ಸ್ತ್ರೀ ದೈವಗಳ ಕಲ್ಪನೆ

ನಮ್ಮ ಸಮಾಜದಲ್ಲಿ ಆಚರಣೆಯಲ್ಲಿರುವ ನಾನಾ ಸಂಸ್ಕಾರಗಳು ಹಬ್ಬ ಹರಿದಿನ ಜಾತ್ರೆ ಉತ್ಸವಗಳು – ವಿಧಿ – ವಿಧಾನಗಳು ಹೇಗೆ ಹುಟ್ಟಿಕೊಂಡವು ಎಂಬುದನ್ನು ತಿಳಿಯಬೇಕಾದರೆ ನಾವು ಜಾನಪದವನ್ನು ಮೊರೆ ಹೋಗಬೇಕಾಗುತ್ತದೆ. ಏಕೆಂದರೆ ಜಾನಪದವು ನಮ್ಮ ಎಲ್ಲಾ ಶಾಸ್ತ್ರ, ಪುರಾಣ, ಧರ್ಮ, ಕಾನೂನುಗಳಿಗೆ ಮೂಲ ಬುನಾದಿ ಎಂಬುದನ್ನು ಮರೆಯುವಂತಿಲ್ಲ. ಜನಪದ ನಂಬಿಕೆಗಳು ಮಾನವನ ಜೀವನದ ಸರ್ವಕ್ಷೇತ್ರಗಳಲ್ಲಿಯೂ ವ್ಯಾಪಿಸಿಕೊಂಡಿವೆ. ಅವುಗಳೇ ಅವನ ಜೀವನವನ್ನು ರೂಪಿಸಿವೆ.

ಆದಿ ಮಾನವನ ಹಿನ್ನೆಲೆಯನ್ನು ಗಮನಿಸಿದಾಗ ಪ್ರಕೃತಿಯಲ್ಲಿ ಆಗುತ್ತಿರುವ ವೈಚಿತ್ರ‍್ಯಗಳಿಗೆ ಮಾನವ ಬೆರಗಾಗಿ, ಭಯಗೊಂಡು ಪ್ರಕೃತಿಯನ್ನೇ ಮೊದಲು ತನ್ನ ಆರಾಧನೆಯ ದೇವತೆಯಾಗಿ ಸ್ವೀಕರಿಸಿದ. ಮರ, ಗಿಡ, ಬಳ್ಳಿ, ಪ್ರಾಣಿ, ಪಕ್ಷಿ, ನೀರು, ಗಾಳಿ, ಸೂರ್ಯ, ಚಂದ್ರ, ಗುಡುಗು, ಸಿಡಿಲು, ಮಿಂಚು, ಬೆಂಕಿ ಇತ್ಯಾದಿ. ಪ್ರಕೃತಿಯ ಚಮತ್ಕಾರಗಳು ಆತನನ್ನು ಚಕಿತನನ್ನಾಗಿಸಿವೆ. ಆದಿಮಾನವನು ನಿಸರ್ಗದೊಂದಿಗೆ ಸಂಘರ್ಷಕ್ಕೆ ಬಿದ್ದಾಗ ಮಾಂತ್ರಿಕಾಚರಣೆಗಳ ಉಗಮವಾಯಿತು. ತಾನು ಜಯಿಸಬೇಕಾಗಿದೆ ಎಂದುಕೊಂಡು ನಿಸರ್ಗದ ಶಕ್ತಿಗಳನ್ನು ಮಣಿಸಲು ಹಾಗೂ ಒಲಿಸಿಕೊಳ್ಳಲು ಮಾನವನ ಆರಂಭಿಕ ತರ್ಕ ಏನೇನು ಹಾದಿಗಳನ್ನು ಸೂಚಿಸಿತೋ ಅವೆಲ್ಲವೂ ಆಚರಣೆಗಳಾಗಿ ರೂಪುಗೊಂಡಿವೆ. ಇಂತಹ ಆಚರಣೆ ಮತ್ತು ನಂಬಿಕೆಯ ಮೂಲಕವೇ ದೈವಗಳ ಬಗೆಗಿನ ಪರಿಕಲ್ಪನೆ ಬೆಳೆದುಬಂದಿತು. ಪ್ರಕೃತಿಯಲ್ಲಿ ನಡೆಯುವ ಎಲ್ಲಾ ಘಟನೆಗಳಿಗೂ ಯಾವುದೋ ಒಂದು ಶಕ್ತಿ ಕಾರಣವಿರಬೇಕೆಂದು ನಂಬಿದ್ದ ಮನುಷ್ಯ ಆ ಶಕ್ತಿಯನ್ನೇ “ದೈವ”ವೆಂದು ತಿಳಿದು ಪೂಜಿಸತೊಡಗಿದ. ಇದರ ಜೊತೆಗೆ ಸ್ತ್ರೀಯಲ್ಲಿರುವ ಸೃಷ್ಟಿ ಶಕ್ತಿಗೆ ವಿಸ್ಮಯಗೊಂಡು ಅವನು ಮುಗ್ಧ ಮನಸ್ಸಿನಿಂದ ಅವಳನ್ನು ಸಹ ಆರಾಧನೆಯ ದೇವತೆಯನ್ನಾಗಿ ಮಾಡಿಕೊಂಡ. ಹೀಗಾಗಿ ನಮ್ಮ ಜಾನಪದೀಯ ಪರಂಪರೆಯಲ್ಲಿ ಮೊದಲು ದೇವರ ಪಟ್ಟ ಸಿಕ್ಕಿದ್ದು ಸ್ತ್ರೀಗೆ ಎಂಬುದನ್ನು ಮರೆಯುವ ಹಾಗಿಲ್ಲ. ಆನಂತರ ಅವನ ಕಲ್ಪನೆಯಿಂದ ಅನೇಕ ದೇವರ, ದೇವತೆಗಳ ಸ್ವರೂಪಗಳು ಉದ್ಭವಿಸಿದವು. ಹೀಗೆ ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ ದೈವಗಳ ಗ್ರಹಿಕೆಯಲ್ಲಿ ಭಿನ್ನತೆ ಕಾಣಿಸಿದ್ದರಿಂದ ಭಿನ್ನ ಭಿನ್ನ ಹೆಸರಿನ ದೈವಗಳು ಹುಟ್ಟಲು ಕಾರಣವಾಗಿದೆ. ದ್ರಾವಿಡ ಜನಾಂಗಗಳ ಪ್ರಮುಖ ನೆಲೆಯಾದ ದಕ್ಷಿಣ ಭಾರತದಲ್ಲಿ “ಅಮ್ಮನ ಆರಾಧನೆ” ಸಾರ್ವತ್ರಿಕವಾಗಿದೆ. ವೈದಿಕರ ದೇವರು ಪದಕ್ಕೆ ಸಂವಾದಿಯಾದ ಪದ ದಕ್ಷಿಣ ಭಾರತದಲ್ಲಿ “ಅಮ್ಮ” ಆಕೆಯನ್ನು ತಾಯಿ, ಅವ್ವ, ಅಜ್ಜಿ, ದೇವಿ, ಎಂಬ ಹೆಸರುಗಳಿಂದಲೂ ಕರೆಯುವುದುಂಟು. ಮಳೆ, ಬೆಳೆ ಸಮೃದ್ಧಿಯಾಗಿ ಸಾಂಕ್ರಾಮಿಕ ರೋಗ ರುಜಿನಗಳಿಂದ ಬರುವ ಕಷ್ಟಗಳ ಪರಿಹಾರಕ್ಕಾಗಿ ದೇವತೆಗೆ ಶರಣಾಗಿ ಆಕೆಯ ಜಾತ್ರೆ – ಉತ್ಸವಾದಿಗಳನ್ನು ಮಾಡಿ ದೇವಿಯನ್ನು ಇಂದೂ ಪೂಜಿಸಲಾಗುತ್ತಿದೆ.

ಅದಕ್ಕೆ ಸಂಬಂಧಿಸಿದಂತೆ ವಿಧಿ – ನಿಷೇಧಗಳು ಸಹ ಅಸ್ತಿತ್ವದಲ್ಲಿವೆ. ಈ ಸ್ತ್ರೀ ದೈವಗಳು ಕೃಷಿ ಆಚರಣೆಗಳ ಸಂಬಂಧಗಳನ್ನು ಹೊಂದಿವೆ. ಜನಪದರ ಪರಿಕಲ್ಪನೆಯಂತೆ ದೇವತೆ ಒಲಿದರೆ “ಅಮ್ಮ”ನಾಗಿ ನಮ್ಮನ್ನು ಕಾಯುತ್ತಾಳೆ. ‘ಮುನಿದರೆ’ ಮಾರಿಯಾಗಿ ರೋಗರುಜಿನಗಳನ್ನು ಹರಡುತ್ತಾಳೆ. ಕಷ್ಟಗಳನ್ನು ತಂದೊಡ್ಡುತ್ತಾಳೆ. ಹೀಗೆ ಮುನಿದ ದೇವತೆಯನ್ನು ಸಂಪ್ರೀತಗೊಳಿಸುವ, ಊರಿಗೆ ಬಂದ ಮಾರಿಯನ್ನು ನೀಗುವ ವಿಶಿಷ್ಟ ರೀತಿಯ ಸಂಪ್ರದಾಯ ಆಚರಣೆಗಳು ನಮ್ಮ ಜನಪದರಲ್ಲಿ ರೂಢಿಯಲ್ಲಿವೆ. ಬಹುತೇಕ ದೇವತೆಗಳ ನೆಲೆಗಳು ಮೂಲತಃ ಹಳ್ಳಿಗಾಡಿನಂತಹ ಪ್ರದೇಶಗಳಾಗಿವೆ. ಇಲ್ಲವೇ ಕಾಡುಪ್ರದೇಶಗಳಾಗಿದ್ದವು. ಕಾಲ ಕ್ರಮೇಣ ಅಲ್ಲಿ ಅಂಗಡಿ ಮುಂಗಟ್ಟುಗಳು, ವ್ಯಾಪಾರ ಕೇಂದ್ರಗಳು ಪ್ರಾರಂಭವಾಗಿರುವುದನ್ನು ಇಂದು ಕಾಣಬಹುದಾಗಿದೆ.

