ಪ್ರಕೃತಿಯಲ್ಲಿನ ಪದಾರ್ಥಗಳನ್ನು ಎಲ್ಲ ಜೀವಿಗಳೂ ತಮ್ಮ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬಳಸುವುದು ನಡೆದುಬಂದಿದೆ. ಮಾನವನ ಮಟ್ಟಿಗೆ, ಇಂದಿನ ವಿಜ್ಞಾನ ಮತ್ತು ತಾಂತ್ರಗಳಿಂದಾಗಿ ಇದು ಎಂದೂ ಇಲ್ಲದಷ್ಟು ಉತ್ತರೋತ್ತರವಾಗಿ ಬೆಳೆದಿದೆ. ಶಿಲಾಯುಗದಿಂದ ಪ್ಲಾಸ್ಟಿಕ್‌ಯುಗದವರೆಗೆ ಇದರ ಬೆಳವಣಿಗೆಯಾಗುತ್ತಲೇ ಬಂದಿದೆ. ನಾನೋ ತಾಂತ್ರದಿಂದಾಗಿ ಹೊಸ ಆಯಾಮದ ಪದಾರ್ಥಗಳು ಬಳಕೆಗೆ ಬರುತ್ತಿವೆ.

ಹೀಗೆ ಪದಾರ್ಥಗಳ ಮೊದಲ ಬಳಕೆ ಬಹುಶಃ ಹತಾರಗಳ ರೂಪದಲ್ಲಿ ಇರಬಹುದು. ಹತಾರ ಬಳಸಬೇಕಾದರೆ, ಎಷ್ಟೇ ಪ್ರಾಚೀನ ಮಾನವನಾಗಿದ್ದರೂ ಅವನಿಗೆ ಅದರ ಬಳಕೆಯ ಬಗೆಗೆ ಒಂದು ಎಣಿಕೆ ಇದ್ದಿರಲೇಬೇಕು. ಶಿಲೆಯನ್ನು ಚೂಪುಮಾಡಿ ಒಂದು ಕೊಳ್ಳೆಯನ್ನು ಹೊಡೆಯುವುದಾಗಲೀ ಶಿಲೆಯಿಂದ ಕಾಯಿಯ ಚಿಪ್ಪನ್ನು ಒಡೆಯುವುದಾಗಲೀ, ಈ ಪ್ರಕ್ರಿಯೆಯಿಂದ ಅವನಿಗೆ ಬೇಕಾಗಿರುವ, ದೊರೆಯುವ ಆಹಾರ ಪದಾರ್ಥಕ್ಕಾಗಿ. ಹತಾರವನ್ನು ಬಳಸಲು ತಕ್ಕ ಎಣಿಕೆ ಅಥವಾ ತಾರ್ಕಿಕ ಆಲೋಚನೆ ಇರಬೇಕು ಅಲ್ಲವೇ? ಒಂದು ಮಣ್ಣಿನ ಮುದ್ದೆಯಿಂದ ಒಂದು ಕಾಯಿಯ ಚಿಪ್ಪನ್ನು ಒಡೆಯಲಾಗುವುದೇ? ಇಲ್ಲ. ಹಾಗಾದರೆ ತಾನು ಬಳಸುವ ಹತಾರ ಪದಾರ್ಥದ ಗುಣಗಳನ್ನು ಪ್ರಾಚೀನ ಮಾನವ ತಿಳಿದುಕೊಂಡಿದ್ದ. ಇದನ್ನು ಪದಾರ್ಥ ವಿಜ್ಞಾನ (Material science)ದ ಅಂಕುರ ಎನ್ನಬಹುದು.

