ಹೊಸೂರಿನ ದೇವತೆಯ ಬಗ್ಗೆ ಜನಪದರಲ್ಲಿರುವ ಕಥೆ

ರೇಣುಕಾ ದೇವಿಯು(ಹೊಸೂರಮ್ಮ) ತನ್ನ ಪತಿವ್ರತೆಯ ನಿಷ್ಠೆಯಂದಾಗಿ ಹಾವನ್ನು ಒಂದು ಸಿಂಬೆಯನ್ನಾಗಿ ಮಾಡಿಕೊಂಡು ಅದರ ಮೇಲೆ ನೀರು ತುಂಬಿದ ಕೊಡವನ್ನು ಹೊತ್ತು ಕೊಂಡು ನದಿಯಿಂದ ದಿನಾಲೂ ತಂದು ಪತಿ ಜಮದಗ್ನಿಯ ಪೂಜೆಗೆ ನೆರವಾಗುತ್ತಿದ್ದಳು. ಒಮ್ಮೆ ಜಮದಗ್ನಿಯು ಬಹಳ ನಿಷ್ಠೆಯಿಂದ ಪೂಜೆಯಲ್ಲಿ ನಿರತನಾಗಿದ್ದಾಗ ರೇಣುಕಾ ದೇವಿಯು ನೀರು ತರಲು ತುಂಗಭದ್ರಾ ನದಿಗೆ ಹೋದಳು. ನದಿಯಲ್ಲಿ ಚಿತ್ರರಥನೆಂಬ ಗಂಧರ್ವನು ತನ್ನ ವನಿತೆಯರೊಂದಿಗೆ ನೀರಿನಲ್ಲಿ ಆಟವಾಡುತ್ತಿರುವುದನ್ನು ಕಂಡು ಮೈ ಮರೆತು ನಿಂತಳು. ಆಗ ಆಕೆಯ ಮನಸ್ಸು ಚಂಚಲವಾಯಿತು. ತಕ್ಷಣ ಎಚ್ಚೆತ್ತ ರೇಣುಕೆಯು ನದಿಯ ದಡದಲ್ಲಿನ ಉಸುಗನ್ನು ತೆಗೆದುಕೊಂಡು ಕೊಡ ಮಾಡತೊಡಗಿದಳು. ಎಷ್ಟೇ ಪ್ರಯತ್ನಿಸಿದರೂ ರೇಣುಕೆಯಿಂದ ಕೊಡ ತಯಾರಿಸಲಾಗಲಿಲ್ಲ. ಬರಿಗೈಯಿಂದಲೆ ಆಶ್ರಮಕ್ಕೆ ವಾಪಸ್ಸು ಬಂದಳು.

ದಿವ್ಯಜ್ಞಾನಿಯಾದ ಜಮದಗ್ನಿ ಬರಿಗೈಯಿಂದ ಬಂದ ರೇಣುಕೆಯ ತಪ್ಪನ್ನು ಗ್ರಹಿಸಿದನು. ಕೋಪಗೊಂಡ ಜಮದಗ್ನಿ ರೇಣುಕಾ ದೇವಿಗೆ ಶಾಪವನ್ನು ನೀಡಿದನು. ತನ್ನ ನಾಲ್ಕು ಮಕ್ಕಳನ್ನು ಕರೆದು ರೇಣುಕೆಯ ತಲೆಯನ್ನು ಕತ್ತರಿಸಿ ಹಾಕುವಂತೆ ಆಜ್ಞಾಪಿಸಿದನು. ಅವರು ತಾಯಿಯನ್ನು ಕೊಂದ ಪಾಪಕ್ಕೆ ಗುರಿಯಾಗಬಹುದೆಂದು ಹೆದರಿ ಹಿಂಜರಿದರು. ಆಗ ಕೊನೆಯ ಪುತ್ರ ಪರಶುರಾಮನನ್ನು ಕರೆದು ತನ್ನ ತಾಯಿಯ ರುಂಡ ಕತ್ತರಿಸಲು ಆಜ್ಞೆ ನೀಡಿದನು. ತಕ್ಷಣ ಪರಶುರಾಮ ತಂದೆಯ ಮಾತಿನ ಪರಿಪಾಲನೆಯಂತೆ ಹುಲಿಗಿ ಪ್ರದೇಶದಲ್ಲಿನ ನದಿಯ ದಡದಲ್ಲಿ ನಿಂತು ತನ್ನ ತಾಯಿ ರೇಣುಕೆಯ ರುಂಡವನ್ನು ಕೊಡಲಿಯಿಂದ ಕಡಿದು ಹಾಕಿದನು. ರೇಣುಕಾ ದೇವಿಯ ರುಂಡ ನದಿಯ ದಡದಲ್ಲಿನ ಹೊಸೂರಿನಲ್ಲಿ ಬಿದ್ದಿತ್ತೆಂದು, ಉಳಿದ ದೇಹದ ಭಾಗ ಹುಲಿಗಿ ಪ್ರದೇಶದಲ್ಲಿ ಬಿತ್ತೆಂಬುದಾಗಿ ಹೊಸಪೇಟೆ ಪರಿಸರದ ಜನಪದರು ಇಂದಿಗೂ ಹೇಳುವುದುಂಟು.

ನಂತರ ಪರಶುರಾಮನ ಕೋರಿಕೆಯಂತೆ ರೇಣುಕಾ ದೇವಿಯ ರುಂಡ ಮತ್ತು ಮುಂಡವನ್ನು ಒಂದುಗೂಡಿಸಿ ಜೀವದಾನ ಮಾಡಿದನಂತೆ. ಆಗ ಪರಶುರಾಮ ಒಂದು ದುಂಡಾಕಾರದ ಶಿಲೆಯನ್ನು ತಂದು ತನ್ನ ತಾಯಿಯ ದಿಂಬದಲ್ಲಿಯೂ ಮತ್ತೊಂದನ್ನು ರುಂಡ ಬಿದ್ದಲ್ಲಿಯೂ ಇರಿಸಿ ತನ್ನ ಪರಶುವಿನ ಪ್ರಭಾವದಿಂದ ದುರ್ಗಾರೂಪವನ್ನು ಮಾಡಿದನಂತೆ. ಪರಶುರಾಮ ಇಚ್ಛೆಯಂತೆ ಎರಡೂ ಪ್ರದೇಶ (ಹೊಸೂರಿನಲ್ಲಿ ಹೊಸೂರಮ್ಮ ಮತ್ತು ಹುಲಿಗಿಯಲ್ಲಿ ಹುಲಿಗೆಮ್ಮ)ಗಳಲ್ಲಿ ನೆಲೆಸಿ, ನೀನು ಈ ಕಲಿಯುಗ ಇರುವ ತನಕ ಇದೇ ಪ್ರದೇಶದಲ್ಲಿದ್ದು “ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ರಕ್ಷಿಸು” ಎಂದು ಹೇಳಿ ಮಹೇಂದ್ರ ಪರ್ವತಕ್ಕೆ ಹೊರಟು ಹೋದನೆಂದು ಈ ಭಾಗದ ಜನಪದರು ಹೇಳುತ್ತಾರೆ. ಹೊಸೂರು ಮತ್ತು ಹುಲಿಗಿ ಈ ಎರಡು ಕ್ಷೇತ್ರಗಳಲ್ಲಿ ಹುಲಿಗೆಮ್ಮ ಹೊಸೂರಮ್ಮ ಅಕ್ಕ – ತಂಗಿಯರಾಗಿ ನೆಲೆಸಿದ್ದಾರೆ. ಶಾಂತಿಯ ಸಂಕೇತವಾಗಿ ಹೊಸೂರಮ್ಮ ಹೊರ ಹೊಮ್ಮಿದರೆ, ಉಗ್ರ ಸ್ವರೂಪಳಾಗಿ ತಂಗಿ ಹುಲಿಗಿಯಲ್ಲಿ ನೆಲೆಸಿದ್ದಾಳೆ ಎಂದು ಇಲ್ಲಿನ ಜನಪದರು ಮತ್ತು ಜೋಗತಿಯರು ತಮ್ಮ ತಮ್ಮ ಕಥೆಗಳಲ್ಲಿ ಇಂದಿಗೂ ವ್ಯಕ್ತಪಡಿಸುತ್ತಿದ್ದಾರೆ.

