ಕಂಕಣ ಧಾರಣೆ

ಹೊಸೂರಮ್ಮ ದೇವಿಗೆ ಜಾತ್ರೆಯ ದಿನದಂದು ಮೊದಲು ವಿಶೇಷ ಪೂಜೆ ಮಾಡಲಾಗುತ್ತದೆ. ಕುಂಕುಮಾರ್ಚನೆ, ಮಂತ್ರಪಠಣ, ಪುಷ್ಪಾರ್ಚನೆಯ ಮೂಲಕ ಮಹಾ ಮಂಗಳಾರತಿ ಮಾಡಲಾಗುತ್ತದೆ. ರೇಣುಕೆ ಮತ್ತು ಪರಶುರಾಮನ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ತುಂಗಭದ್ರಾ ನದಿಗೆ ತೆಗೆದುಕೊಂಡು ಹೋಗಲಾಗುತ್ತದೆ.

ಭಕ್ತರ ದಂಡು ಅಂದು ಸೇರಿರುತ್ತದೆ. ನದಿಯಲ್ಲಿ ಸ್ನಾನ ಮಾಡಿ, ಗಂಗಮ್ಮನ ಪೂಜೆಯನ್ನು ನೆರವೇರಿಸಿ, ಪರಶುರಾಮ ಮತ್ತು ರೇಣುಕೆಯ ಮೂರ್ತಿಗಳಿಗೂ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ನಂತರ ವಾದ್ಯಗಳ ಮೂಲಕ ವಾಪಸ್ಸು ದೇವಸ್ಥಾನಕ್ಕೆ ಬರಲಾಗುತ್ತದೆ.

ಹೊಸೂರಮ್ಮನ ಗುಡಿಗೆ ಬಂದ ನಂತರ ಕಂಚಿನ ಮೂರ್ತಿಗಳಾದ ಪರಶುರಾಮ, ರೇಣುಕಾ ದೇವಿಗೆ ಕಂಕಣವನ್ನು ಕಟ್ಟಲಾಗುತ್ತದೆ. ಅದೇ ಸಂದರ್ಭದಲ್ಲಿ ಹೊಸೂರಿನ ಅಧೀದೇವತೆ ಹೊಸೂರಮ್ಮ ದೇವಿಗೂ ಕೂಡ ಕಂಕಣವನ್ನು ಕಟ್ಟಲಾಗುತ್ತದೆ. ವೀರಶೈವ ಮತ್ತು ಬ್ರಾಹ್ಮಣ ಪೂಜಾರಿಗಳು ಕಂಕಣವನ್ನು ಕಟ್ಟಿಕೊಳ್ಳುತ್ತಾರೆ. ನಂತರ ಪೂಜಾರಿಯನ್ನು ಅದೇ ಮಂಗಳ ವಾದ್ಯಗಳ ಮೂಲಕ ಅವರ ಮನೆಗೆ ತೆರಳಿ ಬಿಡಲಾಗುತ್ತದೆ. ಅಂದಿನಿಂದ ಉಪವಾಸ ವ್ರತವನ್ನು ಪೂಜಾರಿ ಕೈಗೊಳ್ಳುತ್ತಾನೆ. ಕಂಕಣ ಕಾರ್ಯಕ್ರಮ ಪ್ರತಿಪದ ಪಾಡ್ಯದ ದಿನದಂದು ಮಯೂರವಾಹನ ಉತ್ಸವ, ಅಶ್ವವಾಹನೋತ್ಸವ, ಸಿಂಹವಾಹನೋತ್ಸವ, ಶೇಷವಾಹನೋತ್ಸವ, ಶ್ವೇತವಾಹನೋತ್ಸವ, ಗೋಪುರೋತ್ಸವ, ಗಜವಾಹನೋತ್ಸವ ಇತ್ಯಾದಿ ಕಾರ್ಯಕ್ರಮಗಳು ಅತ್ಯಂತ ಭಕ್ತಿಯಿಂದ ದೇವಿಯ ಗುಡಿಯಲ್ಲಿ ನಡೆಯುತ್ತವೆ. ಈ ಸಂದರ್ಭದಲ್ಲಿ ಸಾಕಷ್ಟು ಭಕ್ತರು ನೆರೆದಿರುತ್ತಾರೆ.

