರು, ಇಂಗ್ಲಿಷ್ ಭಾಷೆಯ ಅನುವಾದಗಳ ಕಾರ್ಯದಲ್ಲಿ ಸಿದ್ಧಪಡಿಸಿದ ರೂಪಗಳು ಈ ಮಾತಿಗೆ ನಿದರ್ಶನಗಳಾಗುತ್ತವೆ. ಸಾವಿರ ವರ್ಷಗಳ ಸುದೀರ್ಘವಾದ ಕನ್ನಡ ಕಾವ್ಯದಲ್ಲಿ ಉದ್ದಕ್ಕೂ ಹಲವು ಮುಖ್ಯವಾದ ಬದಲಾವಣೆಗಳಾದರೂ, ಕಾವ್ಯರೂಪವನ್ನು ಬಿಡದೆ ಹಿಡಿದು ಕೊಂಡಿದ್ದ ದ್ವಿತೀಯಾಕ್ಷರ ಪ್ರಾಸದ ನಿರ್ಬಂಧವನ್ನು ‘ತೊರೆಯಲು’ ೧೯೧೧ರ ವೇಳೆಗೆ ಗೋವಿಂದ ಪೈ ಅವರು ಕೈಕೊಂಡ ನಿರ್ಧಾರವು, ‘ಪ್ರಾಸ ತ್ಯಾಗದ ಧೀರ ನಿರ್ಧಾರ’ ಎಂದು ಅವತ್ತಿನ ವಿಮರ್ಶೆಯಲ್ಲಿ ಪ್ರಶಂಸಿತವಾಗಿರುವುದನ್ನು ನೋಡಿದರೆ, ಕನ್ನಡ ಕಾವ್ಯದ ಸಿದ್ಧರೂಪದ ಸ್ಥಗಿತತೆ ಎಷ್ಟೊಂದು ಬಿಗಿಯಾಗಿತ್ತೆಂಬುದು ಗಮನಿಸಬೇಕಾದ ಸಂಗತಿಯಾಗಿದೆ. ಇಂಥ ಹಿನ್ನೆಲೆಯಲ್ಲಿ ಆಚಾರ್ಯ ಬಿ.ಎಂ. ಶ್ರೀಯವರು ಇಂಗ್ಲಿಷ್ ಕಾವ್ಯದ ಪ್ರೇರಣೆಯಿಂದ ‘ಅವಳ ತೊಡಿಗೆ ಇವಳಿಗಿಟ್ಟು ನೋಡಬಯಸಿ’ದ ಪ್ರಯೋಗವನ್ನು ಕೈಗೊಂಡು, ಹೊಸ ‘ಆಕೃತಿ’ಗಳನ್ನು ಸಿದ್ಧಪಡಿಸಿದ್ದು, ಅವರೇ ಹೇಳುವಂತೆ ‘ಏನೋ ಒಂದು ಧೈರ್ಯದ ವಿಚಾರ’ ಮಾತ್ರವಲ್ಲದೆ, ಹಳೆಯ ಮೈಸೂರಿನ ಅನೇಕ ಕವಿಗಳಿಗೆ ಮಾರ್ಗದರ್ಶಕವೂ ಆಯಿತೆಂಬುದು ಮಹತ್ವದ ಮಾತಾಗಿದೆ. ಮತ್ತು ಇಂಗ್ಲಿಷ್ ರೊಮ್ಯಾಂಟಿಕ್ ಕವಿಗಳ ಪ್ರೇರಣೆಯಿಂದ, ಹಲವು ಕವಿತೆಗಳ ಸೃಜನಾತ್ಮಕ ಅನುವಾದ ಅಳವಡಿಕೆಗಳ ಹಾಗೂ ಪ್ರಯೋಗಗಳ ಮೂಲಕ, ಅವರ ಆಯ್ಕೆಯ ಇಂಗ್ಲಿಷ್ ಮೂಲಗಳೊಂದಿಗೆ ರೂಪ ಸಾಮ್ಯವನ್ನು ಪಡೆದ, ಅವರ ಹೊಸ ಕವಿತೆಯ ‘ಆಕೃತಿ’ಗಳು ಆವರೆಗಿನ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇರಲೇ ಇಲ್ಲ ಎನ್ನುವುದು ಅವುಗಳ ಹೊಸತನಕ್ಕೆ ಸಾಕ್ಷಿಯಾಗಿದೆ. ಒಟ್ಟಾರೆಯಾಗಿ ಕಳೆದ ಎರಡು ಶತಮಾನಗಳಿಂದ ಚಲನಶೀಲತೆಯನ್ನು ಕಳೆದುಕೊಂಡ ಕನ್ನಡ ಕಾವ್ಯದ ಈ ಹಂತದಲ್ಲಿ ‘ಅನುವಾದ’ ಹಾಗೂ ‘ಅನುಸೃಷ್ಟಿ’ಗಳ ಮೂಲಕ ಹೊಸ ಹುಟ್ಟನ್ನು ತರುವ ಕಾಳಜಿಗಳು ಅತ್ಯಂತ ಕ್ರಿಯಾಶೀಲವಾಗಿದ್ದ ಕಾರಣದಿಂದಲೇ, ಈ ಕಾಲದ ಸಾಹಿತ್ಯವನ್ನು ‘ನವೋದಯ’ ಎಂಬ ಹೆಸರಿನಿಂದ ಗುರುತಿಸಲಾಗಿದೆ. ಆದರೆ ಈ ನವೋದಯದ ಹಿಂದೆ ಪಶ್ಚಿಮದ ಪ್ರೇರಣೆ ಪ್ರಮುಖವಾದ ಒಂದು ಅಂಶವಾಗಿದ್ದರೂ, ಬರೀ ಅದೊಂದೇ ಕನ್ನಡ ಕಾವ್ಯ ಈ ಕಾಲದಲ್ಲಿ ಪಡೆದುಕೊಂಡ ಬಹುಮುಖತ್ವಕ್ಕೆ ಕಾರಣವಾಗಿದೆ ಎಂದು ಭಾವಿಸುವುದು ಸರಿಯಲ್ಲ. ಒಂದೆಡೆ ಬಿ.ಎಂ.ಶ್ರೀಯವರೂ, ಮತ್ತು ಅವರಿಗೆ ಸಮಾನಾಂತರವಾಗಿಯೇ ಹೊಸ ಅನ್ವೇಷಣೆಯಲ್ಲಿ ತೊಡಗಿದ ಕುವೆಂಪು ಮತ್ತೆ ಕೆಲವರು, ಇಂಗ್ಲಿಷ್ ಸಾಹಿತ್ಯದಿಂದ ಪಡೆದುಕೊಂಡ ಪ್ರೇರಣೆಯಿಂದ ಪ್ರಯೋಗಗಳನ್ನು ನಡೆಯಿಸುತ್ತಿದ್ದರೆ, ಅದೇ ಪರಿಸರದ ಪು.ತಿ.ನ. ಹಾಗೂ ತೀ.ನಂ.ಶ್ರೀ.ಯಂಥವರು ಸಂಸ್ಕೃತ ಸಾಹಿತ್ಯದಿಂದ ನವೋದಯಕ್ಕೆ ಏನಾದರೂ ಉಪಯೋಗವಾದೀತೆ ಎಂಬುದನ್ನು ಪರಿಶೀಲಿಸುತ್ತಿದ್ದರು; ಗೋವಿಂದ ಪೈ, ಡಿವಿಜಿ ಯಂಥವರು ಕನ್ನಡ ಮಾರ್ಗಕಾವ್ಯಗಳಿಂದ, ವಿ.ಸೀ ಮತ್ತು ಗೋಪಾಲಕೃಷ್ಣರಾಯರು ಕೀರ್ತನ ಸಾಹಿತ್ಯದಿಂದ, ಬೇಂದ್ರೆಯವರು ಮತ್ತು ಅವರ ಗೆಳೆಯರೂ ದೇಶೀಯ ಜಾನಪದದಿಂದ ಹಾಗೂ ಕರ್ನಾಟಕದ ಅನುಭಾವಿ ಸಂತ ಪರಂಪರೆಯಿಂದ ಕನ್ನಡ ನವೋದಯಕ್ಕೆ ಹೊಸ ರೂಪಗಳನ್ನು ತರುವ ಕಾರ್ಯದಲ್ಲಿ ತೊಡಗಿದ್ದರು. ಈ ಎಲ್ಲ ಚಟುವಟಿಕೆಗಳನ್ನು ಗಮನಿಸಿದರೆ ಗೊತ್ತಾಗುತ್ತದೆ, ಕನ್ನಡ ನವೋದಯದ ಹರಹು ಹಾಗೂ ವೈವಿಧ್ಯ ಎಷ್ಟಿತ್ತೆಂಬುದು. ಹಾಗೆಯೇ ಈ ನವೋದಯದ ಎಷ್ಟೋ ಕವಿಗಳ ಕಾವ್ಯದ ಮಾದರಿಗಳನ್ನು ಪಶ್ಚಿಮದ ಕಾವ್ಯ ಪರಂಪರೆಯಲ್ಲಿ ಹುಡುಕಲು ಸಾಧ್ಯವಿಲ್ಲ ಎನ್ನುವುದೂ ಸ್ವಾರಸ್ಯದ ಸಂಗತಿಯಾಗಿದೆ. ಹಾಗೆಂದರೆ ಅಂಥ ಕವಿಗಳಿಗೆ ಪಶ್ಚಿಮದ ಕಾವ್ಯರೂಪಗಳು ಅಪರಿಚಿತವಾಗಿದ್ದುವೆಂದು ಅರ್ಥವಲ್ಲ. ಹಾಗೆ ನೋಡಿದರೆ, ಭಾರತೀಯ ಪುನರುಜ್ಜೀವನದ ಸಂದರ್ಭದಲ್ಲಿ, ವಸಾಹತುಷಾಹಿಯ ಪರಿಣಾಮವಾದ ಇಂಗ್ಲಿಷ್ ಕಲಿಕೆಗೆ, ಬಹುಮಟ್ಟಿಗೆ ಎಲ್ಲ ಲೇಖಕರೂ ಒಳಗಾದದ್ದು, ಮತ್ತು ಆ ಮೂಲಕ, ಅವರಿಗೆ ಪರಿಚಿತವಾದ ಪಶ್ಚಿಮದ ಸಾಹಿತ್ಯದ ವಿಸ್ತಾರ ವೈವಿಧ್ಯಗಳು, ಅವರ ಪ್ರಜ್ಞೆಯನ್ನೂ, ಅವರ ಗ್ರಹಿಕೆಯ ಸ್ವರೂಪವನ್ನೂ ಬದಲಾಯಿಸಿದ್ದು ನಿಜ. ಆದರೆ ಕನ್ನಡ ಪ್ರತಿಭೆ, ಪಶ್ಚಿಮದ ಕಾವ್ಯದ ಅನುಕರಣೆಯ ಚಾಪಲ್ಯಕ್ಕೆ ಬಲಿಯಾಗಲಿಲ್ಲ; ಅದರ ಬದಲು, ತನ್ನ ಹೊಸ ಪ್ರಜ್ಞೆಯಲ್ಲಿ, ಅದು ಒಂದೆಡೆ ಪಶ್ಚಿಮದ ಸಾಹಿತ್ಯ ಪರಂಪರೆಗೂ, ಮತ್ತೊಂದೆಡೆ ತನ್ನ ಪ್ರಾದೇಶಿಕ ಹಾಗೂ ಭಾರತೀಯ ಸಾಹಿತ್ಯ ಪರಂಪರೆಗೂ ಏಕಕಾಲದಲ್ಲಿ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಯ ಕಾರಣದಿಂದ, ತನ್ನ ಸ್ವಂತದ್ದನ್ನು ಬೆಳೆದುಕೊಂಡಿತು. ಪಶ್ಚಿಮದ ಕಾವ್ಯದ ಪ್ರೇರಣೆಯಿಂದ, ತನ್ನ ಅಭಿವ್ಯಕ್ತಿಯಲ್ಲಿನ ಹಾಗೂ ತಂತ್ರದ ಹಲವು ಸಾಧ್ಯತೆಗಳನ್ನು ಕನ್ನಡ ಕಾವ್ಯ ಪ್ರಯೋಗಕ್ಕೆ ಅಳವಡಿಸಿಕೊಳ್ಳುತ್ತಲೇ, ನಮ್ಮ ಪ್ರಾದೇಶಿಕ ಹಾಗೂ ಭಾರತೀಯ ಸಾಹಿತ್ಯಪರಂಪರೆಯಿಂದ ತನ್ನ ಹೊಸಹುಟ್ಟಿಗಾಗಿ, ಪಡೆದುಕೊಳ್ಳಬಹುದಾದದ್ದು ಎಷ್ಟು, ವರ್ಜಿಸಬಹುದಾದದ್ದು ಎಷ್ಟು ಎಂಬ ವಿವೇಚನೆಯನ್ನೂ ಉಳಿಸಿಕೊಂಡದ್ದಾಗಿದೆ. ಈ ಕಾರಣದಿಂದಲೇ. ನವೋದಯ ಸಾಹಿತ್ಯದೊಳಗೆ, ಹಿಂದಿನ ಕನ್ನಡ ಕಾವ್ಯಪರಂಪರೆಯ ಅನೇಕ ಪ್ರಕಾರಗಳು, ಹಾಗೂ ಕಾವ್ಯ ಕಲ್ಪನೆಗಳು ಪ್ರೇರಣೆಯಂತೆ ವರ್ತಿಸಿವೆ ಎಂಬುದನ್ನು ಸ್ವಲ್ಪ ಆಳವಾಗಿ ನೋಡುವ ಯಾರಾದರೂ ಗುರುತಿಸಬಹುದಾಗಿದೆ. ಈ ದೃಷ್ಟಿಯಿಂದ ಹೇಳುವುದಾದರೆ, ನವೋದಯ ಕಾವ್ಯಕಲ್ಪನೆಯು, ಯಾವತ್ತೂ ತನ್ನ ಹಿಂದಿನ ಪರಂಪರೆಯನ್ನು ಅಗೌರವದಿಂದ ಕಂಡಿಲ್ಲ; ಅದನ್ನು ಪ್ರತಿಪಕ್ಷವೆಂದು ಭಾವಿಸಿಲ್ಲ. ಇದರಿಂದ ನಿಷ್ಪನ್ನವಾಗುವ ಸಂಗತಿಯೆಂದರೆ, ನವೋದಯ ಕಾವ್ಯ ತಾನು ಹಿಂದಿನ ಕಾವ್ಯಪರಂಪರೆಯಿಂದ ಗೌರವ ಪೂರ್ವಕವಾಗಿ ಬೇರೆಯಾದದ್ದು, ಅದು ತನ್ನ ತತ್‌ಪೂರ್ವದ ಸಾಹಿತ್ಯ ಸಂಪ್ರದಾಯಕ್ಕೆ ತೋರಿದ ಸೃಜನಾತ್ಮಕ ಪ್ರತಿಕ್ರಿಯೆಯ ಮೂಲಕವೆ ಹೊರತು ಪ್ರತಿಭಟನೆಯ ಕ್ರಮದಿಂದ ಅಲ್ಲ. ಈ ನಿಲುವಿಗೆ ಹೋಲಿಸಿದರೆ ಮುಂದಿನ ನವ್ಯ, ಪ್ರಗತಿಶೀಲ ಹಾಗೂ ದಲಿತ-ಬಂಡಾಯ ಚಳುವಳಿಗಳು ತತ್‌ಪೂರ್ವದ ಸಾಹಿತ್ಯ ಚಳವಳಿಗಳಿಗೆ ತೋರುವ ಪ್ರತಿಕ್ರಿಯೆಗಳಲ್ಲಿ ನಿರಾಕರಣೆಯ ಮತ್ತು ಪ್ರತಿಭಟನೆಯ ಅಂಶಗಳೇ ಮಿಗಿಲಾಗಿವೆ. ನವ್ಯಕಾವ್ಯದ ಪ್ರಾರಂಭದಲ್ಲಿ ಪ್ರಕಟವಾದ ಗೋಪಾಲಕೃಷ್ಣ ಅಡಿಗರ ‘ನಡೆದುಬಂದ ದಾರಿ’ ಎಂಬ ಸಂಗ್ರಹದೊಳಗಿನ, ಅದೇ ಹೆಸರಿನ ಕವಿತೆಯ ಮೊದಲ ಪಂಕ್ತಿಯಾದ ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ ಕಣ್ಣ ಹೊರಳಿಸಬೇಡ’ ಎಂಬ ಉಕ್ತಿಯ ಪರಿಶೀಲನೆಯಿಂದ ಈ ನಿಲುವನ್ನು ಇನ್ನಷ್ಟು ಸ್ಪಷ್ಟಪಡಿಸಬಹುದು :

‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ, ಕಣ್ಣ ಹೊರಳಿಸಬೇಡ’ ಎಂಬ ಅಡಿಗರ ಈ ಪ್ರತಿಜ್ಞಾ ಘೋಷಣೆಯು ಏನನ್ನು ಸೂಚಿಸುತ್ತದೆ? ಸ್ವಾರಸ್ಯದ ಸಂಗತಿ ಎಂದರೆ, ಅಡಿಗರ ಕಾವ್ಯವನ್ನು ಕುರಿತು ಸಾಕಷ್ಟು ನಡೆದಿರುವ ಚರ್ಚೆಯಲ್ಲಿ ಈ ಪಂಕ್ತಿಯ ಆಶಯವೇನು ಎಂಬ ಬಗೆಗೆ ಯಾರೂ ವಿಚಾರ ಮಾಡಿದ ಹಾಗೆ ತೋರುವುದಿಲ್ಲ. ಇದು ತತ್‌ಪೂರ್ವದ ನವೋದಯ ಕವಿ-ಕಾವ್ಯಗಳನ್ನು ಕುರಿತ ಪ್ರತಿಕ್ರಿಯೆಯೋ ಅಥವಾ ಇಡೀ ಕನ್ನಡ ಕಾವ್ಯಪರಂಪರೆಯನ್ನೂ ಅದಕ್ಕೆ ಹಿನ್ನೆಲೆಯಾದ ಭಾರತೀಯ ಮಹಾಕಾವ್ಯ – ಪುರಾಣ ಸಾಹಿತ್ಯ ಪರಂಪರೆಯನ್ನೂ ಕುರಿತ ಪ್ರತಿಕ್ರಿಯೆಯೋ? ಅಡಿಗರ ಕಾವ್ಯವನ್ನು ಓದಿದರೆ, ಅವರಿಗೆ, ಭಾರತೀಯ ಮಹಾಕಾವ್ಯ – ಪುರಾಣ ಸಾಹಿತ್ಯದ ಹಾಗೂ ವೈದಿಕ ಸಾಹಿತ್ಯದ ಪರಿಚಯ ಸಾಕಷ್ಟಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಅವರ ಕಾವ್ಯದ ವಿವಿಧ ಸಂದರ್ಭಗಳ ಸಂಕೇತ-ಪ್ರತೀಕ-ಪ್ರತಿಮೆಗಳು, ಈ ಹಿನ್ನೆಲೆಯಿಂದಲೆ ಮೂಡಿದವುಗಳಾಗಿವೆ. ಆದಕಾರಣ ಈ ಪಂಕ್ತಿಯ ಪ್ರತಿಜ್ಞಾ ಘೋಷಣೆ, ಭಾರತೀಯ ಸಾಹಿತ್ಯ ಪರಂಪರೆಯ ನಿರಾಕರಣೆಗೆ ಸಂಬಂಧಿಸಿದ್ದಲ್ಲ. ಹಾಗೆಯೆ, ಇದು ಹಳಗನ್ನಡ ಸಾಹಿತ್ಯ ಪರಂಪರೆಯನ್ನು ಕುರಿತ ಪ್ರತಿಕ್ರಿಯೆಯೂ ಅಲ್ಲ. ಯಾಕೆಂದರೆ ಹಳಗನ್ನಡ ಕಾವ್ಯ ಪರಂಪರೆ, ಅವರಿಗೆ ಹಾಗೂ ಅವರ ಜತೆಗೆ ಬರೆದ ನವ್ಯಕಾವ್ಯ ಸಂದರ್ಭದ ಎಷ್ಟೊ ಲೇಖಕರಿಗೆ ‘ನಡೆದು ಬಂದ ದಾರಿ’ಯಾಗಿರಲೇ ಇಲ್ಲ. ಈ ದೃಷ್ಟಿಯಿಂದ ಹಳಗನ್ನಡ ಕಾವ್ಯಪರಂಪರೆಗೆ, ಸೃಜನಾತ್ಮಕ ಪ್ರತಿಕ್ರಿಯೆಯನ್ನು ತೋರಿಸುವುದರ ಮೂಲಕ ರೂಪಗೊಂಡ ನವೋದಯ ಕಾವ್ಯಸಂದರ್ಭದಲ್ಲಿ ಕಾವ್ಯರಚನೆಯನ್ನು ಪ್ರಾರಂಭಿಸಿ, ಅದರಲ್ಲಿ ಸ್ವಲ್ಪದೂರ ನಡೆದು ಬಂದ ಅಡಿಗರ ಈ ಪ್ರತಿಜ್ಞಾ ವಾಕ್ಯವು, ನಿಸ್ಸಂದೇಹವಾಗಿ ನವೋದಯ ಕಾವ್ಯಪರಂಪರೆಯನ್ನೆ ಕುರಿತ ಪ್ರತಿಕ್ರಿಯೆಯಾಗಿದೆ. ಈ ಹಿನ್ನೆಲೆಯಿಂದ ‘ನಡೆದು ಬಂದ ದಾರಿ ಕಡೆಗೆ ತಿರುಗಿಸಬೇಡ ಕಣ್ಣ ಹೊರಳಿಸಬೇಡ’ ಎಂಬ ಈ ಉಕ್ತಿ ಮೂಲತಃ ಪರಂಪರೆಯ ನಿರಾಕರಣೆಯ ಮಾತಲ್ಲ; ತತ್‌ಪೂರ್ವದಿಂದಲೂ ತಮ್ಮ ಬರಹ ಹಾಗೂ ಆಲೋಚನೆಗಳನ್ನು ನಿಯಂತ್ರಿಸುತ್ತಿದ್ದ ನವೋದಯ ಮಾರ್ಗದಿಂದ ತಪ್ಪಿಸಿಕೊಂಡು ತನ್ನತನವನ್ನು ಅನನ್ಯವಾಗಿ ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಸೃಜನಶೀಲ ಕವಿಯೊಬ್ಬನ ಪ್ರತಿಕ್ರಿಯೆ ಎಂದು ಭಾವಿಸುವುದು ಸರಿಯಾದದ್ದು. ಆದರೆ ಅಡಿಗರು ನವೋದಯ ಸಂಪ್ರದಾಯದಿಂದ ತಾವು ಬೇರೆಯಾಗುವ ಸಂದರ್ಭದಲ್ಲಿ ಅಭಿವ್ಯಕ್ತಪಡಿಸಿದ ಹಲವು ಕಾವ್ಯಾಂತರ್ಗತ ಪ್ರತಿಕ್ರಿಯೆಗಳು, ಅನಗತ್ಯವಾದ ರಭಸ, ವ್ಯಂಗ್ಯ ಹಾಗೂ ಸಿನಿಕತನಗಳನ್ನು ಒಳಗೊಂಡಿರುವುದು ದುರದೃಷ್ಟದ ಸಂಗತಿಯಾಗಿದೆ. ‘ಹಳೆಮನೆಯ ಮಂದಿ’, ‘ಪುಷ್ಪ ಕವಿಯ ಪರಾಕು’, ‘ಅರ್ಥವಾಗುವ ಹಾಗೆ ಬರೆಯಬೇಕು’, ‘ಪ್ರಾರ್ಥನೆ’, ‘ಬಿ.ಎಂ.ಶ್ರೀ ಅವರಿಗೆ’ – ಇಂಥ ಕೆಲವು ಕವಿತೆಗಳೊಳಗಿನ ಪ್ರತಿಕ್ರಿಯೆಗಳನ್ನು ನೋಡಿದರೆ, ನವೋದಯ ಕಾವ್ಯಪರಂಪರೆಯ ಬಗ್ಗೆ ಅಡಿಗರಿಗೆ ಇದ್ದ ಅಭಿಪ್ರಾಯಗಳು ಯಾವ ಸ್ವರೂಪದವು ಎನ್ನುವುದು ಸ್ವಯಂ ಸ್ಪಷ್ಟವಾಗಿದೆ. ನವ್ಯಕಾವ್ಯ ಪ್ರಾರಂಭವಾಗುವ ಹೊತ್ತಿಗೆ ನವೋದಯ ಕಾವ್ಯ ಒಂದು ಬಗೆಯ ಸಮೃದ್ಧಿಯನ್ನು ಪಡೆದುಕೊಂಡಿತ್ತು. ಹಿಂದಿನ ಕನ್ನಡ ಕಾವ್ಯ ಪರಂಪರೆಯಲ್ಲಿ ಕಾಣದ ವೈವಿಧ್ಯತೆಯನ್ನೂ, ಪ್ರಯೋಗ ಪರಿಣತಿಯನ್ನೂ ಎತ್ತರಗಳನ್ನೂ ಪ್ರಕಟಿಸುವಂತಿತ್ತು. ಕುವೆಂಪು, ಬೇಂದ್ರೆ, ಪು.ತಿ.ನ., ಕೆ.ಎಸ್.