“ಗ್ರಾಮದೇವತೆ” ಎಂದಾಕ್ಷಣ ಗ್ರಾಮವೊಂದರ ಪ್ರಧಾನ ದೇವತೆ, ಅಧಿದೇವತೆ, ಗ್ರಾಮಸ್ಥರು ವಿಶೇಷವಾಗಿ ನಡೆದುಕೊಳ್ಳುವ ದೇವತೆ ಎಂಬ ಅರ್ಥ ಬರುವುದು ಸಹಜ ಆದರೆ ಇಂದು ಜಾನಪದೀಯ ಇಲ್ಲವೇ ಸಮಾಜ ಶಾಸ್ತ್ರೀಯ ಅಧ್ಯಯನದ ಸಂದರ್ಭದಲ್ಲಿ ಜನಪದ ದೇವತೆ, ಗ್ರಾಮದೇವತೆ ಎಂಬರ್ಥದಲ್ಲಿ “ಗ್ರಾಮದೇವತೆ” ಪದವನ್ನು ಬಳಸಲಾಗುತ್ತದೆ. ಒಂದು ನಿರ್ದಿಷ್ಟ ದೇವತೆಯನ್ನು ಗ್ರಾಮವೊಂದರ ಜನರಷ್ಟೇ ಆರಾಧಿಸುತ್ತಾರೆಂಬ ಕಾರಣದಿಂದ ಅದನ್ನು ಸ್ಥಳೀಯ ದೇವತೆಯೆಂದು ಕರೆಯುತ್ತೇವೆ. ಆದರೆ ಆರಾಧಕ ಜನಪದರ ಲೋಕದೃಷ್ಟಿಯ ಹಿನ್ನೆಲೆಯಿಂದ ನೋಡಿದಾಗ ಸ್ಥಳೀಯ ದೇವತೆಯಾಗಿರಲಿ, ಮನೆದೇವತೆಯಾಗಿರಲಿ ಅದು ಇಡೀ ಜಗತ್ತನ್ನೇ ಸೃಷ್ಟಿ ಮಾಡಿದ ದೇವತೆಯಾಗಿರುತ್ತದೆ. ಲೋಕದ ಚರಾಚರಗಳೆಲ್ಲವನ್ನೂ ಕಾಯುವ ದೇವತೆಯಾಗಿರುತ್ತದೆ. ದೇವತೆಗಳ ಗುಣ ಸ್ವಭಾವದ ಆಧಾರದಿಂದ ಉಗ್ರ ದೇವತೆಗಳು ಮತ್ತು ಸೌಮ್ಯ ದೇವತೆಗಳೆಂದೂ ವರ್ಗೀಕರಿಸಿಕೊಳ್ಳಬಹುದು. ಗ್ರಾಮ ದೇವತೆಗಳಲ್ಲಿ ಹೆಚ್ಚಿನವುಗಳು ಉಗ್ರ ದೇವತೆಗಳಾಗಿರುತ್ತವೆ. ಮತ್ತೆ ಕೆಲವು ಸೌಮ್ಯ ದೇವತೆಗಳಾಗಿರುತ್ತವೆ. ಅಂತಹವುಗಳಲ್ಲಿ ಹೊಸಪೇಟೆಯ ಹೊಸೂರು ಗ್ರಾಮದ ಹೊಸೂರಮ್ಮ ದೇವತೆ ಸೌಮ್ಯ ಸ್ವಭಾವದವಳಾಗಿದ್ದಾಳೆ.

ಹೊಸೂರು ಗ್ರಾಮ ಪರಿಚಯ

ಹೊಸೂರು ಒಂದು ಸುಂದರವಾದ ಗ್ರಾಮ. ಇಲ್ಲಿಯ ಅಧಿದೇವತೆ ಹೊಸೂರಮ್ಮ. ಈ ದೇವಾಲಯವು ಬಯಲು ಸೀಮೆಯಲ್ಲಿ ನಿರ್ಮಿತವಾಗಿದ್ದು ಸುತ್ತಲೂ ಹಚ್ಚ ಹಸಿರಿನ ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಧಾರ್ಮಿಕ ಕೆಲಸ ಕಾರ್ಯಗಳು, ಪೂಜಾ ವಿಧಿ – ವಿಧಾನಗಳು, ದೈವಾನುಗ್ರಹದಿಂದಾಗಿ ಭಕ್ತಾದಿಗಳಿಗೆ ಅದು ಒಂದು ಪುಣ್ಯಕ್ಷೇತ್ರವಾಗಿ ಪರಿಣಮಿಸಿದೆ.

ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದಿಂದ ಸುಮಾರು ೪ ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮವೇ ಹೊಸೂರು ‘ಹೊಸೂರು ಮಾಗಾಣಿ’ ಎಂತಲೂ ಸುತ್ತಮುತ್ತಲೂ ಇರುವ ಹೊಲ – ಗದ್ದೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಕರೆಯುವುದುಂಟು. ಹೊಸೂರು ಗ್ರಾಮದಲ್ಲಿ ಸುಮಾರು ೮೦೦ಕ್ಕೂ ಹೆಚ್ಚು ಮನೆಗಳಿವೆ. ವಿದ್ಯುತ್ ಸೌಕರ್ಯ ಮತ್ತು ಸರಕಾರಿ ಬಸ್ಸಿನ ವ್ಯವಸ್ಥೆ ಇದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಜನವಸತಿ ಕಂಡು ಬಂದರೂ ಅದರ ಬಗ್ಗೆ ಮಾಹಿತಿ ದೊರೆಯಲಾರದು. ಹೊಸೂರಿನಲ್ಲಿ ಹೊಸೂರಮ್ಮ ದೇವಾಲಯ ಬಿಟ್ಟರೆ ನಿರ್ಜನ ಪ್ರದೇಶವಾಗಿತ್ತು ಎಂಬುದರಲ್ಲಿ ಎರಡು ಮಾತಿಲ್ಲ. ಜನವಸತಿಯ ಗ್ರಾಮ ಪ್ರದೇಶವಾಗಿ ಬೆಳಕಿಗೆ ಬಂದದ್ದು ಸುಮಾರು ೪೦ ವರ್ಷಗಳ ಇಂದೀಚೆಗೆ ಎನ್ನಬಹುದಾಗಿದೆ. ಹಚ್ಚ ಹಸಿರಿನ ಫಲವತ್ತಾದ ಸೌಂದರ್ಯ ಹೊಸೂರಿನ ಕಳೆಯನ್ನು ಹೆಚ್ಚಿಸಿದೆ. ಮೊದಲು ಹೊಲ ಗದ್ದೆಗಳಿಂದ ಮಾಗಾಣಿಯಾಗಿದ್ದ ಹೊಸೂರು ತದನಂತರ ಗ್ರಾಮವಾಗಿ ಪರಿವರ್ತನೆಯಾಗಿದೆ. ಅದೇ ರೀತಿ ಹೊಸೂರಿನ ಅಕ್ಕ ಪಕ್ಕದಲ್ಲಿರುವ ಆ ನಗಲ್ ಮಾಗಾಣಿ, ಇಪ್ಪಿತ್ತೇರು ಮಾಗಾಣಿಗಳೆಲ್ಲ ಇಂದು ಗ್ರಾಮಗಳಾಗಿ ಪರಿವರ್ತನೆಯಾಗಿವೆ. ಇವೆಲ್ಲ ರೈತಾಪಿ ಜನಾಂಗದವರು ಅದರಲ್ಲೂ ವಿಶೇಷವಾಗಿ ನಾಯಕ ಜನಾಂಗ ಮತ್ತು ಇತರೆ ಜನಾಂಗದವರು ಈ ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಹೊಸೂರಿನ ಪಕ್ಕ ತುಂಗಭದ್ರಾ ಜಲಾಶಯದ ನದಿ ಹರಿಯುತ್ತಿದ್ದು ಹೊಸೂರಮ್ಮ ದೇವಿಯ ಜಾತ್ರೆಯ ಸಂದರ್ಭದಲ್ಲಿ ದೇವಿಯನ್ನು ಹೊಳೆಗೆ ಕರೆದುಕೊಂಡು ಹೋಗಿ ಬರುವ ಸಂಪ್ರದಾಯವಿದೆ. ಈ ಆಚರಣೆಯನ್ನು ದೇವರು ತರುವುದು, “ಜಲ್ದಿ” ಎಂಬ ಹೆಸರುಗಳಿಂದಲೂ ಕರೆಯುತ್ತಾರೆ. ದೇವರಿಗೆ ಸ್ನಾನ ಮಾಡಿಸುವುದು ಇಲ್ಲಿ ಮುಖ್ಯ ಆಚರಣೆ. “ದೇವಿಯ ವಿಗ್ರಹವನ್ನು ಶುಚಿಗೊಳಿಸುವುದು”, ಪುಣ್ಯೋಜನವೆಂತಲೂ ಇದನ್ನು ಕರೆಯುತ್ತಾರೆ. ಹೊಸೂರಿನ ಪಕ್ಕದಲ್ಲಿ ಅಂದರೆ ಹೊಳೆಯ ಆಚೆಯ ದಡದಲ್ಲಿ “ಹುಲಿಗೆಮ್ಮ ದೇವಿ”ಯ ದೇವಸ್ಥಾನವಿದೆ. ಆ ದೇವಿಯ ಬಗ್ಗೆ ಕೂಡ ಸಾಕಷ್ಟು ಐತಿಹಾಸಿಕ ಮಾಹಿತಿ, ಐತಿಹ್ಯಗಳು, ಜನಪದರ ನಂಬಿಕೆ, ಆಚರಣೆಗಳಿವೆ. ಹುಲಿಗೆಮ್ಮ ದೇವಿ ಇರುವ ಗ್ರಾಮವನ್ನು “ಹುಲಿಗಿ” ಎಂದು ಕರೆಯಲಾಗುತ್ತದೆ. ಟಿಪ್ಪುಸುಲ್ತಾನ್ ಹುಲಿಗಿ ಗ್ರಾಮವನ್ನು ಆಕ್ರಮಣ ಮಾಡಲು ತನ್ನ ಸೈನ್ಯ ಸಮೇತ ಹುಲಿಗಿಯಲ್ಲಿ ಬೀಡು ಬಿಟ್ಟಾಗ ಸೈನಿಕರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿತು. ಆತನಿಗೆ ಬಿದ್ದ ಕನಸಿನಲ್ಲಿ ಹುಲಿಗೆಮ್ಮ ದೇವಿ ಪ್ರತ್ಯಕ್ಷಳಾಗಿ ಹುಲಿಗಿ ಬಿಟ್ಟು ಹೋಗುವಂತೆ ಆಜ್ಞಾಪಿಸಿದಳು. ಇದರಿಂದ ವಿಚಲಿತನಾದ ಟಿಪ್ಪುಸುಲ್ತಾನ್ ದೇವಿಗೆ ಶರಣಾಗಿ ಆಕೆಯ ಕೃಪೆಗೆ ಪಾತ್ರನಾಗಿ ತನ್ನ ತಪ್ಪಿನ ನೆನಪಾರ್ಥವಾಗಿ ಹುಲಿಗಿಯ ಹುಲಿಗೆಮ್ಮ ದೇವಿಗೆ “ಮುತ್ತಿನ ದಂಡೆಯನ್ನು” ನೀಡಿ ಶರಣಾದ. ಇಂತಹ ಐತಿಹ್ಯಗಳು ಇಂದಿಗೂ ಇಲ್ಲಿನ ಜನಪದರಲ್ಲಿದೆ. ಅದೇ ರೀತಿ ಹೊಸೂರು ಗ್ರಾಮದ ಕೋಟೆಯನ್ನು ವಶಪಡಿಸಿಕೊಂಡ ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರ ನಾಯಕನು ಯುದ್ಧದಲ್ಲಿ ಜಯಶಾಲಿಯಾಗದೇ ಇದ್ದಾಗ ಆತನ ಕನಸ್ಸಿನಲ್ಲಿ ಹೊಸೂರಮ್ಮ ದೇವಿ ಪ್ರತ್ಯಕ್ಷಳಾಗಿ ಯುದ್ಧವನ್ನು ಕೈಬಿಟ್ಟು ಹೋಗುವಂತೆ ಆಜ್ಞೆ ಮಾಡುತ್ತಾಳೆ. ಅದರಿಂದ ಪ್ರಭಾವಿತನಾದ ಸೋಮಶೇಖರ ನಾಯಕನು ಹೊಸೂರಮ್ಮ ದೇವಿಗೆ ಪೂಜೆ ಇತ್ಯಾದಿಗಳ ಸಲುವಾಗಿ ಸುಮಾರು ೭೭ ಎಕರೆ ಫಲವತ್ತಾದ ಭೂಮಿಯನ್ನು ದಾನವಾಗಿ ನೀಡಿ ದೇವಿಯ ದರ್ಶನ ಪಡೆದು ಯುದ್ಧದಿಂದ ಹಿಂದೆ ಸರಿದು ಹೋಗುತ್ತಾನೆ. ಈ ಎರಡು ನಿದರ್ಶನಗಳು ಹೊಸೂರಮ್ಮ – ಹುಲಿಗೆಮ್ಮ ದೇವತೆಗಳ – ಶಕ್ತಿಶಾಲಿತನಕ್ಕೆ ಗಟ್ಟಿಯಾದ ಆಧಾರವಾಗಿ ನಮ್ಮ ಕಣ್ಣ ಮುಂದೆ ನಿಲ್ಲುತ್ತವೆ. ಹುಲಿಗಿಯ ಹುಲಿಗೆಮ್ಮನಿಗೆ ಭಕ್ತಾದಿಗಳು ಹೆಚ್ಚಾಗಿ ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಿಂದ ಬರುವುದುಂಟು. ಆ ದೇವತೆ ಜನಭಕ್ತ ಕೋಟಿಯನ್ನು ಪಡೆದರು, ಹೊಸೂರಮ್ಮ ತನ್ನ ಸುತ್ತ ಮುತ್ತಾ ಸಮೃದ್ಧವಾದ ಫಲವತ್ತಾದ ನೀರಾವರಿ ಭೂಮಿಯನ್ನು ಪಡೆದುಕೊಂಡಿದ್ದಾಳೆ. ಹೀಗಾಗಿ ಈ ಇಬ್ಬರೂ ದೇವತೆಗಳನ್ನೊಳಗೊಂಡ ಒಂದು ಗಾದೆ ಮಾತು ಈ ಭಾಗದಲ್ಲಿ ಜನಪ್ರಿಯವಾಗಿದೆ. “ಹುಲಿಗೆಮ್ಮನ ಪರಿಸೆ – ಹೊಸೂರಮ್ಮನ ಮಾನ್ಯವು” ಎಂಬುದಾಗಿದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಹೊಸೂರಮ್ಮ ದೇವಿಯ ಹೆಸರು ಪ್ರಚಲಿತದಲ್ಲಿತ್ತು ಎಂಬುದನ್ನು ಶಾಸನಗಳು ಹೇಳುತ್ತವೆ. ಉದಾ: ಹೊಸೂರಮ್ಮ ದೇವಸ್ಥಾನದ ಬಲ ಭಾಗದಲ್ಲಿನ ದ್ವಾರ ಪಾಲಕ ವಿಗ್ರಹದ ಬಳಿಯಲ್ಲಿರುವ ಶಾಸನವೊಂದು “ಹೊಸೂರಮ್ಮ ಮಹಾಮಾಯಿಗೆ ಬ್ರಾಹ್ಮಣ ಚಿತ್ತವಾಡ್ಗಿಯ ಕೆಲವು ಗ್ರಾಮಗಳನ್ನು ದತ್ತಿ ಬಿಟ್ಟಿದ್ದು…” ಎಂಬುದಾಗಿ ಹೋಸೂರು ಗ್ರಾಮದ ಹೊಸೂರಮ್ಮ ದೇವಿಯ ಹೆಸರಿನ ಪ್ರಸ್ತಾಪ ಕಂಡುಬರುತ್ತದೆ. ಹೊಸೂರಮ್ಮ ದೇವಿಯ ಪ್ರಭಾವದಿಂದ ಹಬ್ಬ ಹರಿದಿನ ಜಾತ್ರೆ ಉತ್ಸವಗಳು ಅತ್ಯಂತ ಸಡಗರದಿಂದ ಈ ಕ್ಷೇತ್ರದಲ್ಲಿ ನಡೆಯುತ್ತವೆ. ವಿಶಿಷ್ಟ ರೀತಿಯ ಆಚರಣೆಗಳು ಪರಂಪರೆಗಳು ಈ ಕ್ಷೇತ್ರಕ್ಕೆ ಜನರನ್ನು ಬರುವಂತೆ ಆಕರ್ಷಿಸುತ್ತವೆ. ಇಲ್ಲಿನ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಫಲವತ್ತಾದ ಗದ್ದೆಗಳು ನೋಡುಗರ ಕಂಗಳಿಗೆ ಹಬ್ಬವನ್ನು ಉಣ ಬಡಿಸುತ್ತವೆ. ಪಟ್ಟಣ – ನಗರಗಳಲ್ಲಿ ವಾಸಿಸುವ ಜನಸಾಮಾನ್ಯರಿಗೆ ನಗರ ಜೀವನ ಸಾಕಾಗಿ ಆಧುನಿಕ ಬದುಕಿಗೆ ವಿದಾಯ ಹೇಳುವವರಿಗೆ ಇಲ್ಲಿನ ಪರಿಸರ ನೆಮ್ಮದಿಯ ಬದುಕನ್ನು ನೀಡುವಲ್ಲಿ ಸಹಕಾರಿಯಾಗಿದೆ. ಈ ಗ್ರಾಮದಲ್ಲಿ ಎತ್ತ ನೋಡಿದರೂ ಹೊಲಗದ್ದೆಗಳು ಭಕ್ತರಿಗೆ, ದೇವಿಯ ನಂಬಿಕೆಯ ಜನಪದರಿಗೆ ಕಾಣ ಸಿಗುತ್ತವೆ. ಈ ದೇವಸ್ಥಾನದ ಹತ್ತಿರವಿರುವ ತುಂಗಭದ್ರಾ ಜಲಾಶಯ ಅತಿ ಮನಮೋಹಕವಾಗಿದೆ. ಈ ನದಿಯಲ್ಲಿ ಹೆಚ್ಚುವರಿ ನೀರನ್ನು ಮಳೆಗಾಲದಲ್ಲಿ ಬಿಟ್ಟಾಗ ತುಂಬಾ ಉಲ್ಲಾಸದ, ಆಹ್ಲಾದಕರವಾದ, ನಯನ ಮನೋಹರವಾದ ಸೊಗಡು ಭಕ್ತರಿಗೆ ದೊರೆಯಲಿದೆ.

