ಕೊಡಚಾದ್ರಿ

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೫೦ ಕಿ.ಮೀ

ಇದು ಹೊಸನಗರ-ಕೊಲ್ಲೂರು ಮಾರ್ಗದಲ್ಲಿದೆ. ಕೊಡಚಾದ್ರಿ ಬೆಟ್ಟ ಚಾರಣ ಪ್ರಿಯರಿಗೆ ಬಹು ಪರಿಚಿತ ಸ್ಥಳ. ಇಲ್ಲಿ ಶಂಕರಾಚಾರ್ಯರು ತಪಸ್ಸು ಮಾಡಿದ ಬಗ್ಗೆ ಪ್ರತೀತಿ ಇದೆ. ಇಲ್ಲಿರುವ ಸರ್ವಜ್ಞ ಪೀಠ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಪೀಠ ಎನ್ನಲಾಗುತ್ತದೆ. ಈ ಬೆಟ್ಟದಿಂದ ಸೂರ್ಯೋದಯ ನೋಡುವುದೇ ಒಂದು ಅದ್ಭುತ. ಚಿತ್ರ ಮೂಲವೆಂಬ ಬೆಟ್ಟ ಕೂಡ ಚಾರಣ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳ. ಇದು ಆಯುರ್ವೇದ ಗಿಡಮೂಲಿಕೆಗಳ ಆಗರ. ಇಲ್ಲಿ ಹಲವು ಗುಹೆಗಳಿವೆ. ರಾಷ್ಟ್ರದ ವಿವಿಧ ಕಡೆಗಳಿಂದ ಬಂದಂತಹ ಯೋಗಿಗಳು ಇಲ್ಲಿ ಇರುವ ಗುಹೆಗಳಲ್ಲಿ ತಪಸ್ಸು ಮಾಡಿ ಸಿದ್ಧಿ ಪಡೆದುಕೊಂಡು ಹೋಗುತ್ತಾರೆ. ರಾಮತೀರ್ಥ ಎಂಬಲ್ಲಿ ಹರಿಯುವ ನೀರಿನ ಮಧ್ಯೆ ಈಶ್ವರಲಿಂಗ ರಚನೆ ಕಾಣಬಹುದು.

ಬಿದನೂರು (ನಗರ)

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೫ ಕಿ.ಮೀ

ಕೆಳದಿಯ ನಾಯಕರ ಎರಡನೇ ರಾಜಧಾನಿ ಬಿದನೂರು. ಆಗ ಈ ಸ್ಥಳದಲ್ಲಿ ಒಂದು ಲಕ್ಷ ಮನೆಗಳಿದ್ದರಿಂದ ಇದನ್ನು ನಗರ ಎಂದು ಕರೆಯುತ್ತಾರೆ. ಇಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಲ್ಲುಗಳಿಂದ ನಿರ್ಮಿಸಲಾಗಿರುವ ಬೃಹದಾಕಾರದ ಕೋಟೆ ಇದೆ. ಶಿವಪ್ಪನಾಯಕ ಮತ್ತು ಆತನ ವಂಶಸ್ಥರು ಇಲ್ಲಿ ದರ್ಬಾರ್ ನಡೆಸುತ್ತಿದ್ದರು ಎಂಬುದು ಶಾಸನಗಳಿಂದ ತಿಳಿದುಬರುತ್ತದೆ. ಇಲ್ಲಿ ಹಲವು ಪ್ರಾಚೀನ ವಸ್ತುಗಳು, ಅವಶೇಷಗಳು ಕಂಡು ಬರುತ್ತವೆ. ಊರಿನಲ್ಲಿ ಹಲವು ಪ್ರಾಚೀನ ದೇವಾಲಯಗಳು, ಶಾಸನಗಳು, ಕೋಟೆಗಳು ಕಂಡುಬರುತ್ತವೆ.

 

ದೇವಗಂಗೆ

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೨೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೮ ಕಿ.ಮೀ

ನಗರ ಪಟ್ಟಣದಿಂದ ೩ ಕಿ.ಮೀ. ದೂರದಲ್ಲಿರುವ ಈ ಸ್ಥಳದಲ್ಲಿ ಈಶ್ವರ ದೇವಾಲಯವಿದೆ. ಸುಂದರವಾದ ಕೊಳಾಯಿ ಇದೆ. ಪಕ್ಕದಲ್ಲಿಯೇ ಸುಂದರವಾದ ೭ ಕಾರಂಜಿಗಳಿದ್ದು ಅವುಗಳಿಂದ ಸದಾ ನೀರು ಹೊರಬರುವ ದೃಶ್ಯ ಕಂಡುಬರುತ್ತದೆ.

 

ಕುಮದ್ವತಿ ನದಿಯ ಉಗಮ ಸ್ಥಾನ

ಬಿಲ್ಲೇಶ್ವರ

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೨೨ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೧ ಕಿ.ಮೀ

ಪೌರಾಣಿಕ ಹಿನ್ನಲೆಯಂತೆ ಶಿವಪಾರ್ವತಿಯರು ಇಲ್ಲಿ ಕೊಳವನ್ನು ನಿರ್ಮಿಸಿದರು. ಆದರೆ ಸ್ವಲ್ಪ ಸಮಯದ ನಂತರ ಈ ಕೊಳವನ್ನು ಮುಚ್ಚುವಂತೆ ಶಿವನು ಹನುಮಂತನಿಗೆ ಸೂಚಿಸಿದನು. ಶಿವನ ಸೂಚನೆಯಂತೆ ಹನುಮಂತ ಬೃಹತ್ ಪರ್ವತವೊಂದನ್ನು ತಂದು ಈ ಕೊಳವನ್ನು ಮುಚ್ಚಿದನು. ಮುಚ್ಚುವಾಗ ತನ್ನ ಕೈ ಬೆರಳುಗಳನ್ನು ಹೊರ ತೆಗೆದಾಗ ಐದು ತೀರ್ಥಗಳು ಉದ್ಭವವಾದವು. ಅವುಗಳೇ ದುಮದ್ವತಿ, ಕುಶಾವತಿ, ನರ್ಮದಾ, ತಪತಿ, ಶರ್ಮಣಾವತಿ ಇವುಗಳನ್ನು ನಾವು ಇಂದಿಗೂ ಸೂಕ್ಷ್ಮವಾಗಿ ನೋಡಬಹುದಾಗಿದೆ.

ಮಾರ್ಗ: ತೀರ್ಥಹಳ್ಳಿ-ರಿಪ್ಪನ್ ಪೇಟೆ

 

ಶ್ರೀ ಕ್ಷೇತ್ರ ಹೊಂಬುಜ

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೨೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬೦ ಕಿ.ಮೀ
ಮಾರ್ಗ: ಶಿವಮೊಗ್ಗ, ರಿಪ್ಪನ್ ಪೇಟೆ, ಹೊಂಬುಜ