ಇರಲಿ. ಹತಾರವನ್ನು ಬಳಸುವ ಜೀವಿ ಮಾನವ ಮಾತ್ರ ಎಂದು ಬೀಗಬೇಕಿಲ್ಲ. ಚಿಂಪಾಜಿ ಸಹ ಹತಾರ ಬಳಸಲು ತನ್ನದೇ ‘ಜ್ಞಾನ’ವನ್ನು ಬಳಸಿಕೊಳ್ಳುತ್ತ ಬಂದಿದೆ. ಒಂದು ಕಡ್ಡಿಯಿಂದ ಗೆದ್ದಲು ಗೂಡನ್ನು ತಿವಿದು, ಒಳಗಿನ ಗೆದ್ದಲು ಹುಳುಗಳನ್ನು ಸೆಳೆದುಕೊಂಡು, ಅದು ತಿನ್ನುತ್ತದೆ. ಈ ಕಡ್ಡಿಯನ್ನು ಎಲ್ಲಿಂದ ಪಡೆಯುತ್ತದೆ, ಗೊತ್ತೆ? ಗಿಡದ ತೆಳು ಕಡ್ಡಿಗಳನ್ನು ಕಿತ್ತು, ಅದರ ಮೇಲಿನ ಎಲೆಗಳನ್ನು ಸವರಿ ಬಳಸುತ್ತದೆ! ದೃಢವಾದ ಹುಲ್ಲಿನ ಎಸಳುಗಳನ್ನೋ, ಎಲೆ ತೆಗೆದ ಗಿಡದ ಕಡ್ಡಿಯನ್ನೋ ಗೆದ್ದಲು ಹುಳುವಿನ ಗೂಡಿನೊಳಕ್ಕೆ ಇಳಿಸಿದಾಗ, ಗೆದ್ದಲು ಹುಳುಗಳು ಇದರ ಮೇಲೆ ಹತ್ತಿಕೊಂಡು ಬರಲಾರಂಭಿಸುತ್ತವೆ. ಆಗ ಅವುಗಳನ್ನು ತೆಗೆದು ಚಿಂಪಾಂಜಿ ತಿನ್ನುತ್ತದೆ. ಚಿಂಪಾಂಜಿ ಇನ್ನೂ ಕೆಲವು ಪದಾರ್ಥಗಳ ಬಳಕೆಯನ್ನು ಕಲಿತಿದೆ.  ತನಗೆ ಬೇಕಾದ ಪದಾರ್ಥವನ್ನು ಜಜ್ಜುವುದಕ್ಕಾಗಿ ಮರ ಅಥವಾ ಕಲ್ಲನ್ನು ಬಡಿಗಲ್ಲಿನಂತೆ(anvil) ಉಪಯೋಗಿಸುತ್ತದೆ. ಕಡ್ಡಿಯನ್ನು ಸನ್ನೆಯಂತೆ ಬಳಸಿ ದ್ವಾರದ ಅಗಲವನ್ನು ಹೆಚ್ಚಿಸಿಕೊಳ್ಳುತ್ತದೆ. ಅಂಟು ಮೇಲ್ಮೈಯಿರುವ ಎಲೆಗಳನ್ನು ಬಳಸಿ ನೊಣಗಳಂತಹ ಕೀಟಗಳನ್ನು ಹಿಡಿಯಲು ಅದಕ್ಕೆ ತಿಳಿದಿದೆ. ತನ್ನ ಮೈಯನ್ನು ಚೊಕ್ಕಗೊಳಿಸಲು, ತನ್ನ ಗಾಯಗಳ ಚಿಕಿತ್ಸೆಗಾಗಿ ನಿರ್ದಿಷ್ಟ ಎಲೆಗಳನ್ನು ಬಳಸಿಕೊಳ್ಳುತ್ತದೆ. ಪ್ರಾಣಿಗಳ ಬಗೆಗೆ ಇಂತಹ ಇನ್ನೂ ನಿದರ್ಶನಗಳಿವೆ. ಹಕ್ಕಿಗಳು ಕಪ್ಪೆ ಚಿಪ್ಪನ್ನು ಎತ್ತರದಿಂದ ಬಂಡೆಯ ಮೇಲೆ ಅಪ್ಪಳಿಸಿ, ಅದು ತೆರೆದುಕೊಂಡಾಗ ಒಳಗಿನದನ್ನು ಮುಕ್ಕುತ್ತವೆ. ಹಕ್ಕಿಗಳು ಹಾಲಿನ ಬಾಟಲಿಗಳ ಮೆದು ಮುಚ್ಚಳಗಳನ್ನು ಕೊಕ್ಕಿ, ತೆಗೆದು ಮೇಲಿನ ಕೆನೆಯನ್ನು ಸವಿದಿರುವುದು ತಿಳಿದಿದೆ. ಮರಳು ಬೆರೆತ ಬೀಜಗಳನ್ನು ನೀರಿಗೆಸೆದು, ಬೀಜಗಳು ತೇಲುವಾಗ ಅವುಗಳನ್ನು ತೆಗೆದು ತಿನ್ನಲು ಕಪಿಗಳಿಗೆ ಗೊತ್ತಿದೆ.

