ಜನಪದ ಕಲೆಯನ್ನೇ ಸಾಧನೆಯ ಪಥವಾಗಿಸಿಕೊಂಡ ಅಪ್ಪಟ ದೇಸೀ ಪ್ರತಿಭೆ ಹೊಸಬಸವಯ್ಯ ದುಂಡಯ್ಯ ಸಂಬಳದ ಹೆಸರಾಂತ ಕರಡಿವಾದನದ ಕಲಾವಿದ. ಜನಪ್ರಿಯ ಶ್ರೀಕೃಷ್ಣ ಪಾತ್ರಧಾರಿ.
ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಹೊಸಬಸವಯ್ಯ ಅವರ ಜನ್ಮಸ್ಥಳ. ಕಡುಬಡತನದ ಕುಟುಂಬ. ಅಕ್ಷರದ ಭಾಗ್ಯವಿಲ್ಲದ ದಿಕ್ಕೆಟ್ಟ ಬಾಳಿಗೆ ಆಸರೆಯಾಗಿದ್ದು ಕಲೆಯೇ, ಮನೆತನದ ಕುಲಕಲೆಯಾದ ಕರಡಿವಾದನದಲ್ಲಿ ನಿಷ್ಣಾತತೆ.ಬೇಸಾಯ, ಗ್ರಾಮದ ಶ್ರೀವೀರಭದ್ರೇಶ್ವರ ದೇವಸ್ಥಾನದ ಅರ್ಚಕ ವೃತ್ತಿಯೇ ಬುತ್ತಿಗೆ ದಾರಿ. ೧೦ನೇ ವಯಸ್ಸಿಗಾಗಲೇ ಭಜನೆ, ಕೈವಲ್ಯ ಪದಗಳ ಸರಾಗ ಹಾಡುಗಾರಿಕೆಗೆ ಮನಸೋಲದವರೇ ಇಲ್ಲ. ಹಾಡಿನ ಕಲೆ ನಟನೆಯತ್ತಲೂ ಸೆಳೆದದ್ದು ವಿಶೇಷ. ೧೯ನೇ ವಯಸ್ಸಿಗೆ ಕೃಷ್ಣಾಜಿ ದೇಶಪಾಂಡೆ ಅವರ ಶ್ರೀಕೃಷ್ಣ ಪಾರಿಜಾತ ತಂಡಕ್ಕೆ ಸೇರ್ಪಡೆ. ಶ್ರೀಕೃಷ್ಣನ ಪಾತ್ರದಲ್ಲಿ ಮನೋಜ್ಞ ಅಭಿನಯ, ಸತತ ೨೫ ವರ್ಷಗಳ ಕಾಲ ಮನರಂಜಿಸಿದ ಕೃಷ್ಣ. ಹತ್ತು ವರ್ಷಗಳ ಕಾಲ ಮಾತ್ರ ಅನ್ಯ ಪಾತ್ರಗಳಲ್ಲಿ ಪರಕಾಯ ಪ್ರವೇಶ, ಆರು ದಶಕಗಳ ಕಲಾಯಾನದಲ್ಲಿ ಉಂಡ ಕಷ್ಟಗಳಿಗಿಂತಲೂ ಪಡೆದ ಚಪ್ಪಾಳೆಗಳದ್ದೇ ಖುಷಿ. ಸದ್ಯ ಶ್ರೀ ಕೃಷ್ಣ ಪಾರಿಜಾತ ತಂಡದ ವ್ಯವಸ್ಥಾಪಕನಾಗಿ ಬದುಕಿನ ಸಂಧ್ಯಾಕಾಲದಲ್ಲೂ ಕಲಾಸೇವೆಯಲ್ಲಿ ನಿರತ ಈ ದೇಸೀ ಕಲಾಕುಸುಮಕ್ಕೆ ಸಂದ ಪ್ರತಿ ಗೌರವ-ಸನ್ಮಾನಗಳೆಲ್ಲದರಿಂದ ಮನದುಂಬಿದ ಧನ್ಯತಾಭಾವ.
Categories
ಹೊಸಬಸವಯ್ಯ ದುಂಡಯ್ಯ ಸಂಬಳದ