ಭೌಗೋಳಿಕವಾಗಿ ಹೊಸೂರು:

ಹೊಸೂರು ಗ್ರಾಮದ ಭೌಗೋಳಿಕ ಪ್ರದೇಶವು ಸುಮಾರು ೩,೧೨೧,೧೫ ಎಕರೆಗಳಷ್ಟು ವಿಸ್ತೀರ್ಣತೆಯನ್ನು ಹೊಂದಿದೆ. ನೀರಾವರಿಯಿಂದ ಬಿತ್ತನೆ ಮಾಡುತ್ತಿರುವ ಪ್ರದೇಶವು ಹೊಸೂರು, ಇಪ್ಪಿತ್ತೇರಿ, ಆನಗಲ್ ಮತ್ತು ಎರೆಬೈಲು ಮಾಗಾಣಿ ಸೇರಿದಂತೆ ಸುಮಾರು ೧,೮೩೪,೩೪ ಎಕರೆಯಷ್ಟಿದೆ. ಹೊಸೂರು ಗ್ರಾಮದ ಜನಸಂಖ್ಯೆ ೧೯೯೧ರ ಜನಗಣತಿಯ ಪ್ರಕಾರ ಸುಮಾರು ೩೦೦೦ ದಷ್ಟಿದೆ. ೨೦೦೧ರ ಜನಗಣತಿ ಪ್ರಕಾರ ೩೮೭೬ರಷ್ಟು ಜನಸಂಖ್ಯೆಯನ್ನು ಹೊಂದಿದೆ. ಈ ಗ್ರಾಮದಲ್ಲಿ ಕಪ್ಪು ಮಣ್ಣು ಅತೀ ಹೆಚ್ಚಾಗಿ ಕಂಡುಬರುತ್ತಿದ್ದು ಅದರ ವಿಸ್ತೀರ್ಣ ಸುಮಾರು ೧,೮೩೪ ಎಕರೆಗಳಿಗಿಂತಲೂ ಹೆಚ್ಚಾಗಿ ಹರಡಿಕೊಂಡಿದೆ. ಬಹಳಷ್ಟು ಜಿಗುಟುತನವನ್ನು ಹೊಂದಿರುವ ಈ ಮಣ್ಣಿನ ಫಲವತ್ತತೆ ಉತ್ತಮ ದರ್ಜೆಯದಾಗಿದೆ. ಹೊಸೂರು ಗ್ರಾಮದಲ್ಲಿ ಒಂದು ಸುಸಜ್ಜಿತವಾದ ಗರಡಿಮನೆಯಿದ್ದು ಅಲ್ಲಿ ಈಗಲೂ ರೈತಾಪಿ ನಾಯಕ ಜನಾಂಗದ ಕುಸ್ತಿಪಟುಗಳು ತಾಲೀಮು ಮಾಡುತ್ತಾ ಕುಸ್ತಿಯನ್ನು ಆಡುತ್ತಿದ್ದಾರೆ. ಹೊಸೂರು ಪರಿಸರದಲ್ಲಿ ಮೂರು ಕಾಲುವೆಗಳು ತುಂಗಭದ್ರಾ ಜಲಾಶಯದಿಂದ ವರ್ಷಪೂರ್ತಿ ಹರಿಯುತ್ತಿವೆ. ಹೊಸೂರು, “ಗ್ರಾಮ ಪಂಚಾಯ್ತಿ”ಯನ್ನು ಸಹ ಹೊಂದಿದೆ. ಈ ಗ್ರಾಮದಲ್ಲಿ ಪೂರ್ವದಿಂದಲೂ ಊರಮ್ಮನ ಗುಡಿ ಮತ್ತು ಪವಾಡದ ಆಂಜನೇಯ ದೇವಸ್ಥಾನವಿದೆ. ಊರಮ್ಮನ ಗುಡಿ ರಸ್ತೆ, ಪವಾಡದ ಆಂಜನೇಯನ ಗುಡಿ ರಸ್ತೆ, ನದಿ ರಸ್ತೆ, ಹರಿಜನ ಕೇರಿ ಮತ್ತು ಬಂಡೇರ ಓಣಿ ಮುಂತಾದ ಚಿಕ್ಕ ಪುಟ್ಟ ಓಣಿಗಳಿವೆ. ಹೊಸೂರಿನಲ್ಲಿ ಹೆಚ್ಚಾಗಿ ನೆಲೆಸಿರುವ ಜನಸಂಖ್ಯೆ ನಾಯಕ ಜನಾಂಗದವರು. ಅವರದು ಕೃಷಿ ಅವಲಂಬಿತ ಬದುಕು ಹೊಸೂರು ಪರಿಸರಕ್ಕೆ ಹೊಂದಿಕೊಂಡಿದೆ. ಯಾವಾಗಲೂ ಕೃಷಿ ಪ್ರಧಾನವಾದ ಚಟುವಟಿಕೆಗಳು, ಎತ್ತು ಬಂಡಿಗಳು, ಜಾನುವಾರು ಕುರಿ, ಕೋಳಿ ಸಾಗಾಣಿಕೆ ರೈತಾಪಿ ಜನರ ದಿನನಿತ್ಯದ ಕಾಯಕವಾಗಿದೆ. ಈ ಗ್ರಾಮದ ಅಧಿದೇವತೆ ಹೊಸೂರಮ್ಮ ದೇವಿಗೆ ಹೆಚ್ಚಾಗಿ ನಡೆದುಕೊಳ್ಳುವವರು ಹರಕೆ ಒಪ್ಪಿಸುವವರು, ನಂಬಿಕೆ ಇಟ್ಟುಕೊಂಡವರು ನಾಯಕ ಸಮುದಾಯದವರು ಮಾತ್ರ. ಅಲ್ಲದೇ ಇನ್ನುಳಿದ ಸಮುದಾಯದವರು ಸಹ ಹೊಸಪೇಟೆ ನಗರದ ಸುತ್ತಮುತ್ತಲಿನ ಗ್ರಾಮಗಳಿಂದ ಬಂದು ಈ ದೇವತೆಯ ಆರಾಧನೆ, ಪೂಜೆ ಪುರಸ್ಕಾರಗಳಲ್ಲಿ ಭಾಗವಹಿಸುವುದುಂಟು. ಕಬ್ಬಿನಿಂದ ಬೆಲ್ಲವನ್ನು ತಯಾರಿಸುವ ಪರಂಪರೆ ಮೊದಲು ಹೊಸೂರಿನಲ್ಲಿ ಹೆಚ್ಚಾಗಿ ಇದ್ದರೂ ಈಗ ಸಕ್ಕರೆ ಕಾರ್ಖಾನೆಗೆ ಕಬ್ಬನ್ನು ಯತೇಚ್ಯವಾಗಿ ಸಾಗಿಸುವುದು ಕಂಡುಬರುತ್ತದೆ.

ಹೊಸೂರಮ್ಮ ದೇವಿ

ದೇವಾಲಯ ಒಂದು ಪವಿತ್ರ ಸ್ಥಳ, ಪುಣ್ಯಕ್ಷೇತ್ರವೂ ಕೂಡ. ಧರ್ಮಾವಲಂಬಿ ಪ್ರವೃತ್ತಿಯ ಚಿಂತನೆಗೆ ದೇವಾಲಯ ಒಂದು ಪ್ರಮುಖ ಕೇಂದ್ರ. ಈ ಪವಿತ್ರ ಸ್ಥಳವನ್ನು ಭಕ್ತಾದಿಗಳ ಸೇವೆಯ ಮೂಲಕ ಊರ್ಜಿತಗೊಳಿಸುವ ಕೆಲಸ ಇಂದು ಆಗಬೇಕಾಗಿದೆ. ಪ್ರತಿಯೊಂದು ದೇವಾಲಯಕ್ಕೂ ಅದರದೇ ಆದ ಇತಿಹಾಸವಿರುತ್ತದೆ. ದೇವಾಲಯದ ಸ್ಥಾಪನೆ ಯಾವಾಗ? ಆರಾಧನೆಗೊಳ್ಳುತ್ತಿರುವ ದೇವತಾ ಸ್ವರೂಪ ಯಾವುದು? ಅರ್ಚನೆಯಲ್ಲಿ ಕಂಡುಬರುವ ವಿಧಿ – ವಿಧಾನಗಳೇನು? ಇತ್ಯಾದಿಗಳನ್ನು ಕುಲಂಕುಶವಾಗಿ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ.