ನ., ಗೋಕಾಕ ಮೊದಲಾದ ಕವಿಗಳು ಈ ಕಾವ್ಯಪರಂಪರೆಯನ್ನು ಕಟ್ಟಿ ಬೆಳೆಯಿಸಿದ್ದರು. ಸ್ವಾತಂತ್ರ್ಯ ಪೂರ್ವದ ಧೈರ್ಯ, ಆದರ್ಶ, ಆವೇಶ, ಕನಸುಗಾರಿಕೆ, ಮೌಲ್ಯಪ್ರಜ್ಞೆ, ಆನುಭಾವಿಕ ಹಾಗೂ ಆಧ್ಯಾತ್ಮಿಕ ನಿಲುವುಗಳು – ಈ ಎಲ್ಲವುಗಳ ಮೂಲಕ ಗಾಂಧಿಯುಗದ ಜಗತ್ತೊಂದನ್ನು ನವೋದಯ ಕಾವ್ಯ ವ್ಯಾಖ್ಯಾನಿಸಿತ್ತು. ಈ ಹಿನ್ನೆಲೆಯಲ್ಲಿ, ಪಶ್ಚಿಮದ ಎಲಿಯೆಟ್, ಆಡೆನ್ ಮೊದಲಾದ ಕವಿಗಳ ಕಾವ್ಯದ ಪ್ರೇರಣೆ ಹಾಗೂ ಧೋರಣೆಗಳಿಂದ ಕನ್ನಡದಲ್ಲಿ ಹೊಸ ಬದಲಾವಣೆಯೊಂದನ್ನು ತರಲು ಹೊರಟ ಅಡಿಗರ ಕಣ್ಣಿಗೆ, ಮೊದಲು ಕಂಡದ್ದು ನವೋದಯ ಕಾವ್ಯ ಪರಂಪರೆಯ ದೋಷ ದೌರ್ಬಲ್ಯಗಳೇ ಹೊರತು, ಅದರೊಳಗಿನ ಮೌಲಿಕಾಂಶಗಳಲ್ಲ. ಹೀಗಾಗಿ ನವೋದಯ ಕಾವ್ಯವನ್ನು ಬರೆದವರೆಲ್ಲ ‘ಹಳೆಮನೆಯ ಮಂದಿ’ (ಸ.ಕಾ.ಪು. ೨೮೩)ಗಳಾದರು. ಅವರೆಲ್ಲ ‘ಈಜಿಪ್ಟಿನ ಮಮ್ಮಿಗಳಂತೆ ಸುರುಟಿ’ ಹೋದವರು. ಅವರಿಗೆ ಕವಿತೆ ಬರೆಯುವುದು ಸಲೀಸು; ‘ಕಚ್ಚಾ ಗಾಳಿಗೀಳುಗಳನ್ನೆಲ್ಲ ಕಾಗದದ ಮೇಲೆ ಕಾರಿಕೊಳ್ಳುವ’ ಮಂದಿ ಅವರು.*[*         ಈ ಹಳೆಮನೆಯ ಮಂದಿಯಿಂದ ತಪ್ಪಿಸಿಕೊಂಡ ಮನಸ್ಸು ಬಂದು ಬೀಳುವುದು ‘ಅಪ್ಪಟ ಯೂರೋಪು ಮಾದರಿಯ ಸೋಫಾಕ್ಕೆ’. ಈ ಯೂರೋಪು ಮಾದರಿಗೆ ಹೀಗೆ ಕನ್ನಡ ಕಾವ್ಯವನ್ನು ಅಡಿಗರು ತಳ್ಳಿದ ಮೇಲೆ ಅಲ್ಲಿಂದ ಅದು ಹೊರಬರಲು ಬಹಳ ಕಾಲ ಬೇಕಾಯಿತು. ಇನ್ನೂ ಆ ‘ಹ್ಯಾಂಗೋವರಿನಿಂದ’ ನಮ್ಮ ಕವಿಗಳು ಪಾರಾಗಿದ್ದಾರೆ ಎಂದು ಧೈರ್ಯವಾಗಿ ಹೇಳುವಂತಿಲ್ಲ.] ಅನುಭಾವ, ದರ್ಶನ ಇತ್ಯಾದಿಗಳನ್ನು ಮುಲುಕುವ ಒಡಕು ಗ್ರಾಮಾಫೋನುಗಳು; ಸತ್ಯ ಸುಂದರ ಶಿವದ ಜಳ್ಳಿನುಪ್ಪಿಟ್ಟು ತಿಂದು ಬರೀ ಮಾತುಗಳ ಪುಟಚಂಡಾಡುವವರು. ಇದು ನವೋದಯ ಕವಿಗಳ ಬಗ್ಗೆ ಅಡಿಗರ ಪ್ರತಿಕ್ರಿಯೆ. ‘ಪುಷ್ಪ! ಕವಿಯ ಪರಾಕು’ (ಸ.ಕಾ.ಪು. ೨೧೦) ಮುಖ್ಯವಾಗಿ ‘ಮೈಸೂರು ಮಲ್ಲಿಗೆ’ಯ ಕವಿಯನ್ನು ಕುರಿತು ಬರೆದ ಲೇವಡಿ ಪದ್ಯ. ಈ ಕವಿತೆ ತೀರಾ ಅಸಹನೆಯಿಂದ ನರಳುತ್ತದೆ. ನವ್ಯಕಾವ್ಯ ಅರ್ಥವಾಗುವುದಿಲ್ಲ, ಎಂದು ಅಂದ ಹಿರಿಯ ಲೇಖಕ ಮಾಸ್ತಿಯವರಿಗೆ, ನವ್ಯಕಾವ್ಯದ ಪರವಾಗಿ ಅಡಿಗರು ಕೊಟ್ಟ ಉತ್ತರವಾಗಿದೆ ‘ಅರ್ಥವಾಗುವ ಹಾಗೆ ಬರೆಯಬೇಕು’ (ಮೂಲಕ ಮಹಾಶಯರು, ಪು. ೪೪) ಎನ್ನುವ ಕವಿತೆ. ನವ್ಯ ಕಾವ್ಯದ ಬಗ್ಗೆ ಯಾವ ಒಂದು ಟೀಕೆಯ ಮಾತನ್ನೂ ಸಹಿಸದ ಈ ನಿಲುವು, ಮಾಸ್ತಿಯವರ ಬರಹವನ್ನೆ ಕುರಿತ ಅನಾರೋಗ್ಯಕರವಾದ ಪ್ರತಿಕ್ರಿಯೆಯನ್ನು ಈ ಕವಿತೆಯಲ್ಲಿ ಮಂಡಿಸುತ್ತದೆ. ಮಾಸ್ತಿಯವರದು ‘ಮೊಸರ ಹೆಸರಲ್ಲಿ ನೀರೆರೆವ ಗದ್ಯವಂತೆ; ಯಾರೋ ‘ಹಾಕಿಟ್ಟ ಹಳಿಗಳ ಮೇಲೆ ರೈಲು ಬಿಡುವ’ ಹವ್ಯಾಸವಂತೆ; ಅವರಿಗೆ ‘ಕತ್ತಲೆಂದರೆ ಭಯ’; ಅವರದು ‘ಸರ್ವಸಾಧಾರಣದ ರಾಜರಸ್ತೆ’, ಬಿ.ಎಂ.ಶ್ರೀ. ಅವರನ್ನು ಕುರಿತ ಕವಿತೆ (ಚಿಂತಾಮಣಿಯಲ್ಲಿ ಕಂಡ ಮುಖ, ಪು. ೪೩) ಯೊಳಗಿನ ಪ್ರತಿಕ್ರಿಯೆ ಇವೆಲ್ಲವುಗಳಿಂದ ಕೊಂಚ ಬೇರೆಯಾಗಿದೆ. ಇಲ್ಲಿ ಶ್ರೀ ಅವರ ವ್ಯಕ್ತಿತ್ವ ಹಾಗೂ ಸಾಧನೆಗಳನ್ನೂ, ಅವರ ಇತಿಮಿತಿಗಳನ್ನೂ ತಕ್ಕ ಗೌರವದಿಂದಲೇ ಗುರುತಿಸಲಾಗಿದೆ. ಆದರೆ ಕನ್ನಡ ನವೋದಯದ ಮಾರ್ಗನಿರ್ಮಾಪಕರಲ್ಲಿ ಮುಖ್ಯರಾದ ಅವರು ತೆರೆದ ‘ನವೋದಯ’ವನ್ನು ಕುರಿತು-

………………….. ದಿಗ್ಭ್ರಾಂತರಿಗೆ
ತೋರಿದಿರಿ ನಿರಪಾಯ ದಾರಿ. ಅಪ್ಪಣೆ ಕೊಡಿಸಬೇಕು ಗುರುಗಳೆ ನಮಗೆ
ಇದು ನವೋದಯವೆ?
…………………………………
ಅರ್ಥಗೌರವವಿರದ ವಾಗಾಡಂಬರಕ್ಕೆ ಬೂಟಾಟಿಕೆಗೆ
ನಾಂದಿ ಹಾಕಿದ್ದೇಕೆ ಹೇಳಿ ಗುರುವೆ?