ಪವಾಡ

ಮನುಷ್ಯರಿಂದ ಸಾಧ್ಯವಾಗದ್ದು ದೈವದಿಂದ ಅದು ನೆರವೇರಿದರೆ ಅದನ್ನು ಪವಾಡವೆಂದು ಕರೆಯುತ್ತಾರೆ. ದೇವರು ಮಹಾತ್ಮರಿಂದ ನೈಸರ್ಗಿಕ ಕಟ್ಟಳೆಗಳಿಗೆ ಅನುಗುಣವಾಗಿ ಕೆಲವು ಅದೃಶ್ಯ ಘಟನೆಗಳನ್ನು ಮೂಡಿಸುವಂತೆ ಪ್ರಚೋದಿಸುವುದೇ “ಪವಾಡ” ದೇವರ ಭಕ್ತಿಯಲ್ಲಿ ಬೆರೆತು ಅಥವಾ ಮೈಮರೆತು ಅಸಾಧ್ಯವಾದುದನ್ನು ಸಾಧಿಸುವುದರ ಮೂಲಕ ಆಶ್ಚರ್ಯಕರವಾದ ರೀತಿ ನಡೆಯುವುದನ್ನು ಪವಾಡವೆಂದು ಕರೆಯುತ್ತೇವೆ. ಈ ಪವಾಡಗಳು ಅಸಾಮಾನ್ಯವುಗಳಾಗಿದ್ದು ಹಾಗೂ ಐತಿಹ್ಯದಲ್ಲಿ ಬರುವಂತಹ ಅತಿಮಾನುಷ ವ್ಯಕ್ತಿಗಳ ಮಹಿಮೆಯ ಕುರುಹವನ್ನು ಸಾರುವ ಘಟನೆಗಳು ಭಕ್ತರಿಗೆ ಪವಾಡಗಳಾಗಿ ಪರಿಣಮಿಸುತ್ತವೆ. ಪವಾಡಗಳು ಸತ್ಯ ಘಟನೆಯನ್ನು ನಿರೂಪಿಸಿ ಜನರ ನಂಬಿಕೆಯಲ್ಲಿ ಪರಂಪರೆಯನ್ನು ಕಾಪಾಡಿಕೊಂಡು ಬರುತ್ತವೆ. ಈ ಶಬ್ದವು ಸಂಸ್ಕೃತದ “ಪ್ರಸಾದ” ಎಂಬ ಶಬ್ದದಿಂದ ನಿಷ್ಪತ್ತಿಯಾಗಿದೆ. ಪವಾಡ ಮಾಡುವ ಪೂಜಾರಿ ಇತರೆ ವ್ಯಕ್ತಿಗಳಿಗೆ ಪವಾಡ ಪುರುಷರೆಂದು ಕರೆಯುತ್ತಾರೆ.

ಚಿಕ್ಕ ಚಿಕ್ಕ ಮಕ್ಕಳನ್ನು ದೇವರ ಗುಡಿಯಿಂದ ಕೆಳಕ್ಕೆ ಎಸೆಯುವುದು, ಆ ಮಕ್ಕಳನ್ನು ಕಂಬಳಿ ಹಿಡಿದು ರಕ್ಷಿಸುವುದು, ಅಲ್ಲದೇ ಅಗ್ನಿಕುಂಡ ತುಳಿಯುವುದು, ಮೈಲಾರಲಿಂಗನ ಸನ್ನಿಧಿಯಲ್ಲಿ ನಡೆಯುವ ಮೊಣಕಾಲಿನ ಸರಪಳಿ ಪವಾಡ, ನಾಲಿಗೆ ಮತ್ತು ಗಲ್ಲಕ್ಕೆ ಶಸ್ತ್ರಗಳನ್ನು ಹಾಕಿಕೊಳ್ಳುವುದು, ನಾಲಿಗೆಗೆ ಸೂತ್ರವನ್ನು ಹಾಕುವ, ಬಾಯಿ ಬೀಗ ಹಾಕುವ ಪವಾಡ, ಮರುಗನ ಉತ್ಸವದಲ್ಲಿ ಭಕ್ತರು ಬೆನ್ನಿಗೆ ಕಬ್ಬಿಣದ ಸರಪಳಿ ಹಾಕಿಕೊಂಡು ವಾಹನಗಳನ್ನು, ರಥಗಳನ್ನು ಎಳೆಯುವುದು, ನಾಲಿಗೆಯ ಮೇಲೆ ಕರ್ಪೂರವನ್ನು ಬೆಂಕಿಯಿಂದ ಹಚ್ಚಿಕೊಂಡು ಕುಣಿಯುವುದು, ಸುಡುತ್ತಿರುವ ಎಣ್ಣೆಯಲ್ಲಿ ಕೈ ಅದ್ದುವುದು, ಕುತ್ತಿಗೆಯ ಭಾಗಕ್ಕೆ ಕತ್ತಿಯಿಂದ ಹೊಡೆದುಕೊಳ್ಳುವುದು, ಚಿಕ್ಕ ಮಕ್ಕಳು ಐದಾರು ತಾಸು ದೇವರ ಮುಂದೆ ಎಚ್ಚರ ತಪ್ಪಿ ಬೀಳುವುದು, ಬಲ ಅಂಗೈಯಲ್ಲಿ ಕರ್ಪೂರವನ್ನು ಹಚ್ಚಿ ಬೆಳಗುವುದು. ಇವೆಲ್ಲ ಪವಾಡಗಳಾಗಿ ಕಂಡುಬರುತ್ತವೆ. ಅಂತೆಯೇ ಹೊಸೂರಿನ ಹೊಸೂರಮ್ಮ ಜಾತ್ರೆಯಲ್ಲಿ ಬಹುಮುಖ್ಯವಾಗಿ ಎರಡು ಪವಾಡಗಳು ಕಂಡು ಬರುತ್ತವೆ.