ಹೊಸೂರಮ್ಮನ ಬಗೆಗಿರುವ ಪೌರಾಣಿಕ ಹಿನ್ನೆಲೆ

ಸಪ್ತ ಮಣಿಗಳಲ್ಲಿ ಒಬ್ಬನಾದ ಜಮದಗ್ನಿಯು ಬ್ರಹ್ಮಚರ್ಯಾನುಷ್ಠಾನವನ್ನು ಬಹುಕಾಲ ಮಾಡಿ ಭೂಭಾರವನ್ನು ಇಳಿಸುವುದಕ್ಕೋಸ್ಕರ ಸಾಕ್ಷಾತ್ ನಾರಾಯಣನನ್ನು ಪುತ್ರ ಮುಖೇನ ಪಡೆಯಲು ದೇವತೆಗಳಿಂದ ಪ್ರಾರ್ಥಿತನಾಗಿ ರೇಣುಕಾ ದೇವಿಯನ್ನು ವಿವಾಹ ಮಾಡಿಕೊಂಡನು. ರೇಣುಕೆಯು ಅಯೋನಿಜಳು, ಜಮದಗ್ನಿಯು ಈಕೆಯನ್ನು ವಿವಾಹವಾಗಿ ಬಹುಕಾಲ ಸಂಸಾರ ಮಾಡಿಕೊಂಡು ತಪೋನಿರತನಾಗಿದ್ದನು. ಸತಿ ಪತಿಗಳಾದ ರೇಣುಕಾ ಮತ್ತು ಜಮದಗ್ನಿಗೆ ಜನಿಸಿದ ಐವರು ಪುತ್ರರಲ್ಲಿ ಪರಶುರಾಮ ಕಡೆಯವನು. ಈ ಪರಶುರಾಮನೇ ಶ್ರೀಮನ್ನಾರಾಯಣನ ಅವತಾರವೆಂದು ತಿಳಿಯಲಾಗಿದೆ. ತುಂಗಭದ್ರಾ ನದಿಯ ದಡದಲ್ಲಿ ಜಮದಗ್ನಿಯು ಐವರು ಪುತ್ರರಿಂದಲೂ, ರೇಣುಕಾ ದೇವಿಯ ಜೊತೆ ಕೂಡಿಕೊಂಡು ಹೊಸೂರು ಹುಲಿಗಿ ಪ್ರಾಂತವನ್ನು ಆಶ್ರಯವನ್ನಾಗಿ ಮಾಡಿಕೊಂಡು ತಪಸ್ಸನ್ನಾಚರಿಸುತ್ತಿದ್ದನು. ಒಂದು ದಿನ ಎಲ್ಲಾ ಕುಮಾರರೂ ಫಲಾಹಾರ ತಾಂಬೂಲಗಳನ್ನು ತರಲು ಅಡವಿಗೆ (ಅರಣ್ಯಕ್ಕೆ) ಹೋಗಿರಲು ಜಮದಗ್ನಿಯು ದೇವರ ಪೂಜೆಯಲ್ಲಿ ನಿರತನಾಗಿದ್ದಾಗ ರೇಣುಕೆಯು ಸ್ನಾನಕ್ಕೆಂದು ನದಿಗೆ ತೆರಳಿದಳು. ಸ್ನಾನದ ನಂತರ ಹಿಂತಿರುಗಿ ಬರುತ್ತಿದ್ದಾಗ ಚಿತ್ರರಥನೆಂಬ ಗಂಧರ್ವನು ತನ್ನ ವನಿತೆಯರೊಂದಿಗೆ “ಜಲಕ್ರೀಡೆ”ಯಲ್ಲಿ ನಿರತನಾಗಿದ್ದುದು ಗೋಚರಿಸಿತು. ವಿಚಿತ್ರವಾದ ಕ್ರೀಡಾ ದರ್ಶನದಿಂದ ರೇಣುಕಾ ದೇವಿಗೆ ಮನೋ ವಿಕಾರವಾಯಿತು. ತಡವಾಗಿ ಆಶ್ರಮಕ್ಕೆ ಬಂದ ರೇಣುಕೆಯನ್ನು ಸಿಟ್ಟಿನಿಂದ ನೋಡಲು ಆಕೆಯ ಮನಸ್ಸು ಮಲೀನವಾದದ್ದು ಜಮದಗ್ನಿಯ ಜ್ಞಾನದೃಷ್ಟಿಗೆ ತೋರಿತು. ಋಷಿಯು ಮತ್ತಷ್ಟು ಕುಪಿತನಾಗಿ ಅನುಕ್ರಮವಾಗಿ ತನ್ನ ಪುತ್ರರನ್ನು ಕರೆದು ತಾಯಿಯ ಶಿರಚ್ಚೇಧನ ಮಾಡುವಂತೆ ಆಜ್ಞಾಪಿಸಿದನು. ಧರ್ಮ ಸಂಕಟದಲ್ಲಿ ಬಿದ್ದ ಮೊದಲಿನ ನಾಲ್ಕು ಮಂದಿ ಸಹೋದರರಾದ ಯರ್ಮಶ್ವಾಸ, ಸುಕ್ಷೇಣ, ವಸು ಮತ್ತು ವಿಶ್ವಾವಸು ತಾಯಿಯ ಶಿರಚ್ಚೇಧನವನ್ನು ಮಾಡುವ ಪಾಪಕೃತ್ಯಕ್ಕೆ ಅಂಜಿ ಮಾತನಾಡದೇ ಸುಮ್ಮನೇ ನಿಂತರು. ಜಮದಗ್ನಿಯು ಅವರ ಉದ್ಧಟತನಕ್ಕೆ ಶಪಿಸಿ, ಪರಶುರಾಮನಿಗೆ ಶಿರಚ್ಚೇಧನ ಮಾಡುವಂತೆ ಆಜ್ಞೆಯನ್ನು ನೀಡಿದನು. ತಂದೆಯ ಆಜ್ಞೆಯನ್ನು ಪರಿಪಾಲಿಸುವುದು ತನ್ನ ಧರ್ಮವೆಂಬುದನ್ನು ಮನಗಂಡ ಪರಶುರಾಮ ತಕ್ಷಣ ಕುಠಾರದಿಂದ ತಾಯಿಯ ರುಂಡವನ್ನು ಕತ್ತರಿಸಿ ಹಾಕಿದನು. ಸುಪ್ರಸನ್ನನಾದ ಜಮದಗ್ನಿಯು ಮಗನ ವಿಧೇಯತೆಗೆ ಮನ ಸೋತು ಬೇಕಾದ ವರವನ್ನು ಪಡೆಯುವಂತೆ ಬೇಡಬಹುದೆಂದನು. ಈ ಮಾತಿಗೆ ಹರ್ಷಗೊಂಡ ಪರಶುರಾಮನು ತನ್ನ ತಾಯಿಯನ್ನು ಪುನಃ ಬದುಕಿಸಬೇಕೆಂದು ತಂದೆಯನ್ನು ಪ್ರಾರ್ಥಿಸಿಕೊಂಡನು. ಮಾತ್ರವಲ್ಲದೇ ಮಾತೃ ಹತ್ಯಾ ದೋಷ ತನಗೆ ಒದಗಬಾರದು, ತನ್ನ ಅಣ್ಣಂದಿರೆಲ್ಲಾ ಮೊದಲಿನಂತೆ ಸಚೇತನರಾಗಲು ಅನುಗ್ರಹಿಸಬೇಕೆಂದು ಬೇಡಿಕೊಂಡನು. ಮಹಾ ತಪಸ್ವಿಯಾದ ಜಮದಗ್ನಿಯು ಎಲ್ಲಾ ವರಗಳನ್ನು ಪರಶುರಾಮನಿಗೆ ದಯಪಾಲಿಸಿದನು. ರೇಣುಕಾ ದೇವಿಯು ನಿದ್ರೆಯಿಂದ ಎದ್ದಂತೆ ಸಜೀವಿತಳಾಗಿ ನಿಂತಳು. ಅಗ್ರಜರೆಲ್ಲರೂ ಉದ್ಧೃತರಾದರು.

ಪರಶುರಾಮನು ರೇಣುಕೆಯನ್ನು ಸಂಹರಿಸಿದ್ದು ಹುಲಿಗಿ ಪ್ರದೇಶದಲ್ಲಿ ಅಲ್ಲಿಯೇ ಪಾದದಿಂದ ಕಂಠ ಪರ್ಯಂತ ಇದ್ದ ದೇಹವು ಬಿದ್ದು ಹೋಗಿ, ಶಿರಸ್ಸು ಪ್ರಹಾರ ವೇಗದಿಂದ “ಹೊಸೂರು” ಪ್ರದೇಶದಲ್ಲಿ ಪತಿತವಾಯಿತು. ಈ ಎರಡೂ ಯೋಜಿತವಾಗಿ ರೇಣುಕಾ ದೇವಿಯು ಬದುಕಿನ ಮೇಲೆ ಶ್ರೀ ಪರಶುರಾಮನು ತನ್ನ ಕರಕಮಲದಿಂದಲೇ ಒಂದು ಗೋಳಾಕಾರವಾದ ಶಿಲೆಯನ್ನು ತನ್ನ ತಾಯಿಯ ದಂಡ ಬಿದ್ದಲ್ಲಿಯೂ ಮತ್ತೊಂದನ್ನು ರುಂಡ ಬಿದ್ದಲ್ಲಿಯೂ ಇರಿಸಿ ತನ್ನ ಪರಶುವಿನಿಂದ ಭಿನ್ನವಾಗಿ ದುರ್ಗಾರೂಪವನ್ನು ತಾಳಿದ ತನ್ನ ಅಂಶದಿಂದಲೂ, ಸಾಕ್ಷಾತ್ ಲಕ್ಷ್ಮೀ ದೇವಿಯ ಆವೇಶದಿಂದಲೂ ಯುಕ್ತರಾಗುವಂತೆ ಮಾಡಿದನು. ಭಗವಂತನ ಇಚ್ಛೆಯಿಂದ ಎರಡು ಕಡೆಗಳಲ್ಲಿಯೂ ದುರ್ಗಾರೂಪದಿಂದ ದೇವಿಯು ಪ್ರತ್ಯಕ್ಷಳಾದಳು.

“ತಾಯಿ ನೀನು ಕಲಿಯುಗ ಇರುವ ತನಕ ಇಲ್ಲೇ ಇದ್ದು ದುಷ್ಟರನ್ನು ಶಿಕ್ಷಿಸಿ, ಶಿಷ್ಟರನ್ನು ಪರಿಪಾಲಿಸುತ್ತಾ ಈ ಭಾರ್ಗವ ಕ್ಷೇತ್ರಕ್ಕೆ ಸ್ಮಾರಕಳಾಗಿರು” ಎಂದು ವರಗಳನ್ನಿತ್ತು ಪರಶುರಾಮನು ಮಹೇಂದ್ರ ಪರ್ವತವನ್ನು ಸೇರಲು ಹೊರಟು ಹೋದನು.

ದೇವಿಯು ಶಾಸ್ತ್ರದಲ್ಲಿ ಉಕ್ತವಾದಂತೆ ತನ್ನ ರೂಪ ದ್ವಂದ್ವಗಳಿಂದ ಶೋಭಿಸುತ್ತಿರುವಳು. “ತೀಕ್ಷ್ಣ ರೂಪದಿಂದ ಹುಲಿಗಿಯಲ್ಲಿಯೂ ಸೌಮ್ಯ ರೂಪದಿಂದ ಹೊಸೂರಿನಲ್ಲಿಯೂ” ವಾಸಮಾಡಿಕೊಂಡಿದ್ದಾಳೆ. ಇಲ್ಲಿ ದೇವ ಕನ್ನಿಕೆಯರು ನಿತ್ಯ ದೇವಿಯನ್ನು ಆರಾಧನೆ ಮಾಡುತ್ತಾ ಇದ್ದು, ಬ್ರಹ್ಮೀ ಮುಹೂರ್ತದಲ್ಲಿ ತೆರಳುವರು. ಈ ಕ್ಷೇತ್ರದಲ್ಲಿ ಸ್ನಾನ, ದಾನ, ಜಪ – ದೇವತಾರಾಧನೆಗಳು ಕೋಟಿ ಗುಣಿತವಾದ ಫಲದಾಯಕವಾಗುವುವು. “ಭಜಕಜನ ಕಲ್ಪತರುವೆನಿಪ” ದೇವಿಯು ಸರ್ವಾಭೀಷ್ಟಗಳನ್ನೀಯುವಳು, ಎಂಬ ಪೌರಾಣಿಕ ಹಿನ್ನೆಲೆ ಈ ಪ್ರದೇಶದಲ್ಲಿ ದಟ್ಟವಾಗಿ ಹಬ್ಬಿದೆ. ಹೊಸೂರು ಗ್ರಾಮದ ಹೊಸೂರಮ್ಮ, ಹುಲಿಗಿ ಕ್ಷೇತ್ರ (ಗ್ರಾಮ)ದ ಹುಲಿಗೆಮ್ಮ ಮತ್ತು ಸೌದತ್ತಿಯ ಎಲ್ಲಮ್ಮ ಈ ಮೂರು ದೇವತೆಗಳು ಒಂದೇ. ಭಕ್ತರನ್ನು ಕಾಪಾಡಲು ಬೇರೆ ಬೇರೆ ಪುಣ್ಯಕ್ಷೇತ್ರಗಳಲ್ಲಿ ನೆಲೆಸಿದ್ದಾರೆ ಎಂಬುದು ಜನಪದರ ಅಭಿಮತವಾಗಿದೆ.

