ಹೊಸಿಲು ದಾಟಿತು ಹಸುಳೆ ; ನಡುಮನೆಯ ಬಿತ್ತರದ
ಬಯಲು ನಾಡನು ಕಳೆದು, ಹೊರಜಗಕು ಒಳಜಗಕು
ಕೋಟೆಗಟ್ಟಿದ ಹೊಸಿಲ ಪರ್ವತ ಶ್ರೇಣಿಯನು
ದಾಟಿಬಿಟ್ಟಿತು ಹಸುಳೆ ! ಓ ಅಲ್ಲಿ, ಹಿಮಗಿರಿಯ
ಶಿಖರದಲಿ ವಿಜಯಿಯಾದನು ವೀರ ತೇನ್ಸಿಂಗ್ !
ಇದೊ ಇಲ್ಲಿ, ಅದಕಿಂತಲೂ ಮಿಗಿಲು ಹಬ್ಬವಾ-
ಯಿತು ಮನೆಗೆ ! ಕಾಯೊಡೆದು, ಕರ್ಪೂರದಾರತಿಯ
ಬೆಳಗಿ, ಸಕ್ಕರೆ ಹಂಚಿ ನಲಿಯಿತೀ ಮನೆಯ ಜನ-
ಲೋಕ ! ಕತ್ತಲೆಯ ಬಸಿರಿಂದ ಮೆಲ್ಲಡಿಯಿಟ್ಟು,
ನೀರಾಗಿ, ಹಸಿರಾಗಿ, ಖಗವಾಗಿ, ಮಿಗವಾಗಿ,
ಕಡೆಗೆ ಮಾನವನಾಗಿ, ಕಾಲದುಸುಬನು ತುಳಿದು
ಪ್ರಗತಿಯನು ಸಾಧಿಸಿದ ಮಾನವ ಚರಿತ್ರೆಯಲಿ
ಹೊಸಿಲು ದಾಟಿದ ಹಸುಳೆಯೀ ಲೀಲೆಯೊಂದು ಪುಟ !
ಅದನು ತಿರುವಿತು ಹಸುಳೆ ! ಏನಿದದ್ಭುತ ಮಾಟ