ಎಂದು ಪ್ರಶ್ನಿಸುತ್ತಾರೆ. ಈಗ ಪ್ರಸ್ತಾಪಿಸಿದ ಈ ಪ್ರತಿಕ್ರಿಯೆಗಳ ಮೂಲಕ ತಮಗೆ ‘ಪ್ರತಿಪಕ್ಷ’ವಾದ ನವೋದಯ ಸಾಹಿತ್ಯ ಪರಂಪರೆಯನ್ನು ಕುರಿತು, ಅದರೊಳಗೆ ತೊಡಗಿಕೊಂಡ ಗೌರವಾನ್ವಿತ ಬರಹಗಾರರನ್ನು ಕುರಿತು, ಅಡಿಗರು ವ್ಯಕ್ತಪಡಿಸಿರುವ ಅವರ ‘ಕಾವ್ಯಾಂತರ್ಗತ’ ಅಭಿಪ್ರಾಯಗಳನ್ನು, ಎಲ್ಲ ಚಳುವಳಿಗಳ ಅಬ್ಬರಗಳೂ ತಣ್ಣಗಾದ ಈಚೆಯ ನೆಲೆಯಲ್ಲಿ ನಿಂತು ಮರುಪರಿಶೀಲನೆ ಮಾಡಿದರೆ, ಅವು ಎಷ್ಟೊಂದು ಪೂರ್ವಗ್ರಹಪೀಡಿತವೂ, ಅನಾರೋಗ್ಯಕರವೂ, ಸತ್ಯದೂರವೂ ಆದವುಗಳೆಂದು ತೋರದೆ ಇರುವುದಿಲ್ಲ. ಇದು ಅಡಿಗರು ಗ್ರಹಿಸಿದ ಅಥವಾ ವ್ಯಾಖ್ಯಾನಿಸಿದ ನವೋದಯ ಪರಂಪರೆಯ ಒಂದು ವಿಕೃತ ಚಿತ್ರ. ಒಬ್ಬ ಸೃಜನಶೀಲ ಲೇಖಕ ತನ್ನ ಸಮಕಾಲೀನ ಪರಂಪರೆಯ ಬಗೆಗೆ ಪ್ರತಿಕ್ರಿಯಿಸುವ ವಿಧಾನ ಹೀಗಲ್ಲ. ಕನ್ನಡ ಸಾಹಿತ್ಯ ಪರಂಪರೆಗೆ ಈ ಕ್ರಮ ಬಹುಶಃ ಅಪರಿಚಿತವಾದದ್ದು.

ಭಾರತೀಯ ಪುನರುಜ್ಜೀವನದ ಪರಿಣಾಮವಾಗಿ ‘ನವೋದಯ’ವು ಗಳಿಸಿಕೊಂಡ ಹೊಸತಿಳಿವಿನಲ್ಲಿ, ಅದು ಪರಂಪರೆಯ ಬಗೆಗೆ ತೋರಿದ ಪ್ರತಿಕ್ರಿಯೆ ತುಂಬ ಆರೋಗ್ಯಕರವಾದುದಾಗಿದೆ. ಅದರ ಪರಂಪರೆಯ ಚೌಕಟ್ಟು ಒಂದು ಬಗೆಯ ಜಾಗತಿಕವೆನ್ನಬಹುದಾದ ವಿಸ್ತಾರವನ್ನು ಪಡೆದುಕೊಂಡಿತೆಂಬುದು ಒಂದು ವಿಶೇಷದ ಸಂಗತಿಯಾಗಿದೆ. ಹೀಗಾಗಿ ಪೂರ್ವದ್ದು, ಪಶ್ಚಿಮದ್ದು, ಪ್ರಾಚೀನವಾದದ್ದು, ನವೀನವಾದದ್ದು, ಸಾಂಪ್ರದಾಯಿಕವಾದದ್ದು, ಮತ್ತು ಪರಂಪರೆಯಿಂದ ಬಂದದ್ದು ಎಲ್ಲವನ್ನೂ ಗ್ರಹಿಸಿ, ಅರಗಿಸಿಕೊಂಡು ಒಂದು ಘನವಾದ ವ್ಯಕ್ತಿತ್ವವನ್ನು ನಿರ್ಮಾಣ ಮಾಡಿಕೊಳ್ಳಬಹುದೆಂಬುದು ಅದರ ನಿಲುವಾಗಿದೆ. ನವೋದಯದ ಮಹತ್ವಾಕಾಂಕ್ಷೆಯ ಕೃತಿಯಾದ ‘ಶ್ರೀ ರಾಮಾಯಣದರ್ಶನಂ’ ಮಹಾಕಾವ್ಯದಲ್ಲಿ –

ಹೋಮರಗೆ ವರ್ಜಿಲಗೆ ಡಾಂಟೆ ಮೇಣ್ ಮಿಲ್ಟನಗೆ
ನಾರಾಣಪ್ಪಂಗೆ ಮೇಣ್ ಪಂಪನಿಗೆ, ಋಷಿವ್ಯಾಸ
ಭಾಸ ಭವಭೂತಿ ಮೇಣ್ ಕಾಳಿದಾಸಾದ್ಯರಿಗೆ
ನರಹರಿ ತುಲಸಿದಾಸ ಮೇಣ್ ಕೃತ್ತಿವಾಸಾದಿ
ನನ್ನಯ್ಯ ಫಿರ್ದೂಸಿ ಕಂಬಾರವಿಂದರಿಗೆ
ಹಳಬರಿಗೆ ಹೊಸಬರಿಗೆ ಹಿರಿಯರಿಗೆ ಕಿರಿಯರಿಗೆ
ಕಾಲ ದೇಶದ ನುಡಿಯ ಜಾತಿಯ ವಿಭೇದಮಂ
ಲೆಕ್ಕಿಸದ ಜಗತೀ ಕಲಾಚಾರ್ಯರೆಲ್ಲರ್ಗೆ
ಜ್ಯೋತಿಯಿರ್ಪೆಡೆಯಲ್ಲಿ ಭಗವದ್ ವಿಭೂತಿಯಂ
ದರ್ಶಿಸುತೆ ಮುಡಿಬಾಗಿ ಮಣಿದು ಕೈಜೋಡಿಸುವೆ ನಾಂ
(ರಾಮಾಯಣ ದರ್ಶನಂ ಪು. ೧೮)

ಎಂಬ ಈ ಗೌರವ ಸ್ಮರಣೆ, ಒಂದು ರೀತಿಯಲ್ಲಿ ನಮ್ಮ ಹಳಗನ್ನಡ ಕವಿ ಸಂಪ್ರದಾಯದಲ್ಲಿ ಬಹುಮಟ್ಟಿಗೆ ನಿಯತವಾಗಿ ಕಾಣಿಸಿಕೊಳ್ಳುವ ‘ಪೂರ್ವ ಕವಿಸ್ಮರಣೆ’ಯನ್ನು ನೆನಪಿಗೆ ತರುವಂತಿದ್ದರೂ, ಅದು ಮುಖ್ಯವಾಗಿ ನವೋದಯ ಕಾಲದ ಕವಿಗಳ ಕಾವ್ಯ ಪರಂಪರೆಯ ಕಲ್ಪನೆಗೆ ಒಂದು ಪ್ರತೀಕವಾಗಿದೆ. ತಮಗಿಂತಹಿಂದಿನಪರಂಪರೆಯ ಸತ್ವಗಳು ತಮ್ಮಕೃತಿ ರಚನೆಯೊಳಗೆ ಅಂತರ್ಗತವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುವ, ಮತ್ತು ಕನ್ನಡ ಕವಿಗಳಿಗೇ ವಿಶಿಷ್ಟವಾದ ಈ ಪೂರ್ವ ಕವಿಸ್ಮರಣೆಯ ಲಕ್ಷಣಗಳು ಹೊಸಗನ್ನಡ ಕವಿಗಳಲ್ಲಿ, ಅದರಲ್ಲಿಯೂ ನವೋದಯ ಕವಿಗಳಲ್ಲಿ ಬೇರೊಂದು ರೂಪದಲ್ಲಿ ಮುಂದುವರಿದಿರುವುದು, ಈ ಕಾವ್ಯ ಚಿಂತನೆಯೊಳಗಣ ಒಂದು ವಿಶೇಷವಾಗಿದೆ. ಕುವೆಂಪು, ಬೇಂದ್ರೆ, ಪು.ತಿ.ನ, ಕೆ.ಎಸ್.ನ, ಕಣವಿ, ಜಿಎಸ್ಸೆಸ್, ನಿಸಾರ್ ಅಹಮದ್ ಈ ಮೊದಲಾದ ಕವಿಗಳು ತಮಗೆ ಹಿಂದಿನ ಹಿರಿಯ ಕವಿಗಳನ್ನು ಮಾತ್ರವಲ್ಲ, ತಮಗೆ ಸಮಕಾಲೀನರಾದ ಹಿರಿಯ ಹಾಗೂ ಓರಗೆಯ ಕವಿಗಳನ್ನೂ ಕುರಿತು ಕವಿತೆ ಬರೆದಿದ್ದಾರೆ. ಪಂಪ, ಕುಮಾರವ್ಯಾಸ, ರನ್ನ, ರತ್ನಾಕರ, ಮುದ್ದಣ, ಅಲ್ಲಮಪ್ರಭು, ಮಧುರಚೆನ್ನ, ಬಿ.