ಚಾರಿತ್ರಿಕವಾಗಿ ಹೊಸೂರಮ್ಮ ದೇವಾಲಯ

ಹೊಸೂರಮ್ಮ ದೇವಸ್ಥಾನ ಒಂದು ಚಾರಿತ್ರಿಕ ಮಹತ್ವವುಳ್ಳ ಪುಣ್ಯ ಕ್ಷೇತ್ರ. ಕೆಲವು ವಿಶಿಷ್ಟ ಸಂಪ್ರದಾಯಗಳನ್ನು ಅನುಷ್ಟಾನದಲ್ಲಿರಿಸಿಕೊಂಡ ಪವಿತ್ರ ಸ್ಥಳ ಕೂಡ. ಹೊಸೂರಮ್ಮ ದೇವಾಲಯದ ನಿರ್ಮಾಣ ಪಾಳೆಯಗಾರರ ಕಾಲಕ್ಕೆ ಅನ್ವಯಿಸುವಂಥದ್ದು. ಸುಮಾರು ಕ್ರಿ.ಶ. ೧೬ನೇಯ ಶತಮಾನದಲ್ಲಿ ಇದರ ನಿರ್ಮಾಣವಾಗಿದೆ. ಹೊಸೂರಮ್ಮ ದೇವಸ್ಥಾನದ ವಾಸ್ತುಶಿಲ್ಪ ಈ ಕೆಳಗಿನಂತಿದೆ.

ಎಂಟು ಅಡಿ ಚತುರಸ್ರವಾದ ಗರ್ಭಗುಡಿ, ಅದರ ಮೇಲೆ ಶಿಲೆಯ ಚೌಕಟ್ಟಿದೆ. ಗರ್ಭಗುಡಿಯ ಮಧ್ಯಭಾಗದಲ್ಲಿ ದೇವಿಯ ಮೂಲ ಬಿಂಬವಿದೆ. ಗರ್ಭಗುಡಿಯ ಎದುರು ಅಗಲವಾದ ಸುಖನಾಸಿಯಿದೆ. ಎದುರು ಸುಂದರವಾದ ನವರಂಗವಿದೆ. ಇದರಲ್ಲಿ ನಾಲ್ಕು ಕಗ್ಗಲ್ಲಿನ ಸ್ಥಂಭಗಳಿವೆ. ಇವು ಸುಮಾರು ಕ್ರಿ.ಶ. ೧೬ನೇಯ ಶತಮಾನದ ಕಂಬಗಳು ಎಂಬುವುದು ಶತಸಿದ್ಧ. ನವರಂಗದ ಬಲಭಾಗದಲ್ಲಿ ಒಂದು ಗಣೇಶ ಬಿಂಬವೂ, ಎರಡು ಪಂಚಲೋಹದ ಮೂರ್ತಿಗಳೂ ಇವೆ. ಲೋಹದ ಮೂರ್ತಿಗಳಲ್ಲಿ ಒಂದು ಪರಶುರಾಮನ ವಿಗ್ರಹ ಇನ್ನೊಂದು ದುರ್ಗಾದೇವಿಯ ವಿಗ್ರಹವಾಗಿದೆ. ಪರಶುರಾಮನ ವಿಗ್ರಹವು ಸುಮಾರು ಹದಿನೈದು ಅಡಿ ಎತ್ತರವಾಗಿದ್ದು, ಎಡ ಕೈಯಲ್ಲಿ ಬಿಲ್ಲು, ಬಲಗೈಯಲ್ಲಿ ಕುಠಾರವನ್ನು ಧರಿಸಿ ಸ್ವಲ್ಪ ಅಭಂಗದಲ್ಲಿ ನಿಂತ ನಿರ್ದೋಷವನ್ನೊಳಗೊಂಡಿದೆ. ಪರಶುರಾಮನ ಮೂರ್ತಿಗಳು ವಿರಳವಾಗಿ ದೊರಕಬಹುದಾದರೂ ಈ ಮೂರ್ತಿ ಈ ಕ್ಷೇತ್ರದ ಹೆಗ್ಗಳಿಕೆಗೆ ಕಾರಣವಾಗಿದೆ. ಪಂಚಲೋಹದ ದುರ್ಗಾ ದೇವಿಯ ವಿಗ್ರಹವು ಸುಮಾರು ೮ ಅಡಿ ಎತ್ತರವಾಗಿದೆ. ಆ ದೇವಿಯ ಮೇಲಿನ ಕೈಗಳಲ್ಲಿ ತ್ರಿಶೂಲ ಮತ್ತು ಡಮರು ಹಾಗೂ ಕೆಳಗಿನ ಕೈಗಳಲ್ಲಿ ಖಡ್ಗ ಮತ್ತು ಪಾನಪಾತ್ರೆ ಆಕೆಯ ಆಯುಧಗಳಾಗಿವೆ. ಇದು ಶ್ರೀಮಾತೆ ದುರ್ಗಾದೇವಿಯ ತಾಮಸರೋಪವೆನ್ನಬಹುದಾಗಿದೆ. ಒಂದು ದೃಷ್ಟಿಯಿಂದ ಪರಿಶೀಲಿಸಿದಾಗ ಚಾಮುಂಡಿ ಎಂಬುದಾಗಿಯೂ ಕರೆಯಬಹುದಾಗಿದೆ.

ನವರಂಗದಿಂದ ಹೊರಬಂದಾಗ ಒಂದು ಮಂಟಪವಿದೆ. ಈ ಮಂಟಪದಲ್ಲಿ ದ್ವಾರದ ಇಕ್ಕಡೆಗಳಲ್ಲಿ ಸುಮಾರು ಆರು ಅಡಿ ಎತ್ತರದ ದ್ವಾರಪಾಲಕ ಶಿಲ್ಪಗಳಿವೆ. ಇವು ಕೂಡ ಕಲ್ಲಿನಲ್ಲಿ ಕೆತ್ತಲ್ಪಟ್ಟಿದ್ದು ಸುಮಾರು ೧೬ನೇಯ ಶತಮಾನದಲ್ಲಿ ನಿರ್ಮಾಣವಾದ ಶಿಲ್ಪಗಳಾಗಿವೆ. ಮಂಟಪದ ಎದುರು ಭಾಗದಲ್ಲಿ ಎರಡು ಶಿಲಾಸ್ಥಂಭಗಳಿಂದ ಆವರಿಸಲ್ಪಟ್ಟ ಕಲ್ಲು ಚಪ್ಪರವಿದೆ. ಇದು ಸ್ಥಾನಿಕರಿಂದ ನಿರ್ಮಾಣವಾದದ್ದು. ಸುಮಾರು ಕ್ರಿ.ಶ. ೧೬ನೇಯ ಶತಮಾನದಲ್ಲಾಯಿತೆಂದು ಒಂದು ಶಿಲಾ ಸ್ಥಂಭದಲ್ಲಿರುವ ಶಾಸನದಿಂದ ತಿಳಿದುಬರುತ್ತದೆ. ಗರ್ಭಗುಡಿಯ ಮೇಲೆ ಕಡು ಶರ್ಕರ ಪಾಕದಿಂದ ಮಾಡಿದ ಗೋಪುರವಿದೆ. ಗರ್ಭಗೃಹ, ಸುಖನಾಸಿ, ನವರಂಗ ಮತ್ತು ಮಂಟಪಗಳನ್ನೊಳಗೊಂಡ ಶಿಲೆಯ ಗೋಡೆಗಳಿದ್ದು ಈ ಗೋಡೆಗಳ ಮೇಲ್ಭಾಗದಲ್ಲಿ ಕಡು ಶರ್ಕರ ಪಾಕದಿಂದ ಮಾಡಿದ ಸಿಂಹ ಮತ್ತು ಕನ್ನಿಕಾ ಶಿಲ್ಪಗಳಿವೆ. ಇವುಗಳಲ್ಲಿ ಹೆಚ್ಚಿನವು ಭಿನ್ನವಾಗಿವೆ.