ಹೊಸೂರಮ್ಮ ದೇವಾಲಯ ಒಂದು ಐತಿಹಾಸಿಕ ಮಹತ್ವವನ್ನು ಪಡೆದ ದೇವಾಲಯವಾಗಿದೆ. ಈ ದೇವಸ್ಥಾನವು ಸುಮಾರು ೧೬ನೇಯ ಶತಮಾನದ್ದೆಂದು ಶಾಸನವೊಂದು ತಿಳಿಸುತ್ತದೆ. ಈ ದೇವಸ್ಥಾನವು ಉತ್ತರಾಭಿಮುಖವಾಗಿದ್ದು, ಗರ್ಭಗುಡಿಯಲ್ಲಿರುವ ಹೊಸೂರಮ್ಮನ ಮೂಲ ವಿಗ್ರಹ ಎರಡು ಅಡಿ ಎತ್ತರವಾದ ಒಂದು ದುಂಡುಕಲ್ಲಿನದಾಗಿದೆ. ಹೊಸೂರಮ್ಮ ದೇವಿಗೆ ಸ್ಪಷ್ಟವಾದ ಆಕಾರವಿಲ್ಲ. ಕಲ್ಲು ಗುಂಡನ್ನೇ ದುರ್ಗಾದೇವಿಯ ಲಿಂಗವೆಂದು ನಂಬಲಾಗಿದೆ. ದುರ್ಗೆಯನ್ನು ಲಿಂಗದ ರೂಪದಲ್ಲಿ ಆರಾಧನೆ ಮಾಡುವ ಸಂಪ್ರದಾಯ ಪ್ರಾಚೀನದಲ್ಲಿ ಇತ್ತು ಎಂಬುವುದಕ್ಕೆ ಆಧಾರಗಳು ಸಿಗುತ್ತವೆ. ಈಗಿನ ಹೊಸೂರಮ್ಮ ದೇವಾಲಯವು ಗರ್ಭಗುಡಿಯಿಂದ ಹಿಡಿದು ನವರಂಗದ ತನಕ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದದ್ದಾಗಿದೆ. ದೇವಾಲಯದ ಇನ್ನಿತರ ನಿರ್ಮಾಣ ಕಾರ್ಯವು ಹರಪನಹಳ್ಳಿಯ ಪಾಳೇಯಗಾರ ಸೋಮಶೇಖರ ನಾಯಕನ ಕಾಲದಲ್ಲಿ ನಿರ್ಮಾಣವಾಗಿದೆ. ದೇವಾಲಯದ ಮುಖ್ಯ ದ್ವಾರದ ಅಕ್ಕ – ಪಕ್ಕ ಐದು ಅಡಿ ಉದ್ದ ಮತ್ತು ಅಗಲವಿರುವ ಕಟ್ಟೆಗಳಿವೆ. ಈ ಕಟ್ಟೆಗಳ ಮೇಲೆ ಆಧಾರಸ್ತಂಭವಾದ ಎರಡು ಕಂಬಗಳಿವೆ. ಈ ಕಂಬಗಳ ಮೇಲೆ ಕೆಲವು ಚಿತ್ರಗಳನ್ನು ಕೆತ್ತಲಾಗಿದೆ. ಹೊಸೂರಮ್ಮ ದೇವಾಲಯವು ನಾಲ್ಕು ಅಂಗಣಗಳನ್ನು ಒಳಗೊಂಡಿದ್ದು ಎಂಟು ಅಡಿ ಚತುರಸ್ರವಾದ ಸುಂದರ ಗರ್ಭಗುಡಿಯನ್ನು ಹೊಂದಿದೆ. ಅದರ ಮೇಲೆ ಶಿಲೆಯ ಚೌಕಟ್ಟನ್ನು ಜೋಡಿಸಲಾಗಿದೆ. ಗರ್ಭಗುಡಿಯು ಸುಮಾರು ಆರು ಅಡಿಯಷ್ಟು ಅಗಲವನ್ನು ಹೊಂದಿದೆ. ಗರ್ಭಗುಡಿಯ ಮಧ್ಯ ಭಾಗದಲ್ಲಿ ಹೊಸೂರಮ್ಮ ದೇವಿಯ ಮೂಲ ಬಿಂಬವಿದೆ. ಈ ದೇವಿಯ ಮೂರ್ತಿಯ ಕೆಳಗೆ ಬಾವಿಯಿದ್ದು, ಬಾವಿಯ ಕಟ್ಟೆಯ ಮೇಲೆ ದೇವಿಯನ್ನು ಸ್ಥಾಪಿಸಲಾಗಿದೆ. ಎಂದು ಅಲ್ಲಿನ ಜನಪದರಿಂದ ತಿಳಿದು ಬರುತ್ತದೆ. ಹೊಸೂರಮ್ಮನನ್ನು “ಏಕನಾಥೇಶ್ವರಿ” – ಎಂಬ ಹೆಸರಿನಿಂದ ಕರೆಯುತ್ತಿದ್ದರೆಂಬ ಬಗ್ಗೆ ಸುಮಾರು ೧೪೩೫ರ ಶಾಸನ ತಿಳಿಯಪಡಿಸುತ್ತದೆ. ಹೊಸೂರಮ್ಮನನ್ನು ದುರ್ಗಾದೇವಿಯ ಲಿಂಗಾಕೃತಿಯೆಂದು, ಚಾಮುಂಡಿ ರೂಪವೆಂದು ಕರೆಯಲಾಗುತ್ತಿದೆ. ಚಾಮುಂಡಿಯೂ ಸಹ ಸಪ್ತ ಮಾತೃಕೆಯರಲ್ಲಿ ಒಬ್ಬ ದೇವಿ ಎನ್ನಲಾಗುತ್ತಿದೆ. ಆದರೆ ಇತರೆ ಹೆಣ್ಣು ದೇವತೆಗಳಿಗೆ ಇರುವಂತೆ ಕೈ, ಕಾಲು, ಮೂಗು, ಕಣ್ಣು – ಇತ್ಯಾದಿ ಈ ದೇವತೆಗೆ ಕಂಡು ಬರುವುದಿಲ್ಲ. ಈ ದೇವಿಯನ್ನು ಪೂಜೆ ಪುರಸ್ಕಾರ ಕೈಂಕಾರ್ಯಗಳಿಂದ ನೋಡಲಾಗಿ ಅತ್ಯಂತ ಸೌಮ್ಯವಾಗಿಯೂ, ಮಂದಸ್ಮಿತಳಾಗಿಯೂ, ಶಾಂತಿಯ ಚೇತನ ಮೂರ್ತಿಯಾಗಿ ನಂಬಿದ ಭಕ್ತರನ್ನು ಆಕರ್ಷಿಸುತ್ತಿದ್ದಾಳೆ. ಹೊಸೂರಮ್ಮನನ್ನು ದುರ್ಗೆಯ ತಾಮಸ ರೂಪವೆಂದು ಆಕೆ ಹೊಸೂರಮ್ಮನಂತೆ ತಾಳಿದ್ದಾಳೆಂದು ಈ ಭಾಗದ ಜನಪದರು ಹೇಳುವುದುಂಟು. ಹೊಸೂರಮ್ಮನ ಕಣ್ಣುಗಳ ಜಾಗದಲ್ಲಿ ಸಾಲಿಗ್ರಾಮಗಳು ಕಂಡು ಬರುತ್ತಿವೆ. ವಾಸುದೇವ ಸಾಲಿಗ್ರಾಮ ಮತ್ತು ಲಕ್ಷ್ಮೀ ನರಸಿಂಹ ಸಾಲಿಗ್ರಾಮಗಳು. ಈ ಸಾಲಿಗ್ರಾಮಗಳನ್ನು ಹೊಸೂರಮ್ಮ ಹೇಗೆ ಪಡೆದಳೆಂಬುದರ ಐತಿಹ್ಯವಿದೆ. ಹೊಸೂರಮ್ಮ ದೇವಾಲಯದ ಪ್ರಧಾನ ಅರ್ಚಕರು ಬ್ರಾಹ್ಮಣರು. ವರ್ಷದಲ್ಲಿ ಎರಡು ದಿನ ಲಿಂಗಾಯತ ಕುಟುಂಬದಿಂದ ಈ ದೇವಿಯ ಪವಾಡ ಜರುಗುತ್ತದೆ.

ಇನ್ನೂ ದೇವಾಲಯಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ, ಗರ್ಭಗುಡಿಯ ಮುಂಭಾಗದಲ್ಲಿ ಅಗಲವಾದ ಸುಂದರವಾದ ಸುಖನಾಸಿಯಿದೆ. ಸುಖನಾಸಿಯ ಎರಡೂ ಬದಿ ಸಣ್ಣ ಪುಟ್ಟ ಕಟ್ಟೆಗಳನ್ನು ಕಟ್ಟಲಾಗಿದೆ. ಸುಖ ನಾಸಿಯ ಮುಂಭಾಗವೇ ನವರಂಗ. ಈ ನವರಂಗವು ಸುಮಾರು ೧೧ ಅಡಿ ಉದ್ದ ಮತ್ತು ಅಗಲವನ್ನು ಹೊಂದಿದೆ. ೧೬ನೇಯ ಶತಮಾನದ ನಾಲ್ಕು ದೊಡ್ಡ ಕಲ್ಲಿನ ಕಂಬಗಳು ಇಲ್ಲಿವೆ. ಸುಮಾರು ಏಳು ಅಡಿ ಎತ್ತರದ ಈ ಕಂಬಗಳ ಸುತ್ತಲೂ ಉಬ್ಬು ಚಿತ್ರಗಳನ್ನು ಕೆತ್ತಲಾಗಿದೆ. ನವರಂಗದ ಎಡ ಮತ್ತು ಬಲ ಭಾಗದಲ್ಲಿ ಅಂದರೆ ಪೂರ್ವ ಮತ್ತು ಪಶ್ಚಿಮ ದಿಕ್ಕಿನಲ್ಲಿ ಪ್ರವೇಶ ದ್ವಾರಗಳಿವೆ. ನವರಂಗದ ಬಲ ಭಾಗದಲ್ಲಿ ನವಗ್ರಹಗಳನ್ನು ಸ್ಥಾಪಿಸಲಾಗಿದೆ. ನವರಂಗದ ಹೊರಭಾಗದಲ್ಲಿ ಒಂದು ಸುಂದರವಾದ ಮುಖಮಂಟಪವಿದೆ. ದೇವಾಲಯದ ಬಾಗಿಲಿನ ಇಕ್ಕಡೆಗಳಲ್ಲಿ ಆರು ಅಡಿ ಎತ್ತರದ ಮನುಷ್ಯಾಕಾರದ ದ್ವಾರಪಾಲಕರ ಕಲ್ಲಿನ ಮೂರ್ತಿಗಳಿವೆ. ತಲೆಯ ಮೇಲೆ ಕಿರೀಟ, ನಾಲ್ಕು ಕೈಗಳಿದ್ದು, ಹಿಂಬದಿ ಕೈಗಳಲ್ಲಿ ತ್ರಿಶೂಲ, ಡಮರುಗ ಮತ್ತು ಮುಂದಿನ ಕೈಗಳಲ್ಲಿ ತೋರುಹಸ್ತ ಮತ್ತು ಗದೆ ಹೊಂದಿರುವುದನ್ನು ಕಾಣಬಹುದಾಗಿದೆ.

ನವರಂಗದ ಎಡಭಾಗದಲ್ಲಿ ಒಂದು ಶಾಸನವಿದ್ದು ಅದು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿನದೆಂದು ಖಚಿತವಾಗಿ ಹೇಳಬಹುದಾಗಿದೆ. ಗರ್ಭಗುಡಿಯ ಮೇಲೆ ಒಂದು ಗೋಪುರವಿದ್ದು, ಅದು ಚಾಲುಕ್ಯರ ಕಾಲದ ಶೈಲಿಯನ್ನು ಹೊಂದಿದೆ. ಹೊಸೂರಮ್ಮ ದೇವಾಲಯವನ್ನು ಪ್ರವೇಶಿಸಲು ಉತ್ತರ ಮತ್ತು ಪಶ್ಚಿಮದಲ್ಲಿ ಎರಡು ಮಹಾದ್ವಾರಗಳಿವೆ. ಈ ದೇವಾಲಯದ ಸುತ್ತಲೂ ಭತ್ತ, ಬಾಳೆ ಮತ್ತು ಕಬ್ಬಿನ ಗದ್ದೆಗಳಿಂದ ತಂಪಾದ ಈ ಪ್ರದೇಶವು ಭಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ.