ಹೊಸೂರಮ್ಮ ತನ್ನನ್ನು ನಂಬಿದಂತಹ ಭಕ್ತರಿಗೆ ವರಗಳನ್ನು ನೀಡುವ ಸಲುವಾಗಿ ಪವಾಡದ ಮೂಲಕ ತನ್ನ ಶಕ್ತಿಯನ್ನು ತೋರಿಸುತ್ತಾಳೆ ಎಂಬುವುದು ಹೊಸೂರಮ್ಮ ದೇವಿಯ ಭಕ್ತರ ನಂಬಿಕೆಯಾಗಿದೆ. ಜಾತ್ರೆಯ ಸಂದರ್ಭದಲ್ಲಿ ಈ ಪವಾಡವನ್ನು ವೀಕ್ಷಿಸಲು ಬೇರೆ ಬೇರೆ ಊರುಗಳಿಂದ ಆಕೆಯ ಅಸಂಖ್ಯಾತ ಭಕ್ತರು ಅಂದು ಅಲ್ಲಿ ಸೇರಿರುತ್ತಾರೆ.

ಬಾಳೆದಂಡಿಗೆ ಪವಾಡ

ಬಾಳೆದಂಡಿಗೆ ಪವಾಡವೆಂದರೆ, ಬಾಳೆ ದಿಂಡಿಯ ಜೊತೆಗೆ ನಾಲ್ಕು ಗಟ್ಟಿಯಾದ ಕಬ್ಬುಗಳನ್ನು ಸೇರಿಸಿ ಕಟ್ಟಲಾಗುತ್ತದೆ. ಅದರ ಮೇಲೆ ಬಾಳೆ ಎಲೆಗಳನ್ನು ಮತ್ತು ಹೂವುಗಳನ್ನು ಸುತ್ತಿ ಜೋಡಿಸಲಾಗುತ್ತದೆ. ಇದನ್ನು ಪವಾಡದ ಹಿಂದಿನ ದಿನವೇ ಸಿದ್ಧಗೊಳಿಸಲಾಗುತ್ತದೆ. ಪವಾಡದ ದಿನದಂದು ಬೆಳಿಗ್ಗೆ ಮೂರು ಘಂಟೆಗೆ ಪೂಜಾರಿಯೊಂದಿಗೆ ಭಕ್ತರು ವಾದ್ಯಗಳ ಜೊತೆಗೆ ನದಿಗೆ ಹೋಗುತ್ತಾರೆ. ಪೂಜಾರಿಯ ಸ್ನಾನವಾದ ನಂತರ ಆತನ ಮುಖಕ್ಕೆ ಕುಂಕುಮವನ್ನು ಹಚ್ಚಲಾಗುತ್ತದೆ. ಇದು ದೇವಿಯ ಉಗ್ರ ಸ್ವರೂಪವೆಂಬುದು ಗ್ರಾಮಸ್ಥರ ಅನಿಸಿಕೆಯಾಗಿದೆ. ನದಿಯಲ್ಲಿ ಗಂಗೆ ಪೂಜೆ ನಂತರ ವಾದ್ಯಗಳೊಂದಿಗೆ ದೇವಾಲಯಕ್ಕೆ ಬರಲಾಗುತ್ತದೆ. ನಂತರ ಬಾಳೆದಂಡಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ನಂತರ ಪೂಜಾರಿಯು ಬಾಳೆದಂಡಿಗೆಯನ್ನು ಏರಿ ಕುಳಿತುಕೊಳ್ಳುತ್ತಾನೆ. ಅದನ್ನು ಇಬ್ಬರು ಮುಂದೆ ಮತ್ತು ಇಬ್ಬರು ಹಿಂದೆ ಹೊತ್ತುಕೊಳ್ಳುವರು ಆಗ ದೇವಾಲಯದಲ್ಲಿ ಸೇರಿರುವ ಎಲ್ಲರೂ “ಉದೋ ಉದೋ” ಎಂದು ಉಧೋ ಹಾರುತ್ತಾರೆ. (ಜೋರಾಗಿ ಕೂಗುತ್ತಾರೆ). ಇಡೀ ದೇವಸ್ಥಾನವನ್ನು ಮೂರು ಬಾರಿ ಪ್ರದಕ್ಷಿಣೆ ಹಾಕುತ್ತಾರೆ. ಇದನ್ನು ಭಕ್ತರು ದೇವಿಯ ಮಹಿಮೆ ಎಂದೇ ನಂಬುತ್ತಾರೆ. ನಂತರ ಗರ್ಭಗುಡಿಯಲ್ಲಿ ಪೂಜಾರಿಯನ್ನು ಬಾಳೆದಂಡಿಗೆಯಿಂದ ಕೆಳಗಿಳಿಸುತ್ತಾರೆ. ಇದಕ್ಕೂ ಮೊದಲು ಹೊಸೂರಮ್ಮ ದೇವಿಯ ತಲೆಯ ಮೇಲೆ ೯ ಹೂವಿನ ಹುಂಡಿಗಳನ್ನು ಇಟ್ಟಿರುತ್ತಾರೆ. ಅವುಗಳು ದೇವಿಯ ತಲೆಯ ಮೇಲಿಂದ ಬೀಳುವಂತೆ ಭಕ್ತರು ಸುಮಾರು ಬೆಳಿಗ್ಗೆ ೪ ಘಂಟೆಗೆ ದೇವಿಯ ಮೊರೆ ಹೋಗುವರು. ಇದರಿಂದ ದೇವಿಯ ಪವಾಡಗಳು ಸುಗಮವಾಗಿ ನಡೆಯುತ್ತವೆಂಬ ನಂಬಿಕೆ ಜನಪದರಲ್ಲಿದೆ. ಇವುಗಳು ದೇವಿಯ ಪ್ರಸಾದವೆಂದು ಭಕ್ತರು ಭಾವಿಸುತ್ತಾರೆ.