ಹೊಸೂರಮ್ಮ ದೇವಸ್ಥಾನವು ಉತ್ತರಾಭಿಮುಖವಾಗಿದ್ದು ಈ ದೇವಸ್ಥಾನದ ಸುತ್ತಲೂ ಕೆಲವು ಉಪಸ್ಥಾನ ದೇವತೆಗಳಿವೆ. ಈಶಾನ್ಯ ಭಾಗದಲ್ಲಿ ಮೈಲಾರಲಿಂಗ ಸ್ವಾಮಿ ಗುಡಿಯಿದೆ. ಈ ಗುಡಿಯಲ್ಲಿ ವಿನಾಯಕನ ವಿಗ್ರಹ ಮತ್ತು ದುರ್ಗೆಯ ಶಿಲಾಮೂರ್ತಿ ಇದೆ. ದುರ್ಗಾ ದೇವಿಯ ಶಿಲಾಮೂರ್ತಿ ಸುಮಾರು ಕ್ರಿ.ಶ. ೧೪ನೇಯ ಶತಮಾನದಷ್ಟು ಪ್ರಾಚೀನತೆಯನ್ನು ಹೊಂದಿದೆ. ಇದು ನವರಂಗದಲ್ಲಿರುವ ಪಂಚಲೋಹದ ದುರ್ಗಾದೇವಿಯ ರೂಪವನ್ನೇ ಹೋಲುತ್ತದೆ. ದುರ್ಗಾದೇವಿಯ ಕೈಗಳಲ್ಲಿ ತ್ರಿಶೂಲ, ಖಡ್ಗ, ಪಾನಪಾತ್ರೆ ಮತ್ತು ಡಮರುಗಳಿವೆ. ಹೊಸೂರಮ್ಮ ದೇವಾಲಯದ ಆಗ್ನೇಯ ದಿಕ್ಕಿನಲ್ಲಿ “ಮಾತಂಗೇಶ್ವರ” ದೇವಾಲಯವಿದೆ. ಇದು ಶಿವ ಸಾನಿಧ್ಯವುಳ್ಳ ಸ್ಥಳವಾಗಿದೆ. ದಕ್ಷಿಣ ಭಾಗದಲ್ಲಿ “ಜಮದಗ್ನಿ ಋಷಿ”ಯ ದೇವಾಲಯವಿದೆ. ಇದರಲ್ಲಿ ಶಿವಲಿಂಗ ಮತ್ತು ಅಕ್ಕ ಮಾಲೆಗಳನ್ನು ಒಂದು ಮೂರ್ತಿಯೂ, ದುರ್ಗೆಯ ಒಂದು ಬಿಂಬವೂ ಇದೆ. ಅತ್ಯಾಕರ್ಷಕ ಸುಂದರವಾಗಿವೆ. ಇವೆರಡೂ ಶಿಲಾಮೂರ್ತಿಗಳಾಗಿವೆ. ಇವುಗಳೆದುರು ಶಿವಲಿಂಗವು ಸ್ಥಾಪಿತವಾಗಿದೆ. ದುರ್ಗೆಯ ಎರಡು ಅಡಿ ಎತ್ತರದ ಶಿಲ್ಪದ ಲಕ್ಷಣಗಳು ಮೈಲಾರಲಿಂಗ ಸ್ವಾಮಿ ಗುಡಿಯ ದುರ್ಗಾ ರೂಪವನ್ನು ಹೋಲುತ್ತದೆ. ನೈರುತ್ಯದಲ್ಲಿರುವ ಪರಶುರಾಮ ದೇವಾಲಯದಲ್ಲಿ “ಪಾದುಕಾ” ಮತ್ತು ಅಷ್ಟಾದಿಕ್ಪಾಲಕರಲ್ಲಿ ಒಂದಾದ “ಸೋಮ” ನ ಮೂರ್ತಿಯಿದೆ ಪಶ್ಚಿಮ ದಿಕ್ಕಿನಲ್ಲಿ “ತಾಯಿ ಮುದ್ದಮ್ಮ” ದೇವತೆಯ ದೇವಾಲಯವಿದೆ. ಈ ದೇವತೆಯು ಹೊಸೂರಮ್ಮ ದೇವಿಯ ತಾಯಿ ಎಂಬ ಕಲ್ಪನೆ ಹೊಸಪೇಟೆ ಭಾಗದ ಜನಪದರಲ್ಲಿದೆ. ಹತ್ತು ಅಡಿ ಎತ್ತರದ ನಾಗ ದೇವತೆಯ ಸುರುಳಿ ಸುತ್ತಿ ನಿಂತ ಶಿಲ್ಪವಿದೆ. ನಾಗ ದೇವತೆಯ ಮಧ್ಯೆ ಇರುವ ಶಿಲ್ಪ ಶಿವನ ಅಥವಾ ಸ್ಕಂದನದ್ದಿರಬಹುದು. ಪ್ರಾಚೀನ ಸಂಸ್ಕೃತಿಯ ದೃಷ್ಟಿಯಿಂದ ಅವಲೋಕಿಸಿದಾಗ ಇದು ಸ್ಕಂದ (ಸುಭ್ರಹ್ಮಣ್ಯ)ನೆಂದು ಹೇಳಬಹುದು. ನಾಗನ ಹಾಗೂ ಏಳು ಹೆಡೆಯ ಈ ಕಲ್ಲಿನ ಶೇಷನ ಶಿಲ್ಪವು ಮಹತ್ವಪೂರ್ಣವಾದುದೆಂದು ಹೇಳಬಹುದಾಗಿದೆ. ಪಶ್ಚಿಮ ಭಾಗದಲ್ಲಿ ಸುಂದರವಾದ “ಆಂಜನೇಯ” ದೇವರ ದೇವಾಲಯವಿದೆ. ಪಶ್ಚಿಮ ಭಾಗದಿಂದ ದೇವಾಲಯಕ್ಕೆ ಹೋಗಲು ಮಹಾದ್ವಾರಗಳಿವೆ. ಈ ದೇವಾಲಯದ ಪ್ರದಕ್ಷಿಣೆ ಪಥವು ಮೂರು ಅಡಿ ತಗ್ಗಿನಲ್ಲಿತ್ತೆಂದೂ, ಆನಂತರ ಅದು ಕಲ್ಲು ಚಪ್ಪರಕ್ಕೆ ಸಮ ಪಾತಾಳಿಯನ್ನಾಗಿ ಮಾಡಲಾಗಿದೆ. ಹೊಸೂರಮ್ಮ ದೇವಾಲಯವು ಹಾಗೂ ಆಕೆಯ ಸುತ್ತಲೂ ಇರುವ ಚಿಕ್ಕ ಚಿಕ್ಕ ದೇವಸ್ಥಾನಗಳು ಒಂದು ಸುಂದರವಾದ ಪುಣ್ಯ ಕ್ಷೇತ್ರವೆಂಬ ಭಾವನೆ ಭಕ್ತರಲ್ಲಿ ಮೂಡಲಿದೆ.

ಹೊಸೂರಮ್ಮನನ್ನು ಕಂಡ ವ್ಯಾಸರಾಯರು

ಹೊಸೂರಮ್ಮ ದೇವಾಲಯದ ಸಾನ್ನಿಧ್ಯಕ್ಕೆ ಸಂಬಂಧಿಸಿದ ಒಂದು ಘಟನೆ ಪ್ರಚಲಿತದಲ್ಲಿದೆ. ಒಮ್ಮೆ ಶ್ರೀ ವ್ಯಾಸರಾಯರು ಹೊಸೂರಿಗೆ ದಿಗ್ವಿಜಯ ಮಾಡಿ ತಮ್ಮ ಶಿಷ್ಯನ ಮನೆಯಲ್ಲಿ ಉಳಿದುಕೊಂಡರು. ಮರುದಿನ ಹೊಸೂರಿನ ಪ್ರಮುಖರು ಬಂದು ಶ್ರೀ ಹೊಸೂರಮ್ಮನ ಗುಡಿಯಲ್ಲಿಯೇ ದೇವತಾರ್ಚನೆ ಮಾಡಬೇಕೆಂದು ವಿನಂತಿಸಿಕೊಂಡರು. ಶ್ರೀ ಸ್ವಾಮಿಗಳು ಔದಾಸೀನ್ಯದಿಂದ ಹೊಸೂರಿನ ಪ್ರಮುಖರ ಬೇಡಿಕೆಯನ್ನು ಕಡೆಗಣಿಸಿದರು. ಶಿಷ್ಯರೊಂದಿಗೆ ಸ್ವಾಮಿಗಳು ಸ್ನಾನಕ್ಕೆ ತುಂಗಭದ್ರಾ ನದಿ ಕಡೆ ಹೊರಟರು. ಸ್ನಾನಾದಿ ಕಾರ್ಯಗಳನ್ನು ಮುಗಿಸಿದರು. ಸ್ನಾನ ಮಾಡಿ ಹಿಂತಿರುಗುವಾಗ ಶ್ರೀ ಪಾದರಿಗೆ ಎರಡೂ ಕಣ್ಣುಗಳು ಮಸುಕಾಗಿ ಕಾಣದಾದವು. ಮೊದಲೇ ಜ್ಞಾನಿಗಳಾದ ಶ್ರೀ ವ್ಯಾಸತೀರ್ಥರು ಇದು ದೇವಿಯ ಪ್ರಕೋಪದಿಂದ ಆದ ಘಟನೆಯೆಂದು ಮನಗಂಡು ಮರುದಿನ ದೇವಿಯ ದೇವಾಲಯದಲ್ಲಿಯೇ ತನ್ನ ಆರಾಧ್ಯ ದೈವವಾದ ಶ್ರೀ ವೇಣುಗೋಪಾಲನ ಪೂಜೆಯನ್ನು ಮಾಡುವುದಾಗಿ ದೇವಿಯ ಮೊರೆ ಹೋದರು. ಯಾವಾಗ ಶ್ರೀ ಹೊಸೂರಮ್ಮ ದೇವಿಯ ಮೊರೆ ಹೋದರೋ ಆಗ ಶ್ರೀ ಪಾದಂಗಳವರ ಕಣ್ಣುಗಳು ಮೊದಲಿನಂತೆಯೇ ಶಕ್ತಿಯುತವಾದವು. ಕಣ್ಣುಗಳು ಸ್ಪಷ್ಟವಾಗಿ ಕಾಣಲಾರಂಭಿಸಿದವು.

ತಾವು ಅಂದುಕೊಂಡ ಸಂಕಲ್ಪದಂತೆ ಶ್ರೀಪಾದರು ಮರುದಿನ ತಮ್ಮ ಪೂಜಾದಿ ವಿನಿಯೋಗ ಕಾರ್ಯಗಳನ್ನು ಹೊಸೂರಮ್ಮ ದೇವಾಲಯದಲ್ಲಿ ಮಾಡಲು ಸನ್ನದ್ಧರಾದರು.

ಆ ದಿನ ರಾತ್ರಿ ಶ್ರೀ ಪಾದರಾಜರಿಗೆ ದೇವಿಯು ಸ್ವಪ್ನದಲ್ಲಿ ಕಾಣಿಸಿಕೊಂಡು ರುಕ್ಮಿಣಿ, ಸತ್ಯಭಾಮಾ ಸಹಿತ ಶ್ರೀ ಕೃಷ್ಣ ಕೇಶವರಾರ್ಚನೆಯಾದ ನಂತರ ತಮ್ಮಲ್ಲಿರುವ ಎರಡು ಸಾಲಿಗ್ರಾಮಗಳನ್ನು ತನಗೆ ಕಣ್ಣಾಗಿರಿಸಿಕೊಳ್ಳಲು ಒಪ್ಪಿಸಬೇಕೆಂದೂ, ಸ್ವತಃ ತಾನು ಬಂದು ಶ್ರೀಪಾದರ ಕೈಗಳಿಂದ ಹಿಂಬದಿಯಲ್ಲಿ ಅವುಗಳನ್ನು ಸ್ವೀಕರಿಸುವೆನೆಂದೂ ಹೇಳಿ ಅದೃಶ್ಯಳಾದಳು. ಶ್ರೀಪಾದರಿಗೆ ಆಗ ಆದ ಆನಂದದಲ್ಲಿ ಮಿತಿಯೇ ಇರಲಿಲ್ಲ. ಮರುದಿನ ಅಂತೆಯೇ ಅವರು ಶ್ರೀ ಕೃಷ್ಣನ ಪೂಜೆಯಾದ ನಂತರ ಶ್ರೀಪಾದರು ತಮ್ಮ ಎರಡೂ ಕೈಗಳನ್ನು ಸಾಲಿಗ್ರಾಮಗಳೊಂದಿಗೆ ಹಿಂದೆ ಚಾಚಿದಾಗ, ದೇವಿಯು ಕಾಲ ನೃತ್ಯ ಸಪ್ಪಳದೊಂದಿಗೆ ಅವುಗಳನ್ನು ಸ್ವೀಕರಿಸಿ ಅದೃಶ್ಯಳಾದಳು. ಈ ಸಾಲಿಗ್ರಾಮಗಳೇ ಇಂದಿಗೂ ಹೊಸೂರಮ್ಮ ದೇವಿ ಮೂರ್ತಿಯ ಎರಡು ಕಣ್ಣುಗಳಾಗಿ ಪೂಜಿಸಲ್ಪಡುತ್ತಿವೆ. ವರ್ಷದಲ್ಲಿ ಎರಡು ದಿನಗಳ ಪವಾಡಗಳನ್ನು ವೀರಶೈವ ಕುಟುಂಬ ಮಾಡುವಾಗ ಈ ಸಾಲಿಗ್ರಾಮಗಳನ್ನು ತೆಗೆದುಕೊಂಡು ನದಿಗೆ ಹೋಗಿ ತೊಳೆದುಕೊಂಡು ಬರುವ ವಿಶಿಷ್ಟ ಸಂಪ್ರದಾಯ ಇಂದಿಗೂ ಇದೆ. ಸಾಲಿಗ್ರಾಮಗಳಲ್ಲಿ ಒಂದು ವಾಸುದೇವ ಸಾಲಿಗ್ರಾಮ, ಇನ್ನೊಂದು ಲಕ್ಷ್ಮೀ ನರಸಿಂಹ ಸಾಲಿಗ್ರಾಮವಾಗಿದೆ. ಈ ಕತೆಯ ಸತ್ಯಾಂಶವನ್ನು ಈಗ ಪ್ರಶ್ನಿಸುವುದು ಅನಗತ್ಯ. ನಮ್ಮ ಧರ್ಮ ಚಕ್ಷುಗಳಿಗೆ ಕಾಣದ, ಮಿತಿಯುಳ್ಳ ತಿಳುವಳಿಕೆಯನ್ನು ಮೀರುವ ಕೆಲವು ಘಟನೆಗಳು ನಡೆಯುವುದುಂಟು.