ಇದರಿಂದ ಪದಾರ್ಥ ವಿಜ್ಞಾನ ಎಂಬುದು ಎಷ್ಟು ವ್ಯಾಪಕ ವಿಷಯ ಎಂಬುದನ್ನು ತಿಳಿಯಬಹುದು.  ಅತಿ ಸರಳವಾದ ಸಾಧನವನ್ನು ಬಳಸಬೇಕಾದರೂ ಆ ಪದಾರ್ಥ ಎಂಥದು ಎಂಬುದು ತಿಳಿದಿರಬೇಕು.

ಈ ನಿದರ್ಶನಗಳು ಏನೇ ಇದ್ದರೂ ಪದಾರ್ಥಗಳ ಬಳಕೆಯಲ್ಲಿ ಮನುಷ್ಯ ನಿಸ್ಸೀಮನಾಗಿದ್ದಾನೆ.  ಪ್ರಾಚೀನ ಕಾಲದಲ್ಲಿ ಕಲ್ಲುಗಳನ್ನು ಅವನು ಬಳಸುತ್ತಿದ್ದ ರೀತಿನೋಡಿದರೆ ಅವುಗಳ ಸಾಮರ್ಥ್ಯದ ಗರಿಮೆ ಅವನಿಗೆ ತಿಳಿದಿದ್ದಿತು. ಎರಡೂ ಕಡೆ ಹರಿತವಾದ ಅಂಚಿನ ಶಿಲಾಯುಧದ ಬಗೆಗೆ ತಿಳಿದಿದೆ. ಇವು ಅವುಗಳಿಗೆ ಹಿಂದಿನ ಅಷ್ಟು ನಾಜೂಕಲ್ಲದ ಕಲ್ಲಿನ ಆಯುಧಗಳಿಗಿಂತ ಹೆಚ್ಚು ಸಂಕೀರ್ಣವಾದವು.

ಆಧುನಿಕ ಮಾನವನನ್ನು ಹೋಲುವ ಮಾನವಸಂತತಿ ಸುಮಾರು 1,30,000ವರ್ಷಗಳ ಹಿಂದೆ ಆಫ್ರಿಕದಲ್ಲಿ ಆರಂಭವಾಯಿತು ಎಂದು ತಿಳಿಯಲಾಗಿದೆ. ಇಲ್ಲಿಂದ ಮುಂದೆ ಹತಾರ ಪದಾರ್ಥಗಳ ಬಳಕೆ ಬಹಳವೇ ಸುಧಾರಿಸಿತು. ಬೆಣಚು ಕಲ್ಲನ್ನು ಕಾಯಿಸಿ, ಧಿಡೀರನೆ ತಂಪಾಗಿಸಿದಾಗ ಅದನ್ನು ಬೇಕಾದ ಆಕಾರಕ್ಕೆ ನಿಯಂತ್ರಿತ ರೀತಿಯಲ್ಲಿ ರೂಪಿಸಿಕೊಳ್ಳುವ ವಿಧಾನ ತಿಳಿಯಿತು. ಹತಾರಗಳನ್ನು ಹರಿತಗೊಳಿಸುವ ವಿಧಾನದಿಂದ ಅವುಗಳನ್ನು ಮತ್ತೆ ಮತ್ತೆ ಬಳಸುವುದು ಸಾಧ್ಯವಾಯಿತು. ಇದರಿಂದ ಬೆಳೆದ ತಾಂತ್ರಿಕತೆಯಿಂದ ಮಣಿಗಳು, ಬಾಣದ ತಲೆ, ಈಟಿಯ ಚೂಪು, ಮೀನು ಹಿಡಿಯುವ ಗಾಳದ ಕೊಕ್ಕೆ, ಹೊಲೆಯುವ ಸೂಜಿ – ಒಂದೇ ಎರಡೇ – ಇವೆಲ್ಲ ರೂಪುಗೊಳ್ಳುತ್ತಾ ಬಂದವು. ಕೃಷಿ ವಿಧಾನ ಸುಧಾರಿಸಿತು. 5ರಿಂದ 7ಸಾವಿರ ವರ್ಷಗಳ ಹಿಂದಿನವರೆಗೆ ಕಲ್ಲು ಹತಾರಗಳು, ಮೂಳೆ ಉಪಕರಣಗಳು, ಮರದ ಹತಾರಗಳೂ ಸಹ ಬಳಕೆಯಲ್ಲಿದ್ದವು. ಈ ಎಲ್ಲ ಪದಾರ್ಥಗಳೂ ಸ್ವಾಭಾವಿಕವಾಗಿ ನಿಸರ್ಗದಲ್ಲಿ ದೊರೆಯುತ್ತಿದ್ದ ಪದಾರ್ಥಗಳೇ.