ಐತಿಹಾಸಿಕ ಹಿನ್ನಲೆಯಂತೆ ಉತ್ತರದ ಮದುರೆಯಿಂದ ಪ್ರಾಣ ಭಯದಿಂದ ಪದ್ಮಾವತಿ ದೇವಿಯ ವಿಗ್ರಹದೊಂದಿಗೆ ಬಂದ ಜಿನದತ್ತರಾಯನಿಗೆ ಪದ್ಮಾವತಿ  ದೇವಿಯು ನಾನು ಇಲ್ಲಿಯೇ ನೆಲೆಸುವುದಾಗಿ ನೀನು ಇಲ್ಲಿಯೇ ರಾಜ್ಯವನ್ನು ಸ್ಥಾಪಿಸು ಎಂಬುದಾಗಿ ಪ್ರೇರಣೆ ನೀಡಿದಳು. ರಾಜ್ಯ ಸ್ಥಾಪಿಸಲು ಬೇಕಾದ ಸಂಪತ್ತನ್ನು ದೊರಕಿಸಲು ರಸಬಾವಿಯೊಂದನ್ನು ಸೃಷ್ಟಿಸಿ ಅದರಲ್ಲಿ ಕಬ್ಬಿಣ ಮುಳುಗಿಸಿದರೆ ಬಂಗಾರ ದೊರೆಯುವಂತೆ ಅನುಗ್ರಹಿಸಿದಳೆಂದು ನಂಬಲಾಗಿದೆ. ಆದ್ದರಿಂದ ಈ ಸ್ಥಳಕ್ಕೆ ಹೊಂಬುಜ (ಬಂಗಾರ ದೊರೆಯುವ ಸ್ಥಳ) ಎಂದು ಹೆಸರಾಯಿತು. ಇಲ್ಲಿರುವ ಶ್ರೀ ಪದ್ಮಾವತಿ ಮತ್ತು ಪಾರ್ಶ್ವನಾಥ ಮಂದಿರಕ್ಕೆ ಸಾವಿರಾರು ಪ್ರವಾಸಿಗರು, ಭಕ್ತಾದಿಗಳು ಬರುತ್ತಾರೆ. ಮುಂದೆ ಗಂಗರ ಸಾಮಂತರಾದ ಸಾಂತರರು ಈ ಹೊಂಬುಜವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸುಮಾರು ೮೦೦ ವರ್ಷ ಆಳ್ವಿಕೆ ನಡೆಸಿದರು. ಹೊಂಬುಜದಲ್ಲಿ ಹಲವು ಶಾಸನಗಳು, ಕೋಟೆಗಳು, ಪುರಾತನ ದೇವಾಲಯಗಳು ಕಂಡುಬರುತ್ತವೆ. ಇದು ಜೈನರ ಪವಿತ್ರ ಯಾತ್ರಾ ಸ್ಥಳವಾಗಿದೆ.

 

ಶ್ರೀ ರಾಮಚಂದ್ರಾಪುರ ಮಠ

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೫ ಕಿ.ಮೀ

ಆದಿ ಗುರು ಶಂಕರಾಚಾರ್ಯರಿಂದ ಸ್ಥಾಪಿತವಾದ ಮಠ. ಪೌರಾಣಿಕ ಹಿನ್ನಲೆಯಂತೆ ಶ್ರೀರಾಮ ಲಕ್ಷ್ಮಣರು ಈ ಸ್ಥಳಕ್ಕೆ ಬಂದಿದ್ದರು ಎನ್ನುವ ನಂಬಿಕೆ ಇದೆ. ಇಲ್ಲಿ ಶ್ರೀ ರಾಮ, ಸೀತೆ, ಲಕ್ಷ್ಮಣರ ದೇವಾಲಯವಿದೆ. ಸಮೀಪದಲ್ಲಿ ಅಗಸ್ತ್ಯ ತೀರ್ಥವಿದೆ. ದೇಶಿಯ ಗೋ-ತಳೀ ಸಂರಕ್ಷಿಸುವ ಸಲುವಾಗಿ ಅಮೃತಧಾರ ಗೋ-ಸಂರಕ್ಷಣಾ ಕೇಂದ್ರವನ್ನು ಶ್ರೀ ಮಠದ ವತಿಯಿಂದ ನಡೆಸಲಾಗುತ್ತಿದ್ದು, ಹೂವಿನ ವಿವಿಧ ಉತ್ಪನ್ನಗಳೂ, ಹಲವು ಔಷಧಿಗಳನ್ನು ತಯಾರಿಸಲಾಗುತ್ತಿದೆ. ಇಲ್ಲಿರುವ ಗೋ-ಸಂರಕ್ಷಣಾ ಕೇಂದ್ರದಲ್ಲಿ ನಮ್ಮ ದೇಶದಲ್ಲಿರುವ ಎಲ್ಲಾ ತಳಿಯ ಹಸುಗಳನ್ನು ಕಾಣಬಹುದಾಗಿದೆ. ಇಲ್ಲಿ ಅನೇಕ ಶಾಸನಗಳು, ಪುರಾತನ ವಸ್ತುಗಳನ್ನು ಇರಿಸಲಾಗಿದೆ.