ಪುಣ್ಯಕ್ಷೇತ್ರವೆಂಬ ಕಲ್ಪನೆ.

ಹೊಸೂರಮ್ಮ ದೇವಸ್ಥಾನದ ವಾತಾವರಣ ಧಾರ್ಮಿಕಾಸಕ್ತರಿಗೆ ಒಂದು ಪವಿತ್ರ ಪುಣ್ಯಕ್ಷೇತ್ರವಾಗಿ ಕಂಡುಬರುತ್ತದೆ. ಒಂದು ಪುಣ್ಯ ಕ್ಷೇತ್ರ ಭೇಟಿಯ ಮಹತ್ವದ ಬಗ್ಗೆ ಯೋಚಿಸಿದರೆ ಆ ಹೆಸರಿನಲ್ಲಿಯೇ ಪುಣ್ಯ ಅಡಗಿದೆ ಎನಿಸುತ್ತದೆ. ಪುಣ್ಯ ಪ್ರಾಪ್ತಿಗಾಗಿಯೇ ಭಕ್ತರು ಪುಣ್ಯ ಕ್ಷೇತ್ರ ದರ್ಶನ ಮಾಡುತ್ತಾರೆ. ಪುಣ್ಯ ಕ್ಷೇತ್ರ ದರ್ಶನದಿಂದ ಮಾಡಿದ ಪಾಪಗಳೆಲ್ಲ ಪರಿಹಾರವಾಗುತ್ತವೆ. ಕಷ್ಟ ಕಾರ್ಪಣ್ಯಗಳೆಲ್ಲ ದೂರವಾಗುತ್ತವೆಂಬ ಕಲ್ಪನೆ ಜನಪದರಲ್ಲಿದೆ. ದಾರಿಯಲ್ಲಿ ಸಾಗುವಾಗ “ದಾರಿ ದೀಪದ ಬೆಳಕು ಬೇಕು” ಆ ಬೆಳಕು ಪುಣ್ಯ ಕ್ಷೇತ್ರದಲ್ಲಿ ನಂಬಿಕೆಯಿರುವವರಿಗೆ ಗೆಲುವಿನೆಡೆಗೆ ಕರೆದೊಯ್ಯುತ್ತದೆ. ಪುಣ್ಯ ಕ್ಷೇತ್ರ ದರ್ಶನ ಮನಸ್ಸಿನಲ್ಲಿರುವ ಅಂಧಕಾರವನ್ನು ತೊಲಗಿಸುತ್ತದೆ. ಅಪನಂಬಿಕೆಗಳನ್ನು ದೂರ ಮಾಡುತ್ತದೆ ಎಂಬುವುದು ಜನಪದರ ಲೆಕ್ಕಾಚಾರವಾಗಿದೆ. ಯಾವುದೇ ಒಳ್ಳೆಯ ಕೆಲಸವನ್ನು ಪ್ರಾರಂಭಿಸುವ ಮುನ್ನ ಇಷ್ಟ ದೇವರ ದರ್ಶನಕ್ಕಾಗಿ ಪುಣ್ಯ ಕ್ಷೇತ್ರಕ್ಕೆ ಹೋಗಿ ಬರುವ ಭಕ್ತರು ತಮ್ಮ ಮನಸ್ಸಿನಲ್ಲಿ ಅಚಲವಾದ ವಿಶ್ವಾಸವನ್ನು ಹೊಂದುತ್ತಾರೆ. ಅವರಿಗೆ ಅವರ ಕೆಲಸದಲ್ಲಿ ಗೆಲ್ಲುವ ವಿಶ್ವಾಸ ಸೃಷ್ಟಿಯಾಗುತ್ತದೆ. ದೇವರ ದರ್ಶನ ಮಾಡುವುದರಿಂದ ಭಕ್ತರ ಆತ್ಮ ವಿಶ್ವಾಸ ದ್ವಿಗುಣವಾಗುತ್ತದೆ. ಎಂಬುವುದು ಜನಪದರ ಗಟ್ಟಿ ನಿರ್ಧಾರವಾಗಿದೆ. ಯಾವುದೇ ಒಬ್ಬ ವ್ಯಕ್ತಿ ತನ್ನ ಬೆಳವಣಿಗೆಯನ್ನು ಬಯಸುತ್ತಾನೋ ಅವನು ಪುಣ್ಯ ಕ್ಷೇತ್ರದಿಂದ ಮಾತ್ರ ಉದ್ಧಾರವಾಗುತ್ತಾನೆ. ಪ್ರತಿ ಸಲ ಪುಣ್ಯ ಕ್ಷೇತ್ರದ ದರ್ಶನದಿಂದ ಹೊಸ ಚಿಂತನೆಗಳು ಆತನ ಮನಸ್ಸಿನಲ್ಲಿ ತುಂಬಿಕೊಳ್ಳುತ್ತವೆ. ಆತ್ಮದ ಕೊಳೆಯನ್ನು ತೊಲಗಿಸಿ ಹೊಸ ಹೊಳಪನ್ನು ಮೂಡಿಸಿಕೊಳ್ಳಬಹುದಾಗಿದೆ. ಆಗ ನಿಜವಾದ ಗೆಲುವು ನಮ್ಮನ್ನು ಹಿಂಬಾಲಿಸುತ್ತದೆ ಎಂಬುವುದು ಭಕ್ತರ ಅಚಲವಾದ ನಿರ್ಧಾರವಾಗಿದೆ. ಹೊಸೂರಮ್ಮ ದೇವಿಯ ದೇವಸ್ಥಾನದಂತ ಪುಣ್ಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಿ ಬರುವ ಅಭ್ಯಾಸ ಮತ್ತು ನಿರಂತರವಾದ ಒಂದು ಪರಂಪರೆ ನಿಜಕ್ಕೂ ಪುಣ್ಯಕ್ಕೆ ಸಮಾನವಾದದ್ದು. ಭಕ್ತಿಯ ಪುಳಕದಲ್ಲಿದ್ದ ಭಕ್ತರನ್ನು ಪ್ರಭುದ್ಧರನ್ನಾಗಿ ಮಾಡುತ್ತದೆ. ಅಲ್ಲಿ ನಡೆಯುವ ಆರಾಧನೆಗಳು ಪೂಜೆ ಪುರಸ್ಕಾರಗಳು ಭಕ್ತರ ಮನಸ್ಸನ್ನು ಸಕಾರಾತ್ಮಕ ಭಾವನೆಯತ್ತ ಬೆಳೆಯುವಂತೆ ಪ್ರೇರೇಪಿಸುತ್ತವೆ ಎಂಬುವುದು ಪೂರ್ವಜರ ಅಭಿಪ್ರಾಯವಾಗಿದೆ. ಹೊಸೂರಮ್ಮ ದೇವಸ್ಥಾನದಂತ ಪುಣ್ಯ ಕ್ಷೇತ್ರ ಭಕ್ತರ ಮನಸ್ಸಿನಲ್ಲಿ ಅಡಗಿರುವ ದುಃಖ ದುಮ್ಮಾನ, ರೋಗ ರುಜಿನಗಳಂತ ಕಾಯಿಲೆಗಳನ್ನು ದೂರ ಮಾಡಲು ಸಹಾಯಕ ಕೇಂದ್ರವಾಗಿ ನಿಲ್ಲುತ್ತದೆ. ಪುಣ್ಯ ಕ್ಷೇತ್ರಗಳಲ್ಲಿ ಸ್ನಾನ ಮಾಡಿ ಪೂಜೆ ಪುರಸ್ಕಾರಗಳಲ್ಲಿ ತೊಡಗುವುದರಿಂದ ಪಾಪ, ದೋಷಗಳು ನಿವಾರಣೆಯಾಗುತ್ತವೆ ಎಂಬ ರೂಢಿಗತವಾದ ನಂಬಿಕೆ ಜನಪದರಲ್ಲಿ ಶಾಶ್ವತವಾಗಿ ನೆಲೆಯೂರಿದೆ. ಹೊಸೂರಮ್ಮ ದೇವಸ್ಥಾನ ಪುರಾತನವಾಗಿದ್ದು ಅದು ಈ ಭಾಗದ ಭಕ್ತರ ಮನಸ್ಸಿನಲ್ಲಿ, ಜನಪದರ ಮನಸ್ಸಿನಲ್ಲಿ ಒಂದು ಮಹತ್ವದ ಪುಣ್ಯ ಕ್ಷೇತ್ರವಾಗಿ ಪರಿಣಮಿಸಿದೆ. ಈ ದೇವಿ ಕೆಲವರ ಮನೆ ದೇವತೆಯಾಗಿ, ಹಲವರ ಕುಲದೇವತೆಯಾಗಿ ಹೊರ ಹೊಮ್ಮಿರುವುದು ಈ ಮೇಲಿನ ಮಾತಿಗೆ ಪುಷ್ಟಿ ನೀಡುತ್ತದೆ. ಹೊಸೂರಿಗೆ ಹೊಸೂರಮ್ಮ ದೇವಿಯೇ ಅಧಿದೇವತೆ ಎಂಬುವುದು ಸ್ಪಷ್ಟ. ಇನ್ನೂ ಹೊಸೂರಮ್ಮ ದೇವಾಲಯದ ಆವರಣದಲ್ಲಿ ಉಪ ದೇವತೆಗಳಿವೆ. ಅವುಗಳು ಕೆಳಗಿನಂತಿವೆ:

ಜಮದಗ್ನಿ

ಹೊಸೂರಮ್ಮ ದೇವಸ್ಥಾನದ ದಕ್ಷಿಣ ಭಾಗದಲ್ಲಿ ಜಮದಗ್ನಿಯ ಚಿಕ್ಕ ದೇವಾಲಯವಿದೆ. ಇದು ಪ್ರಮುಖ ದೇವಸ್ಥಾನದ ಹಿಂಬದಿಯಲ್ಲಿದೆ. ಜಮದಗ್ನಿ ಮೂರ್ತಿಯ ಪಕ್ಕದಲ್ಲಿ ರೇಣುಕಾ ದೇವಿಯ ಮೂರ್ತಿ ಇದೆ. ಜಮದಗ್ನಿ ದೇವಾಲಯದ ಬಾಗಿಲ ಬಳಿ ಕ್ಷೇತ್ರಪಾಲನೆಂದು ಕರೆಯುವ ಮನುಷ್ಯಾಕೃತಿಯ ಶಿಲ್ಪಗಳಿವೆ. ಜಮದಗ್ನಿಗೆ ನಿತ್ಯ ಪೂಜೆ ನಡೆಯುತ್ತಿದೆ.

