ಜನನ : ೧೯೩೦ ರಲ್ಲಿ ಹೊಸಬಾಳೆಯಲ್ಲಿ

ಮನೆತನ : ಕೃಷಿಕ ಮನೆತನ, ಅಡಿಕೆ, ಭತ್ತದ ಬೇಸಾಯಗಾರರಾದರೂ ಕಲೆ ಸಾಹಿತ್ಯದಲ್ಲಿ ಅಭಿರುಚಿಯುಳ್ಳ ಮನೆತನ. ತಂದೆ ಬಿ. ಅನಂತಪ್ಪ, ತಾಯಿ ಗೌರಮ್ಮ ಯಕ್ಷಗಾನ ಸಾಂಪ್ರದಾಯಿಕ ಹಾಡುಗಳನ್ನು ಹಾಡುತ್ತಿದ್ದರು.

ಗುರುಪರಂಪರೆ : ಹಿರಿಯ ಗಮಕಿ -ನಟ ಕೆ. ಎಸ್. ವೆಂಕಟೇಶಯ್ಯನವರಲ್ಲಿ ಗಮಕ ಕಲಾ ಶಿಕ್ಷಣ. ಸಾಗರದ ಎನ್. ಕೊಲ್ಲಾಭಟ್ಟರಲ್ಲಿ ಗಾಯನ ಶಿಕ್ಷಣವನ್ನೂ ಪಡೆದಿದ್ದಾರೆ. ಗಮಕ ಪ್ರೌಢ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಸಾಧನೆ : ಆಂಗ್ಲ, ಸಂಸ್ಕೃತ, ಕನ್ನಡ ಮತ್ತು ಹಿಂದಿ ಭಾಷಾಧ್ಯಾಯನ ಮಾಡಿ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡು ಕನ್ನಡದಲ್ಲಿ ಅನೇಕ ಪದ್ಯ ಮಾಲಿಕೆಗಳನ್ನು ರಚಿಸಿದ್ದಾರೆ. ಕವಿ ಲಕ್ಷ್ಮೀಶನ ಜನ್ಮಸ್ಥಳ ದೇವನೂರಿನಲ್ಲಿ ಗದಗಿನ ವೀರನಾರಾಯಣನ ಸನ್ನಿಧಿಯಲ್ಲಿ, ಕುಮಾರವ್ಯಾಸನ ಹುಟ್ಟೂರಾದ ಕೋಳಿವಾಡದಲ್ಲಿ, ಕಾಗಿನೆಲೆಯ ಆದಿಕೇಶವನ ಸನ್ನಿಧಿಯಲ್ಲಿ, ಬಿಜಾಪುರದ ತೊರವಿ ಕ್ಷೇತ್ರದಲ್ಲಿ, ಕೂಡಲ ಸಂಗಮ, ಮುಂತಾದ ಸ್ಥಳಗಳಲ್ಲಿ ಆಯಾ ಕಾವ್ಯಗಳ ಅಂದರೆ ಕ್ರಮವಾಗಿ ಜೈಮಿನಿ ಭಾರತ, ಕುಮಾರವ್ಯಾಸನ ಕರ್ಣಾಟಕ ಭಾರತ ಕಥಾ ಮಂಜರಿ, ನಳಚರಿತ್ರೆ, ತೊರವೆ ರಾಮಾಯಣ, ಬಸವಣ್ಣನವರ ವಚನಗಳೇ ಅಲ್ಲದೆ ಸಾಗರದ ಭೀಮನ ಕೋಣೆಯಲ್ಲಿ ಕವಿ ಪರಮದವನ ತುರಂಗ ಭಾರತ, ಕುಪ್ಪಳ್ಳಿಯ ಕವಿ ಶೈಲದಲ್ಲಿ ಕುವೆಂಪುರವರ ರಾಮಾಯಣ ದರ್ಶನಂ, ಬೆಂಗಳೂರಿನ ಗೋಖಲೆ ಸರ್ವಜನಿಕ ವಿಚಾರ ಸಂಸ್ಥೆಯಲ್ಲಿ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಮುಂತಾಗಿ ಅನೇಕ ವಾಚನ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಸಾಗರ ತಾಲೂಕಿಗೆ ಸೇರಿದ ಅನೇಕ ಹಳ್ಳಿಗಳ ಗಮಕಾಸಕ್ತರಿಗೆ ಗಮಕ ಶಿಕ್ಷಣ ನೀಡಿ ತರಬೇತಿಗಳನ್ನು ನಡೆಸಿ ನೂರಾರು ಶಿಷ್ಯರನ್ನು ತಯಾರು ಮಾಡಿದ್ದಾರೆ. ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕ ಸದಸ್ಯರಾಗಿ ಶಿವಮೊಗ್ಗಾ ಜಿಲ್ಲಾ ಪ್ರತಿನಿಧಿಗಳಾಗಿ ಸಾಕಷ್ಟು ಕಾಲ ಸೇವೆ ಸಲ್ಲಿಸಿದ್ದಾರೆ. ಸಾಗರದ ಮಲೆನಾಡು ಗಮಕ ಕಲಾ ಸಂಘದ ಸಂಸ್ಥಾಪಕರಲ್ಲೊಬ್ಬರಾಗಿ ಈಗ ಅದರ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಧಾರವಾಡ, ಬೆಂಗಳೂರು, ಭದ್ರಾವತಿ ಆಕಾಶವಾಣಿ ಕೇಂದ್ರಗಳಿಂದ ಇವರ ಗಮಕ ವಾಚನ ಕಾರ್ಯಕ್ರಮಗಳು ಪ್ರಸಾರವಾಗಿವೆ. ಕೆಲವೊಂದು ಧ್ವನಿಸುರುಳಿಗಳೂ ಬಿಡುಗಡೆಯಾಗಿವೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಅಧಿಕೃತ ಕಲಾವಿದರಾಗಿ ಹಳ್ಳಿಹಳ್ಳಿಗಳಲ್ಲಿ ಗಮಕ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ನಡೆಸಿದ ಎರಡು ಹಗೂ ಕರ್ನಾಟಕ ಗಮಕ ಕಲಾ ಪರಿಷತ್ತು ನಡೆಸಿದ ಆರು ಗಮಕ ಸಮ್ಮೇಳನಗಳಲ್ಲಿ ಇವರ ಕಾರ್ಯಕ್ರಮಗಳು ನಡೆದಿವೆ. ೧೯೯೭ ರಲ್ಲಿ ಗಮಕ ಕಲಾ ಪರಿಷತ್ತು ನಡೆಸಿದ ಸ್ವಾತಂತ್ರ‍್ಯ ಸುವರ್ಣೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾಧ್ಯಂತ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಶಿವಮೊಗ್ಗಾದ ಗಮಕ ಗ್ರಾಮವೆನಿಸಿರುವ ಹೊಸಹಳ್ಳಿಯಲ್ಲಿನ ಗಮಕ ಕಲಾಪರಿಷತ್ತು ಇವರಿಗೆ ’ಗಮಕ ವಾಚನ ಪ್ರವೀಣ’ ಎಂಬ ಬಿರುದು ನೀಡಿ ಗೌರವಿಸಿದೆ. ೧೯೯೦ ರಲ್ಲಿ ಚಿತ್ರದುರ್ಗದಲ್ಲಿ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದ ಅಧ್ಯಕ್ಷರಾಗಿ ಗೌರವಿಸಲ್ಪಟ್ಟಿದ್ದಾರೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠ, ಕಾರಣಗಿರಿಯ ಶ್ರೀರಾಮಚಂದ್ರಾಪುರ ಮಠದ ಸ್ವಾಮಿಗಳು ಇವರನ್ನು ಗೌರವಿಸಿ ಬಿರುದು – ಬಖಿಲ್ಲತ್ತುಗಳನ್ನು ನೀಡಿದ್ದಾರೆ. ಎಳವೆಯಲ್ಲೇ ದೇವನೂರಿನಲ್ಲಿ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ನಾಟಕ ಸ್ಪರ್ಧೆ, ಮಂಡ್ಯದಲ್ಲಿ ನಡೆದ ಶ್ರೀ ರಾಮಾಯಣ ದರ್ಶನಂ ಕಾವ್ಯವಾಚನ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. ಇವರ ಈ ಎಲ್ಲ ಸಾಧನೆಗಳನ್ನು ಗುರುತಿಸಿ ರಾಜ್ಯ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ೧೯೯೩-೯೪ರ ಸಾಲಿನ ’ಕರ್ನಾಟಕ ಕಲಾ ತಿಲಕ’ ಪ್ರಶಸ್ತಿ ನೀಡಿ ಗೌರವಿಸಿದೆ. ಕರ್ನಾಟಕ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಹೊಸಬಾಳೆ ಸೀತಾರಾಮ ರಾವ್ ಅವರು ತಮ್ಮ ೭೬ನೆಯ ವಯಸ್ಸಿನಲ್ಲೂ ತುಂಬಿದ ಉತ್ಸಾಹದಿಂದ ಗಮಕ ವಾಚನಗಳನ್ನು ನೀಡುತ್ತಾ ಬಂದಿದ್ದಾರೆ.