ಈ ಘಟನೆಯಿಂದ ಒಂದು ಧಾರ್ಮಿಕ ವಿಷಯವನ್ನು ಊಹಿಸಬಹುದಾಗಿದೆ. ಶುದ್ಧ ಶಾಕ್ತ ಕ್ಷೇತ್ರವಾಗಿದ್ದ ಹೊಸೂರಮ್ಮ ದೇವಾಲಯವು ವೈಷ್ಣವ ಸಂಪ್ರದಾಯದ ಚೌಕಟ್ಟಿಗೆ ಸೇರಿಸಲ್ಪಟ್ಟಿತ್ತೆಂಬುದು. ಪರಶುರಾಮನಿಗೆ ಸಂಬಂಧ ಪಟ್ಟ ಪುರಾಣ ಕತೆಯೂ, ಈ ಘಟನೆಯ ಅನಂತರ ಪ್ರಚಾರಕ್ಕೆ ಬಂದಿರಬಹುದು. ಈ ದೇವತೆಯ ಬಗ್ಗೆ ನಮಗೆ ಒದಗುವ ದೃಷ್ಟಾಂತ, ಜನಪದ ಕತೆಗಳು, ಐತಿಹ್ಯಗಳು, ಸೋಬಾನ ಪದಗಳು ಇಂದಿಗೂ ಪ್ರಚಲಿತದಲ್ಲಿರುವುದರಿಂದ ಬಯಲು ಸೀಮೆಯಲ್ಲಿ ಈ ದೇವಸ್ಥಾನ ನಿರ್ಮಾಣವಾಗಿರುವುದರಿಂದ ಪ್ರಕೃತಿ ಸೌಂದರ್ಯ ಈ ದೇವಸ್ಥಾನದ ಹೆಗ್ಗಳಿಕೆಗೆ ಕಾರಣವಾಗಿರುವುದನ್ನು ನೋಡಿದರೆ ಇದೊಂದು ಮಹತ್ವವುಳ್ಳ ಪುಣ್ಯ ಕ್ಷೇತ್ರವಾಗಿ ಹೊರ ಹೊಮ್ಮಿದೆ ಎಂಬುದರಲ್ಲಿ ಎರಡು ಮಾತಿಲ್ಲ.

ಹೊಸೂರಿನ ಕೋಟೆಗಾಗಿ ನಡೆದ ಕದನ

ಹೊಸೂರಿನ ಹೊಸೂರಮ್ಮ ದೇವಸ್ಥಾನ ವಿಜಯನಗರ ಅರಸರ ಸಾಮ್ರಾಜ್ಯಕ್ಕೆ ಸೇರಿದ್ದಾಗಿದೆ. ಆಗಿನ ಕಾಲದಲ್ಲಿ ವಿಜಯನಗರದ ಅರಸರು ಈ ದೇವಾಲಯಕ್ಕೆ ಅಷ್ಟೇನೂ ಮಹತ್ವ ನೀಡಿರಲಿಲ್ಲ. ಅವರ ಅವಧಿಯಲ್ಲಿ ಕೇವಲ ಗರ್ಭಗುಡಿಯೊಂದು ಮಾತ್ರ ನಿರ್ಮಾಣವಾಗಿತ್ತು. ದೇವಾಲಯಕ್ಕೆ ಸಂಬಂಧಿಸಿದಂತೆ ಯಾವ ಆಸ್ತಿಯಾಗಲಿ, ವರಮಾನವಾಗಲಿ ಇರಲಿಲ್ಲ.

ವಿಜಯನಗರ ಸಾಮ್ರಾಜ್ಯದ ಪತನದ ನಂತರ ಅದಕ್ಕೆ ಅಧೀನರಾದ ಅನೇಕ ಪಾಳೆಯಗಾರರು ಸ್ವತಂತ್ರರಾದರು. ಹೀಗೆ ಸ್ವತಂತ್ರರಾದವರಲ್ಲಿ ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರ ನಾಯಕನೂ ಒಬ್ಬನು. “ಹೊಸೂರು ಕ್ಷೇತ್ರ”ವು (ಕೋಟೆ) ಅವನ ಅಧೀನದಲ್ಲಿತ್ತು. ಕೆಲವು ವರ್ಷಗಳು ಗತಿಸಿದ ನಂತರ ಹೊಸೂರು ಕೋಟೆಯ ಪಾಳೆಯಗಾರ ತಾನು ಸ್ವತಂತ್ರನೆಂದು ಘೋಷಿಸಿಕೊಂಡನು. ಕುಪಿತಗೊಂಡ ಸೋಮಶೇಖರ ನಾಯಕನು ಹೊಸೂರ ಪಾಳೆಯಗಾರನ ಮೇಲೆ ಯುದ್ಧ ಘೋಷಿಸಿದನು. ಅನೇಕ ದಿನಗಳವರೆಗೆ ನಡೆದ ಘೋರ ಯುದ್ಧದಲ್ಲಿ “ಹೊಸೂರು ಕೋಟೆ” ನಾಶವಾಯಿತು. ಹೊಸೂರಿನ ಬಹು ಸಂಖ್ಯಾತ ಸೈನಿಕರು ಯುದ್ಧದಲ್ಲಿ ಮಡಿದರು. ಆದರೂ ಸೋಮಶೇಖರ ನಾಯಕನಿಗೆ ಕೋಟೆಯನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೈನಿಕರು ಜೋಗಮ್ಮನ ವೇಷದಲ್ಲಿ “ಯಾಕಲದೇ ಜಗಾಕಲದೇ ಜೋಗ ಉಧೋ ಉಧೋ ಉಧೋ” ಎಂದು ಘೋಷಣೆ ಹಾಕುತ್ತ ಸಂಚರಿಸುತ್ತಿದ್ದರು. ಹಿಂದೂ ಸಾಮ್ರಾಜ್ಯ ಸಂಸ್ಥಾಪಕನಾದ ಛತ್ರಪತಿ ಶಿವಾಜಿಯ ಸೈನಿಕರು “ಹರ ಹರ ಮಹಾದೇವಾ” ಎಂದು ಘೋಷಣೆಯಿಂದ ಸ್ಫೂರ್ತಿ ಉತ್ಸಾಹವನ್ನು ಪಡೆಯುತ್ತಿದ್ದಂತೆ ಹೊಸೂರಿನ ಕೋಟೆಯ ಸೈನಿಕರು ಮೇಲಿನ ಘೋಷಣೆಯಿಂದ ಸ್ಫೂರ್ತಿಯನ್ನು ಪಡೆದು ನಾಯಕನೊಂದಿಗೆ ಧೈರ್ಯೋತ್ಸಾಹಗಳಿಂದ ಸೆಣಸುತ್ತಿದ್ದರು.

ಈ ಮಧ್ಯೆ ಒಂದು ಘಟನೆ ನಡೆಯಿತು. ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರ ನಾಯಕನ ಕನಸ್ಸಿನಲ್ಲಿ (ಸ್ವಪ್ನ) ಹೊಸೂರಿನ ಗ್ರಾಮ ದೇವತೆ ಶ್ರೀ ಹೊಸೂರಮ್ಮ ದೇವಿಯು ಹೊಸೂರು ಕೋಟೆಯನ್ನು ರಕ್ಷಿಸುವಂತೆಯೂ, ಅದು ಅಜೇಯವೆಂಬಂತೆಯೂ ಕಂಡಿತು. ಇದರಿಂದ ಗಾಬರಿಗೊಂಡು ಎಚ್ಚೆತ್ತ ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರ ನಾಯಕನು ಪಶ್ಚಾತ್ತಾಪ ಪಟ್ಟು ಶ್ರೀ ಹೊಸೂರಮ್ಮ ದೇವಿಗೆ ಶಿರ ಸಾಷ್ಟಾಂಗ ನಮಸ್ಕಾರಗಳನ್ನು ಮಾಡಿ ತನ್ನ ಸೈನಿಕರನ್ನು ಕ್ಷಮಿಸುವಂತೆ ಬೇಡಿ ಕೊಂಡನು. ಭಯ ಭಕ್ತಿಯಿಂದ, ಅತಿ ವಿಜೃಂಭಣೆಯಿಂದ ಶ್ರೀ ದೇವಿಯ ಪೂಜೆಯನ್ನು ಮಾಡಿದನು. ಸುಪ್ರಸನ್ನಳಾದ ಹೊಸೂರಮ್ಮ ದೇವಿಯು ಸೋಮಶೇಖರ ನಾಯಕನಿಗೆ ಪ್ರತ್ಯಕ್ಷಳಾಗಿ ಕ್ಷಮಾದಾನ ಮಾಡಿದಳು. ಈ ಸಂದರ್ಭದಲ್ಲಿ ಸೋಮಶೇಖರ ನಾಯಕನು ಶ್ರೀ ಹೊಸೂರಮ್ಮ ದೇವಿಯ ಪೂಜಾ ಕೈಂಕಾರ್ಯಗಳು, ಇನ್ನಿತರ ಆಚರಣೆಗಳು ನಡೆಯಲೆಂಬ ಉದ್ದೇಶದಿಂದ ಸುಮಾರು ಎಪ್ಪತ್ತು ಎಕರೆ ನೀರಾವರಿ ಭೂಮಿಯನ್ನು ಕಾಣಿಕೆಯಾಗಿ ನೀಡಿದನು. ಹೀಗೆ ಶ್ರೀ ಹೊಸೂರಮ್ಮ ದೇವಿಯ ಮಹಿಮೆಯು ಅಂದಿನಿಂದ ಇಂದಿನವರೆಗೆ ಒಂದಿಲ್ಲೊಂದು ವಿಧದಲ್ಲಿ ಪ್ರಚಾರತೆಯನ್ನು ಪಡೆದುಕೊಂಡಿದೆ.