ಹಿಮದಲ್ಲಿ ಹುದುಗಿದ್ದ 5,000ವರ್ಷಗಳ ಹಿಂದಿನ ಮಾನವ ಅವಶೇಷಗಳಿಂದ ಅವನು ಬಳಸುತ್ತಿದ್ದ ಅನೇಕ ನೈಸರ್ಗಿಕ ಪದಾರ್ಥಗಳು ಮತ್ತು ಅವುಗಳ ಬಳಕೆಗಳನ್ನು ತರ್ಕಿಸಲಾಗಿದೆ. ಕೊಡಲಿ, ಕತ್ತಿ (ಚಾಕು), ಸಾಣೆ ಮಾಡುವ ಪದಾರ್ಥಗಳು, ಬಾಣ-ಬತ್ತಳಿಕೆಗಳು, ಹದ ಮಾಡಿದ ತೊಗಲಿನ ‘ಬಟ್ಟೆ’, ಇತ್ಯಾದಿ. ಬಹುಶಃ ಇಂದಿಗೂ ಇಂತಹ ಹಲವು ಪದಾರ್ಥಗಳ ಬಳಕೆ ಬುಡಕಟ್ಟು ಜನರಲ್ಲಿ ಕಂಡು ಬರುತ್ತದೆ.

ಮುಂದೆ ಕಂಚು ಮತ್ತು ಕಬ್ಬಿಣಗಳ ಆವಿಷ್ಕಾರ ಎಂದರೆ ನೈಸರ್ಗಿಕವಲ್ಲದ ಪದಾರ್ಥಗಳ ತಯಾರಿಕೆಯಿಂದ ಉತ್ಕೃಷ್ಟ ಹತಾರಗಳು, ಪದಾರ್ಥಗಳ ತಯಾರಿಕೆ ನಾಗಾಲೋಟದಲ್ಲಿ ಬೆಳೆಯಿತು. ಮಿಶ್ರ ಲೋಹದಲ್ಲಿ ತಾಮ್ರದ ಬಳಕೆ, ತವರದ ಬಳಕೆಗಳು ಭಾರತ, ಈಜಿಪ್ಟ್, ಮೆಸಪೊಟೇಮಿಯ, ಚೀನಾಗಳ ಪುರಾತನ ಸಂಸ್ಕೃತಿಗಳಲ್ಲಿ ತಿಳಿದಿದ್ದಿತು. ಬೆಂಕಿಯ ಕುಲುಮೆಯಲ್ಲಿ ಕಾಯಿಸಿ, ಲೋಹಕ್ಕೆ ರೂಪ ಕೊಡುವ ವಿಧಾನ, ವಿಶೇಷವಾಗಿ ಕಬ್ಬಿಣವನ್ನು ಹೀಗೆ ಸಂಸ್ಕರಿಸುವುದರಿಂದ, ಆದಷ್ಟು ಶುದ್ಧ ಲೋಹವನ್ನು ಪಡೆಯುವುದು ಸಾಧ್ಯವಾಯಿತು.  ಒಟ್ಟಿನಲ್ಲಿ ಲೋಹತಂತ್ರಜ್ಞಾನದಿಂದ ಅನೇಕ ಅತಿ ಉಪಯುಕ್ತ ಪದಾರ್ಥಗಳನ್ನು ಮನುಷ್ಯ ತಯಾರಿಸಿಕೊಂಡ.