ಪರಶುರಾಮ

ಜಮದಗ್ನಿ ಗುಡಿಯ ಎಡಭಾಗದಲ್ಲಿ ಅಂದರೆ ದೇವಾಲಯದ ನೈರುತ್ಯ ಭಾಗದಲ್ಲಿ ಪರಶುರಾಮ ಮತ್ತು ದತ್ತಾತ್ರೇಯನ ಪಾದಗಳಿರುವ ಗುಡಿ ಇದೆ. ಚಿಕ್ಕದಾದ ದೇವಸ್ಥಾನ ಇದಾಗಿದ್ದು ಗರ್ಭಗುಡಿ ಮತ್ತು ಸುಖಾನಾಸಿಯನ್ನು ಹೊಂದಿದೆ. ಈ ದೇವಾಲಯದ ಒಳಗಡೆ ಅಷ್ಟದಿಕ್ಪಾಲಕರಲ್ಲಿ ಒಬ್ಬನಾದ ಸೋಮನ ಮೂರ್ತಿಯಿದೆ. ಪರಶುರಾಮ ಹೊಸೂರಮ್ಮ ದೇವಿಯ ಮಗನೆಂಬ ಕಲ್ಪನೆ ಇಲ್ಲಿಯ ಜನಪದರಲ್ಲಿದೆ.

ಮಾತಂಗೇಶ್ವರ

ಹೊಸೂರಮ್ಮ ದೇವಸ್ಥಾನದ ಹಿಂಬದಿಯಲ್ಲಿ ಆಗ್ನೇಯ ದಿಕ್ಕಿನಲ್ಲಿ ಮಾತಂಗೇಶ್ವರ ದೇವಸ್ಥಾನವಿದೆ. ಈ ದೇವಾಲಯದ ಒಳಗೆ ಕಪ್ಪು ಶಿಲೆಯ ಲಿಂಗವಿದೆ. ಗರ್ಭಗುಡಿಯ ಮುಂದಿರುವ ಮಂಟಪ ನಾಲ್ಕು ಕಂಬಗಳನ್ನು ಹೊಂದಿದ್ದು, ಒಂದು ಕಂಬದ ಮೇಲೆ ಶಾಸನವನ್ನು ಕೆತ್ತಲಾಗಿದೆ. ಈ ದೇವಾಲಯಕ್ಕೆ ಪ್ರದಕ್ಷಿಣಾ ಪಥವಿದ್ದು ದೇವಸ್ಥಾನದ ಮುಂದೆ ಅಶ್ವಥ್ಥ ನಾರಾಯಣ ವೃಕ್ಷವಿದೆ. ಇದರ ಬಳಿ ಒಂದು ವೀರಗಲ್ಲು ಕಂಡು ಬರುತ್ತದೆ.

ಮೈಲಾರಲಿಂಗ

ಮುಖ್ಯ ದೇವಾಲಯದ ಮುಂದೆ ಈಶಾನ್ಯ ಭಾಗದಲ್ಲಿ ಚಿಕ್ಕ ದೇವಾಲಯವೇ ಮೈಲಾರಲಿಂಗ ದೇವಾಲಯ. ಈ ದೇವಾಲಯದಲ್ಲಿರುವ ದುರ್ಗಾ ಬಿಂಬವನ್ನೇ “ಮೈಲಾರಲಿಂಗ”ವೆಂದು ಕರೆಯುವ ವಾಡಿಕೆ ಇಲ್ಲಿದೆ. ಮತ್ತು ಗಣೇಶನ ಮೂರ್ತಿಯೂ ಸಹ ಈ ದೇವಾಲಯದಲ್ಲಿದೆ. ಆತನನ್ನು “ಆನೆಕಲ್ಲು ಬೆಳಕಪ್ಪ”ನೆಂದು ಇಲ್ಲಿಯ ಜನಪದರು ಕರೆಯುವುದುಂಟು.

ಶ್ರೀ ಆಂಜನೇಯ ಸ್ವಾಮಿ

ಹೊಸೂರಮ್ಮ ದೇವಸ್ಥಾನದ ಪಶ್ಚಿಮ ಭಾಗದಲ್ಲಿರುವ ದೇವಾಲಯವೇ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ. ಈ ದೇವಸ್ಥಾನದ ಗರ್ಭಗುಡಿಯು ಸುಮಾರು ೧೧ ಅಡಿ ಉದ್ದ ಮತ್ತು ೮ ಅಡಿ ಅಗಲವನ್ನು ಹೊಂದಿದೆ. “ಹಳ್ಳಿ ಊರಿಗೆ ಹನುಮಪ್ಪ ಚೆಂದ” ಎನ್ನುವ ಗಾದೆ ಮಾತಿನಂತೆ ಇಲ್ಲಿನ ಆಂಜನೇಯ ಮೂರ್ತಿ ತುಂಬಾ ಸುಂದರವಾಗಿದೆ. ಶ್ರೀ ಆಂಜನೇಯ ಸ್ವಾಮಿ ಗುಡಿಯು ಎತ್ತರದ ಕಟ್ಟೆಯ ಮೇಲೆ ಕಟ್ಟಲ್ಪಟ್ಟಿದೆ. ಆಂಜನೇಯ ದೇವರಿಗೆ ದಿನ ನಿತ್ಯವೂ ಪೂಜೆ ಪುರಸ್ಕಾರಗಳು ಜರುಗಿದರೂ ಶನಿವಾರ ಮಾತ್ರ ಆತನ ವಾರವೆಂದು ವಿಶೇಷ ಪೂಜೆ ಕೈಂಕಾರ್ಯಗಳು ನಡೆಯುತ್ತವೆ.

ಮುದ್ದಮ್ಮ ದೇವಿ

ಮುಖ್ಯ ದೇವಾಲಯದ ಪಶ್ಚಿಮ ಭಾಗದಲ್ಲಿ “ಮುದ್ದಮ್ಮ ದೇವಿ”ಯ ಗುಡಿಯಿದೆ. ಗರ್ಭಗುಡಿಯ ಮಧ್ಯಭಾಗದಲ್ಲಿ ಸುಮಾರು ೧೦ ಅಡಿ ಎತ್ತರವಾದ ಏಳು ಹೆಡೆಯ ಸರ್ಪವು ಈ ಸ್ತ್ರೀ ದೇವತೆಯನ್ನು ಸುತ್ತಿಕೊಂಡಿದೆ. ಈಕೆಯನ್ನೇ ಇಲ್ಲಿಯ ಜನಪದರು – ಮುದ್ದಮ್ಮ ದೇವಿ ಎಂದು ಕರೆದು ಪೂಜಿಸುತ್ತಿದ್ದಾರೆ. ಏಳು ಹೆಡೆಯ ಸರ್ಪ ಹಾಗೂ ಒಬ್ಬ ಸ್ತ್ರೀ ದೇವತೆಯ ಕೆತ್ತನೆ ಶಿಲ್ಪ ಉಗ್ರಸ್ವರೂಪದ್ದಾಗಿದೆ. ಭಕ್ತರಿಗೆ ಭಯವನ್ನುಂಟು ಮಾಡುವ ರೀತಿಯಲ್ಲಿ ಈ ವಿಗ್ರಹ ಮೂಡಿ ಬಂದಿದೆ. ಹೊಸೂರಮ್ಮನ ತಾಯಿಯೇ ಮುದ್ದಮ್ಮ ಎಂಬ ನಂಬಿಕೆ ಇಲ್ಲಿನ ಜನಪದರಲ್ಲಿದೆ. ದೇವಸ್ಥಾನದ ಮುಂಭಾಗದಲ್ಲಿನ ಎರಡು ಕಂಬಗಳಿದ್ದು ಒಂದರಲ್ಲಿ ಹಾವಿನ ಕೆತ್ತನೆಯ ಉಬ್ಬು ಚಿತ್ರ ಬೇಡರ ಕಣ್ಣಪ್ಪನ ಉಬ್ಬು ಚಿತ್ರಗಳು ಕಂಡುಬರುತ್ತವೆ. ಈ ಮೇಲಿನ ಚಿಕ್ಕ ಪುಟ್ಟ ಗುಡಿಗಳು ಹೊಸೂರಮ್ಮ ದೇವಾಲಯದ ಆವರಣದಲ್ಲಿ ಕಂಡು ಬರುವವು. ಹೊಸೂರಮ್ಮ ದೇವತೆಗೆ ಹೆಚ್ಚಿನ ಭಕ್ತರು ನಡೆದುಕೊಳ್ಳದಿದ್ದರೂ ಕೆಲವರಂತೂ ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಹುಣ್ಣಿಮೆಯ ದಿನಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಕಂಡುಬರುತ್ತಾರೆ. ಹೊಸೂರು ಮತ್ತು ಹೊಸಪೇಟೆಯಲ್ಲಿ ಹೆಚ್ಚಿನ ಬಲಾಢ್ಯತೆಯನ್ನು ಹೊಂದಿರುವ ಜನಾಂಗವೆಂದರೆ, ನಾಯಕ ಜನಾಂಗ. ಈ ಜನಾಂಗವೇ ಹೊಸೂರಮ್ಮ ದೇವತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಆರಾಧಿಸುತ್ತಿದ್ದಾರೆ. ಪೂಜೆ ಪುರಸ್ಕಾರ ಜಾತ್ರೆ ಉತ್ಸವ ಮತ್ತು ಪವಾಡದ ದಿನಗಳಂದು ಈ ಜನಾಂಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದುಂಟು. “ದೇವರಿಗೆ ನಡೆದುಕೊಂಡೆ ಪಡೆದುಕೊಂಡೆ”, ವರಕೊಟ್ಟ ದೇವರಿಗೆ (ದೇವರಿಗೆ ಶಿರಬಾಗಿ ಕೈ ಮುಗಿ) ಶಿರಕೊಡು, ದುಷ್ಟಶಕ್ತಿಗಿಂತ ದೈವಶಕ್ತಿ ದೊಡ್ಡದು ಎಂಬ ಗಾದೆ ಮಾತುಗಳ ನಂಬಿಕೆ ಹೊಸೂರಮ್ಮ ದೇವಿಯ ಜನಪದ ಭಕ್ತರಲ್ಲಿದೆ. ಬಹಳ ನಿಷ್ಠೆಯಿಂದ ನಂಬುವ ಭಕ್ತವೃಂದವನ್ನು ಹೊಸೂರಮ್ಮ ದೇವಿ ಪಡೆದಿದ್ದಾಳೆ ಎಂದು ಹೇಳಲಾಗುತ್ತದೆ. ಈ ದೇವತೆಯನ್ನು ನಂಬಿದರೆ ತಮ್ಮ ಕಷ್ಟಗಳನ್ನು ಪರಿಹರಿಸುತ್ತಾಳೆ ಎಂಬ ನಂಬಿಕೆ ಇಲ್ಲಿನ ಪರಿಸರದ ಜನಪದರಲ್ಲಿದೆ. ಇನ್ನೂ ಹೊಸೂರು ಗ್ರಾಮದಲ್ಲಿ ಹೊಸೂರಮ್ಮ ದೇವಾಲಯವಲ್ಲದೇ ಇನ್ನಿತರ ಆರು ಗುಡಿಗಳಿವೆ. ಹೊಸೂರಿನಲ್ಲಿರುವ ಆರು (೬) ಗುಡಿಗಳೆಂದರೆ,