ಹೊಸೂರಿನ ಬಗ್ಗೆ ಬೆಳಕು ಚೆಲ್ಲುವ ಶಾಸನಗಳು

ಹೊಸೂರು ಗ್ರಾಮ ಈ ಮೊದಲೆ ತಿಳಿಸಿದಂತೆ ಒಂದು ಸುಂದರ ಗ್ರಾಮ. ಹೊಸಪೇಟೆ ನಗರದಿಂದ ನಾಲ್ಕು ಕಿ.ಮೀ. ದೂರವಿರುವ ಈ ಗ್ರಾಮ ಐತಿಹಾಸಿಕವಾಗಿ ಸಾಕಷ್ಟು ಮಹತ್ವವನ್ನು ಹೊಂದಿದೆ. ರಾಜ ಮಹಾರಾಜರ ನಂಟು ಈ ಗ್ರಾಮಕ್ಕಿದೆ. ಪಾಳೆಯಗಾರರ ಆಳ್ವಿಕೆಗೂ ಈ ಗ್ರಾಮ ಒಳಪಟ್ಟಿತು ಎಂಬುದಕ್ಕೆ ಸಾಕಷ್ಟು ಆಧಾರಗಳಿವೆ. ಸುಮಾರು ಕ್ರಿ.ಶ. ೧೪೩೫ ರಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯಲ್ಲಿ ಹೊಸೂರು ಒಳಪಟ್ಟಿತ್ತೆಂಬ ಬಗ್ಗೆ ಶಾಸನಗಳ ಮೂಲಕ ಗುರುತಿಸಲಾಗಿದೆ. ಆ ಕಾಲದಲ್ಲಿದ್ದ “ಮಾದಿನಾಯಕನು ಹೊಸೂರಿನ ಮಹಾಮಾಯಿ ಚಿತ್ತವಾಡ್ಗಿಯ ಕೆಲವು ಗ್ರಾಮಗಳನ್ನು ದತ್ತಿ ಬಿಟ್ಟಿದ್ದನು…” ಎಂಬ ವಿಷಯವು ಹೊಸೂರಮ್ಮ ಗುಡಿಯ ಬಲ ದ್ವಾರಪಾಲಕ ವಿಗ್ರಹದ ಬಳಿ ಇರುವ ಶಾಸನದಿಂದ ತಿಳಿಯಬಹುದಾಗಿದೆ. ಅಂತೆಯೇ ಇದೇ ಕಾಲದಲ್ಲಿ ಗೌಡ ದಣಾಯಕ ಮಗ ಬಸವಪ್ಪ ಹಾಗೂ ಉಪ ಪ್ರಧಾನ ಸೋಮರಸನು ಏಕನಾಥೇಶ್ವರಿಗೆ ದಾನ ಕೊಟ್ಟ ಮಾಹಿತಿಯೂ ಹೊಸೂರಮ್ಮ ದೇವಿ ಗುಡಿಯ ಮುಖ ಮಂಟಪದಲ್ಲಿರುವ ಒಂದು ಕಂಬದ ಮೇಲೆ ಬರೆಯಲಾಗಿದೆ. ಅದೇ ರೀತಿಯಾಗಿ ಅದೇ ಕಂಬದ ಇನ್ನೊಂದು ಪಕ್ಕದಲ್ಲಿ ಹೊಸೂರು ಮಹಾಮಾಯಿಗೆ ದೇವಸ್ಥಾನದ ಸ್ಥಾನಿಕನು ವಿಜಯನಗರ ಕೊಕಟಿಮ ಮಲ್ಲಯ್ಯನಿಗೆ ದೇವರವಾಹ್ಯ ಸಿಂಹಕ್ಕೆ ಅಲಂಕಾರ ಆಭರಣ ಚಿಲವಾನಯ ಮಾಡಲು ಭೂದಾನ ಮಾಡಿದನೆಂಬುವುದು ಸಹ ತಿಳಿದು ಬರುವುದು.

ದಾನಪತ್ರ

ಶುಭಮಸ್ತು ನಮಸ್ತುಂಗ ಶಿರಶ್ಚುಂಬಿ ಚಂದ್ರ ಚಾಮರ ಚಾರವೇ ತ್ರೈಲೋಕ್ಯ ನಗರಾರಂಭ ಮೂಲಸ್ತಂಭಾಯ ಶಂಭವೇ. ಸ್ವಸ್ತಿ ಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕೆ ವರುಷಗಳು ೧೬೩೭ (ಸಾವಿರದ ಆರು ನೂರ ಮೂವತ್ತೇಳನೆಯ) ಕ್ರಿ.ಶ. ೧೭೧೫ ಮನ್ವಥನಾಮ ಸಂವತ್ಸರದ ಆಶ್ವೀಜ ಬಹುಳ ಶ್ರೀ ಮನ್ಮಹಾನಾಯಕಾ ಆಚಾರ್ಯ, ಭಾಷೆಗೆ ತಪ್ಪದ ನಾಯಕರ ಗಂಡ ಮೊರೆ ಹೊಕ್ಕರೆ ಕಾಯ್ವ ಮಾರಾಂತರ ಗೆಲ್ವ ಬಾಗುಳಿ ಬಸಪ್ಪನಾಯಕ ಅಯ್ಯನವರು ನಮ್ಮ ಪುರೋಹಿತರಾದ ವಿಶ್ವನಾಥ ಭಟ್, ಹಿರೇವೊಬಲಳ ಭಟ್, ಚಿಕ್ಕ ಓಬಳ ಭಟ್, ಸಿಂಹಾದ್ರಿ ಭಟ್ಟರ ಪುತ್ರರಿಗೆ ಬರೆದು ಕೊಟ್ಟ ಭೂದಾನದ ಪಟ್ಟೇದ ಕ್ರಮವೆಂತೆಂದರೆ, ಅದಾಗಿ ನಮ್ಮಗೆ ಪಟ್ಟಾಭಿಷೇಕವಾದ ಸಮಯದಲ್ಲಿ ನಿಮಗೆ ದಾನಪೂರಕವಾಗಿ ನಮ್ಮ ಹೊಸೂರು ಪಟ್ಟಡಿಯೊಳ ಗಣ ಚಿತ್ತವಾಡಿಗೆ ಗ್ರಾಮದಲ್ಲಿ ಅಯಿಕ್ಕಳ ಬೀಜವರಿ ಗದ್ದೆನು ಸಿವಾರ್ಪಿತವಾಗಿ ಕೊಟ್ಟಿದ್ದೇವೆ. ಅಲ್ಲಿ ಯೇನುಂಟಾದ ಜಲತಿರು ಪಾಕ್ಷಾಣ…

ಎಂದು ಹೊಸೂರಿನ ಹತ್ತಿರವಿರುವ ಚಿತ್ತವಾಡ್ಗಿಯ ಗ್ರಾಮದಲ್ಲಿ ಗದ್ದೆಗಳನ್ನು ಭೂದಾನವಾಗಿ ನೀಡಿದ ವಿಷಯವು ದಾನಪತ್ರದಲ್ಲಿ ಉಲ್ಲೇಖಿತವಾಗಿದೆ. ದಾನಪತ್ರವನ್ನು ಗಮನಿಸಿದಾಗ ಹೊಸೂರು ಮತ್ತು ಹೊಸೂರಿನ ದೇವಿ ಮಹಾಮಾಯಿ ಎಂಬ ಹೆಸರುಳ್ಳ ಉಲ್ಲೇಖ ಸ್ಪಷ್ಟವಾಗಿ ನಮಗೆ ಖಚಿತತೆಯನ್ನು ವ್ಯಕ್ತಪಡಿಸುತ್ತವೆ.

ಈ ಮೇಲಿನ ದಾನಪತ್ರವನ್ನು ಸಂಗ್ರಹಿಸಿದವರು ಜಿಲ್ಲಾ ಮುಬ್ಸೀಫ್ರವರು ದಿನಾಂಕ ೩೧ – ೧ – ೧೮೮೨ ರಲ್ಲಿ ಸಂಗ್ರಹಿಸಿದ್ದ ಹೊಸೂರಿಗೆ ಸಂಬಂಧಿಸಿದ ದಾನಪತ್ರವನ್ನು ಹರಪನಹಳ್ಳಿಯ ಶ್ರೀ ಚ. ಗೋವಿಂದಾಚಾರ್ ಅವರು ದಿನಾಂಕ ೧ – ೩ – ೧೯೯೫೩ ರಲ್ಲಿ ನಂತರ ಹಗರಿಬೊಮ್ಮನಹಳ್ಳಿಯ ಶ್ರೀಮತಿ ಎಸ್. ಸಕ್ಕೂಬಾಯಿಯವರು ದಿನಾಂಕ ೧೧ – ೧೨ – ೧೯೯೯೨ ರಲ್ಲಿ ಈ ರೀತಿಯಾಗಿ ಸಂಗ್ರಹಿಸಿದ್ದಾರೆ.

ಶಾಸನ

          ನಮಸ್ತುಂಗ ಶಿರ
          ಚ್ಯುಂಬಿ ಚಂದ್ರ ಚಾಮರ
          ತ್ರೈಲೋಕ್ಯ ನಗರಾರಂಭ ಮಾ

ಲಸ್ತಂಭಾಯ ಶಂಭವೆ ಸ್ವಸ್ತಿ ಶ್ರೀ ಜಯಾಭ್ಯುದಯ ಶಾಲಿವಾಹನ ಶಕ ವರುಷ ೧೪೩೫ನೆಯ ಶ್ರೀಮುಖ ಸಂವತ್ಸರ ತಿಥಿಯ ಭಾದ್ರಪದ ಶು ೧೫ ಮಂಗಳವಾರದಲೂ ಶ್ರೀ ವೀರಕೃಷ್ಣರಾಯರಿಗೆ ಧರ್ಮವಾಗಬೇಕೆಂದು ಗೌಡ ದಣಾಯಕರ ಮಕ್ಕಳು ಬಸವಪ್ಪನವರು ಪಲುಪಾದೆ ದಾನ ಸೋವರರ ಸಹ ಕೂಡಿ ಕೂಡಿದ.

ಎಂದು ಉಲ್ಲೇಖಿಸಲ್ಪಟ್ಟಿದೆ. ಈ ಮೇಲಿನ ಅಂಶಗಳು ಹೊಸೂರು ಗ್ರಾಮದ ಹೊಸೂರಮ್ಮನ ಬಗ್ಗೆ ಮತ್ತು ಈ ಗ್ರಾಮದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ವಿಷಯವನ್ನು ಗಮನಿಸಬಹುದಾಗಿದೆ.