ಇದರಲ್ಲಿ ಕೆಲವು ಅನುಪಮ ಸಾಧನೆಗಳೆಂದರೆ ತುಕ್ಕು ಹಿಡಿಯದ (ಸುಮಾರು 900ವರ್ಷಗಳಿಂದ)ದೆಹಲಿಯ ಕುತುಬ್ ಮಿನಾರ್ ಮುಂದಿನ ಕಬ್ಬಿಣದ ಕಂಬ ಮತ್ತು ಜಪಾನಿನವರು ವಿಶಿಷ್ಟವಾಗಿ ತಯಾರಿಸುವ ಸಮುರಾಯಿ ಕತ್ತಿಗಳು. ಸಮುರಾಯಿ ಕತ್ತಿ ಕಬ್ಬಿಣದ ಚಾಕುವನ್ನೂ ಕೂಡ ಕೊಯ್ಯಬಲ್ಲುದಂತೆ! ಅಷ್ಟು ವಿಶೇಷ ಇದರ ತಯಾರಿಕಾ ವಿಧಾನ. ಮತ್ತೆ ಮತ್ತೆ ಕುಲುಮೆಯಲ್ಲಿ ಹಾಕಿ, ಮಡಿಕೆಗಳನ್ನು ಮಾಡಿದ ಪದಾರ್ಥ ಇದರ ಲೋಹ.  ಇಂದಿನ ತಂತ್ರಜ್ಞಾನದ ರೀತ್ಯ ಇದನ್ನು ರೇಕು ಹಾಕುವುದು (laminate)ಎನ್ನುತ್ತಾರೆ. ಹತ್ತು ಬಾರಿ ಹೀಗೆ ಪುನರಾವರ್ತಿಸಿದಾಗ ಈ ಕತ್ತಿಯ ಅಲಗಿನಲ್ಲಿ 1000 (210= 1024)ಪದರಗಳಿರುತ್ತವೆಯಂತೆ. ಅಂತಿಮವಾಗಿ ತಯಾರಾದ ಈ ಕತ್ತಿಯ ಮಂದ 1ಮಿ.ಮೀ. ಇದ್ದರೆ, ಅದರ ಪ್ರತಿ ಪದರುವಿನ ಮಂದ ಒಂದೇ ಒಂದು ಮೈಕ್ರಾನಿನಷ್ಟಿರಬಹುದು ಎಂದು ವರದಿಯಾಗಿದೆ.

ಈಗ 300ವರ್ಷಗಳಿಗೆ ಹಿಂದೆ, ಆಧುನಿಕ ರಸಾಯನ ವಿಜ್ಞಾನದ ಉದಯವಾದಾಗಿನಿಂದ ಪದಾರ್ಥಗಳ ಗುಣಗಳ ಬಗೆಗೆ ಹೊಸ ಲೋಕವೇ ತೆರೆದುಕೊಂಡಿತು. ಧಾತುಗಳು, ಸಂಯುಕ್ತಗಳು ಎಂಬ ಕಲ್ಪನೆ, ವಿದ್ಯುದ್ವಿಭಜನೆ, ಸಂಶ್ಲೇಷಿತ ಪದಾರ್ಥಗಳು, ಇತ್ತೀಚಿನ ಇತಿಹಾಸದ ವಿಷಯಗಳು. ಕಳೆದ 100ವರ್ಷಗಳ ಭೌತ ಹಾಗೂ ರಸಾಯನ ವಿಜ್ಞಾನಗಳ ಬೆಳವಣಿಗೆಯಂತೂ ಧಾತುವಿನ ಅಣು, ಪರಮಾಣುಗಳ ಮಟ್ಟದ ಅಧ್ಯಯನದಿಂದ ಅನೇಕ ಪಟ್ಟು ವರ್ಧಿಸಿದೆ. ಅನಿಲದಲ್ಲಿನ ಅಣು ಪರಮಾಣುಗಳಿಗಿಂತ ದ್ರವ, ಘನ ಪದಾರ್ಥಗಳ ಅಣುಗಳು ಪರಸ್ಪರ ನಿಕಟವಾಗಿರುತ್ತವೆ. ನಿಕಟವಾಗಿ ಹೀಗೆ ಸಜ್ಜಾಗಿರುವ ಗುಣದಿಂದ ಘನಪದಾರ್ಥಗಳ ಗಾತ್ರ ಹಾಗೂ ಆಕಾರಗಳು ನಿರ್ದಿಷ್ಟವಾಗಿರುತ್ತವೆ ಎಂದು ತಿಳಿಯಿತು. ಡಾಲ್ಟನ್‌ನ ಸಿದ್ಧಾಂತದ ಮೇರೆಗೆ ಪ್ರತಿ ಪರಮಾಣು ಮಿತಸಂಖ್ಯೆಯ ಬೇರೆ ಪರಮಾಣುಗಳೊಡನೆ ಸಂಯೋಗಗೊಳ್ಳಬಹುದು. ಈ ಸಂಯೋಜನೆಗಳ ರೀತಿ, ರಾಸಾಯನಿಕ ಬಂಧಗಳು ಉಂಟಾಗುವ ಬಗೆ – ಇವುಗಳಿಂದ ಉಂಟಾಗುವ ಪದಾರ್ಥಗಳು ಸಂಕೀರ್ಣಗೊಂಡು, ತನಗೆ ಬೇಕಾದ ಪದಾರ್ಥಗಳನ್ನು ಮೊದಲೇ ವಿನ್ಯಾಸ ಮಾಡಿ ಅದರಂತೆ ತಯಾರಿಸಲು ಮಾನವ ರೂಢಿಸಿಕೊಂಡ. ಇವುಗಳ ಫಲಿತಾಂಶವೇ ಇಂದಿನ ಅಸಂಖ್ಯ ಬಗೆಯ ಸಾಧನಗಳು, ಸಲಕರಣೆಗಳು, ಸಾರಿಗೆ ತಾಂತ್ರಗಳು, ಉಪಕರಣಗಳು –ಇವೆಲ್ಲವನ್ನು ಸುಲಭದಲ್ಲಿ ಪಟ್ಟಿಸಲು ಸಾಧ್ಯವೇ ಇಲ್ಲ.