ಅಗ್ನಿಕುಂಡ ಮತ್ತು ಪಾಯಸ

ಜನಪದರು ಸೇರಿ ಭಕ್ತಿ – ಶ್ರದ್ಧೆ ಹರಕೆಯ ರೂಪದಲ್ಲಿ ಆಚರಿಸುವ ವಿಶಿಷ್ಟ ಪದ್ಧತಿ ಅಗ್ನಿಕುಂಡವಾಗಿದೆ. ಕೊಂಡ ಹಾಯುವುದು, ಕಿಚ್ಚು ತುಳಿಯುವುದು, ಕೆಂಡ ಹಾಯುವುದು ಎಂದು ಇದನ್ನು ಕರೆಯುವ ವಾಡಿಕೆ ಇದೆ. ಪ್ರತಿ ವರ್ಷ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಈ ಆಚರಣೆ ಕಂಡು ಬರುತ್ತದೆ. ದೇವರುಗಳ ಗುಡಿಯ ಮುಂದೆ ನಾಲ್ಕು ಐದು ಅಡಿ ಆಳದ ಮತ್ತು ನಾಲ್ಕಾರು ಮಾರು ಉದ್ದದ ಗುಂಡಿಯೇ ಕೊಂಡ ಹಾಯುವ ಸ್ಥಳ. ಇದು ಹೊಸೂರಿನಲ್ಲಿ ಶಾಶ್ವತ ನಿರ್ಮಾಣವಾದ ಕೊಂಡವಾಗಿದೆ. ಅದಕ್ಕೆ ಅಗ್ನಿ ಸ್ಪರ್ಶ ಮಾಡಿ, ಸೌದೆಗಳನ್ನು ಸಂಪೂರ್ಣ ಕೆಂಡದ ರೂಪದಲ್ಲಿ ಸುಡುವ ತನಕ ಜಾಗರೂಕತೆಯಿಂದ ಇದರ ನಿರ್ವಹಣೆ ಮಾಡುತ್ತಾರೆ.

          ಕೆಂಡಾದ ಮೇಲೆ ಸಹಸ್ರಾರು ಭಕ್ತರು
          ಬಂಡಿಯ ತುಂಬ ಕಟ್ಟಿಗೆ| ತಾರೇ
          ಎಲ್ಲರೂ ಅಗ್ಗಿ ತುಳಿಯೋಣ

ಎಂದು ಅಗ್ನಿ ತುಳಿಯುವುದಕ್ಕೆ ಸಂಬಂಧಪಟ್ಟಂತೆ ಜನಪದರು ಅದಕ್ಕೆ ಸಮಂಜಸವಾದಂತಹ ತ್ರಿಪದಿಗಳನ್ನು ಹೇಳಿದ್ದು ಜಾನಪದ ಸಾಹಿತ್ಯದ ಹಿರಿಮೆಯು ಹೆಚ್ಚಿದಂತಾಗಿದೆ.