ಹೊಸೂರಮ್ಮ ಮತ್ತು ಹುಲಿಗೆಮ್ಮನ ಹೋಲಿಕೆ

ಹುಲಿಗೆ ಗ್ರಾಮದಲ್ಲಿ ಹುಲಿಗೆಮ್ಮ ದೇವಿ ನೆಲೆಸಿದರೆ, ಹೊಸೂರು ಗ್ರಾಮದಲ್ಲಿ ಹೊಸೂರಮ್ಮ ದೇವಿ ನೆಲೆಸಿದ್ದಾಳೆ. ಈ ಎರಡು ಕ್ಷೇತ್ರಗಳ ಮಧ್ಯ ತುಂಗಭದ್ರಾ ನದಿ ಹರಿಯುತ್ತಿದೆ. ಈ ಎರಡೂ ಗ್ರಾಮಗಳನ್ನು ಆಯಾ ದೇವತೆಗಳ ಹೆಸರಿನಿಂದ ಕರೆಯುವ ಪದ್ಧತಿ ರೂಢಿಯಲ್ಲಿದೆ. ಹುಲಿಗೆಮ್ಮ ಮತ್ತು ಹೊಸೂರಮ್ಮ ದೇವತೆಗಳನ್ನು ನೋಡಿದಾಗ ಇವರಿಬ್ಬರ ಹೋಲಿಕೆ ಒಂದೇ ತರಹವಾಗಿದೆ. ಟಿಪ್ಪು ಸುಲ್ತಾನ್ ಹುಲಿಗೆಮ್ಮನಿಗೆ ಶರಣಾದರೆ, ಹರಪನಹಳ್ಳಿಯ ಪಾಳೆಯಗಾರ ಸೋಮಶೇಖರ ನಾಯಕ ಹೊಸೂರಮ್ಮನಿಗೆ ಶರಣಾಗಿದ್ದಾನೆ. ಕುರಿ ಕೋಳಿಗಳನ್ನು ಬಲಿ ಕೊಡುವ ಪದ್ಧತಿ ಹುಲಿಗಿಯ ಹುಲಿಗೆಮ್ಮನಿಗೆ ನೆರವೇರಿದರೆ, ಸಿಹಿ ಅಡುಗೆಯ ಪ್ರಸಾದ ಅಥವಾ ಎಡೆ ಹಾಕುವ ಪದ್ಧತಿ ಹೊಸೂರಮ್ಮನಲ್ಲಿದೆ. “ಹುಲಿಗೆಮ್ಮನ ಪರುಸೆ, ಹೊಸೂರಮ್ಮನ ಮಾನ್ಯವೋ” ಎಂಬ ಜನಪದ ಗಾದೆ ಇಂದಿಗೂ ರೂಢಿಯಲ್ಲಿದೆ. ಈ ಇಬ್ಬರೂ ದೇವತೆಗಳಿಗೆ ಅಮ್ಮ, ದೇವಿ, ಜಗನ್ಮಾತೆ, ಜಗದಾಂಬೆ ಎಂಬ ಪರ್ಯಾಯ ಹೆಸರುಗಳಿಂದ ಕರೆಯುವ ಪದ್ಧತಿ ಇದೆ. ಈ ಇಬ್ಬರು ದೇವತೆಗಳು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಉದ್ಭವವಾಗಿರುವ ಸಾಧ್ಯತೆ ಇದೆ. ಹುಲಿಗಿಯ ಹುಲಿಗೆಮ್ಮ ೧೩ನೇ ಶತಮಾನದಲ್ಲಿದ್ದಳೆಂಬುದಕ್ಕೆ ಅಲ್ಲಿ ಸಿಕ್ಕಿರುವ ಶಾಸನ ಆಧಾರವಾಗಿ ನಿಲ್ಲುತ್ತದೆ. ಅದೇ ರೀತಿ ಹೊಸೂರಿನ ಹೊಸೂರಮ್ಮ ಸುಮಾರು ೧೪ನೇ ಶತಮಾನದಲ್ಲಿ ಬೆಳಕಿಗೆ ಬಂದಳೆಂಬುದಕ್ಕೆ ಹೊಸೂರಿನಲ್ಲಿರುವ ದಾನ ದತ್ತಿ ಶಾಸನಗಳಿಂದ ತಿಳಿದು ಬರುತ್ತದೆ. ಈ ಎರಡೂ ದೇವತೆಗಳು ಪ್ರಮುಖವಾಗಿ ಗ್ರಾಮದೇವತೆಗಳು ಹೊಸಪೇಟೆ ಭಾಗದ ಜನರ ಕುಲದೇವತೆಗಳಾಗಿ ಹುಲಿಗೆಮ್ಮ, ಹೊಸೂರಮ್ಮ ಹೊರ ಹೊಮ್ಮಿದ್ದಾರೆ. ಎರಡೂ ದೇವತೆಗಳ ಮೂಲ ಮೂರ್ತಿಗಳು ದುಂಡಾದ ಕಲ್ಲಿನ ಶಿಲೆಗಳಾಗಿವೆ. ಶುಕ್ರವಾರ, ಮಂಗಳವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ಹುಲಿಗೆಮ್ಮ ಮತ್ತು ಹೊಸೂರಮ್ಮ ದೇವಿಯರಿಗೆ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಹುಲಿಗೆಮ್ಮ ಮತ್ತು ಹೊಸೂರಮ್ಮ ದೇವಿಯರ ಜಾತ್ರೆ ಮಹೋತ್ಸವ ಒಂದೇ ರೀತಿಯಾಗಿವೆ. ಪಾಯಸ ಪವಾಡ, ಬಾಳೆದಂಡಿಗೆ ಪವಾಡ ಮತ್ತು ಅಗ್ನಿಕುಂಡ ಈ ಇಬ್ಬರು ದೇವತೆಗಳಲ್ಲಿ ನಡೆಯುತ್ತದೆ.

ಭೌಗೋಳಿಕವಾಗಿ ಹುಲಿಗಿ ಮತ್ತು ಹೊಸೂರು ಗ್ರಾಮಗಳನ್ನು ತುಲನೆ ಮಾಡಿದಾಗ ಹೊಸೂರಿನಲ್ಲಿ ನಿಸರ್ಗ, ಪ್ರಕೃತಿ ಸೌಂದರ್ಯ ಮತ್ತು ಹೊಲಗದ್ದೆಗಳ ಫಸಲುಗಳಿಂದ ಕಂಗೊಳಿಸುತ್ತಿದೆ. ಅಲ್ಲದೇ ಶಾಂತಿಯ ನೆಮ್ಮದಿಯ ವಾತಾವರಣ ಅಲ್ಲಿದೆ. ಅದೇ ರೀತಿ ಹುಲಿಗಿಯ ಹುಲಿಗೆಮ್ಮನಿಗೆ ಕರ್ನಾಟಕ, ಆಂಧ್ರ ಮತ್ತು ಮಹಾರಾಷ್ಟ್ರಗಳಿಂದ ಲಕ್ಷಾಂತರ ಭಕ್ತರು ಈಕೆಗೆ ನಡೆದುಕೊಳ್ಳುತ್ತಾರೆ. ಅಲ್ಲದೆ ಈಕೆಯ ಭಕ್ತರೂ ಆಗಿದ್ದಾರೆ. ವ್ಯಾಪಾರ ವಹಿವಾಟು ಸಾಮಾಜಿಕ ವ್ಯಚ್ಚಗಳು ಅಚ್ಚುಕಟ್ಟುತನದಿಂದ ಕೂಡಿವೆ. ಹುಲಿಗಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿ ಕಂಡುಬಂದರೆ ಆ ಸಂಖ್ಯೆ ಹೊಸೂರಿನಲ್ಲಿ ಕಂಡುಬರುವುದಿಲ್ಲ. ಕೃಷಿ ಆಧಾರಿತ ಜನಸಂಖ್ಯೆ ಹೊಸೂರಿನಲ್ಲಿದೆ. ಈ ಇಬ್ಬರು ದೇವತೆಗಳು ಹೋಲಿಕೆಯಲ್ಲಿ ಒಂದೇ ರೀತಿಯಾಗಿವೆ. ಒಂದೇ ದೇವತೆಗಳಾಗಿರುವರು. ಈ ಪರಿಸರದ ಜನರು ತಮ್ಮ ತಮ್ಮ ಅನುಕೂಲತೆಗಳಿಗಾಗಿ ಎರಡು ದೇವತೆಗಳಾಗಿ (ಹುಲಿಗೆಮ್ಮ, ಹೊಸೂರಮ್ಮ) ಸೃಷ್ಟಿಸಿಕೊಂಡಿದ್ದಾರೆ. ಭಾರತೀಯ ಸಮಾಜದಲ್ಲಿರುವಂತೆ ತಾಯಿ – ಮಗುವಿನ ಸಂಬಂಧ ಇಂತಹ ದೇವತೆಗಳಲ್ಲಿ ಕಂಡುಬರುತ್ತದೆ. ಎಲ್ಲಾ ಪುಣ್ಯ ಕ್ಷೇತ್ರಗಳಿಗಿರುವಂತೆ ದೇವತೆಗಳ ಹಿನ್ನೆಲೆ, ಸ್ಥಳ ಪುರಾಣ, ದೇವತೆಗಳ ಇತಿಹಾಸ ಹೊಸೂರಮ್ಮ ಮತ್ತು ಹುಲಿಗೆಮ್ಮ ದೇವತೆಗಳಿಗೂ ಕೂಡ ಕಂಡುಬರುತ್ತದೆ.

ಹೊಸೂರಮ್ಮನ ಜಾತ್ರೆ

ಇಂದು ಹಬ್ಬ ಹರಿದಿನ ಜಾತ್ರೆ ಉತ್ಸವಗಳು ಅರ್ಥವನ್ನು ಕಳೆದುಕೊಳ್ಳುತ್ತಿವೆ. ಇನ್ನೂ ನಗರಗಳ ಮಟ್ಟದಲ್ಲಂತೂ ಅವುಗಳನ್ನು ನೆಪ ಮಾತ್ರಕ್ಕೆ ಮಾಡುವ ಆಚರಣೆಗಳಾಗಿವೆ. ಗ್ರಾಮೀಣ ಪರಿಸರದಲ್ಲಿ ಮಾತ್ರ ಅವುಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಎನ್ನಬಹುದಾಗಿದೆ. ನಗರ ಜೀವನವು ತನ್ನೆಲ್ಲಾ ಸ್ವಾರಸ್ಯವನ್ನು ಕಳೆದುಕೊಳ್ಳುತ್ತಿದೆ. ಅದು ನಕ್ಷತ್ರಗಳೇ ಇಲ್ಲದ ಆಕಾಶದಂತೆ, ವಾಸ್ತುವೇ ಇಲ್ಲದ ಕಟ್ಟಡದಂತೆ, ರುಚಿಯಿಲ್ಲದ ಅಡುಗೆಯಂತೆ, ಸಂತೋಷ ಇಲ್ಲದ ಕೂಟದಂತೆ ಆಗುತ್ತದೆ. ನಗರಗಳ ಸ್ವರೂಪದಲ್ಲಾಗುವ ಬದಲಾವಣೆ, ಜನಸಂಖ್ಯೆಯ ಒತ್ತಡ, ಬಡತನ, ನಿರುದ್ಯೋಗ, ಪರಿಸರ ಮಾಲಿನ್ಯ, ಇವೇ ಮುಂತಾದ ಕಾರಣಗಳಿಂದಾಗಿ ಅಂಗ ವೈಕಲ್ಯಗೊಂಡ ಸಮಾಜದ ಸೃಷ್ಟಿಯಾಗುತ್ತಿದೆ. ಆದರೂ ಗ್ರಾಮೀಣ ಜೀವನ ನಗರಗಳಷ್ಟು ಮಲೀನಗೊಂಡಿಲ್ಲವೆಂದೇ ಹೇಳಬೇಕಾಗುತ್ತದೆ.

ಹಬ್ಬ ಹರಿದಿನ ಜಾತ್ರೆ ಉತ್ಸವಗಳನ್ನು ಆಚರಿಸುವುದರ ಗುರಿಯು ದೇವರ ಕೃಪೆಗೆ ಪಾತ್ರರಾಗಿ ಲೌಕಿಕ ಸುಭದ್ರತೆ ಮತ್ತು ಆಧ್ಯಾತ್ಮಿಕವಾಗಿ ಮೋಕ್ಷ ಪಡೆಯುವುದೇ ಆಗಿದೆ. “ಜನಸೇರಿದರೆ ಜಾತ್ರೆ” ಎಂಬ ಗಾದೆ ಮಾತು ಇಂದಿಗೂ ಪ್ರಚಲಿತದಲ್ಲಿದೆ.