ಎಂ.ಶ್ರೀ, ಮಾಸ್ತಿ, ಪಂಜೆ, ಪೈ, ವೆಂಕಣ್ಣಯ್ಯ, ತೀ.ನಂ.ಶ್ರೀ, ವಿಸೀ., ಕಾರಂತ ಇವರನ್ನು ಒಳಗೊಂಡು ಇನ್ನೂ ಹಲವರನ್ನು ಕುರಿತು ರಚಿತವಾದ ಕವಿತೆಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಶ್ರೀ ಚನ್ನವೀರಕಣವಿಯವರು, ಈ ನಿಟ್ಟಿನಲ್ಲಿ ಬರೆದ ಕವಿತೆಗಳು, ಅದರಲ್ಲಿಯೂ ಸಾನೆಟ್‌ಗಳು, ಬೇರೆಯವರಿಗಿಂತ ಅಧಿಕ ಸಂಖ್ಯೆಯಲ್ಲಿವೆ ಎನ್ನುವುದನ್ನು ಪ್ರತ್ಯೇಕವಾಗಿ ಉಲ್ಲೇಖಿಸಬೇಕಾಗಿದೆ. ಒಂದು ಮುಖ್ಯವಾದ ವ್ಯತ್ಯಾಸವೆಂದರೆ ಹಳಗನ್ನಡ ಕಾವ್ಯ ಸಂದರ್ಭದಲ್ಲಿ ಒಬ್ಬ ಸಮಕಾಲೀನ ಕವಿ ಮತ್ತೊಬ್ಬ ಸಮಕಾಲೀನಕವಿಯನ್ನು ನೆನೆಯುವ ಹಾಗೂ ಮೆಚ್ಚುವ ದಾಖಲೆಗಳೇ ಇಲ್ಲ. ಬಹುಶಃ ಅದಕ್ಕೆ ಕಾಲ, ದೇಶಗಳ ಅಂತರಕ್ಕೆ ಸಂಬಂಧಿಸಿದ ಕಾರಣಗಳಿರಬಹುದೇನೋ. ಹೊಸಗನ್ನಡದಲ್ಲಾರೋ ಕೇವಲ ಹಿಂದಿನವರನ್ನು ಮಾತ್ರವಲ್ಲ, ಸಮಕಾಲೀನರಾದ ಹಿರಿಯರ ಅಥವಾ ಗೆಳೆಯರಾದ ಕವಿಗಳ ವಿಚಾರದಲ್ಲಿ ಪ್ರೀತಿ-ಗೌರವ-ಅಭಿಮಾನಗಳನ್ನು ವ್ಯಕ್ತಪಡಿಸುವ ಕವಿತೆಗಳು ಸಾಕಷ್ಟಿವೆ. ಅಷ್ಟೇ ಅಲ್ಲ, ಇವು ಹಿಂದಿನ ಕಾವ್ಯಗಳಲ್ಲಿಯಂತೆ, ಕೇವಲ ಗೌರವ ಪೂರ್ವಕವಾದ ನೆನಕೆಗಳು ಮಾತ್ರವಾಗದೆ, ತಾವು ಮೆಚ್ಚುವ ಹಾಗೂ ಗೌರವಿಸುವ ಕವಿಗಳನ್ನು ಕುರಿತ ಸೊಗಸಾದ ವ್ಯಕ್ತಿಚಿತ್ರಗಳೂ ಆಗಿವೆ. ಈ ಸಂದರ್ಭದಲ್ಲಿ ವೇಣುಗೋಪಾಲ ಸೊರಬ ಅವರು ಪ್ರಕಟಿಸಿರುವ ‘ಬಿಂಬ’ (೧೯೮೪) ಎಂಬ ಕವನ ಸಂಗ್ರಹ, ಈ ವಿಷಯದಲ್ಲಿ ಒಂದು ಪ್ರಯೋಗದಂತಿದೆ. ಸಮಕಾಲೀನ ಸಾಹಿತಿ-ಕಲಾವಿದರನ್ನು ಕುರಿತು ಇರುವ ಒಟ್ಟು ನಲವತ್ತು ಕವಿತೆಗಳಲ್ಲಿ, ಮೂವತ್ತಾರು ಪದ್ಯಗಳು ಸಮಕಾಲೀನ ಸಾಹಿತಿಗಳನ್ನು ಕುರಿತವುಗಳಾಗಿವೆ  ಎಂಬುದು ಈ ಸಂಗ್ರಹದ ವಿಶೇಷವಾಗಿದೆ. ಸಮಕಾಲೀನ ಸಾಹಿತಿಗಳನ್ನು ಕುರಿತು ಆಧುನಿಕ ಸಂದರ್ಭದಲ್ಲಿ ದೊರೆಯುವ ಬಹುಸಂಖ್ಯೆಯ ಕವಿತೆಗಳೇ ಒಂದು ಪ್ರತ್ಯೇಕ ಅಧ್ಯಯನಕ್ಕೆ ವಸ್ತುವಾಗಬಹುದು. ಈ ಸರಣಿಯಲ್ಲಿ ನಮ್ಮ ಕವಿಗಳಿಗೆ ಅಧ್ಯಯನದ ಮೂಲಕ ಪರಿಚಿತರಾದ ಪಾಶ್ಚಾತ್ಯ ಕವಿಗಳನ್ನು ಕುರಿತ ಕವಿತೆಗಳೂ ಇವೆ. ವರ್ಡ್ಸ್‌ವರ್ತ್, ಹೋಮರ್, ಟಾಲ್‌ಸ್ಟಾಯ್, ಇವರನ್ನು ಕುರಿತು ಕುವೆಂಪು ಅವರು ಬರೆದ ಸಾನೆಟ್‌ಗಳು ಈ ಮಾತಿಗೆ ನಿದರ್ಶನವಾಗಿವೆ. ಹಾಗೆಯೆ ರವೀಂದ್ರನಾಥ ಟ್ಯಾಗೂರ್, ಶ್ರೀ ಅರವಿಂದರು – ಈ ಪಂಕ್ತಿಗೆ ಸೇರುತ್ತಾರೆ. ಈ ಎಲ್ಲ ಕವಿತೆಗಳಲ್ಲಿ, ಹಿಂದಿನ ಹಾಗೆ, ಕೇವಲ ಗೌರವ ಸ್ಮರಣೆಯಷ್ಟೇ ಮುಖ್ಯವಾಗದೆ, ಯಾವ ಕಾರಣಗಳಿಗಾಗಿ, ಹಾಗೂ ವೈಶಿಷ್ಟ್ಯಗಳಿಗಾಗಿ ಈ ಕವಿಗಳು ತಮಗೆ ಇಷ್ಟವಾದರು ಎಂಬುದರ ಸಮರ್ಥನೆಯೂ, ಕವಿತೆಯೊಳಗೆ ಕಟ್ಟಿಕೊಳ್ಳುತ್ತದೆ. ಮತ್ತೆ ಹಲವು ವೇಳೆ ಆಯಾ ಕವಿಗಳನ್ನು ಕುರಿತ ವಿಮರ್ಶಾತ್ಮಕ ಪ್ರತಿಕ್ರಿಯೆಯೂ ಅಭಿವ್ಯಕ್ತವಾಗುತ್ತದೆ. ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎಂಬ ಉಕ್ತಿಯ ಮೂಲಕ, ಕುಮಾರವ್ಯಾಸ ಭಾರತ ತಮ್ಮ ಮೇಲೆ ಮಾಡಿದ ಪರಿಣಾಮವನ್ನು ಕುವೆಂಪು ಹಿಡಿದಿರಿಸಿದರೆ, ‘ನೆಲಮುಗಿಲುಗಳನೊಂದೆ ಅಂಗೈಲಿ ಹಿಡಿವಂತೆ ಭೋಗಯೋಗವ ಹೊಂದಿಸಿಹ ದಿವ್ಯ ಭವ್ಯ ಕವಿ’ ಎಂದು ಬೇಂದ್ರೆಯವರು ರತ್ನಾಕರನ ಕಾವ್ಯದ ವೈಶಿಷ್ಟ ವನ್ನು ಪ್ರಶಂಸಿಸುತ್ತಾರೆ. ವರ್ಡ್ಸ್‌ವರ್ತನನ್ನು ಕುರಿತು ಬರೆದ ಸಾನೆಟ್‌ನಲ್ಲಿ ಕುವೆಂಪು ಅವರು ವರ್ಡ್ಸ್‌ವರ್ತ್‌ನನ್ನು ‘ಪರ್ಣಕುಟಿ’ ಎಂದು ಮೆಚ್ಚುತ್ತ, ಷೇಕ್ಸ್‌ಪಿಯರನನ್ನು ‘ಸಂತೆ’ ಎಂದು ಟೀಕಿಸುತ್ತಾರೆ; ಹೋಮರನನ್ನು ಕುರಿತು ಬರೆದ ಕವಿತೆಯಲ್ಲಿ ರಾಮಾಯಣದ ಸೀತೆಯ ಶುಚಿಯಲ್ಲಿ ಮಿಂದ ತಮಗೆ, ಹೋಮರನ ಹೆಲೆನ್ ಏಕೆ ಹಿಡಿಸಲಿಲ್ಲವೆಂಬುದನ್ನು ಸೂಚಿಸುತ್ತಾರೆ. ಇವು ಒಂದು ರೀತಿಯಲ್ಲಿ ಒಂದು ಪರಂಪರೆಯ ಕವಿ ಬೇರೊಂದು ಪರಂಪರೆಯ ಕವಿಗಳ ಬಗ್ಗೆ ತೋರುವ ಸೃಜನಾತ್ಮಕ ಪ್ರತಿಕ್ರಿಯೆಗಳಾಗಿವೆ. ಈ ಎಲ್ಲ ಕವಿತೆಗಳು, ಸಾಹಿತ್ಯಲೋಕದ ಬಾಂಧವ್ಯಗಳನ್ನೂ. ಪರಂಪರೆಯ ಬಗೆಗೆ ಕವಿಗಳಿಗಿರುವ ಕಾಳಜಿಗಳನ್ನೂ ಪ್ರಕಟಿಸುವುದರ ಜತೆಗೆ, ಕವಿಗಳನ್ನು ಕುರಿತ ಒಂದು ಬಗೆಯ ವ್ಯಕ್ತಿಚಿತ್ರಕವಿತೆಯ ಪರಂಪರೆಯನ್ನೂ ನಿರ್ಮಿಸಿವೆ. ಈಗಾಗಲೇ ಸೂಚಿಸಿದಂತೆ ಮುಖ್ಯವಾಗಿ ಇದು, ನವೋದಯಮಾರ್ಗಕ್ಕೆ ಸೇರಿದ ಕವಿಗಳಲ್ಲಿ ಕಂಡುಬರುವ ಒಂದು ವಿಶೇಷವಾಗಿದೆ ಮತ್ತು ತಮ್ಮ ಹಿಂದಿನ ಕಾವ್ಯಪರಂಪರೆಯಿಂದ ಪಡೆದುಕೊಂಡ ಮತ್ತು ಅದನ್ನು ಹೊಸ ಸಂದರ್ಭದಲ್ಲಿ ಬಳಸಿಕೊಂಡ ಕ್ರಮವಾಗಿದೆ. ಆದರೆ ಮುಂದಿನ ನವ್ಯ ಹಾಗೂ ನವ್ಯೋತ್ತರ ಚಳುವಳಿಗಳಲ್ಲಿ ಇದು ಕಾಣದು, ನವ್ಯ ಪರಂಪರೆಯಲ್ಲಿ ಅಡಿಗರು ಬರೆದಿರುವ ‘ಬಿಎಂಶ್ರೀ ಅವರಿಗೆ’ ಎಂಬ ಒಂದೇ ಪದ್ಯದ ಹೊರತು. ಇದು ಕೂಡಾ ಶ್ರೀಯವರ ಬಗ್ಗೆ ಗೌರವವನ್ನಿರಿಸಿಕೊಂಡೂ, ಅತ್ಯಂತ ವಸ್ತುನಿಷ್ಠವಾಗಿ ಅವರ ಕಾವ್ಯಮಾರ್ಗವನ್ನು ವಿಮರ್ಶೆಗೆ ಗುರಿಪಡಿಸುವ ನಿಲುವಿನದಾಗಿದೆ.

ಕನ್ನಡ ಸಾಹಿತ್ಯ ಪರಂಪರೆಯನ್ನು ಉದ್ದಕ್ಕೂ ನಿಯಂತ್ರಿಸಿಕೊಂಡು ಬಂದ ಎರಡು ಶಕ್ತಿಗಳೆಂದರೆ ಧರ್ಮಶ್ರದ್ಧೆ ಮತ್ತು ರಾಜನಿಷ್ಠೆ. ರಾಜಾಶ್ರಯದಲ್ಲಿ ಬೆಳೆದ ಕನ್ನಡ ಕಾವ್ಯ ರಾಜನಿಷ್ಠೆಯನ್ನು ಒಪ್ಪಿಕೊಂಡದ್ದಕ್ಕೆ ಕಾರಣ ಅಂದಿನ ರಾಜಕೀಯ ವ್ಯವಸ್ಥೆಯೇ ಹಾಗಿತ್ತೆನ್ನುವುದಷ್ಟೇ ಕಾರಣವಲ್ಲ, ಕಾವ್ಯವೆಂಬ ಸಂಸ್ಥೆಯನ್ನು ಸಂರಕ್ಷಿಸಲು, ಹಾಗೂ ಪ್ರೋತ್ಸಾಹಿಸಲು, ಗುರುತಿಸಿ ಗೌರವಿಸಲು ಮತ್ತು ಸಾಹಿತ್ಯದ ಸಂವಹನ – ಸಂವರ್ಧನೆಗೆ ತಕ್ಕ ವಾತಾವರಣವನ್ನು ಕಲ್ಪಿಸಲು ರಾಜಾಶ್ರಯ ಅಗತ್ಯವಾಗಿತ್ತೆಂಬುದೂ ಕಾರಣವಾಗಿದೆ. ಇದು ಒಂದು ರೀತಿಯಲ್ಲಿ ರಾಜಸತ್ತೆಯ ಸಾಂಸ್ಕೃತಿಕ ಜವಾಬ್ದಾರಿ ಕೂಡಾ; ಅದನ್ನು ಅಂದಿನ ಪ್ರಭುತ್ವ ಅತ್ಯಂತ ಉತ್ಸಾಹದಿಂದ ಒಪ್ಪಿಕೊಂಡಿತ್ತು. ಈ ರಾಜಾಶ್ರಯದ ಕೆಲವು ಹಂಗುಗಳಿಗೆ, ಕವಿ ಒಳಗಾಗಬೇಕಾಗಿತ್ತೆಂಬುದು ನಿಜವಾದರೂ, ಯಾವತ್ತೂ ಕನ್ನಡದ ನಿಜವಾದ ಕವಿಗಳು ಈ ಕಾರಣದಿಂದ, ತಮ್ಮ ವ್ಯಕ್ತಿತ್ವವನ್ನಾಗಲೀ, ಕಾವ್ಯ ಸಾಮರ್ಥ್ಯ -ವನ್ನಾಗಲೀ ರಾಜನಿಷ್ಠೆಗೆ ಅಧೀನವನ್ನಾಗಿ ಮಾಡಿಕೊಳ್ಳಲಿಲ್ಲ; ಮತ್ತು ತಮಗೆ ಆಶ್ರಯಕೊಟ್ಟ ರಾಜರ ಜೊತೆಗಿನ ಅವರ ಸಂಬಂಧ ‘ಆಳರಸರ’ ಸಂಬಂಧವಾಗಿರದೆ, ಸ್ನೇಹ-ವಿಶ್ವಾಸ-ಅಭಿಮಾನಗಳಿಂದ ಕೂಡಿದ ಮಾನವೀಯ ನೆಲೆಯದೇ ಆಗಿದ್ದಂತೆ ತೋರುತ್ತದೆ. ಆದರೆ ‘ರಾಜಾಶ್ರಯ’ದಲ್ಲಿ ಬೆಳೆದ ಕಾವ್ಯ ತನ್ನ ವಸ್ತು ಹಾಗೂ ಭಾಷೆಯ ದೃಷ್ಟಿಯಿಂದ ಮಾರ್ಗೀಯವಾಯಿತೆಂಬುದು ನಿಜ. ಆದರೂ, ರಾಜಾಶ್ರಯದ ಹಂಗುಗಳನ್ನು ಅದು ದಾಟಲು ಸಾಧ್ಯವಾದದ್ದು ಧರ್ಮಶ್ರದ್ಧೆಯಿಂದಲೇ. ಧರ್ಮಶ್ರದ್ಧೆಯ ನೆಲೆಯಲ್ಲಿ ವ್ಯಕ್ತಿತ್ವಕ್ಕೆ ಒದಗುವ ಆತ್ಮಪ್ರತ್ಯಯದಿಂದ, ಕನ್ನಡ ಕಾವ್ಯ ಅಧೀನತೆಗಳನ್ನು ಮೀರುತ್ತಲೇ ಬೇರೆಯಾಗಿದೆ. ಮತ್ತು ಭಕ್ತಿ ಹಾಗೂ ಅನುಭಾವ ಚಳುವಳಿಗಳ ಸಂದರ್ಭದಲ್ಲಿ ಹಾಗೂ ಅನಂತರ ಅದು ಸಂಪೂರ್ಣವಾಗಿ ರಾಜಾಶ್ರಯದ ಹಂಗನ್ನು ಹರಿದುಕೊಂಡು, ಜನ ಸಮ್ಮುಖತೆಯಲ್ಲಿ ತನ್ನನ್ನು ನಿಲ್ಲಿಸಿಕೊಂಡಿತು. ಮತ್ತು