ಅಗ್ನಿ ಕೊಂಡ ಕಾರ್ಯಕ್ರಮವು ರಾತ್ರಿ ೧೦ ಘಂಟೆಯಿಂದ ಪ್ರಾರಂಭವಾಗುತ್ತದೆ. ಒಂದು ಬಂಡಿ ಕಟ್ಟಿಗೆಯನ್ನು ಹೊಂಡದಲ್ಲಿ ಕ್ರಮವಾಗಿ ಜೋಡಿಸಲಾಗುತ್ತದೆ. ಗಂಧದ ಕಟ್ಟಿಗೆಯ ಚಿಕ್ಕ ಚಿಕ್ಕ ತುಂಡುಗಳಿಗೆ ಬಟ್ಟೆಯನ್ನು ಸುತ್ತಿ ಅದನ್ನು ತೆಗೆದುಕೊಂಡು ಹೋಗಿ ಹೊಸೂರಮ್ಮ ದೇವಿಯ ಗರ್ಭಗುಡಿಯಲ್ಲಿ ಉರಿಯುತ್ತಿರುವ ದೀಪದ ಸಹಾಯದಿಂದ ಅಗ್ನಿಕೊಂಡಕ್ಕೆ ಚಾಲನೆ ಕೊಡಲಾಗುತ್ತದೆ. ಹೊಸೂರಮ್ಮ ದೇವಾಲಯದ ಎಡಭಾಗದಲ್ಲಿರುವ ಸಿಡಿಕಟ್ಟೆಯ ಮೇಲೆ ರಾತ್ರಿ ಸಮಯದಲ್ಲಿ ಒಂದು ಕಂಬಳಿಯನ್ನು ಹಾಸಿ ಅದರ ಮೇಲೆ ಒಂದು ಸೇರು ಪಾವು ಅಕ್ಕಿಯನ್ನು ಹಾಕಿ “ಪಾಯಸ” ಬೇಕಾಗಿರುವ ಹೊಸ ಗಡಿಗೆಯನ್ನು ಅಕ್ಕಿಯ ಮೇಲಿಟ್ಟು ಪೂಜೆ ಮಾಡಲಾಗುತ್ತದೆ. ಬೆಳಿಗ್ಗೆ ಮೂರು ಘಂಟೆಯ ಸಮಯದಲ್ಲಿ ಪೂಜಾರಿ ಭಕ್ತರನ್ನೊಳಗೊಂಡಂತೆ ನದಿಗೆ ಹೋಗಿ ಅಲ್ಲಿ ಸ್ನಾನ ಮಾಡಿ ನಂತರ ಗಂಗೆಯ ಪೂಜೆ ನೆರವೇರಿಸಿ, “ಪಾಯಸ ಪವಾಡ”ದ ಅಕ್ಕಿಯನ್ನು ನದಿಯಲ್ಲಿ ತೊಳೆದು ಗಡಿಗೆಯಲ್ಲಿ ಹಾಕಿಕೊಂಡು ಹೊತ್ತುಕೊಂಡು ಬರುತ್ತಾರೆ. ಅಲ್ಲದೇ ಹೊಸೂರಮ್ಮ ದೇವಿಗೆ ಪ್ರಸಾದ ಕೊಡುವ ಕಾರ್ಯಕ್ರಮ ಬೆಳಗ್ಗೆ ನಾಲ್ಕು ಘಂಟೆಗೆ ಪ್ರಾರಂಭವಾಗುತ್ತದೆ. ದೇವಿಯ ಪ್ರಸಾದವೆಂದು ಮೂಡಗೇರಿಸಲಾದ ಹೂಗಳನ್ನು ಒಂಬತ್ತು ಬಾರಿ ನೀಡುತ್ತಾಳೆ. ಬೆಳಗ್ಗೆ ಐದು ಘಂಟೆಯ ಸಮಯದಲ್ಲಿ ದೇವಾಲಯದ ಮುಂದೆ ಪಾಯಸ ಪವಾಡ ಕೂಡ ನಡೆಯುತ್ತದೆ. ಮೂರು ಗುಂಡು ಕಲ್ಲುಗಳ ಮೇಲೆ ಗಡಿಗೆಯನ್ನು ಇಟ್ಟು ಅಕ್ಕಿಯಿಂದ ಪಾಯಸವನ್ನು ಸಿದ್ಧಪಡಿಸಲಾಗುತ್ತದೆ. ಕುದಿಯುತ್ತಿರುವ ಪಾಯಸದ ಗಡಿಗೆಯೊಳಗೆ ಪೂಜಾರಿಯು ಎರಡು ಕೈಗಳನ್ನಿಟ್ಟು ತಿರುವುತ್ತಾನೆ. ಅದಕ್ಕೆ ಮುಂಚೆ ದೇವಿಯ ಹೂ ಕೇಳಲಾಗುತ್ತದೆ.

ಕುದಿಯುತ್ತಿರುವ ಪಾಯಸವನ್ನು ಬೊಗಸೆಯಿಂದ ಮೂರು ಬಾರಿ ಹೊರ ತೆಗೆದು ದೊಡ್ಡ ಪಾತ್ರೆಯಲ್ಲಿ ಹಾಕುತ್ತಾನೆ. ಅದನ್ನೇ ದೇವತೆಗೆ ನೈವೇಧ್ಯವಾಗಿ ಅರ್ಪಿಸಲಾಗುತ್ತದೆ. ಈ ಪವಾಡವನ್ನು ವೀಕ್ಷಿಸಲು ಸಾವಿರಾರು ಭಕ್ತರು ನೆರೆದಿರುತ್ತಾರೆ. ದೇವಿಗೆ ನೈವೇದ್ಯ ಅರ್ಪಿಸಿದ ಪಾಯಸ ಪ್ರಸಾದವನ್ನು ನಂತರ ಭಕ್ತರಿಗೆ ಹಂಚಲಾಗುತ್ತದೆ. ಅವರು ತಮ್ಮ ತಮ್ಮ ಮನೆಗಳ ಹಾಗೂ ಸರ್ವರಿಗೆ, ಮಕ್ಕಳಿಗೆ ಹಂಚಿದ ನಂತರ ತಮ್ಮ ಇತರರಿಗೆ ತಿನ್ನಿಸುತ್ತಾರೆ. ಅಲ್ಲದೇ ಹೊಲಗದ್ದೆಗಳಿಗೆ ಒಂದೆರಡು ಅನ್ನದ ಅಗಳನ್ನು ಹಾಕುತ್ತಾರೆ. ಇದರ ಉದ್ದೇಶವಿಷ್ಟೇ ಫಸಲು ಹುಲುಸಾಗಿ ಬರಲೆಂಬುದಾಗಿರುತ್ತದೆ. ಪಾಯಸ ಸೇವಿಸಿದ ನಂತರ ಅಗ್ನಿಕುಂಡ ಪ್ರವೇಶ ಜರುಗುತ್ತದೆ. ಸುಮಾರು ಬೆಳಗ್ಗೆ ೬ ಘಂಟೆಗೆ ಈ ಕಾರ್ಯಕ್ರಮ ನಡೆಯುತ್ತದೆ. ಮೊದಲು ಪೂಜಾರಿಯು ಅಗ್ನಿಯನ್ನು ಪ್ರವೇಶ ಮಾಡುತ್ತಾರೆ. ತದನಂತರ ಇಷ್ಟಾರ್ಥ ಭಕ್ತರು ಸಹ ಅಗ್ನಿಯನ್ನು ತುಳಿಯುತ್ತಾರೆ. ಬಾಳೆದಂಡಿಗೆ, ಪಾಯಸ ಮತ್ತು ಅಗ್ನಿಕುಂಡ ಎಂಬ ಮೂರು ಪವಾಡಗಳು ಭಕ್ತಾದಿಗಳ ಮನದಲ್ಲಿ ಅವರ್ಣನೀಯವಾದವುಗಳಾಗಿವೆ. ಜಾತ್ರೆಗೆ ಭಕ್ತರು ಕರ್ನಾಟಕ, ಆಂಧ್ರ, ಮಹಾರಾಷ್ಟ್ರಗಳಿಂದ ಬರುತ್ತಾರೆ. ಶ್ರೀ ದೇವಿಯ ದರ್ಶನ ಪಡೆದು ಪುನೀತರಾಗುವರು. ಜಾತ್ರೆಯ ಕಡೆಯ ದಿನ ಕಂಕಣ ವಿಸರ್ಜನೆ, ಸಂಪ್ರೋಷಣೆ ಮತ್ತು ಶ್ರೀ ಪವಾಡದ ಆಂಜನೇಯ ಸ್ವಾಮಿಯ ರಥೋತ್ಸವ ಜರುಗುವುದು. ಸಡಗರ ಸಂಭ್ರಮಕ್ಕೆ ಎಣೆಯಲ್ಲದೆ ಈ ಜಾತ್ರೆ ಅರ್ಥಪೂರ್ಣವಾಗಿ ನಡೆಯುತ್ತದೆ. ಒಟ್ಟಾರೆಯಾಗಿ ಹೊಸಪೇಟೆಯ ಹೊಸೂರು ಗ್ರಾಮದ ಹೊಸೂರಮ್ಮ ಭಕ್ತರ ಪಾಲಿಗೆ ಅಚ್ಚುಮೆಚ್ಚಿನ ದೇವತೆಯಾಗಿ ಹೊರ ಹೊಮ್ಮಿದ್ದಾಳೆ.