ಪ್ರತಿಯೊಂದು ಗ್ರಾಮದಲ್ಲೂ ಒಂದಿಲ್ಲೊಂದು ದೇವರ ಗುಡಿ – ಗುಂಡಾರ ಊರ ಹೊರಗೆ ಆಗಲಿ, ಊರ ಮಧ್ಯದಲ್ಲಿಯಾಗಲಿ ಇರುವುದು ಕಂಡು ಬರುತ್ತದೆ. ಈ ದೇವರುಗಳ ಆರಾಧನೆ, ಆಚರಣೆ, ಜಾತ್ರೆ – ಉತ್ಸವಗಳು, ಒಂದು ನಿರ್ದಿಷ್ಟ ಕಾಲದಲ್ಲಿ ನಿಯಮಿತವಾಗಿ ಊರ ಜನರು ಸೇರಿ ನೆರವೇರಿಸುವ ಆಚರಣೆಗೆ “ಜಾತ್ರೆ” ಎನ್ನುತ್ತಾರೆ.

“ಜಾತ್ರೆ” ಎಂಬ ಪದ “ಯಾತ್ರೆ”ಯ ತದ್ಭವ ರೂಪ. ಯಾತ್ರಾ ಸ್ಥಾನಗಳೆಲ್ಲ ಜಾತ್ರೆಯ ಸ್ಥಳಗಳಾಗಲಿಕ್ಕಿಲ್ಲ. ಆದರೆ ಜಾತ್ರೆ ಸ್ಥಳಗಳೆಲ್ಲ ಸಾಮಾನ್ಯವಾಗಿ ಯಾತ್ರಾಸ್ಥಳವಾಗಿರುತ್ತದೆ. ಇದಕ್ಕೆ ಸಮಂಜಸವಾಗಿ ಸಂಸ್ಕೃತದ ಒಂದು ಉಕ್ತಿಯು ಹೀಗಿದೆ. “ಯಾನೇನ ತ್ರಾಯರ್ ಇತಿ ಯಾತ್ರಾ” ಇದರ ಅರ್ಥ ಪುಣ್ಯ ಕ್ಷೇತ್ರ ದರ್ಶನಕ್ಕೆ ಹೋಗುವವರ ರಕ್ಷೆಯ ಯಾತ್ರೆಯಾಗಿದೆ. ನಿಘಂಟುಗಳು ಸಹ ಜಾತ್ರೆಯ ಕುರಿತಾಗಿ ಪುಣ್ಯ ಕ್ಷೇತ್ರ ದರ್ಶನ ಮಾಡುವ ಯಾತ್ರೆಯೆಂದೇ ಉಲ್ಲೇಖಿಸಿದ್ದು ಗಮನಾರ್ಹ ವಿಷಯವಾಗಿದೆ. ಯಾಕೆಂದರೆ ಯಾತ್ರೆ ಅಂದರೆ ಯಾವುದೇ ಕಾರ್ಯದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಪುಣ್ಯ ಕ್ಷೇತ್ರಗಳ ದರ್ಶನ ಪಡೆಯುವುದಾಗಿದೆ. ಇದಕ್ಕೆ ನಿದರ್ಶನವಾಗಿ ನಮ್ಮ ಪೂರ್ವಜರು ವರ್ಷದಲ್ಲಿ ಒಂದು ನಿರ್ದಿಷ್ಟ ಸಮಯದಲ್ಲಿ ತಾವು ಬೇಡಿಕೊಂಡ ಹರಕೆಗಳನ್ನು ಸಲ್ಲಿಸಲು ಇಂತಹ ಸ್ಥಳಗಳಿಗೆ ಹೋಗುತ್ತಿದ್ದರು. ಈ ಸ್ಥಳದಲ್ಲಿ ನೆರೆಯುವ ಜನಸಮೂಹಕ್ಕೆ “ಜಾತ್ರೆ” ಎಂದು ಕರೆಯುತ್ತಾರೆ. ಜಾತ್ರೆಗೆ ಸಂಬಂಧಿಸಿದಂತೆ ಮತ್ತೊಂದು ಗಾದೆ ಮಾತು ಕೂಡ ಪ್ರಚಲಿತದಲ್ಲಿದೆ. ಅದೇನೆಂದರೆ “ಜನ ಮರುಳೋ ಜಾತ್ರೆ ಮರುಳೋ” ಎಂಬುವುದಾಗಿದೆ. ಮಗದೊಂದು ಗಾದೆ ಮಾತು “ಜಾತ್ರೆ ಮುಗಿದ ಮೇಲೆ ಪರುಷೆಗೇನು ಕೆಲಸ” ಎಂಬ ಗಾದೆ ಮಾತು ಕೂಡ ಜನಪದರಲ್ಲಿದೆ.

ಇನ್ನೂ ಹೊಸದಾಗಿ ಪ್ರೀತಿಸುವವರು ಜಾತ್ರೆಯಲ್ಲಿ ತಿಂಡಿ ತಿನಿಸುಗಳನ್ನು ಖರೀದಿಸಿ ತಮ್ಮ ಪ್ರಿಯತಮೆಗೆ ತಿನ್ನಿಸುವುದರ ಕುರಿತು ಈ ತ್ರಿಪದಿ ಹೀಗಿದೆ,

          ಹುಡುಗೀಯ ಕರಕೊಂಡು ಹುಡುಗ ಜಾತ್ರೆಗೆ ಹೋದ |
          ಹುರುಗಡಲೆ ಬೆಲ್ಲ ಮಡಲಲ್ಲಿ ಕಟ್ಕೊಂಡ |
          ಹುಡುಗೀಯ ಕೈಗೆ ಬಳೆಯಿಟ್ಟ |

ಎಂಬ ಅರ್ಥಗರ್ಭಿತವಾದ ಈ ತ್ರಿಪದಿ ಜನಪದರ ಬದುಕಿಗೊಂದು ಆಶಾಕಿರಣವಾಗಿದೆ. ಪ್ರೀತಿಸುವವರ ಬದುಕಿಗೊಂದು ಅರ್ಥವನ್ನು ಕಲ್ಪಿಸಿದೆ. ಜಾನಪದ ಸಾಹಿತ್ಯದಲ್ಲಿ ಮಡುಗಟ್ಟಿದ ಇಂಥ ತ್ರಿಪದಿಗಳು ಗ್ರಾಮೀಣ ಪರಿಸರದ ಜಾತ್ರೆಗೆ ಒಂದು ಹಿರಿಮೆಯ ಗರಿಯನ್ನು ಮೋಡಿಸಿವೆ.

ಜಾತ್ರೆ ಜನಾಂಗದ ಐಕ್ಯತೆಗೆ ಕಾರಣವಾಗಿದೆ. ಒಂದು ಜಾತ್ರೆಯಲ್ಲಿ ಗ್ರಾಮದ ವಾತಾವರಣ ತುಂಬಾ ಹಸನವಾಗಿರುತ್ತದೆ. ಮನೆಯಲ್ಲಿ ಬೀಗರು ಬಿಜ್ಜರಿಂದಲೂ ತುಂಬಿರುತ್ತದೆ. ಜಾತ್ರೆ ನಡೆಯುವ ಹೊತ್ತಿಗೆ ಆ ಸ್ಥಳದಲ್ಲಿ ಜಾತಿ, ಮತ, ಭೇದ ಭಾವವನ್ನು ಬದಿಗಿಟ್ಟು ಗ್ರಾಮಸ್ಥರೆಲ್ಲ ಸೇರಿರುತ್ತಾರೆ. ಜಾತ್ರೆಯ ಉತ್ಸಾಹ ಗ್ರಾಮಸ್ಥರ ಹೃದಯವನ್ನು ಸಂತೋಷದ ಮಡುವಿನಲ್ಲಿ ಹಸನಾಗುವಂತೆ ಮಾಡುತ್ತದೆ. ಹಳೆಯ ರಾಗ ದ್ವೇಷಗಳು ಮಾಯವಾಗುತ್ತವೆ. ಒಬ್ಬರಿಂದೊಬ್ಬರಿಗೆ ಸ್ನೆಹ ಸಂಬಂಧ ಸಕಾರಗೊಳ್ಳುತ್ತದೆ. ಇದರಿಂದ ಗ್ರಾಮಸ್ಥರ ಐಕ್ಯ ಮತ್ತಷ್ಟು ಭದ್ರವಾಗುತ್ತದೆ. ಕೃಷಿ ಮತ್ತು ಕೃಷಿಯ ಚಟುವಟಿಕೆಗಳಲ್ಲಿ ದುಡಿದ ಜೀವಗಳಿಗೆ, ರೈತಾಪಿ ಬಂಧುಗಳಿಗೆ ಜಾತ್ರೆ ಒಂದು ವರದಾನವಾಗಿದೆ. ಶ್ರಮಿಸಿದ ಜೀವಗಳಿಗೆ ಉಲ್ಲಾಸ ನೀಡಬಲ್ಲ ಜಾತ್ರೆ ಹಬ್ಬ ಹರಿದಿನ ಉತ್ಸವಗಳೇ ಅವರ ಬದುಕಿನ ಜೀವಾಳ ಎಂಬುದನ್ನು ಮರೆಯುವಂತಿಲ್ಲ. ಪ್ರತಿ ವರ್ಷ ಹೊಸೂರಿನಲ್ಲಿ ನಡೆಯುವ ಹೊಸೂರಮ್ಮನ ಜಾತ್ರೆ ಆ ಗ್ರಾಮದ ಐಕ್ಯತೆಯ ಪ್ರತಿಬಿಂಬವಾಗಿದೆ.

ಹೊಸೂರಮ್ಮನ ಜಾತ್ರೆ ಪ್ರಯುಕ್ತ ಗ್ರಾಮದ ಎಲ್ಲಾ ಜನಾಂಗದ ಹಿರಿಯರು ಸಭೆ ಸೇರುತ್ತಾರೆ. ಕೆಲ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾರೆ. ಗ್ರಾಮದಲ್ಲಿ ಪ್ರತಿ ಮನೆಗಳು ಸುಣ್ಣ ಬಣ್ಣಗಳಿಂದ, ತಳಿರು ತೋರಣಗಳಿಂದ ಕಂಗೊಳಿಸುತ್ತಿರುತ್ತವೆ. ಎಲ್ಲರ ಮನೆ, ಮನಗಳಲ್ಲೂ ಸಂತೋಷ ಮನೆ ಮಾಡಿರುತ್ತದೆ. ಹೊಸೂರಮ್ಮನ ಜಾತ್ರೆ ಮೊದಲಿಗೆ ಕಂಕಣ ಧಾರಣೆಯೊಂದಿಗೆ ಪ್ರಾರಂಭವಾಗುತ್ತದೆ.