ಹೀಗೆ ಬೆಳೆದ ಹೊಸ ವಿಜ್ಞಾನದ ಸಂಶೋಧನೆಗಳಿಂದಾಗಿ ಇಂದು ಸೂಕ್ಷ್ಮಾತಿಸೂಕ್ಷ್ಮ ನಾನೊ ತಂತ್ರಜ್ಞಾನದ (ನಾನೊ ತಾಂತ್ರ)ದ ವರೆಗೆ ಬಂದಿದ್ದೇವೆ. ನಾನೊ ತಾಂತ್ರ ಹೊಸ ಪದವಾದರೂ, ನಮ್ಮ ಸುತ್ತ ಮುತ್ತಲಿನ ಪ್ರಕೃತಿಯಲ್ಲಿ ಇದನ್ನು ಕಾಣುತ್ತೇವೆ. ಉದಾಹರಣೆಗೆ, ಜೇಡರ ಬಲೆಯ ಎಳೆ. ಇದು ರೇಷ್ಮೆಯಷ್ಟು ನವಿರು, ಆದರೆ ಉಕ್ಕಿನಷ್ಟು ದೃಢ!ಇದರ ವ್ಯಾಸ 1000ನಾನೊ ಮೀಟರ್. ನಾನೊ ತಂತ್ರಜ್ಞಾನದಿಂದ ವೈದ್ಯ ವಿಜ್ಞಾನ, ಆಹಾರ, ಆಹಾರೋತ್ಪನ್ನಗಳು, ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಅನೇಕಾನೇಕ ಅನ್ವಯಗಳು ಈಗಾಗಲೇ ಬೆಳಕಿಗೆ ಬರುತ್ತಿವೆ.

ಇಂಧನಕ್ಕಾಗಿ ಪಡೆದ ಹೈಡ್ರೊಜನ್ ಅನ್ನು ಸುರಕ್ಷಿತವಾಗಿ ದಾಸ್ತಾನು ಮಾಡಿ, ಸಾಗಿಸಲು ಚಿತ್ರದಲ್ಲಿ ತೋರಿಸಿರುವ ನಾನೊ ಕಾರ್ಬನ್ ಅಣುಗಳು ಹೆಚ್ಚು ಸೂಕ್ತ. ಹೈಡ್ರೊಜನ್ ಅನ್ನು ಭವಿಷ್ಯದ ಇಂಧನವಾಗಿ ಪರಿಗಣಿಸಲಾಗುತ್ತಿದೆ.

ಹೀಗೆ ಹೊಸ ಪದಾರ್ಥಗಳ ಬಳಕೆ ಹಾಗೂ ಬೆಳವಣಿಗೆಗಳು ಕೊನೆಯಿಲ್ಲದ ದಿಗಂತದಂತೆ ಸರಿಯುತ್ತಲೇ ಇವೆ.