೧. ಶ್ರೀ ಪವಾಡದ ಆಂಜನೇಯ ಸ್ವಾಮಿ ಗುಡಿ (ನದಿಗೆ ಹೋಗುವ ದಾರಿ)

೨. ಶ್ರೀ ದುರ್ಗದ ಆಂಜನೇಯ ಸ್ವಾಮಿ ಗುಡಿ (ಗ್ರಾಮಕ್ಕೆ ಹೋಗುವ ದಾರಿ)

೩. ಶ್ರೀ ಊರಮ್ಮ ದೇವಾಲಯ (ಗ್ರಾಮದ ಹೊರಗಡೆ ಇರುವ ಗುಡಿ)

೪. ಶ್ರೀ ಈಶ್ವರ ರಾಮಲಿಂಗ ಸ್ವಾಮಿ ಗುಡಿ (ತುಂಗಭದ್ರಾ ನದಿ ಹತ್ತಿರವಿರುವ ಗುಡಿ)

೫. ಶ್ರೀ ಬಸವೇಶ್ವರ ಗುಡಿ (ರಾಯರ ಕಾಲುವೆ ಹತ್ತಿರವಿರುವ ಗುಡಿ)

೬. ಶ್ರೀ ಆನೆಕಲ್ಲು ಬೆನಕಪ್ಪ ದೇವರ ಗುಡಿ – ಈ ಆರು ಗುಡಿಗಳು ಹೊಸೂರು ಗ್ರಾಮದಲ್ಲಿದ್ದು ಅವೆಲ್ಲವು ಶಿಥಿಲಗೊಂಡಿವೆ. ಅವುಗಳ ಜೀರ್ಣೋದ್ಧಾರ ತೀವ್ರಗತಿಯಲ್ಲಿ ನಡೆಯಬೇಕಾಗಿದೆ.

ಹೊಸೂರಮ್ಮನ ಬಗೆಗಿರುವ ಕಥೆ ಮತ್ತು ಐತಿಹ್ಯ

ಮಾನವ ಮೊದಲು ಅಲೆಮಾರಿ ಜೀವನದಲ್ಲಿಯೇ ಮಗ್ನನಾಗಿದ್ದ. ಬರ ಬರುತ್ತಾ ಅದನ್ನು ಬಿಟ್ಟು ಒಂದು ಕಡೆ ನೆಲೆನಿಂತು ವಾಸವನ್ನು ಸಹ ಮಾಡತೊಡಗಿದ. ಆಗ ಗ್ರಾಮಗಳ ಹುಟ್ಟು ಪ್ರಾರಂಭವಾಯಿತು. ತದನಂತರ ತನ್ನ ಮತ್ತು ಗ್ರಾಮಗಳ ರಕ್ಷಣೆಗಾಗಿ ಗ್ರಾಮ ದೇವತೆಗಳನ್ನು ಸ್ಥಾಪಿಸತೊಡಗಿದ ಮಾನವ, ಗ್ರಾಮಗಳನ್ನು ನಿರ್ಮಿಸಿದಂತೆ ಗ್ರಾಮ ದೇವತೆಗಳೂ ಸಹ ಹುಟ್ಟಿಕೊಂಡವು ಎಂಬುವುದು ಜನಜನಿತವಾದ ವಿಷಯವಾಗಿದೆ. ಹೊಸೂರಮ್ಮ ದೇವಿಯ ಉಗಮದ ಬಗ್ಗೆಯೂ ಒಂದು ಕಟ್ಟು ಕಥೆ ಇಲ್ಲಿನ ಜನಪದರಲ್ಲಿದೆ. ಪರಶುರಾಮನು ತನ್ನ ತಂದೆಯಾದ ಜಮದಗ್ನಿಯ ಆಜ್ಞೆಯಂತೆ ತನ್ನ ಪರಶು (ಕೊಡಲಿ) ವಿನಿಂದ ತಾಯಿ ರೇಣುಕೆಯ ಶಿರವನ್ನು ಕಡಿದು ಹಾಕಿದನು. ರೇಣುಕೆಯ ರುಂಡದ ಚೂರುಗಳು ಬಿದ್ದ ಕಡೆಗಳಲ್ಲಿ ಒಂದಕ್ಕೆರಡಾಗಿ ಹೊಸ ತಲೆಗಳು ಹುಟ್ಟಿಕೊಂಡವು. ಹೀಗೆ ಅಸಂಖ್ಯಾತ ತಲೆಗಳಾದವು. ಕೊನೆಗೆ ಜಮದಗ್ನಿಯು ಆಕೆಯ ಪತಿವ್ರತೆಯನ್ನು ಮೆಚ್ಚಿ ಅನುಗ್ರಹಗೊಂಡು ಜೀವದಾನ ಮಾಡಿ ಅನುಗ್ರಹಿಸಿದ. ಅಸಂಖ್ಯಾತ ತಲೆಗಳೆಲ್ಲ ಗ್ರಾಮದೇವತೆಗಳಾಗಲೆಂದು ಪರಶುರಾಮ ತನ್ನ ದಿವ್ಯ ಶಕ್ತಿಯಿಂದ ಅವುಗಳಿಗೆ ವರವನ್ನು ನೀಡಿ ಅನುಗ್ರಹಿಸಿದ. ಅದರಂತೆ ರೇಣುಕೆಯ ತಲೆಯಿಂದ ಹುಟ್ಟಿಬಂದ ತಲೆಗಳೆಲ್ಲವೂ ಗ್ರಾಮದೇವತೆಗಳಾದವು. ಅವುಗಳೆಲ್ಲ ರೇಣುಕೆಯ ರುಂಡದ ಸಂಕೇತಗಳು. ದೇಹದ ಭಾಗವಿಲ್ಲದೆ ರುಂಡದ ಭಾಗದಲ್ಲಿ ಪೂಜಿಸುವ ಪರಂಪರೆ ಬಹಳ ಹಿಂದಿನಿಂದಲೂ ಈ ಭಾಗದಲ್ಲಿ ಪ್ರಚಲಿತದಲ್ಲಿದೆ. ಹೊಸೂರಮ್ಮ ಮತ್ತು ಹೊಳೆ ಆಚೆ ದಡದಲ್ಲಿರುವ ಹುಲಿಗೆಮ್ಮ ದೇವತೆಗಳಿಗೆ ರುಂಡ ಮಾತ್ರವಿದ್ದು ಅದನ್ನೇ ಬಹಳ ಶ್ರದ್ಧೆಯಿಂದ ಪೂಜಿಸಲಾಗುತ್ತಿದೆ. ಜನಪದ ಮಹಿಳೆಯರ ಸೋಬಾನ ಪದಗಳಲ್ಲಿಯೂ ಕೂಡ ಇದರ ಪ್ರಸ್ತಾಪವಿರುವುದನ್ನು ಕಾಣಬಹುದಾಗಿದೆ. ಈ ಮೇಲಿನ ಕಥೆಯನ್ನು ಆಧಾರವಾಗಿ ನೋಡಲಾಗಿ ಹೊಸೂರಮ್ಮ ದೇವಿಯು ಕೂಡ ರೇಣುಕಾ ದೇವಿಯ ಅವತಾರವೇ ಆಗಿದ್ದಾಳೆ. ಶಾಂತಿ ದೇವತೆಯಾಗಿ ಹೊಸೂರಿನ ಗ್ರಾಮದಲ್ಲಿ ಹೊಸೂರಮ್ಮನಾಗಿ ನೆಲೆಸಿದರೆ, ಉಗ್ರ ದೇವತೆಯಾಗಿ ಕೆಲವು ಭಾಗಗಳಲ್ಲಿ ತನ್ನ ಶಕ್ತಿಯ ಪ್ರಭಾವದಿಂದ ನೆಲೆಸಿದ್ದಾಳೆ ಎಂಬುದಕ್ಕೆ ಉದಾಹರಣೆಗಳಿವೆ.