ಹೊಸೂರಮ್ಮ ದೇವತೆಗೆ ಸಂಬಂಧಿಸಿದ ಜನಪದರ ಸೋಭಾನ ಪದಗಳು ಇಂದಿಗೂ ಭಕ್ತರ ಮನದಲ್ಲಿ ಮನೆಮಾಡಿವೆ. ಅವುಗಳು ಈ ಕೆಳಗಿನಂತಿವೆ,

ಏನೆಂದು ಹಾಡಲಿ

ಏನೆಂದು ಹಾಡಲೀ ಏನೆಂದು ಕೇಳಿರೀ
ಏನೆಂದು ಧನೀಯ ತೆಗೆಯಲೀ
ಏನೆಂದು ಧನೀಯ ತೆಗೆಯಲಿ ಹೊಸಪೇಟೆ
ಗ್ಯಾನವಂತೆ ಹೊಸೂರವ್ವಾನಾ ಗುಡುಯಾಗೇ ಸೋ ||
ಯಂತೆನ್ನ ಹಾಡಲಿ, ಯಂತೆನ್ನಾ ಕೇಳಿರೀ
ಯಂತೆನ್ನಾ ಧನೀಯ ತೆಗೆಯಲೀಸೋ ||
ಯಂತೆನ್ನಾ ಧನೀಯ ತೆಗೆಯಲಿ ಹೊಸಪೇಟೆ
ಮಂತ್ರಿ ಹೊಸೂರಮ್ಮನಾ ಮಠುದಾಗೇಸೋ ||
ಅವನೋಡಾ ಸೀಮೇ ಕಾವಲಾ ಮಾಡವ್ವಾ ನಡೆ ನಿಮ್ಮ ನಾಡಿಗೆ
ನಾಡ ಸೀಮೆ ಒಳವವ್ವಾ, ಬಾ ನಮ್ಮಸೀಮಿಗೆ ಸೋ ||
ನಾಡ ಸೀಮೆ ಒಳವವ್ವಾ, ಬಾ ನಮ್ಮಸೀಮಿಗೆ
ಇವನೋಡಾ ಸೀಮೆ ಒಳವವ್ವಾ, ದೇವರ ನಡೆ ನಿಮ್ಮಿನಾಡಿಗೆಸೋ ||
ಅವಳ ಮಣಿಕದೊಡಿಯಕ್ಕಿ, ಬಾ ನಮ್ಮಿ ಸೀಮೆಗೆ
ಹತ್ತು ಓಳಸೀಮೇ...ಕತ್ತಲ ಮಾಡವ್ವಾ ನಡಿ ನಮ್ಮಿನಾಡಿಗೆಸೋ ||
ಇತ್ತಳಾ ಸೀಮೇಒಳವವ್ವಾ ಬಾನಮ್ಮೀಸೀಮಿಗೆ
ಇತ್ತಳಾ ಸೀಮೇ ಒಳವವ್ವಾ….. ಬಾ ನಮ್ಮಿ ಸೀಮಿಗೆಸೋ ||
ಇತ್ತ ಒಳಸೀವೇ ಒಳವವುಂಟುವ ದೇವರ ನಡೆ ನಿಮ್ಮಿನಾಡಿಗೆ
ಮುತ್ತಿನ ಕೆಂಜುಯವವ್ವಾ ಹೊಸೂರಮ್ಮ ಬಾ ನಮ್ಮಿಸೀಮೆಗೆ…..ಸೋ ||
ಮುತ್ತಿನ ಕೆಂಜಡಿಯವವ್ವಾ ಗರತಿ ಹೊಸೂರವ್ವಾ ನಡೆನಿಮ್ಮಿ ನಾಡಿಗೆ
ಆಗಲೇ ನಾ ಪೂಜೆ ವತ್ತಾಗಲೇ ಬಾ ನಮ್ಮಿಸೀಮಿಗೆ ಸೋ ||
ಆಗಲೇ ನಾ ಪೂಜೆ ವತ್ತಾಗಲೇ ಬಾ ನಮ್ಮಿಸೀಮಿಗೆ ಸೋ ||
ಅವಳದ ಕೆಂಜಡಿಯವ್ವಾ ಹೊಸೂರವ್ವಾ ಬಾ ನಮ್ಮಸೀಮಿಗೆ
ಉತ್ತುತ್ತಿ ಪೂಜೆ ಒದಗಾಲಿ, ನಾ ನಮ್ಮಿಸೀಮಿಗೆ ಸೋ ||
ಏನೆಂದು ಧನಿಯ ತೆಗಿಯಲಿ ಹೊಸಪ್ಯಾಟೆ
ಏನೆಂದು ಧನಿಯ ತೆಗಿಯಲೀಸೋ ||