ಈ ಹಂತಗಳಲ್ಲಿ ಅದು ಮಹತ್‌ಪರಂಪರೆಯಲ್ಲಿ ಕಾಣದ ಹೊಸ ಸಾಹಿತ್ಯರೂಪಗಳನ್ನು ಆವಿಷ್ಕಾರ ಮಾಡಿಕೊಂಡು ‘ದೇಶೀಯ’ ಸತ್ವವನ್ನು ಅತ್ಯಂತ ವೈವಿಧ್ಯಮಯವಾಗಿ ದುಡಿಸಿಕೊಂಡಿತು. ಈ ಹಿನ್ನೆಲೆಯಿಂದ ನೋಡುವುದಾದರೆ, ಕನ್ನಡ ಸಾಹಿತ್ಯದಲ್ಲಿ ಉದ್ದಕ್ಕೂ ರಾಜವಿರೋಧೀ ಧೋರಣೆಯೊಂದು ಅಂತರ್ಗತವಾಗಿ ಪ್ರವಹಿಸಿದೆ. ಈ ಧೋರಣೆ, ಆಧುನಿಕ ಕನ್ನಡ ಕಾವ್ಯ ಸಂದರ್ಭದಲ್ಲಿ ಮುಖ್ಯವಾಗಿ ಸ್ವಾತಂತ್ರ್ಯಪೂರ್ವದ ರಾಜ್ಯವ್ಯವಸ್ಥೆಗೆ ಒಳಗಾದ ಪರಿಸರದಲ್ಲಿ ಕಾವ್ಯನಿರ್ಮಿತಿಗೆ ತೊಡಗಿದ ಕುವೆಂಪು ಅವರಲ್ಲಿ ತುಂಬ ಗಟ್ಟಿಯಾಗಿ ಅಭಿವ್ಯಕ್ತವಾಗಿದೆ. ‘ವಸಂತ ವನದಲಿ ಕೂಗುವ ಕೋಗಿಲೆ ರಾಜನ ಬಿರುದನು ಬಯಸುವುದಿಲ್ಲ’ (ಪಾಂಚಜನ್ಯ ಪು. ೩೬) ‘ವಿಪ್ಲವ ಕ್ರಾಂತಿಯ ಸಖನಾಗಿಹನೈ’, ‘ಕವಿಗರಸುಗಿರಸುಗಳ ಋಣವಿಲ್ಲ’ (ಪಾಂಚಜನ್ಯ ಪು. ೩೬) ‘ಚಕ್ರವರ್ತಿಯ ವಿಪುಲ ಸಂಪತ್ತು ಕವಿಯ ಕಾಲ್ಗಳಡಿ’ (ಪಕ್ಷಿಕಾಶಿ ಪು. ೭೦) – ಈ ಕೆಲವು ಉಕ್ತಿಗಳಲ್ಲಿ ಅದನ್ನು ಗುರುತಿಸಬಹುದು. ಇದರ ಜತೆಗೆ ಭಾರತೀಯ ಪುನರುಜ್ಜೀವನದಿಂದಾಗಿ, ಮೂಡಿದ ‘ರಾಷ್ಟ್ರೀಯ ಪ್ರಜ್ಞೆ’ಯ ಪರಿಣಾಮವಾಗಿ ಚಾಲನೆಗೊಂಡ ಸ್ವಾತಂತ್ರ್ಯ ಹೋರಾಟದ ಮುಖ್ಯ ಗುರಿ, ಎಲ್ಲ ಬಗೆಯ ಪ್ರಭುತ್ವಗಳನ್ನೂ ಧಿಕ್ಕರಿಸುವ ಸ್ವರೂಪದ್ದಾಗಿದೆ. ಇದರಿಂದಾಗಿ ‘ರಾಜಭಕ್ತಿ’ಯ ಕಲ್ಪನೆಯಲ್ಲಿಯೆ ಬೆಳೆದ ಭಾರತೀಯ ಮನಸ್ಸು ರಾಷ್ಟ್ರೀಯತೆಯ ಪರಿಣಾಮವಾಗಿ ‘ದೇಶಭಕ್ತಿ’ಯ ನೆಲೆಗೆ ಬಂದದ್ದು ಬಹುಮುಖ್ಯವಾದ ಬದಲಾವಣೆಯಾಗಿದೆ. ಈ ದೃಷ್ಟಿಯಿಂದ ಭಾರತೀಯ ನವೋದಯದ ಒಂದು ಪ್ರಮುಖಧಾರೆಯಾಗಿ ‘ರಾಷ್ಟ್ರೀಯತೆ’ ಎಲ್ಲ ಭಾರತೀಯ ಭಾಷಾ ಸಾಹಿತ್ಯಗಳಲ್ಲಿ ಕಾಣಿಸಿಕೊಂಡಿದೆ. ಕನ್ನಡ ನವೋದಯದಲ್ಲಿ ರಾಷ್ಟ್ರೀಯತೆ ತುಂಬ ಶಕ್ತವಾಗಿ ಅಭಿವ್ಯಕ್ತವಾದದ್ದು ಬೇಂದ್ರೆ ಮತ್ತು ಕುವೆಂಪು ಅವರಲ್ಲಿ. ಬೇಂದ್ರೆಯವರ ‘ಮೂವತ್ತು ಮೂರು ಕೋಟಿ’, ‘ನರಬಲಿ’ ಇಂಥ ಕವನಗಳೂ, ಕುವೆಂಪು ಅವರ ‘ಪಾಂಚಜನ್ಯ’ ಸಂಗ್ರಹದೊಳಗಿನ ಎಷ್ಟೋ ಕವನಗಳೂ ಇದಕ್ಕೆ ಸಾಕ್ಷಿಯಾಗಿವೆ. ಬೇಂದ್ರೆಯವರ ‘ನರಬಲಿ’ ಕವನ ನೇರವಾಗಿ ಅವರನ್ನು ಪ್ರಭುತ್ವದ ಅಗ್ರಹದ ದವಡೆಯೊಳಕ್ಕೆ ಒಯ್ದಿತೆಂಬುದು ತಿಳಿದ ವಿಚಾರ; ಆದರೆ ಕುವೆಂಪು ಅವರ ಕವನಗಳೂ ಅಂದಿನ ಸ್ವಾತಂತ್ರ್ಯ ಚಳುವಳಿಗಾರರಿಗೆ ಕ್ರಾಂತಿಮಂತ್ರಗಳಂತೆ ವರ್ತಿಸಿದವು. ಈ ಕಾಲದ ಬಹುತೇಕ ಎಲ್ಲ ಕವಿಗಳಲ್ಲೂ ಈ ರಾಷ್ಟ್ರೀಯತೆಯ ಅಭಿವ್ಯಕ್ತಿ – ಗೋವಿಂದ ಪೈ, ವಿ. ಸೀ., ರಾಜರತ್ನಂ – ತಕ್ಕ ಪ್ರಮಾಣದಲ್ಲಿ ಕಾಣಿಸಿಕೊಂಡಿರುವುದಲ್ಲದೆ, ಈ ಹೋರಾಟದ ಕೇಂದ್ರಬಿಂದುವಾದ ಗಾಂಧಿಯವರನ್ನೂ ಮತ್ತಿತರ ನಾಯಕರನ್ನೂ ಕುರಿತ ಕವಿತೆಗಳು ಸಾಕಷ್ಟು ಸಂಖ್ಯೆಯಲ್ಲಿವೆ – ಎನ್ನುವುದು ಗಮನಿಸಬೇಕಾದ ಸಂಗತಿಯಾಗಿದೆ. ಮತ್ತು ಈ ಗಾಂಧೀಯುಗದ ಆದರ್ಶಗಳೂ, ಮೌಲ್ಯಗಳೂ, ಪ್ರಜಾಪ್ರಭುತ್ವವಾದೀ ನಿಲುವುಗಳೂ, ಎಲ್ಲ ಬಗೆಯ ನಿಯಂತ್ರಣಗಳನ್ನು ಧಿಕ್ಕರಿಸಿ ತನ್ನ ವ್ಯಕ್ತಿತ್ವವನ್ನು ಅನಾವರಣಗೊಳಿಸಿಕೊಂಡ ನೆಲೆಯಲ್ಲಿ ನಿಲ್ಲುವ ಮನುಷ್ಯತ್ವದ ಕಲ್ಪನೆಯೊಂದನ್ನು ಕಟ್ಟಿಕೊಟ್ಟವು. ಈ ಕಾರಣದಿಂದಲೇ ನವೋದಯ ಕಾವ್ಯದಲ್ಲಿ ಏನೋ ಒಂದು ಧೈರ್ಯ, ಸಂಭ್ರಮ, ಉಲ್ಲಾಸ, ನಾವೀನ್ಯತೆ, ಕನಸುಗಾರಿಕೆ, ಬೆರಗು ಇತ್ಯಾದಿಗಳು ಸಮೃದ್ಧವಾಗಿ ಪುಟಿಯುತ್ತಿರುವುದು. ಸೂರ‍್ಯೋದಯವನ್ನು ಕುರಿತು ಈ ಕಾಲದಲ್ಲಿ ಬಂದ ಹೆಚ್ಚು ಸಂಖ್ಯೆಯ ಕವಿತೆಗಳು, ಈ ‘ನವೋದಯ’ದ ಪ್ರತೀಕಗಳೇ ಆಗಿವೆ.