 

ಚಕ್ರಾ ಅಣೆಕಟ್ಟು

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೯೫ ಕಿ.ಮೀ

ಲಿಂಗನಮಕ್ಕಿ ಜಲಾಶಯದ ಹಿನ್ನೀರು ಉಳಿಸಲು ಮತ್ತು ನೀರು ವ್ಯರ್ಥವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವುದನ್ನು ತಡೆಯುವ ದೃಷ್ಠಿಯಿಂದ ಈ ಬೃಹತ್ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಆಣೆಕಟ್ಟು ೭೯  ಮೀ. ಎತ್ತರ ೫೭೦ ಮೀ. ಉದ್ದವಿದೆ. ಇಲ್ಲಿ ವಾರ್ಷಿಕ ೭೬೨೦ ಮಿ.ಮೀ ಮಳೆಯಾಗುತ್ತದೆ.

ಇದು ಉತ್ತಮ ಪರಿಸರವಾದ ಪಶ್ಚಿಮ ಘಟ್ಟದಲ್ಲಿದ್ದು ವರಾಹಿ ನದಿಗೆ ಅಡ್ಡಲಾಗಿ ಅಣೆಕಟ್ಟನ್ನು ಕಟ್ಟಲಾಗಿದೆ. ವರಾಹಿ ವಿದ್ಯುತ್ ಯೋಜನೆಯನ್ನು ಬೆಟ್ಟದಲ್ಲಿ ಸುರಂಗವನ್ನು ಕೊರೆದು ನಿರ್ಮಿಸಲಾಗಿದೆ. ಇದೊಂದು ಮಾನವ ನಿರ್ಮಿತ ಅದ್ಭುತ ನಿರ್ಮಾಣ.

ಮಾರ್ಗ: ಹೊಸನಗರ-ನಗರ-ಚಕ್ರಾ

 

ಶ್ರೀ ಗುಳುಗುಳಿ ಶಂಕರೇಶ್ವರ ದೇವಾಲಯ

ತಾಲ್ಲೂಕು: ಹೊಸನಗರ
ತಾಲ್ಲೂಕು ಕೇಂದ್ರದಿಂದ: ೪೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪೦ ಕಿ.ಮೀ

ಪೌರಾಣಿಕ ಹಿನ್ನಲೆಯ ಪ್ರಕಾರ ಶಿವಪಾರ್ವತಿಯರು ಭೂಸಂಚಾರ ಮಾಡುತ್ತಾ ಬಂದಾಗ ಈ ಸ್ಥಳದಲ್ಲಿ ನೀರಿನ ಅಭಾವವನ್ನು ಮನಗಂಡು ಗಂಗೆಯನ್ನು ಆಹ್ವಾನಿಸಿ ಕೊಳವನ್ನು ನಿರ್ಮಿಸಿದರು. ಗಂಗೆಯ ಕೋರಿಕೆಯಂತೆ ಶಿವನು ಇಲ್ಲಿ ನೆಲೆಸಿದನು. ಚಪ್ಪಾಳೆ ತಟ್ಟಿದಾಗ ಈ ಕೊಳದಲ್ಲಿ ಗುಳ್ಳೆಗಳು ಬರುವುದರಿಂದ ಈ ಸ್ಥಳಕ್ಕೆ ಗುಳುಗುಳಿ ಶಂಕರ ಎನ್ನುವರು. ಕೊಳದಿಂದ ನಿರ್ದಿಷ್ಟ ಪ್ರಮಾಣದ ನೀರು ಸದಾ ಹೊರಗೆ ಹರಿಯುತ್ತದೆ. ಕೊಳದ ಪಕ್ಕದಲ್ಲಿಯ ಶಂಕರೇಶ್ವರ ದೇವಾಲಯವಿದೆ.