ಹೂವ ಹುಲಿಗೇರಿ ಹೊಸುರವ್ವಾ

ಹೂವ ಹೂವೆಂದರೆ ಹೂವಲ್ಲಿ ಜರಿಯುವೆ
ಹೂವು ಪುಲಿಗೇರಿ ಹೊಸುರವ್ವಾ ಬಾ ಹೂವೆ….ಸೋ ||
ಹೂವೇನು ಹುಲಿಗೇರಿ ವನದಾಗೆ ಪೂಜಾರಿ
ಹೂವಗೊನವವಾ ತಿರಿಗ್ಯಾಳೆ ಬಾ ಹೂವೆ…. ಸೋ ||
ಮಗ್ಯ ಮಗ್ಯಂದಾರೆ ಮಗ್ಗಿಲೀ ದಾರಿಯಾಗ
ಮಗ್ಗಿ ಮದುಗೇರಿ ವನದಾಗೆ ಬಾ ಹೂವೆ
ಮಗ್ಗಿ ಮದುಗೇರಿ ವನದಾಗೆ ಬಾ ಹೂವೆ….. ಸೋ ||
ಮಗ್ಗಿ ಮದುಗೇರಿ ವನದಾಗೇ ಪೂಜಾರಿ
ಮಗ್ಗಿ ಗೊನವನವಾ, ತಿಂಗ್ಯನೇ ಬಾ ಹೂವೆ…. ಸೋ ||
ಕಾಯಿ, ಕಾಯೆಂದಾರೇ ಕಾಯಲಿದಾರಿಯವೇ
ಕಾಯಿ ಕನಗೇರಿ ವನದಾಗೇ ಬಾ ಹೂವೆ…. ಸೋ ||
ಕಾಯಿ ಕನಗೇರಿ ವನದಾಗೇ ಬಾ ಹೂವೆ…. ಸೋ ||
ಹೊಸುರವ್ವಾನ ಪೂಜೆ ಹೂವವಾ ಮಡಿಸೀರೀ….
ಹೂವು ಹುಲಿಗೇರಿ ಹೊಸುರವ್ವಾ ಬಾ ಹೂವೆ….ಸೋ ||

ನಮ್ಮವ್ವ ಹೊಸೂರವ್ವಾ

ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವ ಹೊಸುರವ್ವಾ ಹೂ ನಾಗೆ ಚೆಂಡಾಡ್ಯಾಳೆ ಸೋ ||
ನಮ್ಮವ್ವ ಹೊಸುರವ್ವಾ ಹೂನಾಗೆ ಚೆಂಡಾಡ್ಯಾಳೆ ಸೋ ||
ಕರಿಯಾ ಅಂಚಿನಿ ಸೀರಿ ಸರಗೆಲ್ಲಾ ಜರುತಾರ
ತುಂಗ ನದಿಯಲಿ ಜಳಕಾವೇ
ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವ ಹೊಸುರವ್ವಾ ಹೂ ನಾಗೆ ಚೆಂಡಾಡ್ಯಾಳೆ….. ಸೋ ||
ತುಂಗಾನದಿಯಲಿ ಜಳಕ ಮಾಡವಾಕಿ ಹೊಸುರವ್ವಾನಾವದೆಳೆ….
ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವ ಹೊಸುರವ್ವಾ ಹೂ ನಾಗೆ ಚೆಂಡಾಡ್ಯಾಳೆ….. ಸೋ ||
ಕೆಂಪಾ ಹರಿಸಿನ ಸೀರಿ ಅಂಚೆಲ್ಲಾ ಜರತಾರ
ತಂಪಾದ ತಪಿಲಿ ಹೊಸುರವ್ವಾ ನೆನೆದೆನೆ…..
ನಮ್ಮವ್ವ ಹೊಸುರವ್ವಾ ಹೂ ನಾಗೆ ಚೆಂಡಾಡ್ಯಾಳೆ….. ಸೋ ||
ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವ ಹೊಸುರವ್ವಾ ಹೂ ನಾಗೆ ಚೆಂಡಾಡ್ಯಾಳೆ….. ಸೋ ||
ಗುಡ್ಡ ಗುಡ್ಡಾಕೆ ಡೊಳ್ಳೆ ಡಪ್ಪೆಂದು ಬಡಿದಾಗ
ಒಬ್ಬಕಿ ನಮ್ಮವ್ವಾ ಹೊಸುರವ್ವಾ ಬರುವಾಗ
ಬಾಲ ಮಕ್ಕಳು ಆಡ್ಡನಿಲ್ಲದಿರೇ….. ಸೋ ||
ಶುಕ್ರವಾರ ದಿನಾ ಗಿರಿಮ್ಯಾಲೆ ಪೂಜೆ
ಹೊಸೂರವ್ವಾನಕಿಚ್ಯಿನಾ ಪೂಜೆ
ಕೆಚ್ಚಿನಾರ್ಯಾಳೆ ಭಕುತಾರ ದಿಟ್ಟಿಸಿ ನೋಡ್ಯಾಳೇ…. ಸೋ ||
ಬಾಳೆದಂಡಿಗ್ಯಾವ್ವ ನಿನ್ನ ಬಾಳನಂಬಿದೇನೇ
ಹೊಸೂರವ್ವಾ ಅಮ್ಮ ಬಾಳೆ ನಂಬಿದೇನೆ…. ಸೋ ||
ಉಧೋ…. ಉಧೋ ಅಂಬುತ್ತಾ ಹೊಸೂರವ್ವಾನ ನೆನೆಯುತ್ತಾ….
ಯಾಕು ಬಂದರ್ಯಾರು ಬಲ್ಲಾರೆ
ನಮ್ಮವ್ವ ಹೂ ಸೂರವ್ವಾ ಹೂನಾಗೆ ಚೆಂಡಾಡ್ಯಾಳೇ….. ಸೋ ||

ನಡಿತಾಯಿ ಹೋಗೋಣಾ…..

ನಡಿತಾಯಿ ನಡಿ ಹೋಗೋಣ
ರಾಜ್ಯದ ಮ್ಯಾಲ ವಡಿಬಂಟಿ ಗುಡಿಗೋಗೂನಾ ಸೋ ||
ಈಗತ್ವನೇ ನಿನ್ನ ಕರೆದೇನೇ ಹೂಸೂರವ್ವಾನಾ
ಯಾಲಕ್ಕಿ ಮಠದ ಶರಣೋಳೇ….
ನಡಿ ತಾಯಿ ನಡಿ ಹೋಗೋಣ
ರಾಜ್ಯ ಮ್ಯಾಲ ವಡಿಬಂಡಿ ಗುಡಿ ಹೋಗೂನಾ…. ಸೋ ||
ತುಪ್ಪಾವಾ ಹಚ್ಚಿರಿ, ವಸ್ತೀಲಿ ಸಳಗೊಟ್ಟರೀ
ಹೂವಿನ ಹರವೀಲಿ ಮಲ್ಲಿಗೆ ಚೆಲ್ಲಿರೀ
ನಡಿ ತಾಯಿ ನಡಿ ಹೋಗೋಣ
ರಾಜ್ಯದ ಮ್ಯಾಲ ವಡಿಬಂಡಿ ಗುಡಿಗೋಗೂನ…. ಸೋ ||
ಚೆಂದದ ಮಲ್ಲಿಗೆ ಹರವೀರೀ
ಹೂಸೂರವ್ವಾನಾ ಗಂಗಿಗೀ ಹೋಗಿ ಬರುತ್ತಾಳೋ…..
ನಡಿತಾಯಿ ನಡಿ ಹೋಗೋಣ
ರಾಜ್ಯ ಮ್ಯಾಲ ವಡಿಬಂಡಿ ಗುಡಿಗೋಗೋನಾ…. ಸೋ ||
ತಾಯಿನನ್ನ ಗ್ಯಾನ ನಿನಮ್ಯಾಲೆ
ನಾನೊಂದು ನಾಡ ಮನದರಿಯೇ….
ನಡಿತಾಯಿ ನಡಿ ಹೋಗೋಣ
ರಾಜ್ಯದ ಮ್ಯಾಲ ವಡಿಬಂಡಿ ಗುಡಿಗೋಗೋನಾಸೋ ||
ನಾನೇ ವಂದನಾಡ ಮನದರಿಯೇ…..
ಹೂಸೂರವ್ವಾ ನೀಲಾದೊತ್ತಿಗೆ ಕಯೇ ಮಾಡೇ
ನಡಿ ತಾಯಿ ನಡಿ ಹೋಗೋಣ
ರಾಜ್ಯದ ಮ್ಯಾಲ ವಡಿಬಂಡಿ ಗುಡಿಗೋಗೋಣ…. ಸೋ ||
ಗಾಳ್ಯಾಗ ಧೂಳ್ಯಾಗಾ ಹೊಸೂರಮ್ಮ ಬರುತ್ತಾಳೆ
ಬಾಲರೆದಿರೀಗಿ ನಿಲ್ಲದದೀರೇ….
ನಡಿ ತಾಯಿ ನಡಿ ಹೋಗೋಣ
ರಾಜ್ಯದ ಮ್ಯಾಲ ವಡಿಬಂಡಿ ಗುಡಿಗೋಗೋಣಸೋ ||